ಆತ್ಮ ಸಂವೇಧನಾ- 27
ಬೆಳಕೂ ಇಲ್ಲದ; ಕತ್ತಲೂ ಅಲ್ಲದ ಮಬ್ಬು ಮುಸುಕಿದ ಭೂಮಿ. ಆಗಲೇ ಹನ್ನೆರಡು ಘಂಟೆಗಳು ಕಳೆದಿದ್ದವು. ಯುದ್ಧವನ್ನು ಮಾಡಿಯೇ ಸಿದ್ಧ ಎಂದ ಆತ್ಮನ ಸುಳಿವಿಲ್ಲ. ಯುದ್ಧ ನಡೆಯುತ್ತದೆಯಾ? ಅವರೆಲ್ಲ ಮತ್ತೆ ಬರುತ್ತಾರೆಯೇ??
ಭೂಮಿಯ ಜನರಲ್ಲಿ ಅನುಮಾನ ಮೂಡಿತ್ತು. ಸಂಶಯ ಕುಡಿಯೊಡೆದಿತ್ತು. ಅಷ್ಟೊಂದು ಜೀವಿಗಳನ್ನು ಹೇಗೆ ಎದುರಿಸುವುದು? ಕಾಪಾಡಿಕೊಳ್ಳುವುದು ಹೇಗೆ? ಬಾಂಬ್, ಸಿಡಿಮದ್ದುಗಳನ್ನು ಹಾಕಿದರೆ ಅದರಿಂದಲೂ ತೊಂದರೆ ತಪ್ಪಿದ್ದಲ್ಲ. ಆದರೆ ಹೇಗೆ? ಎಲ್ಲರೂ ಯೋಚಿಸತೊಡಗಿದರು.
ಕೆಲವೊಬ್ಬರು ಭಯ ತಡೆಯಲಾರದೆ ಆತ್ಮಹತ್ಯೆಗೂ ಪ್ರಯತ್ನಿಸಿದರು, ಆತ್ಮವಿದೆಯೆಂದು ಅರಿವಾದದ್ದೆ ಇತ್ತೀಚೆಗೆ. ಭೂಮಿಯ ಮೇಲಿನ ಇತರ ಜೀವಿಗಳು ಇದನ್ನೆಲ್ಲಾ ನೋಡುತ್ತಿದ್ದವು. ಮನುಷ್ಯನ ಕೊನೆ ಎಂದರೆ ಅವುಗಳಿಗೆಲ್ಲ ಖುಷಿಯಾಗುತ್ತಿತ್ತು.
ಇಷ್ಟು ದಿನ ನಮ್ಮದೊಂದೇ ಅಂತ್ಯ ಎಂದು ಭ್ರಮಿಸಿದ್ದ ಉಳಿದ ಜೀವಿಗಳು ತಮಗಿಂತ ಮೊದಲು ಮಾನವನ ಕೊನೆಯಾಗುತ್ತದಲ್ಲ ಎಂದು ಆನಂದಿಸಿದವು. ಅವುಗಳು ಸ್ವಾರ್ಥಿಗಳಾ?? ಬದುಕುವ ನೀತಿ ತಿಳಿದ ಅವುಗಳಲ್ಲೂ ಸ್ವಾರ್ಥವಾ?? ಎಲ್ಲವನ್ನು ಮೀರಿ ಸಾಯುವ ಮುಖಗಳನ್ನು ಕಂಡು ಹಿಗ್ಗುವ ಕ್ರೂರ ಸಂತಸವದು. ಮನುಷ್ಯನ ಮೇಲೆ ಇತರ ಜೀವಿಗಳಿಗೇಕೆ ಅಷ್ಟೊಂದು ದ್ವೇಷ??
ಭೂಮಿಯೇ ಎಲ್ಲರ ತಾಯಿ. ಅವಳಲ್ಲಿ ಉಸಿರು ಪಡೆದ ಪ್ರತಿಯೊಂದು ಜೀವಿಯೂ ಅವಳ ಮಕ್ಕಳೇ. ಇಲ್ಲಿ ಹುಟ್ಟಿದ ಎಲ್ಲ ಜೀವಿಗಳು ಸಂಬಂಧಿಗಳೇ. ಎಲ್ಲರನ್ನೂ ಬೆಸೆಯುವ ಒಂದು ಕೊಂಡಿಯಿದೆ. ಬಂಧುಗಳ ಸಾವನ್ನೇ ಎದುರು ನೋಡುವಷ್ಟು ಕೋಪವೇಕೆ?? ಸ್ವಾರ್ಥವೇಕೆ??
ಕೋಪ, ದ್ವೇಷ ಈ ಕ್ಷಣದ್ದಲ್ಲ. ಅದೆಷ್ಟೋ ಸಾವಿರ ವರ್ಷಗಳಿಂದ ಮಡುಗಟ್ಟಿದ ಮತ್ಸರ. ಮನಸ್ಸಿನ ಆಳದಲ್ಲಿ ನೆಲೆನಿಂತ ರೋಷ. ಎಲ್ಲದಕ್ಕೂ ಒಂದು ಪರಿಧಿಯಿದೆ. ಅದನ್ನು ದಾಟಿದಾಗ ಯಾರ ಸಹನೆಯೂ ಉಳಿಯುವುದಿಲ್ಲ. ಈಗ ಆಗುತ್ತಿರುವುದು ಅದೇ.
ಅದೇ ಸಮಯದಲ್ಲಿ ಆಗಸದಿಂದ ಕಪ್ಪು ಜೀವಿಗಳು ಭೂಮಿಗೆ ಇಳಿದವು. ಅವುಗಳಿಗೆ ವಾಸ್ತವದ ಅರಿವಿದೆ. ಸ್ವಲ್ಪ ನಿಧಾನವಾದರೂ ಮುಂದೇನಾಗುವುದು ಎಂಬ ವಿಷಯ ತಿಳಿದಿದೆ. ಅವುಗಳು ತಮ್ಮೊಳಗೆ ಏನು ಮಾಡಬೇಕೆಂದು ನಿರ್ಧರಿಸಿಕೊಂಡು ಎರಡೆರಡರಂತೆ ಮೂರೂ ಗುಂಪುಗಳು ಬೇರೆ ಬೇರೆ ದಿಕ್ಕಿಗೆ ನಡೆದವು.
ಅವುಗಳಲ್ಲಿ ಇನ್ನೂ ಬದುಕುವ ನೀತಿ ಉಳಿದಿದೆ. ತಮ್ಮ ನಾಡಿನಲ್ಲಿ ಏನೇನು ಅವಘಡಗಳಾದವು ಎಂದೂ ತಿಳಿದಿದೆ. ಅದರ ಬಗ್ಗೆ ಬೇಸರ ಕೋಪ ಯಾರಿಗೂ ಆರಿಲ್ಲ. ಆದರೆ ರಕ್ತಕ್ಕೆ ರಕ್ತ ಎಂಬ ನೀತಿ ಅವುಗಳದಲ್ಲ. ಹೇಗೂ ತಮ್ಮ ಜೀವಿಗಳ ಅಂತ್ಯವಾಗಿದೆ. ಆದರೆ ಅದೇ ಅಂತ್ಯವಲ್ಲ. ಒಮ್ಮೆ ಎರಡನೇ ಸೂರ್ಯ ನಾಶವಾದನೆಂದರೆ ಅವುಗಳಿಗೆಲ್ಲ ಮಣ್ಣಲ್ಲಿ ಮಣ್ಣಾಗಿ ಮರುಹುಟ್ಟು ಪಡೆಯುವ ಸಾಮರ್ಥ್ಯವಿದೆ. ಕೇವಲ ಎರಡನೇ ಸೂರ್ಯ ಇದಕ್ಕೆಲ್ಲ ಮೂಲ ಕಾರಣ. ಅದಕ್ಕಾಗಿ ಸಂಪೂರ್ಣ ಭೂಮಿಯನ್ನು ನಾಶಮಾಡುವುದು ಸರಿಯಲ್ಲ ಎಂಬುದು ಅವುಗಳ ಯೋಚನೆಯ ರೀತಿ.
ಅವುಗಳು ಕೇವಲ ಆರು ಜೀವಿಗಳು…. ವಿರುದ್ಧವಾಗಿ ಅವೆಷ್ಟೋ ಕೋಟಿ ಕಪ್ಪು ಜೀವಿಗಳು.
ಯಾರ ಅಂತ್ಯ??
ಯಾವುದರ ಆರಂಭ??
ಏನೂ ತಿಳಿಯದಾಯಿತು.
ಮುಂದುವರಿಯುವುದು…
Facebook ಕಾಮೆಂಟ್ಸ್