X

ಮತ್ತೆಂದೂ ಬರದಣ್ಣ ಇಂಥಾ ಪೈ ದಿನ!

ಕೈಯ ಬಳೆ, ಹಣೆಯ ಬಿಂದಿ, ಬಕೆಟ್’ನ ಬಾಯಿ, ಅಡುಗೆ ಮನೆಯಲ್ಲಿರುವ ಪಾತ್ರೆ ಪರಡಿಯ ತಳ, ಚಕ್ಕಡಿಯ ಚಕ್ರ, ಗಾಣದೆತ್ತಿನ ಪಥ, ಹುಣ್ಣಿಮೆಯ ಚಂದ್ರನ ಮೋರೆ – ಎಲ್ಲೆಡೆಗಳಲ್ಲೂ ಕಾಣುವ ಸಾಮಾನ್ಯಾಂಶ ವೃತ್ತ. ಅಂಕೆ-ಅಕ್ಷರಗಳನ್ನು ಬರೆಯಲು ಕಲಿಯುವ ಮೊದಲು ನಾವೆಲ್ಲ ಸ್ಲೇಟಲ್ಲಿ ಗೀಚಿದ ಮೊದಲ ಆಕೃತಿಯೂ ವೃತ್ತವೇ. ಅಂಥದೊಂದು ವೃತ್ತವನ್ನು ತೆಗೆದುಕೊಳ್ಳಿ. ಅದರ ಕೇಂದ್ರವನ್ನು ಹಾದು ಹೋಗುವಂತೆ ಅಂಚಿನಿಂದ ಅಂಚಿಗೆ ಎಳೆದ ಗೆರೆಯನ್ನು ವ್ಯಾಸ ಎನ್ನುತ್ತೇವಷ್ಟೇ? ವೃತ್ತದ ಒಟ್ಟು ಸುತ್ತಳತೆಯನ್ನು ಈ ವ್ಯಾಸದ ಅಳತೆಯಿಂದ ಭಾಗಿಸಿ. ತೆಗೆದುಕೊಂಡ ವೃತ್ತ ಹಣೆಯ ಬಿಂದಿಯಷ್ಟು ಚಿಕ್ಕದಿದ್ದರೂ ಚಂದಿರನಷ್ಟು ದೊಡ್ಡದಿದ್ದರೂ ನಿಮಗೆ ಸಿಗುವ ಉತ್ತರ ಒಂದೇ. ಆಜುಬಾಜು ಅದು, ೩.೧೪ನಷ್ಟೇ ಇರುತ್ತದೆ. ಪ್ರಯೋಗಾಲಯದಲ್ಲಿ ಅತ್ಯಾಧುನಿಕ ಅಳತೆಗೋಲುಗಳನ್ನು ಇಟ್ಟು ಅಳೆದರೆ ೩.೧೪೧೫೯೨೬೫೩೫ ಎಂಬ ಉತ್ತರ ಸಿಕ್ಕೀತು. ಗಣಿತ ಪಠ್ಯ ಪುಸ್ತಕದ ಅನಿವಾರ್ಯ ಸದಸ್ಯ, ಜ್ಯಾಮೆಟ್ರಿ ಜಗತ್ತಿನ ಚಕ್ರವರ್ತಿ ಪೈ ಮಹಾಸ್ವಾಮಿಗಳು ಇವರೇ.

ಗಣಿತದಲ್ಲಿ ಅತ್ಯಂತ ಮುಖ್ಯ ಮೂರು ಬೆಲೆಗಳನ್ನು ತಿಳಿಸಿ ಎಂದರೆ, ಬಹುಶಃ ಜಗತ್ತಿನ ಎಲ್ಲರ ಪಟ್ಟಿಯಲ್ಲೂ ಪೈ ಇದ್ದೇ ಇರುತ್ತದೆ! ವೃತ್ತದ ಪರಿಧಿಯನ್ನು ವ್ಯಾಸದಿಂದ ಭಾಗಿಸಿದರೆ ಸಿಗುವ ಬೆಲೆಯೇ ಪೈ. ಇದರ ಬೆಲೆ ೩ ಎಂದು ಬೈಬಲ್ ಹೇಳಿತು. ವೇದಾಂಗಗಳಲ್ಲಿ, ಮೊದಮೊದಲ ಶುಲ್ಬಸೂತ್ರಗಳಲ್ಲಿ, ಮಹಾಭಾರತದ ಭೀಷ್ಮ ಪರ್ವದಲ್ಲಿ ಕೂಡ ಇದರ ಬೆಲೆಯನ್ನು ೩ ಎಂದೇಮಾನ್ಯ ಮಾಡಲಾಗಿದೆ. ಆದರೆ ಕ್ರಿಸ್ತಪೂರ್ವ ೪೦೦೦ದಲ್ಲಿದ್ದ ಬ್ಯಾಬಿಲೋನಿಯನ್ನರಿಗೆ ಇದರ ಬೆಲೆ ಮೂರಲ್ಲ, ಅದರ ಆಸುಪಾಸಿನದ್ದೆಂಬ ಶಂಕೆ ಇತ್ತು. ಕ್ರಿಸ್ತಪೂರ್ವ ೧೬೫೦ರ ಸುಮಾರಿಗೆ ಈಜಿಪ್ಟಿನಲ್ಲಿದ್ದ ಗಣಿತಜ್ಞರು ೮/೯ನ್ನು ಅದೇ ಸಂಖ್ಯೆಯಿಂದ ಗುಣಿಸಿ, ಮತ್ತೆ ೪ರಿಂದ ಗುಣಿಸಿದರೆ ಪೈ ಬೆಲೆ ಸಿಗುತ್ತದೆ ಎಂದು ಕಂಡುಕೊಂಡರು. ಅವರು ಹೇಳಿದಂತೆ ೪ನ್ನು ೬೪/೮೧ರ ಜೊತೆಗುಣಿಸಿದರೆ ೩.೧೬ ಸಿಗುತ್ತದೆ. ಪರವಾಗಿಲ್ಲ, ದಶಮಾಂಶಗಳ ಬಳಕೆ ಕೂಡ ಇಲ್ಲದಿದ್ದ ಆ ಕಾಲಕ್ಕೆ ಈ ಸಾಧನೆ ಮೆಚ್ಚುವಂಥಾದ್ದೇ ಬಿಡಿ! ಕ್ರಿಸ್ತಪೂರ್ವ ೨೫೦ರಲ್ಲಿ ಸಿಸಿಲಿಯ ಆರ್ಕಿಮಿಡೀಸ್ ವೃತ್ತದ ಒಳಗೂ ಹೊರಗೂ ಅಂಚನ್ನು ತಾಗುವಂತೆ ೯೬ಬದಿಗಳುಳ್ಳ ಬಹುಭುಜಾಕೃತಿಗಳನ್ನು ಎಳೆದು, ಅವುಗಳ ಸುತ್ತಳತೆ ಕಂಡು ಹಿಡಿದು, ಏನೆಲ್ಲ ಕಸರತ್ತು ಮಾಡಿ ಕೊನೆಗೆ ಪೈ ಬೆಲೆಯ ವ್ಯಾಪ್ತಿಯನ್ನು ನಿಷ್ಕರ್ಷೆ ಮಾಡಿದ. ಆತನ ಪ್ರಕಾರ ಪೈ, ೨೨೩/೭೧-ಕ್ಕಿಂತ ಕೊಂಚ ಚಿಕ್ಕದು. ಹಾಗೆಯೇ ೨೨/೭-ಕ್ಕಿಂತ ಕೊಂಚ ದೊಡ್ಡದು. ಅವನ ಈ ಎಲ್ಲ ಸಾಹಸಗಳಿಂದ ಗೊತ್ತಾದದ್ದೇನೆಂದರೆ, ಪೈ ಖಂಡಿತವಾಗಿಯೂ ೩ ಅಥವಾ ೪ರಂತೆ ಪೂರ್ಣಾಂಕವಲ್ಲ. ಅದೊಂದು ಪೂರ್ಣಾಂಕವಲ್ಲದ ಸಂಖ್ಯೆ. ಹಾಗೆಂದು, ಭಿನ್ನರಾಶಿ ಸಂಖ್ಯೆ ಎನ್ನಲೂ ಬಾರದು. ಮತ್ತು ಅದರ ನಿಷ್ಕೃಷ್ಟ ಬೆಲೆ ಕಂಡುಹಿಡಿಯಲು ಬಹಳ ಸಾಹಸ ಪಡಬೇಕು! ಆರ್ಕಿಮಿಡೀಸನೇ ಅಷ್ಟೆಲ್ಲ ಕಷ್ಟಪಟ್ಟಿದ್ದಾನೆಂದ ಮೇಲೆ ಕೇಳಬೇಕೆ!

ಗಣಿತದಲ್ಲಿ ಪೈಯ ವ್ಯಾಪ್ತಿ ಎಷ್ಟೊಂದು ವಿಸ್ತಾರವಾಗಿದೆಯೆಂದರೆ, ಯಾವ ಕ್ಷೇತ್ರದಲ್ಲಿ ಆಳವಾದ ಅಧ್ಯಯನಕ್ಕೆ ತೊಡಗಿದರೂ ಒಂದಿಲ್ಲೊಂದು ಹಂತದಲ್ಲಿ ಇದನ್ನು ಎಡತಾಕಲೇಬೇಕು. ಹಾಗಾಗಿ ಜಗತ್ತಿನ ಹಲವು ಮೂಲೆಗಳಲ್ಲಿ ಗಣಿತದಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಪೈ ಬೆಲೆಯನ್ನು ಕಂಡು ಹಿಡಿಯುವ ಪ್ರಯತ್ನ ಮಾಡಲೇಬೇಕಾಯಿತು. ಐದನೇ ಶತಮಾನದಲ್ಲಿ ಚೀನಾದಲ್ಲಿದ್ದ ಗಣಿತಜ್ಞ ಝುಚಾಂಗ್ಸಿ, ಪೈ ಬೆಲೆಗೆ ೩೫೫/೧೧೩ ಎಂಬ ಭಿನ್ನಾಂಶ ರೂಪ ಕೊಟ್ಟ. ಇದನ್ನು ದಶಮಾಂಶದಲ್ಲಿ ಬಿಡಿಸಿ ಬರೆದರೆ, ೩.೧೪೧೫೯೨೯.. ಎಂಬ ರೂಪ ಕೊಡುತ್ತದೆ. ವಿಶೇಷವೇನೆಂದರೆ, ಇಲ್ಲಿ ಮೊದಲ ಆರು ದಶಮಾಂಶ ಸ್ಥಾನಗಳು ಸರಿಯಾಗಿವೆ. ನಿಖರತೆಗೆ ಇಷ್ಟೊಂದು ಹತ್ತಿರದ ಬೆಲೆಯನ್ನು ಅದುವರೆಗೆ ಬೇರಾರೂ ಕೊಟ್ಟಿರಲಿಲ್ಲ. ಝು ಚಾಂಗ್ಸಿಯ ಸಮಕಾಲೀನ, ಭಾರತದ ಆರ್ಯಭಟ, ಪೈ ಬೆಲೆಯನ್ನು ಕಂಡುಹಿಡಿಯಲು ಒಂದು ಪದ್ಯವನ್ನೇ ಬರೆದ. ಅದರ ಪ್ರಕಾರ ೬೨,೮೩೨ರಷ್ಟು ಸುತ್ತಳತೆ ಇರುವ ವೃತ್ತದ ವ್ಯಾಸವು ೨೦,೦೦೦ಕ್ಕೆ ಹತ್ತಿರವಾಗಿರುತ್ತದೆ. ಇಲ್ಲಿಮೊದಲ ಸಂಖ್ಯೆಯನ್ನು ಎರಡನೆಯದರಿಂದ ಭಾಗಿಸಿದರೆ ನಮಗೆ ೩.೧೪೧೬ ಎಂಬ ಬೆಲೆ ಸಿಗುತ್ತದೆ. ಇದು ನಿಖರ ಬೆಲೆಯಲ್ಲ; ಆಸನ್ನ – ಅಂದರೆ, ಸನ್ನಿಹಿತ ಬೆಲೆ ಅಷ್ಟೇ ಎಂದು ಮೊದಲು ಹೇಳಿದವನು ಆರ್ಯಭಟ. ಮಾರ್ಚ್ ೧೪ನ್ನು (ಬರೆಯುವಾಗ ೩.೧೪ ಎಂದಾಗುವುದರಿಂದ) “ಪೈ ದಿನ”ವಾಗಿ ಆಚರಿಸುವ ಒಂದು ಸಂಪ್ರದಾಯ ಕೆಲವು ವರ್ಷಗಳಿಂದ ಜಾರಿಯಲ್ಲಿದೆ. ಆದರೆ,೨೦೧೬ರಲ್ಲಿ ಆಚರಿಸುವ ಪೈ ದಿನ, ಕೇವಲ ೩.೧೪ ಮಾತ್ರ ಅಲ್ಲ, ೩.೧೪೧೬ ಕೂಡ ಆಗಿರುವುದರಿಂದ, ಇದೊಂದು ವಿಶೇಷ ಪೈ ದಿನ ಎನ್ನಬಹುದು. ಇಂಥ ದಿನ ಇನ್ನು ಮುಂದೆಂದೂ ಬರುವುದು ಸಾಧ್ಯವೇ ಇಲ್ಲ ಎನ್ನುವುದೂ ಸತ್ಯ. ಅಲ್ಲದೆ, ಪೈ-ಗೆ ೩.೧೪೧೬ ಎಂಬ ಬೆಲೆಯನ್ನು ಮೊದಲು ಕೊಟ್ಟವನು ಆರ್ಯಭಟನಾದ್ದರಿಂದ, ಇದನ್ನು “ಆರ್ಯಭಟ ಪೈ ದಿನ” ಎಂದೂ ಕರೆಯಬಹುದೇನೋ. ಆರ್ಯಭಟನ ನಂತರ ಆತನ ಗ್ರಂಥಗಳು ಅರಬ್ಬಿ ನಾಡಿಗೂ ಭಾಷಾಂತರಗೊಂಡು ಹೋದದ್ದರಿಂದ, ಅವರೂ ಪೈ-ಗೆ ೩.೧೪೧೬ ಎಂಬ ಬೆಲೆಯನ್ನೇ ಬಳಸತೊಡಗಿದರು. ಅರೇಬಿಯಾ ನಾಡಿನ ಬಹುಪ್ರಸಿದ್ಧ ಗಣಿತವಿದ ಅಲ್-ಖ್ವಾರಿಜ್ಮಿ ಕೂಡ ಆರ್ಯಭಟನನ್ನು ಅನುಸರಿಸಿ, ಪೈ-ಗೆ ೩.೧೪೧೬ ಎಂಬ ಬೆಲೆಯನ್ನೇ ಆದೇಶಿಸಿದ್ದಾನೆ.

ಪೂರ್ಣಾಂಕವಲ್ಲದ ಸಂಖ್ಯೆಗಳನ್ನು ದಶಮಾಂಶ ಬಳಸಿಯೂ ಬರೆಯುವ ಕ್ರಮ ಚಾಲ್ತಿಗೆ ಬಂದ ಮೇಲೆ ಗಣಿತಜ್ಞರಿಗೆ, ಪೈ ಬೆಲೆಯ ಹೆಚ್ಚು ಹೆಚ್ಚು ದಶಮಾಂಶ ಸ್ಥಾನಗಳನ್ನು ಕಂಡು ಹಿಡಿಯುವ ಹುಕ್ಕಿ ಹುಟ್ಟಿತು. ಕ್ರಿಸ್ತಶಕ ೧೬೦೦ರ ಹೊತ್ತಿಗೆ ಅವರು ಅದರ ೩೫ ದ.ಸ್ಥಾನಗಳವರೆಗಿನ ಬೆಲೆ ಕಂಡು ಹಿಡಿಯಲು ಶಕ್ತರಾದರು. ಆದರೆ, ಪೈ ಒಂದು ಅಭಾಗಲಬ್ಧ ಸಂಖ್ಯೆ. ಅಂದರೆ ಏನೇನೇ ತಿಪ್ಪರಲಾಗ ಹೊಡೆದರೂ ಅದನ್ನು ಎರಡು ಸಂಖ್ಯೆಗಳನ್ನು ಬಳಸಿ ಭಿನ್ನರಾಶಿ ರೂಪದಲ್ಲಿಡುವುದು ಸಾಧ್ಯವೇ ಇಲ್ಲ. ಅದೊಂದು ಅನಂತ ದಶಮಾಂಶ ಸ್ಥಾನಗಳ ನಿಲ್ಲದ ಮೆರವಣಿಗೆ. ನೀವೆಷ್ಟೇ ಬರೆದರೂ ಮತ್ತಷ್ಟು ಉಳಿಯುತ್ತದೆ; ಎಷ್ಟುದ್ದ ಬರೆದರೂ ಮತ್ತೊಂದಿಷ್ಟು ಅಣಕಿಸುತ್ತದೆ. ಹಾಲಿವುಡ್ ಸಿನೆಮಾ “ಲೈಫ್ ಆಫ್ ಪೈ” ನೋಡಿದವರಿಗೆ ಅಲ್ಲಿ ಆ ಹುಡುಗ ಬೋರ್ಡಿನ ತುಂಬ ಇದರ ಬೆಲೆ ಬರೆಯುತ್ತಾ ಹೋಗುವ ದೃಶ್ಯ ನೆನಪಿರಬಹುದು. ಕೃಷ್ಣ ದಯ ಪಾಲಿಸುವ ಅಕ್ಷಯ ಸೀರೆಯಾದರೂ ಮುಗಿಯಬಹುದೇನೋ, ಪೈಯ ಲಾಂಗೂಲ ಮುಗಿಯದು. ಕೊನೆಯೇ ಮುಟ್ಟದು. ಹೀಗೆ ಅನಂತದವರೆಗೆ ಬೆಳೆದುಕೊಂಡು ಹೋಗುವ ಬೆಲೆಯನ್ನು ನಮಗೆ ಸುಸ್ತಾಗುವಷ್ಟು ಹೊತ್ತು ಕಂಡು ಹಿಡಿಯುತ್ತಾ ಹೋಗಲು ಏನಾದರೂ ಸೂತ್ರ ಇದೆಯೇ ಎಂದು ಗಣಿತಜ್ಞರು ತಲೆಕೆಡಿಸಿಕೊಂಡರು. ಅಂಥದೊಂದು ಸೂತ್ರ ಸಾಧ್ಯ ಎಂದು ಜಗತ್ತಿನಲ್ಲೇ ಮೊದಲ ಬಾರಿಗೆ ಹೇಳಿದವನು ಒಬ್ಬ ಭಾರತೀಯ ಪಂಡಿತ. ಕೇರಳದ ಖಗೋಲ ತಜ್ಞ ಮಾಧವ. ಇವನು (ಪೈ/೪) = ೧ – (೧/೩) + (೧/೫) – (೧/೭) + (೧/೯) – .. ಎಂಬ ಸೂತ್ರವನ್ನು ಅನ್ವೇಷಿಸಿ ಜಗತ್ತಿನ ಮುಂದಿಟ್ಟ. ಗಣಿತದ ಸೌಂದರ್ಯ ಇರುವುದೇ ಇಲ್ಲಿ. ಎಡಗಡೆ ಇರುವ ಪೈ ಯಾವೊಂದು ಸೂತ್ರಕ್ಕೊಳಪಡದಂತೆ ದ.ಸ್ಥಾನದ ಅಂಕೆಗಳನ್ನು ಉದುರಿಸುತ್ತಾ ಹೋಗುವ ವಿಚಿತ್ರ ಸಂಖ್ಯೆ. ಅಂದರೆ, ಅದರ ದಶಮಾಂಶ ರೂಪ ಬರೆಯುವಾಗ, ಒಂದು ಅಂಕೆ ಬರೆದು ಮುಂದಿನ ಅಂಕೆ ಯಾವುದೆಂಬುದನ್ನು ಊಹಿಸಲಿಕ್ಕೇ ಸಾಧ್ಯವಿಲ್ಲ. ಆದರೆ, ಸೂತ್ರದ ಬಲಗಡೆಯಲ್ಲಿರುವುದು ಕೂಡು-ಕಳೆ ಚಿಹ್ನೆಗಳು ಒಂದಾದ ಮೇಲೊಂದರಂತೆ ಬರುವ; ಛೇದಗಳಲ್ಲಿ ಅನುಕ್ರಮ ಬೆಸ ಸಂಖ್ಯೆಗಳಿರುವ – ಒಟ್ಟಲ್ಲಿ, ಅತ್ಯಂತ ಸುಸಂಬದ್ಧವಾಗಿ ಕಾಣುವ ಚೆಂದದ ವಿನ್ಯಾಸ. ಮಾಧವ ಬದುಕಿದ್ದದ್ದು ಹದಿನಾಲ್ಕನೇ ಶತಮಾನದಲ್ಲಿ. ಆದರೆ ಭಾರತದ ಗಣಿತ ಸಾಧನೆಗಳಿಗೆ ಕುರುಡಾಗಿದ್ದ ಪಾಶ್ಚಾತ್ಯ ವಿದ್ವಾಂಸರು, ಈ ಚೆಂದದ ಸೂತ್ರದ ಎಲ್ಲ ಕ್ರೆಡಿಟ್ಟನ್ನು ಹದಿನೇಳನೇ ಶತಮಾನದ ಜೇಮ್ಸ್ ಗ್ರೆಗೊರಿ ಮತ್ತು ಲೈಬ್ನಿಜ್’ರಿಗೆ ಕೊಟ್ಟು ಕೈತೊಳೆದುಕೊಂಡಿದ್ದಾರೆ.

ಹದಿನಾರನೇ ಶತಮಾನದ ತರುವಾಯ ಪೈ-ಗೆ ಹಲವು ಅನಂತ ಸರಣಿಯ ಸೂತ್ರಗಳು ಬಂದವು. ಇವುಗಳನ್ನಿಟ್ಟುಕೊಂಡು ಅದರ ದಶಮಾಂಶ ಬೆಲೆಗಳನ್ನು ಬರೆಯುವ ಹುಚ್ಚು ಹತ್ತಿಸಿಕೊಂಡವರು ಹಲವು ಮಂದಿ. ಶಾಂಕ್ಸ್ ಎಂಬಾತ ಪೈಯ ದಶಮಾಂಶ ಬೆಲೆಗಳನ್ನು ಬರೆಯುವುದನ್ನೇ ತನ್ನ ಜೀವಮಾನದ ಏಕೈಕ ಧ್ಯೇಯವಾಗಿಸಿಕೊಂಡು ಆ ಕಾಲಕ್ಕೆ, ಒಟ್ಟು೭೦೭ಸ್ಥಾನಗಳನ್ನು ಕಂಡುಹಿಡಿದ. ಅದನ್ನು ಆತ ೧೮೭೩ರಲ್ಲಿ ಪ್ರಕಟಿಸಿದ. ಶಾಂಕ್ಸ್’ನ ಪೈ ಬೆಲೆಯ ಬಾಲವನ್ನು ನೋಡಿದ ಡಿ ಮೋರ್ಗನ್ ಎಂಬ ಗಣಿತಜ್ಞ, ಅದರಲ್ಲಿ ಸರಣಿಯ ಕೊನೆ ಕೊನೆಗೆ ಏನೋ ತಪ್ಪಾಗಿರಬೇಕೆಂದು ಶಂಕಿಸಿದ. ಕಾರಣ, ಸರಣಿಯ ಕೊನೆಯ ಕೆಲವು ಸಾಲುಗಳಲ್ಲಿ ೭ ಎಂಬ ಅಂಕೆ ವಿರಳವಾಗುತ್ತಾ ಬಂದಿತ್ತು. ಮೊದಲ ಸಾಲುಗಳಲ್ಲಿ ಕಾಣುವಷ್ಟು ಅದರ ಸಾಂದ್ರತೆ ಕೊನೆಯ ಸಾಲುಗಳಲ್ಲಿ ಇರಲಿಲ್ಲ. ಮುಂದೆ, ಶಾಂಕ್ಸ್’ನ ಲೆಕ್ಕಾಚಾರವನ್ನು ಪೂರ್ತಿಯಾಗಿ ಗಮನಿಸುತ್ತ ಬಂದ ಫರ್ಗ್ಯುಸನ್ ಎಂಬಾತ, ಆ ದ.ಸ್ಥಾನಗಳಲ್ಲಿ ೫೨೮ನೇ ಜಾಗದಲ್ಲಿ ಒಂದು ತಪ್ಪಾಗಿರುವುದಾಗಿಯೂ, ಅಲ್ಲಿಂದ ಮುಂದಿನ ಎಲ್ಲ ಅಂಕೆಗಳೂ ತಪ್ಪು ಎಂದೂ ತೋರಿಸಿದ. ಸರಿ ಮಾಡಿಕೊಳ್ಳಲು ಶಾಂಕ್ಸ್ ಇರಲಿಲ್ಲ. ಯಾಕೆಂದರೆ ಫರ್ಗ್ಯುಸನ್ ತಪ್ಪು ಕಂಡು ಹಿಡಿದದ್ದು೧೯೪೫ರಲ್ಲಿ! ೧೯೪೯ರಲ್ಲಿ ಎನಿಕ್ ಎಂಬ ಕಂಪ್ಯೂಟರನ್ನು ಪೈ ಬೆಲೆ ಬರೆಯಲು ನಿಯೋಜಿಸಿದಾಗ, ಅದು ಸುಮಾರು ೭೦ ತಾಸು ಕೆಲಸ ಮಾಡಿ ೨,೦೩೭ ದ.ಸ್ಥಾನಗಳನ್ನು ಕೊಟ್ಟಿತು.ಇತ್ತೀಚೆಗಂತೂ ಸೂಪರ್ ಕಂಪ್ಯೂಟರ್’ಗಳನ್ನು ಬಳಸಿ ಒಂದಕ್ಕಿಂತ ಒಂದು ಹೆಚ್ಚು ದ.ಸ್ಥಾನ ಕೊಡುವ ಸಾಹಸ ತೋರುವ ಕ್ರೇಜ್ ಹುಟ್ಟಿಕೊಂಡಿದೆ. ಪ್ರಸ್ತುತ ೧೩ ಟ್ರಿಲಿಯನ್ನಷ್ಟು ದ.ಸ್ಥಾನದ ಅಂಕೆಗಳನ್ನು ಗಣಕವನ್ನು ಬಳಸಿ ಪಡೆಯಲಾಗಿದೆ. ಈ ಕಸರತ್ತಿನಿಂದ ಜನಸಾಮಾನ್ಯರಿಗೆ ಏನು ಲಾಭ ಎಂದರೆ ನಯಾಪೈಸೆಯಷ್ಟೂ ಇಲ್ಲ ಎಂಬುದೇ ಉತ್ತರ. ಆದರೆ ಗಣಕಗಳ ದಕ್ಷತೆ ಪರೀಕ್ಷಿಸಲು ಇಂಥ ಸರ್ಕಸ್ಸುಗಳು ಅನಿವಾರ್ಯ. ಅದೇನೋ ಓಕೆ, ಆದರೆ ಲು ಚಾವ್ ಎಂಬಾತ ಪೈ-ಯ ಒಟ್ಟು ೬೭,೮೯೦ ದ.ಸ್ಥಾನಗಳನ್ನು ಕೇವಲ ಸ್ಮರಣೆಯಿಂದ (ಅದೂ ೨೪ ತಾಸು,ಎಡೆಬಿಡದೆ) ಹೇಳಿ ಸೈ ಎನ್ನಿಸಿಕೊಂಡಿದ್ದಾನೆ. ಏನು ಲಾಭ ಎಂದರೆ, ಗಿನ್ನೆಸ್ ಪುಸ್ತಕದಲ್ಲಿ ಹೆಸರು ದಾಖಲಾದದ್ದೇ ಲಾಭ!

ಆಗಲೇ ಹೇಳಿದಂತೆ, ಪೈ ಬೆಲೆಯ ವಿಶೇಷತೆ ಇರುವುದು ಅದು ಗಣಿತದ ವಿವಿಧ ಶಾಖೆಗಳಲ್ಲಿ ತೋರುವ ಬಹುರೂಪತೆಯಲ್ಲಿ. ಗಣಿತದಲ್ಲಿ “ಜೀವವಿಮಾ ಗಣಿತ” ಎಂಬ ಶಾಖೆಯಿದೆ. ಒಂದು ಜನಸಮುದಾಯದಲ್ಲಿ, ನಿರ್ದಿಷ್ಟ ಕಾಲಾನಂತರ ಎಷ್ಟು ಜನ ಬದುಕುಳಿಯುತ್ತಾರೆ ಎನ್ನುವುದನ್ನು ಅಂದಾಜಿಸುವ ವಿಲಕ್ಷಣ ವಿಜ್ಞಾನ ಇದು! ಇದಕ್ಕೆ ಸಂಬಂಧಿಸಿದ ಒಂದು ಪ್ರಶ್ನೆಯನ್ನು ಗಣಿತಜ್ಞ ಡಿಮೋರ್ಗನ್’ನಲ್ಲಿ ಒಬ್ಬ ಕೇಳಿದಾಗ, ಮೋರ್ಗನ್ ಕೊಟ್ಟ ಉತ್ತರದಲ್ಲಿ ಪೈ ಇತ್ತಂತೆ. ಆಗ ಪ್ರಶ್ನೆ ಕೇಳಿದ ವ್ಯಕ್ತಿ “ಸ್ವಾಮಿ! ಒಬ್ಬ ವ್ಯಕ್ತಿಯ ಹುಟ್ಟುಸಾವಿಗೂ ಈ ಪೈಗೂ ಏನು ಬಾದರಾಯಣಸಂಬಂಧ? ನಿಮಗೆಲ್ಲೋ ತಲೆ ಸಂಪೂರ್ಣ ಕೆಟ್ಟಿದೆ!” ಎಂದು ಜಗಳ ಕಾದನಂತೆ.

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post