X

ಕವರ್ ಸ್ಟೋರಿ ಬೆನ್ನತ್ತಿ ಹೊರಟಾಗ…

ವೈದ್ಯಲೋಕಕ್ಕೆ ವಿಸ್ಮಯವೆನ್ನಿಸುವ ಔಷಧ ನೀಡುವ ಎನ್ ಎಸ್ ನಾರಾಯಣ ಮೂರ್ತಿಯವರ ಕುರಿತು ಅವಹೇಳನಕಾರಿಯಾಗಿ ಸುವರ್ಣ ನ್ಯೂಸ್ ಕವರ್ ಸ್ಟೋರಿ ಪ್ರಸಾರ ಮಾಡಿತು, ಇಂತಹ ಸಾತ್ವಿಕರ-ಸಾಧಕರ ಬಗ್ಗೆಯೂ ಅವಹೇಳನ ಮಾಡಿದ ಸ್ಟೋರಿಯ ಬೆನ್ನತ್ತಿದಾಗ ನನಗನಿಸಿದ್ದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ.

ಡಿಸ್ಕವರಿ ಚಾನೆಲ್ ನಡೆಸಿದ ಡಾಕ್ಯುಮೆಂಟ್ರಿ ಮತ್ತೊಂದು ಟಿವಿ೯ ನಲ್ಲಿ ಬಂದ ನಮಗೊಂದು ಸಲಾಂ ಇನ್ನಿತರ ಕಾರ್ಯಕ್ರಮಗಳು ನಾರಾಯಣ ಮೂರ್ತಿಯವರನ್ನು ಜಗತ್ತಿಗೆ ಪರಿಚಯಿಸಿದವೋ, ಇನ್ನೇನೋ… ನಾರಾಯಣ ಮೂರ್ತಿಯವರ ಮನೆಯೆದುರು ಸೇರುತ್ತಿದ್ದ ರೋಗಿಗಳ ಸಂಖ್ಯೆ ಹೆಚ್ಚಳವಾಯಿತು, ಸರದಿ ಉದ್ದವಾದ ಪರಿಣಾಮ, ಸ್ಥಳೀಯ ಕೆಲವರು, ಸಹಾಯದ ಹಾಗು ಶೀಘ್ರ ಭೇಟಿಯ ನೆಪದಲ್ಲಿ, ರೋಗಿಗಳಿಂದ ಹಣ ಕೀಳಲು ಪ್ರಾರಂಭಿಸಿದರು, ಆದರೆ ಕೆಲವೇ ದಿನಗಳಲ್ಲಿ ಇದು ಮೂರ್ತಿಯವರಿಗೆ ತಿಳಿದು ,ಸುಲಿಗೆಯನ್ನು ನಿಲ್ಲಿಸಿದರು, ಇದು ಮೂರ್ತಿಯವರ ಬಗ್ಗೆ ಅಸಹಿಷ್ಣುತೆ ಉಂಟಾಗಲು ಮೂಲ ಕಾರಣ. ಯಾವಾಗ ತಮ್ಮ ಆದಾಯದ ಮೂಲಕ್ಕೆ ಸಂಚಕಾರ ಬಂದಿತೋ, ಮೂರ್ತಿಯವರನ್ನು ಬೆದರಿಸಲು ಹಲವು ತಂತ್ರಗಳನ್ನು ಮಾಡಿದರು, ಅರಣ್ಯ ನಾಶದ ನೆಪದಲ್ಲಿ ಮೂರ್ತಿಯವರ ಮೇಲೆ ಕಂಪ್ಲೇಂಟ್ ದಾಖಲಿಸಲು ಶುರುವಿಟ್ಟುಕೊಂಡರು, ಹಾಗೆ ನೋಡಿದರೆ ಔಷಧಕ್ಕೆ ಬೇಕಾದದ್ದು ಮರದ ತೊಗಟೆ, ಮರವಲ್ಲ, ಆ ಮರವನ್ನು ಮಲೆನಾಡಿನ ಜನತೆ ಮನೆಕಟ್ಟಲು ಉಪಯೋಗಿಸುವುದಿಲ್ಲ, ಉರುವಲಿಗಾಗಿಯೂ ಬಳಸುವುದಿಲ್ಲ, ಕಾರಣ ಆ ಮರ ಬಳಸಿದರೆ ಮನೆಯಲ್ಲಿ ಕಲಹವಾಗುತ್ತದೆ ಎಂಬ ನಂಬಿಕೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮರದ ತೊಗಟೆಗಳನ್ನು ಔಷಧಕ್ಕಾಗಿ ಬಳಸುತ್ತಿರುವುದು ಪಾರಂಪರಿಕವಾಗಿ ಬಂದಿದೆ ಮತ್ತು ಅದರಿಂದ ಮರಕ್ಕೆ ಏನೇನೂ ಹಾನಿಯಿಲ್ಲ.

ದುರುದ್ದೇಶದ ದೂರು ದಾಖಲಾದ ನಂತರ ಮೂರ್ತಿಯವರಿಗೆ ಅರಣ್ಯಕ್ಕೆ ಪ್ರವೇಶ ಮಾಡುವುದಕ್ಕೂ ಇನ್ನಿಲ್ಲದ ತೊಂದರೆ ನೀಡಿದರು, ತೊಗಟೆ ಇಲ್ಲದೆ ಔಷಧ ನೀಡುವುದಾದರೂ ಹೇಗೆ…? ಬೇಸತ್ತ ಮೂರ್ತಿಯವರು ಸರಿ ಸುಮಾರು ಒಂದೂವರೆ ತಿಂಗಳುಗಳ ಕಾಲ ಔಷಧ ನೀಡುವುದನ್ನೇ ನಿಲ್ಲಿಸಿ ಬಿಟ್ಟರು, ರೋಗಿಗಳು ತೀವ್ರ ಪರಿತಪಿಸುವಂತಾಯಿತು, ಯಾವಾಗ ರೋಗಿಗಳು ಪರಿತಪಿಸುವಂತಾಯಿತೋ, ಗಂಭೀರತೆಯನ್ನು ಅರಿತ ಹಲವು ಜನರು ಪ್ರಖ್ಯಾತ ಆಯುರ್ವೇದ ವೈದ್ಯ ಹಾಗೂ ಸಂತರೊಬ್ಬರ ಮುಂದಾಳತ್ವದಲ್ಲಿ, ಸಮಸ್ಯೆಯನ್ನು ಅರಣ್ಯ ಸಚಿವರಿಗೆ ವಿವರಿಸಿದರು, ಸಮಸ್ಯೆಯ ಗಂಭೀರತೆ ಅರಿತ ಸಚಿವರು, ಅರಣ್ಯುತ್ಪನ್ನದ ಬಳಕೆಗೆ ಅನುಮತಿಯ ಪರಿಶೀಲನೆಗಾಗಿ ಮೂರು ಜನ IAS ಅಧಿಕಾರಿಗಳ ಒಳಗೊಂಡ ಸಮತಿಯನ್ನು ನೇಮಿಸಿದರು. ಶ್ರೀ ಕೆ ಎಸ್ ಸುಗಾರ,(ಅರಣ್ಯ ಇಲಾಖೆ) ,ಶ್ರೀ ಸುಭಾಷ್ ಕೆ ಮಲ್ ಖೇಡೆ(ಆಯುಷ್ ಇಲಾಖೆ) ಹಾಗೂ ಆರ್ ಕೆ ಸಿಂಗ್ ,ನೇತೃತ್ವದ ದಕ್ಷ IAS ಅಧಿಕಾರಿಗಳು ,ನರಸೀಪುರಕ್ಕೆ ಬಂದು, ಮೂರ್ತಿಯವರ ಮೇಲಿದ್ದ ದೂರು ಹಾಗೂ ಮೂರ್ತಿಗಳ ಔಷಧ ಪದ್ಧತಿ ಹಾಗೂ ಇನ್ನಿತರೇ ಮಾಹಿತಿಗಳನ್ನು ಕಲೆ ಹಾಕಿ, ಕೂಲಂಕುಷವಾಗಿ ಪರಿಶೀಲಿಸಿ, ಮೂರ್ತಿಯವರು ಅರಣ್ಯ ಉತ್ಪನ್ನಗಳ ಬಳಸಲು ಸಮ್ಮತಿ ನೀಡಬಹುದೆಂದು ಸರ್ಕಾರಕ್ಕೆ ವರದಿ ಸಲ್ಲಿಸಿದರು. ಆ ವರದಿಯ ಆಧರಿಸಿ ಸರ್ಕಾರವು ನಾರಾಯಣ ಮೂರ್ತಿಗಳಿಗೆ ಅನುಮತಿ ನೀಡುವಂತೆ ಸ್ಥಳೀಯ ಪ್ರಾಧಿಕಾರಕ್ಕೆ ನಿರ್ದೇಶಿಸಿತು.

ಇದೇ ಸಮಯಕ್ಕೆ ಮಂಗಳೂರಿನಲ್ಲಿ ಈ ಮರದ ತೊಗಟೆ ಪುಡಿ ಮಾರಾಟಕ್ಕೆ ದೊರೆಯಿತು, ಸ್ಥಳೀಯರ ಮತ್ತು ಇಲಾಖಾ ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಮೂರ್ತಿಯವರು ಮಂಗಳೂರಿನಿಂದ ಪುಡಿಯನ್ನು ಹಣಕ್ಕೆ ಪಡೆದುಕೊಂಡು ಅದಕ್ಕೆ ತಗುಲಿದ ವೆಚ್ಚವನ್ನು ಮಾತ್ರ ರೋಗಿಗಳಿಂದ ಪಡೆಯಲು ಶುರು ಮಾಡಿದರು. ಇದಿಷ್ಟು ಮೂರ್ತಿಯವರು ಕಾಡನ್ನೇ ನಾಶ ಮಾಡಿದ್ದಾರೆ ಎಂಬ ದೂರಿಗೆ ಸಿಗುವ ಸ್ಪಷ್ಟನೆ.

ಮೂರ್ತಿಯವರ ಮೇಲೆ ಏಳು ಕೇಸುಗಳಾಗಿವೆ, ಮೂರು ಎಫ್.ಐ.ಆರ್’ಗಳಿವೆ ಎನ್ನುತ್ತಿದ್ದಾರೆ ಕವರ್ ಸ್ಟೋರಿಯ ಆಂಕರ್. ಮೇಡಂ, ಈಗಿನ ಕಾಲದಲ್ಲಿ ಒಬ್ಬರ ಮೇಲೆ ಎಫ್.ಐ.ಆರ್ ಹಾಕುವುದು ಏನು ಕಷ್ಟದ ಕೆಲಸವಾ? ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪರ ಮೇಲೆ ಎಷ್ಟೊಂದು ಎಫ್.ಐ.ಆರ್’ಗಳು ದಾಖಲಾದವು? ಈಗ ಆ ಎಫ್.ಐ.ಆರ್’ಗಳ ಕತೆ ಏನಾಯ್ತು? ಅಂತ ನಿಮಗೆ ಗೊತ್ತಲ್ಲವೇ? ನಾನು ಏನು ಹೇಳುತ್ತಿದ್ದೇನೆ ಎಂಬುದು ನಿಮಗೆ ಅರ್ಥವಾಗಿದೆ ಅಂದುಕೊಂಡಿದ್ದೇನೆ.

ಓದಿ: ವಿಜಯ ಲಕ್ಷ್ಮಿಯವರೇ, ನಿಮ್ಮ ಕವರ್ ಸ್ಟೋರಿಗೂ ಮುನ್ನ ಈ ಸ್ಟೋರಿಯನ್ನೊಮ್ಮೆ ಕೇಳಿ.

ನಾರಾಯಣ ಮೂರ್ತಿಗಳ ಸೇವೆಯನ್ನು ಗಮನಿಸಿದ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಶ್ರೀಗಳು, ನೆಡದಾಡುವ ದೇವರೆಂಬ ಖ್ಯಾತಿಯ ಸಿದ್ದಗಂಗೆಯೆ ಶ್ರೀಶಿವಕುಮಾರ ಸ್ವಾಮಿಗಳು ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನವರೂ ಸೇರಿದಂತೆ ಸರಿ ಸುಮಾರು ೮೦೦ ಹೆಚ್ಚು ಸಂಘ ಸಂಸ್ಥೆಗಳು ಮೂರ್ತಿಗಳನ್ನು ಸನ್ಮಾನಿಸಿವೆ. ಸನ್ಮಾನ ಪತ್ರದಲ್ಲಿ ಏನು ಬರೆಯಲಾಗಿದೆ ಅಂತ ನೋಡಿ ಒಮ್ಮೆ, ‘ಮೂರ್ತಿಯವರು ಎಲ್ಲಾ ಕಾಯಿಲೆಗೂ ಒಂದೇ ಔಷಧಿ ಕೊಡುತ್ತಾರೆ ಎಂದು ಬಡಬಡಾಯಿಸಿದ್ದಿರಲ್ಲವೇ, ಮೂರ್ತಿಯವರು ಯಾಕೆ ಒಂದೇ ಔಷಧ ಕೊಡುತ್ತಾರೆ, ಅವರನ್ನು ಯಾಕೆ ಏಕ ಮೂಲಿಕಾ ತಜ್ಞ ಎನ್ನುತ್ತಾರೆ ಎಂಬುದು ನಿಮಗೆ ಅರಿವಾಗುತ್ತದೆ. ಮೂರ್ತಿಯವರು ನಿಜವಾಗಿಯೂ ಜನರನ್ನು ಮೋಸ ಮಾಡುತ್ತಿದ್ದರೆ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆಯವರು, ಸಿದ್ಧಗಂಗಾ ಶ್ರೀಗಳು, ಮೂರ್ತಿಯವರಿಗೆ ಬಿರುದು ಬಾವಲಿಗಳನ್ನು ನೀಡಿ ಸನ್ಮಾನಿಸುತ್ತಿದ್ದರೇ?

ಇನ್ನೊಂದು ಪಾಯಿಂಟಿಗೆ ಬರೋಣ. ಮೂರ್ತಿಯವರ ಕೆಲಸವನ್ನು ನೋಡಿ ನಮ್ಮದೇ ಟಿವಿ೯ ಅವರಿಗೊಂದು ಸಲಾಂ ಹೇಳಿತಲ್ಲಾ? ಈ ಬಗ್ಗೆ ನೀವು ಯಾಕೆ ಏನೂ ಹೇಳುತ್ತಿಲ್ಲ ಮೇಡಂ? ಟಿವಿ೯ ಹೇಳಿದ್ದು ಸುಳ್ಳು ಎಂದಾದರೆ ಅದನ್ನೂ ಸಹ ಸಾಬೀತುಪಡಿಸಿ ತೋರಿಸಿ. ಒಬ್ಬ ಮೋಸಗಾರನಿಗೆ ಸಲಾಂ ಹೇಳುತ್ತಿದೆ ಎಂದರೆ ಟಿವಿ೯ ಕೂಡಾ ಜನರಿಗೆ ಮೋಸ ಮಾಡುತ್ತಿದೆ ಎಂದಲ್ಲವೇ? ನಿಮಗೆ ನಿಜವಾಗಿಯೂ ಜನರ ಮೇಲೆ ಕಾಳಜಿ ಇದೆಯೆಂದಾದರೆ, ಟಿವಿ೯ ಅನ್ನು ಒಂದು ಮಾಧ್ಯಮ ಸಂಸ್ಥೆಯೆಂದು ನೋಡದೆ, ಟಿವಿ೯ ಜನರಿಗೆ ಮೋಸ ಮಾಡುತ್ತಿದೆಯೆಂದು ಒಂದು ಕವರ್ ಸ್ಟೋರಿ ಮಾಡಿ ಮೇಡಮ್! ತಮಿಳುನಾಡಿನ ಆಸ್ಪತ್ರೆಯಿಂದ ರೋಗಿಗಳನ್ನು ಕಳಿಸಿದ್ದಕ್ಕಾಗಿ ಭಟ್ಟರು ಅಲ್ಲಿನ ವೈದ್ಯರುಗಳಿಗೆ ಮಾಮೂಲಿ ಕಮಿಷನ್ ನೀಡುತ್ತಾರೆ ಎಂದಿರಲ್ಲವೇ?, ತಮ್ಮ ಕುರಿತಾಗಿ ನಿಮಗೊಂದು ಸಲಾಂ ಎನ್ನುತ್ತಾ ಪ್ರೋಮೋ ಹಾಕಿದ ಟಿವಿ೯ ಗೆ ಭಟ್ಟರು ಎಷ್ಟು ಕಮಿಷನ್ ನೀಡಿದ್ದರು ಎಂಬುದೂ ಸಹ ನಿಮ್ಮ ಸ್ಟೋರಿಯಲ್ಲಿ ಕವರ್ ಆಗಲಿ!

ನಿಮಗೆ ತಾಕತ್ತಿದ್ದರೆ ಮೂರ್ತಿಯವರಿಂದ ಕಾಯಿಲೆಗಳನ್ನು ಗುಣಪಡಿಸಿಕೊಂಡವರನ್ನು ಕಛೇರಿಗೆ ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದ್ದಾರೆ ಮೇಡಂ. ಈ ಸವಾಲಿಗೆ ನಮ್ಮ ಉತ್ತರ ಇಷ್ಟೇ, ಮೊನ್ನೆಯ ಲೇಖನಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿದೆ. ಒಂದೊಂದನ್ನೂ ಸಾವಧಾನದಿಂದ ಓದಿ ನೋಡಿ. ಹಲವಾರು ಜನ ಮೂರ್ತಿಯವರಿಂದ ನಮಗೆ ಉಪಕಾರವಾಗಿದೆ ಎಂದು ಬರೆದುಕೊಂಡಿದ್ದಾರೆ(ಕೆಲವು ಸ್ಕ್ರೀನ್ ಶಾಟ್’ಗಳನ್ನು ಲಗತ್ತಿಸಿದ್ದೇನೆ). ಅವರೆಲ್ಲರನ್ನೂ ಒಂದು ಸಲ ಮಾತನಾಡಿಸಲು ಪ್ರಯತ್ನಿಸಿ ಮೇಡಂ. ಸುಳ್ಳು ಕವರ್ ಸ್ಟೋರಿ ಮಾಡಲು ಊರೂರು ಅಲೆಯುತ್ತೀರಾ, ಸತ್ಯವೇನೆಂದು ತಿಳಿಯಲು ಇಷ್ಟಾದರೂ ಮಾಡಲಾರಿರಾ?

ಕೊನೇಯ ಮಾತು.. ಇಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಕೂಡ ಮೂರ್ತಿಗಳ ಸೇವೆಯ ಬಗ್ಗೆ ತಿಳಿದು, ಹಿಂದೊಮ್ಮೆ ಗೋವಾದ ಸಮಾರಂಭವೊಂದರಲ್ಲಿ ಸನ್ಮಾನಿಸಲು ನಿರ್ಧರಿಸಿದ್ದರು, ಆದರೆ ಅಂದು ಭಾನುವಾರವಾಗಿತ್ತು, ರೋಗಿಗಳಿಗೆ ಔಷಧ ವಿತರಿಸುವ ದಿನವಾಗಿತ್ತು, ತಾವು ಗೋವಾಕ್ಕೆ ಹೋದರೆ ರೋಗಿಗಳು ಪರಿತಪಿಸುವಂತಾಗುತ್ತದೆ ಎಂದು ಸಮಾರಂಭಕ್ಕೆ ತೆರಳಲಿಲ್ಲ, ಆದರೆ ಸಂಘಟಕರೇ ಪ್ರಶಸ್ತಿಯನ್ನು ಮನೆಯ ತನಕ ಕಳುಹಿಸಿಕೊಟ್ಟರು. ಇದು ಮೂರ್ತಿಯವರ ಸೇವಾ ನಿಷ್ಠೆಗೆ ಹಿಡಿದ ಕೈಗನ್ನಡಿ.

-ಪ್ರಶಾಂತ್ ಹೆಗಡೆ

pghegde82@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post