ಲೆಕ್ಕ ಮಾಡುವುದು ಮನುಷ್ಯನಿಗೆ ಮಾತ್ರ ಸಿದ್ಧಿಸಿದ ಜ್ಞಾನವಲ್ಲ. ನಿಮ್ಮ ಮನೆಯ ಬೆಕ್ಕು ಐದು ಮರಿ ಹಾಕಿದ್ದರೆ, ಅವುಗಳಲ್ಲೊಂದನ್ನು ತಮಾಷೆಗಾಗಿ ಸ್ವಲ್ಪ ಹೊತ್ತು ಅಡಗಿಸಿಡಿ. ಬೆಕ್ಕು ಅದೊಂದು ಕಳೆದುಹೋದ ಮರಿಗಾಗಿ ಮನೆಯಿಡೀ ಪ್ರದಕ್ಷಿಣೆ ಹಾಕುವುದನ್ನು ನೋಡಬಹುದು. ಹೀಗೆ ಅಲ್ಪಸ್ವಲ್ಪ ಯೋಚಿಸುವ ಸಾಮರ್ಥ್ಯ ಇರುವ ಎಲ್ಲ ಪ್ರಾಣಿಪಕ್ಷಿಗಳೂ ಲೆಕ್ಕ ಮಾಡುತ್ತವೆ. ಆದರೆ, ಹಾಗೆ ಗಣಿಸಿದ್ದನ್ನು ಅಕ್ಷರಗಳಲ್ಲಿ, ಪ್ರತೀಕಗಳಲ್ಲಿ ಬರೆದಿಡುವ ಸಾಮರ್ಥ್ಯ ಮಾತ್ರ ಮನುಷ್ಯನ ಅನನ್ಯ ಸಿದ್ಧಿ. ಅವನನ್ನು ಜಗತ್ತಿನ ಉಳಿದ ಪ್ರಾಣಿ ಪ್ರಪಂಚದಿಂದ ಬೇರೆಯಾಗಿ ಎತ್ತರದಲ್ಲಿ ನಿಲ್ಲಿಸಿರುವ ಸಂಗತಿಗಳಲ್ಲಿ ಈ ಭಾಷಾ ಪ್ರತಿಭೆಯೂ ಒಂದು.
ಮನುಷ್ಯ ಹೇಗೆ ಭಾಷೆಯ ಸಾಮರ್ಥ್ಯವನ್ನು ಗಳಿಸಿದ ಎನ್ನುವುದೊಂದು ಸಂಶೋಧನಾ ವಸ್ತು. ಅತ್ಯಂತ ಸಂಕೀರ್ಣವಾದ ಭಾವನೆಗಳನ್ನು ಕೂಡ ಕಲಾತ್ಮಕವಾಗಿ, ಅಲಂಕಾರಿಕವಾಗಿ ಮಾತಾಡುವ; ಬರಹದಲ್ಲಿ ಅಡಗಿಸಿಡುವ ವಿದ್ಯೆ ಅವನಿಗೆ ಹೇಗೆ ಬಂತು? ಐದಾರು ಸಾವಿರ ವರ್ಷಗಳ ಹಿಂದೆಯೇ ನಮ್ಮವರು ರಾಮಾಯಣ, ಮಹಾಭಾರತ ಮುಂತಾದ ಗ್ರಂಥಗಳನ್ನೂ ಕಾವ್ಯಗಳನ್ನೂ ಬರೆಯುವಾಗ ತೋರಿಸಿದ ಭಾಷಾ ಪ್ರೌಢಿಮೆ ಅದ್ಭುತವಾದದ್ದು. ವೈಜ್ಞಾನಿಕವಾಗಿ ಅವರು ಅಷ್ಟು ಸುಧಾರಿಸಿರಲಿಲ್ಲ; ಅವರಿಗೆ ಆಧುನಿಕ ಚಿಂತನೆ ಇರಲಿಲ್ಲ; ಅವರು ನಮ್ಮಷ್ಟು ಮುಂದುವರಿದಿರಲಿಲ್ಲ ಎಂದೆಲ್ಲ ಪೂರ್ವಾಗ್ರಹಗಳನ್ನು ಬೆಳೆಸಿಕೊಂಡಿರುವ ನಮ್ಮನ್ನು ಅಣಕಿಸುವಷ್ಟು ಅದ್ಭುತವಾಗಿ ನಮ್ಮ ಪೂರ್ವಜರು ಭಾಷೆಯನ್ನು ದುಡಿಸಿಕೊಂಡಿದ್ದಾರೆ. ಕಳೆದ ಮೂರ್ನಾಲ್ಕು ಸಾವಿರ ವರ್ಷಗಳ ನಾಗರಿಕತೆಗಳ ಬೆಳವಣಿಗೆಗಳ ಬಗ್ಗೆ ಮಾತಾಡುವಾಗ ನಾವು ಪ್ರಾಚೀನದಲ್ಲೇ ಉಚ್ಛ್ರಾಯ ಸ್ಥಿತಿ ಮುಟ್ಟಿದ್ದ ಭಾಷಾ ಕೌಶಲವನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ ಎನ್ನುವುದೊಂದು ಅಚ್ಚರಿಯ ಸಂಗತಿ!
ಕೆಲವು ಸಂಶೋಧಕರು ಹೇಳುತ್ತಾರೆ – ಅಕ್ಷರಗಳನ್ನು ಅನ್ವೇಷಿಸುವ ಮೊದಲೇ ಮನುಷ್ಯ ಸಂಖ್ಯೆಗಳಿಗೆ ಪ್ರತೀಕ (Symbol)ಗಳನ್ನು ಕಂಡುಹಿಡಿದ ಎಂದು. ತಾನು ಬದುಕಿದ ದಿನಗಳನ್ನು, ಆಕಾಶದಲ್ಲಿ ಕಂಡ ನಕ್ಷತ್ರಗಳನ್ನು, ತನ್ನ ಮಕ್ಕಳ ಸಂಖ್ಯೆಯನ್ನು, ಕೊಂದ ಪ್ರಾಣಿಗಳನ್ನು, ಹಿಡಿದು ತಂದ ಮೀನುಗಳನ್ನು ಲೆಕ್ಕ ಹಾಕಲು ಅವನಿಗೆ ಸಂಖ್ಯೆಗಳು ಅತ್ಯಗತ್ಯವಾಗಿ ಬೇಕಾಗಿದ್ದವು. ಹಾಗಾಗಿ ಅವನ್ನೆಲ್ಲ ಮನಸ್ಸಲ್ಲೇ ನೆನಪಿಟ್ಟುಕೊಳ್ಳುವುದಕ್ಕಿಂತ ಮಣ್ಣಿನ ಬಿಲ್ಲೆಗಳಲ್ಲೋ ಮರದ ತೊಗಟೆಯ ಮೇಲೋ ಬರೆದಿಡುವುದು ಮನುಷ್ಯನಿಗೆ ಅನಿವಾರ್ಯವಾಗಿದ್ದಿರಬಹುದು. ಅನಿವಾರ್ಯತೆಯೇ ಅನ್ವೇಷಣೆಯ ತಾಯಿ ಎನ್ನುವಂತೆ, ತನಗೆ ಅಗತ್ಯ ಎಂದು ಅನ್ನಿಸಿದ್ದರಿಂದ ಮನುಷ್ಯ ಸಂಖ್ಯೆಗಳನ್ನು ಸೂಚಿಸುವ ಪ್ರತೀಕಗಳನ್ನು ಕಂಡುಹಿಡಿದ. ಬೇಕಾದರೆ ನಿಮ್ಮ ಊರಿನ ಗೌಳಿಗಿತ್ತಿ ಗೌರಮ್ಮನನ್ನು ನೋಡಿ. ಆಕೆ ಅಕ್ಷರ ಕಲಿತವಳಲ್ಲ. ಆದರೆ, ತನ್ನ ಹಾಲಿನ ಲೆಕ್ಕಗಳನ್ನು ಬರೆದಿಟ್ಟುಕೊಳ್ಳಲು ಅವಳಿಗೆ ಅವಳದ್ದೇ ಆದ ಸಂಖ್ಯಾಲಿಪಿ ಇರುತ್ತದೆ. ಮೊದಲ ದಿನಕ್ಕೆ ಒಂದು ಗೆರೆ, ಎರಡನೆ ದಿನಕ್ಕೆ ಎರಡು, ಮೂರು ದಿನಕ್ಕೆ ಮೂರು, ನಾಲ್ಕಕ್ಕೆ ನಾಲ್ಕು ಗೆರೆ ಎಳೆದ ಮೇಲೆ, ಐದನೇ ದಿನಕ್ಕೆ ಗೌರಮ್ಮ ಆ ನಾಲ್ಕೂ ಗೆರೆಗಳ ಮೇಲೆ ಒಂದು ಅಡ್ಡಗೆರೆ ಎಳೆದು ಹಾಕಿ “ಒಂದು ಕಟ್ಟು” ಮಾಡುತ್ತಾಳೆ. ಅಲ್ಲಿಂದ ಮುಂದಕ್ಕೆ ಮತ್ತೆ ಕಡ್ಡಿಗಳನ್ನು ಒಂದರ ಪಕ್ಕ ಒಂದು ಬರೆದು ಹೊಸ ಕಟ್ಟು ಕಟ್ಟುವ ಕೆಲಸಕ್ಕೆ ತೊಡಗುತ್ತಾಳೆ. ಈ ವಿಚಿತ್ರ ಸಂಖ್ಯಾ ಲಿಪಿಯನ್ನು ಚಿಕ್ಕಂದಿನಲ್ಲಿ ನಾವೆಲ್ಲ ಒಂದಿಲ್ಲೊಂದು ಸಂದರ್ಭದಲ್ಲಿ ಬಳಸಿದವರೇ ಅಲ್ಲವೆ? ಸಂಖ್ಯೆಗಳನ್ನು ೧,೨,೩, ಎನ್ನುತ್ತ ಬರೆಯಲು ಕಲಿತವರು ಅದನ್ನು ಲಿಪಿಯೇ ಅಲ್ಲ ಅಂದಾರು. ಆದರೆ ಗೌರಮ್ಮ, ಹಾಗಾದರೆ ಲಿಪಿ ಎಂದರೇನು ಎಂಬ ಯಕ್ಷಪ್ರಶ್ನೆ ಹಾಕಿ ಅವಳನ್ನು ಕಡೆಗಣಿಸಿದವರಿಗೂ ಬಿಸಿ ಮುಟ್ಟಿಸಿಯಾಳು!
ಪ್ರಾಚೀನ ಗ್ರೀಕ್ ನಾಗರಿಕತೆಯಲ್ಲಿ ೨೭ ಪ್ರತೀಕಗಳನ್ನು ಬಳಸಿದ ಉದಾಹರಣೆ ಇದೆ. ಅವರು ತಾವು ಅಕ್ಷರಗಳಾಗಿ ಬಳಸುತ್ತಿದ್ದ ಚಿಹ್ನೆಗಳಿಗೆ ೧,೨,೩, ಇತ್ಯಾದಿ ಬೆಲೆ ಕೊಡುತ್ತ ಹೋದರು. ಮೊದಲ ೯ ಅಕ್ಷರಗಳಿಗೆ ೧ ರಿಂದ ೯ರವರೆಗೆ ಬೆಲೆ ಕಟ್ಟಿದ ಮೇಲೆ, ಮುಂದಿನ ೯ ಅಕ್ಷರಗಳಿಗೆ ೧೦,೨೦,೩೦, ಇತ್ಯಾದಿ ಹತ್ತರ ಗುಣಕಗಳನ್ನು ಆದೇಶಿಸಿದರು. ಕೊನೆಗೆ ಬರುವ ೯ ಅಕ್ಷರಗಳಿಗೆ ೧೦೦,೨೦೦, ಮುಂತಾದ ಬೆಲೆಗಳನ್ನು ಕೊಟ್ಟರು. ವಾಸ್ತವದಲ್ಲಿ ಗ್ರೀಕರ ವರ್ಣಮಾಲೆಯಲ್ಲಿ ೨೪ ಅಕ್ಷರಗಳು ಮಾತ್ರ ಇದ್ದವು. ಆದರೆ, ಈ ಸಂಖ್ಯಾ ಅನುಕೂಲಕ್ಕಾಗಿ ಆ ಗುಂಪಿಗೆ ಇನ್ನೂ ಮೂರು ಅಕ್ಷರಗಳನ್ನು ಸೇರಿಸಿ ವರ್ಣಮಾಲೆಯನ್ನು ಹಿಗ್ಗಿಸಿದರು. ಮೊದ ಮೊದಲಿಗೆ ಅವರಿಗೆ ಇದೊಂದು ಅದ್ಭುತ ಕೆಲಸ ಅನ್ನಿಸಿದರೂ ಬರ ಬರುತ್ತ ಅದರಲ್ಲಿ ಉದ್ಭವವಾಗುವ ತೊಡಕುಗಳು ಗಮನಕ್ಕೆ ಬಂದಿರಬೇಕು! ಬರವಣಿಗೆಯ ಮಧ್ಯದಲ್ಲಿ ಸಂಖ್ಯೆಗಳು ಕಾಣಿಸಿಕೊಳ್ಳಬೇಕಾಗಿ ಬಂದಾಗ ಪ್ರತಿಸಲವೂ, “ಇದು ಅಕ್ಷರ ಅಲ್ಲ; ಸಂಖ್ಯೆ ಎಂದು ಓದಿಕೊಳ್ಳಿ” ಎಂಬ ಒಕ್ಕಣೆ ಹಾಕುವುದು ಅನಿವಾರ್ಯವಾಯಿತು! ಹಾಗಾಗಿ ಗ್ರೀಕರ ಈ ಅಕ್ಷರ-ಸಂಖ್ಯಾ ಪ್ರತೀಕಗಳ ಸಮನ್ವಯ ಅನುಕೂಲವಾಗುವ ಬದಲು ತಲೆನೋವಾಗಿ ಪರಿಣಮಿಸಿತು.
ಸಂಖ್ಯೆಗಳಿಗೆ ಪ್ರತೀಕಗಳನ್ನು ಕೊಡುವ ವಿಚಾರದಲ್ಲಿ ನಮ್ಮ ಭಾರತೀಯರು ಅತ್ಯದ್ಭುತವೆನ್ನುವ ಸಾಧನೆ ಮಾಡಿದ್ದಾರೆ. ಗ್ರೀಕರ ಸಮಸ್ಯೆಯನ್ನು ನೋಡಿ ಕಲಿತರೋ ಅಥವಾ ಸ್ವತಂತ್ರವಾಗಿಯೇ ಅದನ್ನು ಮನಗಂಡರೋ ಒಟ್ಟಿನಲ್ಲಿ ಭಾರತೀಯರು ಸಂಖ್ಯೆಗಳಿಗೆ ಪ್ರತ್ಯೇಕ ಪ್ರತೀಕಗಳನ್ನು ಬಳಸಿದ ಮೊದಲಿಗರಲ್ಲಿ ಮೊದಲಿಗರು ಎನ್ನಬಹುದು. ಭಾರತದ ಇನ್ನೊಂದು ಹೆಗ್ಗಳಿಕೆ ಏನೆಂದರೆ ದಾಶಮಿಕ ಪದ್ಧತಿಯನ್ನು ಕೈಗೆತ್ತಿಕೊಂಡದ್ದು. ನಮಗೆಲ್ಲ ಹತ್ತು ಬೆರಳುಗಳಿರುವುದಿಂದ ಮತ್ತು ಲೆಕ್ಕ ಮಾಡಬೇಕಾಗಿ ಬಂದಾಗೆಲ್ಲ ಮನುಷ್ಯ ಬೆರಳು ಮಡಚುವುದರಿಂದ, ಈ ದಾಶಮಿಕ ಪದ್ಧತಿ ಬುದ್ಧಿ ಇರುವ ಯಾರಿಗೇ ಆದರೂ ಸಹಜವಾಗಿ ಅರಿವಾಗಬೇಕಿದ್ದ ಸಂಗತಿ. ಇದನ್ನು ಕೈಬಿಟ್ಟು ತಮ್ಮದೇ ಆದ ವಿಚಿತ್ರ ಸಂಖ್ಯಾಪದ್ಧತಿಯನ್ನು ಅನುಸರಿಸುತ್ತಿದ್ದ ರೋಮನ್ನರು ಕೊನೆಗೆ ಗಣಿತದಲ್ಲಿ ಏನೊಂದೂ ಸಾಧನೆ ಮಾಡಲಾಗದೆ ಮುಗ್ಗರಿಸಬೇಕಾಯಿತು. ದಾಶಮಿಕ ಪದ್ಧತಿಯನ್ನು ಅಳವಡಿಸಿಕೊಂಡ ಭಾರತೀಯರು ಕ್ರಿಸ್ತಪೂರ್ವದಲ್ಲೇ ಅತ್ಯಂತ ಆಧುನಿಕವೆನ್ನುವ ಗಣಿತ ಸಾಧನೆಗಳನ್ನು ಮಾಡಲು ಸಾಧ್ಯವಾಯಿತು. ಒಂದು, ಎರಡು ಇತ್ಯಾದಿ ಸಂಖ್ಯೆಗಳಿಗೆ ಮಾತ್ರವಲ್ಲದೆ “ಏನೂ ಇಲ್ಲದ ಸ್ಥಿತಿ”ಯನ್ನು ಸೂಚಿಸುವ ಶೂನ್ಯವನ್ನೂ ಒಂದು ಸಂಖ್ಯೆಯೆಂದು ಪರಿಗಣಿಸಿ ಅದಕ್ಕೂ ಒಂದು ಪ್ರತೀಕವನ್ನು ಮೀಸಲಿಟ್ಟದ್ದು ಭಾರತೀಯರ ಅತ್ಯದ್ಭುತ ಸಾಧನೆ. ಬಹುಶಃ ನಮ್ಮವರು ಆಧ್ಯಾತ್ಮದಲ್ಲಿ ಸಾಧನೆ ಮೆರೆದಿಲ್ಲವಾದರೆ ಇಂತಹದೊಂದು ಸೊನ್ನೆ ತತ್ವವನ್ನು ಯೋಚಿಸುವುದು ಕಷ್ಟವಿತ್ತೇನೋ!
ಭಾರತದಲ್ಲಿ ದಾಶಮಿಕ ಪದ್ಧತಿ ಯಾವಾಗ ಶುರುವಾಯಿತು ಎನ್ನುವುದರ ಕುರಿತು ಏಕಾಭಿಪ್ರಾಯ ಇಲ್ಲ. ಕ್ರಿಸ್ತಶಕ ಮೂರನೇ ಶತಮಾನದ ಹೊತ್ತಿಗೆ ಈ ಪದ್ಧತಿ ನಮ್ಮಲ್ಲಿ ಜನಪ್ರಿಯವಾಗಿರಬೇಕು ಎನ್ನುವವರು ಕೆಲವರು. ಇಲ್ಲ, ಕ್ರಿಸ್ತಪೂರ್ವ ಆರನೇ ಶತಮಾನದಲ್ಲೂ ಇದ್ದಿರಬಹುದು ಎನ್ನುವವರು ಕೆಲವರು. ಭಿನ್ನಾಭಿಪ್ರಾಯಗಳು ಏನೇ ಇದ್ದರೂ ನಮ್ಮ ಸಂಶೋಧಕರು ಅದನ್ನು ಕ್ರಿಸ್ತಪೂರ್ವ ಆರನೇ ಶತಮಾನಕ್ಕಿಂತ ಹಿಂದೆ ಹಾಕಲು ಭಯಪಡುತ್ತಾರೆ. ಆದರೆ, ಮಹಾಭಾರತದಲ್ಲಿ ೧೮ ಅಕ್ಷೊಹಿಣಿ ಸೈನ್ಯದ ವಿವರ ಬರುತ್ತದೆ. ಅಲ್ಲಿ ವ್ಯಾಸರು, ಪ್ರತಿ ಅಕ್ಷೊಹಿಣಿಯಲ್ಲೂ ೨೧೮೭೦ ಆನೆಗಳು, ಅಷ್ಟೇ ಸಂಖ್ಯೆಯ ರಥಗಳು, ೬೫೬೧೦ ಕುದುರೆಗಳು, ೧೦೯೩೫೦ ಕಾಲಾಳುಗಳು ಇದ್ದರು ಎಂಬ ಲೆಕ್ಕ ಕೊಡುತ್ತಾರೆ. ಈ ಸಂಖ್ಯೆಗಳಲ್ಲಿ ಪ್ರತಿಯೊಂದರ ಅಂಕಿಗಳ ಮೊತ್ತ ತೆಗೆದುಕೊಂಡರೂ ಉತ್ತರ ಹದಿನೆಂಟೇ ಬರುತ್ತದೆ! ದಾಶಮಿಕ ಪದ್ಧತಿ ಗೊತ್ತಿಲ್ಲದಿದ್ದರೆ ವ್ಯಾಸರು ಈ ಚಮತ್ಕಾರ ಮಾಡುವುದು ಸಾಧ್ಯವಿರಲಿಲ್ಲ. ಹಾಗಾಗಿ, ಮಹಾಭಾರತ ರಚನೆಯಾದ ಸಮಯದಲ್ಲೇ ಭಾರತದಲ್ಲಿ ಜನರಿಗೆ ದಾಶಮಿಕ ಪದ್ಧತಿ ತಿಳಿದಿತ್ತು; ಮಾತ್ರವಲ್ಲ, ಅದರಲ್ಲಿ ಪರಿಣತಿಯೂ ಇತ್ತು ಎಂದು ಪರಿಗಣಿಸಬಹುದು.
ರೋಮನ್ನರ ಹಾಗೆ ಭಾರತದಲ್ಲೂ ಅಕ್ಷರಗಳನ್ನು ಸಂಖ್ಯೆಗಳಾಗಿ ಬಳಸುವ ಕ್ರಮ ಇತ್ತು. ನಮ್ಮಲ್ಲಿ ಹೆಚ್ಚಿನೆಲ್ಲ ಸಾಹಿತ್ಯವೂ ಕಾವ್ಯ ಪ್ರಕಾರದಲ್ಲಿ ಬಂದಿರುವುದರಿಂದ, ಸಂಖ್ಯೆಗಳನ್ನು ಕಾವ್ಯದೊಳಗೆ ತರುವಾಗ ಈ ಹೊಂದಾಣಿಕೆ ಅನಿವಾರ್ಯವಾಯಿತು. ದೇವನಾಗರಿ ಲಿಪಿಯ 25 ವರ್ಗೀಯ ವ್ಯಂಜನಗಳಿಗೆ ಪ್ರಾಚೀನರು ೧ ರಿಂದ ೨೫ರವರೆಗಿನ ಬೆಲೆ ಆದೇಶಿಸಿದರು. ಯರಲವಗಳಂಥ ಅವರ್ಗೀಯ ವ್ಯಂಜನಗಳಿಗೆ ೩೦,೪೦,೫೦ ಮುಂತಾದ ಬೆಲೆಗಳನ್ನು ಆದೇಶಿಸುತ್ತ ಹೋದರು. ಸ್ವರಾಕ್ಷರಗಳಿಗೆ ಹತ್ತರ ಘಾತಗಳ ಬೆಲೆ ಕೊಟ್ಟರು. ಉದಾರಹಣೆಗೆ ಗ ಎಂಬ ಅಕ್ಷರದ ಬೆಲೆ ೩. (ಕ = ೧, ಖ = ೨, ಗ = ೩ ಇತ್ಯಾದಿ). ಗ್ಯ ಎಂದರೆ ಗ್+ಯ ಆಗುವುದರಿಂದ ಅದರ ಬೆಲೆ ೩ + ೩೦ = ೩೩ (ಯ = ೩೦, ರ = ೪೦ ಇತ್ಯಾದಿ). ಇನ್ನು ಗ್ಯು ಎಂದರೆ ಗ್+ಯ+ಉ ಆಗುವುದರಿಂದ ಅದರ ಬೆಲೆ ೩೩೦೦೦ (ಅ = ೧೦, ಇ = ೧೦೦, ಉ = ೧೦೦೦ ಆಗುವುದರಿಂದ). ಹೀಗೆ ವರ್ಣಮಾಲೆಯೊಳಗೆ ಭಾರತೀಯ ಕವಿಗಳು ಮತ್ತು ಗಣಿತಜ್ಞರು ಒಂದು ಸಂಕೀರ್ಣ ಸಂಖ್ಯಾಸಂಕೇತ ಪಟ್ಟಿಯನ್ನು ರೂಪಿಸಿಕೊಂಡರು. ಇದಲ್ಲದೆ ಕೆಲವು ಪದಗಳನ್ನೂ ಅವರು ಸಂಖ್ಯೆಗಳನ್ನು ಸೂಚಿಸಲು ಬಳಸಿಕೊಂಡಿರುವುದು ವೇದ್ಯವಾಗುತ್ತದೆ. ಉದಾಹರಣೆಗೆ ರವಿ ಎಂದರೆ ೧೨ ಮನು ಎಂದರೆ ೧೪, ಪಕ್ಷ ಎಂದರೆ ೧೫ ಇತ್ಯಾದಿ. ಇವೆಲ್ಲ ಕಾವ್ಯಾನುಕೂಲಕ್ಕಾಗಿ ಮಾಡಿಕೊಂಡ ವ್ಯವಸ್ಥೆಗಳೇ ವಿನಾ ಕೆಲವು ವಿದೇಶೀ ಪಂಡಿತರು ತರ್ಕಿಸಿರುವಂತೆ ಸಂಖ್ಯೆಗಳಿಗೆ ಪ್ರತೀಕಗಳಿಲ್ಲದ ಕೊರತೆಯನ್ನು ನೀಗಿಸಿಕೊಳ್ಳಲು ಮಾಡಿದ ಪ್ರಯೋಗಗಳಲ್ಲ.
ನಮ್ಮಲ್ಲಿ ಸಂಖ್ಯೆಗಳಿಗೆ ಪ್ರತೀಕಗಳನ್ನು ಬಳಸಿರುವ ಮೊದಲ ಉದಾಹರಣೆ ಸಿಗಬಹುದಾದದ್ದು ಬಹುಶಃ ಸಿಂಧೂ ಕಣಿವೆಯ ನಾಗರಿಕತೆಯಲ್ಲಿ. ದುರದೃಷ್ಟವಶಾತ್ ಆ ಲಿಪಿಯ ಗೂಢಾರ್ಥಗಳನ್ನು ಇನ್ನೂ ಬಿಡಿಸಲು ಸಾಧ್ಯವಾಗಿಲ್ಲವಾದ್ದರಿಂದ, ಅವರು ಸಂಖ್ಯೆಗಳನ್ನು ಬರೆದಿದ್ದರೋ ಇಲ್ಲವೋ ಎನ್ನುವುದು ತಿಳಿಯದಾಗಿದೆ. ಅಲ್ಲಿಂದ ಮುಂದಕ್ಕೆ ಬಂದರೆ ಕ್ರಿಸ್ತಪೂರ್ವ ಮೂರನೇ ಶತಮಾನದ ಅಶೋಕ ಶಾಸನಗಳಲ್ಲಿ ಪ್ರಾಕೃತ ಮತ್ತು ಬ್ರಾಹ್ಮೀ ಲಿಪಿಗಳಲ್ಲಿ ಬರೆದಿರುವ ಅಂಕೆಗಳು ಕಾಣಸಿಗುತ್ತವೆ. ಚಿತ್ರದುರ್ಗದ ಬ್ರಹ್ಮಗಿರಿ ಎಂಬಲ್ಲಿ ಸಿಕ್ಕಿರುವ ಅಶೋಕನ ಶಾಸನದಲ್ಲಿ ೨೫೬ ಎಂಬುದನ್ನು ೨೦೦,೫೦,೬ ಎಂದು ಬಿಡಿಸಿ ಬರೆದಿದ್ದಾರಂತೆ. ಉತ್ತರ ಕನ್ನಡದ ಗುಡ್ನಾಪುರದಲ್ಲಿ ಕದಂಬ ವಂಶದ ರವಿವರ್ಮ ಸಂಸ್ಕೃತದಲ್ಲಿ ಬರೆಸಿರುವ ಶಾಸನದಲ್ಲಿ ಎಲ್ಲ ಒಂಬತ್ತು ಅಂಕೆಗಳೂ ಒಟ್ಟಿಗೆ ಸಿಕ್ಕುತ್ತವೆ ಎನ್ನುವುದು ವಿಶೇಷ. ಕನ್ನಡದ ಅತಿವಿಶಿಷ್ಟ ಪ್ರಾಚೀನಕಾವ್ಯವಾದ ಕುಮುದೇಂದು ಮುನಿಯ “ಸಿರಿಭೂವಲಯ”ದಲ್ಲಿ ಕನ್ನಡದ ಅಂಕೆಗಳನ್ನು ಬರೆಯಲಾಗಿದೆ.
ಭಾರತದಲ್ಲಿ ವಿಕಾಸವಾದ ಹಲವು ಭಾಷೆಗಳ ಬೆನ್ನ ಹಿಂದೆ ಸಂಸ್ಕೃತ ಭಾಷೆ ಮತ್ತು ಬ್ರಾಹ್ಮೀ/ದೇವನಾಗರಿ ಲಿಪಿಗಳು ಪೋಷಕಪಾತ್ರ ನಿರ್ವಹಿಸಿವೆ ಎಂದರೆ ತಪ್ಪಲ್ಲ. ಕನ್ನಡದ ಅಂಕೆಗಳ ಮಟ್ಟಿಗೂ ಈ ಮಾತು ನಿಜ. ಯಾವುದೋ ಕಾಲಘಟ್ಟದಲ್ಲಿ ಕನ್ನಡದ ಅಂಕೆಗಳ ಪ್ರತೀಕಗಳು, ಬ್ರಾಹ್ಮೀ ಲಿಪಿಯಿಂದ ಬೇರ್ಪಟ್ಟವು ಎನ್ನಬಹುದು. ಬ್ರಾಹ್ಮೀ ಮತ್ತು ಕನ್ನಡ ಲಿಪಿಗಳಲ್ಲಿ ಅಂಕೆಗಳನ್ನು ಬರೆಯುವುದರಲ್ಲಿ ಬಹಳಮಟ್ಟಿನ ಸಾಮ್ಯ ಇದೆ ಎನ್ನುವುದನ್ನು ಯಾರೂ ಗಮನಿಸಬಹುದು. ಅಲ್ಲದೆ ಕನ್ನಡದ ಅಂಕೆಗಳ ಇನ್ನೊಂದು ವಿಶೇಷತೆ ಏನೆಂದರೆ, ಅವುಗಳು ಕನ್ನಡಾಕ್ಷರಗಳ ಒತ್ತಕ್ಷರಗಳಾಗಿಯೂ ಬಳಕೆಯಾಗುತ್ತವೆ. ೧ (ಗ), ೨ (ತ), ೩ (ನ), ೪ (ಳ), ೬ (ಮ) – ಇವು ಅಂಕೆಗಳೂ ಹೌದು ಒತ್ತಕ್ಷರಗಳೂ ಹೌದು! ಅಂಕೆಗಳನ್ನು ಒತ್ತಕ್ಷರಗಳಾಗಿ ಬಳಸಲಾಯಿತೆ ಅಥವಾ ಒತ್ತಕ್ಷರಗಳನ್ನೇ ಅಂಕೆಗಳಾಗಿ ಉಪಯೋಗಿಸಿಕೊಳ್ಳಲಾಯಿತೆ ಎನ್ನುವುದರ ಬಗ್ಗೆ ನಿಖರವಾಗಿ ಏನನ್ನೂ ಹೇಳುವಂತಿಲ್ಲ.
ಒಂದು ಕಾಲದಲ್ಲಿ ಕನ್ನಡ ನಾಡು ಈಗಿನ ಗೋವಾ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಕಾಸರಗೋಡು ಇತ್ಯಾದಿ ಪ್ರದೇಶಗಳಿಗೂ ವಿಸ್ತರಿಸಿತ್ತು ಎನ್ನುವುದಕ್ಕೆ ಅಲ್ಲಿ ಆಗೀಗ ಸಿಗುವ ಶಾಸನಗಳಲ್ಲಿ ಕನ್ನಡ ಪದಗಳು, ಅಂಕೆಗಳು ಕಾಣಸಿಗುವುದೇ ಸಾಕ್ಷಿ. ಕ್ರಿಸ್ತಶಕ ಎಂಟನೇ ಶತಮಾನದೀಚೆಗೆ ಬರೆಯಲ್ಪಟ್ಟ ಹಲವು ಶಾಸನಗಳಲ್ಲಿ ಕನ್ನಡ ಅಂಕೆಗಳು ಕಾಣಸಿಕ್ಕಿವೆ. ಹೈದರಾಬಾದಿನ ನಿಜಾಮ ತನ್ನ ನೋಟುಗಳಲ್ಲಿ ಕನ್ನಡ ಅಂಕೆ ಬಳಸಿದ್ದಾನೆ. ಕನ್ನಡದಲ್ಲಿ ಅಚ್ಚುಕಂಡ ಮೊದಲ ಪತ್ರಿಕೆ ಮಂಗಳೂರು ಸಮಾಚಾರದಲ್ಲೂ ಕನ್ನಡ ಅಂಕೆಗಳನ್ನು ಬಳಸಲಾಗಿತ್ತು. ಕರ್ನಾಟಕದಲ್ಲಿ ಧರ್ಮಪ್ರಚಾರ ಮತ್ತು ಸಾಹಿತ್ಯದ ಕೆಲಸ ಮಾಡಿದ ಜರ್ಮನ್ ಪಾದ್ರಿಗಳು ಕಡ್ಡಾಯವಾಗಿ ಕನ್ನಡ ಅಂಕೆಗಳನ್ನೇ ಬಳಸುತ್ತಿದ್ದರು. ಈಗಲೂ ಲೋಕಶಿಕ್ಷಣ ಟ್ರಸ್ಟ್ ಪ್ರಕಟಿಸುವ ಎಲ್ಲ ಪತ್ರಿಕೆಗಳೂ ಕನ್ನಡದ ಅಂಕೆಗಳನ್ನೇ ಉಳಿಸಿಕೊಂಡಿವೆ. ಕೆಲವರು, ಇಡೀ ದಕ್ಷಿಣ ಭಾರತದಲ್ಲಿ ಅಂಕೆಗಳಿಗೆ ಪ್ರತೀಕಗಳನ್ನು ಇನ್ನೂ ಉಳಿಸಿಕೊಂಡಿರುವ ಭಾಷೆ ಕನ್ನಡ ಮಾತ್ರ ಎನ್ನುತ್ತಾರೆ. ಇದೇನೂ ಪೂರ್ತಿ ನಿಜವಲ್ಲ. ನಮ್ಮಂತೆಯೇ ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲೂ ಅಂಕೆಗಳಿಗೆ ಪ್ರತೀಕಗಳಿವೆ. ಆದರೆ, ತನ್ನದೇ ಆದ ಪ್ರತೀಕಗಳನ್ನು ಇಂದಿಗೂ ಬಳಕೆಯಲ್ಲಿಟ್ಟಿರುವ ಕೆಲವೇ ಕೆಲವು ಜಾಗತಿಕ ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ನಿಸ್ಸಂಶಯವಾಗಿ ಹೇಳಬಹುದು.
ಕನ್ನಡದ ಅಂಕೆಗಳನ್ನು ಉಳಿಸಬೇಕೆ? ಸಂಶಯವೇ ಬೇಡ! ಕನಿಷ್ಠ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಈ ವಿಶಿಷ್ಟ ಸಂಕೇತಗಳನ್ನು ಉಳಿಸಿಕೊಳ್ಳಲೇಬೇಕು. ಆದರೆ ಅದಕ್ಕಾಗಿ ನಾವು ಈಗಾಗಲೇ ಬಳಕೆಯಲ್ಲಿರುವ ಮತ್ತು ಜಾಗತಿಕ ಮಾನ್ಯತೆ ಪಡೆದಿರುವ ಹಿಂದೂ ಅಂಕೆಗಳನ್ನು ದೂರ ತಳ್ಳಬೇಕೆಂದೇನೂ ಇಲ್ಲ. “ಕನ್ನಡ ಅಂಕೆಗಳನ್ನೇ ಬಳಸಬೇಕು; ಇಂಗ್ಲೀಷ್ ಪದ್ಧತಿಯನ್ನು ಕೈಬಿಡಬೇಕು” ಎನ್ನುವುದು ಅಸಂಬದ್ಧ ವಾದ. ಮೊದಲನೆಯದಾಗಿ ನಾವೀಗ ಬಳಸುತ್ತಿರುವ ಸಂಖ್ಯೆಗಳು ಇಂಗ್ಲೀಷ್ ಪದ್ಧತಿಯವಲ್ಲ; ಬದಲು ನಾವೇ ಭಾರತೀಯರೇ ಜಗತ್ತಿಗೆ ಕೊಟ್ಟಿರುವ ಅಪ್ಪಟ ಭಾರತೀಯ ಸಂಖ್ಯೆಗಳು! ಹಾಗಾಗಿ ಅವನ್ನು ಕೈಬಿಡುವುದು; ಕೈಬಿಡಬೇಕೆಂದು ಒತ್ತಾಯಿಸುವುದು ಅನಗತ್ಯ. ಆದರೆ, ಅದರ ಜೊತೆಗೆ ಕನ್ನಡದ ಅಂಕೆಗಳ ಪರಿಚಯವೂ ಕಡ್ಡಾಯವಾಗಿ ಆಗುವಂತೆ ಶಾಲಾ ಪಠ್ಯಗಳಲ್ಲಿ ಕನ್ನಡ ಅಂಕೆಗಳನ್ನು ಉಪಯೋಗಿಸಬಹುದು. ಕನ್ನಡದ ಪತ್ರಿಕೆಗಳು ಕನ್ನಡದ ಅಂಕೆಗಳಿಗೆ ಹೆಚ್ಚು ಪ್ರಚಾರ ಕೊಡಬಹುದು. ಸರಕಾರೀ ಫಲಕಗಳಲ್ಲಿ ಕನ್ನಡಾಂಕೆಗಳು ಗರಿಗೆದರಬಹುದು. ಸರಕಾರೀ ಬಸ್ಸುಗಳು ಇದನ್ನು ಬಳಸಬಹುದು. ಒಟ್ಟಲ್ಲಿ, ಇದು ನಮ್ಮದು, ಇದರ ಬಗ್ಗೆ ನಮಗೆ ಹೆಮ್ಮೆಯಿದೆ ಎನ್ನುವುದನ್ನು ನಾವು ಯಾವ ಹೋರಾಟ, ಪ್ರತಿಭಟನೆಗಳು ಇಲ್ಲದೆಯೂ ತೋರಿಸಿಕೊಡಬಹುದು. ಅಂಥ ಪ್ರೀತಿ ಇದ್ದರೆ ನಮ್ಮ ಅಂಕೆಗಳ ಬಗ್ಗೆ ಕನ್ನಡಿಗರಿಗೆ ಮಾತ್ರವಲ್ಲ; ಇಲ್ಲಿಗೆ ಬಂದಿಳಿಯುವ ಹೊರನಾಡಿಗರಿಗೂ ಆಸಕ್ತಿ ಮೂಡೇಮೂಡುತ್ತದೆ. ಎರಡು ಪ್ರತೀಕಗಳನ್ನು (ಹೆಚ್ಚೆಂದರೆ ೧೮ ಸಂಕೇತಗಳು; ಸೊನ್ನೆಯನ್ನು ಬಿಟ್ಟು) ಕಲಿಯುವುದು ಯಾರಿಗೂ ಕಷ್ಟವಲ್ಲ.
ಭಾಷೆ ಎನ್ನುವುದು ನೀರಿನಂತೆ. ಅದು ವಂಶದಿಂದ ವಂಶಕ್ಕೆ ಹರಿಯುತ್ತಿರಬೇಕು. ಇಂಗಿ ಹೋದರೆ ಇಲ್ಲವೇ ದಿಕ್ಕು ಬದಲಿಸಿ ಹರಿಯತೊಡಗಿದರೆ, ಅದೆಷ್ಟೇ ದೊಡ್ಡ ನದಿಯಾಗಿದ್ದರೂ ಕಾಲಕ್ರಮೇಣ ಇಂಗಿಹೋಗುವ ಭೀತಿ ಇದ್ದೇ ಇದೆ. ಕನ್ನಡದ ಅಂಕೆಗಳಿಗೆ ಅಂಥ ಪಾಡು ಬರದಿರಲಿ!
Facebook ಕಾಮೆಂಟ್ಸ್