X
    Categories: ಅಂಕಣ

“ಜಾಲ”… …ನೆಪಕ್ಕೆ ಪ್ರೇಮದ ಲೇಪನ…

“ಏ ಪ್ರಭಾ, ವಿಷ್ಯ ಗೊತ್ತಾಯ್ತಾ? ಕಮಲಕ್ಕನ್ ಮಗ್ಳು ನೇಣಾಕ್ಕೊಂಡ್ಬಿಟ್ಳಂತೆ, ಮದ್ವೇನೇ ಆಗಿರ್ಲಿಲ್ಲಾ, ಆಗ್ಲೇ ಗರ್ಭಿಣಿ ಬೇರೆ ಆಗ್ಬಿಟ್ಟಿದ್ಲಂತೆ..”.. ” ಹೇ ಶಶಿ, ಮೊನ್ನೆ ಮೊನ್ನೆ ನಮ್ ಕಣ್ಮುಂದೆ ದೊಡ್ಡಾದ್ ಹುಡ್ಗಿ ಶಮಿತಾ ವಿಷ ತೊಗೊಂಡ್ಬಿಟ್ಳಂತೆ”… ಹೀಗೇ ಹೀಗೇ, ಈ ಥರದ ಎಷ್ಟೋ ವಿಷಯಗಳನ್ನ ಆಗಾಗ ಕೇಳ್ತಿರ್ತೀವಿ, ನೋಡ್ತಿರ್ತೀವಿ, ಓದ್ತಿರ್ತೀವಿ. ಈ ಎಲ್ಲ ಪ್ರಕರಣಗಳನ್ನ ಕೂಲಂಕುಶವಾಗಿ ಪರಿಶೀಲಿಸಿದಾಗ ಒಂದಷ್ಟು ನಿಲುವುಗಳು ದಟ್ಟವಾಗಿ ಆವರಿಸಿಕೊಳ್ಳುತ್ತವೆ. ಕೆಲವಷ್ಟು ಘಟನೆಗಳ ಮೂಲ ಹುಡುಕಿದಾಗ ತಿಳಿದು ಬಂದಂತಹ ಸಂಗತಿ ಇಂದಿನ ಸಮಾಜದಲ್ಲಿ ಒಂದು ಬಹುದೊಡ್ಡ ಸಮಸ್ಯೆಯೇ ಆಗಿ ಬೇರೂರಿದೆ ಅಂದರೂ ತಪ್ಪಾಗಲಾರದೇನೋ!..

ಸೃಷ್ಟಿಯ ಎರಡು ಮಹಾ ರಚನೆಗಳೆಂದರೆ ಹೆಣ್ಣು ಮತ್ತು ಗಂಡು. ಒಂದಕ್ಕೊಂದು ಪೂರಕ ಕೂಡ. ನಿಸರ್ಗ ಸಹಜ ಆಕರ್ಷಣೆ ಎರಡೂ ಜೀವಗಳಲ್ಲಿ ಇರುವುದೂ ಸತ್ಯ. ಆದರೆ ಒಂದು ಚೌಕಟ್ಟನ್ನು ಮೀರಿದಾಗ, ಅದರಿಂದಾಗುವ ಪರಿಣಾಮಗಳು ಘೋರ ಎಂಬುದಕ್ಕೆ ಸಾಕ್ಷಿಯಾಗಿ ಹಲವಾರು ಘಟನೆಗಳು ನಮ್ಮ ಕಣ್ಣ ಮುಂದಿವೆ. ಇಂತಹವುಗಳಲ್ಲಿ ‘ಪ್ರೇಮದ ಹೆಸರಲ್ಲಿ ಹುಡುಗಿಯರನ್ನ ಬಳಸಿಕೊಳ್ಳುವಿಕೆ’ ವಿಷಾದಕರ ಸಂಗತಿ. ಇದಕ್ಕೆ ಕಾರಣಗಳೇನು? ಇದರ ಹಿಂದಿರುವ ಅಂಶಗಳೇನು?

ವಯೋಸಹಜ ಆಕರ್ಷಣೆ ಜೊತೆಗೆ ಮಾಧ್ಯಮಗಳ ಪ್ರಭಾವದಿಂದಾಗಿ ಇಂದಿನ ಬಹಳಷ್ಟು ಜನ ಹೆಣ್ಮಕ್ಕಳು ಈ ಜಾಲಕ್ಕೆ ಬಲಿಯಾಗ್ತಾ ಇದ್ದಾರೆ. ಒಂದು ಕಡೆ ಬಡತನವೂ ಕಾರಣವಾಗಿರಬಹುದು. ಅಸಂತೃಪ್ತ ಬದುಕೂ ಕೂಡ. ತಮ್ಮಷ್ಟಕ್ಕೇ ತಮ್ಮ ಪುಟ್ಟ ಪ್ರಪಂಚದಲ್ಲಿ ಕಟ್ಟಿಕೊಂಡ ಹಲವಾರು ಕನಸುಗಳಿಗೆ ಜೊತೆ ನೀಡೋ ಜೀವ ಒಂದು ಬೇಕು ಅನ್ನೋದು ಎಳೆ ಮನಸ್ಸಿನ ಹಂಬಲ. ಆ ಹಂಬಲಕ್ಕೆ ಸರಿಯಾಗಿ ಆತನೊಬ್ಬ ಬರುತ್ತಾನೆ. ಅವಳ ಬಗ್ಗೆ ಇನ್ನಿಲ್ಲದಂತೆ ಕಾಳಜಿ ವಹಿಸುತ್ತಾನೆ. ಪಾಪ ಈ ಹುಡುಗಿಯ ಕಣ್ಣಿಗೆ ಜಾತ್ರೆಯಲ್ಲಿ ಕಂಡಿದ್ದೆಲ್ಲವೂ ಬಣ್ಣ ಬಣ್ಣದ್ದಾಗಿಯೇ ಇರುತ್ತದೆ. ಅವನನ್ನ ನಂಬುತ್ತಾಳೆ. ಕೆಲವೇ ದಿನಗಳಲ್ಲಿ ಅವನು ಅವಳನ್ನ ತನ್ನ ಪ್ರಪಂಚದಲ್ಲಿ ಬಂಧಿಸಿಬಿಡುತ್ತಾನೆ. ಅವಳೋ, ತನ್ನ ಕನಸುಗಳ ಗೂಡಿಗೀಗ ಹೊಸ ಗುಬ್ಬಚ್ಚಿ ಜೊತೆಯಾಗಿದೆ ಅಂತ ಅಂದುಕೊಳ್ಳುತ್ತಾ, ತನ್ನ ಹಳೆಯ ಪ್ರಪಂಚವನ್ನ ಆ ಕ್ಷಣಕ್ಕೆ ಮರೆತು ಬಿಡುತ್ತಾಳೆ. ಯಾರು ತನ್ನ ನಂಬಿಕೆಗಳಿಗೆ, ಭಾವನೆಗಳಿಗೆ ಬೆಲೆ ಕೊಡುತ್ತಾರೋ ಅವರನ್ನು ತಾನೇ ನಮ್ಮವರೆನ್ನ ಬೇಕು ಅಂದುಕೊಳ್ತಾ ಆಕೆ ಅವನಲ್ಲಿ ಸಂಪೂರ್ಣವಾಗಿ ಒಂದಾಗ ಹೊರಡ್ತಾಳೆ. ಕೆಲವಷ್ಟು ಹುಡುಗಿಯರು ದೈಹಿಕವಾಗಿಯೂ ತಮ್ಮನ್ನ ತಾವು ಅವನಿಗೆ ಅರ್ಪಿಸಿಕೊಂಡು ಬಿಡುತ್ತಾರೆ. ಆದರೆ ಇಷ್ಟು ದಿನ ನೆರಳಂತೆ ಇದ್ದವನು ಈಗ ಮಧು ಹೀರಿದ ಚಿಟ್ಟೆಯಂತೆ ಹಾರಿ ಹೋದರೆ? ಸಮಾಜದ ಸಮ್ಮುಖದಲ್ಲಿ ತುಚ್ಛವಾಗುವುದಕ್ಕೆ ಹೆದರಿ ಆ ಹುಡುಗಿ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮುಂದಾಗ್ತಾಳೆ. ನಂಬಿಕೆ ಪ್ರಾಣಕ್ಕೇ ಕುತ್ತು ತರುತ್ತದೆ ಅಂತಾದರೆ ಯಾರನ್ನೂ ನಂಬಲೇಬಾರದೇ? ಪ್ರೇಮದ ಹೆಸರಲ್ಲಿ ಈ ತರದ ಮೋಸಗಳು ನಡೆಯುತ್ತವೆ ಎಂದಾದಲ್ಲಿ ಪ್ರೇಮಿಸಲೇಬಾರದೇ? ಅಥವಾ ಕೊನೆಯಲ್ಲಿ ಇದೊಂದೇ ಪರಿಹಾರವೇ?

ಇಲ್ಲ, ಇದಕ್ಕೆ ಬೇರೆಯದೇ ಆದ ಪರಿಹಾರಗಳಿವೆ. ಆದರೆ ಆ ದಿಶೆಯತ್ತ ನಾವು ಕಣ್ಣು ಹಾಯಿಸಬೇಕಿದೆ. ಮೊದಲನೆಯದಾಗಿ, ವಯಸ್ಸಿಗೆ ಬಂದವರನ್ನ ಸ್ನೇಹಿತರಂತೆ ಕಾಣಬೇಕು ಅನ್ನೋದು ಮೊದಲಿನಿಂದಲೂ ಇರುವಂತಹ ಹೇಳಿಕೆ. ಆದರೆ ನಾವು? ಇಲ್ಲೇ ಎಡವುತ್ತೇವೆ. ಒಮ್ಮೆಮ್ಮೆ ಅನಿಸುತ್ತದೆ. ಅದರಲ್ಲೂ ವಯಸ್ಸಿಗೆ ಬರುವ ಹೆಣ್ಣಿನಲ್ಲಿ ಮಾನಸಿಕವಾಗಿಯೂ ಜೊತೆಗೆ ದೈಹಿಕವಾಗಿಯೂ ಹಲವಾರು ಬದಲಾವಣೆಗಳಾಗುತ್ತವೆ. ಅವಕ್ಕೆಲ್ಲಾ ಹೇಗೆ ಸ್ಪಂದಿಸಬೇಕೆಂಬ ಗೊಂದಲ ಒಂದು ಕಡೆಯಾದರೆ, ಮಗಳನ್ನು ಕಟ್ಟು ನಿಟ್ಟಾಗಿ ಬೆಳೆಸಬೇಕೆನ್ನುತ್ತಾ, ಅವಳ ಆಸೆಗಳನ್ನ ಎಲ್ಲೋ ಒಂದು ರೀತಿಯಲ್ಲಿ ಮೊಟಕುಗೊಳಿಸಿ ಇಲ್ಲದ ನಿರ್ಬಂಧಗಳನ್ನು ಹೇರುವುದೂ ಕೂಡ, ಆ ಹುಡುಗಿ ತನ್ನದೇ ಆದಂತಹ ಒಂದು ಆರಾಮದಾಯಕ ವಲಯವನ್ನ ( ‘ಕಂಫರ್ಟ್ ಝೋನ್’ ) ಕಟ್ಟಿಕೊಳ್ಳುವ ಹಂತದಲ್ಲಿ ಇಂತಹ ಮೋಸಕ್ಕೆ ಬಲಿಯಾಗುವ ಸಾಧ್ಯತೆಗಳೂ ಇವೆ. ಅದೇ ಮನೆಯಲ್ಲಿ ಅವಳನ್ನ ಸ್ನೇಹಿತೆಯೆಂಬಂತೆ ನಡೆಸಿಕೊಂಡಿದ್ದಲ್ಲಿ ಅವಳೂ ತನ್ನ ಪ್ರತೀ ನಡೆಯನ್ನು ಹೇಳಬಹುದಾದ ಸಾಧ್ಯತೆಗಳು ಜಾಸ್ತಿ ಇರುತ್ತವೆ. ಅವಳಿಗೆ ಅವಳದೇ ಆದ ಸ್ವಾತಂತ್ರ್ಯವನ್ನ ಕೊಡಬೇಕು (ಸ್ವೇಚ್ಛೆ ಅಲ್ಲ). ಇನ್ನೂ ಮುಖ್ಯವಾದ ವಿಷಯವೆಂದರೆ, ನಮ್ಮ ಹೆಣ್ಣು ಮಕ್ಕಳು ಇಂತಹ ಸಂಗತಿಗಳಲ್ಲಿ ವಾಸ್ತವ ಪರಿಕಲ್ಪನೆಯನ್ನ ಬೆಳಸಿಕೊಳ್ಳಬೇಕು. ಭಾವನಾತ್ಮಕವಾಗಿದ್ದರೂ ವಸ್ತು ಸ್ಥಿತಿಯನ್ನ ಅವಲೋಕಿಸಬೇಕಾದ ಅಗತ್ಯ ಇದೆ. ಒಂದಷ್ಟು ದಿನಗಳ ಪರಿಚಯದಲ್ಲೇ ಅವನನ್ನು ಸಂಪೂರ್ಣವಾಗಿ ನಂಬುವುದು, ಅವನು ಕರೆದಲ್ಲೆಲ್ಲಾ ಒಬ್ಬಂಟಿಯಾಗಿ ಅವನ ಜೊತೆ ಹೋಗುವುದು ಇವನ್ನೆಲ್ಲಾ ಆದಷ್ಟು ಕಡಿತಗೊಳಿಸಬೇಕು. ಆ ಸಂಬಂಧ ಒಂದು ಹಂತ ತಲುಪಿದ ನಂತರ ಇವಕ್ಕೆಲ್ಲಾ ಅವಕಾಶ ಕೊಡಬಹುದು. ಇನ್ನು ಪ್ರೇಮ ಮತ್ತು ಮದುವೆಯ ವಿಷಯಕ್ಕೆ ಬಂದರೆ, ಮದುವೆಗೆ ಮುಂಚಿನ ದೈಹಿಕ ಸಂಬಂಧವನ್ನ ಖಡಾಖಂಡಿತವಾಗಿ ವಿರೋಧಿಸಲೇಬೇಕು. ಆಗ ಅವನು ಪದೇ ಪದೇ ಅದಕ್ಕೋಸ್ಕರವೇ ಒತ್ತಾಯ ಮಾಡುತ್ತಿದ್ದಲ್ಲಿ ಆ ಸಂಬಂಧದಿಂದ ಆಚೆ ಬರುವುದು ತುಂಬಾನೇ ಉತ್ತಮ. ಎಲ್ಲಕ್ಕಿಂತ ಮುಖ್ಯವಾಗಿ ಸಂಬಂಧಗಳಲ್ಲಿ ವಾಸ್ತವ ನೆಲೆಗಟ್ಟಿನಲ್ಲಿ ನಿಂತು ವೈಚಾರಿಕ ದೃಷ್ಟಿಯಿಂದ ಅವಲೋಕಿಸುವುದರ ಅಗತ್ಯ ಬಹಳಾನೇ ಇದೆ.

ಒಂದು ಚೆಂದದ ಕತೆಯಿದೆ. ಒಬ್ಬ, ದಾರಿಯಲ್ಲಿ ಹೀಗೇ ನಡೆದುಹೋಗ್ತಾ ಇದ್ದ. ಅವನಿಗೆ ಅಲ್ಲಿ ಒಂದು ಕಲ್ಲು ಬಿದ್ಕೊಂಡಿರುವುದು ಕಾಣತ್ತೆ. ಅವನು ಅದನ್ನ ನೋಡ್ತಾನೆ, ಹಾಗೇ ಮುಂದೆ ಹೋಗ್ತಾನೆ. ಇನ್ನೊಬ್ಬ ಅದೇ ದಾರಿಯಲ್ಲಿ ಬರ್ತಾನೆ. ಅವನು ಈ ಕಲ್ಲನ್ನ ಒಂದಷ್ಟು ಚೂರು ಮಾಡಿ ಹೋಗ್ತಾನೆ. ಮತ್ತೂ ಒಬ್ಬ ಅದೇ ದಾರೀಲಿ ಬರ್ತಾನೆ. ಅವನು ಆ ಚೂರಾದ ಕಲ್ಲನ್ನೆಲ್ಲಾ ಒಟ್ಟು ಮಾಡಿ, ಉಳಿದಿರೋ ಕಲ್ಲನ್ನೂ ತೆಗೆದುಕೊಂಡು ಒಂದು ಮನೋಹರವಾದ ಮೂರ್ತಿಯನ್ನ ಮಾಡ್ತಾನೆ. ಈ ಕತೆಯಲ್ಲಿ ಗಮನಿಸಬೇಕಾದ ಮೂರು ಅಂಶಗಳೆಂದರೆ, ಬಿದ್ದಂತಹ ಆ ಕಲ್ಲು ಇದ್ಯಲ್ಲಾ, ಅದು ‘ಪ್ರಕೃತಿ’. ಕಲ್ಲನ್ನ ಚೂರು ಚೂರು ಮಾಡಿ ಹೋದ್ನಲ್ಲಾ, ಅದು ‘ವಿಕೃತಿ’. ಕೊನೆಯದಾಗಿ ಚೂರಾದ ಕಲ್ಲನ್ನೂ ಒಟ್ಟುಗೂಡಿಸಿ ಸುಂದರ ಮೂರ್ತಿ ಮಾಡ್ದ್ನಲ್ವಾ, ಅದುವೇ ‘ಸಂಸ್ಕೃತಿ’… ಪುರುಷನಾದವನು ಹೆಣ್ಣನ್ನ ಕೇವಲ ಭೋಗದ ಆಟಿಕೆಯಂತೆ ಪರಿಗಣಿಸುವುದನ್ನ ಮೊದಲು ಬಿಡಬೇಕು. ಅದರಾಚೆಗೆ ಪರಿಶುದ್ಧವಾದಂತಹ ಒಂದು ಬದುಕಿದೆ ಅನ್ನೋದನ್ನ ಮನಗಾಣಬೇಕು. ನಾವೆಲ್ಲರೂ ಸೇರಿ ಮಾಡಬೇಕಾದಂತಹ ಒಂದು ಮುಖ್ಯವಾದ ಕೆಲಸ ಒಂದಿದೆ. ಒಂದು ವೇಳೆ ಯಾವುದೋ ಹೆಣ್ಮಗಳು ಈ ರೀತಿ ಅನ್ಯಾಯಕ್ಕೆ ಒಳಗಾದ್ರೆ ಅವಳನ್ನ ಅಪರಾಧಿಯಾಗಿ ನೋಡೋ ನಮ್ಮ ಮನಸ್ಥಿತಿ ಬದಲಾಗಬೇಕು;ನಿಜವಾದ ಅಪರಾಧಿ ಶಿಕ್ಷಿಸಲ್ಪಡಬೇಕು. ಜೊತೆಗೆ ನಾವು ನಮ್ಮೆಲ್ಲ ಅಕ್ಕ ತಂಗಿಯರಿಗೆ, ಗೆಳತಿ ಒಡನಾಡಿಗಳಿಗೆ ಬೆಂಗಾವಲಾಗಿ ನಿಲ್ಲೋಣ. ಅವಳ ಕನಸುಗಳಿಗೆ ಬಣ್ಣ ಹಚ್ಚೋಣ. ಒಂದು ಚಿಕ್ಕ ಬದಲಾವಣೆ ಬದುಕಿನ ಗತಿಯನ್ನೂ ಜೊತೆಗೆ ಪಾತ್ರವನ್ನೂ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಅಂತಹ ಒಂದು ಸಣ್ಣ ಬದಲಾವಣೆಗೆ ಶೀಘ್ರದಲ್ಲೇ ನಾವೆಲ್ಲರೂ ಸಾಕ್ಷಿಯಾಗೋಣ.

Facebook ಕಾಮೆಂಟ್ಸ್

ಶ್ರೀ ತಲಗೇರಿ: ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ,ಆಗಾಗ ಲೇಖನಿ,ಕುಂಚಗಳ ಸಹವಾಸ..ಬದುಕಿನ ಬಣ್ಣಗಳಲ್ಲಿ ಪ್ರೀತಿಯ ಚಿತ್ರ ಬಿಡಿಸಿ ಖುಷಿಪಡುತ್ತ,ಶಬ್ದಗಳಿಗೆ ಜೀವ ಕೊಡುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಕನಸು ಕಂಗಳ ಹುಡುಗ...
Related Post