ಕಾದಂಬರಿ

ಆತ್ಮ ಸಂವೇಧನಾ- 26

ಆತ್ಮ ಸಂವೇಧನಾ- 25

ಭೂಮಿಯಲ್ಲಿ ಭಯಂಕರ ನಿಶ್ಯಬ್ಧ. ಎಲ್ಲರಲ್ಲೂ ಸಾವಿನ ಭಯ, ಸ್ಮಶಾನ ಮೌನ. ಬದುಕುವುದಿನ್ನು ಕೇವಲ ಮೂರು ದಿನ. ಏನು ಮಾಡಬಹುದು? ಏನೇನು ಮಾಡಲು ಸಾಧ್ಯ? ಯೋಚನೆಗಳು ಎಲ್ಲರಿಗೂ. ಇಷ್ಟು ದಿನ ತಾನೇ ಏನು ಮಾಡಿದ್ದರು? ವಿಶ್ವವು ನಮ್ಮೆಲ್ಲರ ಮನೆ ಎಂಬ ಅದ್ಭುತ ಕಲ್ಪನೆ, ಚರ್ಚಿಸಿದರು.

ಕೊನೆಗೂ ಮನುಷ್ಯನ ಕಣ್ಣಿಗೆ ಭೂಮಿಯೂ ಜೀವಿಯಂತೆ ತೋರಿತು. ಅದೆಷ್ಟು ನೋವು ನೀಡಿದೆವು? ಹಾನಿ ಮಾಡಿದೆವು? ಅದೊಂದು ನಿರ್ಜೀವ ಎಂದು ಭಾವಿಸಿಬಿಟ್ಟೆವಲ್ಲ. ನಮ್ಮನ್ನೆಲ್ಲ ಬದುಕಿಸುತ್ತಿರುವ ಅಭೂತಚೇತನವದು. ಇದುವ ಪ್ರತೀ ಹೆಜ್ಜೆಯೂ ಅದಕ್ಕೆ ನಿರಂತರ ನೋವು ನೀಡಿರಬಹುದು. ಅದೂ ಒಂದು ಜೀವಿ ಎಂದಾದ ಮೇಲೆ ನಾವದರಮೇಲೆ ನಿತ್ಯಕರ್ಮಗಳನ್ನು ನಡೆಸುವುದು ಸರಿಯೇ?

ಮನಸ್ಸು ಮರವಾಯಿತು;

ಬಯಲು ಮುಗಿಲಾಯಿತು.

ಸರಿಯಲ್ಲ ಎಂದರೆ ಬದುಕುವುದು ಎಲ್ಲಿ??

ಇಷ್ಟು ದಿನ ಅನಾಥರಂತೆ ಬದುಕಿದ್ದ ಮನುಷ್ಯ ಮನಸ್ಸನ್ನು ಮಾರಿಕೊಂಡ, ಬೆಲೆಗಲ್ಲ; ಬೆಲೆಬಾಳುವ ಮತ್ತೊಂದು ಮನಸ್ಸಿಗೆ.

ಅದರಲ್ಲಿ ಹಿಗ್ಗನ್ನು ಕಂಡ. ಇಷ್ಟು ಕಾಲ ಇಂಥದ್ದೊಂದು ಮಾನಸಿಕ ತೃಪ್ತಿಯಿಂದ ದೂರಾಗಿದ್ದೇವಲ್ಲ ಎಂದು ಬೇಸರಗೊಂಡರು.

ಉತ್ತರವಿಲ್ಲದ ಅನೇಕ ಪ್ರಶ್ನೆಗಳು ಮನದ ಮೂಲೆಯಲ್ಲಿದ್ದರೂ ಮನದಂಗಳ ಮಳೆಗರೆದಿತ್ತು. ತೃಪ್ತಿಯಿತ್ತು; ಸಂತೃಪ್ತಿಯನ್ನು ಹುಡುಕಿ ಹೊರಟಿದ್ದರು.

“ಮನಸ್ಸು ಹಾಗೆಯೇ… ಮನಸ್ಸು ಏಕೆ ಚಂಚಲ ಗೊತ್ತಾ??” ಒಮ್ಮೆ ವರ್ಷಿಗೆ ವಿಶ್ವಾತ್ಮ ಕೇಳಿದ್ದ.

ವಿಶ್ವಾತ್ಮ ಹೇಳುವ ಲಯದಲ್ಲಿದ್ದಾಗ ಮಾತುಗಳ ಮಳೆ ಸುರಿಯುತ್ತಿತ್ತು. ಎಲ್ಲರೂ ಕವಚ ತೊಟ್ಟು ನಡೆದವರೇ. ಮಳೆಯ ಹಿಗ್ಗು ಸುಗ್ಗಿಯಾಗಲೇ ಇಲ್ಲ. ಕೆಲವೊಮ್ಮೆ ಬಹಳ ಒಂಟಿ ಒಂಟಿಯಾಗಿ ಕಳೆದುಹೋಗುತ್ತಿದ್ದ. ಮಾತನಾಡಬೇಕೆಂದರೆ ಸಾವಿರ ದಾರಿಗಳು ವಿಶ್ವಾತ್ಮನಿಗೆ.

ಪ್ರತೀ ಕ್ಷಣಗಳೂ ವಿಶ್ವಾತ್ಮನ ಸೂಚನೆಯನ್ನು ಹೊಂದಿರುತ್ತವೆ. ಗ್ರಹಿಸುವ ಕ್ಷಣಗಳ ಲೆಕ್ಕ ಹಾಕದೇ ಮುಂದೆ ಸಾಗಿಬಿಡುತ್ತಾನೆ. ಹಗಲು ಮತ್ತು ರಾತ್ರಿಯ ಎರಡೂ ಕನಸುಗಳು ವಿಶ್ವಾತ್ಮನ ಸೂಚನೆಯೆಡೆಗೆ ಕನ್ನಡಿ ಹಿಡಿಯುತ್ತವೆ. ಅದನ್ನು ಗುರುತಿಸುವುದು ಜೀವಿಗಳ ಸಾಮರ್ಥ್ಯದ ಮೇಲೆ ನಿರ್ಧರಿತವಾಗುತ್ತದೆ.

ವರ್ಷಿ ಆ ಪ್ರಶ್ನೆ ಕೇಳಿ ದಂಗಾಗಿದ್ದ. ಮನಸ್ಸು ಏಕೆ ಚಂಚಲ?? ಎನ್ನುವುದಕ್ಕೂ ಕಾರಣವಿದೆಯೇ? ಎಂದುಕೊಂಡ.

“ಈ ಪ್ರಪಂಚದಲ್ಲಿ ಕಾರಣವಿಲ್ಲದೇ ನಡೆಯುವುದು ಯಾವುದೂ ಇಲ್ಲ. ಅದೊಂದು ನಿರಂತರ ಭಾವ ಪ್ರವಾಂತರ. ಪ್ರತಿಯೊಂದರ ಹಿಂದೂ ಒಂದು ಕಾರಣವಿರುತ್ತದೆ. ಆ ಕಾರಣದ ಹಿಂದೆ ಕಾರಣಾಂತರಗಳ ಸರಪಳಿಯೇ ಇರುತ್ತದೆ. ಅವೆಲ್ಲ ಕೊಂಡಿಗಳು ಕಳಚುವುದಿಲ್ಲ. ಕಳಚಿದರೆ ಕಳೆದೇ ಹೋಗುತ್ತದೆ. ಬಂಧಗಳ, ಸಂಬಂಧಗಳ ಕೊಂಡಿಗಳು ಅವು. ಕಾರಣಗಳು ಕಾರಣಗಳಷ್ಟೆ ವರ್ಷಿ” ನಕ್ಕಿದ್ದ ವಿಶ್ವಾತ್ಮ.

“ಅದಿರಲಿ ಮನಸ್ಸೇಕೆ ಚಂಚಲ ಹೇಳು ನೀನು” ಹಟ ಹಿಡಿದ ವರ್ಷಿ. ವಿಶ್ವಾತ್ಮನೆದುರು ಮಗುವೇ ಆಗಿಬಿಡುತ್ತಿದ್ದ ವರ್ಷಿ.

“ಮನಸ್ಸು ಮನಸು ಮಾಡುವುದು ಮತ್ತೆ ಅವೇ ಎರಡು ವಿಷಯಗಳ ಮೇಲೆ, ವಿಷಯಾಂತರಗಳ ಮೇಲೆ ವರ್ಷಿ “ಆಕರ್ಷಣೆ ಮತ್ತು ಕುತೂಹಲ”. ಮನಸ್ಸು ಯಾವಾಗಲೂ ತೃಪ್ತಿಯನ್ನು ಬಯಸುತ್ತದೆ. ಹಾಗೆಯೇ ತಾನೇನೆಂದು ಯಾವಾಗಲೂ ಯಾರಿಗೂ ತಿಳಿಯಲು ಬಿಡುವುದಿಲ್ಲ, ತನ್ನ ಆತ್ಮನಿಗೂ ಕೂಡ. ಪ್ರತಿಯೊಬ್ಬನೂ ಸ್ವಂತದ ಮನಸ್ಸಿನೊಂದಿಗೆ ಒಂದು ನಿರಂತರ ಬಂಧವನ್ನು ಹೊಂದಿರುತ್ತಾನೆ. ಮಾಡುವ ಪ್ರತಿ ಕೆಲಸವೂ ಮನಸ್ಸಿಗೆ ತಿಳಿದಿರುತ್ತದೆ. ಮನಸ್ಸು ಏನು ಮಾಡುತ್ತದೆ ಎಂಬುದನ್ನು ತಿಳಿಯುವುದು ಕಷ್ಟ.

ಮನಸ್ಸೆಂಬುದು ಭಾವ ಪರವಶತೆ, ಎಲ್ಲರೂ ಕಳೆದು ಹೋಗುವುದೇ ಅಲ್ಲಿ. ಮನಸ್ಸೆಂಬುದು ಕಲಾ ತಪಸ್ವಿ, ರಸಿಕತೆಯೂ ಯಜ್ಞವೇ. ಮನಸ್ಸೆಂಬುದು ನಿಗೂಢ ಸತ್ಯ, ಗೂಢಾಚಾರಿಗಳೂ ಸೋತು ಬರುತ್ತಾರೆ. ಮನಸ್ಸೆಂಬುದು ಸುಳ್ಳುಗಳ ಅರಮನೆ, ಕನಸುಗಳ ಕೂಸು ಅಲ್ಲಿಯೇ ಉಸಿರು ಪಡೆಯುತ್ತದೆ.

ಸಾಮಾನ್ಯ ಜೀವಿಗಳು ಏನು ತಿಳಿದಿವೆ ಗೊತ್ತಾ??

ನಾನು ಮತ್ತು ನನ್ನ ಮನಸ್ಸು ಒಂದೇ ಎಂದು ತಿಳಿದಿರುತ್ತವೆ. ಆದರೆ ಅದು ಎಂದಿಗೂ ಒಂದೇ ಆಗಲು ಸಾಧ್ಯವೇ ಇಲ್ಲ, ಅದು ಬೇರೆಯೇ. ಮನಸ್ಸೆಂಬುದು ಯಾರ ಸ್ವತ್ತು ಅಲ್ಲ, ಹಾಗೆಂದು ಮಾರಾಟಕ್ಕೂ ಇಡುವುದಿಲ್ಲ.

ಮನುಷ್ಯನ ಎಣಿಕೆಯಂತೆ ಎಲ್ಲಕ್ಕಿಂತ ವೇಗವಾಗಿ ಚಲಿಸುವುದು ಬೆಳಕು. ಎಲ್ಲದಕ್ಕಿಂತ ವಿಶಾಲವೆಂದರೆ ವಿಶ್ವ. ಅದನ್ನೂ ಮೀರಿದೆ ಮನಸ್ಸು. ಬೆಳಕಿಗಿಂತ ಹೆಚ್ಚು ವೇಗ ಮನಸ್ಸಿಗೆ. ಹೆಜ್ಜೆ ಮೂಡುವ ಮುನ್ನವೇ ಮುಂದಿನ ಹೆಜ್ಜೆ ಮೂಡಿಸಿಬಿಡುತ್ತದೆ. ಎಲ್ಲಕ್ಕಿಂತ ದೊಡ್ಡದೂ ಮನಸ್ಸೇ.

ಈ ವಿಶ್ವಕ್ಕೂ ಕೂಡ ಮನಸ್ಸಿದೆ. ವಿಶ್ವಾತ್ಮನೆಂಬ ನನಗೂ ಇದೆ. ಮನಸ್ಸಿಗೆ ಪರಿಧಿಯೇ ಇಲ್ಲ ವರ್ಷಿ. ಕ್ಷಿತಿಜವೇ, ಬಂಧನವೇ ಇಲ್ಲದ ಶಕ್ತಿ ಅದು. ಅದಕ್ಕೆ ಮನಸ್ಸು ಚಂಚಲ. ಮನಸ್ಸನ್ನು ನಿಯಂತ್ರಿಸಲು ಒಂದೇ ದಾರಿ; ಅದು ಬಹಳ ಕಷ್ಟದ್ದು.” ವಿಶ್ವಾತ್ಮ ಹೊರಟು ನಿಂತಿದ್ದ.

ವರ್ಷಿಗೆ ಆ ದಾರಿ ಯಾವುದೆಂದು ತಿಳಿಯಬೇಕಿತ್ತು. ಅದನ್ನು ಕೇಳಲು ಉತ್ಸುಕನಾಗಿದ್ದ. ವಿಶ್ವಾತ್ಮ ಮತ್ತೆ ತಿರುಗಿ ನೋಡದೇ ನಡೆದುಬಿಟ್ಟ.

ನಡೆಯುವ ದಾರಿ ತೋರಿಸುತ್ತಾಳೆ ತಾಯಿ;

ಕಾಲುಗಳು ಮಗುವಿನದೇ ತಾನೇ.

ಮನಸ್ಸನ್ನು ನಿಯಂತ್ರಿಸಲು ಸಾಧ್ಯ ಎಂಬುದು ಅಂದು ತಿಳಿದಿತ್ತು. ಆದರೆ ಹೇಗೆ? ಹುಡುಕು ಹೊರಡಬೇಕಿತ್ತು ವರ್ಷಿ. ವಿಶ್ವಾತ್ಮ ಅದನ್ನು ವರ್ಷಿಗೆ ಹೇಳದುದರ ಕಾರಣ ಬೇರೆಯೇ ಇತ್ತು. ವರ್ಷಿ ತನ್ನ ಮನಸ್ಸನ್ನು ನಿಗ್ರಹಿಸಿದರೆ ತಾನು ತೋರಿಸಿದ ದಾರಿ ಹಿಡಿಯುವುದು ಅಸಾಧ್ಯ ಎಂದು ವಿಶ್ವಾತ್ಮನಿಗೆ ತಿಳಿದಿತ್ತ್ತು.

ಮನಸ್ಸನ್ನು ನಿಗ್ರಹಿಸುವುದನ್ನು ಕಲಿತರೆ ಎದುರಿನವನ ಮಾತನ್ನು ಕೇಳಬೇಕಾಗಿಯೇ ಇಲ್ಲ; ಎದುರಿನವನೂ ನಮ್ಮ ಮಾತನ್ನು ಕೇಳುತ್ತಾನೆ.

ಅದೊಂದು ಮಹಾ ತಪಸ್ಸು. ಸುದೀರ್ಘ ಯೋಗ. ಮನಸ್ಸನ್ನು ನಿಗ್ರಹಿಸಿದರೆ ಎಲ್ಲವನ್ನೂ ಗೆದ್ದಂತೆ, ಗಳಿಸಿದಂತೆ. ಹಾಗಾಗಿಯೇ ವಿಶ್ವಾತ್ಮ ವರ್ಷಿಗೆ ಹೇಳದೆಯೇ ನಡೆದಿದ್ದ.

ಕೇವಲ ತನ್ನ ಮೇಲೆ ತನಗೆ ವ್ಯಾಮೋಹ ಇರಲಿ ಎಂಬುದಕ್ಕೆ ಮನಸ್ಸೆಷ್ಟು ಚಂಚಲ. ಸ್ವಂತದ ಬಗ್ಗೆ ಜಿಗುಪ್ಸೆ ಹುಟ್ಟಿದ ದಿನ ಆತ್ಮಕ್ಕೂ, ಮನಸ್ಸಿಗೂ ಇರುವ ಕೊಂಡಿ ಕಳಚಿಹೋಗಿರುತ್ತದೆ. ವರ್ಷಿ ಈಗ ಇತಿಹಾಸವಾಗಿದ್ದ. ವಿಶ್ವಾತ್ಮ ಹೇಳದಿದ್ದರೂ ಆತ ಮನಸ್ಸಿನ ನಿಗ್ರಹ ಕಲಿತಿದ್ದನಾ?

ತಾಯಿ ತೋರಿದ ದಾರಿಯಲ್ಲಿ ಎಡವಿದ ಮೇಲೆಯೇ ನಡೆಯುವುದು ಕಲಿಯುತ್ತದೆ ಮಗು.

ಕಲಿಯುವುದು ಹೇಗೆ?? ಮನಸ್ಸಿನ ನಿಗ್ರಹ ಎಂದರೇನು??

ಮುಂದುವರಿಯುವುದು..

Facebook ಕಾಮೆಂಟ್ಸ್

ಲೇಖಕರ ಕುರಿತು

Gautam Hegde

ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!