ಇದೇ ಜನವರಿ ತಿಂಗಳ ಅಷ್ಟೇನೂ ಚಳಿಯಿಲ್ಲದೆ ತುಂಬಾ ಆಹ್ಲಾದಕರವಾದ ಒಂದು ಮುಂಜಾವು…ಬೆಳ್ಳಂಬೆಳಿಗ್ಗೆಯೇ ಕೈಗಾ ನೇಚರ್ ಕ್ಲಬ್ ಹತ್ತಿರ ಜನ ಒಗ್ಗೂಡಲು ಶುರುವಾದರು. ಹೆಂಗಸರು, ಮಕ್ಕಳು ಸೇರಿ ನೋಡತ್ತಲೇ ಸುಮಾರು 50-60 ಜನರು ಸೇರಿಯಾಯಿತು…ಎಲ್ಲರೂ ಉತ್ಸಾಹಿತರಾಗಿದ್ದು ತಲೆಗೊಂದು ಟೋಪಿ, ಕಾಲಿಗೆ ಶೂ, ಬೆನ್ನಿಗೆ ಚೀಲ, ಕಣ್ಣಿಗೊಂದು ಕಪ್ಪು ಕನ್ನಡಕ.! ಕೆಲವರ ಕೈಯ್ಯಲ್ಲಿ ಕ್ಯಾಮರಾ ಮತ್ತು ದುರ್ಬೀನು…ನಿಮಗೀಗಾಗಲೇ ಅನಿಸಿರಬಹುದು ಇವರೆಲ್ಲಾ ಸೇರಿರುವುದು ಪ್ರಕೃತಿ ವೀಕ್ಷಣೆಗಾಗಿ!!..ಟ್ರೆಕ್ಕಿಂಗ್’ಗಾಗಿ.. ಕೈಗಾ ನೇಚರ್ ಕ್ಲಬ್ ವತಿಯಿಂದ ಕೈಗಾ ವಸತಿ ಸಂಕೀರ್ಣದ ಸಮೀಪದ ಶಿರ್ವೆ ಗುಡ್ಡಕ್ಕೆ ಪ್ರಕೃತಿ ವೀಕ್ಷಣಾ ನಡಿಗೆಯನ್ನು ಆಯೋಜಿಸಿಲಾಗಿತ್ತು. ಕೈಗಾ ಪರಿಸರದ ಬಗ್ಗೆ ಓದುಗರಿಗೆ ಸ್ವಲ್ಪ ತಿಳಿಸುವುದು ಈಗ ಸಾಂದರ್ಭಿಕ. 90ರ ದಶಕದಲ್ಲಿ ಭಾರತೀಯ ಅಣು ವಿದ್ಯುತ್ ನಿಗಮವು ಕೈಗಾವನ್ನು ಅಣು ವಿದ್ಯುದಾಗಾರ ಪ್ರದೇಶವೆಂದು ಘೋಷಿಸುವ ತನಕ ಕೈಗಾವು ಹೊರಜಗತ್ತಿಗೆ ಬಹುಷ: ತಿಳಿದೇ ಇರಲಿಲ್ಲ. ಕೈಗಾವು ಕಾರವಾರದಿಂದ ಸುಮಾರು 60 ಕಿಮೀ ದೂರದಲ್ಲಿ ಕಾಳಿನದಿಯ ದಂಡೆಯಮೇಲೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಚಿಕ್ಕ ಗ್ರಾಮ.. ಪಶ್ಚಿಮ ಘಟ್ಟವು ಯಥೇಚ್ಛ ಮಳೆಗೆ ಹೇಗೆ ಪ್ರಸಿದ್ಧವೊ ಹಾಗೆಯೇ ಇಲ್ಲಿನ ಸಸ್ಯ-ಪ್ರಾಣಿ ಸಂಕುಲಗಳ ವೈವಿಧ್ಯತೆಯೂ ಪ್ರಸಿದ್ಧ… ತನ್ನದೇ ಆದ ವಿಶಿಷ್ಟ ಪರಿಸರ ವ್ಯವಸ್ಥೆಯನ್ನು ಹೊಂದಿದ ಈ ಪಶ್ಚಿಮ ಘಟ್ಟದಲ್ಲಿರುವ ಕೆಲವು ಪ್ರಾಣಿ-ಪಕ್ಷಿಗಳು ಇಲ್ಲಿ ಮಾತ್ರ ಕಾಣಸಿಗುತ್ತವೆ… ಪಶ್ಚಿಮ ದಿಕ್ಕನ್ನು ಹೊರತುಪಡಿಸಿ ಸುತ್ತೆಲ್ಲಾ ಪರ್ವತಗಳಿಂದ ಸುತ್ತವರಿದ ಕೈಗಾವು ಬಟ್ಟಲಿನಾಕಾರವಾಗಿ ಕಂಡಬರುತ್ತದೆ. ಕೈಗಾ ವಸತಿ ಸಂಕೀರ್ಣವು ಕೈಗಾದಿಂದ ಸುಮಾರು 18 ಕಿಮೀ ದೂರದಲ್ಲಿದ್ದು ಇದೂ ಸಹ ಪರ್ವತಗಳಿಂದ ಸುತ್ತುವರಿದಿದೆ…ಅಷ್ಟೇ ಅಲ್ಲದೆ ಪರ್ವತಗಳೆಲ್ಲಾ ದಟ್ಟವಾದ ಕಾಡಿನಿಂದ ಹೊದಿಯಲ್ಪಟ್ಟಿದೆ..ಸಮೀಪದಲ್ಲಿ ಹರಿಯುವ ಕಾಳಿನದಿಯು ಪ್ರದೇಶದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದೆ..ಸುತ್ತು ಕಣ್ಣಹಾಯಿಸಿದಷ್ಟು ಹಚ್ಚಹಸಿರೇ ಕಾಣಿಸುತ್ತದೆ…ಈ ಪ್ರಕೃತಿಯ ಮಡಿಲಲ್ಲಿರುವ ನಮಗೆ ಅಕ್ಷರಶಃ ಹಸಿರೇ ಉಸಿರು.!!!
ಕೈಗಾ ನೇಚರ್ ಕ್ಲಬ್’ನ ಎದುರು ಸೇರಿದವರೆಲ್ಲಾ ಸಾಲಾಗಿ ನಿಂತ ನಂತರ ಕ್ಲಬ್’ನ ಸದಸ್ಯ ಶ್ರೀ ಹರದೀಪ್ ಸಿಂಗ್’ರಿ೦ದ ಶಿರ್ವೆ ಗುಡ್ಡದ ಟ್ರೆಕ್ಕಿಂಗ್’ನ ವಿವರಣೆ ಹಾಗೂ ಉಪಯುಕ್ತ ಸಲಹೆ-ಸೂಚನೆಗಳು. ನಂತರ ಕ್ಲಬ್’ನ ಕಾರ್ಯದರ್ಶಿ ಶ್ರೀ ವೇಣುಗೋಪಾಲರಿಂದ ಈ ಪ್ರಕೃತಿ ವೀಕ್ಷಣೆಯ ಮಹತ್ವದ ಬಗ್ಗೆ ಸಂಕ್ಷಿಪ್ತ ವಿವರಣೆ. ಕಳೆದ 5-6 ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಪ್ರತಿ ವರ್ಷವೂ ನಿರೀಕ್ಷೆಗೆ ಮೀರಿ ಪ್ರತಿಕ್ರಿಯೆ ಬರುತ್ತಿದ್ದು, ಪ್ರಕೃತಿ ವೀಕ್ಷಣೆಯ ಸಂಗಡ ಸ್ವಚ್ಛತಾ ಅಭಿಯಾನವನ್ನೂ ನಡೆಸುತ್ತಾ ಬರಲಾಗುತ್ತಿದೆ. ಪ್ರತಿ ವರ್ಷವೂ ಮಕರ ಸಂಕ್ರಾಂತಿಯ ಮಾರನೇ ದಿನ ಈ ಶಿರ್ವೆ ಗುಡ್ಡದಲ್ಲಿರುವ ಚೆನ್ನಬಸವೇಶ್ವರ ದೇವಾಲಯದಲ್ಲಿ ಜಾತ್ರೆಯಾಗುತ್ತಿದ್ದು 5 ಕಿಮೀ ಕಾಲ್ನಡಿಗೆಯಲ್ಲಿಯೇ ಸಾವಿರಾರು ಜನರು ಸೇರುತ್ತಾರೆ… ಜಾತ್ರೆ ಹಗಲೂ-ರಾತ್ರಿ ಇಡೀ ದಿನ ನಡೆದು, ರಾತ್ರಿ ಯಕ್ಷಗಾನ/ನಾಟಕ ಇತ್ಯಾದಿ ಮನೋರಂಜನಾ ಕಾರ್ಯಕ್ರಮಗಳೂ ನಡೆಯುತ್ತವೆ…ಪ್ರಕೃತಿಯ ಮಡಿಲಲ್ಲಿರುವ ಈ ದೇವಾಲಯದ ಜಾತ್ರೆಯು ಜನರಿಗೆ ಪ್ರಕೃತಿ ವೀಕ್ಷಣೆಯೊಂದಿಗೆ ಆಧ್ಯಾತ್ಮಿಕ ಹಬ್ಬವೂ ಆಗಿದೆ.. ಸಾವಿರಾರು ಜನಸೇರುವ ಜಾತ್ರೆಯಂದರೆ ಕೇಳಬೇಕೇ..? ಎಲ್ಲವೂ ಪ್ಲಾಸ್ಟಿಕ್’ಮಯವಾದ ಈ ಕಾಲದಲ್ಲಿ ಶಿರ್ವೆ ಗುಡ್ಡ ಪ್ರತಿವರ್ಷ ಕಸದತೊಟ್ಟಿಯಾಗುತ್ತಿತ್ತು…ಪ್ರಕೃತಿಯ ಬಗ್ಗೆ ಕಾಳಜಿಯಿರುವ ಒಂದಿಷ್ಟು ಜನರ ಪರಿಶ್ರಮದ ಕೂಸಾಗಿ ಈ ಶಿರ್ವೆಗುಡ್ಡದ ಪ್ರಕೃತಿ ವೀಕ್ಷಣೆಯ ಸಂಗಡ ಸ್ವಚ್ಛತಾ ಅಭಿಯಾನ ಆರಂಭಗೊಂಡಿತು. ನಮ್ಮನ್ನು ಪ್ರೀತಿಯಿಂದ ಸಾಕುತ್ತಿರುವ ಪ್ರಕೃತಿ ಮಾತೆಯ ಉಳಿವಿಗೆ ಚಿಕ್ಕದೊಂದು ಕೊಡುಗೆ.. ಕಾರ್ಯಕ್ರಮ ರೋಮಾಂಚಕ, ಮನೋರಂಜನೆಯ ಜೊತೆಗೆ ಅರ್ಥಗರ್ಭಿತವೂ ಆಗಿತ್ತು. ಈ ಬಾರಿ ನಾನೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಮುಖ್ಯ ಅಧೀಕ್ಷಕರಾದ ಶ್ರೀ ಕೆ ಕೆ ಬಜಾಜ್’ರ ಹಸಿರು ನಿಶಾನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.
ಸುಮಾರು 15 ಕಿಮೀ ಬಸ್ ಪ್ರಯಾಣದ ಬಳಿಕ ನಾವು ಗುಡ್ಡದ ಬುಡಕ್ಕೆ ಬಂದೆವು. ಅಲ್ಲಿಯೇ ನಮ್ಮ ಬೆಳಗಿನ ಉಪಹಾರ…ರುಚಿ-ರುಚಿಯಾದ ಇಡ್ಲಿ-ವಡೆ. ನಾವೆಲ್ಲರೂ ಮನೆಯಿಂದಲೇ ಸ್ಷೀಲ್ ತಟ್ಟೆ ಹಾಗೂ ಲೋಟಗಳನ್ನು ತಂದಿದ್ದೆವು….ಮರಗಳ ನೆರಳಲ್ಲಿ ಕೂತು ಸುತ್ತಮುತ್ತಲಿನ ಪರಿಸರ ವೀಕ್ಷಿಸುತ್ತಾ ನಾಷ್ತಾ ಮಾಡಿದೆವು. ವಾತಾವರಣ ತಂಪಾಗಿ ಉಲ್ಲಾಸಕರವಾಗಿತ್ತು. ಟೀ ಕುಡಿದೆವು. ಮುಂದಿನ ಪ್ರಯಾಣ ಶಿರ್ವೆ ಗುಡ್ಡಕ್ಕೆ!..ಗುಡ್ಡದ ತುದಿ ಅಲ್ಲಿಂದಲೇ ಕಾಣಿಸುತ್ತಿತ್ತು. ಪ್ರತಿಯೊಬ್ಬರಿಗೂ ಕಸತುಂಬಲು ಒಂದೊಂದು ಚೀಲ ಕೊಡಲಾಯಿತು..ಪ್ಲಾಸ್ಟಿಕ್ ಕಸಗಳನ್ನು ಮಾತ್ರ ತೆಗೆಯಲು ಆಯೋಜಿತರಿಂದ ಸಲಹೆ. ಪ್ರಯಾಣಿಸುವ ದಾರಿ ಸಾಕಷ್ಟು ಅಗಲವಾಗಿಯೇ ಇತ್ತು. ಇಕ್ಕೆಲಗಳಲ್ಲಿ ದಟ್ಟವಾದ ಎತ್ತರವಾದ ಕಾಡು. ಎರಡೂ ಬದಿಯ ಮರಗಳ ಕೊಂಬೆಗಳು ಮಧ್ಯಕ್ಕೆ ಚಾಚಿ ನಮ್ಮ ದಾರಿಗೆ ಚಪ್ಪರಹಾಕಿದಂತಿತ್ತು. ಆ ಮರಗಳ ನೆರಳು ನಮ್ಮ ನಡಿಗೆಯನ್ನು ಸಲೀಸಾಗಿಸಲ್ಲದೆ ಹುರಿದುಂಬಿಸಿತಿತ್ತು. ಆ ದಟ್ಟಕಾಡಿನ ಮರಗಳು ವಿಭಿನ್ನವಾಗಿದ್ದವು. ಹೆಚ್ಚಾಗಿ ನಿತ್ಯಹರಿದ್ವರ್ಣದ ಮರಗಳಿದ್ದರೂ ಚಳಿಗಾಲದಲ್ಲಿ ಎಲೆ ಉದುರಿಸಿಕೊಳ್ಳುವ ಅನೇಕ ಮರಗಳಿದ್ದವು. ಆ ಮರಗಳು ಬೇರೆ ಬೇರೆ ಹಂತದಲ್ಲಿದ್ದು ವಿಭಿನ್ನ ಬಣ್ಣದಿಂದ ಕಂಗೊಳಿಸುತ್ತಿದ್ದವು..ಕೆಲವು ಹಣ್ಣೆಲೆಗಳಿಂದ ಕೆಂಪು, ಹಳದಿ ಬಣ್ಣದಿಂದ ಅಲಂಕೃತವಾಗಿದ್ದರೆ ಇನ್ನು ಕೆಲವು ಈಗಷ್ಟೇ ಕುಡಿಬಂದು ನೇರಳೆ, ಕಂದು, ಕೆಂಪು, ತಿಳಿಹಸಿರು, ಹಚ್ಚಹಸಿರು ಬಣ್ಣದಿಂದ ತಂಬಿದ್ದು ರಥಗಳಂತೆ ಕಂಡುಬಂದವು.!! ಇನ್ನು ಕೆಲವು ಗೊಮ್ಮಟೇಶ್ವರನಂತೆ ಬೋಳಾಗಿದ್ದವು.!!!! ಮರಗಳಿಂದ ಬಿದ್ದ ಒಣಎಲೆಗಳು ನಮ್ಮ ದಾರಿದಲ್ಲಿ ಹಾಸಿಗೆ ಹಾಸಿದಂತಿತ್ತು. ಪ್ರಕೃತಿಯ ಸೊಬಗು ಒಂದೆಡೆಯಾದರೆ ದಾರಿಯುದಕ್ಕೂ ನೀರಿನ ಬಾಟೆಲ್, ಬಿಸ್ಕೆಟ್ ಪ್ಯಾಕ್’ಗಳು, ಚಾಕಲೇಟ್ ಜರಿಗಳು ಜನರ ಪ್ರಕೃತಿಯ ಬಗ್ಗೆಯ ಅಸಡ್ಡೆಯನ್ನು ತೋರಿಸುತ್ತಿತ್ತು. ಈ ಕಸಗಳನ್ನೆಲ್ಲಾ ಹೆಕ್ಕಿ ಚೀಲದಲ್ಲಿ ತುಂಬಲು ಶುರುಮಾಡಿದೆವು. ಹಾಗೆ ತುಂಬಿದ ಚೀಲವನ್ನು ಅಲ್ಲಿಯೇ ಬರುವಾಗ ತರಲು ಬದಿಗಿಟ್ಟೆವು…ಮೊದಲು ಸಮತಲವಾಗಿದ್ದ ದಾರಿ ಮುಂದುಹೊಗುತ್ತಿದ್ದಂತೆ ಏರಿಕೆಯಾಗಲು ಶುರುವಾದರೂ ಪ್ರಯಾಣ ಕಷ್ಟಕರವೇನೂ ಆಗಿರಲಿಲ್ಲ. ಆದರೆ ದಾರಿಯು ಇಳಿಜಾರಾದ ಗುಡ್ಡದ ಅಂಚಿನಲ್ಲಿ ಸಾಗುತ್ತಿದ್ದು ಎಡಗಡೆ ಕಣಿವೆ ಹಾಗೂ ಬಲಗಡೆ ಕಡಿದಾದ ಪರ್ವತವಿತ್ತು…ಹೀಗೆ ಸಾಗುತ್ತಿರುವಾಗ ನಮ್ಮ ಮುಂದೆ ಸಾಗುತ್ತಿದ್ದ ಗುಂಪೊಂದು ನಿಂತು ಏನನ್ನೋ ತದೇಕ ದೃಷ್ಟಿಯಿಂದ ನೋಡುತ್ತಿರುವುದು ಕಂಡುಬಂತು…ಕೂಡಲೇ ಧಾವಿಸಿ ನೋಡಿದಾಗ ಕಂಡುಬಂದದ್ದು ಒಂದು ಮರಿಹಾವು…ಮಂಡಲಹಾವಾಗಿತ್ತು. ಶಾಂತವಾಗಿದ್ದ ಹಾವಿನ ಫೋಟೋ ತೆಗೆದುಕೊಂಡೆವು…ಕೆಲವರಂತೂ ಸೆಲ್ಫೀ ವಿದ್ ಸ್ನೇಕ್ ಸಹ ತೆಗೆಸಿಕೊಂಡರು..
ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ನಾವು ತಲುಪಿದ್ದು ಚೆನ್ನಬಸವೇಶ್ವರ ದೇವಾಲಯ…ಸಾಕಷ್ಟು ಸಮತಟ್ಟಾದ ಪ್ರದೇಶದಲ್ಲಿ ದೇವಾಲಯದ ಸುತ್ತಲೂ ಹಸಿರು ಹೊದಿಕೆ ಹೊದ್ದ ಪರ್ವತಗಳು…ಅಲ್ಲಿಯೇ ಒಂದು ಚಿಕ್ಕ ಝರಿಯಲ್ಲಿ ತಂಪಾದ ನೀರು ಹರಿದು ಬರುತಿತ್ತು..ಕಾಲು-ಮುಖ ತೊಳೆದು ಸ್ವಲ್ಪ ದಣಿವಾರಿಸಿಕೊಂಡೆವು. ನಾವು ಹತ್ತಬೇಕಾಗಿದ್ದ ಶಿರ್ವ ಗುಡ್ಡದ ತುತ್ತ ತುದಿ ಕಾಣಿಸಿತ್ತಿತ್ತು. ಅದರ ಮೇಲೊಂದು ಬಿಳಿಬಟ್ಟೆಯ ಬಾವುಟ ಹಾರಾಡುತಿತ್ತು…ಆ ಎತ್ತರದ ಗುಡ್ಡದ ಮೇಲೆ ಬೀಸುತ್ತಿರುವ ತಂಗಾಳಿ ದಣಿವಾರಿಸುತ್ತಲೇ ನಮ್ಮನ್ನು ಮುಂದಿನ ಕಾರ್ಯಕ್ರಮಕ್ಕೆ ಹುರಿದುಂಬಿಸುತಿತ್ತು.!
ದೇವಾಲಯದ ಸುತ್ತಲೂ ಸಾಕಷ್ಟು ಪ್ಲಾಸ್ಟಿಕ್ ಕಸಗಳಿದ್ದವು. ಶುರುಮಾಡಿದೆವು ನಮ್ಮ ಸ್ವಚ್ಛತಾ ಅಭಿಯಾನ.! ಎಲ್ಲರೂ ಹುಮ್ಮಸ್ಸಿನಿಂದ, ನಿಷ್ಠೆಯಿಂದ ಪ್ಲಾಸ್ಟಿಕ್ ಕಸಗಳನ್ನು ಹೆಕ್ಕಿ ಚೀಲಕ್ಕೆ ತುಂಬುತ್ತಿದ್ದರು…45 ನಿಮಿಷಗಳಲ್ಲಿ ದೇವಸ್ಥಾನದ ಪರಿಸರವೆಲ್ಲಾ ಕ್ಲೀನ್!!.ಎಲ್ಲರೂ ಸೇರಿ ಮಾಡಿದ ಕೆಲಸದಲ್ಲಿ ಆಯಾಸವೇ ಅನಿಸಿರಲಿಲ್ಲ…ಮತ್ತೊಮ್ಮೆ ಕೈ-ಮುಖ ತೊಳೆದು ಮುಂದಿನ ಪರ್ವತಾರೋಹಣಕ್ಕೆ ಶುರು.!
ಮುಂದಿನ ನಡಿಗೆಗೆ ಪರ್ವತಾರೋಹಣ ಶಬ್ದ ಸರಿಯೆನಿಸಿತು. ಒಬ್ಬರೇ ನಡೆಯಬಹುದಾದ ತುಂಬಾ ಕಿರಿದಾದ ದಾರಿ, ಅಲ್ಲಲ್ಲಿ ಸಣ್ಣ-ದೊಡ್ಡ ಕಲ್ಲುಗಳು…ಏರಿಕೆ ತುಂಬಾನೇ ತ್ರಾಸತರುತಿತ್ತು. ಸ್ವಲ್ಪ ಜಾರಿ ಬಿದ್ದರೂ ಸಾವರಿಸಿಕೊಳ್ಳುವುದು ಕಷ್ಟವೇ…ಅಲ್ಲದೇ ಒಬ್ಬರಿಂದ ಇನ್ನೊಬ್ಬರು/ಮತ್ತೊಬ್ಬರು ಸರಣಿಯಲ್ಲಿ ಬೀಳುವ ಸಂಭವವೂ ಇದೆ. ಕಿರಿದಾದ ದಾರಿಯಲ್ಲಿ ಮುಂದಿರುವವರನ್ನು ಹಿಂದಿಕ್ಕುವ ಕೆಲಸ ಸಾಧ್ಯವಿಲ್ಲ…ಕೈಯಲ್ಲಿರುವ ಕೋಲು ನಮ್ಮ ಸಮತೋಲನ ಕಾಪಾಡಲು ಸಹಾಯ ಮಾಡುತಿತ್ತು. ಅರಣ್ಯ ಮತ್ತೂ ದಟ್ಟವಾಯಿತು…ಪರಿಸರ ವೀಕ್ಷಣೆ ಈಗ ಅಸಾಧ್ಯವೇ ಸರಿ…ಪ್ರತಿಯೊಂದು ಹೆಜ್ಜೆಯಿಡುವಾಗಲೂ ನೋಡಿ ಜಾಗರೂಕತೆಯಿಂದ ಇಡಬೇಕು…ಅಲ್ಲಲ್ಲಿ ಅನುಕೂಲಕರ ಜಾಗ ನೋಡಿ ಸ್ವಲ್ಪ-ಸ್ವಲ್ಪ ಕುಳಿತುಕೊಂಡು ಮುಂದೆ ಸಾಗುತಿದ್ದೆವು. 45 ನಿಮಿಷ ಕ್ಲಿಷ್ಟಕರವಾದ ಪ್ರಯಾಣದ ನಂತರ ಸಿಕ್ಕಿದ್ದು ಶಿರ್ವಗುಡ್ಡದ ತುತ್ತ ತುದಿ..ಕೊನೆಯ 20 ಮೀ ಕಡಿದಾದ ಬಂಡೆಯಾಗಿದ್ದು ಹತ್ತಲು ಏಣಿಯೇ ಬೇಕು. ಗುಡ್ಡದ ಆ ಶಿಖರವನ್ನು ಎಲ್ಲಿಂದಲೋ ಆಕಾಶ ಮಾರ್ಗವಾಗಿ ತಂದು ಕೂರಿಸಿಟ್ಟಂತಿತ್ತು.!! ಅದನ್ನೂ ಹತ್ತಿದಾಗ ಆದ ಅನುಭವ ಅವರ್ಣನೀಯ.!!. ಪರ್ವತದ ತುದಿಯಿಂದ ವೀಕ್ಷಿಸಿದಾಗ ಎಲ್ಲವೂ ‘ಪಕ್ಷಿನೋಟ’. ಎಡಕ್ಕೂ ಬಲಕ್ಕೂ ಸ್ವಲ್ಪ ಕಿರಿದಾದ ಬೆಟ್ಟಗಳು…ಮುಂದೆ ಮತ್ತು ಹಿಂದೆ ಇಳಿಜಾರು ಪ್ರದೇಶ…ಸುತ್ತಮುತ್ತಲಿನ ಎಲ್ಲಾ ಪರ್ವತಗಳನ್ನು ಹೊದ್ದಿರುವ ದಟ್ಟದಾದ ಹಚ್ಚ ಹಸಿರಿನ ಕಾಡುಮರಗಳು.. ಹಚ್ಚ ಹಸಿರಿನ ಮಧ್ಯೆ-ಮಧ್ಯೆಯೊಂದಿಷ್ಟು ಕೆಂಪು, ಕಂದು, ನೇರಳೆ, ಹಳದಿ ಬಣ್ಣಗಳ ವಿವಿಧ ಚಳಿಗಾಲದಲ್ಲಿ ಎಲೆಉದುರುವ ಮರಗಳು. ಧಿಟ್ಟವಾಗಿ ನಿಂತಿದ್ದ ಪರ್ವತಗಳು ಹೊದ್ದ ಹಸಿರು ಹೊದಿಕೆಯ ಮೇಲೆ ಮೂಡಿಸಿದ ಬಣ್ಣ-ಬಣ್ಣದ ಚಿತ್ತಾರದಂತಿತ್ತು.!!! ದೂರದಲ್ಲಿ ಕೈಗಾ ವಸತಿ ಸಂಕೀರ್ಣ ಕಟ್ಟಡಗಳು ಹಸಿರು ಪಾರ್ಕ್’ನ ಮಧ್ಯದಲ್ಲಿ ನಿರ್ಮಿಸಿದಂತಿತ್ತು. ನಾವಿರುವ 12 ಮಹಡಿಯ ಕಟ್ಟಡ ಸಹಾ ಚಿಕ್ಕದಾಗಿ ಕಾಣಿಸಿತಿತ್ತು. ಅದರ ಹಿಂದೆ ಕಾಳಿ ನದಿ ಮತ್ತು ಮತ್ತೊಂದು ಸಾಲು ಪರ್ವತ ಶ್ರೇಣಿಗಳು… ಕೈಗಾ ವಸತಿ ಸಂಕೀರ್ಣದ ಸ್ವಲ್ಪ ಬಲಗಡೆ ಕದ್ರಾ ಅಣೆಕಟ್ಟು ಮತ್ತು ಜಲಾಶಯ… ಗುಡ್ಡದ ಹಿಂಬದಿಯಲ್ಲೂ ಇಳಿಜಾರದ ಕಾಡು ಪ್ರದೇಶ, ನಂತರ ಕೆಲ ಗ್ರಾಮಗಳು, ನಂತರ ಮತ್ತೊಂದು ಪರ್ವತ ಶ್ರೇಣಿ!!!.ಈ ಕಾಡು-ನದಿ-ಬೆಟ್ಟಗಳ ಸಂಯೋಜನೆಯು ಚಿತ್ರಕಲಾಕಾರನ ಕುಂಚದಲ್ಲಿ ಮೂಡುವ ಪ್ರಕೃತಿ ದೃಶ್ಯದ ಸಂಯೋಜನೆಯಂತಿತ್ತು. ಅದ್ಭುತವಾದ ದೃಶ್ಯ!!..ಆಹ್ಲಾದಕರ ವಾತಾವರಣ…ಆ ತುತ್ತತುದಿಯಲ್ಲಿ ನೆಟ್ಟಿದ್ದ ಬಿಳಿಬಣ್ಣದ ಬಾವುಟ. ಬೀಸುವ ಗಾಳಿಗೆ ಹಾರಾಡುತಿತ್ತು. ಶಿಖರದ ಮೇಲೆ ಚಿಕ್ಕ ಬಸವೇಶ್ವರನ ಗುಡಿಯಿದ್ದು ದೊಡ್ಡದಾದ ಹಣತೆಯಿದೆ. ಮಕರ ಸಂಕ್ರಾಂತಿಯ ಮಾರನೇದಿನ ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಇಲ್ಲಿನ ಬಸವೇಶ್ವರ ದೇವರಿಗೆ ಪೂಜೆಮಾಡಿ ಹಣತೆಯಲ್ಲಿ ದೀಪ ಹಚ್ಚಲಾಗುತ್ತದೆ. ಸುಮಾರು 200 ವರ್ಷಗಳ ಹಿಂದೊಮ್ಮೆ ಅರಬ್ಬೀ ಸಮುದ್ರದಲ್ಲಿ ದಿಕ್ಕು ತಪ್ಪಿದ ಬ್ರಿಟಿಷರ ಹಡಗು, ಈ ದೀಪ ನೋಡಿ ದಡ ಸೇರಲಾಗಿತ್ತು ಎನ್ನುವ ಪ್ರತೀತಿಯೂ ಇದೆ. ಆ ಪರ್ವತ ತುದಿಯಲ್ಲೂ ಊದುಬತ್ತಿಯ ಪ್ಯಾಕೇಟ್, ಪ್ಲಾಸ್ಟಿಕ್ ಕವರ್ ಇತ್ಯಾದಿ ಕಸ ಬಿದ್ದಿದ್ದು ಅದನ್ನೂ ತೆಗೆಯಲಾಯಿತು. ಇನ್ನೊಂದು ವಿಶೇಷವೆಂದರೆ ಅಲ್ಲಿರುವ ಬಾವಿ…ಆ ಶಿಖರದ ಮೇಲೊಂದು ಕಲ್ಲಿನಿಂದಲೇ ಕಡಿದ ಬಾವಿಯಿದ್ದು ಅದರಲ್ಲಿ ಸುಮಾರು 2 ಮೀಟರಿನಷ್ಟು ನೀರಿತ್ತು!!… ಕಲ್ಲಲ್ಲಿ ಕಡಿದ ಬಾವಿಯು ಕಾಂಕ್ರೀಟಿನ ನೀರಿನ ಟ್ಯಾಂಕಿಯಂತಿದ್ದು ಮಳೆಗಾಲದಲ್ಲಿ ಶೇಖರವಾದ ನೀರಿನ್ನೂ ಬತ್ತಿರಲಿಲ್ಲ… ಸುತ್ತಮುತ್ತಲಿನ ಪ್ರಕೃತಿಯ ಫೋಟೋ, ಕುಳಿತು ನಿಂತು ಫೋಟೋ ತೆಗಿಸಿಕೊಂಡೆವು…ಸೂರ್ಯನ ಬಿಸಿಲು ತೀಕ್ಷ್ಣವಾಗಿದ್ದರೂ ಸಣ್ಣದಾಗಿ ಬೀಸುತಿದ್ದ ತಂಗಾಳಿ ಮತ್ತು ಕಣ್ಮುಂದಿನ ಮನಮೋಹಕ ದೃಶ್ಯಗಳಿಂದಾಗಿ ಬಿಸಿಲು ನಗಣ್ಯವೆನಿಸಿತ್ತು. ಯಾವತ್ತೂ ಸಿಗದ ರೋಚಕ ಅನುಭವ ಅದಾಗಿತ್ತು…ಅಲ್ಲಿರುವ ಮರಗಳ ನೆರಳಿನಲ್ಲಿ ಕುಳಿತೇ ಇದ್ದುಬಿಡುವಾ ಅನಿಸುತಿತ್ತು…ಆದರೇನು ವಾಪಾಸಾಗುವ ಅನಿವಾರ್ಯತೆ.
ಇಳಿಜಾರು ದಾರಿಯಲ್ಲಿ ಮರುಪ್ರಯಾಣ ಶುರು ಮಾಡಿದೆವು.. ಬೆಟ್ಟವೇರಿದಷ್ಟು ಕಷ್ಟವಲ್ಲದಿದ್ದರೂ ಇಳಿಯುವಾಗಲೂ ಜಾಗರೂಕತೆಯಿಂದಿರಬೇಕು…ಮುಗ್ಗರಿಸಿ ಬೀಳುವ ಅಪಾಯ…ಸಂತುಲನ ತಪ್ಪಿದರೆ ದೇವರೇಗತಿ!…ಹೋಗುವಾಗ ಕೊಂಡೊಯ್ದಿದ್ದ ಖಾಲಿಚೀಲಗಳು ಈಗ ತುಂಬಿದ್ದವು. ಒಬ್ಬೊಬ್ಬರ ಕೈಯ್ಯಲ್ಲೂ ಒಂದೊಂದು ಚೀಲ…ಇಳಿದು ಬೆಟ್ಟದ ಬುಡಕ್ಕೆ ಬಂದಾಗ ಅಲ್ಲಿಯೇ ಸ್ಥಳೀಯರ ಮನೆಯಲ್ಲಿ ಊಟ ತಯಾರಾಗಿತ್ತು. ಊಟಮಾಡಿ ಸ್ವಲ್ಪ ದಣಿವಾರಿಸಿಕೊಂಡೆವು. ಎಲ್ಲರೂ ತಂದ ಕಸದ ಚೀಲ ಒಟ್ಟುಸೇರಿಸಿದಾಗ ದೊಡ್ಡ ರಾಶಿಯೇ ಆಯಿತು. ಎಲ್ಲವನ್ನೂ ಬಸ್ಸಿನಲ್ಲಿ ಹಾಕಿಕೊಂಡು ಬಂದೆವು. ಪರ್ವತ ನಡಿಗೆ, ಪ್ರಕೃತಿ ವೀಕ್ಷಣೆಯ ಜೊತೆಗೆ ಸ್ವಚ್ಛತಾ ಅಭಿಯಾನವೂ ನಡೆಯಿತು. ಪ್ರಕೃತಿ ಮಾತೆಯ ಸಂರಕ್ಷಣೆಗೆ ನಮ್ಮಿಂದಾದ ಕೆಲಸಮಾಡಿದಕ್ಕೆ ಹೆಮ್ಮೆಯಾಯಿತು.
-ನಾಗರಾಜ ಅಡಿಗ, .(naga_adigak@yahoo.com)
ಫೋಟೋ- ಶ್ರೀನಿವಾಸ ಪಂಚಮುಖಿ,
Facebook ಕಾಮೆಂಟ್ಸ್