ನಿಮ್ಮ ಹೆಸರು….
ಲತಾ …
ಅಧಿಕಾರಿಯ ಪ್ರಶ್ನೆಗೆ ಉತ್ತರಿಸಿದರು ಲತಾ…
ಅಧಿಕಾರಿ ಕೈಯಲ್ಲಿರುವ ಕಾಗದದ ಹಾಳೆ ಮೇಲೆ ಕಣ್ಣಾಡಿಸಿ ..
ಏನಮ್ಮ ನಿಮ್ಮ ಅರ್ಜಿ ಭರ್ತಿಮಾಡಲೆ ಇಲ್ಲ.
ಬಹಳಷ್ಟು ಕಡೆ ಏನನ್ನೂ ಬರೆಯಲೇ ಇಲ್ಲ…
ಲತಾ ಮನಸ್ಸಿನಲ್ಲೇ ಅಂದುಕೊಂಡಳು, ಇದ್ದರೆ ತಾನೇ ಬರೆಯುವುದು.
ಹುಟ್ಟಿದ ದಿನಾಂಕ …
….. ಯಾರು ಅತ್ತರೋ ಇಲ್ಲ ನಕ್ಕರೋ ಗೊತ್ತಿಲ್ಲ ನಾನು ಹುಟ್ಟಿದ್ದೆ ….
ತಂದೆ ತಾಯಿ ಹೆಸರು….
…… ಇದ್ದರು ಇಲ್ಲದಂತಿದ್ದ ಆ ಎರಡು ಬಡಜೀವಗಳು …..
ಮದುವೆ ಆಗಿದೆಯ……..ಮಕ್ಕಳೆಸ್ಟು
ಆಗಿದೆ ಆದರೆ ಆಗಲಿಲ್ಲ….
ಏನಮ್ಮ ಇದು ಒಗಟು, ಆಗಿದೆ ಅನ್ನುತ್ತಿಯ ಇಲ್ಲ ಅನ್ನುತ್ತಿಯ….
ಆದರೂ ಆಗದಂತೆ….
ಆತನನ್ನು ಮನುಷ್ಯ ಅನ್ನುವ ಬದಲು ಮನುಷ್ಯರೂಪದ ಹುಳು ಎನ್ನಬಹುದು…
ಪಾಪ ಅವರಿಗೇನು ಗೊತ್ತು ಮದುವೆ ಆದರೂ ನಾನು ಇನ್ನು ಕನ್ಯೆಯಾಗಿದ್ದೇನೆ ಅನ್ನುವುದು.
ಮತ್ತೆ ಮಕ್ಕಳೆಲ್ಲಿಂದ…..
ಗಂಡನ ಹೆಸರು….
ಅದು ಏನೋ ಗೋಪಾಲ ಅಂತೆ…
ವಿಳಾಸ ಹೇಳಮ್ಮ…
ಇದ್ದರೆ ತಾನೇ ಹೇಳುವುದು….ಮುರಿದು ಬಿದ್ದ ಗೋಡೆಗೆ
ಮಂಗಳೂರು ಹಂಚಿನ ಮಾಡು. ಅದೂ ಎಂದೋ ಹಾಕಿದ್ದು
ಸರಿ ನಿನ್ನ ತಂದೆ ತಾಯಿ ಒಡಹುಟ್ಟಿದವರು….
ಹುಟ್ಟಿಸಿದವರು ಬಡತನದ ಬೇಗೆ ತಾಳದೆ ದೇವರಿಗೆ ಪ್ರಿಯರಾದರು.
ಅಮ್ಮ ಕಷ್ಟ ತಾಳದೆ ನೊಂದು ಎಲ್ಲರನ್ನು ಬಿಟ್ಟು ಹೋದಳು…
ಒಡಹುಟ್ಟಿದವರು ಇಬ್ಬರು ಸಹೋದರಿಯರು ಒಬ್ಬ ತಮ್ಮ.
ದೊಡ್ಡವಳು ಮದುವೆ ಆಗಿ ಕೆಲ ತಿಂಗಳಲ್ಲೇ TB ಖಾಯಿಲೆಗೆ ಬಲಿಯಾದಳು.
ತಂಗಿ ತನ್ನ ದಾರಿ ಬೇರೆ ಎಂದು ಯಾರೊಡನೆಯೊ ಹೋದಳು….
ಅವಳು ಏನಾದಳೋ ಗೊತ್ತಿಲ್ಲ….ಇದ್ದಳೋ ಇಲ್ಲ ಪರಮಾತ್ಮನಿಗೆ ಪ್ರಿಯಳಾದಳೋ….
ತಮ್ಮ ಯಾರೋ ಕೆಲಸ ಕೊಡುತ್ತೇನೆ ಅಂದರು ಹೋದ ಮತ್ತೆ ಇತ್ತ ಸುಳಿಯಲಿಲ್ಲ…..
ಬದುಕಿದ್ದರೆ ಸಂತೋಷದಲ್ಲಿರಲಿ …
ಸರಿ ಅರ್ಜಿ ಮಂಜೂರ್ ಮಾಡುವ ಮೊದಲು ನಿನ್ನ ವಿಚಾರ ಪೂರಾ ಹೇಳು….
ಕೆಲಸಮಯ ಮೌನ … ಬಳಿಕ ….
.
ಲತಾ ತನ್ನ ಹುಟ್ಟು ಬಾಲ್ಯ ಅಪ್ಪ ಅಮ್ಮ ಒಡಹುಟ್ಟಿದವರು ಎಲ್ಲ ಹೇಳಿ…
ನನ್ನ ಅಕ್ಕ ಮದುವೆ ಆಗಿ ಕೆಲ ತಿಂಗಳಲ್ಲೇ ತೀರಿಹೋದಳು…
ಅವಳ ಗಂಡ ಅನಿಸಿಕೊಂಡವ ಕುಡುಕ…..
ನನ್ನನ್ನು ಎರಡನೇ ಮದುವೆ ಆಗಬಯಸಿದ..
ಅಕ್ಕನ ಸ್ಥಿತಿ ಕಂಡಿದ್ದ ನನಗೆ ಇದು ಬೇಡವಾಗಿತ್ತು. ಒಪ್ಪಲಿಲ್ಲ..
ವರುಷ ಕಳೆಯಿತು… .
ಪ್ರೀತಿಸಿ ಮದುವೆ ಆಗಲು ನಾನು ರೂಪವಂತೆ ಅಲ್ಲ. ಹಣವಂತೆಯೂ ಅಲ್ಲ
ನನಗೆ ನೋಡಿ ಮದುವೆ ಮಾಡಿಸುವ ದಿಕ್ಕಿಲ್ಲ …
ಹಾಗಿರುವಾಗ ಒಂದು ದಿನ ನಾನು ಕೆಲಸಕ್ಕೆ ಹೋಗುತ್ತಿದ್ದ ಮನೆಯವರು….
ಎಷ್ಟು ದಿನಾಂತ ಹೀಗೆ ಇರ್ತೀಯ ,ಮದುವೆ ಮಾಡಿಕೊ ,
ಏನೋ ನಾನೇ ಬೇಡ ಎನ್ನುವವಳಂತೆ….
ನನ್ನ ಯಾರು ಆಗುತ್ತಾರೆ ,ರೂಪವ, ಹಣವಾ, ದಿಕ್ಕಿಲ್ಲದವಳನ್ನು….
ಏನು ಲತಾ ಒಳ್ಳೆಯ ಶ್ರೀಮಂತ ಹುಡುಗ ಒಬ್ಬ ಇದ್ದಾನೆ ಮದುವೆ ಆಗುತ್ತಿಯಾ.
ಆತನಿಗೆ ಬುದ್ದಿ ಸ್ವಲ್ಪ ಕಡಿಮೆ ಆದರೆ ಹುಚ್ಚನಲ್ಲ….
ಮನೆ ಮಠ ಆಸ್ತಿ ಪಾಸ್ತಿ ಅಣ್ಣ ತಮ್ಮಂದಿರು. ಅಕ್ಕತಂಗಿಯರು ಎಲ್ಲ ಇದ್ದಾರೆ …
ನನಗೆ ಆಗಲೇ ೩೦ ದಾಟಿತ್ತು..
ಎಲ್ಲರ ಮದುವೆ ನೋಡಿ ನನಗೂ ಆಗಬೇಕೆಂಬ ಆಸೆ ಇತ್ತು.
ಅವರೇ ಎಲ್ಲಾ ಖರ್ಚು ಹಾಕಿ ನಿನ್ನ ಮದುವೆ ಮಾಡಿಸಿಕೊಳ್ಳುತ್ತಾರೆ….
ನನ್ನ ಹಣೆ ಬರಹವೋ ಇಲ್ಲ ಕರ್ಮ ಫ಼ಲವೊ ಗೊತ್ತಿಲ್ಲ ಒಪ್ಪಿದೆ…
ಮದುವೆ ಆಯಿತು. ಗಂಡನ ಮನೆಗೆ ಹೋದೆ..
ಆತನ ಹೆಸರು ಗೋಪಾಲ. ದೊಡ್ದ ಸಂಸಾರ
ಮನೆ ದೊಡ್ಡದಾಗಿತ್ತು. ಮನೆಯವರ ಮನಸು ದೊಡ್ಡದಲ್ಲ ಅಂತ ತಿಳಿಯದೆ ಹೋದೆ
.ಅಲ್ಲಿ ಸಂಬಳವಿಲ್ಲದ ಜೀತದಾಳಾದೆ ….
ಆತನನ್ನು ಗಂಡ ಅನ್ನುವ ಬದಲು .. ಮನುಷ್ಯರಂತೆ ತಿಂದು ನಡೆದಾಡುವ ಪ್ರಾಣಿ ಇಲ್ಲ ತರಕಾರಿ ಅನ್ನಬಹುದು….
ಆತನ ಜಗತ್ತು… ಬರೀ ಒಂದೆರಡು ಮಾತು
ಆಚೆ ಈಚೆ ಸುತ್ತಾಟ, ಸಮಯಕ್ಕೆ ಸರಿಯಾಗಿ ಊಟ ನಿದ್ರೆ.
ಹೆಣ್ಣು ಗಂಡು ಅನ್ನುವ ಭೇದವೇ ಗೊತ್ತಿಲ್ಲದ ಪಶು ಜಾತಿಯ ಪ್ರಾಣಿ…
ಇದೆಲ್ಲ ತಾಳದೆ ನಾನು ಹೇಗೆ ಹೋದೇನೋ ಹಾಗೆ ತಿರುಗಿ ಬಂದೆ.
ಮದುವೆಯಾದರೂ ಕುಮಾರಿ ಲತಾ ಆಗಿ …
ಯಾರಿಗೂ ಬೇಡವಾಗಿದ್ದೆ. ವರುಷಗಳೇ ಕಳೆದವು..
ಗಂಡ ಮಕ್ಕಳು ಅನ್ನುವ ಆಸೆ ಯಾವತ್ತೋ ಒಣಗಿಹೋಗಿತ್ತು
ಗೋಪಾಲನ ಅಮ್ಮ ಅಪ್ಪ ಅಣ್ಣ ತೀರಿಹೋದರು ಎಂದು ಕೇಳಿಪಟ್ಟೆ .
ನನ್ನನ್ನು ಯಾರೂ ಕರೆಯಲಿಲ್ಲ ನಾನು ಅಲ್ಲಿಗೆ ಹೋಗಲಿಲ್ಲ.
ಗೋಪಾಲನಿಗೆ ತಿಂದರೆ ಸಾಕು ಮತ್ತೇನು ಗೊತ್ತಿಲ್ಲದ ಜಂತು..
ಹೀಗಿರುವಾಗ ಗೋಪಾಲನು ತೀರಿಹೋದ ಅನ್ನುವ ಸಮಾಚಾರ ಬಂತು.
ಆತ ಕಟ್ಟಿದ ಮಾಂಗಲ್ಯ ತೆಗೆದು ಹಾಕಿದೆ. ತಲೆಗೆ ಸ್ನಾನ ಮಾಡಿ ಮಡಿಮಾಡಿಕೊಂಡೆ ..
ಆಗ ನನಗೆ ೫೫, ವರುಷ ಹೊಟ್ಟೆ ಬಟ್ಟೆಗಿಲ್ಲದೆ ಜೀವಂತ ಶವವಾಗಿದ್ದೆ..
ವರುಷಗಳು ಕಳೆದವು…..ಒಂದು ದಿನ
ಲತಾ…. ನಿನ್ನನ್ನು ಯಾರೋ ನಿನ್ನ ಗಂಡನ ಊರಿನವರು ಕರೆಯುತ್ತಿದ್ದಾರೆ ಅಂದಾಗ ಹೊರ ಬಂದೆ.
ನೋಡಿದರೆ ಅದು ನನ್ನ ಗಂಡನ ಸಣ್ಣ ತಮ್ಮ.ಪ್ರವೀಣ.
ಇದ್ದವರಲ್ಲಿ ಆತ ಒಬ್ಬನೇ ಮನುಷ್ಯತ್ವ ಇದ್ದವ. ನನ್ನ ಮದುವೆಯ ಸಮಯ ಆತನಿಗೆ ೧೨ ವರ್ಷ ಆಗಿದ್ದಿರಬಹುದು.
ನನ್ನನು ನೋಡಿದವನೇ …
ಅತ್ತಿಗೆ ನೀವು ಕೂಡಲೆ ಊರಿಗೆ ಬನ್ನಿ ಆಸ್ತಿ ಪಾಲಾಗುತ್ತಿದೆ…
ಎಲ್ಲ ಬಿಟ್ಟ ನನಗೆ ಇದು ಯಾವುದೂ ಬೇಡವಾಗಿತ್ತು.
ಆದರೆ ಆತ ಪಟ್ಟುಬಿಡದೆ ಇರುವಾಗ ….
ಹತ್ತಿರದ ಮನೆಯ ಕುಸುಮಮ್ಮನನ್ನು ಕೇಳಿದೆ..
ಅವರೋ ಇದು ಒಳ್ಳೆಯ ವಿಚಾರ ಹೋಗಿಬಾ ..
ಬೇಕಿದ್ದರೆ ನಾನು ನಿನ್ನ ಜೊತೆಗೆ ಬರುತ್ತೇನೆ ಅಂದಾಗ . ಅದು ಸರಿ ಎನಿಸಿ ಅವರೊಡನೆ ಹೋದೆ…
ಅಲ್ಲಿ ನಾನು ಹೋಗುವ ಮೊದಲೇ ಎಲ್ಲ ವಿಚಾರ ವಿನಿಮಯ ಮುಗಿದು ..
ಇದು ನಿನ್ನ ಪಾಲಿನದ್ದು — ಗೋಪಾಲನ ಪಾಲಿನದ್ದು …ನೀನು ಬಿಟ್ಟು ಹೋದರೂ ಕೊಡುತ್ತಿದ್ದೇವೆ .
ಎಂದು ಒಂದು ಲಕೊಟೆಯನ್ನು ಕೈಗಿತ್ತರು…
ನಾನು ನಿಂತಲ್ಲಿಯೇ ನಿಂತಿದ್ದೆ ಆದರೆ…
ಕುಸುಮಮ್ಮ ಲಕೊಟೆಯನ್ನು ತೆಗೆದುಕೊಂಡು ,ಮನೆಯಲ್ಲಿ ಕೊಡುತ್ತೇನೆ…
ಬಾ ಇನ್ನೇನು ಕೆಲಸ ಇಲ್ಲಿ ನಮಗೆ ಎಂದು ನನ್ನೊಡನೆ ಹೊರಟೇಬಿಟ್ಟರು.
ಕರೆಯಲು ಬಂದ ಗೋಪಾಲನ ತಮ್ಮ ಒಂದು ತೃಪ್ತಿಯ ನಗೆ ಬೀರಿ ಮೆಲ್ಲಗೆ …
ಕಿವಿಯಲ್ಲಿ ಅತ್ತಿಗೆ ಅದರಲ್ಲಿ ೩ ಇದೆ. ಜಾಗ್ರತೆಯಾಗಿ ಉಪಯೋಗಿಸಿ…..
ನನ್ನಿಂದ ಆದದ್ದನ್ನು ಮಾಡಿದ್ದೇನೆ ಅಂದ…
ಮನೆಸೇರಿದಾಗ ಕುಸುಮಮ್ಮ ಲಕೊಟೆಕೊಡುತ್ತ ಇದರಲ್ಲಿ ೨ ಇದೆ .
ಜಾಗ್ರತೆ ಇಟ್ಟುಕೋ ಅಂದರು…ನನಗೆ ನನ್ನನ್ನೇ ನಂಬಲಾಗಲಿಲ್ಲ.
ಇಲ್ಲಿ ಯಾರನ್ನು ನಂಬುವುದು? , ಯಾರು ಮೋಸಮಾಡಿದರು?.ಎಲ್ಲಿ?,
ಹೇಗೆ ಕೇಳಲಿ …ಯಾರನ್ನ ಕೇಳಲಿ….
ಪಾಪಿ ಹೋದಲ್ಲಿ ಮೊಣಕಾಲು ನೀರು ಅಂದಂತೆ ಆಯಿತು.
ದೇವರು ಕೊಟ್ಟರು ಪೂಜಾರಿ ಬಿಡ…
ಇದು ಬಹುಪಾಲು ಕುಸುಮಮ್ಮನ ಕೆಲಸ ಅನ್ನುತಿತ್ತು ಮನಸು.
ಕೇಳುವಂತಿಲ್ಲ. ಗೋಪಾಲನ ತಮ್ಮ ಪ್ರವೀಣ ಅಂತಹವನಲ್ಲ…
ಈಗ ನನಗೆ ೬೫ ವರುಷ ಕೊಟ್ಟ ದುಡ್ಡು ಇಸ್ಟರವರೆಗೆ ಹೇಗೋ ಬಂತು.
ಈಗ ಅನ್ನಕ್ಕೂ ಗತಿ ಇಲ್ಲ. ಅದಕ್ಕೆ …..ತಾವು ಮನಸು ಮಾಡಬೇಕು….
ಸರಕಾರ ವೃದ್ದಾಪ್ಯ ವೇತನ ಕೊಡುತ್ತಾರೆ ಅಂದರು ಹಾಗೆ ಅರ್ಜಿ ಕೊಟ್ಟಿದ್ದೇನೆ…
ಎಲ್ಲ ಕೇಳುತ್ತಿದ್ದ ಅಧಿಕಾರಿಯ ಕಣ್ಣಲ್ಲಿ ಒಂದೆರಡು ಹನಿ ನೀರನ್ನು ಕಂಡೆ.
ನನ್ನ ಆಸೆ ಆಕಾಂಕ್ಷೆ ಎಲ್ಲ ಮೂಕನ ಕನಸಿನಂತೆ.
ಅದು ಆತನಲ್ಲೇ ಹುಟ್ಟಿ, ಬೆಳೆದು ಬಾಡಿ ಒಂದು ದಿನ ಸತ್ತು ಹೋಗುವಂತೆ.
ಅಧಿಕಾರಿಯ ಭರವಸೆ ನನ್ನ ಹೊಟ್ಟೆಗೆ ಮಜ್ಜಿಗೆ ಸುರಿದಂತಿತ್ತು…
-ಕಮಲಾತನಯ.
laxmikantha@gmail.com
Facebook ಕಾಮೆಂಟ್ಸ್