X

ಬೌದ್ಧಿಕ ಭಯೋತ್ಪಾದನೆ ಎಂಬ ವ್ಯವಸ್ಥಿತ ಸಂಚು

New Delhi: Students affiliated to the Akhil Bharatiya Vidyarthi Parishad (ABVP) protest outside the office of the vice chancellor of Jawaharlal Nehru University (JNU) in New Delhi on Wednesday to vent their ire over a programme describing the execution of 2001 Parliament attack convict Afzal Guru as 'judicial killing'. PTI Photo (PTI2_10_2016_000237A)

“ಭಾರತ್ ಕಿ ಬರಬಾದಿ ತಕ್ ಜಂಗ್ ರಹೇಗಿ”….”ಅಫ್ಜಲ್ ತುಮ್ ಹಮಾರೆ ಅರಮಾನೊಕೊ ಮಂಜಿಲ್ ತಕ್ ಪೋಹಚಾಯೆಂಗೆ”….ಈ ಮೇಲಿನ ಸಾಲುಗಳ ಅರ್ಥ ಬಹುಶಃ ನಿಮಗೆಲ್ಲ ತಿಳಿದಿರುತ್ತೆ. ಇದು ಜವಹಾರ್ಲಾಲ್ ನೆಹರು ವಿಶ್ವವಿದ್ಯಾಲಯದ ಸೊ ಕಾಲ್ಡ್ ವಿದ್ಯಾರ್ಥಿಗಳ ಬಾಯಿಂದ ಬಂದ ನುಡಿ ಮುತ್ತುಗಳು. ಒಂದು ದೇಶದ ಪ್ರಜೆಯಾಗಿ ಅದೇ ದೇಶದ ಬಗ್ಗೆ, ದೇಶದ ಸಂವಿಧಾನದ ಬಗ್ಗೆ, ಬದುಕಲು ಜಾಗ ನೀಡಿ ಸಲಹುತ್ತಿರುವ ಅದೇ ದೇಶದ ಅಪ್ರತಿಮ ಸಂಸ್ಕೃತಿಯ ಬಗ್ಗೆ, ಸಾರ್ವಕಾಲಿಕ ದೇಗುಲ ನ್ಯಾಯಾಲಯದ ಬಗ್ಗೆ ಕೀಳಾಗಿ ಘೋಷಣೆ ಕೂಗುವುದನ್ನೆ ಅಭಿವ್ಯಕ್ತಿ ಸ್ವಾತಂತ್ರ್ಯ ಅಂದುಕೊಂಡು ಹಾರಾಡುತ್ತಿರುವ ನಮ್ಮ ದೇಶದ ಯುವ ನಾ(ಲಾ)ಯಕರುಗಳಿಗೆ ಅದೇನೆನ್ನಬೇಕೋ ತಿಳಿಯುತ್ತಿಲ್ಲ. ಹೌದು ಭಾರತ ಬದಲಾಗಿದೆ…ಯಾವ್ಯಾವ ದೃಷ್ಟಿಯಿಂದ ಬದಲಾಗಿದೆ? ಒಂದೆಡೆ ಭಾರತವನ್ನು ವಿಶ್ವಗುರು ಮಾಡುತ್ತೇವೆ ಎಂದು ಹಗಲಿರುಳು ದುಡಿಯುತ್ತಿರುವ ರಾಷ್ಟ್ರೀಯವಾದಿ ಯುವಕರುಗಳು, ಇನ್ನೊಂದೆಡೆ ಸರಕಾರವನ್ನು ಒಂದು ಸಿದ್ಧಾ೦ತಕ್ಕೆ ಕಟ್ಟಿಹಾಕಿ ಆ ಸರ್ಕಾರ ಇಟ್ಟ ಪ್ರತೀ ಹೆಜ್ಜೆಯನ್ನು ವಿರೋಧಿಸುವ ಕೆಲಸ ಮಾಡುತ್ತಾ ವಿಶ್ವದ ದೃಷ್ಟಿಯಲ್ಲಿ ಭಾರತವೊಂದು ಅಸಹಿಷ್ಣು ರಾಷ್ಟ್ರ ಎಂದು ಬಿಂಬಿಸಲು ಹಗಲಿರುಳು ಶ್ರಮಿಸುತ್ತಿರುವ ಸೊ ಕಾಲ್ಡ್ ಪ್ರಗತಿ ಜೀವಿ ಯುವಕರುಗಳು. 1969 ರಲ್ಲಿ ದೇಶದ ಯುವಕರುಗಳಿಗೆ ಆಶಾ ಕಿರಣವಾಗಲಿ ಎಂದು ಸ್ಥಾಪಿತಗೊಂಡ ಜವಾಹರ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ಕೇವಲ ಆ ನೆಹರು ಒಬ್ಬರೇ ಸಂತೋಷ ಪಡಬೇಕು. ಅನ್ನ ತಿಂದ ದೇಶಕ್ಕೆ ಧಿಕ್ಕಾರ ಕೂಗುತ್ತಿರುವ ವಿದ್ಯಾರ್ಥಿಗಳನ್ನು ನೋಡಿದರೆ ಅಲ್ಲಿ ಓದುತ್ತಿರುವವರಿಗೆ ಬೇರೆ ಕೆಲಸವೇ ಇಲ್ಲವೇನೋ ಎನ್ನಿಸುತ್ತದೆ. ಕೇವಲ ಪ್ರತಿಭಟನೆ,ರಾಜಕೀಯ,ಮೀಸಲಾತಿ ಎಂದು ಅಮೂಲ್ಯ ಸಮಯವನ್ನು ಹಾಳುಮಾಡಿಕೊಳ್ಳುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ಸಿದ್ಧಾ೦ತವನ್ನು ವಿರೋಧಿಸುವ ಭರದಲ್ಲಿ ದೇಶದ ಮೌಲ್ಯವನ್ನೇ ಪ್ರಶ್ನಿಸುತ್ತಿರುವ ನೀವುಗಳೆಲ್ಲ ಅದ್ಯಾವ ಹೋರಾಟಗಾರರೋ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ದೇಶ ಒಂದು ಪ್ರಮುಖ ಘಟ್ಟಕ್ಕೆ ಬಂದು ನಿಂತಿದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ..ನೆನಪಿಡಿ ಈ ದೇಶ ವಿರೋಧಿ ಚಟುವಟಿಕೆಯನ್ನು ಮೂಲವನ್ನಾಗಿರಿಸಿಕೊಂಡು ಹಾರಾಡುತ್ತಿರುವ ಇವರೆಲ್ಲರನ್ನೂ ಬೌದ್ಧಿಕ ಭಯೋತ್ಪಾದಕರು ಎಂದರೆ ಯಾವುದೇ ತಪ್ಪಿಲ್ಲ.

ಓಮರ್ ಖಾಲಿದ್ ಎಂಬ ಯುವಕನೊಬ್ಬನನ್ನು ನೀವು ಎರಡು ಮೂರು ದಿನದಿಂದ ರಾಷ್ಟ್ರೀಯ ವಾಹಿನಿಗಳ ಡಿಬೇಟ್’ಗಳಲ್ಲಿ ನೋಡಿರುತ್ತೀರಿ. ನಾ ಪ್ರೀತಿಸುವ, ನಾನು ಗೌರವಿಸುವ ನನ್ನ ಭಾರತದ ಬಗ್ಗೆ, ಭಾರತದ ನ್ಯಾಯಾಲಯದ ಬಗ್ಗೆ ಮನಸ್ಸಿಗೆ ಬಂದಂತೆ ಮಾತಾಡುತ್ತಾ ಅಪ್ಜಲ್ ಗುರು ಎಂಬ ದೇಶದ್ರೋಹಿ ಭಯೋತ್ಪಾದಕನನ್ನು ದೇವರಂತೆ ಬಿಂಬಿಸುತ್ತಿರುವ ಈತನನ್ನು ನೋಡಿದರೆ ಮೈ ಉರಿಯುತ್ತಿದೆ. ಸಂಸತ್ತನ್ನು ದೇಗುಲ ಎಂದು ನಮ್ಮ ಸಂವಿಧಾನದಲ್ಲಿ ಹೇಳಲಾಗಿದೆ ಆ ದೇಗುಲವನ್ನು ಭಸ್ಮ ಮಾಡಲು ಹೋರಾಟ ಅಪ್ಜಲ್ ಗುರುವನ್ನು “ನೀನು ನಮ್ಮ ಕನಸುಗಳನ್ನು ಸಾಕಾರಗೊಳಿಸುವ ಕಡೆ ಹೆಜ್ಜೆ ಇಟ್ಟ ನಾಯಕ” ಎಂದು ದೇಶದ ರಾಜಧಾನಿಯಲ್ಲಿ ಘೋಷಣೆ ಕೂಗುತ್ತಾರೆ ಎಂದರೆ ನಮ್ಮ ದೇಶದ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ? ಯಾವ ದೇಶ ನಮ್ಮ ಅದೆಷ್ಟೋ ಸೈನಿಕರನ್ನು ಮೋಸದಿಂದ ಕ್ರೂರವಾಗಿ ಕೊಂದು ಹಾಕಿದೆಯೋ ಅದೇ ದೇಶಕ್ಕೆ “ಜಿಂದಾಬಾದ್”ಎನ್ನುವ ದೇಶದ್ರೋಹಿ ಯುವಕರಿಂದ ನಮ್ಮ ದೇಶಕ್ಕೆ ಯಾವ ಉಪಯೋಗವಾಗುತ್ತದೆ? ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಿ ಎಂದು ದೆಹಲಿ ಎಂಬ ರಾಜಧಾನಿಯ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಘೋಷಣೆ ಕೂಗುವ ಧೈರ್ಯ ಈ ನಮಕ್ ಹರಾಮ್’ಗಳಿಗೆ ಹೇಗೆ ಬಂತು? ಹೌದು ಇದು ವಿಶ್ವದಲ್ಲಿ ಭಾರತ ಎಂಬ ಭಾರತದಲ್ಲಿ ಮಾತ್ರ ಸಾಧ್ಯ. ತನಗೆ ಆಶ್ರಯ ನೀಡಿದ ರಾಷ್ಟ್ರವನ್ನು ಹಿಗ್ಗಾ ಮುಗ್ಗಾ ಅವಮಾನಿಸುವ ಧೈರ್ಯ ಅಮೆರಿಕಾದ ನಾಗರಿಕನಿಗೆ ಇದೆಯೇ? ಅಥವಾ ಚೀನಾದ ಬಡ ನಾಗರಿಕನಿಗೆ ಇದೆಯೇ? ಇಲ್ಲ ಇದು ನನ್ನ ಭಾರತದಲ್ಲಿ ಮಾತ್ರ ಸಾಧ್ಯ. ನಮ್ಮ ಕರ್ನಾಟಕದ ಒಂದು ಜಿಲ್ಲೆಯಷ್ಟು ದೊಡ್ಡದಿರುವ ಇಸ್ರೇಲ್ ಎಂಬ ಚಿಕ್ಕ ರಾಷ್ಟ್ರದಲ್ಲಿ ಯಾರಾದ್ರೂ ಹೀಗೆ ಮಾತಾಡಿದರೆ ಏನಾಗಬಹುದು? ಊಹಿಸಿಕೊಳ್ಳುವುದೂ ಅಸಾಧ್ಯದ ಮಾತು. ಇದು ವಿಶ್ವದ ಸೊ ಕಾಲ್ಡ್ ಸರ್ವಧರ್ಮ ರಾಷ್ಟ್ರ ಭಾರತದಲ್ಲಿ ಮಾತ್ರ ಸಾಧ್ಯ. ಇದೇ ಓಮರ್ ಖಲೀದ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಥವಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಅದರಲ್ಲಿ ಯಾವುದೇ ಆಶ್ಚರ್ಯವೇ ಇಲ್ಲ. ದೇಶವನ್ನು ಬೈದಷ್ಟು ಆ ಪಾರ್ಟಿಗಳಲ್ಲಿ ಉನ್ನತ ಸ್ಥಾನ ಪಡೆಯಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ನಡೆಯುತ್ತಿರುವ ದೇಶದ್ರೋಹಿ ಕೆಲಸ ಇದು ಎಂದು ಧೈರ್ಯವಾಗಿ ನಾನು ಹೇಳಬಲ್ಲೆ. ನಮ್ಮ ದೇಶದ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚುತ್ತಿರುವ ರಾಜಕೀಯ ಸಿದ್ಧಾ೦ತಗಳ ಪ್ರೇರಿತ ಸಂಘಟನೆಗಳನ್ನು ಸಂಪೂರ್ಣವಾಗಿ ನಿಷೇಧಿಸುವವರೆಗೂ ಈ ತರದ ಹೀನ ಕೃತ್ಯಗಳು ನಡೆಯುತ್ತಲೇ ಇರುತ್ತದೆ ಎಂದು ನನಗನ್ನಿಸುತ್ತಿದೆ. ಓದಲು ಬಂದಿರುವ ವಿದ್ಯಾರ್ಥಿಗೆ ಏಕಾ ಏಕೀ ನಾಯಕನಾಗುವ ಹಂಬಲಗಳು ಬಂದಾಗ ಅವನಲ್ಲಿ ವಿಕೃತ ಸಿದ್ಧಾ೦ತಗಳನ್ನು ತುಂಬುವ ಕೆಲಸವನ್ನು ಕೆಲವು ವಿದ್ಯಾರ್ಥಿ ಸಂಘಟನೆಗಳು ಮಾಡುತ್ತಿವೆ. ಅದಕ್ಕೆ ತಾಜಾ ಉದಾಹರಣೆ ದಲಿತ ಹಣೆಪಟ್ಟಿಯನ್ನು ಕಟ್ಟಿಸಿಕೊಂಡು ಅದೆಷ್ಟೋ ಜನರ ಫೇಸ್ಬುಕ್ನ ಪ್ರೊಫೈಲ್ ಫೋಟೋ ಆಗಿಹೋದ “ದಲಿತ ನಾಯಕ” ರೋಹಿತ್ ವೆಮೂಲನೇ ಸಾಕ್ಷಿ.

ಇದೆ ಓಮರ್ ಖಲೀದ್’ನ ಡ್ರೀಮ್ ಲ್ಯಾಂಡ್ ಪಾಕಿಸ್ತಾನ ಅದೆಷ್ಟು ಕುತಂತ್ರಿಯಾಗಿ ನಮ್ಮೊಡನೆ ವರ್ತಿಸಿದೆ ಎಂದು ಯೋಚಿಸಿದರೂ ನಮಗೆ ರಕ್ತ ಕುದಿಯುತ್ತದೆ. ಈ ಮಹಾನುಭಾವನಿಗೆ ತಿನ್ನಲು ಉಣ್ಣಲು ಭಾರತೀಯರ ಬೆವರಿನಿಂದ ಗಳಿಸಿದ ಹಣವೇ ಬೇಕು. ಆದರೆ ಭಾರತವನ್ನು ಛಿದ್ರಗೊಳಿಸುವವರೆಗೂ ವಿರಮಿಸುವುದಿಲ್ಲ ಎಂಬ ಉದ್ಘೋಷವನ್ನು ಮೊಳಗಿಸುವ ಇವನನ್ನೂ ದೇಶದ್ರೋಹಿಗಳ ಪಟ್ಟಿಗೆ ಸೇರಿಸಿ ಜೈಲ್‌’ಗೆ ಅಟ್ಟಿದರೆ ಯಾವುದೇ ತೊಂದರೆ ಇಲ್ಲ.

ಒಂದು ಕಡೆ ಲ್ಯಾನ್ಸ್ ನಾಯಕ್ ಹನುಮಂತಪ್ಪನನ್ನು ಕಳೆದುಕೊಂಡಿದ್ದಕ್ಕೆ ನೊಂದು ಕೂತಿದ್ದರೆ ನಮ್ಮೊಳಗಿನ ಯುವಕರ ಹೀನ ಕೃತ್ಯವನ್ನು ನೋಡಿ ಸಹಿಸಿಕೊಳ್ಳಲೂ ಆಗದ ಪರಿಸ್ಥಿತಿಗೆ ಮನಸ್ಸು ದೂಡಲ್ಪಟ್ಟಿತ್ತು. ಅಲ್ಲಿ ಒಂದೆಡೆ ತುಪಾಕಿಯನ್ನು ಎತ್ತಿ ಹಿಡಿದು ಭಾರತೀಯರನ್ನು ಕೊಲ್ಲಲು ಹವಣಿಸುತ್ತಿರುವ ಕ್ರೂರಿ ಪಾಕಿಗಳು. ಇನ್ನೊಂದೆಡೆ ಸಿಯಾಚಿನ್ ಅನ್ನು ಪಡೆದೇ ಪಡೆಯುತ್ತೇವೆ ಎಂದು ಸದ್ದಿಲ್ಲದೆ ಬೊಬ್ಬಿರಿಯುವ ಹೇಡಿ ಚೀನೀಯರು..ಮತ್ತೊಂದು ಕಡೆ ಇವರಿಬ್ಬರಿಗೂ ಸಹಾಯ ಮಾಡಲು ತಯಾರಾದಂತೆ ಕಾಣುವ ಪ್ರಕೃತಿ…..ವೈಯಕ್ತಿಕ ಆಸೆಯೇ ಇಲ್ಲದೇ ಮೈನಸ್ ೪೬ ಡಿಗ್ರಿಯಲ್ಲಿ ಕೆಚ್ಚೆದೆಯಿಂದ ದೇಶ ಕಾಯುವ ಸೈನಿಕರಿಗೆ ಮತ್ಯಾರು ಸಾಟಿ?….. ೧೦ ಡಿಗ್ರಿಯಷ್ಟು ಚಳಿಯನ್ನು ತಡೆಯಾಲಗದೇ ವಟಗುಟ್ಟುತ್ತ ಬದುಕುವ ನಾವುಗಳು ಸೈನಿಕರು ರಕ್ಷಿಸುವ ಈ ದೇಶದಲ್ಲಿ ಮೀಸಲಾತಿಗಾಗಿ ಹಾರಾಡುತ್ತೇವೆ…ಯಾವ ದೇಶದ ರಕ್ಕಸ ವರ್ತನೆಗೆ ಸಾವಿರಾರು ಜನ ಯೋಧರು ಬಲಿಯಾದರೋ ಅದೇ ದೇಶಕ್ಕೆ ಜಿಂದಾಬಾದ್ ಎನ್ನುವ ಯುವ ನಾ(ಲಾ)ಯಕರುಗಳಿಗೆ ಏನನ್ನೋಣ.? ಅತ್ಯುನ್ನತ ನ್ಯಾಯಾಲಯವೊಂದು ದೇಶದ ಸಾಮಾನ್ಯರ ದೇಗುಲ, ಸಂಸತ್ತಿನ ಮೇಲೆ ದಾಳಿ ಮಾಡಿದವನಿಗೆ ಗಲ್ಲು ಘೋಷಿಸಿದರೆ ಅದ್ಯಾವುದೋ ಪಾಪಿ ಕ್ರಿಮಿ “ಆ ನ್ಯಾಯಾಲಯದ ತೀರ್ಪು ಸಂಘದವರು(ಆರೆಸ್ಸೆಸ್) ಅವರಿಗೆ ಬೇಕಾದ ಹಾಗೆ ಬರುವಂತೆ ಮಾಡಿದ್ದು”ಎನ್ನುತ್ತಾನೆ ಎಂದರೆ ಇನ್ನೆಷ್ಟು ಸಹಿಸಿಕೊಳ್ಳಬೇಕು ಇವರನ್ನೆಲ್ಲ. ನೀವು ಒಂದು ಸರ್ಕಾರವನ್ನು ವಿರೋಧಿಸುವ ಭರದಲ್ಲಿ ದೇಶವನ್ನು ವಿರೋಧಿಸುತ್ತಿದ್ದೀರಿ ಎನ್ನುವುದು ನಮಗೆಲ್ಲ ಗೊತ್ತು. ಆದರೆ ದೇಶ ಭಕ್ತಿ ಕೇವಲ ಒಂದು ಸಂಘಟನೆಗೆ ಅಥವಾ ಒಂದು ಸರ್ಕಾರದ ಮಂತ್ರಿಗಳಿಗೆ ಮಾತ್ರ ಸೀಮಿತವಲ್ಲ. ಮಾತೆತ್ತಿದರೆ ಆರೆಸ್ಸೆಸ್ ಅನ್ನು ವಿರೋಧಿಸುವ ನೀವುಗಳ ಕೊಡುಗೆ ಈ ರಾಷ್ಟ್ರಕ್ಕೆ ಏನು? ದೇಶದ ಸೊ ಕಾಲ್ಡ್ ಬುದ್ದಿ ಜೀವಿಗಳ ವಿಷಯಕ್ಕೆ ಬಂದರೆ, ದೇಶ ನೀಡಿದ ಪ್ರಶಸ್ತಿಗಳನ್ನು ಬೇಕಾಬಿಟ್ಟಿ ಹಿಂತಿರುಗಿಸುವಾಗ ನಿಮ್ಮನ್ನು ಓದಿದ ಅದೆಷ್ಟೋ ಜನ ಸಾಹಿತ್ಯಾಭಿಮಾನಿಗಳ ಪ್ರೀತಿ ಕಾಣಲೇ ಇಲ್ಲವಲ್ಲ ನಿಮಗೆ , ನಿಮ್ಮಿಂದ ಮತ್ತೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಈಗ ದೇಶ ವಿರೋಧಿ ಕೂಗು ಕೂಗುತ್ತಿರುವ ಈ ಯುವ ನಾ(ಲಾ)ಯಕರುಗಳು ನಿಮ್ಮ ಬೌದ್ಧಿಕ ಭಯೋತ್ಪಾದನೆಯ ಸಂತಾನದವರೇ, ಅದರಲ್ಲಿ ಅನುಮಾನವೇ ಇಲ್ಲ.

ದೇಶ ವಿರೋಧಿ ಪ್ರತಿಭಟನೆಯನ್ನು ಆಯೋಜಿಸಿದ್ದ ಖನೈಯ ಕುಮಾರ್ ಎಂಬ ಯುವಕನನ್ನು ಬಂಧಿಸಿ 24 ಗಂಟೆಯೇ ಆಗಲಿಲ್ಲ ಆಗಲೇ ಅದೆಷ್ಟೋ ಭುಜಿಗಳು ಆತನಿಗೆ ಬೆಂಬಲ ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ದೆಹಲಿಯ ದೊರೆ ಕೇಜ್ರಿವಾಲ್ ಸಾಹೇಬರು ಅದಾಗಲೇ Sedition ಆರೋಪದ ಮೇಲೆ ಕುಮಾರನನ್ನು ಬಂಧಿಸಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ನರೇಂದ್ರ ಮೋದಿಯವರ ವಿರುದ್ಧವಾಗಿ ಒಂದು ಟ್ವೀಟ್ ಕೂಡ ಮಾಡಿದ್ದಾರೆ. ಬೌದ್ಧಿಕ ಭಯೋತ್ಪಾದನೆಯ ಪಿತೃಗಳಾದ ಸೀತಾರಾಂ ಯೆಚೂರಿ, ಸಾಗರಿಕಾ ಘೋಸ್, ರಾಜದೀಪ್ ಸರ್ದೇಸಾಯಿ, ರಾಹುಲ್ ಗಾಂಧಿ ಹೀಗೆ ಅನೇಕರು ಟ್ವೀಟ್ ಮಾಡಿ ದೇಶದ್ರೋಹಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಇದೆಲ್ಲಾ ನಮ್ಮ ಭಾರತದಲ್ಲಿ ಮಾತ್ರ ಸಾಧ್ಯ.

ಒಂದೆಡೆ ತನ್ನ ಮಗಳನ್ನು ಸೈನ್ಯಕ್ಕೆ ಸೇರಿಸಿ ಈ ಪುಣ್ಯಭೂಮಿಯ ಸೇವೆಗೆ ಅನುವುಗೊಳಿಸುತ್ತೇನೆ ಎನ್ನುವ ಲಾನ್ಸ್ ನಾಯಕ್ ಹನುಮಂತಪ್ಪನವರ ಮಡದಿ.ಇನ್ನೊಂದೆಡೆ ಈ ದೇಶವನ್ನು ಹೀಯಾಳಿಸುವುದೇ ಮೂಲ ಕರ್ತವ್ಯ ಎಂದುಕೊಂಡು ಹಾರಾಡುತ್ತಿರುವ ಓಮರ್ ಖಲೀದ್’ನಂತಹ ರಾಷ್ಟ್ರದ್ರೋಹಿ ಯುವಕರುಗಳು.. ಸದಾ ಅರಚುತ್ತಾನೆ ಎಂದು ಜನ ಅರ್ನಬ್ ಗೋಸ್ವಾಮಿಯನ್ನು ಜನ ಆಡಿಕೊಳ್ಳಬಹುದು ಆದರೆ ನೇರಪ್ರಸಾರವಾಗುತ್ತಿದ್ದ ಕಾರ್ಯಕ್ರಮದಲ್ಲಿ ನೇರವಾಗಿ ಓಮರ್ ಖಲೀದ್’ಗೆ ನೀನು ಮಾವೋವಾದಿಗಳು, ನಕ್ಸಲರಿಗಿಂತ ನಮ್ಮ ದೇಶಕ್ಕೆ ಅಪಯಕಾರಿ ಎಂದು ಮುಖಕ್ಕೆ ಉಗಿದಾಗ ಅಬ್ಬಾ ಈತನಿಗಿರುವ ಧೈರ್ಯ ನಮ್ಮ ಅದೆಷ್ಟೋ ಸ್ವಯಂಘೋಷಿತ ನಾಯಕರಿಗಿಲ್ಲವಲ್ಲ ಅನ್ನಿಸಿತು.

ನಾಳೆ ಇವರೆಲ್ಲ ನಮ್ಮ ದೇಶದ ರಾಜಕಾರಣಿಗಳಾಗಬಹುದು ನಮ್ಮ ದೇಶದ ಸವಲತ್ತುಗಳನ್ನು ಉಪಯೋಗಿಸಿಕೊಂಡು ದೇಶವನ್ನೇ ಮನಸ್ಸಿಗೆ ಬಂದಂತೆ ಹೀಯಾಳಿಸುತ್ತಾ ಸುಖವಾಗಿ ಬದುಕಬಹುದು ಹಾಗಾಗಿ ಬನ್ನಿ ಹೋರಾಡೋಣ ಭಾರತ ಸುದ್ದಿಗೆ ಬಂದವರ ಸದ್ದಡಗಿಸೋಣ. ಬೌದ್ಧಿಕ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತೆಸೆಯೋಣ..

Facebook ಕಾಮೆಂಟ್ಸ್

Prasanna Hegde: ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ
Related Post