ಅವಳು ಇಳಾ ಹೆಸರಿಗೆ ತಕ್ಕಂತೆ ಆಕೆ ಶಾಂತೆ, ಸುಗುಣೆ, ಯೋಗಿನಿಯವಳು, ಸೌಂದರ್ಯದೊಡತಿಯಲ್ಲದಿದ್ದರೂ ರೂಪವತಿ, ಮನೆಯಲ್ಲಿ ಮೂರನೇಯ ಹೆಣ್ಣು ಮಗಳಾಗಿ ಉತ್ತರ ನಕ್ಷತ್ರದಲ್ಲಿ ಹುಟ್ಟಿದುದರಿಂದ ಎಲ್ಲರಿಂದಲೂ ಒಂದಷ್ಟು ತಿರಸ್ಕಾರದಿಂದಲೇ ಬೆಳೆದವಳು, ಪಿಯುಸಿಯಲ್ಲಿ ಉತ್ತಮ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ರೂ ಖುಷಿ ಪಡದ ಅಪ್ಪ, ಶಿಕ್ಷಕಿ ತರಬೇತಿ ಪರೀಕ್ಷೆಯಲ್ಲಿ ವಿಶಿಷ್ಟ ದರ್ಜೆಯಲ್ಲಿ ಪಾಸಾದಾಗ ಸ್ಥಳೀಯ ವಾರ ಪತ್ರಿಕೆ ಸುದ್ಧಿಬಿಡುಗಡೆ ಸುಳ್ಯದಲ್ಲಿ ಭಾವಚಿತ್ರ ಬಂದಾಗ ಅತ್ಯಾನಂದವಾಗಿದ್ದ ಅಮ್ಮ, ಇದ್ದು ಇಲ್ಲದಂತಿರುವ ತಮ್ಮ, ಆಗಾಗ ಕಾಡುತ್ತಿದ್ದ ಬಾವ, ಮನೆಯಲ್ಲಿ ದೈವಗಳ ಭಂಡಾರವಿದ್ದುದರಿಂದ ಶುದ್ಧಾಚರಣೆಯ ವಿಧಿ ವಿಧಾನ, ಊರಜಾತ್ರೆಯ ವೈಭವ, ತಾನು ಹಾಡಿದ ಭಜನೆಗೆ ಸಿಕ್ಕಿದ ಹೊಗಳಿಕೆ, ಕುಡಿತದಿಂದ ಸೊರಗಿ ಸೊರುತ್ತಿದ್ದ ಮನೆ, ಅವಳಿಂದಾಗಿಯೇ ಮನೆಗೆ ಬಂದ ಹೊಸ ಟಿವಿ, ಹತ್ತಿರದಲ್ಲಿದ್ದರೂ ದೂರವಿರುವ ಬಂಧುಗಳು ಹೀಗೆ ಅವಳು ಹೇಳುತ್ತಿದ್ದ ಬಾಲ ಜೀವನದ ಕಥೆ ನನ್ನ ಆಕರ್ಷಿಸಿತ್ತು. ಅವಳ ಮುಗ್ದ ಕಿಟಿ ಕಿಟಿ ನಗು, ನಗುತ್ತಲೇ ಇರುತ್ತಿದ್ದ ಮೊಗ, ಮೋಸ-ಮೋಸ ಎಂದು ಗಂಭೀರವಾಗುವ ಮಾತು, ನಿಧಾನಿಸಿ ಮಾಡುವ ಲಘು ಹಾಸ್ಯ, ಜೀವನದ ಹೊರಮೈಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಪ್ರಕಟಿಸುವ ಅವಳ ಅನುಭವದ ನುಡಿಮುತ್ತು, ಕಷ್ಟ ನಷ್ಟಗಳನ್ನು ಅರಗಿಸಿ ಪಕ್ವವಾಗಿದ್ದ ಮನ, ಹಿರಿಯರ ಮೇಲಿದ್ದ ಒಂದಷ್ಟು ಗೌರವ, ಕಿರಿಯರ ಬಗೆಗಿದ್ದ ಅದರ , ಎಲ್ಲರಿಗೂ ಇಷ್ಟವಾಗುವಂತೆ ವ್ಯವಹರಿಸುತ್ತಿದ್ದ ಚಾಕ್ಯತೆ, ನೀನು ದುಡಿಯದ್ದಿದ್ದರೂ 50Kg ಅಡಿಕೆ ಸುಲಿದಾದರೂ ನಿನ್ನನ್ನು ಸಾಕುವೆನೆಂಬ ಕೆಚ್ಚು ಅವಳಡೆಗೆ ನನ್ನನ್ನು ಸೆಳೆದದ್ದು…
ನಮ್ಮದು ಸುಮಾರು 7ವರ್ಷಗಳ ಪ್ರೀತಿ – ಸ್ನೇಹಗಳ ಮಿಶ್ರಣ ತಿಂಗಳಲ್ಲೋಮ್ಮೆ ಮಾತಾನಾಡುತ್ತಿದ್ದ ಚರವಾಣಿ ನಮ್ಮ ಇರುವಿಕೆಯನ್ನು ನೆನಪಿಸುತ್ತಿತ್ತು ಅಷ್ಟೇ, ಭಾವನೆಗಳ ಸಂದೇಶ ರವಾನೆ ಅಪರೂಪಕ್ಕೆ ನಡೆಯುತ್ತಿತ್ತು. ಬೇಟಿಗೆ ಸಾಕ್ಷಿಯೇ ಇಂದಿನವರೆಗೆ ಸಿಕ್ಕಿಲ್ಲ. ಆಕೆ ಪ್ರೌಢಶಾಲಾ ಶಿಕ್ಷಕಿಯಾದುದರಿಂದ ಅವಳ ಪಾಠದ ವೈಖರಿಯ ವರ್ಣನೆಯೇ ನಮ್ಮ ಮಾತಿನ ಹೈಲೈಟ್… ನನ್ನನ್ನು ನೆನಪಿಸುತ್ತಿದ್ದ ನನ್ನ ದೇಶ ನನ್ನ ಜನ ದೇಶಭಕ್ತಿ ಗೀತೆ, ಕನ್ನಡ ವಾ್ಯಕರಣ, ಡಾರ್ವಿನ ಸಿದ್ಧಾಂತಗಳು, ದ್ವಿಮಾನ ಪದ್ದತಿಯ ವಿಚಾರಗಳು, ಸಂಸ್ಕೃತ ಶ್ಲೋಕ, ಹಳ್ಳಿ ಮದ್ದು, ರಾಸಾಯನ ಶಾಸ್ತ್ರದ ಸೂತ್ರಗಳ ಬಗೆಗೆ ಅವಳ ವಿಸ್ತಾರ ವಿವರಣೆ ಅರ್ಥವಾಗದಿದ್ದರೂ ಮುಕ್ತವಾಗಿ ಮುದ್ದು ಮುದ್ದಾಗಿ ಹೇಳುವಾಗ ಇಷ್ಟವಾಗುತ್ತಿತ್ತು.
ಅಪರೂಪದ ಮಾತಲ್ಲೂ ಸಲುಗೆಯ ಮಾತಿರಲಿಲ್ಲ, ಲಘತನವಿದ್ದದ್ದಿಲ್ಲ, ಹುಸಿ ಕೋಪದ ನೆಂಪೆ ಅಗಿಲ್ಲ, ಸ್ವಾರ್ಥದ ಅಮಿಷ ಇರಲಿಲ್ಲ, ಇದ್ದದ್ದರಲ್ಲೇ ಖುಷಿ ಪಡುತ್ತಿದ್ದ ಅವಳ ವ್ಯಕ್ತಿತ್ವ ನಮ್ಮ ನಿಜ ಸ್ನೇಹ ಪ್ರೀತಿಯಾಗಲೂ ಸೇತುವಾಯಿತು..!!
ಪರಿಮಿತ ಪ್ರೀತಿಯ ಮಾತು ಪರಿಧಿಯಲ್ಲಿ ಪರೀಕ್ಷೆಗೆ ಉತ್ತರಿಸುವಂತಿದ್ದರೂ ಸಮಯದ ಅಪವ್ಯಯವಾಗದಂತೆ ಅಗಾಗ ನಡೆಯುತ್ತಿತ್ತು, ಹೇಳಿಕೊಳ್ಳಲೂ ಏನೂ ಇಲ್ಲದ್ದಿದ್ದರೂ ಹೃದಯ ಜೋರಾಗಿ ಬಡಿದು ಮತ್ತೆ ಮತ್ತೆ ಮಾತಾಡಿಸಿ ಪ್ರೀತಿಯನ್ನು ಎಚ್ಚರಿಸುತ್ತಿತ್ತು. ಪ್ರೀತಿ ನಿವೇದಿಸಿ ನಮ್ಮಿಬ್ಬರ ಒಡಲಾಳದಿಂದ ಅಂಗೀಕರವಾಗಿದ್ದರೂ ಅವಳ ಮನೆಯವರ ಕಾರಣವಲ್ಲದ ಕಾರಣದ ನೆವನಕ್ಕೆ ಮುದುಡಿ ಈ ವರ್ಷದ ಅದಿಯಲ್ಲಿ ಸುಗುಣವಂತನೊಂದಿಗೆ ಅವಳಿಗೆ ಮದುವೆ ಗೊತ್ತು ಮಾಡಲಾಯಿತು. ಪ್ರಿಯನಾಗಿ ಅಪ್ಪಿಕೊಳ್ಳಬೇಕಾದವ ನಾನು ಇಂದು ಪ್ರೀತಿಯ ಸೋದರನಾಗಿ ಅಲಂಗಿಸಬೇಕಾಗಿದೆಯಷ್ಟೇ… ಸೇರುಗಟ್ಟಲೇ ಪ್ರೀತಿ, ಬೊಗಸೆ ತುಂಬಾ ಮಮತೆ ಕಡಿಮೆಯಾಗಿಲ್ಲ ಅದರೆ ಪ್ರೀತಿಯ ರೂಪಿಕ ಹಾಗೂ ಸಂಬಂಧದ ಪಾತ್ರ ಬದಲಾಗಿದೆಯಷ್ಟೇ,
“ಕಳೆದುಕೊಂಡ ಕವಿತೆಯ ಕನೆರಿನಂತೆ,
ಆಡದೇ ನುಂಗಿದ ಪೋಲಿ ಒಂದು ಪದಗುಚ್ಚದಂತೆ ,
ಯಾರದೋ ನೋವಿಗೆ ನನ್ನಲ್ಲೇ ಉಳಿದ ನಿಟ್ಟುಸಿರಿನಂತೆ,
ಬೇರ್ಪಡದ ಪ್ರೀತಿ ನನ್ನಲ್ಲೇ ಜೋಪಾನವಾಗಿದೆ
ಮತ್ಯಾರಿಗೋ ಕಾಯುತ್ತಿದೆ”
ಸೋದರಿ, ನಿನ್ನ ನೆನೆದವರ ಮನ ಹೂವಿನಂತೆ ಅರಳಿಸಿ, ಹುಟ್ಟಿದ ಮನೆಯ ಕಾಲಿಟ್ಟ ಮನೆಯ ಬೆಳಗುತ್ತಾ, ಸನ್ನಡತೆಯ ಪ್ರಿಯನೂ ಹೂವಿನಂತೆ ಜೋಪಾನ ಮಾಡುವವನ ಜೊತೆಯಾಗಿ, ನಂಬುಗೆಯ ಸ್ನೇಹಿತೆಯಾಗಿ, ಅತ್ಮೀಯ ಸೊಸೆಯಾಗಿ, ಪ್ರೀತಿಯ ಅಮ್ಮನಾಗಿ, ಇಷ್ಟದ ಟೀಚರ್ ಆಗಿ ಸಾರ್ಥಕವಾಗಿ ಬದುಕು ಎಂಬುವುದೇ ನನ್ನಾಸೆ ಮತ್ತು ಹಾರೈಕೆ ಅಪ್ಪು. ಓದುಗರೆಲ್ಲರ ಶುಭಾಶಯವೂ ನಿನಗಿದೆ. ಶುಭವಾಗಲಿ.
ನಿನ್ನೊಲುಮೆಯ ,
ಪುಟ್ಟಾ…
Facebook ಕಾಮೆಂಟ್ಸ್