X
    Categories: ಕಥೆ

ಸಂಬಂಧ – 1

ಬೃಹತ್ ಕಾಡಿನ ನಡುವೆ, ಮರದಡಿಯ ತಂಪನೆಯ ನೆರಳಿನಲ್ಲಿ ಮಲಗಿದ್ದ ವ್ಯಕ್ತಿ, ಕಣ್ಣು ತೆರೆದಾಗ ಗಿಜುಗುಡುವ ಸಂತೆಯ ಮದ್ಯದಲ್ಲಿದ್ದರೆ ಹೇಗಾಗಬೇಡ? ಊಹಿಸಿ ನೋಡಿ. ದೇವನಹಳ್ಳಿ ವಿಮಾನ ನಿಲ್ದಾಣದಿಂದ ಕೈಲಿದ್ದೊಂದು ಬ್ಯಾಗ್ ನೊಂದಿಗೆ ಹೊರಬಂದು ನಿಂತಾಗ, ನನಗೂ ಹಾಗೇ ಅನಿಸಿದ್ದು ಸುಳ್ಳಲ್ಲ. ‘ಗಿಜುಗುಟ್ಟುವಿಕೆ’ಯೆಂಬ ಶಬ್ದದ ಬಳಕೆ ಸರಿಯಲ್ಲದಿದ್ದರೂ, ಅದೇ ಹತ್ತಿರದ್ದು ಎನಿಸುತ್ತದೆ. ಅಷ್ಟೊಂದೇನೂ ಜನಜಂಗುಳಿಯಿರಲಿಲ್ಲವಲ್ಲಿ. ಅವಶ್ಯವಿಲ್ಲದಿದ್ದರೂ ಹಾರ್ನ್ ಮಾಡುತ್ತಾ, ನಿಧಾನವಾಗಿ ಸಾಗುವ ಏರ್ಪೋರ್ಟ್ ಟ್ಯಾಕ್ಸಿಗಳು, ಹಿಂದೆ-ಮುಂದೆ ಗಡಿಬಿಡಿಯಿಂದ ಓಡಾಡುವ ಸೋ ಕಾಲ್ಡ್ ‘ಪ್ರೊಫೆಶನಲ್’ ಮಂದಿ, ಮಾರೊಂದೆರಡು ದೂರದಲ್ಲಿ “ಕೆ.ಬಿ.ಎಸ್. ಕೆ. ಬಿ. ಎಸ್.” ಎಂದು ಕೂಗುತ್ತಾ ನಿಂತ ಕಂಡಕ್ಟರ್, ಮೂರ್ನಾಲ್ಕು ಕೆಂಪು ಬಣ್ಣದ ಎ. ಸಿ. ಬಸ್ಸುಗಳು, ಹೀಗೆ ಒಂದು ರೀತಿಯ ರಾಜಸ ಚೈತನ್ಯದ ವಾತಾವರಣ ಸೃಷ್ಟಿಯಾಗಿತ್ತು. ಎಲ್ಲಿ ಚೈತನ್ಯವಿದೆಯೋ ಅಲ್ಲಿ ಜೀವನ-ಬೆಳವಣಿಗೆ ಎಲ್ಲಾ. ಮಹಾನಗರದ ಹೆಬ್ಬಾಗಿಲ ಹೊಸ್ತಿಲಲ್ಲಿ ನಿಂತಿದ್ದೆ; ಒಳಹೋಗುವುದು ಅನಿವಾರ್ಯವಾಗಿತ್ತು.

ನಾನು ಸೇರಬೇಕಾದ ಸರ್ವಿಸ್ ಅಪಾರ್ಟ್ಮೆಂಟ್ ಇದ್ದದ್ದು ಮಾರತಹಳ್ಳಿಯಲ್ಲಿ. ಗೂಗಲ್ ಮ್ಯಾಪಿನಲ್ಲಿ ಹುಡುಕಿದಾಗ ಸುಮಾರು ಎರಡೂವರೆ ತಾಸುಗಳ ಬಸ್ ಪ್ರಯಾಣವೆಂದು ತೋರಿಸಿತ್ತು. ವಿಮಾನ ನಿಲ್ದಾಣದಿಂದ ಮೆಜೆಸ್ಟಿಕ್ ನೆಡೆಗೆ ತೆರಳುವ ಬಸ್ಸನ್ನು ಹತ್ತಿ ಕುಳಿತೆ. ಪ್ರಯಾಣ ಸಾಗಿದಂತೆಲ್ಲಾ ನಗರದ ಒಳದಾರಿಗಳು ಒಂದರ ಹಿಂದೊಂದರಂತೆ ಬಿಚ್ಚಿಕೊಂಡು, ಹಾಗೆಯೇ ಆವರಿಸಿಕೊಳ್ಳುತ್ತವೆ. ಯಾಕೋ ಏನೋ, ಬೆಂಗಳೂರು ಹೊಸದಾಗಿ ಕಾಣಿಸಿತು. ರಸ್ತೆಗಳು ‘ಸುಮಾರಾಗಿ’ ಎಂಬಷ್ಟು ಸ್ವಚ್ಚವಾಗಿಯೇ ಇದ್ದವು. ನನಗೆ ಬೆಂಗಳೂರು ಹೊಸತಲ್ಲ; ಹಾಗಂತ ನಗರದ ಖಾಯಂ ನಿವಾಸಿಯೂ ಅಲ್ಲ. ಇತ್ತೀಚೆಗೆ ಮೂರು ವರ್ಷದ ಹಿಂದೆ ಒಮ್ಮೆ ಬಂದಿದ್ದೆ. ಮೆಟ್ರೋ ಕಾಮಗಾರಿಗಳು ನಡೆಯುತ್ತಿದ್ದ ಕಾಲವದು. ರಸ್ತೆಯ ಮಧ್ಯದಲ್ಲಿಯೇ ರಾಶಿಯಾಗಿ ಹರಡಿಕೊಂಡಿದ್ದ ರೇತಿ, ಸಿಮೆಂಟು, ಪುಡಿಗಲ್ಲುಗಳು, ಮಾರುಮಾರಿಗೊಮ್ಮೆ ಸುತ್ತಿಬಳಸಿ ಹೋಗಬೇಕಾದ ಪ್ರತ್ಯೇಕ ಮಣ್ಣು ರಸ್ತೆ, ಎಲ್ಲೆಂದರಲ್ಲಿ ಗಚ್ಚಾಗಿಬಿಡುತ್ತಿದ್ದ ವಾಹನಗಳು, ಅರ್ಧ ಇಂಚು ಧೂಳು ಮೆತ್ತಿಕೊಂಡ ಸರಕಾರೀ ಬಸ್ಸುಗಳು- ಹೀಗೆ ಮಹಾನಗರಿಯ ದೇಹಕ್ಕಂಟಿಕೊಂಡ ಸಹಸ್ರಾರು ಕಲೆಗಳು, ನನ್ನ ಭೇಟಿಯನ್ನು ನರಕ ಸದೃಶವನ್ನಾಗಿಸಿದ್ದವು. ಆವತ್ತೇ ನಿರ್ಧರಿಸಿಬಿಟ್ಟಿದ್ದೆ; ಏನೇ ಆದರೂ ಸರಿ, ಬೆಂಗಳೂರಿಗೆ ಕಾಲಿಡಬಾರದೆಂದು. ಆದರೀಗ? ಅನಿವಾರ್ಯ ಕಾರಣದಿಂದ ಬರಲೇಬೇಕಾದ, ಬಂದು ಉಳಿಯಲೇಬೇಕಾದ ಪರಿಸ್ಥಿತಿ. ಒಂದೆರಡು ವರ್ಷಗಳ ಹಿಂದಿನ ಚಿತ್ರಣಕ್ಕೆ ಹೋಲಿಸಿ ನೋಡಿದರೆ ಪಟ್ಟಣವೀಗ ಸುಧಾರಿಸಿದೆಯೆನ್ನಬಹುದು. ಧೂಳು, ಭರಾಟೆಗಳು ಇಲ್ಲವೆನ್ನಲಾಗದಿದ್ದರೂ, ಆ ಪರಿಯ ಹೊಲಸುತನವಂತೂ ಕಾಣಿಸುವುದಿಲ್ಲ.

“ಟಣಕ್…. ಟಣಕ್…” ಎಂದು ಮೂರ್ನಾಲ್ಕು ಸಲ ಸೂಚನೆಯಿತ್ತ ಮೊಬೈಲ್ ಮಹಾಶಯ, ಮೆಜೆಸ್ಟಿಕ್ಕಿನ ನೆಲದ ಮೇಲೆ ಮೊದಲ ಹೆಜ್ಜೆಯಿಟ್ಟ ಸಮಯದಲ್ಲೇ ಸಾಯಬೇಕೇ! ನನ್ನ ಗಮ್ಯತಾಣವಾದ “ಹಳ್ಳಿ” ಯಾವದಿಕ್ಕಲ್ಲಿದೆಯೆಂಬುದೂ ಸಹಾ ತಿಳಿದಿಲ್ಲ. ಪಕ್ಕದಲ್ಲಿ ನಿಂತಿದ್ದ ಬಿಳಿ ಅಂಗಿಯ, ‘ದಡೂತಿ – ಶ್ರೀಯುತ’ರಲ್ಲಿ ಕೇಳಿದಕ್ಕೆ, ಹತ್ತಿರದಲ್ಲಿದ್ದ ಬಸ್ಸಿನೆಡೆಗೆ ಕೈ ತೋರಿಸಿ “ಯಶ್ವಂತ್‍ಪುರದಲ್ಲಿ ಇಳ್ಕೊ” ಎಂದು, ಅತ್ತಿತ್ತ ನೋಡಿ, ದೇಹಕ್ಕೆ ಸರಿಸಾಟಿಯಾಗುವಂತಿದ್ದ ಮೊಬೈಲ್ ತೆಗೆದು ಕಿವಿಗಿಟ್ಟರು. ಆಸಾಮಿ ಯಾವುದೋ ಗಹನವಾದ ಚಿಂತೆಯಲ್ಲಿದ್ದು, ಸುತ್ತಲಿನ ಪರಿಸರದ ಆಗುಹೋಗುಗಳಿಗೆ ಸ್ಪಂದಿಸುವ ರೀತಿ ಕಾಣಿಸಲಿಲ್ಲ. ಯಾವುದಕ್ಕೂ ಇನ್ನೊಬ್ಬರನ್ನು ಕೇಳುವುದು ಲೇಸೆಂದು ಅನಿಸಿತು.

“ಸಾರ್ ಮಾರತಹಳ್ಳಿಗೆ ಹೋಗೋ ಬಸ್ಸು…….?”

“ಮಾಲೂಂ ನಹಿ” ಅಸಡ್ಡೆಯಿಂದ ಆ ವ್ಯಕ್ತಿಯ ಮುಖ ತಿರುಗಿತು. ಅಲ್ಲಿಯೇ, ಹಿಂದೆ-ಮುಂದೆ, ಅಕ್ಕ-ಪಕ್ಕ ನಿಂತಿದ್ದವರನ್ನೂ ಕೂಡಾ ವಿಚಾರಿಸಿದೆ-

“ತೆರಿದಂಡಿ”

“ಊಹೂಂ….. ತೆರಿಯಾದು”

“ಅರಿಯಿಲ್ಲ ಸಾರು”

“ಬೆಟರ್ ಆಸ್ಕ್ ಸಂಬಡಿ..”

ಎಲಾ ಇವರ!! ಕರ್ನಾಟಕದಲ್ಲಿ ಅಪರಿಚಿತ ದಡ್ಡ ನಾನೇನೇ. ಒಮ್ಮೆ ಮೈಪರಚಿಕೊಳ್ಳುವಂತಾಯಿತು. ಏನಾದರಾಗಲಿ, ಬಸ್ಸು ಹತ್ತಿ ಕುಳಿತುಕೊಳ್ಳುವುದು, ಕಂಡಕ್ಟರ್ ಬಂದ ಮೇಲೆ ವಿಚಾರಿಸಿಕೊಳ್ಳೋಣವೆಂದು ಸುಮ್ಮನಾದೆ.

ಒಂದೆರಡು ನಿಮಿಷ ಕಳೆದಿರಬಹುದು; ನಾ ಕುಳಿತಿದ್ದ ಸೀಟಿನಲ್ಲಿ ಇನ್ನೊಂದು ಕುಂಡೆಯೂರುವಷ್ಟು ಜಾಗವಿದ್ದುದರಿಂದ, ವ್ಯಕ್ತಿಯೊಬ್ಬ ಬಂದು ಕುಳಿತ. ಜೀನ್ಸ್ ಪ್ಯಾಂಟ್, ಟೀ ಶರ್ಟ್ ಮತ್ತು ತಲೆಗಿಂತ ದೊಡ್ಡದಾದ ಕಾಣುವ “ಶಿರ ಶ್ರವಣಕ!!” (ಕ್ಷಮಿಸಿ, ಗೊಂದಲಕ್ಕೊಳಗಾಗುವುದೇನೂ ಬೇಡ, ಹೆಡ್ ಫೋನ್ ಬಗ್ಗೆ ಹೇಳಿದ್ದು ಅಷ್ಟೇ.) ಶ್ರವಣಕದಿಂದ ಹೊರಬಿದ್ದ ಕಪ್ಪನೆಯ ಬಳ್ಳಿ, ಅರೆಪಾರದರ್ಶಕ ಶರ್ಟಿನ ಒಳಗಿನಿಂದ ಸಾಗಿ, ಪ್ಯಾಂಟಿನ ಹತ್ತಾರು ಕಿಸೆಯೊಂದರಲ್ಲೆಲ್ಲೋ ಕೊನೆಯಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ ನೋಡಿದ, ಧರ್ಮಸ್ಥಳ ಮೇಳದ ಯಕ್ಷಗಾನ ಪಾತ್ರಧಾರಿಗಳಂತೆ ‘ಥೈ ಥೈ’ ಎಂದು ತಲೆಯಲ್ಲಾಡಿಸುತ್ತಿದ್ದ. ಕಿಟಕಿಯ ಹೊರಗೆ ಕಣ್ಣು ಹಾಯಿಸಿದೆ. ಹೀಗೆ ಬಂದು, ‘ನಿಂತೆ ನಿಂತೆ’ ಎಂದು ಹಾಗೇ ಹೋಗುವ ಬಸ್ಸುಗಳ ನಡುವೆ ತಮಗಿರುವುದು ದಿನದ ವೇಳೆಯಲ್ಲಿ ಉಳಿದವರಗಿಂತ ನಾಲ್ಕು ತಾಸು ಕಮ್ಮಿಯೆಂಬಂತೆ ಅತ್ತಿಂದಿತ್ತ ಓಡುವ ಜನರು. ಎಲ್ಲರ ಮುಖದ ಮೇಲೂ, ಗಡಿಬಿಡಿಯ ತುಂಡೊಂದು ಕಳಚಿ ಬಿದ್ದಿತ್ತು. ಎಲ್ಲೆಲ್ಲೂ ಧಾವಂತ. ಹೆಸರಿಗಷ್ಟೇ ಅದೊಂದು ಬಸ್ ನಿಲ್ದಾಣ. ಚಲಿಸುತ್ತಲೇ ಎಲ್ಲರನ್ನೂ ಇಳಿಸಿ, ಚಲಿಸುತ್ತಲೇ ತುಂಬಿಕೊಂಡು ಹೋಗುವ ಬಸ್ಸುಗಳು. ಆಸೆಗಣ್ಣಿನಿಂದ ನೋಡುತ್ತಾ ನಿಂತ ವೃದ್ಧರನ್ನ ಯಾರೂ ಗಮನಿಸುವುದಿಲ್ಲ. ಅಚ್ಚರಿಯಾದುದು, ಅದು ಹೇಗೆ ಈ ಗೋಡೆ – ಕಂಬಗಳು ನಿಂತಿವೆಯೆಂದು!! ಅಲ್ಲಿ ತುಂಬಿದ ದುಗುಡದ ಅಲೆಗಳಿಗೆ ತುತ್ತಾಗಿ ಯಾವತ್ತೋ ಹಾರಿಹೋಗಬೇಕಿತ್ತು. ಒಮ್ಮೆ ಒಂದು ಜಾಗ ಖಾಲಿಯಾಯಿತೋ , ಹಿಂದೆಯೇ ಭುರ್ರೆಂದು ಬರುವ ಬಸ್ಸಿನಿಂದಿಳಿದು ಬಿರಬಿರನೆ ಓಡುವ ಜನಸಂದಣಿ. ಶಬ್ದಶೂನ್ಯತಾ-ಶಾಂತಿಯು ಉದಿತವಾಗದ ಭೂಮಿಯಿದು. ಸದ್ಯೋನಿರ್ಮಿತ ಅಶಾಂತಿಯನ್ನು ಭಾವಕೋಶದಲ್ಲಿ ತುಂಬಿಸಿಕೊಂಡ ಗೋಡೆ-ಕಂಬಗಳು ಮುಂದಾಗುವ ಧಾವಂತದುದಯಕ್ಕೆ ಬೀಜ ಭೂಮಿಕೆಯಾಗಿವೆಯೇನೋ ಎಂದೆನಿಸುವುದು ಸುಳ್ಳಲ್ಲ.

ಕೆಲವೇ ನಿಮಿಷಗಳಲ್ಲಿ, ಬಸ್ಸಿನ ಸೀಟುಗಳೆಲ್ಲವೂ ತುಂಬಿ, ಕುಳಿತವರಿಗಿಂತ ಎರಡು ಪಟ್ಟು ಮಂದಿ ನಿಂತಿದ್ದರು. ಹತ್ತಿದ್ದು ಸರಿಯಾದ ಬಸ್ಸು ಹೌದೋ ಅಲ್ಲವೋ ಎಂಬ ಅನುಮಾನ ಸಂಬಂಧೀ ಭಯದಿಂದ ಪಕ್ಕದಲ್ಲಿದ್ದ ಮ್ಯಾಚೋ ಮನುಷ್ಯನನ್ನು (macho man!!) ಬೆರಳಿನಿಂದ ತಟ್ಟಿ, ಮಾನವ ಲೋಕಕ್ಕೆ ಕರೆತಂದೆ. (ಬಾಯಿಯಿಂದ ಅದೆಷ್ಟೇ ದೊಡ್ಡದಾಗಿ ಕೂಗಿದರೂ ಸಹಾ, ಕೇಳುವ ಸ್ಥಿತಿಯಲ್ಲಿರಲಿಲ್ಲ ನೋಡಿ, ಆತನ ಕಿವಿಗಳು) ನಾ ಕೇಳಿದ “ಮಾರತ ಹಳ್ಳಿಗೆ ಹೋಗುತ್ತಲ್ವಾ?” ಎಂಬ ಪ್ರಶ್ನೆಗೆ ಸುಮ್ಮನೆ ತಲೆಯಲ್ಲಾಡಿಸಿ, ತಿರುಗಿ ಶ್ರವಣಕವನ್ನು ಸರಿಪಡಿಸಿಕೊಂಡ. ಮತ್ತೆ ಕುಣಿಯಲು ಶುರುಮಾಡಿತವನ ತಲೆ. “ಕಂಡೆಯಾ ಸುರಪಾಲ……ದೈತ್ಯರ ರುಂಡವನು, ಕಂಡೆಯಾ ಸುರಪಾಲ ದೈತ್ಯರ ರುಂಡವನು ಧರೆಯಲ್ಲೀ……ಈ…..ಈ…..ಈ……ಈ” ಭಾಗವತರ ಚಂಡಿಕಟ್ಟಿದ ತಲೆಯ ನೆನಪಾಯಿತು.

“ಹಿಂದ್ ಹೋಗಿ, ಹಿಂದ್ ಹೋಗಿ…. ಹೋಗಿ ಒಳಗಡೆ, ಹೋಗಿ, ಹೋಗಿ” ಕಂಡಕ್ಟರ್ ಸಾಹೇಬರ ಅಸಹನೆ ಮುಗಿಲು ಮುಟ್ಟಿತ್ತು. ಸಪೂರ ಮುಖದ, ದಪ್ಪ ಹುಬ್ಬಿನ ಆ ದೇಹದೊಳಗೆ ಇನ್ನದೆಷ್ಟು ಪ್ರಮಾಣದ ಸತ್ವವಡಗಿ ಕುಳಿತಿದೆಯೇನೋ? ಆತನ ಕೀಚು ಸ್ವರದ ಶಬ್ದದಲೆಗಳಿಗೆ ಸಿಕ್ಕು, ಕಿಟಕಿಯ ದಪ್ಪನೆಯ ಗಾಜುಗಳು ‘ಫಳ್’ ಎಂದು ಒಡೆದುಹೋಗುತ್ತವೇನೋ?

“ನಾತೊ ಚೇಂಜ್ ಲೇದು ಭಯ್ಯಾ… ಚೇಂಜ್ ಲೇದಂಟೆ ದಿಕಂಡಿ.” ಐದುನೂರರ ನೋಟನ್ನು ವಾಪಾಸ್ಸು ಕೊಟ್ಟು, ಇನ್ನೊಬ್ಬ ಪ್ರಯಾಣಿಕನೆಡೆಗೆ ತಿರುಗಿದ. ಚಿಲ್ಲರೆ ಇಲ್ಲದ ಮನುಷ್ಯ, ಅಂಗಿಯ ಕಿಸೆಯನ್ನೂ ಪ್ಯಾಂಟಿನ ಜೇಬುಗಳನ್ನೂ ಮೂರ್ನಾಲ್ಕು ಸಲ ತಡಕಾಡಿ, ಪರ್ಸಿನ ಹಿಂದೂ, ಮುಂದೂ, ಹುಡುಕಿ, ಎರಡು ರೂಪಾಯಿ ಬಿಲ್ಲೆ ಸಿಗದಿದ್ದಾಗ ಮನದಲ್ಲೇ ಗೊಣಗುತ್ತಾ ಕೆಳಗಿಳಿದ.

“ಯಶವಂತಪುರ ರೈಲ್ವೆ ಶ್ಟೇಷನ್ ಹೋಗುತ್ತಾ ಸಾರ್?” ಪ್ರಶ್ನೆ ನಾನು ಕೇಳಿದ್ದಲ್ಲ. ಮುಂದಿನ ಸೀಟಿನಲ್ಲಿ ಕುಳಿತಿದ್ದ ಅರವತ್ತೈದು-ಎಪ್ಪತ್ತು ವರ್ಷದ ವೃದ್ಧರು.

ಮುಂದುವರಿಯುವುದು…

Facebook ಕಾಮೆಂಟ್ಸ್

Sandeep Hegde: ಭಟ್ಕಳ ತಾಲ್ಲೂಕಿನ ಕೆರೆಹಿತ್ಲು ಗ್ರಾಮದವನಾಗಿದ್ದು, ಮೊದಲ ಹಂತದ ಶಿಕ್ಷಣವನ್ನು ಭಟ್ಕಳ ಮತ್ತು ಬೈಂದೂರಿನಲ್ಲಿ ಮುಗಿಸಿ, ಎಂಜಿನಿಯರಿಂಗ್ ಪದವಿಯನ್ನು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಪಡೆದು, ಪ್ರಸ್ತುತ M.N.C ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದೇನೆ. ಚಿಕ್ಕಂದಿನಿಂದಲೂ ಜತನದಿಂದ ಉಳಿಸಿಕೊಂಡು ಬಂದ ಅಭ್ಯಾಸವೆಂದರೆ ಓದುವುದು ಮತ್ತು ಬರೆಯುವುದು. ಅರೆಮಲೆನಾಡಿನ ಜನಜೀವನ, ಭಾಷೆ, ಅಭ್ಯಾಸ, ಕೃಷಿ, ಪ್ರೇಮ, ಕಾಮ, ಹಾಸ್ಯ, ಮಣ್ಣು, ನಿಸರ್ಗ ಸೌಂದರ್ಯದ ಕುರಿತಾಗಿ ಹೇಳಲು ಹಾಗೂ ಬರೆಯಲು ಯಾವಾಗಲೂ ಸಿದ್ಧ. ಹತ್ತು ಹಲವು ವಿಚಾರಧಾರೆಗಳ, ವ್ಯಕ್ತಿಗಳ ಸೈದ್ಧಾಂತಿಕ ಧೋರಣೆಗಳನ್ನು ಗಮನಿಸಿ, ಕೊನೆಗೂ ಯಾವುದಕ್ಕೂ ಪಕ್ಕಾಗದೇ ಇರುವ ವ್ಯಕ್ತಿ. ಹಲವಾರು ಕಥೆಗಳು ಮಯೂರ, ತರಂಗ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
Related Post