ನಂಬಿದರೆ ನಂಬಿ..
ನಂಬದಿದ್ದರೂ ಇದುವೇ ಸತ್ಯ..
ನಾನು ಸತ್ತು ವರ್ಷಗಳಾಯಿತು
ನೀವು ಮಾತನಾಡುತ್ತಿರುವುದು
ಆತ್ಮವಿಲ್ಲದೆ ಸುಮ್ಮನೆ ನಡೆಯುತ್ತಿರುವ
ಬರೀ ದೇಹದ ಜತೆ..!
ಅವರೇನೋ ಹೇಳುತ್ತಿದ್ದಾರೆ
ನಾನಿಲ್ಲಿದ್ದೇನೆ, ಅವರ ಮಾತನ್ನು ಕೇಳುತ್ತಿದ್ದೇನೆ
ಅನ್ನೋದು ಅವರೆಲ್ಲರ ಭ್ರಮೆ
ಆದರೇ ನಾನು ಸತ್ತು ಆಗಲೇ ವರ್ಷಗಳಾಯಿತು..!
ನಗುವಲ್ಲಿ ಜೀವ ಕಳೆಯೇ ಇಲ್ಲ ಎನ್ನುತ್ತಾರೆ
ಇವರಿಗೆಲ್ಲಿ ಅರ್ಥವಾದೀತು
ಹೃದಯದಲ್ಲಿ ಜೀವ ಇಲ್ಲದ ಮೇಲೆ
ನಗುವಲ್ಲಿ ಜೀವಕಳೆಯೆಲ್ಲಿಂದ..?
ನಾನು ಸತ್ತು ವರ್ಷಗಳಾಯಿತು..!
ನೋಡುವವರಿಗೇನು, ನಾನಿಲ್ಲಿಯೇ ಇದ್ದೇನೆ
ಆದರೆ ನನ್ನವರು ಅನಿಸಿಕೊಂಡವರು
ಅಳಿಸಿ,ಹೀಯಾಳಿಸಿ, ವ್ಯಭಿಚಾರಿ ಪಟ್ಟ
ಕೊಟ್ಟು ಹೊರಟು ಹೋದಾಗಲೇ
ನಾನು ಸತ್ತು ಹೋಗಿದ್ದೇನೆ..!
ಯಾರೋ ಮಾತನಾಡುತ್ತಾರೆ
ನಗುತ್ತಾರೆ, ಅಳುತ್ತಾರೆ
ಆದರೆ ನನ್ನಲ್ಲಿ ನಗುವಿಲ್ಲ, ಅಳುವಿಲ್ಲ.
ಯಾಕೆಂದರೆ, ಅವರೆಲ್ಲರಲ್ಲಿ ಇರುವಂತೆ
ನನ್ನೊಳಗಿನ ಆತ್ಮ ನನ್ನಲ್ಲಿಲ್ಲ
ನಾನು ಸತ್ತು ವರ್ಷಗಳಾಯಿತು..!
ಎಲ್ಲರಂತೆಯೇ ನನ್ನ ದಿನಚರಿ
ಆದರೆ ಎಲ್ಲರಂತಲ್ಲ ನಾನು
ಇಷ್ಟಕ್ಕೂ ಸತ್ತಿರುವ ನಾನು
ಎಲ್ಲರಂತಿರಲು ಹೇಗೆ ಸಾಧ್ಯ..?
ನಾನು ಸತ್ತು ಆಗಲೇ ವರ್ಷಗಳಾಯಿತು..!
– ವಿನುತಾ ಪೆರ್ಲ, ಬೆಂಗಳೂರು
vinuthaperla@gmail.com
Facebook ಕಾಮೆಂಟ್ಸ್