ಬ್ರಿಟಿಷ್ ಸರ್ಕಾರದ ಕಛೇರಿಯಲ್ಲಿ ಗುಮಾಸ್ತನಾಗಿದ್ದ ಒಬ್ಬ ಸಾಮಾನ್ಯ ಭಾರತೀಯ ಸೂರ್ಯ ಮುಳುಗದ ಬ್ರಿಟಿಷ್ ಸರ್ಕಾರದ ವಿರುದ್ದವೇ ಬಂಡಾಯ ಹೂಡಿದ್ದ. ದೇಶದ ಎಲ್ಲಾ ಮಹಾರಾಜರೇ ಸೋತು ಇಂಗ್ಲಿಷರಿಗೆ ಶರಣಾಗಿದ್ದಾಗ ಅಂಜದೆ ಸೈನ್ಯ ಕಟ್ಟಿ ಆಂಗ್ಲರಿಗೆ ನಡುಕಹುಟ್ಟಿಸಿದ್ದ ಆತ. ತನ್ನನ್ನು ಬಲಿಕೊಟ್ಟು ದೇಶದಲ್ಲಿ ಸಶಸ್ತ್ರ ಕ್ರಾಂತಿಯ ಜ್ವಾಲೆಯನ್ನು ಹಚ್ಚಿದ ಅದಮ್ಯ ಕ್ರಾಂತಿಕಾರಿ ಹೆಸರು ವಾಸುದೇವ ಬಲವಂತ ಫಡಕೆ.
ಮುಂಬೈ ಬಳಿಯ ಶಿರಡೋಣ ಎಂಬ ಊರಿನಲ್ಲಿ ಬಲವಂತರಾವ್ ಫಡಕೆ ಮತ್ತು ಸರಸ್ವತಿಬಾಯಿ ದಂಪತಿಗಳ ಮಗನಾಗಿ ವಾಸುದೇವ ಬಲವಂತ ಫಡಕೆ 1845 ನವೆಂಬರ್ 4 ರಂದು ಜನಿಸಿದರು. ತಾಯಿಯ ಸ್ವಂತ ಊರು ಕಲ್ಯಾಣದಲ್ಲಿ ವಾಸುದೇವನನ್ನು ಶಾಲೆಗೆ ಕಳುಹಿಸಿದರು. ಶ್ರದ್ದೆಯಿಂದ ಓದಿದ ವಾಸುದೇವ ಗಣಿತ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಗಳನ್ನು ಅಭ್ಯಾಸ ಮಾಡಿದ. ಈ ಹೊತ್ತಿಗೆ 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿತ್ತು. ಈ ಸ್ವಾತಂತ್ರ್ಯ ಯುದ್ದದ ಕಥೆಗಳನ್ನು ತಂದೆ ಬಲವಂತರಾವ್ ಫಡಕೆ ವಾಸುದೇವನಿಗೆ ಹೇಳುತ್ತಿದ್ದರು. ಕಥೆಗಳನ್ನು ವಾಸುದೇವ ಉತ್ಸಾಹದಿಂದ ಕೇಳುತಿದ್ದ.
ಕಲ್ಯಾಣದಲ್ಲಿ ಪ್ರಾರ್ಥಮಿಕ ಶಿಕ್ಷಣ ಮುಗಿಸಿದ ನಂತರ ಕೆಲಕಾಲ ಮುಂಬೈ ಮತ್ತು ಪುಣೆಯಲ್ಲಿ ವಾಸುದೇವ ತನ್ನ ವ್ಯಾಸಂಗವನ್ನು ಮುಂದುವರೆಸಿದ. 15ನೇ ವಯಸ್ಸಿಗೆ ವಾಸುದೇವನಿಗೆ ಮದುವೆ ಮಾಡಿದರು. ಹೆಂಡತಿಯ ಹೆಸರು ಸಯೀಬಾಯಿ. ಮುಂದೆ ವಾಸುದೇವ ಮುಂಬೈಯಲ್ಲಿ ಜಿ.ಐ.ಪಿ ರೈಲ್ವೆಯ ಆಯ-ವ್ಯಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡ. ಈ ಕೆಲಸವನ್ನು ಬಿಟ್ಟ ವಾಸುದೇವನಿಗೆ ಮುಂದೆ ಮಿಲಿಟರಿಯ ಸರಬರಾಜು ಇಲಾಖೆಯಲ್ಲಿ ಸರ್ಕಾರಿ ನೌಕರಿ ಸಿಕ್ಕಿತು. ಮುಂಬೈಯಿಂದ ವರ್ಗಾವಣೆಯಾಗಿ ವಾಸುದೇವ ಪುಣೆಗೆ ಬಂದು ಸೇರಿದ. ವಾಸುದೇವನ ಸಂಸಾರ ಸುಖವಾಗಿತ್ತು. ಈ ವೇಳೆಗೆ ವಾಸುದೇವನ ತಾಯಿ ಅನಾರೋಗ್ಯ ಪೀಡಿತರಾದರು. ಅವರನ್ನು ನೋಡಲು ಊರಿಗೆ ಹೋಗಲು ರಜಾ ಅರ್ಜಿಯನ್ನು ಸಲ್ಲಿಸಿದ. ಅಧಿಕಾರಿಗಳು ರಜೆ ಕೊಡದೆ ನಾಲ್ಕು ದಿನ ಕಾಯಿಸಿದರು. ನಂತರ ಕೊಡಲು ಸಾಧ್ಯವಿಲ್ಲ ಎಂದರು. ಸಿಟ್ಟಿಗೆದ್ದ ವಾಸುದೇವ ಮತ್ತೊಂದು ಅರ್ಜಿ ಹಾಕಿ ಉತ್ತರಕ್ಕೆ ಕಾಯದೇ ಊರಿಗೆ ಹೋದ.ಅಷ್ಟರಲ್ಲಿ ಅವನ ತಾಯಿ ತೀರಿ ಹೋಗಿ ದಹನ ಕ್ರಿಯೆಯೂ ಸಹ ಮುಗಿದಿತ್ತು. ಕೊನೆಯ ಬಾರಿ ತಾಯಿಯನ್ನು ವಾಸುದೇವನಿಗೆ ನೋಡಲು ಆಗಲಿಲ್ಲ ಅಂದಿನಿಂದ ವಾಸುದೇವ ಬ್ರಿಟಿಷರ ವಿರುದ್ದ ತಿರುಗಿಬಿದ್ದ.
ಪುಣೆಯ ರಾಜಕೀಯ ಪರಿಸ್ಥಿತಿ ವಾಸುದೇವನನ್ನು ಸಂಪೂರ್ಣ ಬದಲಾವಣೆ ಮಾಡಿತು. ಸ್ವದೇಶೀ ಆಂದೋಲನದಿಂದ ಪ್ರಭಾವಿತನಾದ ವಾಸುದೇವ ಸ್ವದೇಶೀ ವಸ್ತ್ರಗಳನ್ನು ಧರಿಸಲು ಪ್ರಾರಂಭಿಸಿದ.
ಕಾನೂನಿನ ಮೂಲಕ ಬ್ರಿಟಿಷರನ್ನು ಓಡಿಸುವುದು ಅಸಾಧ್ಯವೆಂದು ಭಾವಿಸಿದ ವಾಸುದೇವರು ಸಶಸ್ತ್ರ ಕ್ರಾಂತಿಯೇ ದಾರಿ ಎಂದು ನಂಬಿದರು. ರಾಮೋಶಿ ಎಂಬ ಗುಡ್ಡಗಾಡು ಜನಾಂಗದವರನ್ನು ಸಂಘಟಿಸಿದರು. 1879ರ ಹೊತ್ತಿಗೆ ವಾಸುದೇವರು ಒಂದು ಸೈನ್ಯವನ್ನು ಸಜ್ಜು ಮಾಡಿದರು. ಈ ಸಮಯದಲ್ಲಿ ದೇಶದಲ್ಲಿ ಬರಗಾಲ ಬಂದಿತು. ಎಲ್ಲ ಕಡೆ ನೀರು ಮತ್ತು ಅನ್ನಕ್ಕೆ ಹಾಹಾಕಾರ ಉಂಟಾಯಿತು. ದೇಶದ ಸ್ಥಿತಿಯನ್ನು ಕಂಡು ವಾಸುದೇವರು ಮರುಗಿದರು. ಬ್ರಿಟಿಷರ ದೌರ್ಜನ್ಯವನ್ನು ಕಂಡು ಅವರ ಮೇಲೆ ಯುದ್ದ ಸಾರಲು ನಿರ್ಧರಿಸಿದರು. ಆದರೆ ವಾಸುದೇವರ ಬಳಿ ಹಣವಿರಲಿಲ್ಲ. ಸೈನ್ಯದಲ್ಲಿ ಶಸ್ತ್ರಗಳೇ ಇರಲಿಲ್ಲ. ಸೈನ್ಯಕ್ಕಾಗಿ ಹಣ ಸಂಗ್ರಹಿಸಲು ಮುಂದಾದರು. ಶ್ರೀಮಂತರ ಬಳಿ ಸಾಲ ಕೇಳಿದರು ಆದರೆ ಯಾರು ಸಾಲ ಕೊಡಲಿಲ್ಲ. ಕುಗ್ಗದ ವಾಸುದೇವರು ಸ್ವಾತಂತ್ರ್ಯ ಯುದ್ದಕ್ಕಾಗಿ ಲೂಟಿ ಮಾಡಲು ಮುಂದಾದರು. ಬಡವರಿಗೆ ತೊಂದರೆ ಮಾಡದೇ ಶ್ರೀಮಂತರ ಮನಗೆ ಲೂಟಿ ಮಾಡಿ ಅಪಾರ ಸಂಪತ್ತನ್ನು ದೋಚಿದರು. ವಾಸುದೇವರು ಬ್ರಿಟಿಷರ ವಿರುದ್ದ ಬಂಡಾಯವೆದ್ದರು. ಸರ್ಕಾರದ ಕಛೇರಿಗಳ ಮೇಲೆ ದಾಳಿ ಮಾಡಿದರು. ಪುನಾದ ಕೇಂದ್ರ ಕಛೇರಿಗಳಿಗೆ ವಾಸುದೇವರ ರಾಮೋಶಿ ಸೈನ್ಯ ಬೆಂಕಿ ಇಟ್ಟಿತು. ಬ್ರಿಟಿಷರಿಗೆ ಮೈ ನಡುಕ ಶುರುವಾಯಿತು. ಪೂನಾದ ಈ ಘಟನೆಯ ವಾಸುದೇವ ಬಲವಂತ ಫಡಕೆ ಪ್ರಸಿದ್ದರಾದರು. ಇಂಗ್ಲೀಷ್ ಪಾರ್ಲಿಮೆಂಟಿನಲ್ಲಿ ವಾಸುದೇವರ ಕಾರ್ಯ ಚಟುವಟಿಕೆಗಳ ಕುರಿತು ಚರ್ಚೆಯಾಯಿತು. ವಾಸುದೇವ ಬಲವಂತ ಫಢಕೆಯನ್ನು ಹಿಡಿಯಲು ಬ್ರಿಟಿಷ್ ಸರ್ಕಾರ ಆಜ್ಞೆ ಹೊರಡಿಸಿತು.
ಇಂಗ್ಲಿಷ್ ಸೇನಾಧಿಪತಿ ಮೇಜರ್ ಡೇನಿಯಲ್ ವಾಸುದೇವರನ್ನು ಹಿಡಿಯಲು ಬೆನ್ನು ಹತ್ತಿದನು. ವಾಸುದೇವರ ಸೈನ್ಯ ಕೊಂಕಣ ಪ್ರಾಂತ್ಯದಲ್ಲಿ ಲೂಟಿ ಮಾಡಿ ಬರುತ್ತಿದ್ದ ಸಮಯದಲ್ಲಿ ಡೇನಿಯಲ್ ಸೈನ್ಯಕ್ಕೆ ಎದುರಾಯಿತು. ಬ್ರಿಟಿಷರ ಶಸ್ತ್ರಸಜ್ಜಿತ ಸೇನೆಯನ್ನು ಎದುರಿಸಲು ವಾಸುದೇವರ ರಾಮೋಶಿ ಸೇನೆಗೆ ಆಗಲಿಲ್ಲ. ವಾಸುದೇವರ ಸೈನ್ಯಕ್ಕೆ ಬೀಕರ ಸೋಲು ಉಂಟಾಯಿತು. ಈ ಯುದ್ದದಲ್ಲಿ ವಾಸುದೇವರ ಬಲಗೈಯಂತಿದ್ದ ದೌಲತ್ ರಾವ್ ನಾಯಕ್ ಸಾವಿಗೀಡಾದನು. ಸೈನ್ಯ ಚೆಲ್ಲಾಪಿಲ್ಲಿಯಾಯಿತು. ಡೇನಿಯಲ್ ನಿಂದ ತಪ್ಪಿಸಿಕೊಂಡ ವಾಸುದೇವರು ತಲೆ ಮರೆಸಿಕೊಂಡು ಮಿತ್ರನ ಮನೆಯಲ್ಲಿ ಗುಪ್ತ ಆಶ್ರಯ ಪಡೆದರು. ಆದರೆ ಬ್ರಿಟಿಷರಿಗೆ ವಾಸುದೇವರನ್ನು ಹಿಡಿಯುವವರೆಗೂ ನಿದ್ದೆ ಬರಲಿಲ್ಲ. ಡೇನಿಯಲ್ ಮತ್ತೆ ಬೆನ್ನು ಹತ್ತಿದನು. ಕೆಲವು ವಿಶ್ವಾಸ ದ್ರೋಹಿಗಳು ಹಣದ ಆಸೆಗೆ ವಾಸುದೇವರ ಗುಪ್ತ ಸ್ಥಳದ ಮಾಹಿತಿಯನ್ನು ಡೇನಿಯಲ್ ಗೆ ನೀಡಿದರು. ವಾಸುದೇವರನ್ನು ಡೇನಿಯಲ್ ಸೆರೆ ಹಿಡಿದ. ವಾಸುದೇವರನ್ನು ಪೂನಾಗೆ ಕರೆತಂದರು. ಬ್ರಿಟಿಷರ ವಿರುದ್ದ ಯುದ್ದ ಸಾರಿದ ಮಹಾನ್ ಪುರುಷರನ್ನು ನೋಡಲು ಜನ ಕಿಕ್ಕಿರಿದು ಸೇರಿದ್ದರು. ಹಲವು ಮೊಕದ್ದಮೆಗಳನ್ನು ಹಾಕಿ ಭಯಂಕರ ಆರೋಪಗಳನ್ನು ಅವರ ಮೇಲೆ ಹೊರಿಸಲಾಯಿತು. ನಮ್ಮ ಭಾರತೀಯರೆ ಅವರ ವಿರುದ್ದ ಸಾಕ್ಷಿ ಹೇಳಿದರು. ವಿಚಾರಣೆ ಮುಗಿದು ನ್ಯಾಯಾಲಯ ವಾಸುದೇವರಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು. ನಂತರ ವಾಸುದೇವರನ್ನು ಏಡನ್ ಗೆ ಕಳುಹಿಸಿದರು.
ಅರೇಬಿಯಾದ ದಕ್ಷಿಣ ತುದಿಯಲ್ಲಿರುವ ಸ್ಥಳ ಏಡನ್. ಅದೊಂದು ನರಕವೇ ಸರಿ. ಅಲ್ಲಿನ ಅಧಿಕಾರಿಗಳು ಕೈದಿಗಳಿಗೆ ಉಗ್ರ ಶಿಕ್ಷೆಯನ್ನು ನೀಡುತ್ತಿದ್ದರು. ಕತ್ತಲೆ ಕೊನೆಯಲ್ಲಿ ಹಾಕಿ ಚಿತ್ರ ಹಿಂಸೆ ನೀಡುತ್ತಿದ್ದರು. ಇದರಿಂದ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿದ ವಾಸುದೇವರು ನಡು ರಾತ್ರಿ ದೇವರನ್ನು ಸ್ಮರಿಸಿ ಜೈಲಿನ ರೂಮಿನ ಬಾಗಿಲನ್ನು ಮುರಿದು ಹಾಕಿ ಸಿಂಹದಂತೆ ಅಲ್ಲಿಂದ ಪರಾರಿಯಾದರು. ಇಡೀ ರಾತ್ರಿ ದಿಕ್ಕಿಲ್ಲದೇ ಓಡಿದರು. ಇತ್ತ ಸೆರೆಮನೆಯಲ್ಲಿ ದೊಡ್ಡ ಕೋಲಾಹಲ ಉಂಟಾಯಿತು. ಜೈಲಿನ ಅಧಿಕಾರಿಗಳು ವಾಸುದೇವರನ್ನು ಹುಡುಕಿ ಸೆರೆ ಹಿಡಿಯಲು ಆದೇಶಿಸಿದರು. ಹುಡುಕಿ ಕೊಟ್ಟವರಿಗೆ ಬಹುಮಾನ ಎಂದು ಘೋಷಿಸಿದರು ಹಣದ ಆಸೆಗೆ ಬಲಿಯಾದ ಅರಬ್ಬರು ವಾಸುದೇವರನ್ನು ಹಿಡಿದು ಬ್ರಿಟಿಷರಿಗೆ ಒಪ್ಪಿಸಿದರು. ಬ್ರಿಟಿಷರು ಅವರಿಗೆ ಮತ್ತಷ್ಟು ಚಿತ್ರ ಹಿಂಸೆ ನೀಡಿದರು. ಕಾಲಕ್ರಮೇಣ ವಾಸುದೇವರ ಶರೀರ ಜರ್ಜರವಾಯಿತು. ಕಾಯಿಲೆ ತುತ್ತಾದ ಅವರ ದೇಹ ಅಸ್ಥಿಪಂಜರವಾಯಿತು. ದಿನದಿನವೂ ಸ್ವಾತಂತ್ರ್ಯ ದಾಹದಿಂದ ಕೊರಗುತ್ತಾ 1883 ಫೆಬ್ರವರಿ 17 ರಂದು ವಾಸುದೇವ ಬಲವಂತ ಫಡಕೆ ಅಸುನೀಗಿದರು. ಇಂದು ಅವರ ಸ್ಮೃತಿ ದಿನ. ಮೂವತ್ತೆಂಟು ವರ್ಷಕ್ಕೆ ಸಾವನಪ್ಪಿದ ವಾಸುದೇವ ಬಲವಂತ ಫಡಕೆ ಶತಮಾನಗಳ ಕಾಲ ಈ ನಾಡಿನ ದೇಶಭಕ್ತರಿಗೆ ಸ್ಪೂರ್ತಿಯ ಚಿಲುಮೆಯಾಗಿ ಕಾಣಿಸುತ್ತಾರೆ.
Facebook ಕಾಮೆಂಟ್ಸ್