X

ಈ ಗುಲಾಬಿ ಹೂವು ನಿಮಗಾಗಿ

ಊರು ಬಿಟ್ಟು ಸ್ವಲ್ಪ್ ಹೊರಗಡೆ ಇದೆ ನಮ್ಮ ಮನೆ. ವಿದ್ಯುತ್ ಒಂದು ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ಇಲ್ಲಾ ನಮಗೆ. ಸುಮಾರು ಇಪ್ಪತ್ತು ಮನೆ ಇವೆ ನಮ್ಮ ಲೇಔಟ್ ನಲ್ಲಿ. ನೀರು, ಒಳಚರಂಡಿ, ರೋಡ ಎಲ್ಲಾ ನಾವುಗಳೇ ದುಡ್ಡು ಹಾಕಿ ಮಾಡಿಸಿದ್ದು. ಏನೇ ಸಮಸ್ಯೆ ಇದ್ದರೂ ನಾವು ನಗರಸಭೆ ಗೆ ಹೋಗಲ್ಲ, ನಾವೇ ಯಾರಿಗಾದರು ಹೇಳಿ ಸರಿ ಮಾಡಿಸಬೇಕು. ಆದರೆ ನಾವು ಕರೆಯದೇ ಬರುವರು ಅಂದ್ರೆ ರವಿ ಮತ್ತು ಜಗ್ಗ. ಇವರು ಸಂಡೇ ಬೆಳಿಗ್ಗೆ ಬಂದು ನಮ್ಮ ಲೇಔಟ್ನಲ್ಲಿ ಇರುವ ಸೆಪ್ಟಿಕ್ ಟ್ಯಾಂಕಿನ ನೀರನ್ನು ಕ್ಲೀನ್ ಮಾಡಿ, ಗುಂಡಿಗೆ ನೀರನ್ನು ಹೋಗೋಕೆ ಜಾಗ ಮಾಡಿ,ಸ್ವಲ್ಪ್ ಪೌಡರ್ ಹಾಕಿ, ಸಂಗ್ರಹವಾದ ಎಲ್ಲಾ ಕಸವನ್ನು ತಮ್ಮ ಗಾಡಿ ಗೆ ಹಾಕಿಕೊಂಡು ತಮ್ಮ ಪಾಡಿಗೆ ತಾವು ಹೋಗ್ತಾರೆ.

ಇವತ್ತು ಬೆಳಿಗ್ಗೆ ಎಂದಿನಂತೆ ಅವರು ತಮ್ಮ ಕೆಲಸದಲ್ಲಿ ಇದ್ದರು.ವಾರದಿಂದ ಇದ್ದ ಕಸದ ಪ್ಲಾಸ್ಟಿಕ್ ಹಿಡಿದು ಅವರ ಹತ್ತಿರ ಹೋದೆ. ನನ್ನ ಮುಖ ನೋಡಿ “ಅಲ್ಲೇ ಇಟ್ಟು ಬಿಡಿ ಸರ್ ನಾವೇ ತಗೋತಿವಿ, ಇಲ್ಲೇ ವಾಸನಿ ಭಾಳ ಐತಿ” ಅಂದ ರವಿ. ನಾನು ಹುಬ್ಬಳ್ಳಿಗೆ ಹೋಗಬೇಕಾಗಿತ್ತು ಅದಕ್ಕೆ ಆಯ್ತು ಅಂಥ ವಾಪಸ ಮನೆಗೆ ಬಂದೆ.

*****
ಒಂದು ಗಂಟೆ ಸರಿಯಾಗಿ ಬೇಕು ನಮ್ಮ ಬಸ್ ಹುಬ್ಬಳ್ಳಿ ಗೆ ಹೋಗೋಕೆ. ಕಣ್ಣ ಮುಚ್ಚಿ ಹಾಡು ಕೇಳುತ್ತಿದ್ದೆ ,”ದೀಪವು ನಿನ್ನದೇ ಗಾಳಿಯು ನಿನ್ನದೇ” ಮುಗಿಯಿತು, ಎರಡು ಸೆಕೆಂಡ್ ಗ್ಯಾಪ್ ಆಮೇಲೆ ಒಂದು ಸದೃಢ ದ್ವನಿ ಎರಡು ಹೆಡ್ ಫೋನ್ ನಿಂದ ಕಿವಿಗೆ ಅಪ್ಪಳಿಸಿತ್ತು. ಕಣ್ಣು ಇನ್ನೇನು ನಿದ್ದೆಗೆ ಹೋಗಬೇಕು ಅನ್ನೋ ಪರಿಸ್ತಿತಿ ಬದಲಾಗಿ ಹುಬ್ಬು ಮೇಲೆರಿದವು, ಒಂದು ಸಾರಿ ಸುತ್ತೆಲ್ಲ ನೋಡಿದೆ, ಯಾರು ಇಲ್ಲಾ, ಹೆಡ್ ಫೋನ್ ತೆಗೆದು ನೋಡಿದೆ, ಅದು ಯಾರೋ ಸ್ನೇಹಿತರು ಕಳಿಸಿದ ಭಾಷಣದ ತುಣುಕು. ಅದನ್ನ ಏನು ಕೇಳುವದು ಬಿಡು ಅಂಥ. ಬೇರೆ ಸಾಂಗ್ ಹಾಕಿದೆ. ಅದು ನನಗೆ ತುಂಬಾ ಇಷ್ಟವಾದ ಹಾಡು ಆದರೆ ಇವತ್ತು ಅದು ನನಗೆ ಹಿತ ಕೊಡುತ್ತಿರಲಿಲ್ಲ. ಹಿಂದೆ ಕೇಳಿದ್ದ ದ್ವನಿ ಮನಸಿನಲ್ಲಿ ಲಗ್ಗೆ ಹಾಕಿತ್ತು. ಆ ಧ್ವನಿ ನನ್ನ ಡಿಸ್ಟರ್ಬ್ ಮಾಡಿತ್ತು. ಅದನ್ನೇ ಕೇಳೋಣ ಅಂಥ ಬ್ಯಾಕ್ ಬಟನ್ ಒತ್ತಿದೆ.

ಅದೇ ಸದೃಡ ದ್ವನಿ “ಜನಿನೀಂ ಶಾರದಾಂ ದೇವಿಂ ರಾಮಕೃಷ್ಣಂ ಜಗದ್ಗುರುಂ !”, ಆ ಹಾಡಿನಲ್ಲಿ ಮಿಸ್ ಮಾಡಿಕೊಂಡ ಹಿತ ಇಲ್ಲೇ ಸಿಕ್ತಾ ಇತ್ತು. ಮತ್ತೆ ಕಣ್ಣು ಮುಚ್ಚಿ ಆ ದ್ವನಿಯನ್ನೇ ಕೇಳುತ್ತಿದ್ದೆ. ಆ ಮಾತುಗಳು ಭಾಷಣ ಆಗಿರಲಿಲ್ಲ, ಆ ದ್ವನಿಯಲ್ಲಿ ತಾಕತ್ತು ಇತ್ತು, ಹೇಳುವ ಮಾತಿಗೆ ಸಿಕ್ಕಾಪಟ್ಟೆ ತೂಕ ಇತ್ತು. ಓದಿದ್ದು ತಲೆಗೆ ಹೋಗಿ ಕೂಡುತ್ತೆ ಆದರೆ ಆ ದ್ವನಿ ಹೇಳುವ ಪ್ರತಿ ಮಾತು ಹೃದಯಕ್ಕೆ ಹೋಗಿ ಅಲ್ಲಿ ಹಲವಾರು ದಿನಗಳಿಂದ ಮುಚ್ಚಿದ್ದ “ನಾಳೆ ಬಾ” ಅನ್ನುವ ಬಾಗಿಲನ್ನ ತಟ್ಟದೆ, ತಾನೇ ಒಳಗೆ ಹೋಗಿ ಕೂತಿತ್ತು. ನಿದ್ದೆ ಬಿಡಿ ಹುಬ್ಬಳ್ಳಿ ಬಂದದ್ದು ತಿಳಿಯದೇ ಕುಳಿತಿದ್ದ ನನ್ನನ್ನು ಯಾರೋ ನನ್ನ ಹೆಗಲ ಮುಟ್ಟಿ ಇಳಿಯಿರಿ ಅಂಥ ಸನ್ನೆ ಮಾಡಿದ್ದರು. ಅವತ್ತೇ ಮೊದಲನೇ ಸಾರಿ ಅನಿಸಿತ್ತು ಹುಬ್ಬಳ್ಳಿ ಇಷ್ಟು ಹತ್ತಿರ ಇದೇನಾ ಅಂಥ.

*****
ಫೆಬ್ರುವರಿ ತಿಂಗಳು ಹೂವುಗಳು ಸ್ವಲ್ಪ್ ತುಟ್ಟಿ. ಒಂದೇ ಗುಲಾಬಿ ಹೂವು ತೆಗೆದುಕೊಂಡು ಹೋದೆ. ಅಕ್ಕನ ಮಗಳು ಓಡಿ ಬಂದಳು, ಕೈಯಲ್ಲಿದ್ದ ಸ್ವೀಟ್ ಮತ್ತು ಗುಲಾಬಿ ಹೂವಿನ ಬ್ಯಾಗ್ ಕೆಳಗೆ ಇಟ್ಟು ಅವಳನ್ನೇ ಎತ್ತುಕೊಂಡೆ. ಹೋಗಿ ಸೋಫಾ ಮೇಲೆ ಕುಳಿತಿದ್ದೆ, ಹೊರಗಡೆ ಇದ್ದ ಬ್ಯಾಗನ ತೆಗೆದು ಗುಲಾಬಿ ಕೈಯಲ್ಲಿ ಹಿಡಿದು “ಮಾಮ, ಇದು ಯಾರಿಗೆ ಅಂಥ ಕೇಳಿದಳು”. ಅದು ನಾನು ಯಾರನ್ನ ತುಂಬಾ ಇಷ್ಟ ಪಡುತ್ತೇನೆ ಅವರಿಗೆ ಅಂಥ ಹೇಳಿ ಅಕ್ಕ ಕೊಟ್ಟ ನೀರನ್ನು ಕುಡಿದೆ. ಮುಂದಿನ ಮಾತಿಗೆ ರೆಡಿ ಆಗಿದ್ದ ನಮನಾ “ಇದನ್ನ ಪ್ಲೀಸ್ ನನಗೆ ಕೊಡು, ನಾನು ಒಬ್ಬರಿಗೆ ಕೊಡಬೇಕು. ಪ್ಲೀಸ್ ಮಾಮ” ಅಂಥ ತನ್ನ ಕೈಯಲ್ಲಿದ್ದ ಸ್ವೀಟ್ ಬ್ಯಾಗನ ಅವರ ಅಮ್ಮನ ಕೈಗೆ ಕೊಟ್ಟು, ಗುಲಾಬಿ ಹೂವನ್ನ ಫ್ರಿಡ್ಜ ನ ಕೋಣೆ ಒಂದರಲ್ಲಿ ಇಟ್ಟಳು.

ಊಟಾ ಆಯ್ತು, ಆಮೇಲೆ ನಮನ ಮತ್ತೆ ನಾನು ವಾಕಿಂಗ್ ನೆಪದಲ್ಲಿ ಹೊರಗೆ ಬಂದೆವು. ಮೂರು ಮನೆ ದಾಟಿ ನಾಲ್ಕನೆ ಮನೆ ಹತ್ತಿರ ಬರುತ್ತಿದ್ದ ಹಾಗೆ ನಮನ ನನ್ನ ಕೈ ಬಿಟ್ಟು ವಾಪಸ ಮನೆಗೆ ಓಡಿದಳು. ಮನೆಯಿಂದ ಹೊರ ಬರುವಾಗ ಕೈಯಲ್ಲಿ ಗುಲಾಬಿ ಹೂವು ಇತ್ತು. ಓಡಿ ಬಂದು ನಾಲ್ಕನೇ ಮನೆಗೆ ಹೋದಳು, ಆಂಟಿ ಅಂಥ ಚಿರು ದ್ವನಿಯಲ್ಲಿ ಒಳಗೆ ಹೋದವಳು, ಒಬ್ಬ ಮಹಿಳೆಯೊಂದಿಗೆ ಹೊರಗೆ ಬಂದಳು, ಅವಳ ಕೈಯಲ್ಲಿ ಇರುವ ಗುಲಾಬಿ ಆ ಮಹಿಳೆ ಕೈಯಲ್ಲಿ ಇತ್ತು. “ಮಾಮ ಬಂದನಾ ವಾಕಿಂಗ್ ಹೊಂಟಿವಿ ಟಾ ಟಾ” ಅಂಥ ಹೇಳಿ ಮತ್ತೆ ನನ್ನ ಕೈ ಹಿಡಿದು “ನಡಿ ಹೋಗೋಣ” ಅಂಥ ಹೇಳಿದಳು.

“ಯಾರು ಅವರ ನಿಮ್ಮ ಟೀಚರ್?” ಅಂಥ ಕೇಳಿದೆ.

“ಅಲ್ಲಾ ನಮ್ಮ ಆಯಾ ಆಂಟಿ”

“ಅವರಿಗೆ ಯಾಕೆ ಕೊಟ್ಟೆ ಹೂವನ”

“ಏ ಮಾಮ ಅವರ ಎಷ್ಟು ಚಲೋ ಅದಾರ ಗೊತ್ತನ ನಿನಗ, ನಮ್ಮ ಕ್ಲಾಸ್ ರೂಂ ಕ್ಲೀನ್ ಮಾಡ್ತಾರ,ನಾವು ಟಿಫನ್ ತಿಂದ ಮೇಲೆ ನಮ್ಮ ಬಾಕ್ಸ್ ನ ಅವರ ಪ್ಯಾಕ್ ಮಾಡಿ ಬ್ಯಾಗ್ ಗ ಹಾಕ್ತರ,ನಮಗ ಕಕ್ಕ ಬಂದರ ಅವರ ಕರಕೊಂಡು ಹೋಗ್ತಾರ. ನಂಗ್ ಅವರ ಅಂದರ ಬಹಳ ಇಷ್ಟ ಅದಕ ಅವರಿಗೆ ಗುಲಾಬಿ ಹೂವನ ಕೊಟ್ಟಿದ್ದ”

*****

ವಾಪಸ ಬರೋವಾಗ, ಬಸ್ ನಲ್ಲಿ ಫೋನ್ ಆನ್ ಮಾಡಿದೆ. ಬ್ಯಾಟರಿ ಕಡಿಮೆ ಇತ್ತು. ಹಾಡು ಕೇಳಿದ್ರೆ ಒಂದು ಗಂಟೆ ಬರಲ್ಲಾ ಅಂಥ ಕಣ್ಣು ಮುಚ್ಚಿದೆ. ಒಂದು ಗುಲಾಬಿ ಹೂವು ಕಣ್ಣು ಮುಂದೆ, ಯಾರಿಗೇ ಕೊಡಬೇಕು ಇದನ್ನ ಅನ್ನುವ ಯೋಚನೆ, ಮನದಲ್ಲಿ ಇದ್ದದ್ದು ಮೂರು ವಿಚಾರ. ಒಂದು ಗುಲಾಬಿ, ಉಡುಗೊರೆಯ ಒಂದು ರೂಪ, ಎರಡು ಒಂದು ವ್ಯಕ್ತಿತ್ವ, ನಾವು ಯಾರಿಗೆ ಉಡುಗೊರೆ ಕೊಡಬೇಕು?. ಮೂರನೆಯದು ಗುಲಾಬಿ ಕೊಟ್ಟಾಗ ಆಗುವ ಖುಷಿ.

ಅಪ್ಪ, ಅಮ್ಮ, ಅಕ್ಕ, ಅಣ್ಣ, ಪಕ್ಕದ ಮನೆಯ ಪ್ರಕಾಶ ಅಂಕಲ್ ಮಗಳು, ಕಾಲೇಜ್ ನಲ್ಲಿ ನನ್ನ ನೋಡಿದ ತಕ್ಷಣ ನಗುವ ಹುಡುಗಿ ಗೆ ಕೊಡಬೇಕಾ? ಇಲ್ಲಾ ಇವರಿಗೆ ಯಾವುದೊ ಒಂದು ರೀತಿಯಲ್ಲಿ ಥ್ಯಾಂಕ್ಸ್ ನ ನಾವು ಹೇಳಿರುತ್ತೇವೆ. ಆದರೆ ಈ ಸರಿ ಗುಲಾಬಿ ಕೊಡೋದು ವಿಶಿಷ್ಟ ವ್ಯಕ್ತಿತ್ವಕ್ಕೆ. ಕಣ್ಣಮುಂದೆ ಇರುವ ಗುಲಾಬಿ ಹೂವಿನ ಹಿಂದಿನಿಂದ ಒಂದು ಅಸ್ಪಷ್ಟ ಮುಖ, ಬೆಳಿಗ್ಗೆ ಕೇಳಿದ ದ್ವನಿಗೆ ಒಂದು ಭಾವ, ಆ ಮುಖದ ಪಕ್ಕಕ್ಕೆ ನಮನಾ, ಮೂರನೇಯ ಭಾವಕ್ಕೆ ಕಾಯ್ತಾ ಇದ್ದ ಹಾಗೆ ಎರಡು ದೇಹಗಳು, ಒಂದು ಪೊರಕೆ ಕೈಯಲ್ಲಿ ಹಿಡಿದು ನಿಂತಿತ್ತು, ಎರಡನೇ ದೇಹ “ಅಲ್ಲೇ ಇಟ್ಟು ಬಿಡಿ ಸರ್ ನಾವೇ ತಗೋತಿವಿ,ಇಲ್ಲೇ ವಾಸನಿ ಭಾಳ ಐತಿ”.

ಉತ್ತರ ಸಿಕ್ಕಿತ್ತು. ಆ ಸದೃಢ ಧ್ವನಿಗೆ ಮತ್ತು ನಮನಾಗೆ ಥ್ಯಾಂಕ್ಸ್ ಹೇಳಿ ಬಸ್ ಇಳಿದು ಮನೆ ಕಡೆ ಹೋಗುತ್ತಿದ್ದೆ. ರವಿ ಮತ್ತು ಜಗ್ಗು ಅಂಗಡಿ ಮುಂದೆ ನಿಂತಿದ್ರು, ಅವರ ಹತ್ತಿರ ಹೋದೆ “ನಾಳೆ ಮನೆ ಹತ್ತಿರ ಬನ್ನಿ ಸ್ವಲ್ಪ್ ಕೆಲಸ ಇದೆ” ಅಂಥ ಹೇಳಿದೆ. “ಇಲ್ಲಾ ಸರ್ ಇವತ್ತೆ ಎಲ್ಲಾ ಕೆಲಸ ಮುಗಿಸಿದಿವಿ” ಅಂಥ ಜಗ್ಗು ಹೇಳಿದ. ಅಷ್ಟರಲ್ಲೇ ರವಿ “ಬರತೆವೆ ಸರ್” ಅಂದ.

ಅಲ್ಲೇ ಇದ್ದ ಹೂವಿನ ಅಂಗಡಿಗೆ ಹೋಗಿ ಎರಡು ಗುಲಾಬಿ, ಪಕ್ಕದ ಬೇಕರಿಲಿ ಸ್ವಲ್ಪ್ ಸ್ವೀಟ್ ತಗೊಂಡೆ. ಅಷ್ಟರಲ್ಲೇ ರವಿ ಬೈಕ್ ಮೇಲೆ ಬಂದ “ಏನ್ ಸರ್,ಯಾರಿಗೆ ಸ್ವೀಟ್ ಗುಲಾಬಿ” ಅಂಥ ಕೇಳಿಶ್, ರವಿಯ ಫೋನ್ ರಿಂಗ ಆಯ್ತು “ಈ ಗುಲಾಬಿ ಹೂವು ನಿನಗಾಗಿ” ಅನ್ನೋ ಹಾಡು ಅವನ ರಿಂಗ್ ಟೋನ್. ಕಣ್ಣ ಸನ್ನೆಯಿಂದ ಫೋನ್ ತೋರಸಿದೆ. ಫೋನ್ ರಿಸೀವ್ ಮಾಡಿದ, ಒಂದು ಸ್ವೀಟ್ ಅವನ ಕೈಯಲ್ಲಿ ಇಟ್ಟು ಮನೆಗೆ ಬಂದೆ. ರವಿ ಒಂಥರಾ ಮುಖ ಮಾಡಿ ನನ್ನ ನೋಡಿದ. ಖುಷಿ ಮಿಶ್ರಿತ ಪ್ರಶ್ನಾರ್ಥಕ ಭಾವ ಅದು.

ಒಂದು ಸ್ವೀಟ್ ಗೆ ಆ ಭಾವ ಕೊಟ್ಟ ರವಿಗೆ ನಾಳೆ ಒಂದು ಗುಲಾಬಿ ಮತ್ತು ಸ್ವೀಟ್ ಕೊಟ್ಟು ಥ್ಯಾಂಕ್ಸ್ ಹೇಳಿದ್ರೆ ಯಾವ ಭಾವನೆ ನಾನು ನೋಡಬಹುದು? ಆ ಗುಲಾಬಿ ಗೆ ಆವಾಗ ಬೆಲೆ ಕೊಟ್ಟ ಹಾಗೆ ಅಗೋದು.ನಾನು ನಾಳೆ ಆ ಭಾವನೆ ನೋಡೋಕೆ ಕಾಯ್ತಾ ಇದ್ದೇನೆ,ನಿಮಗೂ ನನ್ನ ಹಾಗೆ ಅನಿಸಿದ್ದರೆ ಆ ಸದೃಡ ದ್ವನಿಗೊಂದು ಥ್ಯಾಂಕ್ಸ್ ಹೇಳಿ,ನಿಮ್ಮ ಸಮಾಜದಲ್ಲಿ ಇರುವ ರವಿ ಮತ್ತು ಜಗ್ಗುಗೆ ಕೃತಜ್ಞತೆ ಹೇಳಿ.

“ಈ ಗುಲಾಬಿ ಹೂವು ನಿಮಗಾಗಿ”

Anand RC

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post