X

ಅಂಬರ ಗುಬ್ಬಿಯ ಅವಿಶ್ರಾಂತ ಬದುಕು

ಹೊಸ ವರ್ಷದ ಪ್ರಾರಂಭ, ಎಂದಿಗಿಂತ ಚಳಿ ತುಸು ಜೋರೇ. ಮಳೆಯಾಗಿ ತಿಂಗಳುಗಳು ಉರುಳಿವೆ. ರಸ್ತೆ ಬದಿಯ ಮುಳಿಹುಲ್ಲು, ಸಣ್ಣ ಸಣ್ಣ ಪೊದೆಗಳು, ಕುರುಚಲು ಕಾಡುಗಳು ಒಣಗಿ, ಹಸಿರನ್ನು ಕಳೆದುಕೊಂಡಿವೆ, ಮಳೆಗಾಗಿ ಕಾಯುತ್ತಿವೆ. ಈ ಸಮಯದಲ್ಲಿ ಬೆಂಕಿ ಅನಾಹುತ, ಕಾಡ್ಗಿಚ್ಚು ಸಾಮಾನ್ಯ. ಹಲವೆಡೆ ಕಾಡ್ಗಿಚ್ಚಿನಿಂದ ಅಪಾಯ ಸಂಭವಿಸದಂತೆ ನಿಯಂತ್ರಿತ ಬೆಂಕಿ ಹಾಕಿ ಒಣ ಹುಲ್ಲನ್ನು ಉರಿಸುವುದೂ ಇದೆ. ಒಟ್ಟರೆ ಬೆಂಕಿ ಉರಿಯುವಾಗ ಆ ಒಣ ಹುಲ್ಲಿನ ಎಡೆಯಲ್ಲಿ ಸದ್ದಿಲ್ಲದೇ ಜೀವಿಸುತ್ತಿದ್ದ ಅನೇಕ ಕೀಟಗಳು ಸಾವಿರಾರು ಸಂಖ್ಯೆಯಲ್ಲಿ ಅಂಬರದೆಡೆಗೆ ಹಾರುತ್ತವೆ. ಈ ಸಂದರ್ಭವನ್ನು ನಿರೀಕ್ಷಿಸುತ್ತಾ ವರ್ಷವಿಡೀ ಅಂಬರದಲ್ಲಿ ಲಗುಬಗೆಯಿಂದ ಹಾರುತ್ತಿದ್ದವೋ ಎಂಬಂತೆ, ಹೊಸ ಜಾಗವನ್ನು ಅರಸಿ ಹಾರುವ ಸಾವಿರಾರು ಕೀಟಗಳನ್ನು ನಮ್ಮ ಇಂದಿನ ಕಥಾನಾಯಕ “ಅಂಬರಗುಬ್ಬಿಗಳ” ತಂಡ “SWALLOW ” (ನುಂಗುವುದು) ಮಾಡಿ ಬಿಡುತ್ತವೆ. ಎಂದೆಂದೂ ಎತ್ತರದಲ್ಲಿ ಹಾರುವ ಈ ಹಕ್ಕಿಗಳು ಅಂದು ಹತ್ತಿರದಲ್ಲಿ ಕಾಣುತ್ತದೆ. “SWALLOW” ಎಂಬ ಇಂಗ್ಲೀಷ್ ಹೆಸರು ರೀತಿಯಾಗಿಯೂ ಅನ್ವರ್ಥವಾಗಿಬಿಡುತ್ತದೆ.

ಪ್ಯಾಸೆರಿಫಾರ್ಮಿಸ್ ಗಣದ ಹಿರಂಡನಿಡೆ ಕುಟುಂಬಕ್ಕೆ ಸೇರಿದ ಕೀಟಾಹಾರಿ ಹಕ್ಕಿ ಈ ಅಂಬರ ಗುಬ್ಬಿ / SWALLOW. ಪ್ರಪಂಚದಾದ್ಯಂತ 80 ಬಗೆಯ ಸ್ವಾಲೋಗಳು ಲಭ್ಯ. ಸ್ವಾಲೋದೊಂದಿಗೆ ಮಾರ್ಟೀನ್ ಎಂಬ ಇನ್ನೊಂದು ಪ್ರಭೇದವೂ ಅದೇ ಕುಟುಂಬದ ಒಳಗೆ ಸೇರುತ್ತದೆ. ಹಾಗಾಗಿ swallow’s & Martien’s  ಎನ್ನುವುದು ಹೆಚ್ಚು ಸೂಕ್ತ.

ಅಂಬರ ಗುಬ್ಬಿಗಳು, ಗುಬ್ಬಿಯಷ್ಟೇ ಗಾತ್ರದಲ್ಲಿದ್ದು ದೇಹದ ಬಣ್ಣ ಗಾಢ ನೀಲಿ ಅಥವಾ ಕಂದು ಮಿಶ್ರಿತವಿರುತ್ತದೆ. ಹೊಟ್ಟೆಯ ಭಾಗ ಹೆಚ್ಚಿನ ಪ್ರಭೇದಗಳಲ್ಲಿ ಅಚ್ಚ ಬಿಳಿ. ಕಾಲು ಮತ್ತು ಬೆರಳುಗಳು ಬಲು ದುರ್ಬಲ. ಹಾಗಾಗಿ ಈ ಅಂಬರಗುಬ್ಬಿಗಳು ಎಂದೂ ನೆಲದಲ್ಲಿ ನಡೆದಾಡುವುದಿಲ್ಲ. ಕಾಲು ದುರ್ಬಲವಾದರೇನಂತೆ? ಪ್ರಕೃತಿಯು ಅದರ ರೆಕ್ಕೆಗಳಿಗೆ ಅಸಾಮಾನ್ಯ ಶಕ್ತಿ ತುಂಬುವ ಮೂಲಕ ಸರಿಪಡಿಸಿದೆ. ಉದ್ದ ಮತ್ತು ಚೂಪಾದ ರೆಕ್ಕೆಗಳು. ಇವುಗಳ ಬಾಲ ಉದ್ದವಿದ್ದು 12 ಗರಿಗಳಿಂದ ಕೂಡಿದೆ. ಅಲ್ಲದೆ ಎರಡು ಕವಲಾಗಿ ಭಾಗವಾಗಿದೆ. ಹಾಗಾಗಿ ಇವಕ್ಕೆ ಕವಲುತೋಕೆಗಳು ಎಂಬ ಅನ್ಯರ್ಥ ನಾಮವುಂಟು.

ಈ ಕವಲುತೋಕೆಗಳು ಪ್ರಪಂಚದ ಎಲ್ಲೆಡೆ ಲಭ್ಯ. ಮನುಷ್ಯನು ಎಲ್ಲೆಲ್ಲಿ ಜೀವಿಸುತ್ತಿರುವನೋ ಅಲ್ಲಿ ಈ ಕವಲುತೋಕೆಗಳನ್ನು ಕಾಣಬಹುದು. ಮನುಷ್ಯನಿಲ್ಲದ ಆರ್ಟಿಕಾ, ಅಂಟಾರ್ಟಿಕಾ ಮತ್ತು ಸಹರಾ ಮರುಭೂಮಿಯಲ್ಲಿ ಇವೂ ಇಲ್ಲ.

ಇನ್ನೂ ಪ್ರಿಯವಾದ ಸಂಗತಿಯಂದರೆ ಈ ಕವಲುತೋಕೆಗಳಲ್ಲಿ ಹೆಚ್ಚಿನವುಗಳು ನಮ್ಮ ನಿಮ್ಮ ಮನೆ ಗೋಡೆಗಳಲ್ಲಿ ತಮ್ಮ ಮನೆ ಮಾಡುತ್ತವೆ. ಮನುಷ್ಯ ಮತ್ತು ಕವಲುತೋಕೆಯ ನಿಕಟ ಸಂಬಂಧವು ಗ್ರೀಕ್ ಇತಿಹಾಸದಲ್ಲೂ ದಾಖಲೆಗೊಂಡಿದೆ. ಜಪಾನ್ ಮತ್ತು ಕೊರಿಯಾ ದೇಶಗಾಳಲ್ಲಿ ಈ ಕವಲುತೋಕೆಗಳು ನಮ್ಮ ಮನೆಗಳಲ್ಲಿ ಗೂಡು ಕಟ್ಟಿದರೆ ಶುಭ ಚಿಹ್ನೆ ಎಂಬ ಭಾವವಿದೆ, ಇವುಗಳು ಮನೆಯ ಗೋಡೆಯಲ್ಲದೆ, ಕಲ್ಲುಬಂಡೆಗಳಲ್ಲಿ ಅಥವಾ ನದೀತೀರದಲ್ಲೂ ಗೂಡು ಮಾಡುತ್ತವೆ. ಅಂಬರಗುಬ್ಬಿಗಳು ಗೂಡು ನಿರ್ಮಿಸಲು ಹಸಿ ಮಣ್ಣನ್ನು ತಮ್ಮ ಜೊಲ್ಲಿನೊಂದಿಗೆ ಕಲಸಿ, ಮನೆಯ ಗೋಡೆಗೋ, ಕಲ್ಲು ಬಂಡೆಗೋ ಅಂಟಿಸುತ್ತವೆ. ಹೀಗೆ ಅಂಟಿಸಿದ ಮಣ್ಣಿನಿಂದ ಕಪ್ (ಕುಡಿಕೆ) ಆಕಾರದ ಗೂಡು ನಿರ್ಮಾಣ ಮಾಡುತ್ತವೆ. ಹಾಗಾಗಿ ಇದನ್ನು ಸಂಸ್ಕೃತದಲ್ಲಿ ಭಾಂಡೀಕ ಎಂದು ಕರೆಯುವರು. ಮಣ್ಣಿನಿಂದ ಮಾಡಿದ ಮಡಿಕೆಗೆ ಭಾಂಡ ಎಂದು ಹೆಸರು. ಹಾಗಾಗಿ ಇದು ಭಾಂಡೀಕ.

ಹೀಗೆ ಮಾಡಿದ ಮಣ್ಣಿನ ಮನೆಗೆ ಹುಲ್ಲು ಮತ್ತು ಇತರೆ ಹಕ್ಕಿಗಳ ಗರಿಗಳಿಂದ ಅಲಂಕಾರ ಮತ್ತು ಮೊಟ್ಟೆ ಇಡಲು ಮೆದುವಾದ ಹಾಸಿಗೆ ಮಾಡುತ್ತವೆ. ಸಾಧಾರಣವಾಗಿ ಪ್ರತೀ ವರ್ಷ ಒಂದೇ ಪ್ರದೇಶದಲ್ಲಿ ಗೂಡು ಮಾಡುತ್ತವೆ. ಒಂದು ಪ್ರದೇಶದಲ್ಲಿ ಹಲವು ಅಂಬರ ಗುಬ್ಬಿಗಳು ಒಟ್ಟಿಗೇ ಗೂಡು ನಿರ್ಮಾಣ ಮಾಡುತ್ತವೆ.

ಹೆಣ್ಣು ಒಂದು ಸಲಕ್ಕೆ 3-6 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯೊಡೆದ 20-24 ದಿವಸಗಳಲ್ಲಿ ಮರಿಗಳು ಹಾರಲು ಶಕ್ತವಾಗುತ್ತವೆ. ಹಾರಿದ ಮರಿಗಳು ಮುಂದಿನ ಬಣಂತನದಲ್ಲಿ ತಮ್ಮ ಅಪ್ಪ ಅಮ್ಮರಿಗೆ ಸಹಾಯ ಮಾಡುತ್ತವೆ. ತಮ್ಮ ತಮ್ಮತಂಗಿಯರ ಪಾಲನೆಯಲ್ಲಿ ಸಹಕರಿಸುತ್ತವೆ. ಮಾನವನ ನಿಕಟ ಸಂಬಂಧವಿರುವ ಕವಲುತೋಕೆಗಳಿಗೆ ಮಾನವನಂತೆ ಉತ್ತಮ ಕೌಟುಂಬಿಕ ನಡೆವಳಿಕೆ ಇರುವುದರಿಂದ ನಮಗೆ ಈ ಗುಬ್ಬಿಗಳು ಇನ್ನಷ್ಟು ಹತ್ತಿರವಾಗಿಬಿಡುತ್ತವೆ. ( ಮಾನವರಲ್ಲಿ ಕೌಟುಂಬಿಕ ಸಂಬಂಧಗಳು ಕ್ಷೀಣಿಸುತ್ತಿರುವ ಈ ದಿನಗಳಲ್ಲಿ ಕವಲುತೋಕೆ ಮತ್ತೆ ಬಾಣದ ಗುರಿಯಲ್ಲಿ ನಮಗೊಂದು ದಾರಿ ತೋರೀತು.)

ಕವಲುತೋಕೆಗಳು ಬೆಳಿಗ್ಗೆ ಹಾರಲು ಶುರುಮಾಡಿದರೆ ಇನ್ನು ರಾತ್ರಿಯೇ ವಿಶ್ರಾಂತಿ. ತುಂಬ ದಣಿದಾಗ ಸಣ್ಣ ರೆಂಬೆಗಳಲ್ಲಿ ಅಥವಾ ವಿದ್ಯುತ್ ತಂತಿಗಳಲ್ಲಿ ಒತ್ತು ಒತ್ತಾಗಿ ಕೂರುವುದನ್ನು ಕಾಣಬಹುದು.

ಸದಾ ಹಾರುವ ಈ ಹಕ್ಕಿಗಳು ಎಂಥಾ ಗಾಳಿಯ ರಭಸಕ್ಕಾದರೂ ಜಗ್ಗುವುದಿಲ್ಲ. ಗಾಳಿಯ ವಿರುದ್ಧ ದಿಕ್ಕಿನಲ್ಲಿ ಕೂಡಾ ಇವು ಚಲಿಸಬಲ್ಲವು, ಅಷ್ಟು ಸಧೃಢ ಇವುಗಳ ರೆಕ್ಕೆ. ಹಾರಿಕೊಂಡೇ ಇವುಗಳ ಬೇಟೆ. ಕೀಟಗಳನ್ನು ಹಿಡಿಯಲು ಸಹಕಾರಿಯಾಗುವಂತಿದೆ ಇದರ ಬಾಯಿ. ಸಣ್ಣದಾದರೂ ಅಗಲವಾದ ಬಾಯಿ ಇರುವುದರಿಂದ ಒಮ್ಮೆಲೇ ತುಂಬ ಆಹಾರವನ್ನು ನುಂಗಲು ಸಹಕಾರಿ. ದಿನವೊಂದಕ್ಕೆ 400ಕ್ಕೂ ಮಿಕ್ಕಿ ಕೀಟಗಳನ್ನು ತಿನ್ನುತ್ತವೆ. ಹೀಗೆ ತಿಂದು ತಿಂದು ಕೀಟ ನಿಯಂತ್ರಣ ಮಾಡುವುದರಿಂದ ಮತ್ತೊಮ್ಮೆ ಇದು ಮಾನವ ಸ್ನೇಹಿ ಎಂದು ನಿರೂಪಿಸುತ್ತದೆ.

ಮಳೆಗಾಲ ಮುಗಿದು ಚಳಿಗಾಲದ ಪ್ರಾರಂಭದಲ್ಲಿ ಇವು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಬೇಸಿಗೆ ಮುಗಿದು ಮಳೆಗಾಲದ  ಪ್ರಾರಭಕ್ಕಾಗುವಾಗ ತೀರಾ ಕಡಿಮೆ ಸಂಖೆಯಲ್ಲಿರುತ್ತವೆ, ಮಳೆಯ ನಿರೀಕ್ಷೆಯಲ್ಲಿರುತ್ತವೆ. ಹಾಗಾಗಿ ಇವನ್ನು ಪೂರ್ವಜರು ಮಳೆಗಾಲದ ಸಂಕೇತವಾಗಿಯೂ ಕಂಡರು. ಇವೂ ಕೂಡಾ ಚಾತಕ ಪಕ್ಷಿ ಎಂದು ಕರೆಯಲ್ಪಟ್ಟಿತು.

ಮಳೆ-ಬೆಳೆಯು ಕೈ ಕೊಟ್ಟು, ರೈತ ತಾ ಕಂಗೆಟ್ಟು, ದೃಷ್ಟಿಯನು ಅಂಬರಕೆ ನೆಟ್ಟಿರಲಲ್ಲಿ ಅಂಬರ ಗುಬ್ಬಿಯಾದರೂ ಎಲ್ಲಿ? ಎಂಬಲ್ಲಿ ಆ ರೈತನು ಕಾಯುತಿಹನು ಮಳೆಗಾಗಿ ಚಾತಕ ಪಕ್ಷಿಯಂತೆನ್ನುವನು ಕವಿಯಾದವನು.

ಈ ಹಕ್ಕಿಗಳು ಕಾಣದಿರದ ಸಮಯದಲ್ಲಿ ಮಣ್ಣಿನೊಳಗೆ ನಿಶ್ಚೇಷ್ಟ (Hibernate) ಸ್ಥಿತಿಯಲ್ಲಿರುತ್ತವೆ ಎಂದು ಮೊದಲು ಊಹಿಸಲಾಗಿತ್ತು. ಚಳಿಗಾಲದಲ್ಲಿ ಮಣ್ಣು ಬಗೆದು ಹೊರಬರುತ್ತವೆ ಎಂಬ ಗ್ರಹಿಕೆ ಇತ್ತು. ಆದರೆ ಅದು ವಲಸೆ ಪ್ರಕ್ರಿಯೆ ಎಂಬುದು ಈಗ ಸಾಬೀತಾಗಿದೆ. ( ವಲಸೆ ಬಗೆಗೆ ಇನ್ನಷ್ಟು ಮಾಹಿತಿಗಾಗಿ ಓದಿ )

ಭಾರತದಲ್ಲಿ ಸುಮಾರು 15 ಪ್ರಭೇದದ ಸ್ವಾಲೋ ಮತ್ತು ಮಾರ್ಟೀನ್‍ಗಳು  ಲಭ್ಯ. ಅವುಗಳಲ್ಲಿ ಕೆಲವು ನಮ್ಮಲ್ಲಿನ ಚಳಿಗಾಲದ ಅತಿಥಿಗಳು, ಅವು ಯಾವುದು? ಅವುಗಳ ವಿಶೇಷತೆ ಏನು? ನಮ್ಮಲ್ಲಿನ ಪ್ರಭೇದಗಳು ಹೇಗೆ ಗೂಡು ಮಾಡುತ್ತವೆ? ಮರಿಗಳಿಗೆ ಹೇಗೆ ಉಣಿಸುತ್ತವೆ? ಓದಿ ಮುಂದಿನ ವಾರ.

ಚಿತ್ರಗಳು: ಡಾ.ಅಭಿಜಿತ್ ಎ.ಪಿ.ಸಿ. , ವಿಜಯಲಕ್ಷ್ಮಿರಾವ್, ವಿನೀತ್‍ಕುಮಾರ್, ಸಹನಾ ಮೈಸೂರು.

Facebook ಕಾಮೆಂಟ್ಸ್

Dr. Abhijith A P C: ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .
Related Post