ನಾಲಕ್ಕು ತಿಂಗಳ ಹಿಂದೆ “ಇದರಲ್ಲಡಗಿಹುದು ಅಡಕೆ ಬೆಳೆಗಾರರ ಭವಿಷ್ಯ” ಎಂಬ ಲೇಖನದಲ್ಲಿ ನಿವೇದನ್ ನೆಂಪೆಯವರ ಅರೆಕಾ ಟೀ ಆವಿಷ್ಕಾರದ ಕುರಿತು ಬರೆದಿದ್ದೆ. ನಿಜ ಹೇಳಬೇಕಾದರೆ, ಈ ಆವಿಷ್ಕಾರ ಮಾರಕಟ್ಟೆಗೆ ಬರುತ್ತದೆಯೋ? ಇಲ್ಲಾ ಬರೀ ಪ್ರಶಸ್ತಿ ಸಮ್ಮಾನಗಳಿಗೆ ಸೀಮಿತವಾಗುವ ಒಂದು ಸಾಮಾನ್ಯ ಪ್ರಾಜೆಕ್ಟ್ ವರ್ಕಿನಂತಾಗುತ್ತದೆಯೋ ಎಂಬುದರ ಬಗ್ಗೆ ನನಗೆಯೇ ಅನುಮಾನಗಳಿದ್ದವು. ಖುಷಿ ಕೊಡುವ ವಿಚಾರ ಅಂದ್ರೆ ನನ್ನ ಈ ಎಲ್ಲಾ ಅನುಮಾನಗಳಿಗೆ ತೆರೆ ಬೀಳ್ತಾ ಇದೆ. ನಿವೇದನ್’ರವರು ಆವಿಷ್ಕರಿಸಿದ ಅರೆಕಾ ಟಿ ತೆರೆಯಿಂದ ಆಚೆಗೆ ಬರುತ್ತಿದೆ.
ಹೌದು ನಿವೇದನ್’ರವರ ಭಗೀರಥ ಪ್ರಯತ್ನ ಫಲ ಕೊಡುವ ಹಂತಕ್ಕೆ ಬಂದಿದೆ. ಈ ಉತ್ಪನ್ನವನ್ನು ಜನರಿಗೆ ತಲುಪಿಸಿಯೇ ಸಿದ್ಧ ಎನ್ನುವುದು ನಿವೇದನ್’ರ ಹಠವಾಗಿತ್ತು. ಮೊದಲ ಭಾರಿಗೆ ಇಂತಹಾ ಒಂದು ಉತ್ಪನ್ನವನ್ನು ಅವರು ಪರಿಚಯಿಸಿದಾಗ ಏನಪ್ಪಾ ಇದು? ಅಂತಾ ಎಲ್ಲರೂ ಹುಬ್ಬೇರಿಸಿದ್ದರು. ಇದ್ಯಾವುದೋ ಲೋಕಲ್ ಪ್ರಾಡಕ್ಟ್ ಅಂತ ಮೂಗು ಮುರಿದವರೂ ಇದ್ದರು. ಇದರ ಟೇಸ್ಟ್ ನ್ಯಾಚುರಲ್ ಚಹಾದ ಥರ ಬರಬಹುದಾ? ಅದೇ ಕಿಕ್ ಇದರಲ್ಲೂ ಇರಬಹುದಾ? ರೇಟ್ ಎಷ್ಟಿರಬಹುದು? ಎಂಬಿತ್ಯಾದಿ ತರಹೇವಾರಿ ಡೌಟುಗಳೂ ಭುಗಿಲೆದ್ದಿದ್ದವು. ಇವೆಲ್ಲಕ್ಕೂ ಉತ್ತರ ನಾಳೆ ಸಿಗುತ್ತಿದೆ.
ಒಬ್ಬ ಸಾಧಾರಣ ಯುವಕ ಆಸ್ಟ್ರೇಲಿಯಾದಲ್ಲಿ ಸಿಕ್ಕಿದ್ದಂತಹ ನೌಕರಿಯನ್ನು ಬಿಟ್ಟು ಸ್ವಂತ ಉದ್ಯಮ ಮಾಡುತ್ತೇನೆ ಎನ್ನುತ್ತಾ ಹುಟ್ಟೂರಿಗೆ ಬರುವುದು ಸಣ್ಣ ಮಾತೇನಲ್ಲ. ಹೀಗೆ ಯಾರಾದರು ಮಾಡಿದರೆ “ಅವನಿಗೆ ಮರುಳು” ಎನ್ನುವವರೇ ಹೆಚ್ಚು. ಪ್ರತಿಭೆ ಎಲ್ಲರಲ್ಲೂ ಇರಬಹುದು. ಹಣವೂ ಸಹ ಇರಬಹುದು. ಆದರೆ ಪ್ರತಿಭೆ ಮತ್ತು ಹಣ ಎರಡನ್ನು ಹೊಂದಾಣಿಸಿಕೊಂಡು ಹೊಸತೇನನ್ನಾದರೂ ಸಾಧಿಸಿಯೇ ಸಾಧಿಸುತ್ತೇನೆ ಎನ್ನುವ ಛಲ ಮತ್ತು ಧೈರ್ಯ ಕೆಲವೇ ಕೆಲವರಲ್ಲಿ ಮಾತ್ರ ಇರುತ್ತದೆ. ಅದರಲ್ಲೂ ಇಂತಹಾ ಹೊಸ ಸಾಹಸಗಳನ್ನು ಮಾಡುವಾಗ ಬರುವ ಅಡೆತಡೆಗಳು ನೂರಾರು. ಲೇಬರ್ ಸಮಸ್ಯೆಯಿಂದ ಹಿಡಿದು, ಸ್ಥಳೀಯ ಸಂಸ್ಥೆಗಳಿಂದ ಲೈಸೆನ್ಸ್ ಪಡೆದುಕೊಳ್ಳುವುದು, ಆಹಾರ ಇಲಾಖೆಯ ಅನುಮತಿ ಪಡೆಯುವುದು ಇತ್ಯಾದಿ ಇತ್ಯಾದಿ ಹತ್ತಾರು ಅಗ್ನಿ ಪರೀಕ್ಷೆಗಳು. ಲಾಭ ನಷ್ಟಗಳ ಲೆಕ್ಕಾಚಾರವನ್ನು ಮಾಡಿಕೊಂಡೇ ಹೊರಡಬೇಕಾದ ಇಂತಹಾ ಬ್ಯುಸಿನೆಸ್ ಮಾಡುವ ಮೊದಲೇ ಮನಸ್ಸು ಗಟ್ಟಿ ಮಾಡಿಕೊಳ್ಳಬೇಕಾಗುತ್ತದೆ. ಈ ಅಗ್ನಿಪರೀಕ್ಷೆಗಳನ್ನೆಲ್ಲಾ ಹಂತಹಂತವಾಗಿ ಪಾಸಾಗಬೇಕಾದರೆ ಅವನಲ್ಲಿ ಎಂದೂ ಕುಂದದ ಆಸಕ್ತಿ ಇರಬೇಕು. ತನ್ನು ಗುರಿಯೆಡೆಗಿನ ನಿರ್ಧಿಷ್ಟವಾದ ದೂರದೃಷ್ಟಿ, ಧೈರ್ಯ ಮತ್ತು ಛಲವಿರಬೇಕು. ಅವೆಲ್ಲವನ್ನೂ ಸಮಯೋಚಿತವಾಗಿ ಬಳಸಿಕೊಂಡಿರುವ ನಿವೇದನ್’ರವರು ತಮ್ಮ ಕನಸಿನ ಕೂಸನ್ನು ಮಾರುಕಟ್ಟೆಗೆ ಬಿಡಲು ತುದಿಗಾಲಲ್ಲಿ ನಿಂತಿದ್ದಾರೆ.
ಕಳೆದ ವಾರವಷ್ಟೇ ಪ್ರದಾನಿ ಮೋದಿ ತಮ್ಮ ಮಹತ್ವಾಕಾಂಕ್ಷೆಯ ಸ್ಟಾರ್ಟ್ ಆಪ್ ಇಂಡಿಯಾಕ್ಕೆ ಚಾಲನೆ ನೀಡಿದ್ದಾರೆ. ದೇಶದ ಯುವಕರು ಉದ್ಯೋಗಕ್ಕಾಗಿ ಚಡಪಡಿಸದೆ ಸ್ವ ಉದ್ಯೋಗವನ್ನು ಸ್ಥಾಪಿಸಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಲು ಪ್ರೋತ್ಸಾಹ ನೀಡುವುದೇ ಸ್ಟಾರ್ಟ್ ಆಪ್ ಇಂಡಿಯಾ ಯೋಜನೆಯ ಉದ್ದೇಶ. ಕುತೂಹಲದ ಸಂಗತಿಯೆಂದರೆ ಪ್ರಧಾನಿಯವರು ಈ ಸ್ಟಾರ್ಟ್ ಆಪ್ ಇಂಡಿಯಾಕ್ಕೆ ಚಾಲನೆ ನೀಡುವ ವರ್ಷಕ್ಕೂ ಮೊದಲೇ ನಿವೇದನ್’ರವರು ತಮ್ಮ ಅರೆಕಾ ಟೀಗೆ ಚಾಲನೆ ನೀಡಿದ್ದರು. ಅದೂ ಸಹ ಯಾವುದೇ ಸರಕಾರದ, ಸಂಘ ಸಂಸ್ಥೆಗಳ ಹಣಕಾಸಿನ ನೆರವಿಲ್ಲದೆ! ಅದಕ್ಕಿಂತಲೂ ದೊಡ್ಡ ಸಾಧನೆಯೆಂದರೆ ಈ ಅರೆಕಾ ಟಿ ಮಾರುಕಟ್ಟೆಗೆ ಬರುವ ಮುನ್ನವೇ “ಮೇಕ್ ಇನ್ ಇಂಡಿಯಾ”ದ ಇನ್ನೋವೇಟಿವ್ ಪ್ರಾಡಕ್ಟ್ ಆಫ್ ದ ಇಯರ್-2015” ಪ್ರಶಸ್ತಿಯನ್ನು ಗಳಿಸಿದ್ದು. ಬಿಡುಗಡೆಯೇ ಆಗದ ಸಿನೆಮಾವೊಂದು ಫಿಲಂ ಫೇರ್ ಪ್ರಶಸ್ತಿ ಗಳಿಸಿದ್ದನ್ನು ನಾವು ನೋಡಿದ್ದೇವೆ. ಆದರೆ ಇನ್ನೂ ಮಾರುಕಟ್ಟೆಗೆ ಬರದ ಉತ್ಪನ್ನವೊಂದು ಇಂತಹಾ ಪ್ರಶಸ್ತಿಯನ್ನು ಗಳಿಸಿದ್ದು ಇದೇ ಮೊದಲುಇರಬೇಕು.!
ಇದರ ನಂತರ ನಿವೇದನ್ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಹಲವಾರು ಸಂಘ ಸಂಸ್ಥೆಗಳಿಂದ ಬಂದ ಪ್ರಶಂಸೆಯ ಸುರಿಮಳೆಯಿಂದಾಗಿ ತನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಾ ‘ಅರೆಕಾ ಟೀ’ಉತ್ಪಾದನೆಯತ್ತ ಗಮನ ಹರಿಸಿದರು. ಕೋಟಿಗೂ ಮಿಕ್ಕಿ ಹಣ ಹೂಡಿ, ಮಿಷನರಿಗಳನ್ನು ಹಾಕಿಸಿಕೊಂಡು ಫ್ಯಾಕ್ಟರಿಯನ್ನು ನಿರ್ಮಾಣ ಮಾಡಿದರು. ಕೆಲವರಿಗೆ ಉದ್ಯೋಗವನ್ನೂ ನೀಡಿದರು. ಉತ್ಪಾದನೆಗೆ ಬೇಕಾಗಿದ್ದ ಬೇಸ್’ನ್ನು ಸೆಟ್ ಮಾಡಿಕೊಂಡು ದೇಶಾದ್ಯಂತ ಮಾರ್ಕೆಟಿಂಗ್’ಗಾಗಿ ಅಲೆದು, ಗಣ್ಯ ವ್ಯಕ್ತಿಗಳು, ವಿಜ್ಞಾನಿಗಳ ಬೆಂಬಲವನ್ನು ಪಡೆದುಕೊಂಡು ಈಗ ಅರೆಕಾ ಟಿ ಜೊತೆಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಲಂಡನ್ ಮೂಲದ ಕಂಪೆನಿಯೊಂದು ನಿವೇದನ್’ರ ಈ ಯೋಜನೆಗೆ ನೂರು ಕೋಟಿ ಹೂಡಲು ಮುಂದೆ ಬಂದಿದೆ. ಶಿವಮೊಗ್ಗದ ಹಳ್ಳಿಮೂಲೆಯೊಂದರ ಯುವಕನ ಯೋಜನೆಗೆ ಲಂಡನಿನ ಕಂಪೆನಿ ನೂರು ಕೋಟಿ ರೂಗಳನ್ನು ಹೂಡಲು ಮುಂದೆ ಬಂದಿರುವುದು ಖಂಡಿತವಾಗಿಯೂ ಸಣ್ಣ ಮಾತೇನಲ್ಲ. ಆ ಪ್ರಾಡಾಕ್ಟ್’ನಲ್ಲಿ ಗುಣಮಟ್ಟವಿಲ್ಲದೇ ಇದ್ದರೆ ಅಂತಹ ದುಸ್ಸಾಹಸಕ್ಕೆ ಯಾರೂ ಮುಂದಾಗುವುದೂ ಇಲ್ಲ. ಆದರೆ ಇಲ್ಲೊಂದು ಕಾಂಪ್ಲಿಕೇಶನ್ ಇದೆ. ಏನಂದ್ರೆ, ನೂರು ಕೋಟಿ ರೂಗಳಿಗೆ ಲಂಡನಿನ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡರೆ ಮುಂದೆ ಈ ಪ್ರಾಡಕ್ಟ್ “ಮೇಡ್ ಇನ್ ಇಂಡಿಯಾ” ಆಗುವ ಬದಲು “ಮೇಡ್ ಇನ್ ಬ್ರಿಟನ್” ಆಗುವ ಸಾಧ್ಯತೆಯೂ ಇದೆ. ಅರೆಕಾ ಟೀಯು ಈಗಾಗಲೇ ‘ಮೇಕ್ ಇನ್ ಇಂಡಿಯಾ’ದ ಪ್ರಶಂಸೆಗೂ ಕಾರಣವಾಗಿರುವುದರಿಂದ ಅದನ್ನು “ಮೇಡ್ ಇನ್ ಬ್ರಿಟನ್” ಮಾಡಲು ನಿವೇದನ್’ರವರು ಸುತಾರಾಂ ಸಿದ್ಧರಿಲ್ಲ.
ನಿವೇದನ್’ರ ಈ ಆವಿಷ್ಕಾರಕ್ಕೆ ಪ್ರಶಸ್ತಿ ಬಂದಿರುವುದು ಮಾತ್ರವಲ್ಲ, ಅಡಕೆ ಬೆಳೆಗಾರರಿಗೆ ಸಂಜೀವಿನಿಯಾಗಿರುವ ಈ ಉತ್ಪನ್ನದ ಬಗ್ಗೆ ತಿಳಿದು ಎಂತೆಂತಾ ಗಣ್ಯ ವ್ಯಕ್ತಿಗಳೆಲ್ಲಾ ನಿವೇದನ್’ರನ್ನು ಕರೆದು ಬೆನ್ನು ತಟ್ಟಿದ್ದಾರೆ. ಅಡಕೆ ಬೆಳೆಗಾರರರ ಭವಿಷ್ಯದ ಬಗ್ಗೆ ಸದಾ ಚಿಂತಿತರಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಮೊದಲಿನಿಂದಲೂ ನಿವೇದನ್ ಬೆನ್ನಿಗೆ ನಿತ್ತಿದ್ದು, ಅವರ ಕೈಯಿಂದಲೇ ಅರೆಕಾ ಟೀ ಲೋಕಾರ್ಪಣೆಯಾಗುತ್ತಿದೆ. ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ರಾಜ್ಯ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಕೂಡಾ ನಿವೇದನ್ ಆವಿಷ್ಕಾರಕ್ಕೆ ಭೇಷ್ ಎಂದಿದ್ದಾರೆ. ಭಾರತ ರತ್ನ ಸಿ.ಎನ್.ಆರ್ ರಾವ್ ಅವರನ್ನು ಭೇಟಿಯಾದಾಗ “ಯಾವುದೇ ಪ್ರಾಡಕ್ಟ್’ಗಳು ಬರೀ ಸಂಶೋಧನೆಯಲ್ಲಿಯೇ ನಿಲ್ಲದೆ, ಅದು ರೈತರನ್ನು ತಲುಪಬೇಕು, ಅವಾಗಲೇ ನಮ್ಮ ಶ್ರಮ ಸಾರ್ಥಕ, ನಿನ್ನ ಶ್ರಮ ಸಾರ್ಥಕವಾಗುತ್ತಿದೆ ” ಅಂತ ಹೇಳಿ ಹರಸಿದ್ದಾರೆ. ದೂರದ ದುಬೈಯಲ್ಲಿರುವ ಕೋಟ್ಯಾಧಿಪತಿ ಉದ್ಯಮಿ ಬಿ.ಆರ್. ಶೆಟ್ಟಿ, ಅರೆಕಾ ಟೀ ಲೋಕಾರ್ಪಣೆಯಂದು ಬೇರಾವುದೇ ಕಾರ್ಯಕ್ರಮವಿದ್ದರೂ ಅದನ್ನು ರದ್ದು ಮಾಡಿ ದುಬೈಯಿಂದ ಬೆಂಗಳೂರಿಗೆ ಬರುತ್ತೇನೆ ಎಂದಿದ್ದಾರೆ. ಅವರು ಬರುತ್ತಾರೋ ಬಿಡುತ್ತಾರೋ, ಬೇರೆ ಪ್ರಶ್ನೆ. ಆದರೆ ಏನೋ ಸಾಧನೆ ಮಾಡಲು ಹೊರಟ ಯುವಕನೊಬ್ಬನಿಗೆ ಯಶಸ್ವೀ ಉದ್ಯಮಿಯೊಬ್ಬನ ಪ್ರಶಂಸೆಯ ಮಾತುಗಳೇ ಸಾಕಲ್ಲವೇ?
ಅಂತೂ “ಮೇಕ್ ಇನ್ ಇಂಡಿಯಾ” “ಮೇಡ್ ಇನ್ ಇಂಡಿಯಾ” ಮುದ್ರೆ ಹಾಕಿಸಿಕೊಳ್ಳುತ್ತಿದೆ. ಹಳ್ಳಿ ಹುಡುಗನೊಬ್ಬ ಅಡಕೆ ಬೆಳಗಾರರ ಭವಿಷ್ಯವಾಗುತ್ತಾನೆಂದರೆ ಅದಕ್ಕಿಂದ ಹೆಮ್ಮೆಯ ಸುದ್ದಿ ಮತ್ತೇನಿದೆ? ರೈತರು ಆತ್ಮಹತ್ಯೆಯ ದಾರಿ ಹಿಡಿದಿರುವ ಸಂಧಿಗ್ದ ಸಮಯದಲ್ಲಿ ಇನ್ನೂ ಹೆಚ್ಚು ಹೆಚ್ಚು ಇಂತಹ ಆವಿಷ್ಕಾರಗಳು ಮೂಡಿ ಬರಲಿ. ನಿವೇದನ್’ರವರ ಪ್ರಯತ್ನ ಅವರಿಗೆ ಫಲ ಕೊಡಲಿ, ಕಿಲ್ಲಿಂಗ್ ವೀರಪ್ಪನ್ ಸ್ಟೈಲ್’ನಲ್ಲಿ ಅಡಕೆ ಚಹಾವನ್ನು ಹೀರುವ ಭಾಗ್ಯ ನಮ್ಮದಾಗಲಿ.
Facebook ಕಾಮೆಂಟ್ಸ್