ಇಳಿಸಂಜೆಯ ಹೊತ್ತಿನಲ್ಲಿ ಆ ಚಿಕ್ಕ ಹಳ್ಳಿಯ ರೈಲು ನಿಲ್ದಾಣದ ಆವರಣದಲ್ಲಿ ಮೆಲ್ಲಗೆ ನಡೆದುಕೊಂಡು ಹೋಗುತ್ತಿದ್ದ ನವದಂಪತಿಗಳಿಗದು ಶೃಂಗಾರದ ಸಮಯ. ಉತ್ಕಟ ಪ್ರೇಮದಿಂದ ಅವರಿಬ್ಬರು ಒಬ್ಬರನ್ನೊಬ್ಬರು ಅಂಟಿಕೊಂಡಿದ್ದರು .ಅವನ ಕೈಗಳು ಆಕೆಯ ಸೊಂಟವನ್ನು ಬಳಸಿದ್ದರೆ. ಆಕೆ ಪ್ರೀತಿಯ ಅಭಿವ್ಯಕ್ತಿಯೆನ್ನುವಂತೆ ತನ್ನ ತಲೆಯನ್ನು ಅವನ ಭುಜಕ್ಕೆ ಆನಿಸಿಕೊಂಡೇ ನಡೆದುಬರುತ್ತಿದ್ದಳು. ಆಗಸದಲ್ಲಿ ತೇಲುತ್ತಿದ್ದ ಮೋಡಗಳ ನಡುವೆ ಸುಮ್ಮನೇ ಇಣುಕಿದ ಚಂದ್ರ ,ಇವರಿಬ್ಬರ ಪ್ರೀತಿಯನ್ನು ಕಂಡು ಮೋಡಗಳ ನಡುವೆ ತನ್ನ ಮುಖವನ್ನು ಮುಚ್ಚಿಕೊಂಡ. ಹುಡುಗಿಯ ಸೌಂದರ್ಯ ಮತ್ತು ತುಸು ಹೆಚ್ಚೇ ಎನಿಸುವಷ್ಟು ಎದ್ದು ಕಾಣುತ್ತಿದ್ದ ಅವಳ ಸ್ತ್ರೀತ್ವ ಚಂದ್ರನಲ್ಲೂ ಅಸೂಯೆ ಮೂಡಿಸಿತೇನೊ ಎನ್ನುವಂತೆ ಭಾಸವಾಗುತ್ತಿತ್ತು. ಮುಸ್ಸಂಜೆಯ ನಸುಗತ್ತಲಲ್ಲಿ ಹಿತವಾಗಿ ಬೀಸುತ್ತಿದ್ದ ತಂಗಾಳಿಯ ತುಂಬೆಲ್ಲ ಹರಡಿಕೊಂಡಿದ್ದ ಕಾಡುಹೂವೊಂದರ ನಸುಗಂಪು ,ಸಂಜೆಯನ್ನು ಇನ್ನಷ್ಟು ಕಾವ್ಯಾತ್ಮಕವಾಗಿಸಿತ್ತು. ನಡುನಡುವೆ ಕಾಡಿನಲ್ಲೆಲ್ಲೋ ಕೂಗುತ್ತಿದ್ದ ಹಕ್ಕಿಯ ದನಿಯೂ ಹಿತವಾಗಿ ಕೇಳಿಸುತ್ತಿತ್ತು.’ಓಹ್.! ಸಂಜೆಯೆನ್ನುವುದು ಎಷ್ಟು ಸುಂದರವಲ್ಲವೇ ಸಾಶಾ’, ಎಂದು ಮೆಲ್ಲಗೆತನ್ನ ಗಂಡನ ಕಿವಿಯೊಳಗೆ ಉಸುರಿದಳು ಬೆಡಗಿ .’ಒಂದು ಚಂದದ ಕನಸಿನಂತಿದೆ ನೋಡು ಈ ವಾತಾವರಣ.ಅಲ್ಲಲ್ಲಿ ಕಾಣುವ ಪೊದೆಗಳು,ರೈಲಿಹಳಿಗಳ ಪಕ್ಕಕ್ಕೆ ಅಷ್ಟಷ್ಟು ದೂರಕ್ಕೆ ನಿಲ್ಲಿಸಲಾಗಿರುವ ಉದ್ದನೆಯ ಲೋಹದ ಕಂಬಗಳು ಎಲ್ಲವೂ ಅದ್ಭುತವೇ. ಮನುಕುಲದ ಪ್ರಗತಿಯ ಪ್ರತೀಕವಾಗಿರುವ ರೈಲು ಕೂಡ ಅಪರೂಪದ ಸೌಂದರ್ಯವತಿ. ದೂರದಲ್ಲೆಲ್ಲೋ ಬರುತ್ತಿರುವ ರೈಲಿನ ಶಿಳ್ಳೆಯ ಶಬ್ದವನ್ನು ನಮ್ಮ ಕಿವಿಗೆ ತಲುಪಿಸುವ ಗಾಳಿಯದ್ದೂ ಒಂದು ಬಗೆಯ ಸೊಗಸಾದರೆ,ಈ ಸಂಜೆಯ ತಂಪಿನಲ್ಲಿ ಆ ಶಬ್ದವನ್ನು ಕೇಳುವುದು ಸಹ ಎಷ್ಟು ಹಿತವಾಗಿದೆ ಅಲ್ಲವೇ..’? ಎಂಬ ಪ್ರಶ್ನೆ ಆಕೆಯದ್ದು.’ನಿಜ ನಿಜ,ಆದರೆ ಇಂದೇಕೆ ನಿನಗಿಷ್ಟು ಭಾವುಕತೆ..?? ನೋಡು ,ನಿನ್ನ ಅಂಗೈ ಸಹ ನಿನ್ನ ಉತ್ಸುಕತೆಯಿಂದ ಬಿಸಿಯಾಗಿ ಹೋಗಿದೆ.ಇರಲಿ,ರಾತ್ರಿ ಭೋಜನಕ್ಕೆ ಏನಾದರೂ ವ್ಯವಸ್ಥೆ ಮಾಡಿದ್ದಿಯಾ ವಾರ್ಯಾ ’? ಎಂದು ಕೇಳಿದ ಸಾಶಾ ,ತನ್ನ ಮಡದಿಯನ್ನು. ’ಅದರ ಚಿಂತೆಯಿಲ್ಲ ಬಿಡು.ನಮ್ಮಿಬ್ಬರಿಗಾಗುವಷ್ಟು ದೊಡ್ಡದಾದ ಕೋಳಿಯ ಮಾಂಸ ಮತ್ತು ಹುರಿದ ಮೀನು ಮನೆಯಲ್ಲಿದೆ’ ಎಂದುತ್ತರಿಸಿದ ವಾರ್ಯಾಳ ಸಂತೋಷವನ್ನು ಕಂಡ ಚಂದಿರ ಪುನ: ಮೋಡಗಳ ಹಿಂದೆ ಮರೆಯಾದ. ಮನುಷ್ಯ ಸಂಬಂಧಗಳಲ್ಲಿನ ಉತ್ಕಟ ಪ್ರೇಮವನ್ನು ಕಂಡು ಅವನಿಗೆ ತನ್ನ ಏಕಾಂಗಿತನದ ನೋವು ಚುಚ್ಚಿದಂತಾಗಿರಬೇಕು.’ಅಲ್ನೋಡು ಸಾಶಾ,ರೈಲು ಬರುತ್ತಿದೆ,ಎಷ್ಟು ಚಂದ ಅಲ್ಲವಾ ರೈಲು..?’ ಸಂತೋಷದಲ್ಲಿ ಸಣ್ಣಗೆ ಕಿರುಚಿದಳು ವಾರ್ಯಾ. ಕೊಂಚ ದೂರದಲ್ಲಿಯೇ ಹೊಗೆಯಾಡಿಸುತ್ತ ಉಗಿಬಂಡಿ ಬರುತ್ತಿರುವುದು ಗೋಚರಿಸುತ್ತಿತ್ತು. ಪ್ಲಾಟಫಾರ್ಮಿನ ಸಮೀಪಕ್ಕೆ ಬಂದಂತೆಲ್ಲ ರೈಲಿನ ವೇಗ ನಿಧಾನವಾಗತೊಡಗಿತು.ನಿಲ್ದಾಣದ ಕಚೇರಿಯಲ್ಲಿ ಕುಳಿತಿದ್ದ ರೈಲು ನಿಲ್ದಾಣಾಧಿಕಾರಿ,ರೈಲನ್ನು ಸಮೀಪಿಸಿದ.ರೈಲುಬಂಡಿಯನ್ನು ಪ್ಲಾಟ್ ಫಾರ್ಮಿನ ಮೇಲೆ ನಿಲ್ಲಿಸುವುದರ ಸೂಚಕವಾಗಿ ಕೆಂಪುದೀಪದ ಸಿಗ್ನಲ್ಲುಗಳು ಗೋಚರಿಸಲಾರಂಭಿಸಿದವು. ’ಒಮ್ಮೆ ರೈಲಿನ ಒಳಹೊಕ್ಕು ,ಒಂದು ಸುತ್ತು ಸುತ್ತಿ,ಮನೆಯತ್ತ ಹೊರಡೋಣ ’ಎನ್ನುತ್ತ ಒಮ್ಮೆ ಬೆಕ್ಕಿನಂತೆ ಆಕಳಿಸಿದ ಸಾಶಾ.’ ನಿಜಕ್ಕೂ ನನಗೆ ಇದೆಲ್ಲ ಕನಸಿನಂತಿದೆ ವಾರ್ಯಾ,ನಿನ್ನನ್ನು ಮದುವೆಯಾಗಿ ನಿನ್ನೊಂದಿಗೆ ಕಳೆಯುತ್ತಿರುವ ಅನುಕ್ಷಣವೂ ನನಗೊಂದು ಸುಂದರ ಸ್ವಪ್ನದಂತೆಯೇ ಭಾಸವಾಗುತ್ತಿದೆ ಕಣೊ’ ಎಂದ ಸಾಶಾನ ಮಾತುಗಳಲ್ಲಿಯೇ ಪ್ರೀತಿ ರಸಧಾರೆಯಂತೆ ಜಿನುಗುತ್ತಿತ್ತು.
ದೊಡ್ಡ ಕರಿಯ ರಾಕ್ಷಸನಂತಿದ್ದ ರೈಲು,ತನ್ನ ವೇಗವನ್ನು ತಗ್ಗಿಸುತ್ತ,ಮಂದಗತಿಯಲ್ಲಿ ತೆವಳುತ್ತ ನಿಲ್ದಾಣದ ಹಳಿಗಳ ಮೇಲೆ ಸ್ಥಬ್ದವಾಯಿತು.ಅರೆಬರೆ ನಿದ್ದೆಯಲ್ಲಿದ್ದ ಪ್ರಯಾಣಿಕರು,ಕಣ್ಣುಜ್ಜಿಕೊಳ್ಳುತ್ತ,ನಿಧಾನವಾಗಿ ತಮ್ಮತಮ್ಮ ಆಸನಗಳಿಂದ ಎದ್ದುನಿಲ್ಲುತ್ತಿರುವುದು,ರೈಲಿನ ಕಿಟಕಿಗಳಿಂದ ಗೋಚರಿಸುತ್ತಿತ್ತು. ಸಂಜೆಯ ಮಬ್ಬುಗತ್ತಲಿನಲ್ಲಿ ಉಗಿಬಂಡಿಯನ್ನೇ ದಿಟ್ಟಿಸುತ್ತ ಮೈಮರೆತಿದ್ದ ದಂಪತಿಗಳು ವಾಸ್ತವಕ್ಕೆ ಮರಳಿದ್ದು ’ಅರೆರೇ..!! ವಾರ್ಯಾ ಮತ್ತು ಸಾಶಾ ನಮ್ಮನ್ನು ಕರೆದೊಯ್ಯಲು ನಿಲ್ದಾಣಕ್ಕೆ ಬಂದಿದ್ದಾರೆ,ವಾರ್ಯಾ,ವಾರ್ಯಾ ಇಲ್ನೋಡು’ ಎಂಬ ಕೂಗನ್ನು ಕೇಳಿದಾಗಲೇ.ಹಾಗೊಂದು ಅನಿರೀಕ್ಷಿತ ಕರೆಯ ದನಿ ಯಾರದ್ದೆನ್ನುವುದನ್ನು ಗಮನಿಸುವಷ್ಟರಲ್ಲಿಯೇ,ರೈಲಿನ ಬೋಗಿಯೊಂದರಿಂದ ಓಡಿಬಂದ ಇಬ್ಬರು ಪುಟ್ಟ ಬಾಲಕಿಯರು ,ವಾರ್ಯಾಳನ್ನು ಬಿಗಿದಪ್ಪಿಕೊಂಡರು.ಬಾಲಕಿಯರ ಹಿಂದೆಯೇ ಸ್ಥೂಲಕಾಯದ ಮಹಿಳೆ ಮತ್ತು ಚೂಪುಮೀಸೆಯ ಮಧ್ಯವಯಸ್ಕ ವ್ಯಕ್ತಿಯೊಬ್ಬ ನಡೆದು ಬರುತ್ತಿರುವುದನ್ನು ಗಂಡಹೆಂಡತಿಯಿಬ್ಬರೂ ಗಮನಿಸಿದರು.ಅವರ ಹಿಂದೆ ಇನ್ನಿಬ್ಬರು ಬಾಲಕರು ಬೆನ್ನ ಮೇಲೆ ಪಾಟಿಚೀಲವನ್ನು ಹೇರಿಕೊಂಡು ಓಡುತ್ತ ಬರುತ್ತಿದ್ದರು.ಇವರೆಲ್ಲರ ಹಿಂದೆ ಒಬ್ಬ ಅಜ್ಜಿ ಮತ್ತವಳ ಪರಿಚಾರಿಕೆ ನಿಧಾನವಾಗಿ ನಡೆದುಬರುತ್ತಿರುವುದು ಸಹ ದಂಪತಿಗಳ ಕಣ್ಣಿಗೆ ಬಿದ್ದಿತು.
’ನಮಗಾಗಿ ತುಂಬ ಹೊತ್ತು ಕಾದಿಯೇನೋ ಸಾಶಾ, ನಾವು ಬರುತ್ತಿರುವುದು ನಿನಗೆ ಹೇಗೆ ಗೊತ್ತಾಯಿತು..??ನಿನ್ನ ಮದುವೆಗೆ ಬರಲಿಲ್ಲವೆನ್ನುವ ಕೋಪವಿತ್ತಂತಲ್ಲ ನಿನಗೆ,ಹಾಗಾಗಿ ಹೀಗೊಂದು ಅಚ್ಚರಿಯ ಭೇಟಿಯನ್ನು ನಿರ್ಧರಿಸಿಕೊಂಡೆವು.ಮಕ್ಕಳೇ,ಎಲ್ಲರೂ ನಿಮ್ಮ ಸಾಶಾ ಮಾಮನಿಗೆ ಸಿಹಿ ಮುತ್ತೊಂದನ್ನು ನೀಡಿ ನೋಡೋಣ’ ಎನ್ನುತ್ತ ಮಕ್ಕಳನ್ನು ಹುರಿದುಂಬಿಸತೊಡಗಿದ, ಚೂಪುಮೀಸೆಯ ಆ ನಡುವಯಸ್ಕ,’ನಿಮ್ಮ ಜೊತೆ ತುಂಬ ದಿನ ಇರುವುದಕ್ಕಾಗುವುದಿಲ್ಲ ಕಣೋ,ಹೆಚ್ಚೆಂದರೆ ಮೂರ್ನಾಲ್ಕು ದಿನ ಅಷ್ಟೇ’ಎಂದು ಮುಗುಳ್ನಕ್ಕ.ಸಂಬಂಧಿಗಳ ಇಂಥದ್ದೊಂದು ಅನಿರೀಕ್ಷಿತ ಭೇಟಿಯಿಂದ ದಂಪತಿಗಳಿಗೆ ಅಕ್ಷರಶಃ ಸಿಡಿಲು ಬಡಿದ ಅನುಭವ. ಔಪಚಾರಿಕವೆನ್ನುವಂತೆ ಸಾಶಾ,ತನ್ನ ಮಾವನನ್ನು ತಬ್ಬಿಕೊಂಡಿದ್ದನಾದರೂ ಅವನ ಮನದ ತುಂಬೆಲ್ಲ ತನ್ನ ಚಿಕ್ಕ ಮನೆಯ ಚಿತ್ರಣವೇ ತುಂಬಿತ್ತು.ಇಬ್ಬರಿಗೆ ಮಾತ್ರ ಸಾಕಾಗುವಷ್ಟಿರುವ ಮನೆಯಲ್ಲಿ ಈಗ ಒಟ್ಟು ಹತ್ತು ಜನ ! ಅವರಿಗಾಗಿ ತಾನು ತನ್ನ ಹೆಂಡತಿ ಹೊಂದಿಕೊಳ್ಳಬೇಕು.ಮನೆಯಲ್ಲಿರುವ ಹಾಸಿಗೆ ದಿಂಬುಗಳನ್ನು ಬಂದಿರುವ ಅತಿಥಿಗಳಿಗೆ ಬಿಟ್ಟುಕೊಡಬೇಕು.ಮನೆಯಲ್ಲಿರುವ ಕೋಳಿಮಾಂಸ ಮತ್ತು ಹುರಿದ ಮೀನುಗಳನ್ನು ತಿಂದು ಹಾಕಲು ಈ ಮಕ್ಕಳೇ ಸಾಕು. ಅಷ್ಟೇ ಆಗಿದ್ದರೇ ಚಿಂತೆಯಿರಲಿಲ್ಲ,ಮಹಾ ತರಲೆ ಪಿಶಾಚಿಗಳಲ್ಲವೇ ಇವು? ನಮ್ಮ ಉದ್ಯಾನವನದಲ್ಲಿರುವ ಹೂವುಗಳನ್ನೆಲ್ಲ ಕಿತ್ತು,ವನವನ್ನು ಸ್ಮಶಾನವಾಗಿಸುವದಂತೂ ಖಚಿತ.ಮನೆಯ ತುಂಬೆಲ್ಲ ಈ ಹುಡುಗರು ಚೆಲ್ಲಿಬಿಡಬಹುದಾದ ಪೆನ್ನಿನ ಮಸಿ,ಅವರ ಹಿಂದೆಯೇ ಅವರಮ್ಮನ ದೊಡ್ಡ ಕಿರುಚಾಟ,ಮಾವನ ಗಹಗಹಿಸುವಿಕೆ,ಯಪ್ಪ..!!ಇನ್ನು ಕೆಲವು ದಿನಗಳ ಮಟ್ಟಿಗೆ ಮನೆಯೆನ್ನುವುದು ಪದಶಃ ನರಕವೇ ಎನ್ನುವ ಆಲೋಚನೆಯೊಂದು ಸುಳಿಯುತ್ತಲೇ ಸಾಶಾನ ಮನಸ್ಸಿನಲ್ಲೊಂದು ಅವ್ಯಕ್ತ ಅಸಹನೆ ಕುದಿಯಲಾರಂಭಿಸಿತು.
ಪಕ್ಕಕ್ಕೆ ತಿರುಗಿದ ಸಾಶಾ ಪತ್ನಿಯ ಕಿವಿಯಲ್ಲಿ ’ಥೂ,ಈ ಜನ ನಿನ್ನನ್ನು ನೋಡಲೆಂದೇ ಬಂದಿರುವುದು ನೋಡು’ಎಂದು ಸಿಟ್ಟಿನಿಂದ ಗೊಣಗಿಕೊಂಡ. ’ಅವರು ನಿನ್ನ ಸಂಬಂಧಿಗಳು ಸಾಶಾ,ಹೊತ್ತುಗೊತ್ತಿಲ್ಲದೇ ಬಂದಿದ್ದಾರೆ,ಸಂಸ್ಕಾರ ಹೀನರು’ಎಂದ ವಾರ್ಯಾಳಿಗೆ ಸಹ ಕೋಪ ಬಂದಿರುವುದನ್ನು ಸಾಶಾ ಗಮನಿಸಿದ. ಆದರೂ ಕೊಂಚ ಸುಧಾರಿಸಿಕೊಂಡ ವಾರ್ಯಾ,ಪ್ರಯತ್ನಪೂರ್ವಕವಾಗಿ ಮುಖದಲ್ಲೊಂದು ಮಂದಹಾಸವನ್ನು ತಂದುಕೊಂಡು,’ನಿಮ್ಮ ಆಗಮನ ನನಗೆಷ್ಟು ಸಂತಸ ತಂದಿದೆ ಗೊತ್ತಾ..’? ಎಂದಳು. ಮೋಡದಲ್ಲೆಲ್ಲೋ ಅಡಗಿದ್ದ ಚಂದಿರ ಸ್ಪಷ್ಟವಾಗಿ ಗೋಚರಿಸಲಾರಂಭಿಸಿದ್ದ.ಹಿತವಾದ ಬೆಳದಿಂಗಳ ಬೀರುತ್ತಿದ್ದ ಚಂದಿರ ಅವರಿಬ್ಬರ ಪಡಿಪಾಟಲನ್ನು ಕಂಡು ನಸುನಗುತ್ತಿದ್ದನೇನೋ.ಸಾಶಾ ತನ್ನಲ್ಲಿ ಕುದಿಯುತ್ತಿದ್ದ ಅಸಹನೆ,ಕೋಪಗಳನ್ನು ಬಚ್ಚಿಟ್ಟುಕೊಳ್ಳಲು ಹರಸಾಹಸ ಪಡುತ್ತಿದ್ದ. ಸಂಬಂಧಿಗಳೊಡನೆ ರೈಲು ನಿಲ್ದಾಣದಿಂದ ಮನೆ ತಲುಪಿಕೊಂಡ ಸಾಶಾ,ಮನೆಯ ಬಾಗಿಲಲ್ಲಿ ನಿಂತು,ತನ್ನೆಲ್ಲ ಕೋಪವನ್ನು ನಿಯಂತ್ರಿಸಿಕೊಂಡು ,’ನಮ್ಮ ಪುಟ್ಟಮನೆಗೆ ನಿಮಗೆಲ್ಲ ಸ್ವಾಗತ’ ಎನ್ನುತ್ತ ಹುಸಿನಗೆಯೊಂದನ್ನು ಬೀರುತ್ತ ಮನೆಯ ಬಾಗಿಲನ್ನು ತೆರೆದು ಒಳ ನಡೆದ.ರಷ್ಯಾದ ಕತೆಗಾರ ಅಂತೋನ್ ಚೆಕಾಫ್ ಬರೆದ ’ಎ ಕಂಟ್ರಿ ಕಾಟೇಜ್’ಎನ್ನುವ ಸಣ್ಣಕತೆಯೊಂದರ ಅನುವಾದವಿದು.ಒಂದೆಡೆ ಕುಳಿತು ಓದಿದರೆ ಸರಿಯಾಗಿ ಐದು ನಿಮಿಷಗಳ ಕಾಲಾವಧಿಯಲ್ಲಿ ಮುಗಿದು ಹೋಗಬಹುದಾದ ಕತೆಯೊಳಗೆ ಅದೆಷ್ಟು ಭಾವಗಳನ್ನು ತುಂಬಿದ್ದಾನಲ್ಲವೇ ಕತೆಗಾರ..? ರೈಲು ನಿಲ್ದಾಣ,ತಂಗಾಳಿ ,ಬೀದಿಕಂಬಗಳು,ಕೊನೆಗೆ ಕುರುಚಲು ಪೊದೆಗಳಂತಹ ಸಾಮಾನ್ಯ ವಸ್ತುಗಳನ್ನು ಸಹ ಸುಂದರವಾಗಿ ಸೃಷ್ಟಿಸಿಕೊಡುವ ನವದಂಪತಿಗಳ ರಸಮಯ ಏಕಾಂತ, ಸಂಬಂಧಿಗಳ ಆಗಮನದಿಂದುಂಟಾಗುವ ರಸಾಭಾಸ,ತಮ್ಮ ಶೃಂಗಾರದಲ್ಲುಂಟಾಗುವ ಭಂಗದಿಂದ ಉಕ್ಕುವ ಕೋಪ,ಕೊನೆಗೊಮ್ಮೆ ಅನಿವಾರ್ಯವಾಗಿ ಎಲ್ಲವನ್ನು ಸಹಿಸಿಕೊಂಡು ಕಷ್ಟದ ನಗುವನ್ನು ಬೀರುವ ಅನಿವಾರ್ಯತೆ,ಅಬ್ಭಾ..!! ಮುಕ್ಕಾಲು ಪುಟದ ಸಣ್ಣದೊಂದು ಕತೆಯಲ್ಲಿ ಎಷ್ಟೆಲ್ಲ ಹೇಳಿಬಿಡುತ್ತಾನೆ ಚೆಕಾಫ್..!! ಸುಮಾರು ಏಳುನೂರು ಶಬ್ದಗಳಿಂದ ರಚಿಸಲ್ಪಟ್ಟ ಕತೆಯನ್ನು ಹೀಗೆ ಪರಿಣಾಮಕಾರಿ ಬರೆಯುವುದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಬರಹಗಾರನಾಗಿ ನನ್ನನ್ನು ತುಂಬ ಕಾಡಿದ್ದಿದೆ.’ಛೇ,ನನಗೇಕೆ ಈ ಮಹಾನ್ ಸಣ್ಣಕತೆಗಾರರಂತೆ ಕತೆಗಳನ್ನು ಬರೆಯಲಾಗುತ್ತಿಲ್ಲ’ ಎನ್ನಿಸಿದ್ದಿದೆ. ಸಾಧ್ಯವಾಗದಿದ್ದರೂ .ಬರೆಯಲು ಪ್ರಯತ್ನಿಸಿ , ಕತೆಗಳನ್ನು ಬರೆದು ,’ಚೆಕಾಫ್,ಹೆಮ್ಮಿಂಗ್ವೆಯ ಕತೆಗಳಿಗಿಂತ ಚೆನ್ನಾಗಿರುವ ಕತೆಯೊಂದನ್ನು ಬರೆದಿದ್ದೇನೆ’ ಎನ್ನುವ ಸುಳ್ಳು ಸಂತಸದ ಆಸರೆ ಪಡೆದಿದ್ದಿದೆ.ಕೊನೆಗೆ ಏನೇ ಹರಸಾಹಸಪಟ್ಟರೂ ಕಥಾಲೋಕದ ದಂತಕತೆಗಳಂತೆ ಬರೆಯುವುದು ಶಕ್ಯವಿಲ್ಲವೆನಿಸಿ ,ನನ್ನ ಭ್ರಮೆಯನ್ನು ಕಳೆದುಕೊಂಡು ಹೀಗೆ ಅನುವಾದಕ್ಕಿಳಿದ್ದಿದ್ದೇನೆ. ಆ ಮೂಲಕವಾದರೂ ಮಹಾನ್ ಕತೆಗಾರರ ಸಾಲಿನಲ್ಲಿ ನಿಲ್ಲುವ ಆಶಯ ನನ್ನದು. ಓದುಗ ಪ್ರಭುಗಳು ಒಪ್ಪಿಕೊಂಡರೆ ನನಗದೇ ಸಮಾಧಾನ.
ಗುರುರಾಜ್ ಕೊಡ್ಕಣಿ
gururaj_kodkani@rediffmail.com
Facebook ಕಾಮೆಂಟ್ಸ್