X
    Categories: ಅಂಕಣ

ಹೆಣ ಬಿದ್ದಾಗ ಗರಿಗೆದರುವುದು ರಣಹದ್ದುಗಳು ಮಾತ್ರ…

ಮತ್ತೊಂದು ಹೆಣ ಬಿದ್ದಿದೆ. ರೋಹಿತ್ ವೇಮುಲ ಎಂಬ ಯುವಕ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾಗೆ ತನ್ನ ಜೀವನ ಮುಗಿಸಿಕೊಳ್ಳುವ ಮೊದಲು “ನಾನು ಕಾರ್ಲ್ ಸಾಗಾನ್’ನಂಥ ಮಹೋನ್ನತ ವಿಜ್ಞಾನ ಬರಹಗಾರನಾಗಬೇಕೆಂದು ಕನಸು ಕಂಡಿದ್ದೆ. ನನ್ನ ಕನಸುಗಳೆಲ್ಲ ಮುರುಟಿಹೋದ ದುಃಖದಲ್ಲಿ ಸಾವಿಗೆ ಶರಣಾಗುತ್ತಿದ್ದೇನೆ” ಎಂದು ಮೃತ್ಯುಪತ್ರ ಬರೆದಿಟ್ಟಿದ್ದಾನೆ. ಧಾರವಾಡದಲ್ಲಿ ಕಲ್ಬುರ್ಗಿ ಹತ್ಯೆಯಾಗಿ ಮೂರು ತಿಂಗಳು ಆ ಹೆಣವನ್ನು ನೆಚ್ಚಿಕೊಂಡು ಚಪ್ಪರಿಸಿಕೊಂಡು ದಿನಗಳೆದ ಬುದ್ಧಿಜೀವಿಗಳಿಗೆ ತಮ್ಮ ಡೊಂಬರಾಟಕ್ಕೆ ಅನುಕೂಲವಾಗುವಂಥ ಮತ್ತೊಂದು ಸಾವು ಸಿಕ್ಕಿದ್ದು ದಾದ್ರಿ ಪ್ರಕರಣದಲ್ಲಿ. ಅದಾಗಿ ಮೂರು ತಿಂಗಳು ಕಳೆದ ಮೇಲೆ ಈಗ ರೋಹಿತ್ ವೇಮುಲನ ಹೆಣ ಸಿಕ್ಕಿದೆ. ಇಂಥದೊಂದು ಸಂದರ್ಭಕ್ಕೇ ಕಾಯುತ್ತಿದ್ದವರಂತೆ ಅಶೋಕ ವಾಜಪೇಯಿ ಎಂಬ ಸರಕಾರೀ ಸಾಹಿತಿ ತನ್ನ ಡಿಲಿಟ್ ಪದವಿಯನ್ನೂ ವಾಪಸು ಕೊಟ್ಟಾಯಿತು! ಇನ್ನೊಂದು ಅವಾರ್ಡ್ ವಾಪಸಿಗೆ ವೇದಿಕೆ  ಸೃಷ್ಟಿಯಾಗುವಂತೆ ಕಾಣುತ್ತಿದೆ.

ರೋಹಿತ್ ವೇಮುಲ ಇರಲಿ, ಆತನ ಶತ್ರುಗಳೇ ಇರಲಿ; ಯಾರಿಗೂ ಅಂಥದೊಂದು ಸಾವು ಬರಬಾರದು. ತನ್ನ ಜೀವವನ್ನು ಮುಗಿಸಿಕೊಳ್ಳುವ ಹಂತಕ್ಕೆ ಯಾರನ್ನೂ ಬದುಕು ನಿಷ್ಕರುಣಿಯಾಗಿ ತಳ್ಳಬಾರದು. ರೋಹಿತ್ ಬಹುಶಃ ನಮ್ಮ ನಿಮ್ಮಂತೆ ಹಲವು ಅಸಾಧ್ಯ, ಅತಾರ್ಕಿಕ ಕನಸುಗಳ ಬೆಟ್ಟವನ್ನೇ ಹೊತ್ತ ಬಿಸಿರಕ್ತದ ಹುಡುಗನಾಗಿರಬಹುದು. ಅಂಬೇಡ್ಕರ್, ಕಾರ್ಲ್ ಮಾರ್ಕ್ಸ್, ಗಾಂಧಿ ಮುಂತಾದ ವ್ಯಕ್ತಿಗಳ ಜೀವನ ಕತೆಗಳನ್ನು ಅವನು ನಿಜವಾಗಿಯೂ ಓದಿ ಅರ್ಥೈಸಿಕೊಂಡಿದ್ದರೆ ಅವನಿಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿ ಇರುತ್ತಿರಲಿಲ್ಲ. ಹಾಗಾಗಿ ಅಂಬೇಡ್ಕರ್ ಅವರ ಹೆಸರನ್ನು ರೋಹಿತ್ ಮತ್ತು ಅವನಂಥ ಹಲವು ಬಿಸಿರಕ್ತದ ತರುಣರು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಜ್ಞಾನಮಾರ್ಗ ಬಿಟ್ಟು ಬೇರೆಲ್ಲ ಕೆಲಸಗಳಿಗೆ ಬಳಸುತ್ತಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಉದಾಹರಣೆಗೆ ನೋಡಿ; ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಯಾಕೂಬ್ ಮೆನನ್ನ್ನು ಗಲ್ಲಿಗೇರಿಸಬಾರದು ಎಂದು ರೋಹಿತ್ ಸದಸ್ಯನಾಗಿದ್ದ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನೊಳಗೆ ಧರಣಿ ಕೂತಿತ್ತು. ಆ ಅಸೋಸಿಯೇಷನ್ನಿನ ಸದಸ್ಯರು ಹಿಡಿದಿದ್ದ ಬ್ಯಾನರ್’ಗಳಲ್ಲಿದ್ದ ಬರಹ ಏನು ಗೊತ್ತೆ? ” ತುಮ್ ಕಿತ್ನೆ ಯಾಕೂಬ್ ಮಾರೋಗೆ, ಹರ್ ಘರ್ ಸೆ ಯಾಕೂಬ್ ನಿಕ್ಲೇಂಗೆ” (ನೀವು ಎಷ್ಟು ಯಾಕೂಬ್’ರನ್ನು ಕೊಲ್ಲುತ್ತೀರೋ ಅಷ್ಟೇ ಯಾಕೂಬ್’ಗಳು ಪ್ರತಿ ಮನೆಯಿಂದ ಹೊರಬರುತ್ತಾರೆ). ಇದು ನಮ್ಮ ದೇಶದ ಯಾವ ರಾಷ್ಟ್ರನಾಯಕನ ಯಾವ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ?! ಯಾಕೂಬ್’ನನ್ನು ಬೆಂಬಲಿಸಿ ಇವರು ಮಾಡಿದ ಪ್ರತಿಭಟನೆಗೆ ಪ್ರತಿಯಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಇವರನ್ನು “ಹಾದಿ ತಪ್ಪಿದವರು” ಎಂದರು. ಅಂಬೇಡ್ಕರ್ ಅಸೋಸಿಯೇಷನ್ನಿನ ಸದಸ್ಯರು ವಿದ್ಯಾರ್ಥಿ ಪರಿಷತ್ತಿನ ಸದಸ್ಯರ ಮೇಲೆ ಏರಿಹೋದರು. ಎಬಿವಿಪಿ ಮುಖಂಡ ಸುಶೀಲ್ ಕುಮಾರ್ ಎಂಬವರು ಈ ಮಾರಾಮಾರಿಯಲ್ಲಿ ತೀವ್ರವಾಗಿ ಗಾಯಗೊಂಡರು. ಈ ಎಲ್ಲ ರಂಪ ರಾದ್ಧಾಂತಗಳನ್ನು ನೋಡಿದ ಮೇಲೆ ಬಿಜೆಪಿ ಮುಖಂಡ ಬಂಡಾರು ದತ್ತಾತ್ರೇಯ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆದು “ವಿಶ್ವವಿದ್ಯಾಲಯದೊಳಗೆ ನಡೆಯುತ್ತಿರುವ ಈ ಗೂಂಡಾ ಚಟುವಟಿಕೆಗಳನ್ನು ಹದ್ದುಬಸ್ತಿನಲ್ಲಿ ಇಡಬೇಕಾಗಿದೆ” ಎಂದು ವಿನಂತಿಸಿಕೊಳ್ಳಬೇಕಾಯಿತು.

ರೋಹಿತ್ ವೇಮುಲ ಕಾರ್ಲ್ ಸಾಗಾನ್’ನಂಥ ವಿಜ್ಞಾನ ಲೇಖಕನಾಗಲು ಬಯಸಿದ್ದನಂತೆ. ಆದರೆ ಆತನ ಜಾಲತಾಣದ ಬರಹಗಳನ್ನು ಓದುತ್ತ ಹೋದರೆ ಅಲ್ಲಿ ವಿಜ್ಞಾನ ವಿದ್ಯಾರ್ಥಿಯಲ್ಲ; ಬದಲು ಸಿದ್ಧಾಂತಗಳ ಅಮಲೇರಿ ದಾರಿತಪ್ಪಿದ ಹತಾಶ ರಾಜಕೀಯ ಪುಂಡನಷ್ಟೇ ನಮಗೆ ಕಾಣುತ್ತಾನೆ. ಒಮ್ಮೆ ಈತ ತನ್ನ ಕ್ಯಾಂಪಸ್ಸಿನಲ್ಲಿ ಎಬಿವಿಪಿಯ ಬ್ಯಾನರ್’ಗಳನ್ನು ಹರಿದೆಸೆದಿದ್ದ. ಅದನ್ನು ಪ್ರಶ್ನಿಸಿದಾಗ ಆತ ಹೇಳಿದ್ದು: “ಹಿಂದುತ್ವವನ್ನು ತೋರಿಸುವ ಕೇಸರಿ ಬಣ್ಣ ಎಲ್ಲೇ ಕಂಡರೂ ಹರಿದು ಹಾಕುತ್ತೇನೆ. ವಿಶ್ವವಿದ್ಯಾಲಯದಲ್ಲಿರಲಿ, ಹೊರಗಿರಲಿ, ಅಥವಾ ಮನೆಯಲ್ಲೇ ಆಗಲಿ! ಮನೆಯಲ್ಲಿ ಕೇಸರಿ ಬಣ್ಣದ ಸೀರೆ ಕಂಡರೂ ಹರಿದೆಸೆಯುತ್ತೇನೆ”. ಈ ಮಾತುಗಳನ್ನು ನೋಡಿದರೆ ರೋಹಿತ್’ನ  ತಲೆಯನ್ನು ಅತ್ಯಂತ ವ್ಯವಸ್ಥಿತವಾಗಿ ಬ್ರೇನ್ವಾಷ್ ಮಾಡಲಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ದಲಿತರು ಮೇಲ್ಜಾತಿಯ ದ್ವೇಷ ಕಟ್ಟಿಕೊಳ್ಳಲೇಬೇಕು; ಅವರನ್ನು ಮೇಲ್ಜಾತಿಯವರು ಶತಮಾನಗಳಿಂದ ತುಳಿಯುತ್ತಿದ್ದಾರೆ; ಅವರ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ ಎಂಬ ಓಬೀರಾಯನ ಕಾಲದ ಸಿದ್ಧಾಂತಗಳನ್ನು ಈ ಹಸಿಮಣ್ಣಿನಂಥ ಹುಡುಗರ ತಲೆಗಳಿಗೆ ತುಂಬಿ ಒಬ್ಬೊಬ್ಬರನ್ನೂ ಮಾನವ ಟೈಂಬಾಂಬ್’ಗಳಾಗಿ ರೂಪಿಸುವ ಒಂದು ದೊಡ್ಡ ವ್ಯವಸ್ಥಿತ ಜಾಲವೇ ಇದೆ. ಈ ಎಲ್ಲ ಸಂಚಿನ ಹಿಂದಿರುವವರು ಬುದ್ಧಿಜೀವಿ ಎಂಬ ಹೆಸರು ಹೊತ್ತ ರಾಷ್ಟ್ರಕಂಟಕಗಳು. ಇವರೆಲ್ಲರಿಗೂ ಅಂಬೇಡ್ಕರ್ ಎಪ್ಪತ್ತು ವರ್ಷಗಳ ಹಿಂದೆ ಬರೆದಿದ್ದ ಪುಸ್ತಕಗಳೇ ಅಕ್ಕಿಬೇಳೆ. ಅದರಾಚೆಗೆ ಈ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿದೆ; ದಲಿತರ ಜೀವನ ಉತ್ತಮಗೊಂಡಿದೆ ಎಂಬುದನ್ನು ಯಾವ ಕಾರಣಕ್ಕೂ ಒಪ್ಪಲು ತಯಾರಿಲ್ಲದ ಬಲವಂತದ ಕುರುಡರಿವರು. ತಮಾಷೆ ಎಂದರೆ, ದಲಿತರ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ವಾದ ಹೂಡುವ ನೂರಕ್ಕೆ ನೂರು ಬುದ್ಧಿಜೀವಿಗಳೂ, ದಲಿತ ಎಂಬ ಟ್ರಂಪ್’ಕಾರ್ಡ್ ಬಳಸಿಯೇ ಕಾಲೇಜು-ವಿವಿಗಳಲ್ಲಿ ಹಲವು ಹತ್ತು ಸೌಲಭ್ಯಗಳನ್ನು ಪಡೆದವರು; ನೌಕರಿಯಲ್ಲಿ ಮೇಲು ಮೇಲಕ್ಕೆ ಹೋದವರು! ದಲಿತ ಎಂಬ ಹೆಸರಲ್ಲಿ ಸಿಗುವ ಎಲ್ಲ ಸವಲತ್ತುಗಳನ್ನೂ ಪಡೆದೂ ತಮಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹೊಡೆಯುವ ಗೋಸುಂಬೆತನಕ್ಕೆ ಏನು ಹೇಳಬಹುದು!

ರೋಹಿತ್ ವೇಮುಲ ದಲಿತನಲ್ಲ; ಅವನು ಒಬಿಸಿ ಪಟ್ಟಿಯಲ್ಲಿ ಬರುವವನು. ನಿಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ನಮ್ಮ ಕುಟುಂಬದ ಜಾತಿ ಬದಲಾಯಿಸಬೇಡಿ ಎಂದು ವೇಮುಲನ ಮನೆಯವರು ಅಲವತ್ತುಕೊಳ್ಳುತ್ತಿದ್ದಾರೆ. ಅವನ ಖಾಸಾ ಸೋದರ ಚೈತನ್ಯ ಕುಮಾರ್, ವಡ್ಡೆರ ಎಂಬ (ಒಬಿಸಿ) ಜಾತಿಯವನು ಎಂದು ಗುರುತಿಸಿಕೊಂಡಿದ್ದಾನೆ. ರೋಹಿತ್ ಆತ್ಮಹತ್ಯೆ ಮಾಡಿಕೊಂಡ ಮೊದಲ ದಿನ ಆಂಧ್ರದ ಟಿವಿ ಚಾನೆಲ್ಲುಗಳಲ್ಲಾಗಲೀ ಪತ್ರಿಕೆಗಳಲ್ಲಾಗಲೀ ಆತ ದಲಿತ ಎಂಬ ಪ್ರಸ್ತಾಪವೇ ಇರಲಿಲ್ಲ. ಆದರೆ ಎರಡು ದಿನದ ಬಳಿಕ “ದ ಹಿಂದೂ” ಎಂಬ ಎಡಪತ್ರಿಕೆ “ದಲಿತ ವಿದ್ಯಾರ್ಥಿಯ ಅಮಾನವೀಯ ಆತ್ಮಹತ್ಯೆ” ಎಂದು ಹೆಡ್ಡಿಂಗ್ ಕೊಟ್ಟು ಪ್ರಚಾರ ಮಾಡಿತು ನೋಡಿ, ನಮ್ಮಲ್ಲಿನ ಬುದ್ಧಿಜೀವಿಗಳೆಂಬ ಸೆಗಣಿಹುಳುಗಳೆಲ್ಲ ತಟಕ್ಕನೆ ಎದ್ದುನಿಂತವು! ತಮ್ಮ ಕಾರ್ಯಸಾಧನೆಗಾಗಿ ಆತನ ಜಾತಿ ಬದಲಾಯಿಸುವುದು ಅವರಿಗೇನೂ ಕಷ್ಟದ ಕೆಲಸವಾಗಿರಲಿಲ್ಲ! ತನ್ನ ರಾಜ್ಯದಲ್ಲಿ ಸಾವಿರಕ್ಕೂ ಮಿಕ್ಕಿ ರೈತರು ಆತ್ಮಹತ್ಯೆ ಮಾಡಿಕೊಂಡರೂ ಇದುವರೆಗೆ ಒಮ್ಮೆಯೂ ಕಣ್ಣೀರು ಹಾಕದ; ಒಂದೇ ಒಂದು ಪೈಸೆ ಪರಿಹಾರ ಧನ ಕೊಡದ ನಮ್ಮ ಮಾನ್ಯ ಮುಖ್ಯಮಂತ್ರಿಗಳು ರೋಹಿತ್ ವೇಮುಲನ ಸಾವಿಗೆ ಮಮ್ಮಲ ಮರುಗಿದರು! ಅವರ ಸಲಹೆಗಾರನೋ ಒಂದು ಉದ್ದದ ಕಣ್ಣೀರ ಕಾವ್ಯವನ್ನೇ ಬರೆದುಹಾಕಿದರು. ಸಾಕ್ಷ್ಯಗಳಿಲ್ಲದೆ ಸುಳ್ಳುಕತೆಗಳನ್ನು ಹೆಣೆಯುವುದರಲ್ಲಿ ನಿಷ್ಣಾತರಾದ ನ್ಯಾಯವಾದಿಯೊಬ್ಬರು ರೋಹಿತ್ ಮೃತ್ಯುಪತ್ರದಲ್ಲಿ “ಹೇಳಿದ್ದಕ್ಕಿಂತ ಹೇಳದೆ ಉಳಿದದ್ದೇ ಹೆಚ್ಚು” ಎಂದು ಹೇಳುತ್ತ ತನ್ನದೇ ಕಲ್ಪನಾವಿಲಾಸವನ್ನು ಹರಿಯಬಿಟ್ಟು ಆ ಪತ್ರಕ್ಕೆ ಇನ್ನೊಂದೆರಡು ಪ್ಯಾರಾಗ್ರಾಫ್’ಗಳನ್ನು ಜಮೆ ಮಾಡಿದರು! ಇಂಥದೊಂದು ಅನುಕೂಲಸಿಂಧು ಸಾವಿಗೆ ಕಾಯುತ್ತಿದ್ದ ರಣಹದ್ದುಗಳಂತೆ ಬುದ್ಧಿಜೀವಿಗಳು ಕೇಕೆ ಹಾಕಿ ಕುಣಿದರು! ಎಂದಿನಂತೆ ಇವರ ಟೌನ್ಹಾಲ್  “ಓ”ರಾಟಕ್ಕೂ ವೇದಿಕೆ ಸಿದ್ಧವಾಯಿತು.

ರೋಹಿತ್ ತೀರಿಕೊಂಡಿದ್ದಾನೆ; ನಿಜಕ್ಕೂ ವಿಷಾದ ಪಡುವ ಸಾವು ನಿಜ. ಆದರೆ ಆ ಸಾವನ್ನು ಎನ್’ಕ್ಯಾಷ್ ಮಾಡಿಕೊಳ್ಳಲು ಬುದ್ಧಿಜೀವಿಗಳಿಗೆ ಪರ್ಮಿಟ್ ಕೊಟ್ಟವರು ಯಾರು? ಕಲ್ಬುರ್ಗಿ ಕೊಲೆಯಾದ ಅರ್ಧದಿನದಲ್ಲೇ ಅವರ ಕೊಲೆಯನ್ನು ಯಾರು ಹೇಗೆ ಯಾಕೆ ಮಾಡಿದರೆಂದು ಟಿವಿಯಲ್ಲಿ ಹೇಳಿ ಮಾನ ಕಳೆದುಕೊಂಡ ಬರಗೂರು ಥರದ ಎಡಬಿಡಂಗಿ ಸಾಹಿತಿಗಳನ್ನು ನಾವೀಗಾಗಲೇ ನೋಡಿದ್ದೇವೆ. ಕೊನೆಗೆ ಆ ಕೊಲೆಯನ್ನು ಏನೇನು ಮಾಡಿದರೂ “ಕೋಮುವಾದಿ”ಗಳ ತಲೆಗೆ ಕಟ್ಟಲು ಸಾಧ್ಯವಿಲ್ಲವೆಂದು ಗೊತ್ತಾದ ಮೇಲೆ ಅದಕ್ಕೂ ದಾದ್ರಿ ಕೊಲೆಗೂ ಅದೆಂತೋ ಸಂಬಂಧ ಕಲ್ಪಿಸಿ ಪ್ರಶಸ್ತಿ ವಾಪಸಿ ಎಂಬ ನಗೆಪಾಟಲು ಚಳವಳಿಯನ್ನು ಹಮ್ಮಿಕೊಂಡರು. ನಮ್ಮ ರಾಜ್ಯದಲ್ಲಿ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಈ “ಬುದ್ದುಜೀವಿ”ಗಳ ಆತ್ಮಸಾಕ್ಷಿ ಸತ್ತುಬಿದ್ದಿತ್ತೆ? ಕುಟ್ಟಪ್ಪನವರನ್ನು ಕಲ್ಲು ಹೊಡೆದು ಅನಾಗರಿಕವಾಗಿ ಕೊಂದಾಗ ಯಾವುದಾದರೂ ಬುದ್ಧಿಜೀವಿ ತುಟಿ ಪಿಟಿಕ್ ಎಂದದ್ದನ್ನು ಕೇಳಿದ್ದೀರಾ? ಪ್ರಶಾಂತ್ ಪೂಜಾರಿಯ ಬರ್ಬರ ಕೊಲೆಯಾದಾಗ ಈ ಕೆಂಬೂತಗಳು ಅದ್ಯಾವ ಪೊಟರೆಯಲ್ಲಿ ಅಡಗಿಕೊಂಡಿದ್ದವು? ಪಠಾಣ್’ಕೋಟ್’ನಲ್ಲಿ ನಮ್ಮ ಸೈನಿಕರನ್ನು ಭಯೋತ್ಪಾದಕರು ಕೊಂದರಲ್ಲ; ಆಗಿವರು ಎಲ್ಲಿ ಗುಳೆ ಹೋಗಿದ್ದರು? ಮಾಲ್ದಾ ಜಿಲ್ಲೆಯಲ್ಲಿ “ಬಾಂಧವರು” ಯರ್ರಾಬಿರ್ರಿಯಾಗಿ ಕಲ್ಲು ಬೆಂಕಿ ಬಾಂಬುಗಳನ್ನು ಎಸೆದು ರಾದ್ಧಾಂತ ಎಬ್ಬಿಸಿದಾಗ ನಮ್ಮ ಬುದ್ಧಿಜೀವಿ ಪಡೆ ಯಾವ ಹುಣಿಸೆಮರದಲ್ಲಿ ನೇತಾಡಿಕೊಂಡಿತ್ತು? ಅದೆಲ್ಲ ಬಿಟ್ಟುಬಿಡಿ ಸ್ವಾಮಿ, ಕಾಂಗ್ರೆಸ್ ಆಡಳಿತವಿದ್ದಾಗಲೇ ಅದೇ ಹೈದರಾಬಾದ್ ವಿವಿಯಲ್ಲಿ ಏಳು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರಲ್ಲ; ಆಗ ಬುದ್ಧಿಜೀವಿ ಗೂಬೆಗಳು ಕೂಗಿಕೊಂಡದ್ದನ್ನು ಕೇಳಿದ್ದೀರಾ? ಈ ಬುದ್ಧಿಜೀವಿಗಳ ಗೋಸುಂಬೆತನವನ್ನು ಕಂಡು “ಛೇ ಇದೂ ಒಂದು ಜನ್ಮವೆ?” ಎಂದು ಮಲದ ಹುಳುಗಳೂ ಅಸಹ್ಯಪಟ್ಟಾವೇನೋ.

ಇಂದು ನಮ್ಮ ದೇಶದ ಹೊಸ ಸಮಸ್ಯೆಯಾಗಿ ಉದ್ಭವಿಸುತ್ತಿರುವುದು ಬುದ್ಧಿಜೀವಿಗಳೆಂಬ ಭಯೋತ್ಪಾದಕರು ಮತ್ತು ಅವರು ಕಾಲೇಜು – ವಿವಿಗಳಲ್ಲಿ ಹುಟ್ಟುಹಾಕುತ್ತಿರುವ ಹಲವು ಸಂಘಟನೆಗಳು. ಹೈದ್ರಾಬಾದ್ ಕೇಂದ್ರೀಯ ವಿವಿಯಲ್ಲೇ ಪ್ರೊಗ್ರೆಸಿವ್ ಸ್ಟೂಡೆಂಟ್ ಯೂನಿಯನ್, ದಲಿತ್ ಸ್ಟೂಡೆಂಟ್ ಯೂನಿಯನ್, ಪ್ರೊಗ್ರೆಸಿವ್ ಥಿಯೇಟರ್ ಗ್ರೂಪ್, ಒಬಿಸಿ ಸ್ಟೂಡೆಂಟ್ ಯೂನಿಯನ್, ಎಸ್ಎಫ್ಐ, ಫುಲೆ ಸ್ಟಡಿ ಸರ್ಕಲ್ ಇತ್ಯಾದಿ ಹದಿನಾಲ್ಕು ಪುಂಡ ಗುಂಪುಗಳಿವೆಯಂತೆ. ಈ ಗುಂಪುಗಳ ಹೆಸರು ನೋಡಿದರೇ ಇವರ ಕಾರ್ಯಚಟುವಟಿಕೆಗಳು ಹೇಗಿರುತ್ತವೆ ಎಂದು ಅಂದಾಜಿಸಬಹುದು. ಶೈಕ್ಷಣಿಕ ಸಂಸ್ಥೆಗಳಲ್ಲಿ ಹೀಗೆ ಒಂದೊಂದು ಜಾತಿ – ಒಳಜಾತಿಗೂ ಪಂಗಡಗಳು ಬೇಕೆ? ಇವರಿಲ್ಲಿ ಕಲಿಯುವುದಕ್ಕೆ ಬಂದವರೋ ಇಲ್ಲಾ ಗುಂಪುಗಾರಿಕೆ ಮಾಡಿಕೊಂಡು ಶೈಕ್ಷಣಿಕ ವಾತಾವರಣ ಹಾಳುಗೆಡವಲು ಬಂದವರೋ? ಅಹಿಂಸೆಯೇ ಪರಮ ಧರ್ಮ ಎಂದ ಬೌದ್ಧಮತ ಸ್ವೀಕರಿಸಿದ ಅಂಬೇಡ್ಕರ್ ಅವರ ಹೆಸರಲ್ಲಿರುವ ಅಸೋಸಿಯೇಷನ್ ವಿವಿ ಕ್ಯಾಂಪಸ್ಸಿನಲ್ಲಿ ಬೀಫ್ ಫೆಸ್ಟಿವಲ್ ಮಾಡಿತ್ತು! ವಿವಿಗೆ ಹೊಸ ಉಪಕುಲಪತಿಗಳು ಆಯ್ಕೆಯಾಗಿ ಬಂದಾಗ ಇದೇ ರೋಹಿತ್ “ಅವನ್ಯಾರೇ ಆಗಿರಲಿ, ನಮ್ಮ ಪ್ರತಿಭಟನೆಗಳನ್ನು ಯಾವ ಕಾರಣಕ್ಕೂ ಮೆತ್ತಗಾಗಿಸಬಾರದು” ಎಂದಿದ್ದ! ಅಂದರೆ, ಸದಾ ಹೋರಾಟ ಹಾರಾಟ ಕಿರುಚಾಟ ಮಾಡಿಕೊಂಡು ದಿನಗಳೆಯುವುದೇ ವಿವಿ ಜೀವನ ಎಂದು ಆತ ಭಾವಿಸಿಕೊಂಡಿದ್ದನೆ? ರೋಹಿತ್ ವೇಮುಲ ಒಬ್ಬ ವಿಜ್ಞಾನದ ವಿದ್ಯಾರ್ಥಿ ಎಂಬುದಕ್ಕಿಂತಲೂ ಹೆಚ್ಚಾಗಿ ಇಂಥ ಹಲವು ಸಂಘಟನೆಗಳಲ್ಲಿ ಕಳೆದುಹೋದ ಮರಿ ರಾಜಕೀಯ ಪುಡಾರಿಯಾಗಿದ್ದ. ವಿವೇಕಾನಂದರ ಬಗ್ಗೆ ಬರೆದುಕೊಂಡಿದ್ದ ಕ್ಷುದ್ರ ಮಾತುಗಳನ್ನು ನೋಡಿದರೆ ಆತ ಬೌದ್ಧಿಕವಾಗಿ ಎಷ್ಟೊಂದು ತಿರುಚಲ್ಪಟ್ಟಿದ್ದ ಎಂಬುದನ್ನು ಅಂದಾಜಿಸಬಹುದು. ತಾನು ಏನೆಲ್ಲ ಸಾಹಸಗಳನ್ನು ಮಾಡಲುಹೋದರೂ ಇನ್ನೂ ರಾಜಕೀಯರಂಗದಲ್ಲಿ ಗುರುತಿಸಿಕೊಂಡಿಲ್ಲವಲ್ಲ ಎಂಬ ಹತಾಶೆಯೇ ಅವನಿಂದ ಆತ್ಮಹತ್ಯೆಯಂಥ ಗಂಭೀರ ತಪ್ಪನ್ನು ಮಾಡಿಸಿರಬಹುದು. ಇಂಥ ಹಲವು ಮುಗ್ಧ ಜೀವಗಳು ಸಿದ್ಧಾಂತಗಳ ವಿಷವನ್ನು ತಲೆಯಲ್ಲಿ ತುಂಬಿಸಿಕೊಂಡು ವಿವಿಯಂಥ ಪವಿತ್ರಸ್ಥಳವನ್ನು ತಮ್ಮ ಗೂಂಡಾಗಿರಿಯ ಆಡುಂಬೊಲವಾಗಿ ಮಾಡಿಕೊಳ್ಳಬಾರದೆಂದಿದ್ದರೆ, ಮಾನವ ಸಂಪನ್ಮೂಲ ಸಚಿವಾಲಯ ದೇಶದ ಎಲ್ಲ ವಿವಿಗಳಲ್ಲಿ ಎಲ್ಲ ಬಗೆಯ ಜಾತಿ ಗುಂಪುಗಳನ್ನೂ ನಿಷೇಧಿಸಬೇಕು. ಇಲ್ಲವಾದರೆ ಅಂಬೇಡ್ಕರ್, ಗಾಂಧಿ, ಫುಲೆಯಂಥ ಹೆಸರುಗಳನ್ನಿಟ್ಟುಕೊಂಡು ಎಲ್ಲ ಬಗೆಯ ಅಕ್ರಮ ಎಸಗುವುದಕ್ಕೂ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಜೊತೆಗೆ, ಈ ವಿವಿಗಳಲ್ಲಿ ವಿದ್ಯೆಯೊಂದನ್ನು ಹೊರತುಪಡಿಸಿ ಮಿಕ್ಕೆಲ್ಲವನ್ನೂ ಮಾಡಿ ಹೊರಬರುವ ವಿದ್ಯಾರ್ಥಿಗಳು ನಾಳಿನ ಬುದ್ಧಿಜೀವಿಗಳಾಗುವ ದುರಂತವನ್ನು ತಪ್ಪಿಸಲಿಕ್ಕಾದರೂ ವಿವಿಗಳ ಕ್ಯಾಂಪಸ್ಸುಗಳನ್ನು ಜಾತಿಮುಕ್ತವಾಗಿಡುವ ಅನಿವಾರ್ಯತೆ ಇದೆ.

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post