ಮೊನ್ನೆ ಹೊಸ ವರುಷ ಶುರುವಾದದ್ದು ಎಲ್ಲರಿಗೂ ಗೊತ್ತೇ ಇದೆ. ಮಾಸ್ಕೋನಲ್ಲಿ ಹೊಸ ವರುಷ ಅಂದ್ರೆ ಸಿಕ್ಕಾಪಟ್ಟೆ ಹುರುಪು. ಡಿಸೆಂಬರ್ ಕೊನೇ ವಾರದಿಂದಲೇ ತಯಾರಿಗಳು ಶುರುವಾಗಿ ಬಿಡ್ತಾವೆ. ಈ ಸಲವೂ ಭರ್ಜರಿ ತಯಾರಿ ನಡೆದಿತ್ತು. ಕಳೆದ ಬಾರಿ ಹ್ಯಾಗೋ ಮಾಡಿ ಡಿಸೆಂಬರ್ ೩೧ರ ರಾತ್ರಿ ನೆಮ್ಮದಿಯಾಗಿ ಮನೇಲಿ ನಿದ್ದೆ ಮಾಡಿದ್ದೆ. ಆದರೆ ಈ ಬಾರಿ ನನ್ನ ನಿದ್ದೆಗೆ ಸಂಚಕಾರ ಹಾಕಲೆಂದೇ ನನ್ ಸಹೋದ್ಯೋಗಿ ಬಾಸ್ ಡಿಸೆಂಬರ್ ಮೊದಲ್ನೇ ವಾರದಿಂದಲೇ ನಾನು ಈ ಬಾರಿ ಆತನ ಮನೆಗೆ ಹೋಗಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬೇಕೆಂದು ವರಾತ ತೆಗೆದುಬಿಟ್ಟಿದ್ದ. ನನಗೋ ಇದೆಲ್ಲ ಸುತಾರಾಂ ಇಷ್ಟವಿರಲಿಲ್ಲ, ಮೇಲಾಗಿ ನಾನು ಅರಸಿಕ, ಅಲ್ಕೋಹಾಲು-ಮಾಂಸ ಎರಡೂ ಮುಟ್ಟಲ್ಲ!! ಈ ಎರಡೂ ಇಲ್ಲದೆ ಯಾವ ರಷ್ಯನ್ ಕೂಡ ಜೀವಿಸಲಾರ. ಅಲ್ಲಿಗೆ ಹೋದಲ್ಲಿ ನನ್ನ ಮೂರು ಹೊತ್ತಿನ ಊಟ ನಾಸ್ತಿ ಎಂದು ತಿಳಿದೇ ನಾನು ಬರಲಾರೆ ಎಂದು ಅವನಿಗೆ ಹೇಳಿದ್ದೆ. ಹ್ಯಾಗಾದರೂ ಮಾಡಿ ತಪ್ಪಿಸಿಕೊಳ್ಳುವ ಎಂದು ಹೊಂಚು ಹಾಕಿದ್ದೆ. ಕೊನೆಗೆ ಅವನ ಅಳುಮೋರೆಯನ್ನು ನೋಡಲಾರದೆ ಒಲ್ಲದ ಮನಸ್ಸಿನಿಂದೆ ಒಪ್ಪಿಕೊಂಡೆ.
ಡಿಸೆಂಬರ್ ೩೧ ಬಂದೇ ಬಿಟ್ಟಿತ್ತು, ಇವನ ಫೋನ್ ಕರೆಗಳು ಬೆಳಗಾಗುವುದರೊಡನೆಯೇ ಶುರುವಾಗಿದ್ದವು. ಅಂತೂ ಇಂತೂ ಮಧ್ಯಾನ್ಹದ ಹೊತ್ತಿಗೆ ಮನೆ ಸೇರಿಯಾಗಿತ್ತು. ಅವನ ಪಾನ ಗೋಷ್ಠಿ ಆಗಾಗಲೇ ಚಾಲನೆಯಾಗಿತ್ತು. ಅಡುಗೆಮನೆಯಲ್ಲಿ ಅದೆಂತದೋ ಭಕ್ಷ್ಯಗಳ ತಯಾರಿ ನಡೆದಿತ್ತು. ಸರಿ ನಾನೇನು ಮಾಡುವುದು?? ಹ್ಯಾಗಿದ್ದರೂ ಇಂಟರ್ನೆಟ್ ಇತ್ತಲ್ಲ. ಯು-ಟ್ಯೂಬ್ ನಲ್ಲಿ ಅದೂ ಇದೂ ನೋಡಲು ಶುರು ಮಾಡಿದೆ. ಅದನ್ನೂ ಎಷ್ಟು ಹೊತ್ತು ಅಂತ ಮಾಡುವುದು. ಹೊಟ್ಟೆ ಚುರುಗುಟ್ಟುತ್ತಿತ್ತು, ಏನು ಮಾಡೋದು? ನಾನು ತಿನ್ನೋಅಂತಹ ಯಾವುದೇ ತಿನಿಸು ಅಲ್ಲಿ ಕಾಣಲಿಲ್ಲ. ಕೊನೆಗೆ ಒಂದಿಷ್ಟು ಹಣ್ಣಿನ ರಸ ಕುಡಿದು ಮತ್ತೆ ಕಂಪ್ಯೂಟರ್ ನ ಮೊರೆ ಹೊಕ್ಕೆ. ನಡುನಡುವೆ ಆ ನನ್ನ ಬಾಸ್’ನ ಹೊಸ ವರುಷಕ್ಕೆ ಸಂಬಂದಿಸಿದ ಬಗ್ಗೆ ಹುರುಕು-ಮುರುಕು ಆಂಗ್ಲದಲ್ಲಿ ವಿವರಣೆಗಳು ನುಸುಳುತ್ತಿದ್ದವು. ನಾನು ಅವಕ್ಕೆ ತೆಲೆಯಾಡಿಸುವುದು ಅವನು ಮತ್ತೇನೋ ಹೇಳುವುದು ಹೀಗೆ ನಡೆದಿತ್ತು. ಹಾಗೆಯೇ ಮಾತನಾಡುತ್ತ ಒಂದಿಷ್ಟೇನನ್ನೂ ತಿಂದು ಮಲಗೇ ಬಿಟ್ಟ ಆಸಾಮಿ. ನನ್ನ ಹೊಟ್ಟೆ ಕೇಳಬೇಕಲ್ಲ? ಕೊನೆಗೆ ಒಂದಿಷ್ಟು, ಸವತೆ, ಟೊಮ್ಯಾಟೋ, ಒಂದೆರಡು ತುಂಡು ಬ್ರೆಡ್ಡು ಸಿಕ್ತು ಅದನ್ನೇ ತಿಂದು ನನ್ನ ಹೊಟ್ಟೆ ಹೊರೆದುಕೊಳ್ಳಬೇಕಾಯಿತು.
ನಂಗೂ ಹಾಳೂ-ಮೂಳು ನೋಡಿ ಸಾಕಾಗಿತ್ತು. ಏನ್ ನೋಡೋದು ಅಂತ ಯೋಚಿಸುತ್ತಿದ್ದಾಗಲೆ, ಗೃಹಭಂಗ ನನ್ನ ತೆಲೆಯಲ್ಲಿ ಮಿಂಚಿ ಮರೆಯಾಗಿತ್ತು. ಸರಿ ಎಂದು ಹುಡುಕಲು ಹೊರಟೆ, ಕಾಸರವಳ್ಳಿಯವರ ಧಾರವಾಹಿ ಕ್ಷಣಾರ್ಧದಲ್ಲೇ ಸಿಕ್ಕಾಗ ಖುಷಿಯಾಗಿತ್ತು. ನಾನು ಬಯಸಿದ್ದು ಬರೀ ಅನ್ನವಷ್ಟೇ ಆದರೆ ಸಿಕ್ಕಿದ್ದು ಮೃಷ್ಟಾನ್ನ ಭೋಜನವೇ ಆಗಿತ್ತು. ಕೊನೆಗೂ ನನ್ನ ಬೇಸರ ಕಳೆಯುವ ಸಾಧನವೊಂದು ದೊರಕ್ಕಿತ್ತು. ಒಂದಾದ ಮೇಲೊಂದು ಕಂತುಗಳನ್ನ ನೋಡುತ್ತಾ ರಾತ್ರಿಯಾಗಿದ್ದೆ ತಿಳಿಯಲಿಲ್ಲ, ಅಷ್ಟರಲ್ಲಿ ಆ ಮಹಾನುಭಾವ ಎದ್ದು, ಊಟದ ಮೇಜನ್ನು ಸಿದ್ದಪಡಿಸಲು ಶುರು ಮಾಡಿದ್ದ, ಕೊನೆಗೂ ಅವರ ತಯಾರಿಗಳು ಮುಗಿದಿತ್ತು. ನಾನೂ ಎದ್ದು ಸ್ವಲ್ಪ ಸಹಾಯ ಮಾಡಿದ್ದೂ ಆಯಿತು. ಊಟದೊಂದಿಗೆ ಪಾನ ಗೋಷ್ಠಿ ಮತ್ತೆ ಶುರುವಾಯ್ತು. ನಂಗೆ ತಿನ್ನಲು ಒಂದಷ್ಟು ಹಣ್ಣುಗಳು, ಸಿಹಿ ತಿನಿಸುಗಳು ದೊರೆತವು. ಟಿವಿಯಲ್ಲಿ ಮಾಸ್ಕೋದ ವಿವಿಧೆಡೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳು ನೇರ ಪ್ರಸರಣವಾಗುತ್ತಿದ್ದವು, ಸಮಾನಾಂತರವಾಗಿ ಗಣಕದಲ್ಲಿ ಗೃಹಭಂಗ ಅವ್ಯಾಹತವಾಗಿ ಸಾಗಿತ್ತು. ಇನ್ನೇನು ಹನ್ನೆರಡು ಸಮೀಪಿಸುತ್ತಿದೆ ಎಂದಾಗ, ಟಿವಿ ಪರದೆಯ ಮೇಲೆ ಪುತಿನ್ ಕಾಣಿಸಿಕೊಂಡು ರಷ್ಯನ್ ನಲ್ಲಿ ಹೊಸ ವರುಷದ ಸಂದೇಶ ಕೊಡಲು ಶುರು ಮಾಡಿದಾಗ ಎಲ್ಲರೂ ಎದ್ದು ನಿಲ್ಲಲು ನಾನೂ ನನ್ನ ಗೃಹಭಂಗದಿಂದ ಹೊರಬಂದು ಅವರ ಜೊತೆಗೂಡಬೇಕಾಯಿತು. ಒಂದೆರಡು ನಿಮಿಷಗಳ ನಂತರ ರೆಡ್-ಸ್ಕ್ವೇರ್ ನಲ್ಲಿರೊ ದೊಡ್ಡ ಗಡಿಯಾರ ಹನ್ನೆರಡು ಗಂಟೆಗಳನ್ನ ಬಾರಿಸುವುದರೊಂದಿಗೆ ಕೋಣೆಯಲ್ಲಿ ಹರುಷ ಉಕ್ಕೇರತೊಡಗಿತು. ಹೊಸ ಶಾಂಪೇನ್ ಬಾಟಲಿಯಿಂದ ಮದಿರೆ ನೊರೆ ನೊರೆಯಾಗಿ ಗ್ಲಾಸ್’ಗಿಳಿಯಿತು ನಾನೂ ಅಲ್ಲೇ ಇದ್ದ ಕೋಕ-ಕೋಲಾವನ್ನು ನನ್ನ ಗ್ಲಾಸ್’ಗೆ ತುಂಬಿಸಿದೆ. ಚಿಯರ್ಸ್ ಹೇಳುವ ಮುನ್ನ, ನನ್ನ ಬಾಸ್ ಏನೋ ಹೇಳಲು ಶುರು ಮಾಡಿದ. ನನ್ನೆಡೆ ನೋಡುತ್ತಾ, ಕಳೆದ ವರುಷ ನಾವೆಲ್ಲರೂ ಅತ್ಯುತ್ತಮವಾಗಿ ಕೆಲಸ ಮಾಡಿದ್ದೇವೆ, ಈ ಹೊಸ ವರುಷದಲ್ಲಿ ಇನ್ನೂ ಒಳ್ಳೆಯ ಕೆಲಸಗಳನ್ನು ಮಾಡುವ ಎಂದು ಹೇಳಿ ಚಿಯರ್ಸ್ ಹೇಳಿದ್ದಾಯಿತು. ಸ್ವಲ್ಪ ಹೊತ್ತು ಕೂತು ಮತ್ತೊಂದಿಷ್ಟು ಹಣ್ಣು, ಸಿಹಿ ತಿನಿಸುಗಳನ್ನು ತಿಂದದ್ದಾಯಿತು, ಜೀವಂತವಾಗಿರಬೇಕಿತ್ತಲ್ಲ!! ಮತ್ತೆ ಗೃಹಭಂಗ ನನ್ನನ್ನು ಆಪೋಶನಗೈದಿತ್ತು. ಆದರೆ ಅವನು ಬಿಡಬೇಕಲ್ಲ, ಬನ್ನಿ ಎಲ್ಲರೂ ಇಲ್ಲೇ ಹತ್ತಿರದಲ್ಲಿ ನಡೆಯುತ್ತಿರುವ ಸಂಗೀತ ಕೂಟಕ್ಕೆ ಹೋಗೋಣವೆಂದು ಎಲ್ಲರನ್ನು ಹುರಿದುಂಬಿಸಿದ. ನಾನೂ ಹೊರಡಬೇಕಾಯಿತು, ಮಾಸ್ಕೊನಲ್ಲಿ ಆ ಸರಿರಾತ್ರಿ ಯಲ್ಲಿ ಹೊರ ಹೋಗಬೇಕಂದರೆ ಎಂಟೆದೆ ಇರಲೇ ಬೇಕು, ಸೆಕ್ಯುರಿಟಿ ಸಮಸ್ಯೆಯಲ್ಲ, ಮೈನಸ್ ೧೫ ರ ಆಸುಪಾಸಿನಲ್ಲಿ ಉಷ್ಣಾಂಶ!! ಈಗೀಗ ನನಗೆ ಹೊಂದಿಕೆಯಾಗಿಬಿಟ್ಟಿದೆ, ಅದರೂ ಚಳಿಯಲ್ಲಿ ಹೊರಗೆ ಹೋಗಿ ಕುಣಿಯುವುದು ಅಂದ್ರೆ ಸುಮ್ನೆ ತಮಾಷೆಯಲ್ಲ! ಇನ್ನೇನ್ ಮಾಡೋಕೆ ಆಗುತ್ತೆ ಅಂತ ಜೊತೆಗೆ ಹೋದೆ. ಅಲ್ಲೇ ಹತ್ತಿರದ ಸಮುದಾಯ ಭವನದ ಮುಂದುಗಡೆ ಒಂದು ದೊಡ್ಡ ಕ್ರಿಸ್ಮಸ್ ಮರವನ್ನು ಅಲಂಕರಿಸಿ ಇಟ್ಟಿದ್ರು, ಅದರ ಪಕ್ಕದಲ್ಲೇ ಒಂದಿಬ್ಬರು ರಷ್ಯನ್ ಗಳು ಸಂತಾಕ್ಲಾಸ್ ತರಹದ (ರಷಿಯದಲ್ಲಿ ಸಂತಾ ನನ್ನು ಡೆದ್ ಮರೂಜ್ ಅಂತ ಕರೀತಾರೆ, ಅಲ್ಲದೆ ಅವನಿಗೊಬ್ಬಳು ಚಿಕ್ಕ ಮೊಮ್ಮಗಳು, ಸ್ನಿಗುರಿಚ್ಕಾ ಅಂತನೂ ಜೊತೇಲೆ ಇರ್ತಾಳೆ.) ವೇಷ ತೊಟ್ಟು ಹಾಡು ಹೇಳುತ್ತಾ ಜನರನ್ನು ರಂಜಿಸುತ್ತಿದ್ದರು. ಜನ ಬಾಟಲಿಗಳಲ್ಲಿ ತಂದಿದ್ದ ಮದ್ಯವನ್ನು ಕುಡಿಯುತ್ತ ಆ ಕ್ರಿಸ್ಮಸ್ ಮರದ ಸುತ್ತಲೂ ಹರುಷದಿಂದ ಕುಣಿಯುತ್ತಾ ಸುತ್ತುತ್ತಿದ್ದರು. ನಾನೂ ಅಲ್ಲೇ ಬದಿಯಲ್ಲಿ ನಿಂತು ನನ್ನ ಕೊರೆದು ಹೋಗುತ್ತಿದ್ದ ನನ್ನ ಕೈಗಳನ್ನು ಉಜ್ಜಿ ಬೆಚ್ಚಗೆ ಮಾಡಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದೆ. ಆ ನನ್ನ ಬಾಸ್ ಬಿಡದೇ ನನ್ನನೂ ಒಂದೆರಡು ಸುತ್ತು ಹಾಕಿಸಿದ. ಹೀಗೆಯೇ ನಡೆದಿತ್ತು ಸಂಭ್ರಮಾಚರಣೆ, ನಾನು ಗೃಹಭಂಗದ ನಂಜಮ್ಮನ ದೌರ್ಭಾಗ್ಯವನ್ನೂ,ಕಂಠಿ ಜೋಯಿಸರ ದುಡುಕುತನವನ್ನೂ ಮನದಲ್ಲೇ ವಿಮರ್ಶಿಸುತ್ತಾ ನಿಂತಿದ್ದೆ. ಒಂದೆರಡು ಗಂಟೆಗಳು ಸರಿದಿರಬಹುದು, ಅಷ್ಟರಲ್ಲೇ ಜೋರಾಗಿ ಕೇಳುತ್ತಿದ್ದ ಸಂಗೀತ ಸ್ತಬ್ಧವಾಯಿತು, ಹಾಡುಗಾರರು ಹಾಡುವುದನ್ನು ನಿಲ್ಲಿಸಿ ತಮ್ಮ ಪರಿಕರಗಳನ್ನು ಪ್ಯಾಕ್ ಮಾಡುತ್ತಾ ನಿಂತರು.ಸೇರಿದ್ದ ಜನರು ಬೇಗ ನಿಲ್ಲಿಸಿದ್ದಕ್ಕೆ ಬೇಸರವ್ಯಕ್ತಪಡಿಸುತ್ತಾ ವಾಪಾಸ್ ತಮ್ಮ ತಮ್ಮ ಮನೆಗಳಿಗೆ ಹೊರಟರು. ನಾವೂ ನಮ್ಮ ಬಾಸ್ ಜೊತೆ ಹೊರಟೆವು. ಆಹೊತ್ತಿಗಾಗಲೇ ಗಡಿಯಾರ ೩-೩೦ ಎಂದು ತೋರಿಸುತ್ತಿತ್ತು, ಇನ್ನು ಮಲಗಿದರೆ ಮದ್ಯಾನ್ಹದ ಮೇಲೆಯೇ ಏಳುವುದು, ನಾಳೆಯೂ ಇವನ ಜೊತೆಗೇ ಸುತ್ತಬೇಕಾದೀತು ಎಂದೆನಿಸಿ, ನಾನು ಗಂಟೆ ಆರರವರೆಗೆ ಎದ್ದಿದ್ದು ನನ್ನ ಮನೆಯಕಡೆಗೆ ಹೊರಡುವುದೆಂದು ತೀರ್ಮಾನಿಸಿ, ನನ್ನ ಬಾಸ್’ಗೆ ಹಾಗೂ ಇತರ ಸಂಗಡಿಗರಿಗೂ ಒಪ್ಪಿಸಿ ಮತ್ತೆ ಗೃಹಭಂಗವನ್ನೊಕ್ಕು ಕೂತೆ. ಸಂಗಡಿಗರು ಮತ್ತೊಮ್ಮೆ ತಿನ್ನಲು, ಪಾನ ಸೇವಿಸಲು ಕುಳಿತರು
ನಂಗೆ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ನನ್ನ ಕಿರಿಯ ಸಹೋದ್ಯೋಗಿಯೊಬ್ಬ ಇನ್ನೊಂದು ಹತ್ತು ನಿಮಿಷದಲ್ಲಿ ಹೊರಡಲು ರೆಡಿಯಾಗು ಎಂದಾಗಲೇ ನಂಗೆ ಅರಿವಾಗಿದ್ದು. ಅಷ್ಟೊತ್ತಿಗಾಗಲೇ ಗಂಗಮ್ಮ ಚೆನ್ನಿಗರು ನಂಜಮ್ಮನ ಒಡವೆಗಳನ್ನು ಕಾಸಿಂ ಬಡ್ಡಿ ಸಾಹುಕಾರನ ಹತ್ತಿರ ಅಡಮಾನ ಇಡುವ ನಿರ್ಧಾರ ಮಾಡಿಯಾಗಿತ್ತು. ಒಲ್ಲದ ಮನಸ್ಸಿನಿಂದ ಗೃಹಭಂಗ ವನ್ನು ಅಲ್ಲಿಗೆ ನಿಲ್ಲಿಸಿ ಮನೆಗೆ ಹೋಗುವ ತಯಾರಿ ನೆಡೆಸತೊಡಗಿದೆ. ಮನೆಗೆ ಮರಳುವ ದಾರಿಯಲ್ಲಿ ನನ್ನ ಕಿರಿ ಸಹೋದ್ಯೋಗಿ ಯೊಬ್ಬರು ನಾನು ಇಡೀ ರಾತ್ರಿ ಅಷ್ಟು ಆಸಕ್ತಿಯಿಂದ ನೋಡುತ್ತಿದ್ದ ಆ ಕಾರ್ಯಕ್ರಮವೇನು ಎಂದು ಕೇಳಲು ನಾನು ಅತ್ಯುತ್ಸಾಹದಿಂದ ವಿವರಿಸಲು ಶುರು ಮಾಡಿದೆ. ಭೈರಪ್ಪ ರನ್ನು ಯಾರಿಗೆ ಹೋಲಿಸಿದರೆ ಸರಿಯಾದೀತು ಎಂದು ಯೋಚನೆ ಮಾಡುತ್ತಾ ಇದ್ದಾಗ ತಟ್ಟನೆ ಹೊಳೆದದ್ದು. ಲೆವ್ ಟಾಲ್’ಸ್ಟಾಯ್ (lev tolstoy)(ನಾನೂ ಮೊದಲು ಲಿಯೋ ಅಂತಾನೆ ಅಂದುಕೊಂಡಿದ್ದೆ, ಇತ್ತೀಚಿಗಷ್ಟೇ ಗೊತ್ತಾಯಿತು ಅದು ಲೆವ್ ಅಂತ, ಇನ್ನೂ ಸರಿಯಾಗಿ ಹೇಳಬೇಕು ಅಂದರೆ ಲೆಎವ್ ಅನ್ನೋದು ಸರಿ, ರಷ್ಯನ್ ನಲ್ಲಿ e ಎಂಬ ಅಕ್ಷರ ‘ಯೆ’ ಎಂಬ ಉಚ್ಚಾರ ಕೊಡುತ್ತೆ, ಇರಲಿ ಈಗ ವಿಷಯ ಅದಲ್ಲ) ಆ ಕಿರಿಯ ಮಿತ್ರ ತುಂಬಾ ಆಸಕ್ತಿಯಿಂದ ಕೇಳಲು ಶುರು ಮಾಡಿದರು. ಹಾಗೆಯೇ ಹೇಳುತ್ತಾ, ಈ ಲೆವ್ ಅನ್ನೋ ನಾಮವನ್ನು ಆಂಗ್ಲದಲ್ಲಿ ಲಿಯೋ ಎಂದು ಭಾಷಾಂತರಿಸಿದ್ದರ ಬಗ್ಗೆ ಹೇಳಿದಾಗ (ಇದು ಗೊತ್ತಾದದ್ದು ಇನ್ನೊಬ್ಬ fb ಮಿತ್ರ ರೋಹಿತ್’ರಿಂದ) ಆತ ಆಶ್ಚರ್ಯ ದಿಂದ ಹೆಸರನ್ನು ಭಾಷಾಂತರ ಮಾಡುವುದು ತಪ್ಪಲ್ಲವೇ ಎಂದ. ನನಗೂ ಅದು ಸರಿ ಎನಿಸಿತು. ಅಷ್ಟರಲ್ಲಿ ನಮ್ಮ ಬಸ್ಸು ಬಂದದ್ದರಿಂದ ನಮ್ಮ ಮಾತುಕತೆ ತುಂಡರಿಸಿ ಹೋಯಿತು. ಬಸ್ಸಲ್ಲಿ ಕೂತ ನಂತರ ನನ್ನ ಮನಸ್ಸು ಎಲ್ಲೆಲ್ಲಿಗೋ ಕೊಂಡೊಯ್ಯಿತು. ಈ ಹೆಸರುಗಳ ಆಂಗ್ಲೀಕರಣ ವಿಚಾರಕ್ಕೆ ಬಂದಾಗ ಮೊದಲಿಗೆ ಬರುವುದು ನಮ್ಮ ಊರುಗಳ ಹೆಸರನ್ನು ಹಾಳುಗೆಡವಿದ್ದು. ನಂಗೆ ಯಾವಾಗಲೂ ನೆನಪಾಗುವುದು, ಉಡುಪಿಯ ಹತ್ತಿರದ ಕಾಪು. ಕನ್ನಡದೆಲ್ಲೇನೋ ಅದರ ಹೆಸರು ಕಾಪು ಅಂತಲೇ ಇದೆ, ಆದರೆ ಆಂಗ್ಲ ದಲ್ಲಿ ಬರೆಯುವಾಗ ಮಾತ್ರ ‘ಕಾಪ್’(kaup) ಆಗಿಬಿಡುತ್ತೆ. ನನ್ನ ದ. ಕ. ಮಿತ್ರರಲ್ಲಿಯೂ ಕೇಳಿದಾಗ ಅವರು ನಕ್ಕು ಸುಮ್ಮನಾದರಷ್ಟೇ. ಹಾಗೆಯೇ ಇನ್ನೊಂದು ಬೆಳ್ಮಣ್ ಅಥವಾ ಬೆಳ್ಮಣ್ಣು, ಈ ಹೆಸರನ್ನು ನಾನು ಮೊದಲು ಯಾವುದೊ ಒಂದು ಬಸ್ಸಿನ ಮೇಲೆ ನೋಡಿದ್ದಾಗ BELMAN ಅಂದಿತ್ತು, ಇದ್ಯಾವ ಹೆಸರು ಬೆಲ್’ಮ್ಯಾನ್ ಅಂತ ತೆಲೆಬಿಸಿ ಮಾಡಿಕೊಂಡಿದ್ದೂ ಉಂಟು, ಕೊನೆಗೆ ನೈಜ ಹೆಸರು ಗೊತ್ತಾಯಿತು ಬಿಡಿ. ಹಾಗೆಯೇ ನೋಡುತ್ತಾ ಹೋದರೆ ಇಂತಹ ಸಾವಿರಾರು ಉದಾಹರಣೆಗಳು ಸಿಗುತ್ತವೆ. ನಾನು ಗಮನಿಸಿದ ಇನ್ನೊಂದು ವಿಚಾರವೆಂದರೆ, ಕೆಲವೊಬ್ಬರ ಹೆಸರುಗಳು ಆಂಗ್ಲದಲ್ಲಿ ಬರೆಯುವಾಗ ತಮ್ಮತನವನ್ನು ಪೂರ್ತಿಯಾಗಿಯೇ ಕಳೆದು ಕೊಂಡು ಬಿಡುತ್ತವೆ, ಅವನ್ನು ಹ್ಯಾಗಿದಿಯೋ ಹಾಗೆಯೇ ಬರೆಯಬಹುದಾದರು ನಮ್ ಜನ ಉಪಯೋಗಿಸುವ ವಿಧಾನವೇ ಬೇರೆ. ಉದಾಹರಣೆಗೆ, ಶೆಣೈ, ಇದನ್ನ shanai ಅಂತ ಬರೆಯಬಹುದಾದರೂ ನಮ್ಮವರು shenoy ಅಂತಾನೆ ಬರೆಯೋದು, ಇದು ಶನೋಯ್ ಅಂತಾಗಲ್ಲಿಲ್ಲವೇ? ಇನ್ನೊಂದು ನಾಯಕ್ ಇದನ್ನ nayak ಬರೆದರೆ ಸರಿ ಆದರೆ ಕೆಲವರು naik ಅಂತಾನೆ ಬರೆಯೋದು (ಇದರಲ್ಲಿ ಜಾತಿ-ಸಮೀಕರಣ ಇದೆ ಎಂದು ನನಗೆ ಗೊತ್ತಿದೆ, ಇದೊಂದರಿಂದಲೇ ತಿಳಿಯುತ್ತೆ ನಮ್ ದೇಶದಲ್ಲಿ ಜಾತಿ ಪದ್ಧತಿಗೆ ಅಡಿಗಲ್ಲು ಹಾಕಿದವರು ಯಾರು ಎಂದು), ಕೆಲವೊಬ್ಬರು ದೇವಯ್ಯ ನನ್ನು ಆಂಗ್ಲದಲ್ಲಿ devayya ಅಂದರೆ ಇನ್ನು ಕೆಲವರು devaiah ಅನ್ನುವರು. bhatta ಹೋಗಿ bhat ಆಗಿದೆ, ಒಂದು ಕೈ ಮೇಲೆ ಅನ್ನುವಂತೆ ಈಗೀಗ ಕನ್ನಡದಲ್ಲೂ ಭಟ್ ಅಂತಲೇ ಬಹುಪಾಲು ಜನ ಉಪಯೋಗಿಸುವುದು. ಈ ತರಹದ ವಿಚಾರಗಳಿಂದ ಗೊತ್ತಾಗೋ ಒಂದು ಬಹುಮುಖ್ಯ ವಿಚಾರವೆಂದರೆ ಇಡೀ ಪ್ರಪಂಚದಲ್ಲಿ ನಮ್ಮ ಭಾರತೀಯರಷ್ಟು ಅಭಿಮಾನ ಹೀನರು ಮತ್ತೊಬ್ಬರಿಲ್ಲ ಅನ್ನುವುದು. ಯಾಕಪ್ಪ ಅಂದ್ರೆ ನಾನು ಲಿಯೇವ್ ಅಥವಾ ಲೆವ್ ಟಾಯ್’ಸ್ಟಾಯ್ ನನ್ನು ಲಿಯೋ ಅಂದ ತಕ್ಷಣ ಅದು ತಪ್ಪು, ಹಾಗೆ ಹೆಸರನ್ನು ಭಾಷಾಂತರ ಮಾಡುವುದು ಸರಿಯಲ್ಲ ಅಂದಿದ್ದು ನನ್ನ ಕಿರಿಯ ಸಹೋದ್ಯೋಗಿ , ಆತನಿಗಿನ್ನು ೨೨ ರ ಹರೆಯ, ಈ ವಯಸ್ಸಿನ ಅದೆಷ್ಟು ಭಾರತೀಯರು ಭಾರತೀಯತೆಯನ್ನು ಈ ರೀತಿ ಸಮರ್ಥನೆ ಮಾಡಿಕೊಂಡಾರು? ನನಗೆ ಆತನ ಮೇಲೆ ಇದ್ದ ಗೌರವ ಇದರಿಂದ ಹೆಚ್ಚಾದದ್ದು ಸುಳ್ಳಲ್ಲ. ಹಾಗೆಯೇ ಯೋಚಿಸುತ್ತ ಮುಂದುವರೆದು ಈ ಆಂಗ್ಲರಿಗೆ ಸರಿಯಾದ ಪಾಠ ಕಲಿಸಲು ನಾವ್ಯಾಕೆ ಅವರ ಡಿಕ್’ಸನ್, ಹ್ಯಾರಿ, ಹಡ್ಸನ್ ಗಳನ್ನ ಕನ್ನಡೀಕರಣ (!!!) ಮಾಡಬಾರದು ಎಂದು ನೆನೆದು, ಸಂಭವನೀಯ ಭಾಷಾಂತರವನ್ನೂ ನೆನೆಸಿಕೊಂಡು ಸಿಕ್ಕಾಪಟ್ಟೆ ನಗುವೂ ಬಂತು. ಅಷ್ಟರಲ್ಲಿ ನಾನು ಇಳಿಯೋ ನಿಲ್ದಾಣ ಬಂತು.ನನ್ನ ಉಡುಪುಗಳನ್ನು ಸರಿಯಾಗಿ ಗಾಳಿ ಒಳಹೋಗದ ಹಾಗೆ ಬಿಗಿಯುತ್ತಾ ಕೆಳಗಿಳಿಯಲು ಅಣಿಯಾದೆ. ನಿಲ್ದಾಣದಿಂದ ಹೊರಬೀಳುತ್ತಿದ್ದಂತೆಯೇ ಕೊರೆಯುವ ಚಳಿ ಮತ್ತೆ ನಮ್ಮನ್ನು ಸ್ವಾಗತಿಸಿತ್ತು. ಮತ್ತೇನನ್ನೋ ಯೋಚಿಸುತ್ತಾ ದಾಪುಗಾಲು ಹಾಕುತ್ತ ಮನೆಯ ಕಡೇ ಹೊರಟೆ.
-Nagaraja Kodihalli, nrajkk@gmail.com
Facebook ಕಾಮೆಂಟ್ಸ್