X

ಬದಲಾದ ದೃಷ್ಟಿಯಲ್ಲಿ ನೋಡಿದರೆ ನಮ್ಮ ಸುತ್ತಮುತ್ತವೂ ಬದಲಾಗುತ್ತೆ..

ನನ್ನ ದೇಶ ನನ್ನ ಜನ, ನನ್ನ ಮಾನ ಪ್ರಾಣ ಧನ
ತೀರಿಸುವೆನೆ ಅದರ ಋಣ ಈ ಒಂದೇ ಜನ್ಮದಿ

ಅಂತ ಯಾವತ್ತೋ ಒಮ್ಮೆ ಪ್ರೈಮರಿ ಶಾಲೆಯ ಪುಸ್ತಕದಲ್ಲಿ ಬಂದ ಹಾಡನ್ನು ಕಂಠ ಪಾಠ ಮಾಡಿ ಆಗಸ್ಟ್ 15 ರಂದು ಹಾಡಿದ ನೆನಪು.. ಅದಾದ ನಂತರ ಭಾಷಣಗಳಲ್ಲಿ ಕೇಳಿ ಚಪ್ಪಾಳೆ ಹೊಡೆದೆವು.. ಆದರೆ ಅದನ್ನು ಬದುಕಲ್ಲಿ ತೊಡಗಿಸಿಕೊಂಡು ನನ್ನ ಜನಕ್ಕೆನಾದರೂ ಮಾಡಬೇಕು ಎಂದು ಸಾಗಿದವರು ಕೆಲವರು ಮಾತ್ರ.. ಯಾಕೆಂದರೆ ನಾವೆಲ್ಲರೂ ಮೊದಲು ನಮಗಾಗಿ ಬದುಕುವವರಲ್ಲವೇ..?? ಮೊದಲು ನಾನು ಉಳಿಯಬೇಕು, ನಾನು ಉಳಿದರೆ ಮಾತ್ರ ಉಳಿದವರ ಬಗ್ಗೆ ಚಿಂತಿಸಲು ಸಾಧ್ಯ ತಾನೇ..?? ಇಂಥ ಧೋರಣೆ ನಮ್ಮದು.. ಆದರೆ ನಾನು ಹೇಳಿದ ಆ ಕೆಲವರು ದೇಶದಲ್ಲಿ ಅಲ್ಲಲ್ಲಿ ಎಂಬಂತೆ ಇದ್ದಾರೆ, ಅವರ ಜೀವನ, ಬದುಕುತ್ತಿರುವ ರೀತಿ ಎಲ್ಲವೂ ನಮಗೆ ಸ್ಪೂರ್ತಿಯೇ, ಅವರಂತೆಯೇ ಬದುಕಿ ಎಂದು ಹೇಳುವ ಉದ್ದೇಶವಲ್ಲ, ಆದರೆ ಅವರ ಬದುಕಿನಿಂದ ಪ್ರೇರಿತರಾಗಿ ಏನಾದರೂ ಮಾಡೋಣ ಎಂಬುದಷ್ಟೇ ನನ್ನ ಉದ್ದೇಶ, ಬದುಕು ತಿಂಗಳ ಸಂಬಳಕ್ಕೆ ಕೈ ಚಾಚುತ್ತ, ಕೊನೆಗೊಂದು ದಿನ ರಿಟೈರ್ಮೆಂಟ್, ಪೆನ್ಷನ್ ಎಲ್ಲ ತೆಗೆದುಕೊಂಡು ಒಂದು ಜಡ ಸಾವನ್ನು ಅಪ್ಪುವಂತೆ ಮಾಡುವುದು ಎಂದರೆ ನಾವು ನಮ್ಮ ಜನ್ಮಕ್ಕೆ ಸಲ್ಲಿಸುವ ನ್ಯಾಯವಲ್ಲ ಅಲ್ಲವೇ..?? ಒಬ್ಬ ವ್ಯಕ್ತಿಯ ಬಗ್ಗೆ ಹೇಳುತ್ತಾ ಮುಂದುವರಿಯುತ್ತೇನೆ…

ನಾರಾಯಣನ್ ಕೃಷ್ಣನ್.. ಬಹಳ ಕಡಿಮೆ ಜನರು ಕೇಳಿರಬಹುದೇನೊ.. ಆದರೆ ತಮಿಳುನಾಡಿನ ಮಧುರೈನಲ್ಲಿ ಮಾತ್ರ ಅತ್ಯಂತ ಚಿರಪರಿಚಿತ ಹೆಸರು.. ಈತನ ಜೀವನ ಒಂದು ಚಲನಚಿತ್ರಕ್ಕೆ ಪ್ರೇರಣೆಯಾಗಿತ್ತು ಎಂದರೆ ನಂಬಲೇ ಬೇಕು… ಮಲಯಾಳಂ ನಲ್ಲಿ ಉಸ್ತಾದ್ ಹೋಟೆಲ್ ಎಂಬ ಚಿತ್ರ ಬಿಡುಗಡೆ ಆಗಿತ್ತು, ಅದರಲ್ಲಿ ಈ ನಾರಾಯಣನ್ ಕೃಷ್ಣನ್ ಅವರ ಬಗ್ಗೆ, ಅವರ ಜೀವನದ ಬಗ್ಗೆ ಬರುತ್ತದೆ.. ಹೀಗೆ ಒಂದು ಚಲನಚಿತ್ರಕ್ಕೆ ಪ್ರೇರಣೆ ಆಗಿರುವ ಈತ CNN ಹೀರೋ ಎಂದು 2010 ರಲ್ಲಿ ಜಗತ್ತು ಗುರುತಿಸಿದ ವ್ಯಕ್ತಿ. ನನ್ನ ಊರಿನ ಜನ ಬೀದಿಯಲ್ಲಿ ಹಸಿದು ಮಲಗಬಾರದು, ಅವರಿಗೆಲ್ಲ ನಾನು ಅನ್ನ ನೀಡುತ್ತೇನೆ ಎಂದು ಹಠ ತೊಟ್ಟು ಹಲವು ವರ್ಷಗಳು ಕಳೆದವು… ಅಕ್ಷಯ ಟ್ರಸ್ಟ್ ಎಂಬ ಹೆಸರಿನಲ್ಲಿ ಒಂದು ಸೇವಾ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ.. ಈ ಸಂಸ್ಥೆ ಜಿಲ್ಲೆಯಲ್ಲಿರುವ ಎಲ್ಲ ಅನಾಥವಾಗಿ ಬೀದಿಗಳಲ್ಲಿರುವ ವೃದ್ಧ ಮತ್ತು ಬುದ್ಧಿಮಾಂದ್ಯರಿಗೆ ವಸತಿ, ಊಟ ಮತ್ತು ಆರೋಗ್ಯ ನೋಡಿಕೊಳ್ಳುವ ಕೆಲಸ ಮಾಡುತ್ತದೆ… ಇದು ವೃದ್ಧಾಶ್ರಮ ಅಲ್ಲ, ಅನಾಥಾಶ್ರಮವೂ ಅಲ್ಲ… ಇದು ಅನಾಥವೃದ್ಧರ ಆಶ್ರಮ.. ಇಂಥದ್ದೊಂದು ಟ್ರಸ್ಟ್ ಹುಟ್ಟಿಕೊಳ್ಳುವದರ ಹಿಂದೆ ಒಂದು ಸಣ್ಣದಾದ ಕಥೆ ಇದೆ..

ನಾರಾಯಣನ್ ಕೃಷ್ಣನ್ ಮೂಲ ತಮಿಳುನಾಡಿನ ಮಧುರೈನವರಾದರೂ ಕೆಲಸ ಮಾಡುತ್ತಾ ಇದ್ದದ್ದು ಬೆಂಗಳೂರಿನಲ್ಲಿ.. ಡಿಗ್ರಿಯನ್ನು ಅಡುಗೆ ಕೆಲಸಕ್ಕೆ ಸಂಬಂಧಿಸಿದ್ದೇ ಮಾಡಿದ್ದ ಇವರು ಬೆಂಗಳೂರಿನ ತಾಜ್ ಗ್ರೂಪ್ ಆಫ್ ಹೋಟೆಲ್ಸ್’ನಲ್ಲಿ ಅಡಿಗೆಯವನಾಗಿ ಕೆಲಸ ಮಾಡುತ್ತಿದ್ದವರು.. ಸ್ವಿಟ್ಜರ್ಲ್ಯಾಂಡ್’ನಲ್ಲಿ ಉತ್ತಮ ಕೆಲಸ ಸಿಕ್ಕಿ ಹೋಗಲೆಂದು ಸಿದ್ಧರಾಗಿ, ಹೋಗುವ ಮೊದಲು ಸಿಕ್ಕ ಕೆಲವು ದಿನಗಳ ರಜೆಯನ್ನು ಕಳಿಯಲು ಊರಿಗೆ ಬಂದಾಗ ಒಬ್ಬ ಮುದುಕನನ್ನು ನೋಡುತ್ತಾರೆ… ಆ ಮುದುಕ ಅವರ ಮುಂದಿನ ಜೀವನವನ್ನೇ ಬದಲಾಯಿಸಿಬಿಟ್ಟ… ಹಸಿವಿನಿಂದ ಕಂಗಾಲಾಗಿದ್ದ ಆ ಮುದುಕ ತನ್ನದೇ ತ್ಯಾಜ್ಯವನ್ನು ತಿನ್ನುತ್ತಿದ್ದ… ಇಂಥದ್ದೊಂದು ದೃಶ್ಯವನ್ನು ನಾರಾಯಣನ್ ಕೃಷ್ಣನ್ ಕಣ್ಣಿನಿಂದ ನೋಡಲು ಸಾಧ್ಯವೇ ಆಗಲಿಲ್ಲ… ಮನೆಗೆ ಬಂದವರೇ ಒಂದಷ್ಟು ತಿಂಡಿಯನ್ನು ಆ ಮುದುಕನಿಗೆ ಕೊಟ್ಟು ಬಂದರು.. ಹೀಗೆ ಮೂರು ಹೊತ್ತು ನೀಡಿದರು.. ಹಾಗೆ ನೀಡಿ ಬಂದ ಅವರ ಮನಸ್ಸಿನಲ್ಲಿ ಇದ್ದ ಅಳಲೇ ಬೇರೆ… ಒಂದು ದೊಡ್ಡ ಸ್ಟಾರ್ ಹೋಟೆಲಿನಲ್ಲಿ ತಿಂಡಿ – ತಿನಿಸು ಮಾಡುವ ನನ್ನ ಊರಿನಲ್ಲಿ ಎಷ್ಟೊಂದು ಜನ ಊಟವಿಲ್ಲದೇ ಸಾಯುತ್ತಿದ್ದಾರೆ, ಹಾಗಿದ್ದರೆ ನನ್ನ ಜೀವನದ ಉದ್ದೇಶ ಏನು..?? ಎಂಬ ಪ್ರಶ್ನೆ ಕಾಡತೊಡಗಿತು.. ಒಂದು ನಿರ್ಧಾರಕ್ಕೆ ಬಂದವರಂತೆ, ತನ್ನ ಕೆಲಸಕ್ಕೆ ರಾಜಿನಾಮೆ ನೀಡಿದರು.. ಮನೆಯಲ್ಲಿ ಊಟ – ತಿಂಡಿಗಳನ್ನು ಇವರೇ ತಯಾರಿಸಿ ಅದನ್ನು ತೆಗೆದುಕೊಂಡು ಹೋಗಿ ನೀಡುತ್ತಿದ್ದರು… ದಿನ ಕಳೆದಂತೆ ಆ ರೀತಿ ಆಹಾರವಿಲ್ಲದೆ ಬೀದಿಯಲ್ಲಿರುವವರ ಸಂಖ್ಯೆ ಹೆಚ್ಚುತ್ತಿತ್ತು… ಇದು ಅಕ್ಷಯ ಟ್ರಸ್ಟ್ ಸ್ಥಾಪನೆಗೆ ನಾಂದಿ ಹಾಡಿತು… ಇಂದು ಸುಮಾರು 430 ಜನ ವೃದ್ಧ ಮತ್ತು ಬುದ್ಧಿಮಾಂದ್ಯರಿಗೆ ಆಹಾರ – ಆಶ್ರಯವನ್ನು ಈ ಟ್ರಸ್ಟ್ ನೀಡುತ್ತಿದೆ…

ಭಾರತದಂತ ದೊಡ್ಡ ದೇಶದಲ್ಲಿ ಇರುವ ಪುಟ್ಟ ಮಧುರೈ ಕಥೆ ಇದು.. ಇಲ್ಲಿ ನಾರಾಯಣನ್ ಕೃಷ್ಣನ್ ಸಾಧನೆ ಖಂಡಿತವಾಗಿಯೂ ಶ್ಲಾಘನೀಯ.. ಇಲ್ಲಿ ನಾವು ಕಾಣಬಹುದಾದ ಸಮಸ್ಯೆಗಳು ಎರಡು.. ಒಂದು ಹಸಿವಿನ ಸಮಸ್ಯೆ ಮತ್ತು ಆಶ್ರಯದ ಸಮಸ್ಯೆ.. ನಾರಾಯಣನ್ ಕೃಷ್ಣನ್ ಅವರೇ ಹೇಳುವಂತೆ ಅವರ ಟ್ರಸ್ಟ್ ನಲ್ಲಿ 430 ಜನ ಇದ್ದಾರೆ.. ಅವರೆಲ್ಲರೂ ಮಧುರೈ ಜನರೇ… ಒಂದು ಜಿಲ್ಲೆಯ ಪರಿಸ್ಥಿತಿ ಹೀಗಾದರೆ ನೂರಾ ಮೂವ್ವತ್ತು ಕೋಟಿ ಜನಸಂಖ್ಯೆ ಇರುವ ಭಾರತದ ಬೀದಿಗಳಲ್ಲಿ ಬದುಕುವವರ ಸಂಖ್ಯೆ ಎಷ್ಟಿರಬಹುದು…?? ಅದರ ಲೆಕ್ಕವೂ ಸಿಕ್ಕಿದೆ.. ಸರಿ ಸುಮಾರು ಇಪ್ಪತ್ತು ಕೋಟಿ ಜನರು ಇಂದು ಆಹಾರದ ಸಮಸ್ಯೆಯಿಂದ ಬದುಕುತ್ತಿದ್ದಾರೆ.. ಇದರಲ್ಲಿ ಹಲವರು ಅನ್ನಕ್ಕಾಗಿ ಬೇಡುತ್ತಿದ್ದಾರೆ, ಅದೆಷ್ಟೋ ಜನ ಆಹಾರವಿಲ್ಲದೆ ಸಾಯುತ್ತಿದ್ದಾರೆ.. ಅವರ ಕೂಗು ಬದುಕಿನ ಜಂಜಾಟದ ಬಂಡಿಯಲ್ಲಿ ಸಾಗಿ, ಸಮಸ್ಯೆಯ ಟ್ರಾಫಿಕ್ ನಡುವೆ ಸಿಕ್ಕಿಹಾಕಿಕೊಳ್ಳುವ ನಮಗೆ ಕೇಳಲಾರದು, ಕೇಳಿದರೂ ನಮಗದು ಲೆಕ್ಕಕ್ಕಿಲ್ಲ… ಯಾಕೆಂದರೆ ನಾವೂ ಸಹ ಉಳಿವಿಗಾಗಿ ಹೋರಾಟ ಮಾಡುವವರೇ ಆದರೆ ಎಷ್ಟೇ ಹೋರಾಟ ಮಾಡಿದರೂ ಅವರ ಹೋರಾಟಕ್ಕೆ ಸರಿಸಾಟಿ ಆಗದೇನೋ.. ಯಾಕೆಂದರೆ ಹೊಟ್ಟೆತುಂಬಿ ಹೋರಾಡುವ ನಮಗೂ ಹಸಿವಿನಿಂದ ಹೋರಾಡುವ ಅವರಿಗೂ ವ್ಯತ್ಯಾಸವಿದೆ..

ಹಸಿವಿನ ಸಮಸ್ಯೆಗೆ ಕಾರಣ ಏನು..?? ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಹತ್ತು ಹಲವು ಹೊಸ ಪ್ರಶ್ನೆಗಳೇ ಹುಟ್ಟುತ್ತವೆಯೇ ಹೊರತು ಸರಿಯಾದ ಉತ್ತರ ಸಿಗಲಾರದು.. ನಿರ್ದಿಷ್ಟ ಕಾರಣಗಳು ಹುಡುಕುವುದು ಕಷ್ಟ. ಮೂಲಕ್ಕೆ ಹೋದರೆ ಮೊದಲನೆಯದಾಗಿ ಕೃಷಿಯಲ್ಲಿ ಆಹಾರ ಬೆಳೆ ಬೆಳೆಯುವಿಕೆ ಕಡಿಮೆ ಆಗುತ್ತಿರುವುದು.. ವಾಣಿಜ್ಯ ಬೆಳೆಗಳು ಲಾಭ ತಂದು ಕೊಡುತ್ತದೆ ಎಂಬ ಗುಂಗಿನಲ್ಲಿ ಇರುವ ಕೃಷಿಕ ಆಹಾರ ಬೆಳೆಯ ಬಗ್ಗೆ ಉತ್ಸಾಹ ತೋರಲಾರ, ಒಂದು ವೇಳೆ ಬೆಳೆದರೂ ಅದು ಆತನಿಗೆ ಮತ್ತು ಆತನ ಕುಟುಂಬಕ್ಕೆ ಮಾತ್ರ ಸೀಮಿತವಾಗಿ ಇರುತ್ತದೆ, ಆಹಾರ ಬೆಳೆ ಬೆಳೆಯುವ ಪ್ರಮಾಣ ಕಡಿಮೆ ಆಗಲು ಕಾರಣ ಬಹುಪಾಲು ರೈತರು ಎದುರಿಸುತ್ತಿರುವ ಸಮಸ್ಯೆಯೂ ಹೌದು.. ಸಾಲ ಮಾಡಿ ಕೃಷಿ ಚಟುವಟಿಕೆ ಮಾಡುವ ರೈತ ಆಹಾರ ಬೆಳೆಯಲ್ಲಿ ಲಾಭ ಮಾಡಲಾರ, ಆದ ಕಾರಣ ವಾಣಿಜ್ಯ ಬೆಳೆಗಳ ಕಡೆ ಒಲವು ಜಾಸ್ತಿ, ಮತ್ತು ಕೆಲಸಗಾರರ ಸಮಸ್ಯೆ, ಹೀಗೆ ಅಲ್ಲಿಯೂ ಹತ್ತು ಹಲವು ಸಮಸ್ಯೆಗಳು..

ಸರ್ಕಾರವನ್ನು ದೂರುತ್ತಾರೆ, ಆದರೆ ಸರ್ಕಾರ ಘೋಷಿಸಿದ ಯೋಜನೆಗಳು ರೈತರ ಗಮನಕ್ಕೆ ಬರದೆ, ಯೋಜನೆಗೆ ಬಿಡುಗಡೆಯಾದ ಹಣ ಯಾರದ್ದೋ ಜೇಬನ್ನು ಅನಾವಶ್ಯಕವಾಗಿ ತುಂಬಿಸುತ್ತಿದೆ ಅದರ ಅರಿವು ರೈತರಿಗೆ ಬಂದರೂ ಮಾತನಾಡುವುದಿಲ್ಲ, ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯುವುದು ಹೇಗೆ ಎಂಬುದರ ಅರಿವು ಎಲ್ಲರಿಗೂ ಇಲ್ಲ.. ಆದರ ಅರಿವು ಮೂಡಬೇಕು, ಕೆಲಸಗಾರರ ಕೊರತೆ ಇದೆ, ಆದರೆ ಎಷ್ಟೋ ಯಂತ್ರಗಳು ಬಂದಿವೆ, ಅದರ ಬಳಕೆ ಹೆಚ್ಚಾಗಲಿ.. ಆಹಾರ ಬೆಳೆಯನ್ನು ಸರಿಯಾದ ರೀತಿಯಲ್ಲಿ ಬೆಳೆಸುವ ಮತ್ತು ಮಾರುಕಟ್ಟೆಯ ಬಗ್ಗೆ ಜ್ಞಾನ ಮೂಡಿಸಲು ಪತ್ರಿಕೆಗಳಿವೆ, ವೆಬ್ ಸೈಟ್ ಗಳಿವೆ ಅದರ ಬಗ್ಗೆ ಹೆಚ್ಚಿನ ಅರಿವು ಮೂಡಲಿ, ರೈತನ ಬದುಕೂ ಹಸನಾಗಲಿ, ಜೊತೆಗೆ ಆಹಾರದ ಸಮಸ್ಯೆಯೂ ತೀರಲಿ.. ಇದು ಕೇವಲ ರೈತರ ಜವಾಬ್ದಾರಿಯಲ್ಲ, ನಮ್ಮ ನಿಮ್ಮೆಲ್ಲರದೂ ಹೌದು..

ಇದೆಲ್ಲದರ ಜೊತೆ ನಮ್ಮ ಸುತ್ತ ಮುತ್ತ ಬದುಕುವ ಜನರನ್ನು ಒಮ್ಮೆ ನೋಡಿ.. ದಿನಕ್ಕೊಮ್ಮೆ ಅರೆಹೊಟ್ಟೆ ತುಂಬಿಸಿಕೊಳ್ಳುವ ಎಷ್ಟೋ ಮಂದಿ ಕಾಣುತ್ತಾರೆ, ಇನ್ನು ಕೆಲವೆಡೆ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿರುವ ಅನೇಕ ವೃದ್ಧ ಬದುಕುಗಳು ಕಾಣುತ್ತವೆ, ಎಷ್ಟೋ ಜನ ವೃದ್ಧರು ಭಿಕ್ಷೆ ಬೇಡಿ ಬದುಕುತ್ತಿದ್ದಾರೆ, ಯಾವ ಮಕ್ಕಳನ್ನು ಹೆತ್ತ ಪಾಪಕ್ಕೆ ಬೇಡುವ ಪರಿಸ್ಥಿತಿ ಬಂದಿದೆಯೋ ಯಾರಿಗೆ ಗೊತ್ತು..?? “ಎಲ್ಲ ನಾಟಕ, ದುಡ್ಡು ತಕ್ಕೊಂಡು ಸಾರಾಯಿ ಅಂಗಡಿಗೆ ಹಾಕ್ತಾರೆ,” ಅಂತ ಬೈಯ್ಯುವ ನಾವು ಅವನ ಬಗ್ಗೆ ತಿಳಿಯುವ ಸಣ್ಣ ಪ್ರಯತ್ನವನ್ನೂ ಮಾಡುವುದಿಲ್ಲ.. ಕಣ್ಮುಚ್ಚಿ ದಾನ ಮಾಡಬೇಡಿ, ಕಡೆ ಪಕ್ಷ ಬೇಡಿದವನನ್ನು ಸರಿಯಾಗಿ ನೋಡಿ, ಆತ ಕುಡುಕನಾಗಿದ್ದರೆ ನಿಮಗೆ ಖಂಡಿತ ತಿಳಿಯುತ್ತೆ.. ಹಣವನ್ನೇ ನೀಡಬೇಕು ಎಂದೇನಿಲ್ಲ, ಬ್ರೆಡ್ ನೀಡಿ, ಬಿಸ್ಕತ್ತು ನೀಡಿ, ಹಸಿವಿನಿಂದ ಸಾಯುವವರಿಗೆ ಬದುಕಲು ಅಷ್ಟು ಸಾಕಾಗುತ್ತೆ, ಎಷ್ಟೋ ಸಾವಿರ ದುಡಿಯುವ ನಾವು ಹತ್ತು ರೂಪಾಯಿ ನೀಡಲು ಹಿಂದೆ ಮುಂದೆ ನೋಡುತ್ತೇವೆ, ಯಾಕೆಂದರೆ ಅಲ್ಲಿ ನಮಗೆ ಲಾಭವಿಲ್ಲ.. ಬದಲಾದ ದೃಷ್ಟಿಯಲ್ಲಿ ನೋಡಿದರೆ ನಮ್ಮ ಸುತ್ತಮುತ್ತವೂ ಬದಲಾಗುತ್ತೆ.. ಆದರೆ ಆ ದೃಷ್ಟಿಯಲ್ಲಿ ನೋಡುವ ಮನಸ್ಸು ಬೇಕಷ್ಟೇ…

ನಮ್ಮ ನಿಮ್ಮ ಗೆಳೆತನ ಹೀಗೆಯೇ ಸಾಗಲಿ, ಮತ್ತೆ ಮತ್ತೆ ಸಿಗುತ್ತಿರೋಣ.. ನಮಸ್ಕಾರ..

Facebook ಕಾಮೆಂಟ್ಸ್

Manjunath Hegde: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಹಳ್ಳಿ ಇವರ ಮೂಲ.. ಉಡುಪಿಯಲ್ಲಿ MSc ಮಾಡಿ ಒಂದು ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿ ಈಗ NITK ಸುರತ್ಕಲ್’ನಲ್ಲಿ PhD ಮಾಡುತ್ತಿದ್ದಾರೆ... ಓದಿದ್ದು ಕಂಪ್ಯೂಟರ್ ಆದರೂ ಸಾಹಿತ್ಯದಲ್ಲಿ ಆಸಕ್ತಿ.. ಬರೆಯುವುದು ಹವ್ಯಾಸ.. ವಿಜ್ಞಾನದ ಬರಹಗಳು, ಕಥೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯುವ ಆಸಕ್ತಿ ಹೆಚ್ಚು..
Related Post