ಸುತ್ತ ಕಟ್ಟಿದ ಕಂಪೌಂಡಿನ ನಡುವೆ
ನಮ್ಮದೊಂದಿಷ್ಟು
ಅಂಗ್ಯೆಯಗಲದ ಸುಡುಗಾಡು
ಹೆಸರಿಗಷ್ಟೇ ಮೊಕ್ಷಧಾಮ
ನಮ್ಮಲ್ಲಿ ಕೇವಲ ಹೂಳುವುದು ಮಾತ್ರ
ಗೋರಿ ಕಟ್ಟಲು ಅವಕಾಶವಿಲ್ಲ.
ಯಾರೋ ಮಹನೀಯರು ಒಂದು
ಪ್ರಸ್ತಾವನೆಯನ್ನು ತಂದರು
ಹದಿನೆಂಟು ಅಡಿ ಜಾಗದಲ್ಲಿ
ಅವರಿಗೊಂದು ಗೋರಿ ಬೇಕಂತೆ
ಅವರ ಮನೆಯವರು ಸತ್ತರೆ ಗೊರಿಯ
ಮೇಲೆ ಗೋರಿ ಕಟ್ಟಿಸಿಕೊಳ್ಳುತ್ತಾರಂತೆ.
ಕೊನೆಗೆ ಹೆಲಿಕ್ಯಾಪ್ಟರ್ ನಲ್ಲೇ
ಶವಗಳನ್ನು ಇಳಿಸುತ್ತಾರಂತೆ
ಪೂರ್ತಿ ಗೋರಿ ಕಟ್ಟಡಕ್ಕೆ
ತಿಂಗಳು ಬಾಡಿಗೆ ನೀಡುತ್ತಾರಂತೆ
ಒಂದು ಕ್ಷಣ ಅವಕ್ಕಾಗಿ,,
ಕಾಲ ಹೀಗೆಯೂ ಬಂದರು
ಬರಬಹುದೆಂದು ಅಚ್ಚರಿಗೊಂಡೆ.
ಯಾವ ಧಣಿಯ ಮೆತ್ತನೆ ಹಾಸಿಗೆಯೊ
ಅದೆಂತ ಖಾಯಿಲೆ ಅನುಭವಿಸಿ ಸತ್ತನೋ ,
ಎಷ್ಟು ಸುಖ ನಿದ್ದೆ ಇದರಲ್ಲಿ
ಬಿಟ್ಟು ಹೋಗಿದ್ದಾನೆ
ಎಲ್ಲೋ ಒಂದೆರಡರಲ್ಲಿ ಅಂಗಲಾಚಿದ
ಆರ್ತನಾದದ ಸದ್ದುಗಳಿದ್ದವು
ನನ್ನಂತ ನಾನು ವೀರಬಾಹುವೆ
ಬೆಚ್ಚಿ ಬಿದ್ದು ಅವುಗಳನ್ನು
ಅವಸರದಲ್ಲಿ ಮಣ್ಣು ಮಾಡಿದೆ.
ಶವಗಳು ಮಣ್ಣಾಗಲೊಲ್ಲವು
ಹಸಿ ಚರ್ಮದ ಮೂರ್ತಿಗಳು
ಪೋಗದಸ್ತಾಗಿ ಬೆಳೆಸಿದ್ದು
ಇತ್ತೀಚಿಗೆ ಬೇಗ ಕೊಳೆಯುವದಿಲ್ಲ
ಗುಂಡಿ ತೊಡುವಾಗ ಕಾಲಿಗೆ
ಕೈ ಹಾಕಿ ಎಳೆಯುತ್ತವೆ.
ಉಂಗುರ ಬೆರಳೆ ಇಲ್ಲದ ದೇಹಗಳು
ಕಿವಿ ಹರಿದ ಮೂಗುತಿ ತಿರುಚಿದ
ಮನೆಯಲ್ಲಿ ಇಟ್ಟುಕೊಳ್ಳಲಾಗದೆ
ಸಾಗ ಹಾಕುವ ಕಸಗಳು
ಎಷ್ಟೋ ವಿಮಾನದಲ್ಲೆ
ಹಾರಿ ಬಂದ ಮಾನವ ಉಳಿಕೆಗಳು.
ಶೋಕಿಗೂ ಒಂದು ಮಿತಿಯಿರಬೇಕು
ಯಾವುದೊ ಮೆಡಿಕಲ್ ಕಾಲೇಜಿನ
ಛೇರಮನ್ನರ ಆಫೀಸಿನ ಶೋಕೆಸಿಗಂತೆ
ಎಳೆಯ ಮಗುವಿನ
ಚಿಕ್ಕ ಆಸ್ತಿಪಂಜರ ಬೇಕಂತೆ,
ಉಗಿದು ಆಚೆಗೆ ಅಟ್ಟಿದ್ದೇನೆ.
ರಾಘವೇಂದ್ರ ಹೆಗಡೆಕರ
Facebook ಕಾಮೆಂಟ್ಸ್