X

ಶೀರ್ಷಿಕೆಯಲ್ಲಿರುವ ‘ಧಮ್ ‘ ಚಿತ್ರದಲ್ಲಿಲ್ಲ

ಚಿತ್ರ : ಜೈ ತುಳುನಾಡು

ನಿರ್ದೇಶನ : ಪ್ರವೀಣ್ ತೊಕ್ಕೊಟ್ಟು

ತಾರಾಗಣ : ಅವಿನಾಶ್ ಶೆಟ್ಟಿ, ಸೋನಾಲ್ ಮೊಂತೆರೋ, ಶ್ರೇಯಾ ಅಂಚನ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್,ನಯನ, ಸಂತೋಷ್ ಶೆಟ್ಟಿ

ಪ್ರಸ್ತುತ ತುಳು ಚಿತ್ರರಂಗದಲ್ಲಿ ಹಾಸ್ಯದ ಟ್ರೆಂಡ್ ಬಿಟ್ಟು ಹೊಸ ಟ್ರೆಂಡ್ ಕಡೆ ವಾಲುವ ಪ್ರಯೋಗಾತ್ಮಕ ಪ್ರಯತ್ನಗಳು ನಡೆಯುತ್ತಿವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಅಂತಹ ಕೆಲ ಚಿತ್ರಗಳು ಬಂದರೂ ಕಮರ್ಷಿಯಲ್ ಆಗಿ ಯಶಸ್ಸು ಕಾಣಲು ಸಾಧ್ಯವಾಗಿಲ್ಲ ಅನ್ನುವುದು ಅಷ್ಟೇ ಸತ್ಯ. ಯಾಕೆ ಈ ರೀತಿ ಆಗುತ್ತಿದೆ? ತುಳು ಭಾಷಿಕರು ಬರೀ ಹಾಸ್ಯವನ್ನೇ ಅಪ್ಪಿಕೊಂಡಿದ್ದಾರೆಯೇ ? ಹಾಸ್ಯದ ಹೊರತಾಗಿ ಚಿತ್ರ ಮಂದಿರದತ್ತ ಬರಲು ತಯಾರಿಲ್ಲವೇಕೆ ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟಾಗ ನಮಗೆ ಕಂಡು ಬರುವುದು ಆ ಪ್ರಯೋಗಾತ್ಮಕ ಚಿತ್ರಗಳ ಗುಣಮಟ್ಟ ಹಾಗು ಮನರಂಜನೆಯ ಕೊರತೆ. ಕೆಲ ಚಿತ್ರಗಳು ಉತ್ತಮ ಎನ್ನಬಹುದಾದ ಕತೆ ಹೊಂದಿದ್ದಾರೂ ಒಂದು ಸಿನೆಮಾವಾಗಿ ತೋರಿಸುವಲ್ಲಿ ನಿರ್ದೇಶಕರು ಎಡವಿರುವುದು ಇತ್ಯಾದಿ ಇತ್ಯಾದಿ..

ಜೈ ತುಳುನಾಡು ಚಿತ್ರದ ವಿಮರ್ಶೆ ಬರೆಯುವಾಗ ಈ ಪೀಠಿಕೆಯ ಅಗತ್ಯತೆ ಇತ್ತು. ತುಳು ಚಿತ್ರ ರಂಗ ಕೇವಲ ಹಾಸ್ಯ ಚಿತ್ರಗಳಿಗಷ್ಟೇ ಸೀಮಿತ ಅನ್ನುವ ಹಣೆಪಟ್ಟಿಯನ್ನು ತೆಗೆದು ಹಾಕಲು ಸಂಪೂರ್ಣ ಸಾಹಸಮಯ ಚಿತ್ರವಾಗಿ ತೆರೆಗೆ ಬಂದ ಜೈ ತುಳುನಾಡು ಚಿತ್ರದ ವನ್ ಲೈನ್ ಕತೆ ಇಷ್ಟವಾದರೂ ಸಿನೆಮಾವಾಗಿ ಯಾಕೋ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಕಾರಣ ಒಂದು ಒಳ್ಳೆಯ ಕತೆಯನ್ನುಸಿನೆಮಾವಾಗಿಸುವಲ್ಲಿ ನಿರ್ದೇಶಕರು ಸಂಪೂರ್ಣ ವಿಫ಼ಲರಾಗಿರುವುದು. ಚಿತ್ರಕತೆ ಎಷ್ಟು ಗೋಜಲು ಗೋಜಲಾಗಿದೆ ಎಂದರೆ ದೃಶ್ಯ ದೃಶ್ಯಗಳ ನಡುವಿನ ಕೊಂಡಿ ಕಳಚಿ ನಾವು ಒಂದು ಸಿನೆಮಾ ನೋಡುತ್ತಿದ್ದೆವಾ ಅಥವಾ ಬಿಡಿ ಬಿಡಿ ದೃಶ್ಯಗಳನ್ನು ನೋಡುತ್ತಿದ್ದೇವಾ ಎಂಬ ಅನುಮಾನ ಮೂಡುತ್ತದೆ. ನಿರ್ದೇಶಕ ಪ್ರವೀಣ್ ಅವರೇ ಬರೆದ ಸಂಭಾಷಣೆ ಸತ್ವ ಕಳೆದುಕೊಂಡು ಉರಿವ ಗಾಯಕ್ಕೆ ಮತ್ತಷ್ಟು ಉಪ್ಪು ಸುರಿಸುತ್ತದೆ.

ಇದೊಂದು ಸಂಪೂರ್ಣ ಸಾಹಸ ಪ್ರಧಾನ ಚಿತ್ರವಾಗಿರುವ ಕಾರಣ , ಅದರಲ್ಲೂ ಚಿತ್ರದ ನಾಯಕ ಒಬ್ಬ ದಕ್ಷ ಪೋಲೀಸ್ ಅಧಿಕಾರಿಯಾಗಿರುವ ಹಿನ್ನಲೆಯಲ್ಲಿ ನಾಯಕನ ಎಂಟ್ರಿಯನ್ನು ಭರ್ಜರಿಯಾಗಿ ತೋರಿಸುವ ಅಗತ್ಯತೆ ಇತ್ತು. ಅದು ಇಂತಹ ಸಿನೆಮಾಗೆ ಅವಶ್ಯ ಕೂಡ. ಆದರೆ ಇಲ್ಲಿ ಚಿತ್ರದ ನಾಯಕನ ಎಂಟ್ರಿಯನ್ನು ತೀರಾ ಸಪ್ಪೆಯೆನಿಸುವಂತೆ ತೋರಿಸಲಾಗಿದೆ. ಆದರೆ ಅದೇ ಸಮಯದಲ್ಲಿ ಚಿತ್ರದಲ್ಲಿ ಸಣ್ಣ ಖಳನ ಪಾತ್ರ ಮಾಡಿರುವ ಚಿತ್ರದ ನಿರ್ದೇಶಕರೂ ಆಗಿರುವ ಪ್ರವೀಣ್ ಅವರ ಎಂಟ್ರಿ ಹಾಗು ಅವರ ಪಾತ್ರವನ್ನು ವಿಪರೀತ ಎಂಬಂತೆ ವೈಭವೀಕರಿಸಲಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಚಿತ್ರದ ಆರಂಭದಲ್ಲಿ ಇಲ್ಲಿ ನಾಯಕ ಪ್ರವೀಣ್ ಅವರೋ ಅಥವಾ ಅವಿನಾಶ್ ಶೆಟ್ಟಿನಾ ಅಂತ ಗುಸು ಗುಸು ಕೇಳೋವರೆಗೆ. ಚಿತ್ರದಲ್ಲಿನ ಖಳ ನಟರಿಗೆ ಹಾಗೂ ಇತರ ಪಾತ್ರಗಳಿಗೆ ಕೊಟ್ಟ ಪ್ರಾಮುಖ್ಯತೆಯನ್ನು ಚಿತ್ರದ ನಾಯಕ ಪಾತ್ರವಾದ ಪೋಲೀಸ್ ಅಧಿಕಾರಿ ಪಾತ್ರಕ್ಕೆ ನೀಡಲಾಗಿಲ್ಲ. ಚಿತ್ರದುದ್ದಕ್ಕೂ ತುಳುನಾಡ ಸಿಂಗಂ ಬಳಿ ಇರುವುದು ಒಂದೇ ಒಂದು ಬೈಕ್ ಹಾಗು ಒಬ್ಬನೇ ಒಬ್ಬ ಕಾನ್ಸ್ಟೇಬಲ್.

ಚಿತ್ರದ ನಿರ್ದೇಶಕರಾಗಿ ತಮ್ಮ ಪಾತ್ರಕ್ಕೆ ಹೈ ವೋಲ್ಟೇಜ್ ನೀಡುವಲ್ಲಿ ಪ್ರವೀಣ್ ಸಫಲರಾಗಿದ್ದಾರೆ ! ಆದರೆ ಆ ‘ಸ್ವ’ ಸಫಲತೆಯ ಮಧ್ಯೆ ಚಿತ್ರದ ನಾಯಕನ ಪಾತ್ರವನ್ನೇ ಮರೆತಿರುವುದು ವಿಪರ್ಯಾಸ…!

ಇನ್ನು ಚಿತ್ರದ ‘ಛಾಯಾಗ್ರಹಣ’. ಛಾಯಾಗ್ರಾಹಕನ ಕಡೆಯಿಂದ ನೋಡುವುದಾದರೆ ಆತ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾನೆ. ಆದರೆ ಶಾಟ್ ಕಂಪೋಸಿಂಗ್ ಬಗ್ಗೆ ಮಾತ್ರ ಕೇಳಬೇಡಿ. ಶಾಟ್ ಕಂಪೋಸಿಂಗ್ ಏನಿದ್ದರೂ ನಿರ್ದೇಶಕನ ಕೆಲಸ. ನಿರ್ದೇಶಕರ ವೈಫಲ್ಯಗಳ ಪಟ್ಟಿಗೆ ಇದೂ ಒಂದು ಸೇರಿಕೊಳ್ಳುತ್ತದೆ. ಕಲಾ ವಿಭಾಗದ್ದಂತೂ ಸೊನ್ನೆ ಸಾಧನೆ. ಚಿತ್ರಕ್ಕಾಗಿಯೇ ರೂಪಿಸಿದ ಪೋಲೀಸ್ ಠಾಣೆಯಲ್ಲಿನ ಲಾಕಪ್ ಕೋಣೆಯ ಹಿಂದಿನ ಬದಿಯ ಗೋಡೆಯಲ್ಲಿ ಇನ್ನೊಂದು ಬಾಗಿಲು ಇರುವುದು ಹಾಗು ಅದು ತೆರೆದಿರುವುದು (ಕಂಬಿಗಳಿರುವ ಬಾಗಿಲು ಹೊರತುಪಡಿಸಿದ ಇನ್ನೊಂದು ಬಾಗಿಲು) ಪ್ರೇಕ್ಷಕನಿಗೆ ಸ್ಪಷ್ಟವಾಗಿ ಕಂಡರೂ ನಿರ್ದೇಶಕ, ಛಾಯಾಗ್ರಾಹಕ ಹಾಗು ಕಲಾ ನಿರ್ದೇಶಕರಿಗೆ ಕಾಣದ್ದು ದುರ್ದೈವ. ಇಂತಹುದೇ ಅನೇಕ ತಪ್ಪುಗಳು ಚಿತ್ರದುದ್ದಕ್ಕೂ ಕಾಣ ಸಿಗುತ್ತವೆ.

ಅರವಿಂದ್ ಬೋಳಾರ್ ತನ್ನ ವಿಶಿಷ್ಟ ಅಭಿನಯದಿಂದ ಕೊಂಚ ನಗಿಸುವ ಪ್ರಯತ್ನ ಮಾಡಿದರೂ ಅವರ ಪಾತ್ರ ರಚನೆ ಹಾಗು ಅವರಿಗೆ ನೀಡಿದ ಸಂಭಾಷಣೆ ನಗೆಗಡಲಲ್ಲಿ ತೇಲಿಸುವ ಮಟ್ಟದಲ್ಲಿಲ್ಲ. ಇದ್ದುದರಲ್ಲಿ ಚಿತ್ರದ ಹಾಡುಗಳು ಒಮ್ಮೆ ಕೇಳುವಂತಿವೆ. ಅದರಲ್ಲೂ ‘ವಿಧಿಯೇ ವಿಧಿಯೇ’ ಹಾಡು ಕೊಂಚ ಇಷ್ಟವಾಗುತ್ತದೆ. ರಾಜೇಶ್ ರಾಮನಾಥರ ಹಿನ್ನಲೆ ಸಂಗೀತ ಚಿತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದರೂ ಚಿತ್ರಕತೆಯ ವೈಫಲ್ಯದಿಂದ ಮರೆಯಾಗಿ ಹೋಗುತ್ತದೆ. ಸಾಹಸ ಪ್ರಧಾನ ಚಿತ್ರವಾಗಿದ್ದರೂ ಸಾಹಸ ದೃಶ್ಯಗಳು ಮೆಚ್ಚುಗೆ ಗಳಿಸುವುದಿಲ್ಲ.

ಚಿತ್ರದ ನಿರ್ದೇಶನ ಹಾಗು ಕೆಲ ತಾಂತ್ರಿಕ ವರ್ಗದಲ್ಲಿ ವೈಫಲ್ಯಗಳಿದ್ದರೂ ಚಿತ್ರದ ನಟರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಅವರವರಿಗೆ ದೊರೆತ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರದ ನಾಯಕ ಅವಿನಾಶ್ ಶೆಟ್ಟಿ ಇಲ್ಲಿ ತುಳುನಾಡಿನ ದಕ್ಷ ಪೋಲೀಸ್ ಅಧಿಕಾರಿ ‘ಸೂರ್ಯ’ನಾಗಿ ಕಾಣಿಸಿಕೊಂಡು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೂಲತಃ ಖಳ ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವಿನಾಶ್ ಶೆಟ್ಟಿ ಇಲ್ಲಿ ಕೆಲ ದೃಶ್ಯಗಳಲ್ಲಿ ಖಳನಂತೆಯೇ ಮುಖಭಾವ ಪ್ರದರ್ಶಿಸುವುದನ್ನು ಬಿಟ್ಟರೆ ಉಳಿದಂತೆ ತುಳುನಾಡಿನ ಸಿಂಗಂ ಆಗಿ ಅವಿನಾಶ್ ಖದರ್ ಇಷ್ಟವಾಗುತ್ತದೆ. ಚಿತ್ರದ ನಾಯಕಿ ಸೋನಾಲ್ ಮೊಂತೆರೋ ಮತ್ತದೇ ಪಕ್ಕದ ಮನೆ ಹುಡುಗಿ ಇಮೇಜ್’ನಿಂದ ಮನಸ್ಸಿಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಹಾಸ್ಯ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ನವೀನ್ ಡಿ ಪಡೀಲ್ ಇಲ್ಲಿ ಖಳ ನಟ. ಅದು ಹಾಸ್ಯ ಪಾತ್ರ ಆಗಿರಲಿ, ಖಳನ ಪಾತ್ರವೇ ಆಗಿರಲಿ, ನವೀನ್ ಪಡೀಲ್ ಅವರಂತಹ ಮೇರು ನಟರಿಗೆ ನೀರು ಕುಡಿದಷ್ಟೇ ಸುಲಭ. ಆದರೆ ಆ ಪಾತ್ರಕ್ಕೆ ಪಡೀಲ್ ಬದಲಾಗಿ ಪ್ಲೇ ಬಾಯ್ ನಂತೆ ಕಾಣುವ ಯಾವುದಾದರೂ ಯುವ ನಟನನ್ನು ಆರಿಸಬೇಕಿತ್ತು ಅನ್ನುವುದು ಮಾತ್ರ ಚಿತ್ರ ನೋಡಿದ ಪ್ರೇಕ್ಷಕನ ಅಭಿಪ್ರಾಯ. ಚಿತ್ರದಲ್ಲಿ ಪ್ರಮುಖ ಖಳ ನಟನಾಗಿ ಸಂತೋಷ್ ಶೆಟ್ಟಿ ಹಾಗು ಖಳ ನಟಿಯಾಗಿ ನಯನ ಅವರ ಅಭಿನಯ ಮನೋಜ್ಞ. ನಯನ ಅವರ ಮುಖದಲ್ಲಿನ ಆ ಗತ್ತು, ದರ್ಪ, ನೋಟದಲ್ಲಿನ ತೀಕ್ಷ್ಣತೆ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಈ ಎಲ್ಲಾ ಪಾತ್ರಗಳ ಮಧ್ಯೆ ಚಿತ್ರ ನೋಡಿ ಹೊರ ಬಂದ ಬಳಿಕವೂ ನೆನಪಿನಲ್ಲಿ ಉಳಿಯುವುದು ಶ್ರೇಯಾ ಅಂಚನ್ ಅವರ ಪಾತ್ರ. ನಾಯಕನ ತಂಗಿಯಾಗಿ ತೀರ ಸಹಜ ಎನ್ನುವ ಅಭಿನಯ ನೀಡಿ ತಾನು ಭವಿಷ್ಯದ ನಟಿ ಎನ್ನುವ ಭರವಸೆ ಮೂಡಿಸಿದ್ದಾರೆ.

ಒಟ್ಟಿನಲ್ಲಿ ಉತ್ತಮ ಎಂದು ಎನಿಸಿಕೊಳ್ಳುವ ಮಟ್ಟಕ್ಕೆ ತರಬಹುದಾಗಿದ್ದ ಕತೆಯನ್ನು ಒಬ್ಬ ನಿರ್ದೇಶಕ ತನ್ನ ಕೈಯಾರೆ ಹಾಳು ಮಾಡಬಹುದು ಎನ್ನುವುದಕ್ಕೆ ಜೈ ತುಳುನಾಡು ಒಂದು ಉತ್ತಮ ನಿದರ್ಶನ. ಈ ಹಿಂದೆ ಕಡಲ ಮಗೆ ಚಿತ್ರ ನಿರ್ದೇಶಿಸಿದ್ದ ಅನುಭವ ಇದ್ದರೂ ಆ ಚಿತ್ರಕ್ಕೆ ಚಿತ್ರಕತೆ ಸಂಭಾಷಣೆ ಪ್ರವೀಣ್ ಅವರದ್ದಾಗಿರಲಿಲ್ಲ ಅನ್ನುವುದು ಉಲ್ಲೇಖನೀಯ.

ನಿರ್ದೇಶಕರು ನಾಯಕನ ಬಾಯಲ್ಲಿ ಆಗಾಗ ಒಂದು ಡೈಲಾಗ್ ಹೇಳಿಸುತ್ತಾರೆ. ಅದೇ “ನೋ ಲಾಜಿಕ್, ಓನ್ಲಿ ಮ್ಯಾಜಿಕ್”.. ಲಾಜಿಕ್ ಇಲ್ಲ ಅನ್ನುವುದಂತೂ ಸತ್ಯ, ಮ್ಯಾಜಿಕ್ ಕೂಡ..!

ಅಶ್ವಿನ್ ಆಮೀನ್ ಬಂಟ್ವಾಳ್

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post