1.ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಒಮ್ಮೆ ಗೆಳೆಯರ ಜೋಡಿ ಕೂಡಿಕೊಂಡು ಒಬ್ಬ ಹಿರಿಯರನ್ನು ನೋಡಲು ಹೋದರಂತೆ. ಮನೆಗೆ ಹೋದರೆ ಅವರಿನ್ನೂ ಬಂದಿಲ್ಲ ಎನ್ನುವುದು ತಿಳಿಯಿತು. ಕಾಯುವ ಬದಲು ನಾವು ನಗರ ಅಡ್ಡಾಡಿಕೊಂಡು ಬರುತ್ತೇವೆ ಎಂದು ಗೆಳೆಯರೆಲ್ಲ ಹೊರಟುನಿಂತರು. ಬೇಂದ್ರೆಯವರು ಮಾತ್ರ ಅಲ್ಲಿ ಮನೆಯಲ್ಲೇ ಉಳಿದರು. ಆಗ, ಬೇಂದ್ರೆಯವರಿಗೆ ಬಾಯಾಡಿಸಲು ಇರಲಿ ಎಂದು ಆ ಹಿರಿಯರ ಸಂಬಂಧಿಗಳು ಮನೆಯಲ್ಲಿ ಆಗಷ್ಟೇ ಮಾಡಿದ್ದ ತಂಬಿಟ್ಟನ್ನು ತಂದು ಕೊಟ್ಟರಂತೆ. ರುಚಿ ಸಂಸ್ಕತಿಯ ಆರಾಧಕರಾಗಿದ್ದ ಬೇಂದ್ರೆಯವರು ತಂಬಿಟ್ಟನ್ನು ಸುಖವಾಗಿ ಸವಿಯುತ್ತ ಮುಗಿಸಿದರು.
ವಾಯುವಿಹಾರಕ್ಕೆ ಹೋಗಿದ್ದ ಗೆಳೆಯರೆಲ್ಲರೂ ಅರ್ಧ ತಾಸಿನ ನಂತರ ಮನೆಗೆ ವಾಪಸಾದಾಗ ಅವರಿಗೆ ಬೇಂದ್ರೆಯವರು ತಂಬಿಟ್ಟು ತಿಂದು ಮುಗಿಸಿದ ವಿಷಯ ತಿಳಿಯಿತು. ಆಗ ಬೇಂದ್ರೆ ಹೇಳಿದರಂತೆ: “ನೀವು ನಮ್‍ಬಿಟ್ ಹ್ವಾದ್ರಿ. ನಾವು ತಂಬಿಟ್ ತಿಂದ್ವಿ!”. ತಂಬಿಟ್ ಎಂಬ ಪದದಲ್ಲಿ ತಿಂಡಿಯ ಹೆಸರನ್ನೂ ತಮ್ಮನ್ನು ಬಿಟ್ಟು ಎಂಬ ಮಾತನ್ನೂ ಜೊತೆ ಸೇರಿಸಿ ಬೇಂದ್ರೆ ಮಾಸ್ತರ ಪನ್ ಮಾಡಿದ್ದರು.
2.ಒಮ್ಮೆ ಬೆಂಗಳೂರಿನ ಎಚ್.ಎನ್. ಕಲಾಕ್ಷೇತ್ರದಲ್ಲೊಂದು ಕಾರ್ಯಕ್ರಮ ಏರ್ಪಾಟಾಗಿತ್ತು. ಬೇಂದ್ರೆಯವರೇ ಮುಖ್ಯ ಭಾಷಣಕಾರ. ಅವರನ್ನು ಪರಿಚಯಿಸಲು ನಿಂತಿದ್ದ ಲೇಖಕರು ಯಾವುದೋ ಹುಚ್ಚು ಆವೇಶದಲ್ಲಿ ಇಲ್ಲ ಸಲ್ಲದ ಉಪಾಧಿಗಳನ್ನೆಲ್ಲ ಬೇಂದ್ರೆಯವರಿಗೆ ತೊಡಿಸಿ “ನಮ್ಮ ಬೇಂದ್ರೆ ಮಾಸ್ತರು ರವೀಂದ್ರರಿಗಿಂತಲೂ ಮ್ಯಾಲೆ” ಎಂದುಬಿಟ್ಟರು. ಇದರಿಂದ ತೀವ್ರ ಮುಜುಗರಗೊಂಡ ಬೇಂದ್ರೆ ತನ್ನ ಮಾತಿನ ಸರದಿ ಬಂದಾಗ ಹೇಳಿದರು: “ಅದೆಂಗ ನಾನು ರವೀಂದ್ರರಿಗಿಂತಲೂ ಮ್ಯಾಲಾಗತೀನಿ? ನಾನಿನ್ನೂ ಇಲ್ಲೇ ಇದ್ದೇನಿ. ಅವರು ಆಗ್ಲೇ ಮ್ಯಾಲ ಹೋಗ್ಯಾರ!”
3.1966ರಲ್ಲಿ ಬೇಂದ್ರೆಯವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್ ಪದವಿ ಕೊಟ್ಟಿತು. ದೂರದ ಮೈಸೂರೇ ಕೊಟ್ಟ ಮೇಲೆ ಬೇಂದ್ರೆಯವರ ಕಾರ್ಯಕ್ಷೇತ್ರವಾದ ಧಾರವಾಡದ ವಿವಿಯೂ ಒಂದು ಡಾಕ್ಟರೇಟ್ ಕೊಡಬೇಕು ಎಂಬ ಹುಯಿಲು ಎದ್ದಿತು. ಎಚ್ಚೆತ್ತುಕೊಂಡ ಧಾರವಾಡ ವಿವಿ ಎರಡು ವರ್ಷದ ತರುವಾಯ 1968ರಲ್ಲಿ ಗೌರವ ಡಾಕ್ಟರೇಟ್ ಪ್ರಕಟಿಸಿತು. ಆದರೆ, ಈ ಹೊತ್ತು ಇನ್ನು ಕೆಲವರು “ಮೈಸೂರು ವಿವಿ ಕೊಟ್ಟಿರುವಾಗ ಈಗ ಮತ್ತೊಂದು ಅಂಥಾದ್ದೇ ಮರ್ಯಾದೆ ಬೇಕೆ?” ಎಂಬ ತಗಾದೆ ತೆಗೆಯಿತು! ವಾದ ವಿವಾದಗಳಾದವು. ಈ ಗಲಾಟೆಯಿಂದ ಪದವಿ ಪ್ರದಾನ ಕಾರ್ಯಕ್ರಮವೂ ಸ್ವಲ್ಪ ತಡವಾಗಿಯೇ ನಡೆಯಿತು.
ಪ್ರಶಸ್ತಿ ಸ್ವೀಕರಿಸಿದ ಮೇಲೆ ಬೇಂದ್ರೆ ತನ್ನ ಸ್ನೇಹವಲಯದಲ್ಲಿ ಹೇಳಿಕೊಂಡದ್ದು ಹೀಗೆ: “ಉಳಿದೋರಿಗೆಲ್ಲ ವಯಸ್ಸಿಗೆ ಬಂದ ಮ್ಯಾಲ ಡಾಕ್ಟರೇಟ್ ಸಿಗ್ತದ; ಹೆಸರಿನ ಮುಂದೆ ಡಿಆರ್ ಎಂಬ ಮರ್ಯಾದೆ ಸೇರಿಕೊಳ್ತದ. ಆದ್ರೆ ನಾ ಹುಟ್ತಾನೇ ಡಾಕ್ಟರೇಟ್ ತಗೊಂಡೀನಿ! ನನಗ ಡಾಕ್ಟರೇಟ್ ಪದವೀನ ನನ್ನ ತಾಯ್ತಂದೆಯರೇ ಕೊಟ್ಟುಬಿಟ್ಟಾರ. ಅದಕ್ಕೇ ನಾನು ಡಿ.ಆರ್. (ದತ್ತಾತ್ರೇಯ ರಾಮಚಂದ್ರ) ಬೇಂದ್ರೆ ಇದೀನಿ. ಅವರು ಕೊಟ್ಟ ಡಾಕ್ಟರೇಟಿನ ಮುಂದ ಬೇರ್ಯಾವ ಡಾಕ್ಟರೇಟಿಗೂ ಅಂಥ ಬೆಲೆ ಕಟ್ಟಲಾಗಲ್ಲ ಬಿಡ್ರೀ!”
4.ಒಮ್ಮೆ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಧಾರವಾಡಕ್ಕೆ ಹೋಗಿದ್ದರಂತೆ. ಅಲ್ಲೇ ಇರುವ ಬೇಂದ್ರೆಯವರನ್ನು ನೋಡದೇ ವಾಪಸು ಬರುವುದುಂಟೆ? ತಮ್ಮ ಆಪ್ತಕಾರ್ಯದರ್ಶಿಯನ್ನು ಕರೆದು, ಬೇಂದ್ರೆಯವರನ್ನು ನೋಡಲು ವ್ಯವಸ್ಥೆ ಮಾಡುವಂತೆಯೂ ಒಳ್ಳೆಯ ಶಾಲು-ಫಲಪುಷ್ಪಗಳನ್ನು ತರುವಂತೆಯೂ ಸೂಚಿಸಿದರು. ಹಾಗೆಯೇ ಬೇಂದ್ರೆಯವರಿಗೆ ಸುದ್ದಿ ಮುಟ್ಟಿಸಲು ಹೇಳಿದರು. ಕಾರ್ಯದರ್ಶಿ ಬೇಂದ್ರೆಯವರ ಮನೆಗೆ ಹೋಗಿ, “ನಮ್ಮ ಸಾಹೇಬರು ನಿಮ್ಮನ್ನು ಕಾಣಲು ಇಚ್ಛಿಸಿದ್ದಾರೆ. ನಾಳೆ ಬೆಳಿಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ ತಾವು ಪ್ರವಾಸಿ ಮಂದಿರಕ್ಕೆ ಬರಬೇಕು. ನಾವು ನಿಮಗಾಗಿ ಕಾಯುತ್ತೇವೆ” ಎಂದರಂತೆ. “ತಮ್ಮಾ, ನೀನು ಯಾರು? ಯಾರು ನಿನ್ನ ಸಾಹೇಬರು?” ಎಂದು ಬೇಂದ್ರೆ ವಿಚಾರಿಸಿದಾಗ ಕಾರ್ಯದರ್ಶಿ ವಿನಯಪೂರ್ವಕವಾಗಿ “ನಮ್ಮ ಮೈಸೂರಿನ ಮುಖ್ಯಮಂತ್ರಿಗಳು ಸ್ವಾಮಿ” ಎಂದರು. ಆಗ ಬೇಂದ್ರೆಯವರು, “ತಮ್ಮಾ, ಹನುಮಂತಯ್ಯನವರು ರಾಜ್ಯಕ್ಕೆ ಮುಖ್ಯಮಂತ್ರಿಯಾಗಿರಬಹುದು. ಆದರೆ ಅವರನ್ನು ಭೇಟಿ ಮಾಡಿ ಮಾತಾಡಿಸುವ ಕೆಲಸ ನನಗೇನೂ ಸದ್ಯಕ್ಕಿಲ್ಲ. ಅವರಿಗೆ ನನ್ನನ್ನು ಕಾಣಬೇಕೆಂಬ ಹಂಬಲವಿದ್ದರೆ ಅವರಾಗಿ ನನ್ನ ಮನೆಗೆ ಬರಬಹುದು. ನನಗೆ ಅವರನ್ನು ಕಾಣಬೇಕಾದ ತುರ್ತು ಒದಗಿದರೆ ನಾನೇ ಅವರ ಮನೆಗೆ ಹೋಗುತ್ತೇನೆ” ಎಂದು ಹೇಳಿದರು. ತನ್ನ ಕಾರ್ಯದರ್ಶಿಯಿಂದಾದ ಅಚಾತುರ್ಯ ಕೆಂಗಲ್ ಗಮನಕ್ಕೆ ಬಂತು. ಅವರು ತಾವಾಗಿ ಬೇಂದ್ರೆ ಮನೆಗೆ ಪಾದ ಬೆಳೆಸಿ ಅವರಿಗೆ ಅಭಿಮಾನದಿಂದ ನಮಸ್ಕರಿಸಿ ಸನ್ಮಾನ ಮಾಡಿದರಂತೆ.
5.ಬೇಂದ್ರೆಯವರು ಗೋಕಾಕರಿಗೆ ವಯಸ್ಸಿನಲ್ಲೂ ಪಾಂಡಿತ್ಯದಲ್ಲೂ ಹಿರಿಯರು; ಗೌರವಾನ್ವಿತರು. ಗೋಕಾಕರು ಬೇಂದ್ರೆಯನ್ನು ತನ್ನ ಕಾವ್ಯಗುರು ಎಂದೇ ಮಾನ್ಯ ಮಾಡಿದ್ದರು. ಗೋಕಾಕರು ಪುಣೆಯ ಫಗ್ರ್ಯೂಸನ್ ಕಾಲೇಜಿನಲ್ಲಿ 1931ರಿಂದ 36ರವರೆಗೆ ಐದು ವರ್ಷ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಅದೇ ಸಮಯದಲ್ಲಿ 52 ವರ್ಷಗಳ ಹಿರಿಯ ಬೇಂದ್ರೆಯವರು ಕನ್ನಡ ಎಂ.ಎ. ಓದಲು ಅದೇ ಫಗ್ರ್ಯೂಸನ್ ಕಾಲೇಜಿಗೆ ಬಂದರು. ಬೇಂದ್ರೆ ತನ್ನ ಬಿ.ಎ. ಪದವಿಯನ್ನು ಪಡೆದದ್ದು ಅದೇ ಕಾಲೇಜಿನಲ್ಲಿ. ತನ್ನ ಉದ್ಯೋಗದಲ್ಲಿ ಮುಂದಿನ ಹಂತಕ್ಕೆ ಹೋಗಲು ಕೇವಲ ಪ್ರತಿಭೆ, ಸಾಹಿತ್ಯಜ್ಞಾನ ಇದ್ದರಷ್ಟೇ ಸಾಲದು; ಅಧಿಕಾರಿಗಳಿಗೆ ತೋರಿಸಲು ಒಂದು ಪದವಿ ಪತ್ರವೂ ಬೇಕು ಎಂಬ ಅನಿವಾರ್ಯಕ್ಕೆ ತಲೆಬಾಗಿ ಕನ್ನಡದ ವರಕವಿ ಕನ್ನಡ ಎಂ.ಎ. ಮಾಡಬೇಕಾದ ಅನಿವಾರ್ಯತೆ ಬಂದೊದಗಿತ್ತು! ಆದರೆ ಅವರಿಗೆ ಕನ್ನಡ ಸ್ನಾತಕೋತ್ತರ ತರಗತಿಗಳನ್ನು ತೆಗೆದುಕೊಳ್ಳಲು ಸಮರ್ಥರಾದ ಯಾವ ಅಧ್ಯಾಪಕರೂ ಆ ಕಾಲೇಜಿನಲ್ಲಿ ಇರಲಿಲ್ಲ. ಆಗ ಕಾಲೇಜು ಗೋಕಾಕರನ್ನು ಕರೆಸಿತು. ಗೋಕಾಕರು ಇಂಗ್ಲೀಷಿನಲ್ಲಿ ಬಿ.ಎ., ಎಂ.ಎ. ಪದವಿಗಳನ್ನು ಪಡೆದಿದ್ದರೂ ಕಾಲೇಜಿನಲ್ಲಿ ಕನ್ನಡವನ್ನೂ ಐಚ್ಛಿಕ ವಿಷಯವಾಗಿ ಓದಿದವರಾದ್ದರಿಂದ, ಮತ್ತು ಅದರಲ್ಲಿ ಪ್ರಥಮ ದರ್ಜೆಯ ಅಂಕಗಳನ್ನು ಪಡೆದವರಾದ್ದರಿಂದ ಅವರು ಬೇಂದ್ರೆಯವರಿಗೆ ಕಲಿಸಲು ಅರ್ಹರೆಂಬುದು ಕಾಲೇಜಿನ ಎಣಿಕೆಯಾಗಿತ್ತು. ಈ ವಿಚಾರವನ್ನು ಮುಂಬೈ ವಿಶ್ವವಿದ್ಯಾಲಯದ ಗಮನಕ್ಕೆ ತಂದು ಅಲ್ಲಿನವರ ವಿವೇಚನೆಗೆ ಬಿಡಲಾಯಿತು. ಮುಂಬೈ ವಿವಿಯ ಅಧಿಕಾರಿಗಳು ಗೋಕಾಕರ ಪದವಿಗಳನ್ನು ಪರಿಶೀಲಿಸಿ “ಈ ವ್ಯಕ್ತಿ ಕನ್ನಡ ಎಂ.ಎ. ತರಗತಿಗಳನ್ನು ತೆಗೆದುಕೊಳ್ಳಲು ಶಕ್ತರು” ಎಂಬ ಪ್ರಮಾಣಪತ್ರ ಕಳಿಸಿತು. ಫಗ್ರ್ಯೂಸನ್ ಕಾಲೇಜಿನ ಚಿಂತೆ ಪರಿಹಾರವಾಯಿತು.
ಆದರೆ 33 ವರ್ಷದ ತರುಣ ಗೋಕಾಕರಿಗೋ ಈಗ ತೀವ್ರ ಮುಜುಗರ! ತನ್ನ ಗುರುಗಳಿಗೇ ಪಾಠ ಮಾಡುವ ಶಿಕ್ಷಕನಾಗುವುದು ಹೇಗೆ? ಹಾಗಾಗಿ ಅವರಿಬ್ಬರ ನಡುವೆ ಒಂದು ಒಳಒಪ್ಪಂದವಾಯಿತು. ಕ್ಲಾಸ್ ರೂಮಿನವರೆಗೆ ಅವರಿಬ್ಬರೂ ಗುರು-ಶಿಷ್ಯರಂತೆ ಹೋಗಬೇಕು. ತರಗತಿಯೊಳಗೆ ಸೇರಿಕೊಂಡ ಮೇಲೆ ಬೇಂದ್ರೆಯವರು ಶಿಕ್ಷಕನ ಕುರ್ಚಿಯಲ್ಲಿ ಕೂರಬೇಕು; ಮೇಷ್ಟ್ರಾದ ಗೋಕಾಕರು ಕೆಳಗೆ ಬೆಂಚಲ್ಲಿ ಕೂತು ಬೇಂದ್ರೆ ಪಾಠವನ್ನು ಕೇಳಬೇಕು! ವಿದ್ಯಾರ್ಥಿಗೆ ಕಲಿಸುವುದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಯೇ ತನ್ನ ಮೇಷ್ಟ್ರಿಗೆ ಎರಡು ವರ್ಷ ಸಾಹಿತ್ಯವನ್ನು ಧಾರೆ ಎರೆಯುವ ಕೆಲಸ ಅಲ್ಲಿ ನಡೆಯಿತು.
6.ಹಾಸನದಲ್ಲಿ ಯಾವುದೋ ಸಾಹಿತ್ಯಿಕ ಕಾರ್ಯಕ್ರಮಕ್ಕೆ ಬಂದಿದ್ದ ಬೇಂದ್ರೆ, ಹಾರನಹಳ್ಳಿ ರಾಮಸ್ವಾಮಿಯವರ ಮನೆಯಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಒಂದು ಮುಂಜಾನೆ ಡಿವಿಜಿಯವರ ಅಂತಃಪುರ ಗೀತೆಗಳನ್ನು ಓದಿದ ಮೇಲೆ ಬೇಂದ್ರೆಯವರಿಗೆ ಬೇಲೂರು, ಹಳೆಬೀಡುಗಳನ್ನು ಕಣ್ತುಂಬ ನೋಡಬೇಕೆಂಬ ಇಚ್ಛೆಯಾಯಿತಂತೆ. ಕೂಡಲೇ ರಾಮಸ್ವಾಮಿಯವರು ಕಾರಿನ ವ್ಯವಸ್ಥೆ ಮಾಡಿಯೇಬಿಟ್ಟರು. ಹೊಯ್ಸಳ ವಾಸ್ತು ವೈಭವವನ್ನು ನೋಡಲು ಇಬ್ಬರೂ ಕಾರಲ್ಲಿ ಹೊರಟರು. ದಾರಿಯಲ್ಲಿ ಹೋಗುತ್ತಿರುವಾಗ ಒಂದು ಕಡೆ ಹೊಲದಲ್ಲಿ ನಾಲ್ಕೈದು ಹಸುಗಳನ್ನೂ ಬೀಜದ ಹೋರಿಗಳನ್ನೂ ನಿಲ್ಲಿಸಲಾಗಿತ್ತಂತೆ. ಬೆದೆಗೆ ಬಂದ ಹಸುಗಳಿಗೆ ಹೋರಿ ಹಾರಿಸಲು ಅಲ್ಲಿ ರೈತರು ಸಿದ್ಧತೆ ನಡೆಸಿಕೊಳ್ಳುತ್ತಿದ್ದರು. ಅದನ್ನು ನೋಡಿದವರೇ ಬೇಂದ್ರೆಯವರು ಕಾರು ನಿಲ್ಲಿಸಿದರು. ಆ ಹೊಲದತ್ತ ಹೋಗಿ ರೈತರ ಜೊತೆ ಮಾತಾಡಿ, ಹಸುಗಳಿಗೆ ಯಾವ ಸಮಯದಲ್ಲಿ ಹೋರಿಯನ್ನು ಜೊತೆ ಮಾಡಬೇಕು; ಯಾವ ದಿಕ್ಕಲ್ಲಿ ಅವನ್ನು ನಿಲ್ಲಿಸುವುದು ಪ್ರಶಸ್ತ; ಇಡೀ ಪ್ರಕ್ರಿಯೆಯನ್ನು ಹೇಗೆ ಮಾಡಬೇಕು; ಹಸುಗಳ ಮನಸ್ಥಿತಿ ತಿಳಿಯುವುದು ಹೇಗೆ ಎಂಬ ಎಲ್ಲ ವಿಷಯಗಳ ಮೇಲೆ ಗೋವೈದ್ಯರಂತೆಯೇ ಸುಮಾರು ಮುಕ್ಕಾಲು ತಾಸು ನಿರರ್ಗಳವಾದ ಪಾಠ ಮಾಡಿದರು!
7.ಒಮ್ಮೆ ಬೇಂದ್ರೆಯವರ ಮೇಲೊಂದು ಸಾಕ್ಷ್ಯಚಿತ್ರ ತಯಾರಾಗುತ್ತಿತ್ತು. ಅವರ ಸಾಧನಕೇರಿಯ ಮನೆಯಲ್ಲೇ ಶೂಟಿಂಗ್ ನಡೆಯುತ್ತಿತ್ತು. ಶೂಟಿಂಗ್ ಮಧ್ಯದಲ್ಲಿ, ಅವರ ಸುತ್ತಮುತ್ತ ಒಂದು ಬೆಕ್ಕು ಅಡ್ಡಾಡುತ್ತಿತ್ತು. ಶೂಟಿಂಗ್ ಮಾಡುತ್ತಿದ್ದವರು ಬೇಂದ್ರೆಯವರನ್ನೂ ಆ ಬೆಕ್ಕನ್ನೂ ಜೊತೆಯಾಗಿ ಚಿತ್ರೀಕರಿಸಿಕೊಂಡರು.
ಮಧ್ಯಾಹ್ನ ಊಟಕ್ಕಾಗಿ ಚಿತ್ರೀಕರಣವನ್ನು ಸ್ವಲ್ಪಹೊತ್ತು ನಿಲ್ಲಿಸಿ, ಮೂರು ಗಂಟೆಯ ಹೊತ್ತಿಗೆ ಮತ್ತೆ ಕ್ಯಾಮೆರಾಗಳನ್ನು ಕೈಗೆತ್ತಿಕೊಳ್ಳಲಾಯಿತು. ಆದರೆ ಈಗ ಬೇಂದ್ರೆಯವರ ಮುದ್ದಿನ ಬೆಕ್ಕು ಕಾಣಿಸಲಿಲ್ಲ. ಅದು ಅತ್ತಿತ್ತ ಸುಳಿದಾಡುತ್ತಿದ್ದರೆ ಚೆನ್ನಾಗಿರುತ್ತದೆ ಎಂದು ಭಾವಿಸಿದ ಚಿತ್ರೀಕರಣದ ಮಂದಿ, ಬೇಂದ್ರೆಯವರಿಗೆ ಬೆಕ್ಕನ್ನು ಕರೆಯುವಂತೆ ಕೇಳಿಕೊಂಡರು. ಕುಪಿತರಾದ ಬೇಂದ್ರೆ, “ಬಾ ಅಂದ್ರೆ ಬರೂಕ್ಕೆ, ಕೂರು ಅಂದ್ರೆ ಕೂರಕ್ಕೆ, ನಡೆ ಅಂದ್ರೆ ನಡೆಯೂಕ್ಕೆ ಅದೇನು ಬೇಂದ್ರೆ ಅಂತ ಮಾಡೀರೇನು? ಅದು ಬೆಕ್ಕು. ತನಗೆ ಬೇಕಾದಲ್ಲಿ ಬೇಕಾದ್ದನ್ನು ಮಾಡುವ ಸ್ವಾತಂತ್ರ್ಯ ಅದಕ್ಕಿದೆ. ಅದನ್ನು ಕರೆಯಲು ನಾನು ಯಾರು?” ಎಂದು ದಬಾಯಿಸಿದರು.
8.1947ರಲ್ಲಿ ಬಳ್ಳಾರಿಯ ಹರಪನಹಳ್ಳಿಯಲ್ಲಿ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ ಆಯೋಜನೆಯಾದ ಸಂದರ್ಭ. ಸಾಹಿತಿ ಸಿ.ಕೆ. ವೆಂಕಟರಾಮಯ್ಯನವರು ಸಮ್ಮೇಳನಾಧ್ಯಕ್ಷರು. ಸಮ್ಮೇಳನದ ಒಂದು ಮುಂಜಾನೆ, ಅವರು ಬೇಂದ್ರೆಯವರನ್ನು ಜೊತೆ ಮಾಡಿಕೊಂಡು, ಸಮ್ಮೇಳನಕ್ಕೆ ಬಂದು ಬಿಡಾರ ಹೂಡಿದ್ದ ಕವಿ-ಲೇಖಕರನ್ನೆಲ್ಲ ಪರಿಚಯ ಮಾಡಿಕೊಂಡು ಮಾತಾಡಿಸಿಕೊಂಡು ಹೋಗಲು ಹೊರಟಿದ್ದರು. ಆಗ ಒಂದು ಕೊಠಡಿಯಲ್ಲಿ ಒಬ್ಬ, ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಾಹಿತಿ ಹಾಸಿಗೆಯಲ್ಲಿ ಕೂತು ಸಿಗರೇಟು ಸೇದುತ್ತಿದ್ದರಂತೆ. ವಿನಯದ ಸಾಕಾರಮೂರ್ತಿಯಾಗಿದ್ದ ವೆಂಕಟರಾಮಯ್ಯನವರು ತನಗಿಂತ ಕಿರಿಯನಾಗಿದ್ದ ಆ ಸಾಹಿತಿಯ ಮುಂದೆಯೂ ಕೈಮುಗಿದು “ನಾನು ಸಿ.ಕೆ. ವೆಂಕಟರಾಮಯ್ಯ. ಸಮ್ಮೇಳನಾಧ್ಯಕ್ಷ. ಇವರು ವರಕವಿ ದ.ರಾ. ಬೇಂದ್ರೆಯವರು. ರಾಜ್ಯಕ್ಕೆಲ್ಲ ಗೊತ್ತಿರುವ ಕವಿಗಳು” ಎಂದರು. ಆದರೆ, ಸಿಗರೇಟಿನ ಹೊಗೆ ಬಿಡುತ್ತಿದ್ದ ಆಸಾಮಿ “ಹ್ಞೂ” ಎಂದರಷ್ಟೇ ಹೊರತು ಮಿಸುಕಾಡಲಿಲ್ಲ. ಬೇಂದ್ರೆಯವರಿಗೆ ಈ ಅಹಂಕಾರ ಪ್ರದರ್ಶನ ಕಂಡು ರೇಗಿಹೋಯಿತು. ಅವರು ದನಿ ಎತ್ತರಿಸಿ “…ಮಗನೇ, ಚುಟ್ಟ ಬಿಸಾಕಿ ಎದ್ದುನಿಲ್ಲು. ಸಮ್ಮೇಳನಾಧ್ಯಕ್ಷರು ಕೈಮುಗಿದು ಪರಿಚಯಿಸಿಕೊಂಡರೂ ಖಬರಿಲ್ಲವೇ?” ಎಂದು ಬೆವರಿಳಿಸಿದಾಗ, ಸಾಹಿತಿ ಕೂಡಲೇ ಸಿಗರೇಟು ಒಗೆದು ಎದ್ದು ನಿಂತು ಕ್ಷಮೆ ಕೋರಿದರಂತೆ.
9.ಒಂದು ದಿನ ಬೆಳಗ್ಗೆ ಬೇಂದ್ರೆಯವರು ತನ್ನ ಮನೆಯೆದುರು ಅಂಗಳದಲ್ಲಿ ಏನನ್ನೋ ಯೋಚಿಸುತ್ತ ಶತಪಥ ತಿರುಗುತ್ತಿದ್ದಾಗ ಭವಿಷ್ಯ ಹೇಳುವವನೊಬ್ಬ ಬಂದ. ಬೇಂದ್ರೆಯವರನ್ನು ಕಂಡು, “ಅಜ್ಜಾ ಒಳ ಬರಬಹುದೇನ್ರೀ?” ಎಂದು ಕೇಳಿದ. ನೀನ್ಯಾರು ಎಂದು ವಿಚಾರಿಸಿದಾಗ ಆತ ತಾನು ಊರೂರು ತಿರುಗುತ್ತೇನೆಂದೂ ಮುಖ, ಕೈ, ಹಸ್ತಾಕ್ಷರ ಇಲ್ಲವೇ ಜನ್ಮನಕ್ಷತ್ರ ನೋಡಿ ಭವಿಷ್ಯ ಹೇಳುತ್ತೇನೆಂದೂ ನುಡಿದ. ನಕ್ಷತ್ರ ಎಂಬ ಪದ ಕಿವಿಗೆ ಬೀಳುತ್ತಲೇ ಬೇಂದ್ರೆಯವರು ಚುರುಕಾದರು. “ನಕ್ಷತ್ರಗಳ ಬಗ್ಗೆ ನಿನಗೆ ಛಲೋ ತಿಳಿದದೇನು?” ಎಂದು ಕೇಳಿದರು. ಹೌದೆಂದು ಗೋಣಾಡಿಸಿದನಾತ. “ಹಾಗಾದರೆ ಅಭಿಜಿತ್ ನಕ್ಷತ್ರ ಎಲ್ಲಿ ಬರತದ ಅಂತ ಹೇಳು. ಅದರ ಬಗ್ಗೆನೇ ಯೋಚಿಸುತ್ತಿದ್ದೇನೆ” ಎಂದರು ಬೇಂದ್ರೆ. ಭವಿಷ್ಯ ಹೇಳುವವನಿಗೆ ತಾನು ಸಿಕ್ಕಿಬಿದ್ದೆ ಎಂಬ ಅನುಭವವಾಗಿರಬೇಕು! ಕೂಡಲೇ “ಇಲ್ಲಿ ಬಸ್ಸು ಎಲ್ಲಿ ಹಿಡೀಬೇಕು ಹೇಳ್ರಿ!” ಎಂದು ಕೇಳಿಬಿಟ್ಟ. ಬೇಂದ್ರೆಯವರು ಅವನ ಜೊತೆಗೇ ನಡೆದುಕೊಂಡು ಹೋಗಿ ಬಸ್‍ಸ್ಟ್ಯಾಂಡ್ ತೋರಿಸಿ ಕೊನೆಗೆ “ನೀ ಖರೇನ ಭವಿಷ್ಯ ಹೇಳತೀ?” ಎಂದು ಮಾತಿಗೆಳೆದರು. ಆ ಯುವಕ “ಯಾಕ್ರೀ? ಕೇಳ್ಯಾರ ನೋಡ್ರಿ. ಹಿಂದಿನದು ಮುಂದಾಗೋದು ಎಲ್ಲಾನೂ ಹೇಳತೀನಿ” ಎಂದ. “ಇಲ್ಲಾ, ಬೆಳಗ್ಗೆ ಎದ್ದ ಕೂಡಲೇ ಯಾರ ಮನಿಗೆ ಹೋದ್ರ ಭವಿಷ್ಯ ಕೇಳತಾರ ಯಾರು ಕೇಳೂದಿಲ್ಲ ಅನ್ನೋದು ನಿನಗ ತಿಳೀದ ನೀನು ಬೇರೆಯವರಿಗೆ ಹ್ಯಾಂಗ ಭವಿಷ್ಯ ಹೇಳತೀ?” ಎಂದರು ಬೇಂದ್ರೆ. ಆ ಯುವಕ ಸಿಕ್ಕಿದ ಬಸ್ಸನ್ನು ಬೋರ್ಡು ನೋಡದೆ ಹತ್ತಿ ಪರಾರಿಯಾದ.
10.ಬೇಂದ್ರೆ ಮತ್ತು ಡಾ. ಶಂಬಾ ಜೋಷಿಯವರ ಜಗಳ ಲೋಕವಿಖ್ಯಾತ. ತಾತ್ತ್ವಿಕ ಭಿನ್ನಾಭಿಪ್ರಾಯ ಹುಟ್ಟಿ ಬೆಳೆದು ಕೊನೆಗೆ ಇಬ್ಬರೂ ಮಾತು ಕೂಡ ಬಿಟ್ಟಿದ್ದ ಸಮಯ. ಹಲವು ವರ್ಷಗಳ ಕಾಲ ಅವರಿಬ್ಬರ ನಡುವೆ ಮಾತುಕತೆ ನಿಂತುಹೋಗಿತ್ತು. ಬೇಂದ್ರೆಯವರು ತಮ್ಮ ಬದುಕಿನ ಅಂತಿಮ ಘಟ್ಟದಲ್ಲಿ ಅಸ್ವಸ್ಥರಾದಾಗ ಧಾರವಾಡದಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಅವರನ್ನು ಮುಂಬಯಿಗೆ ಕರೆದುಕೊಂಡು ಹೋಗಬೇಕಾಯಿತು. ಬೇಂದ್ರೆಯವರನ್ನು ಮುಂಬಯಿಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಶಂಬಾ ಜೋಷಿಯವರು ಮುಂಬಯಿ ರೈಲು ಹತ್ತಿದರು. ಬೇಂದ್ರೆಯವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಧಾವಿಸಿದರು. ಹಾಸಿಗೆಯಲ್ಲಿ ಮಲಗಿದ್ದ ಬೇಂದ್ರೆಯವರ ಕೈಹಿಡಿದು ಅಳಲು ಪ್ರಾರಂಭಿಸಿದರು. ಬೇಂದ್ರೆಯವರೂ ಜೋಷಿಯವರ ಕೈಹಿಡಿದು ಗದ್ಗದರಾದರು. ಜೋಷಿಯವರು ಅಂದು ಒಂದು ಗಂಟೆಯಷ್ಟು ಹೊತ್ತು ಬೇಂದ್ರೆಯವರ ಪಕ್ಕದಲ್ಲೇ ಕೂತಿದ್ದರು. ಅದುವರೆಗಿನ ತನ್ನ ದ್ವೇಷ ನಿರರ್ಥಕವಾಗಿತ್ತೆಂಬ ತಿಳಿವಳಿಕೆ ಮೂಡಿತ್ತೆ; ಮಹಾನ್ ವ್ಯಕ್ತಿತ್ವವೊಂದು ಸಂಕಷ್ಟ ಅನುಭವಿಸುತ್ತಿದುದನ್ನು ಕಂಡು ಹೃದಯ ಬಾಯಿಗೆ ಬಂದಿತ್ತೆ, ಜೋಷಿಯವರಿಗೆ ಆ ಕ್ಷಣಕ್ಕೆ ಮೂಡಿದ್ದ ಭಾವನೆಗಳೇನು, ತಿಳಿದಿಲ್ಲ. ಬಹಳ ಹೊತ್ತು ಅಲ್ಲಿ ಕೂತಿದ್ದ ಜೋಷಿಯವರು ಹೊರಡುವಾಗ ಬೇಂದ್ರೆಯವರಿಗೆ ಬೇಗ ಗುಣಮುಖರಾಗುವಂತೆ ಮನದುಂಬಿ ಹಾರೈಸಿದರು.
Facebook ಕಾಮೆಂಟ್ಸ್