X

ಕಾಶ್ಮೀರಿ ಪಂಡಿತರ ಆತ್ಮಗಳ ಸ್ವಗತ

ನಾವು ಕಾಶ್ಮೀರದಲ್ಲಿ ಮತಾಂಧ ಜಿಹಾದಿಗಳ ಆಕ್ರಮಣಕ್ಕೆ ಸಿಲುಕಿ ಹತರಾದ ಹತಭಾಗ್ಯ ಕಾಶ್ಮೀರಿ ಪಂಡಿತರ ಆತ್ಮಗಳು. ನಾವಿಂದು ನಮ್ಮ ಕಥೆಯನ್ನು ಹೇಳಲು ಬಂದಿದ್ದೇವೆ. ಜಗತ್ತಿನ ಜನರಿಗೆ, ಅಷ್ಟೇ ಏಕೆ ಭಾರತದ ಬಹುತೇಕ ಜನರಿಗೆ ತಿಳಿದಿರದ, ವರ್ತಮಾನ ಪತ್ರಿಕೆಗಳಲ್ಲಿ ಎಲ್ಲೂ ವರದಿಯಾಗದ, ಇದುವರೆಗೂ ಸತ್ತವರಿಗೆ, ಅವರ ಕುಟುಂಬದವರಿಗೆ ನ್ಯಾಯ ಸಿಗದ ಹೇಯ ಕ್ರೌರ್ಯದ ಕರುಣಾಜನಕ ಕಥೆಯನ್ನು ನಾವು ಹೇಳಲು ಹೊರಟಿದ್ದೇವೆ. ನಮ್ಮದು ಮೂಕ ರೋದನದ ಸ್ವಗತವಾದರೂ ನಮ್ಮ ಮೇಲಾದ ದೌರ್ಜನ್ಯದ ಕಥೆಯನ್ನು ನಾಲ್ಕು ಜನರ ಬಳಿ ಹೇಳಿಕೊಳ್ಳಬೇಕೆನಿಸುತ್ತಿದೆ.

ಕಾಶ್ಮೀರ ನಮ್ಮ ತಾಯಿನೆಲ. ಭಾರತದ ದಕ್ಷಿಣದ ತುತ್ತತುದಿ. ಎಲ್ಲೆಲ್ಲೂ ಸಸ್ಯಶ್ಯಾಮಲೆಯ ವೈಭವ. ಹೇರಳವಾದ ಸೇಬಿನ ಮರಗಳು, ಸಸ್ಯಸಂಪತ್ತು ಅವುಗಳಿಂದ ಸಿಗುತ್ತಿದ್ದ ಔಷಧೀಯ ಗುಣವುಳ್ಳ ಭಾಗಗಳು, ಅತೀ ಹೆಚ್ಚು ಬೆಲೆಬಾಳುವ ಸೌಗಂಧಿತ ಮರಗಳು, ಎಲ್ಲೆಲ್ಲೂ ಹಾಯಾಗಿ ಓಡಾಡಿಕೊಂಡಿದ್ದ ಪ್ರಾಣಿ-ಪಕ್ಷಿಗಳು,ಮಾಲಿನ್ಯರಹಿತವಾದ ಸುಂದರ ಪರಿಸರದಲ್ಲಿ ಶುದ್ಧವಾದ ಆಮ್ಲಜನಕವನ್ನು ಕುಡಿದುಕೊಂಡು ನಾವು ಆನಂದದಿಂದ ಬಾಳುತ್ತಿದ್ದೆವು. ಬೋಧನೆ, ವ್ಯಾಪಾರ, ವೈದ್ಯಕೀಯ ಹೀಗೆ ಹಲವು ರೀತಿಯ ಕೆಲಸಗಳನ್ನು ಜೀವನೋಪಾಯಕ್ಕಾಗಿ ಮಾಡಿಕೊಂಡು ಬಾಳಿ ಬದುಕುತ್ತಿದ್ದೆವು. ನಮ್ಮ ಜನರು ಎಲ್ಲ ವಿಷಯದಲ್ಲಿಯೂ ಬಹಳ ಬುದ್ಧಿವಂತರು. ಕಾಶ್ಮೀರದಲ್ಲಿ ಸರ್ವಜ್ಞ ಪೀಠವಿತ್ತು. ಆ ಪೀಠಕ್ಕೆ ದ್ವಾರಪಾಲಕರಾಗಿ ನಮ್ಮ ಕಾಶ್ಮೀರಿ ಪಂಡಿತರು ಇದ್ದರು. ಸರ್ವಜ್ಞ ಪೀಠಕ್ಕೆ ಏರಲು ಬೇಕಾದ ಅರ್ಹತಾ ಪರೀಕ್ಷೆಗೆ ಒಳಗೆ ತೆರಳುವ ಮೊದಲು ಬಾಗಿಲಲ್ಲಿ ದ್ವಾರಪಾಲಕರಾಗಿದ್ದ ನಮ್ಮ ಪಂಡಿತರು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬೇಕಾಗಿತ್ತು. ಆ ಪೀಠಕ್ಕೆ ದಕ್ಷಿಣದ ದ್ವಾರವೇ ಇರಲಿಲ್ಲ. ಏಕೆಂದರೆ ದಕ್ಷಿಣದಿಂದ ಆ ಪೀಠವನ್ನು ಏರುವಷ್ಟು ಬುದ್ಧಿವಂತರು ಯಾರೂ ಬರುತ್ತಿರಲಿಲ್ಲ. ಒಮ್ಮೆ ಮೊಟ್ಟಮೊದಲ ಬಾರಿಗೆ ಆದಿ ಶಂಕರಾಚಾರ್ಯರು ದಕ್ಷಿಣದಿಂದ ಸರ್ವಜ್ಞ ಪೀಠಾರೋಹಣಕ್ಕೆ ಬಂದರು. ಅಂದು ಶಂಕರರನ್ನೂ ಮೊದಲು ಪರೀಕ್ಷಿಸಿದ್ದು ದ್ವಾರಪಾಲಕರಾಗಿದ್ದ ನಮ್ಮ ಬುದ್ಧಿವಂತ ಪಂಡಿತರೇ.

ನಮ್ಮ ಕಾಶ್ಮೀರಿ ಹೆಣ್ಣುಮಕ್ಕಳಂತೂ ಅತ್ಯಂತ ಸುಂದರಿಯರು. ಎಂಥವರನ್ನೂ ಮೈಮರೆಸುವ ರೂಪ, ಮೈಮಾಟ ಅವರಿಗೆ ಆನುವಂಶಿಕವಾಗಿ ಬಂದದ್ದು. ಅವರ ಕೆನ್ನೆ ಕಾಶ್ಮೀರದ ಸೇಬುಹಣ್ಣಿನಷ್ಟೇ ಕೆಂಪು. ಸುಂದರ, ಸುಸಂಸ್ಕೃತ ಕಾಶ್ಮೀರಿ ಕನ್ಯೆಯರನ್ನು ಮದುವೆಯಾಗಲು ದೇಶದ ನಾನಾ ಭಾಗಗಳಿಂದ ಯುವಕರು ಆಗಮಿಸುತ್ತಿದ್ದರು. ತಮ್ಮ ರೂಪ, ವಿದ್ಯೆ, ಯೋಗ್ಯತೆಗೆ ತಕ್ಕನಾದ ವರನನ್ನು ನಮ್ಮ ಹುಡುಗಿಯರು ಆರಿಸಿಕೊಂಡು ಮದುವೆಯಾಗುತ್ತಿದ್ದರು. ಅವರಿಗೆ ಹುಟ್ಟುವ ಮಕ್ಕಳೂ ಸುಸಂಸ್ಕೃತರಾಗಿ ಬೆಳೆದು ಸನಾತನ ಧರ್ಮದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುತ್ತಿದ್ದರು.

ಉತ್ತರದಿಂದ ದಾಳಿ ಮಾಡುವ ಎಲ್ಲ ದಾಳಿಕೋರರಿಗೂ ಮೊದಲು ಎದುರಾಗುತ್ತಿದ್ದುದ್ದೇ ನಮ್ಮ ಕಾಶ್ಮೀರ. ನಮ್ಮ ನೈಸರ್ಗಿಕ ಸಂಪತ್ತನ್ನು, ಹಣ, ಚಿನ್ನಾಭರಣಗಳನ್ನು ಕೊಳ್ಳೆ ಹೊಡೆಯುವ ಉದ್ದೇಶದಿಂದ ಹಲವರು ಹೊರಗಿನಿಂದ ದಾಳಿ ಮಾಡುತ್ತಿದ್ದರು. ಆಗೆಲ್ಲ ನಾವು ನಮ್ಮ ಕೈಲಾದಷ್ಟು ಅವರನ್ನು ಹಿಮ್ಮೆಟ್ಟೆಸಿ ನಮ್ಮನ್ನು, ನಮ್ಮ ನೆಲವನ್ನು, ನಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳುತ್ತಿದ್ದೆವು. ಆದರೆ 1947 ರಲ್ಲಿ ಭಾರತ ವಿಭಜನೆಯಾಗಿ ಪಾಕಿಸ್ತಾನ ಉದಯವಾದಾಗಲೇ ನಮ್ಮ ಕಷ್ಟದ ದಿನಗಳು ಆರಂಭವಾದದ್ದು. ಪಾಕಿಸ್ತಾನಕ್ಕೆ ಹೋಗಲಿಚ್ಛಿಸಿದವರು ಅಲ್ಲಿಗೆ ಹೋದರೆ ಕೆಲವರು ಕಾಶ್ಮೀರಕ್ಕೆ ಬಂದು ಸೇರಿಕೊಂಡು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕೆಂದು ಒತ್ತಾಯಿಸತೊಡಗಿದರು. ಅವರೆಲ್ಲರೂ ಧರ್ಮದ ಅಫೀಮು ಕುಡಿದು ಮತಾಂಧತೆಯ ಹುಚ್ಚು ಹತ್ತಿಸಿಕೊಂಡಿದ್ದರು.

ಭಾರತದ ವಿಭಜನೆಯ ನಂತರ ಬಂದ ಮತಾಂಧರಿಂದ ನಮ್ಮ ಕಷ್ಟದ ದಿನಗಳು ಆರಂಭವಾದವು. ಎಲ್ಲಿ ನೋಡಿದರಲ್ಲಿ ನಮ್ಮವರನ್ನು ಜಿಹಾದಿಗಳು ಕೆಣಕಲಾರಂಭಿಸಿದರು. ನಮ್ಮ ಕೆಲಸಗಳಿಗೆ ಅಡ್ಡಿ ಪಡಿಸುವುದು, ಹಿಂದೂ ದೇಗುಲಗಳನ್ನು ಧ್ವಂಸಗೈಯ್ಯುವುದು, ನಮ್ಮ ಹೆಣ್ಣುಮಕ್ಕಳ ಮಾನಭಂಗ ದಿನೇ ದಿನೇ ಹೆಚ್ಚಾಗತೊಡಗಿತು. ನಮ್ಮ ಬದುಕು ದಿನದಿಂದ ದಿನಕ್ಕೆ ದುರ್ಲಭವಾಗುತ್ತಾ ಸಾಗಿತು. ನಮ್ಮ ಮೇಲೆ ಅತೀ ದೊಡ್ದ ಪ್ರಮಾಣದಲ್ಲಿ ದೌರ್ಜನ್ಯವಾದದ್ದು 1990 ನೇ ಇಸವಿ ಜನವರಿ ತಿಂಗಳಲ್ಲಿ. ಅಂದು ಜಿಹಾದಿಗಳು ಘೋಷಣೆ ಕೂಗಲಾರಂಭಿಸಿದರು. “ಪಂಡಿತರೇ ನಿಮ್ಮ ಮುಂದೆ ಮೂರು ಆಯ್ಕೆಗಳಿವೆ. ಒಂದು ಮತಾಂತರಕ್ಕೊಳಗಾಗಿ ಮುಸಲ್ಮಾನರಾಗಿ ಇಲ್ಲೇ ಸಂತೋಷದಿಂದ ಬದುಕುವುದು. ಎರಡನೆಯದು ಮತಾಂತರವಾಗಲು ಇಷ್ಟವಿಲ್ಲದಿದ್ದರೆ ನಮ್ಮ ಕತ್ತಿಗೆ ಕುತ್ತಿಗೆ ಕೊಟ್ಟು ಸಾಯುವುದು. ಅಥವಾ ಈ ಎರಡೂ ಬೇಡವೆಂದರೆ ಮೂರನೇ ಆಯ್ಕೆಯೂ ಇದೆ. ಈ ಕ್ಷಣವೇ ಉಟ್ಟ ಬಟ್ಟೆಯಲ್ಲೇ ನಿಮ್ಮ ಮನೆ, ಆಸ್ತಿ ಎಲ್ಲವನ್ನೂ ಬಿಟ್ಟು ಈಗಿಂದೀಗಲೇ ಕಾಶ್ಮೀರ ಕಣಿವೆಯನ್ನು ತೊರೆದುಹೋಗುವುದು. ಇಲ್ಲವೆಂದಾದಲ್ಲಿ ನಿಮ್ಮ ಪ್ರಾಣ ಹರಣವಾಗುತ್ತದೆ. ನಿಮ್ಮ ಕಣ್ಣ ಮುಂದೆಯೇ ನಿಮ್ಮ ಹೆಣ್ಣು ಮಕ್ಕಳನ್ನು ಅತ್ಯಾಚಾರಗೈಯ್ಯುತ್ತೇವೆ. “ಈ ರೀತಿ ಘೋಷಣೆಯನ್ನು ಕೂಗುತ್ತಾ ಲಕ್ಷಾಂತರ ಜನ ಜಿಹಾದಿಗಳು ಶಸ್ತ್ರಾಸ್ತ್ರಗಳನ್ನು ಹಿಡಿದು ಕಾಶ್ಮೀರದುದ್ದಕ್ಕೂ ಓಡಾಡತೊಡಗಿದರು. ನಮಗೆ ದಿಕ್ಕೇ ತೋಚದಂತಾಯಿತು.

1990 ಜನವರಿ ತಿಂಗಳೊಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಜನ ಕಾಶ್ಮೀರಿ ಪಂಡಿತರು ಜಿಹಾದಿಗಳಿಂದ ದಾರುಣವಾಗಿ ಕೊಲ್ಲಲ್ಪಟ್ಟರು. ಬೀದಿ ಬೀದಿಗಳಲ್ಲೂ ರಕ್ತದ ಕೋಡಿ ಹರಿಯಿತು. ಎಲ್ಲೆಂದರಲ್ಲಿ ನಮ್ಮ ಹೆಣ್ಣುಮಕ್ಕಳ ಅತ್ಯಾಚಾರವಾಯಿತು. ಗೋವುಗಳನ್ನು ಜಿಹಾದಿಗಳು ಮನಸೋ ಇಚ್ಛೆ ಕಡಿದು ಭಕ್ಷಿಸಿದರು. ದೇವಾಲಯಗಳನ್ನು ಭಂಜಿಸಿದರು. ನಮ್ಮ ಆಸ್ತಿ ಪಾಸ್ತಿಗಳನ್ನು ಕೊಳ್ಳೆ ಹೊಡೆದು ನಮ್ಮನ್ನು ನಿರ್ಗತಿಕರನ್ನಾಗಿ ಮಾಡಿದರು. ಹಸಿರಿನಿಂದ ಕಂಗೊಳಿಸುತ್ತಿದ್ದ ಕಾಶ್ಮೀರ ಕೆಂಪು ವರ್ಣಕ್ಕೆ ತಿರುಗಿತು. ಒಂದು ತಿಂಗಳೊಳಗೆ ಸುಮಾರು ಎರಡುವರೆ ಲಕ್ಷಕ್ಕೂ ಹೆಚ್ಚು ಜನ ಪಂಡಿತರು ಮತಾಂತರವಾಗಲು ಇಷ್ಟವಿಲ್ಲದೇ ಪ್ರಾಣ ಉಳಿಸಿಕೊಳ್ಳಲು ಅತ್ಯಂತ ನೋವಿನಿಂದ ತಮ್ಮ ತಾಯ್ನೆಲವನ್ನು ಬಿಟ್ಟು ಗುಳೇ ಹೊರಟರು. ಎಲ್ಲವೂ ಒಂದು ತಿಂಗಳೊಳಗೆ ನಡೆದು ಹೋಯಿತು. 1990 ರ ಜನವರಿ ತಿಂಗಳ ನಂತರ ಕಾಶ್ಮೀರದಲ್ಲಿ ಪಂಡಿತರ ಸುಳಿವೇ ಇರಲಿಲ್ಲ. ಎಲ್ಲೋ ಅಲ್ಪ ಸ್ವಲ್ಪ ಸಂಖ್ಯೆಯಲ್ಲಿ ಇದ್ದವರು ವೇಷ ಮರೆಸಿಕೊಂಡು ಸದಾ ಕಾಲ ಜಿಹಾದಿಗಳ ಭಯದಲ್ಲೇ ಬದುಕಬೇಕಾಯಿತು. ತಮ್ಮ ನೆಲದಲ್ಲೇ ಕಾಶ್ಮೀರಿ ಪಂಡಿತರು ಪರದೇಶಿಗಳಾದರು. ತಮ್ಮ ಮನೆಯ ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಭಾರತದ ದೂರದ ರಾಜ್ಯಗಳಿಗೆ, ದಕ್ಷಿಣ ಭಾರತದ ಕಡೆಗೆ ಅವರನ್ನು ಮದುವೆ ಮಾಡಿಕೊಡತೊಡಗಿದರು. ಅಂದು ಅತೀ ದೊಡ್ಡ ಪ್ರಮಾಣದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯ ನಂತರದ ದಿನಗಳಲ್ಲಿ ಅವ್ಯಾಹತವಾಗಿ ಮುಂದುವರೆಯಿತು. ಜಿಹಾದಿಗಳಿಗೆ ಕಡಿವಾಣವೇ ಇಲ್ಲವಾಯಿತು.

ಅತ್ಯಂತ ನೋವಿನ ಸಂಗತಿಯೆಂದರೆ ನಮ್ಮ ಮೇಲೆ ಅಷ್ಟು ದೊಡ್ಡ ಪ್ರಮಾಣದಲ್ಲಿ ದೌರ್ಜನ್ಯವಾದರೂ ಯಾರೂ ನಮ್ಮ ಪರವಾಗಿ ಧ್ವನಿಯೆತ್ತಲೇ ಇಲ್ಲ. ಆಳುವ ಸರ್ಕಾರವೂ ಜಿಹಾದಿಗಳಿಗೆ ಹೆದರಿಕೊಂಡು ಸದಾ ಮೌನವಾಗಿತ್ತು. ಅಹಿಂಸೆಯನ್ನು ಗುತ್ತಿಗೆ ಪಡೆದವರಂತೆ ವರ್ತಿಸುವ ಬುದ್ಧಿಜೀವಿಗಳು, ಮಾನವ ಹಕ್ಕುಗಳ ಹೋರಾಟಗಾರು, ಮಾಧ್ಯಮ ಮಿತ್ರರು ಎಲ್ಲರೂ ನಮ್ಮ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಜಾಣಕುರುಡರಾಗಿದ್ದರು. ಏಕೆಂದರೆ ಅದರ ವಿರುದ್ಧ ಧ್ವನಿಯೆತ್ತಿದರೆ ಜಿಹಾದಿಗಳು ತಮ್ಮನ್ನು ಉಳಿಸಲಾರರು ಎಂದು ಎಲ್ಲರಿಗೂ ಗೊತ್ತಿತ್ತು. ನೂರಿಪ್ಪತ್ತು ಕೋಟಿ ಜನಸಂಖ್ಯೆಯುಳ್ಳ ಅಖಂಡ ಭಾರತಕ್ಕೆ ಕೆಲವೇ ಲಕ್ಷ ಜನ ಜಿಹಾದಿಗಳನ್ನು ತಡೆಯುವ ಶಕ್ತಿ ಇರಲಿಲ್ಲ.

ಒಂದು ಸಮೀಕ್ಷೆಯ ಮಾಹಿತಿ ಕೊಡುತ್ತೇವೆ ಕೇಳಿ. ನಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಲು, ಕಡೇ ಪಕ್ಷ ವಿರೋಧಿಸಿ ನಮ್ಮ ಕೂಗನ್ನು ಆಳುವ ಸರ್ಕಾರಕ್ಕೆ ಮುಟ್ಟಿಸಲು ಕಾಶ್ಮೀರಿ ಪಂಡಿತ್ ಸಂಗರ್ಷ ಸಮಿತಿ(KPSS) ಹುಟ್ಟಿಕೊಂಡಿತು. ಅದು ಮಾಡಿರುವ ಸಮೀಕ್ಷೆಯ ಪ್ರಕಾರ ಕಾಶ್ಮೀರದಲ್ಲಿ ವಾಸವಿದ್ದ 367289 ಜನ ಪಂಡಿತರ ಪೈಕಿ 364130 ಜನ ಪಂಡಿತರು 1990 ರಿಂದ 2011 ರ ನಡುವಿನ ಅವಧಿಯಲ್ಲಿ ಕಾಶ್ಮೀರವನ್ನು ತೊರೆದಿದ್ದಾರೆ. ಅಂದರೆ 99.13 ಶೇಕಡಾ ಜನರು ಇಪ್ಪತ್ತು ವರ್ಷಗಳಲ್ಲಿ ಕಣಿವೆಯನ್ನು ತೊರೆದಿದ್ದಾರೆ. 1990 ರಲ್ಲಿ ಅತೀ ಹೆಚ್ಚಿನ ದೌರ್ಜನ್ಯವಾಗಿ ಎರಡುವರೆ ಲಕ್ಷದಷ್ಟು ಪಂಡಿತರು ಕಣಿವೆಯನ್ನು ತೊರೆದ ಮೇಲೂ ಮೂರು ಲಕ್ಷದಷ್ಟು ಪಂಡಿತರು ಅಲ್ಲಿ ವಾಸವಾಗಿದ್ದರು. ಆದರೆ ನಂತರದ ದಿನಗಳಲ್ಲಿ ಜಿಹಾದಿಗಳ ಕಾಟ ತಾಳಲಾರದೆ ಕಣಿವೆಯನ್ನು ತೊರೆದರು. ಎರಡು ವರ್ಷಗಳ ಹಿಂದೆ KPSS ನಡೆಸಿದ ಮತ್ತೊಂದು ಸಮೀಕ್ಷೆಯಲ್ಲಿ ಕೇವಲ 3000 ಜನ ಪಂಡಿತರು ಮಾತ್ರ ಕಾಶ್ಮೀರದಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.

ಆಳುವ ಸರ್ಕಾರ ಎಲ್ಲ ಪ್ರಜೆಗಳನ್ನೂ ಸಮಾನವಾಗಿ ಪರಿಗಣಿಸಿ ಒಳ್ಳೆಯ ಆಡಳಿತ ನೀಡಬೇಕು. ಆದರೆ ನಮ್ಮ ವಿಷಯದಲ್ಲಿ ಮಾತ್ರ ನಾವೇ ಆರಿಸಿದ ಜನಪ್ರತಿನಿಧಿಗಳು ಸದಾಕಾಲ ಮೌನವಾಗೇ ಇದ್ದರು. ಆರ್ಟಿಕಲ್ 370 ರದ್ದಾದರೆ ನಮ್ಮ ಪಾಲಿಗೆ ಸ್ವಲ್ಪವಾದರೂ ಒಳ್ಳೆಯ ದಿನಗಳು ಆರಂಭವಾಗುವುದೆಂದು ನಾವು ಆಶಿಸಿದ್ದೆವು. ಎಲ್ಲ ರಾಜಕೀಯ ಪಕ್ಷಗಳೂ ಚುನಾವಣಾ ಸಮಯದಲ್ಲಿ ಕಣಿವೆಗೆ ಬಂದು ಭಾರೀ ಭಾಷಣ ಮಾಡಿ ಪಂಡಿತರಿಗೆ ಜಿಹಾದಿಗಳ ಕಾಟವಿಲ್ಲದೆ ಕಾಶ್ಮೀರದಲ್ಲಿ ಸುರಕ್ಷಿತ ನೆಲೆ ಒದಗಿಸುವುದಾಗಿ ಆಶ್ವಾಸನೆ ನೀಡುತ್ತಿದ್ದವು. ನಾವು ಪ್ರತೀ ಸಲವೂ ರಾಜಕಾರಣಿಗಳ ಮಾತನ್ನು ನಂಬಿ ನಮ್ಮ ತಾಯ್ನೆಲಕ್ಕೆ ಮರಳುವ ಕನಸು ಕಾಣುತ್ತಿದ್ದೆವು. ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲರೂ ಕಾಶ್ಮೀರವನ್ನೂ,ಪಂಡಿತರನ್ನೂ ಮರೆಯುತ್ತಿದ್ದರು.

2014 ರಲ್ಲಿ ಮೊದಲ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ನಮ್ಮವರು ಒಂದಷ್ಟು ಖುಷಿಯಾದರು. ಏಕೆಂದರೆ ಪ್ರಧಾನಿಯಾಗಿ ಆಯ್ಕೆಯಾಗಿದ್ದು ನರೇಂದ್ರ ಮೋದಿ. ಅವರಿಗೆ ನಾವು ಅನುಭವಿಸಿದ ನೋವಿನ ಬಗ್ಗೆ ಅರಿವಿತ್ತು. ಅವರು ನಮಗಾಗಿ ಕಾಶ್ಮೀರದಲ್ಲಿ ಪ್ರತ್ಯೇಕ ಕಾಲನಿಗಳನ್ನು ಕಟ್ಟಿಸುವುದಾಗಿ ಹೇಳಿದಾಗ ನಾವು ಸಂತಸಗೊಂಡಿದ್ದೆವು. ಮೋದಿಯೇ ಮಾಡಿರುತ್ತಾರೆ ಎಂದಮೇಲೆ ಜಿಹಾದಿಗಳಿಂದ ರಕ್ಷಣೆಯನ್ನೂ ಒದಗಿಸಿಯಾರು ಎಂದು ನಾವು ಭಾವಿಸಿದ್ದೆವು. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ವರ್ಷ ಕಾಶ್ಮೀರದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರ್ಕಾರ ಅಸ್ತಿಸ್ತ್ವಕ್ಕೆ ಬಂತು. ಇನ್ನೇನು ನಮ್ಮವರಿಗೆ ಕಾಶ್ಮೀರದಲ್ಲಿ ನೆಲೆ ಸಿಕ್ಕೇಬಿಟ್ಟಿತು ಎಂದು ನಾವು ಭಾವಿಸಿದೆವು.

ಆದರೆ ಆಗಿದ್ದೇ ಬೇರೆ. ಕಾಶ್ಮೀರಿ ಪಂಡಿತರಿಗೆ ಒಳ್ಳೆಯ ದಿನಗಳು ಬರುವುದು ಹಾಗಿರಲಿ. ಚುನಾಯಿತ ಮುಖ್ಯಮಂತ್ರಿ ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡಲಾರಂಭಿಸಿದರು. ಪಾಕಿಸ್ತಾನದ ಧ್ವಜ ಹಾರಿಸಿದರೂ ಯಾರೂ ಕಮಕ್ ಕಿಮಕ್ ಅನ್ನುತ್ತಿರಲಿಲ್ಲ. ನಮಗೆ ಮತ್ತೆ ನಿರಾಶೆಯಾಯಿತು.ಬಿಜೆಪಿ-ಪಿಡಿಪಿ ಸರ್ಕಾರ ಆಗಾಗ ನಮ್ಮ ಬಗ್ಗೆ ಮಾತಾಡುತ್ತಿದ್ದುದ್ದನ್ನು ಬಿಟ್ಟರೆ ನಮಗಾಗಿ ಏನೂ ಮಾಡಲಿಲ್ಲ. ನಮಗಾಗಿ ಪ್ರತ್ಯೇಕ ಬಡಾವಣೆ ನಿರ್ಮಿಸಿಕೊಡುತ್ತೇವೆ ಎಂದಿದ್ದ ಕೇಂದ್ರದ ಬಿಜೆಪಿ ಸರ್ಕಾರವೂ ನಮ್ಮ ಬಗ್ಗೆ ಮೌನ ತಳೆದಿದೆ. ಮೋದಿಯವರಿಗಂತೂ ವಿದೇಶ ಪ್ರವಾಸ, ಆಂತರಿಕ ಭದ್ರತೆ, ದೇಶದ ಅಭಿವೃದ್ಧಿಯ ಕೆಲಸಗಳ ನಡುವೆ ನಾವು ಮರೆತು ಹೋಗಿದ್ದರೆ ಅದು ವಿಶೇಷವೇನೂ ಅಲ್ಲ.

ಮೊದಲೇ ಹೇಳಿದಂತೆ ನಾವು ಹತಭಾಗ್ಯರು. ಸಾವಿರಾರು ವರ್ಷಗಳಿಂದ ಬದುಕಿ ಬಾಳಿದ್ದ ನಮ್ಮ ತಾಯ್ನೆಲ ಕಾಶ್ಮೀರದಲ್ಲೇ ನಮಗೆ ನೆಲೆ ಇಲ್ಲವಾಯಿತು. ದೇಶದ ವಿವಿಧ ಭಾಗಗಳಲ್ಲಿ ಹರಿದು ಹಂಚಿಹೋಗಿ, ತಮ್ಮನ್ನು ತಮ್ಮ ಬಂಧು ಭಾಂದವರನ್ನು ಕಳೆದುಕೊಂಡು, ಪ್ರತಿಕ್ಷಣವೂ ತಮ್ಮನ್ನು ಕಾಡುವ ದುರಂತ ನೆನಪುಗಳೊಂದಿಗೆ ಕಾಶ್ಮೀರಿ ಪಂಡಿತರು ಜೀವನೋಪಾಯಕ್ಕಾಗಿ ಏನೇನೋ ಕೆಲಸ ಮಾಡುತ್ತಾ ಬದುಕಿದ್ದಾರೆ. ಅವರು ಕಣಿವೆಗೆ ಮರಳುವ ದಿನ ಎಂದು ಬರುವುದೋ?

ಹೋರಾಡಿ ಸತ್ತರೆ ವೀರಸ್ವರ್ಗ ಪ್ರಾಪ್ತಿಯಾಗುತ್ತದೆ. ನಾವೋ ಯಾವ ಪ್ರತಿರೋಧವನ್ನೂ ತೋರದೇ ಮತಾಂತರವಾಗಲು ಇಷ್ಟವಿಲ್ಲದಿದ್ದರಿಂದ ಜಿಹಾದಿಗಳ ಕತ್ತಿಗೆ ಒಂದೇ ಏಟಿಗೆ ಬಲಿಯಾದವರು.ನಮಗೆಲ್ಲಿಯ ಸ್ವರ್ಗ? ನರಕಕ್ಕೆ ಹೋಗುವಷ್ಟು ಪಾಪವನ್ನೂ ಮಾಡಿದವರಲ್ಲ ನಾವು. ಹಾಗಾಗಿ ಅಂದು ಸತ್ತ ಪಂಡಿತರುಗಳಾದ ನಾವು ಅತೃಪ್ತ ಆತ್ಮಗಳಾಗಿದ್ದೇವೆ. ಇಂದಿಗೂ ಅಳಿದುಳಿದ ಬೆರಳೆಣಿಕೆಯ ಪಂಡಿತರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಮೂಕ ಸಾಕ್ಷಿಯಾಗಿದ್ದೇವೆ. ಆದರೂ ನರೇಂದ್ರ ಮೋದಿ ನಮ್ಮವರಿಗಾಗಿ ಏನಾದರೂ ಮಾಡಿಯಾರು ಎಂಬ ಕ್ಷೀಣ ಆಸೆಯೊಂದು ನಮ್ಮಲ್ಲಿ ಇನ್ನೂ ಉಳಿದಿದೆ. ಪಂಡಿತರು ಮತ್ತೆ ಕಾಶ್ಮೀರಕ್ಕೆ ಬಂದು ಜಿಹಾದಿಗಳ ಕಾಟವಿಲ್ಲದೇ ನಿರಾತಂಕವಾಗಿ, ಸಂತೋಷದಿಂದ ಬದುಕಿ ಬಾಳಿದ ದಿನ, ಕಾಶ್ಮೀರ ಮತ್ತೆ ತನ್ನ ಗತವೈಭವವನ್ನು ಮರಳಿ ಪಡೆದ ದಿನ ನಮ್ಮಂಥ ಆತ್ಮಗಳಿಗೆ ಮುಕ್ತಿ ಸಿಗುತ್ತದೆ.

Facebook ಕಾಮೆಂಟ್ಸ್

Lakshmisha J Hegade: ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.
Related Post