X

ಆತ್ಮ ಸಂವೇದನಾ ಅಧ್ಯಾಯ 20

ಆತ್ಮ ಸಂವೇದನಾ ಅಧ್ಯಾಯ 19

ಆತ್ಮನಿಗೆ ಹಿಗ್ಗೋ ಹಿಗ್ಗು. ಸಂವೇದನಾ ಅವನ ಸನಿಹದಲ್ಲಿಯೇ ಓಡಾಡಿಕೊಂಡು, ಹಾಡಿಕೊಂಡಿರುತ್ತಿದ್ದಳು. ಅವನಿಗೇನೋ ಮುದ. ಮಾನಸಿಕವಾಗಿ ಸಂಗಾತಿ ದೊರೆತಿದ್ದಳು. ಅದೇ ಕಾರಣಕ್ಕೆ ಹೊರಗಿನ ಪ್ರಪಂಚದ ಅರಿವೇ ಇಲ್ಲದೇ ಅರಾಮವಾಗಿರುತ್ತಿದ್ದ. ಸಂವೇದನಾಳ ನಗು, ಅವಳ ಮುಗ್ಧ ಮುಖ, ಮುದ್ದು ಭಾಷೆ ಇವಿಷ್ಟೇ ಸಾಕಿತ್ತು. ವರ್ಷಿ, ಎರಡನೆಯ ಸೂರ್ಯ, ಭೂಮಿಯ ಅಸ್ಥವ್ಯಸ್ತತೆ ಇವೆಲ್ಲ ಆತನಿಗೆ ಮರೆತೇ ಹೋಗಿವೆ;

 ನೆನಪಾದ ದಿನವೂ ನೆನಪಿಲ್ಲ.

     ಎರಡನೇಯ ಸೂರ್ಯನನ್ನು ಸಮಾಧಿ ಮಾಡಿ ಭೂಮಿಯನ್ನು ಉಳಿಸಬೇಕು, ಭೂಮಿಯಲ್ಲಿ ಮತ್ತೆ ಭಾವನೆಗಳು ಮೊಳಕೆಯೊಡೆಯುವಂತಾಗಬೇಕು ಎಂಬ ಕನಸು ಕಂಡ ಆತ್ಮ ಜಡವಾಗಿದ್ದ. ಯೋಚನೆಗಳು ಸತ್ತು ಹೋಗಿದ್ದವು.

     ವಿಶ್ವಾತ್ಮನಿಗೂ ಸಾಮಾನ್ಯನಿಗೂ ಇದು ವ್ಯತ್ಯಾಸ;

     ಇದೇ ವ್ಯತ್ಯಾಸ.

     ಸಾಮಾನ್ಯನಿಗೆ ಒಂದು Comfort Zone ಕೈ ಬೀಸಿದರೆ ಮತ್ತವ ಮುಂದೆ ಸಾಗುವುದಿಲ್ಲ. ತಾನು ತನ್ನ ಸುಖದ ಹೊರತಾಗಿ ಏನೂ ಕಾಣಿಸುವುದಿಲ್ಲ.

         ಎಲ್ಲವೂ ಇದ್ದಾಗ ಕೂಡ ಬೇರೆಯವರ ಒಳಿತು ಯೋಚಿಸಕು ಮುಕ್ತ ಆತ್ಮ ಬೇಕು. ವಿಶಾಲ ಭಾವವಿರಬೇಕು. ಎಲ್ಲ ಸುಖಗಳು ಇದ್ದು ಬೇರೆಯವರ ನೋವಿಗೆ ಮರುಗುವ ಮನಸ್ಸು ಬೇಕು. ಬದುಕಿನ ಸಾರ್ಥಕತೆ ಅಲ್ಲಿದೆ. ಇದು ಸಾಮಾನ್ಯರಿಗೆ ಬರುವಂಥದ್ದಲ್ಲ. ಅದೆಷ್ಟೋ ಕ್ರಾಂತಿಕಾರರು ಬಲಿಯಾಗುವುದು ಇದೇ ದುರ್ಬಲತೆಗೆ. ಎಲ್ಲವನ್ನೂ ಸರಿ ಮಾಡಲು ಹೊರಟವ ವ್ಯವಸ್ಥಿತ ಸುಖದ ಜೀವನ ದೊರೆತಾಗ ತಪ್ಪು ಮಾಡಿಬಿಡುತ್ತಾನೆ. ಅದರಿಂದ ಹೊರಬರಲು ಬಯಸುವುದೇ ಇಲ್ಲ. ನನಗಿಷ್ಟು ಸಾಕು, ಇಷ್ಟೇ ಸಾಕು ಎಂಬ ಮನೋಭಾವ. ಕಾಲದಲ್ಲಿ ಹಿಂಬಾಲಿಸಿದ ಅನುಯಾಯಿಗಳು ಮರೆತೇ ಹೋಗುತ್ತಾರೆ; ಮತ್ತೆ ನೆನಪೂ ಆಗುವುದಿಲ್ಲ.

      ಆತ್ಮನು ಅಂಥದೇ ಪರಿಸ್ಥಿತಿಯಲ್ಲಿ. ಹೊರಗಿನ ಕ್ರೂರ ಬಿಸಿಲಿಗೆ ಕರಗಿ ಬೀಳುವ ಪ್ರಾಣಿ-ಪಕ್ಷಿಗಳು ಕಾಣುತ್ತಿಲ್ಲ. ಆಹಾರವಿಲ್ಲದೆ ಬರಡಾದ ಮರಗಿಡಗಳು ಅವನ ಆತ್ಮವನ್ನು ಕೆಣಕುತ್ತಿಲ್ಲ. ನೀರಿನ ಪ್ರಮಾಣ ದಿನೇ ದಿನೇ ಏರುತ್ತಿತ್ತು, ಅದಕ್ಕೆ ಪೈಪೋಟಿಯೆಂಬಂತೆ ಉಷ್ಣತೆಯು ಕೂಡ.

      ಪ್ರಳಯದ ಮುನ್ಸೂಚನೆ;

      ಭೂಮಿಯ ಅಂತ್ಯಕ್ಕೆ ನಾಂದಿ.

           ಅದಾವುದರ ಪರಿವೆಯಿಲ್ಲ ಆತ್ಮನಿಗೆ. ಅವನಿಗೆಲ್ಲ ಸಂವೇದನಾ, ಸಂವೇದನಾ ಅಷ್ಟೇ. ಆದರೂ ಸಂವೇದನಾಳ ಚಿಂತನೆಯೇ ವಿಭಿನ್ನವಾಗಿತ್ತು. ಚಿಂತೆಯೇ ಚಿತೆಯಂತಾಗಿತ್ತು. ಅವಳು ಆತ್ಮನಲ್ಲಿ ಕಳೆದುಹೋದ ಭಾವನೆಗಳ ಜೊತೆ ಉಳಿದ ದಿನ ಭೂಮಿಯ ಬಗ್ಗೆಯೇ ಚಿಂತಿಸಿದಳು. ಎರಡನೇ ಸೂರ್ಯ ವಿನಾಶವಾಗದಿದ್ದರೆ ಈ ಭೂಮಿಯ ವಿನಾಶ ಖಚಿತ. ಎಲ್ಲವೂ ಅಂತ್ಯ ಕಾಣುತ್ತದೆ, ಏನಾದರೂ ಮಾಡಲೇಬೇಕು ವರ್ಷಿಯ ಜೊತೆ ಮಾತನಾಡುವುದು ಒಳಿತು ಎಂದು ನಿರ್ಧರಿಸಿದಳು. ಅದಕ್ಕೂ ಮುನ್ನ ಆತ್ಮನಲ್ಲಿ ಚರ್ಚಿಸಿ ಮುಂದುವರೆಯುವುದು ಒಳಿತೆಂದುಕೊಂಡಳು.

     ಅವ ಬೀಗಿದ, ಅವಳು ಬಂದಿರುವುದು ತಿಳಿದೂ ಸುಮ್ಮನೆ ಮಲಗಿದ್ದ. ಹತ್ತಿರ ಬಂದೊಡನೆ ಸೆಳೆದೆಳೆದುಕೊಳ್ಳುವ ತುಂಟ ಬುದ್ಧಿ.

     ಸಂವೇದನಾ ಹೆಣ್ಣು ಜೀವ, ಅರ್ಥ ಮಾಡಿಕೊಳ್ಳುವ ಶಕ್ತಿ ಗಂಡಿಗಿಂತ ಹೆಚ್ಚು.

    “ನೀನು ನಿದ್ರಿಸುತ್ತಿಲ್ಲ ಎಂದು ಗೊತ್ತು” ಅಲ್ಲಿಯೇ ನಿಂತಳು.

     ಒಂದೇ ಕಣ್ಣು ತೆರೆದು ನೋಡಿದ ಆತ್ಮ. ಬಾಗಿಲ ಬಳಿಯೇ ನಿಂತಿದ್ದಳು. ಅವಳು ಬಂದ ರೀತಿಯಲ್ಲೇ ಏನೋ ಹೊಸ ವಿಚಾರ ಹೊತ್ತು ಬಂದಿರುವಳು ಗೆಳತಿ ಎಂದುಕೊಂಡ.

     “ಓ, ನನ್ನ ಸುಂದರ ಭಾವಯಾನದ ಹುಚ್ಚು ಹೊಯ್ದಾಟವೇ, ಹೇಳು ಗೆಳತಿ” ಹಿತವಾಗಿ ನಗುತ್ತ ಎದ್ದು ಕುಳಿತ. ಸಂವೇದನಾ ಸನಿಹ ಬಂದು ನಿಂತಿದ್ದಳು. ಆತ್ಮ ಅವಳ ಕೈ ಹಿಡಿದು ಬರಸೆಳೆದ.

     ಮಡಿಲಲ್ಲಿ ಕುಳಿತುಕೊಂಡಳು ಅವಳು;

     ಮನದಲ್ಲಿ ಶಾಶ್ವತ ಸ್ಥಾನ.

     ಅವನ ಮುಂಗುರುಳಲ್ಲಿ ನವಿರಾಗಿ ಬೆರಳಾಡಿಸತೊಡಗಿದಳು, ಆತ್ಮ ಅವಳೆದೆಯ ಕಣಿವೆಯಲ್ಲಿ ಮುಖವಿಟ್ಟ. ಅದೊಂದು ಅಪೂರ್ವ ರಾಗ.

     ಹೃದಯಗಳು ಮಿಡಿಯುತ್ತಿದ್ದವು;

     ವೀಣೆ ನುಡಿಯುತ್ತಿತ್ತು.

      ಈ ಕ್ಷಣದಲ್ಲೇ ಭಾವ ಸಮಾಧಿಯಾಗಿದ್ದರೆ ಎಂದುಕೊಂಡ ಆತ್ಮ. ಗಂಡು ಎಷ್ಟು ಗಡಸು ಎಂದುಕೊಂಡರೂ ಆಟ ಸೋಲುವ ಪರ್ವ ಅದು. ಹೆಣ್ಣು ತನ್ನದೆಲ್ಲವನ್ನೂ ಕೊಟ್ಟು ಬರಿದಾಗಿ ಬೆರೆಯುವ ಮರ್ಮ ಅದು. ಸತ್ವ ದೇವತೆ ಅವಳು. ಎಲ್ಲವನ್ನೂ ಬಚ್ಚಿಟ್ಟುಕೊಳ್ಳುತ್ತಾಳೆ, ಎಲ್ಲವನ್ನೂ ಕೊಡುತ್ತಾಳೆ.

      ತಾನಿಷ್ಟು ದಿನ ಏನನ್ನು ಕಳೆದುಕೊಳ್ಳುತ್ತಿದ್ದೆ ಎಂದು ತಿಳಿದುಕೊಂಡ.

    “ಆತ್ಮ” ಎಂದಳು. ಮಂದ್ರ ಧ್ವನಿ, ಕೋಗಿಲೆ ಉಳಿದಂತೆ, ಸ್ವಲ್ಪವೂ ಒಡಕಿಲ್ಲ.

       ಅರೆತೆರೆದ ಕಣ್ಣುಗಳ ಆತ್ಮ”ಮಮ್” ಎಂದಷ್ಟೇ ಹೇಳಿ ಮೌನವಾದ. ಮನಸುಗಳೇ ಮಾತನಾಡಲಿ ಎಂದು ಮಾತು ಗೌಣವಾಯಿತು.

       ಸದ್ದಿಲ್ಲದೇ ನಿನ್ನ ಕೊರಳ ಸೆರೆಯ ಮಡುವಿನಲಿ..

       ಮುಖವಿಟ್ಟ ತಲೆಯಲಿ ಕೈ ಬೆರಳಾಡಿಸಿ. .

       ನಿಡಿದಾದ ಉಸಿರು ಬಿಡೆಯಾ ಒಮ್ಮೆ. . ??

     “ನೀನು ಬದಲಾಗಿಬಿಟ್ಟೆ ಆತ್ಮ”

       ಆತ್ಮನಿಗೆ ಏನೂ ಅರ್ಥವಾಗಲಿಲ್ಲ, ಮುಖವೆತ್ತಿ ಅವಳ ಮುಖ ನೋಡಿದ. ಕೈ ಅವಳ ಸೊಂಟದಂಚಿನ ನಿರೆಯಲಿ ನವಿರಾಗಿ ಲಾಸ್ಯವಾಡುತ್ತಿತ್ತು.

     “ಯಾವುದರ ಬಗ್ಗೆ ಮಾತನಾಡುತ್ತಿರುವೆ ಸಂವೇದನಾ?” ಕುತ್ತಿಗೆಯ ಬಳಿ ಮುತ್ತಿಟ್ಟ.

        ಮಾತನಾಡುವ ಮುನ್ನ ಮೌನವೇ ಚೆನ್ನ ಎಂದೊಮ್ಮೆ ಯೋಚಿಸು ಗೆಳತಿ ಹಿತವಾಗಿದೆ ನನಸು ಎಂದು ಮನದಲ್ಲೇ ಮಾತಾದ ಆತ್ಮ.

      “ನಾನೇಕೆ ನಿನ್ನ ಇಷ್ಟ ಪಟ್ಟೆ ಆತ್ಮ?” ಪ್ರಶ್ನೆ ನೇರವಾಗಿತ್ತು.

      “ನಾನು ನಿನ್ನ ಸೃಷ್ಟಿಸಿದ್ದು, ಭಾವನಾಜೀವಿ, ಅದಕ್ಕೂ ಮೀರಿ ಹರೆಯದ ತರುಣ” ಎಂದು ಹೇಳಬೇಕೆಂದುಕೊಂಡ ಆದರೂ ತಿಳಿದಿಲ್ಲ ಎಂಬಂತೆ ಮುಗ್ಧವಾಗಿ ತಲೆಯಾಡಿಸಿದ.

          ಕೆಲವೊಮ್ಮೆ ಎಲ್ಲ ಗೊತ್ತು ಎನ್ನುವ ಹುಡುಗನಿಗಿಂತ ತಿಳಿದಿಲ್ಲ ಎನ್ನುವ ಗೆಳೆಯನೆ ಇಷ್ಟವಾಗುತ್ತಾನೆ ಹುಡುಗಿಗೆ.

       “ಆತ್ಮ ನಿನ್ನನ್ನು ನಾನು ಇಷ್ಟಪಡಲು ಒಂದೇ ಕಾರಣ ನೀನು ಭೂಮಿಯ ಮೇಲೆ ತೋರಿಸಿದ ಕಾಳಜಿ. ವರ್ಷಿಯ ಜೊತೆಗಿನ ನಿನ್ನ ದ್ವಂದ್ವ ಹಿಡಿಸಿತು ನನಗೆ. ಬೇರೆ ಏನನ್ನೋ, ಇತರ ಜೀವಿಗಳನ್ನೋ ಅಷ್ಟು ಪ್ರೀತಿಸುವ ನೀನು ಸ್ವಂತದ ವಸ್ತುವನ್ನು ಎಷ್ಟು ಇಷ್ಟಪಡಬಹುದು ಎಂಬ ಭಾವಕ್ಕೆ ಮರುಳಾದೆ ನಾನು” ನಾಚಿಕೊಂಡಳು.

         ಆತ್ಮ ತನ್ನೊಳಗಿಂದ ಬರುತ್ತಿದ್ದ ಭಾವನೆಗಳನ್ನು ಹತ್ತಿಕ್ಕಲು ಬಹಳವೇ ಪ್ರಯತ್ನಿಸಿದ. ಮನಸ್ಸಿನ ಯೋಚನೆಗಳಿಗೆ ಮುಖವೇ ಕಲಾವೇದಿಕೆ. ಅದರಲ್ಲೂ ಆತ್ಮ ಬಹಳ ಭಾವುಕ.

             ಸಂವೇದನಾಳ  ಯೋಚನೆಯ ಧಾಟಿಯನ್ನು ನೋಡಿ ಬೆರಗಾದ ಆತ್ಮ. ತಾನೆಷ್ಟು ಸೀಮಿತವಾಗಿ ಯೋಚಿಸಿದೆ? ನಾನೇಕೆ ನನ್ನ ಪರಿಧಿಯನ್ನು ಇಷ್ಟು ಚಿಕ್ಕದು ಮಾಡಿಕೊಂಡೆ? ನಾಚಿಕೆಯೆನ್ನಿಸಿತು ಆತ್ಮನಿಗೆ.

      “ಆತ್ಮ ಒಮ್ಮೆ ಹೊರಗೆ ನೋಡು, ಸಾಯುತ್ತಿರುವ ಮುಖಗಳನ್ನು ನೋಡು. ಸಾಯುತ್ತಿರುವವರ ಕೂಗನ್ನು ಕೇಳು. ಭೂಮಿಯ ಆತ್ಮದ ಅಳಲನ್ನು ಆಲಿಸು. ಇಷ್ಟು ಸುದೀರ್ಘ ವರ್ಷಗಳು ತನ್ನನ್ನು ತಾನು ಕೊಂದು ಬೆಳೆಸಿದ ಎಲ್ಲವೂ ನಾಶವಾಗುತ್ತಿದೆ. ಅಳುತ್ತಿರುವ ಭೂಮಿಯ ನೋವನ್ನು ಕೇಳು.

      ನೀನು ಸೀಮಿತವಾಗಿರಬಾರದು ಆತ್ಮ. ನೀನು ಎಲ್ಲವನ್ನೂ ಮೀರಬೇಕು. ನಿನಗೆ ಭಾವನೆ ತುಂಬಿದ, ಪ್ರೀತಿಯುಕ್ಕುವ, ನಿನ್ನೊಬ್ಬನನ್ನೇ ಪೂರ್ತಿಯಾಗಿ ಪ್ರೀತಿಸುವ ಹೆಣ್ಣಿನ ಸಾಂಗತ್ಯ ಬೇಕಲ್ಲವೇ? ಆತ್ಮ, ಒಬ್ಬಳು ಭಾವನೆ ತುಂಬಿದ ಗೆಳತಿ, ಪ್ರೀತಿ ಹರಿಸುವ ಮುಗ್ಧೆ ಗಂಡಿನಿಂದ ಬಯಸುವುದು ಇದನ್ನೇ. ಅವನು ಪರಿಧಿಯಿಲ್ಲದವನಾಗಿರಬೇಕು. ಎಲ್ಲವನ್ನೂ, ಎಲ್ಲರನ್ನೂ ಮೀರಬೇಕು. ಬದುಕಿನೆತ್ತರ ಸೇರಬೇಕು.

       ದಬ್ಬಾಳಿಕೆ, ಹಿಂಸೆಯದಲ್ಲ ನಿನ್ನ ಮನಸ್ಸನ್ನು ಕೇಳಿ ನೋಡು. ನಾನು ಬಯಸುತ್ತಿರುವುದು ಏನೆಂದು ನಿನಗೇ ತಿಳಿದು ಹೋಗುತ್ತದೆ ಆತ್ಮ.

       ಕೇವಲ ದುಡ್ದನ್ನು ಬಯಸುವವರು, ಅಂತಸ್ತನ್ನು ಏರಲಿಚ್ಛಿಸುವವರು, ಐಷಾರಾಮಿಗಳಲ್ಲೇ ಸುಖ ಹುಡುಕಿಕೊಳ್ಳುವ ಹುಡುಗಿಯರಾದರೆ ನೀನು ಈಗಿರುವ ರೀತಿ ಸರಿ. ಅವರಿಗೆ ಎಲ್ಲ ಸುಖಗಳು ಬೇಕು ಜೊತೆಗೆ ಭೋಗದ ಕಾಮದ ತೃಪ್ತಿಯು ಇರಬೇಕು. ನೀನು ಅಷ್ಟನ್ನೇ ಬಯಸುವಿಯಾದರೆ ನನ್ನ ದೇಹ ಸೃಷ್ಟಿಸಿದವ ನೀನು. ಇದು ನಿನ್ನದೇ ಸ್ವಂತ, ಹೇಗೆ ಬೇಕಾದರೂ ಬಳಸು. ಆದರೆ ಆತ್ಮ” ನಿಲ್ಲಿಸಿದಳು.

      ಅವಳ ಮನ ಮುಂದಿನ ಮಾತೇ ಕೋರಿಕೆ ಗೆಳೆಯಾ ಈಡೇರಿಸೆಯಾ ಎನ್ನುವಂತಿತ್ತು. “ನಿನಗೆ ಬೇಕಾಗಿರುವುದು ನನ್ನ ಮನಸ್ಸೇ ಆದರೆ, ನನ್ನೆಡೆಗೆ ನಿನ್ನ ಭಾವನೆಗಳು ನಿಜವೇ ಆಗಿದ್ದರೆ ನೀನು ಎಲ್ಲವನ್ನೂ ಮೀರಬೇಕು ಆತ್ಮ, ನಿನಗೆ ನೀನು ಹಾಕಿಕೊಂಡ ಬೇಲಿಯನ್ನು, ವರ್ಷಿಯನ್ನು, ಕೊನೆಗೆ ಎಲ್ಲದರ ಹಿಂದೆ ನಿಂತು ಸೂತ್ರಧಾರಿಯಾದ ವಿಶ್ವಾತ್ಮನನ್ನು ಕೂಡ ನೀನು ಮೀರಬೇಕು ಆತ್ಮ. ನಾನು ನಿನ್ನ ಜೊತೆ ನಿಲ್ಲುತ್ತೇನೆ. ಕೊನೆಯುಸಿರತನಕ ಪಕ್ಕದಲ್ಲಿ ಪಿಸುಗುಡುವೆ. ಈ ಭೂಮಿಯಲ್ಲಿ ಮತ್ತೆ ಪ್ರೀತಿಯ ಹಸಿರು ಚಿಗುರಲಿ, ಭಾವನೆಗಳ ನಾದ ಹೊಮ್ಮಲಿ, ಸಾಯುತ್ತಿರುವ ಕಂಗಳ ಹೊಳಪು ಉಳಿಸು ಆತ್ಮ” ಮುಗ್ಧವಾಗಿ ಅವನ ಮುಖವನ್ನೇ ನೋಡುತ್ತಿದ್ದಳು.

        ಕಂಗಳಿಗೂ ಹಸಿವು;

       ಮನಸಿಗೂ ಕಾವು.

       ಆತ್ಮ ಆಕೆಯ ಮುಖ ನೋಡಿದ. ಅವಳ ಮನಸ್ಸಿನೆದುರು ತನ್ನ ವಯಸ್ಸೂಚಿಕ್ಕದೇ ಎಂದುಕೊಂಡ. ಅವನ ಕಂಗಳಲಿ ಒಂದೇ ಸಮನೇ ನೀರು ಹರಿಯತೊಡಗಿತು ಧಾರಾಕಾರವಾಗಿ… ಮಗು ಅತ್ತಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ. ಪಕ್ಕ ಕುಳಿತು ಅವನನ್ನು ತನ್ನ ಮಡಿಲಿಗೆ ಎಳೆದುಕೊಂಡಳು ಸನಾ. ಇಬ್ಬರು ಮೌನದಲ್ಲಿಯೇ ಬಂಧಿಯಾದರು ಬಹಳ ಸಮಯ.

       ಹೊತ್ತು ಕಂತುವವರೆಗೆ… ಹೊತ್ತು ಕಂತಿದರೂ.. ರಾತ್ರಿ ಹತ್ತಾದರೂ.. ಗೊತ್ತಾಗದ ಕಾಲ ಅದು. ಕೆಲವು ಸಮಯ ಮಾತಿಗಿಂತ ಮೌನವೇ ಹೆಚ್ಚು ಮೋಹಕ. ಆತ್ಮ ಏನನ್ನೂ ಕೇಳಲಿಲ್ಲ, ಅವಳು ಎಲ್ಲವನ್ನೂ ಹೇಳಿ ಮುಗಿಸಿದ್ದಳು. ಹೃದಯಗಳೆರಡು ಹರಟುವಾಗ ಮಾತಿಗಿಂತ ಮೌನವೇ ಹಿತ.

       ಮಾತುಗಳದು ಮೌನಯಾನ;

       ಮೌನಕ್ಕೆ ಮಾತಿನರಮನೆಯ ಆವರಣ.

       ವರ್ಷಿಯ ಬಳಿ ಹೋಗಲು ಇಬ್ಬರು ಜೊತೆಯಾಗಿ ಹೆಜ್ಜೆ ಹಾಕಿದರು.

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post