ಅಂಬೋಲಿಯೆಂಬ ತುಂಬು ನಿಸರ್ಗದ ದರ್ಶನ ಮಾಡಿ ಕಡಲ ಕಡೆಗೆ ಹೊರಟೆವು. ತಿರುವುಗಳ ಸರಪಳಯಲಿ ಜಾರುತ, ಗಿಡ ಮರಗಳ ಸಾಲುಗಳ ನಡುವೆ ಇಳಿಯುತ. ಕಡಲತೀರವನ್ನ ಮುಟ್ಟಿದಾಗ ಸುಮಾರು 2 ಗಂಟೆ ಮಧ್ಯಾಹ್ನ. ಒಂಚೂರು ಹರಟೆ-ಒಂಚೂರು ನೀರಲ್ಲಿ ಆಟ. ಅಲೆಗಳಗೆ ಮೈ ಒಡ್ದಿ ನಿಂತು, ಕುಣಿದು ಕೇಕೆ ಹಾಕಿ, ಸುಡುಬಿಸಿಲನ್ನು ಲೆಕ್ಕಿಸದೆ.. ಸುಮಾರು ಒಂದು ಗಂಟೆಯ ಕಾಲ. ಆಮೇಲೆ ತಂದಿದ್ದ ಬ್ರೆಡ್ ನಿಂದ ತಯಾರಿಸಿದ ಸ್ಯಾಂಡ್ವಿಚ್ ಊಟ. ಒಂದೆರಡು ನುಂಗಿ ನೀರು ಕುಡಿದ ನಂತರ ನನ್ನ ನೋಟ ದಿಗಂತದತ್ತ ಹಾಯಿತು. ತುಸು ಮುಂದೆ ಹೋದೆ.. ಗೆಳೆಯರೆಲ್ಲ ಮಾತಿನಲಿ, ಮೊಬೈಲಿನಲಿ ಮಗ್ನ.. ದೊಡ್ದ ಮರದ ಬೇರೊಂದು ನೆಲವ ಸೀಳಿ ಆಚೆ ಬಂದು ಉಸುಕಿನ ಮೇಲೆ ಇಳಿಜಾರಿನಲ್ಲಿ ಸಣ್ಣ ಕುರ್ಚಿಯ ಮಾಡಿತ್ತು. ಮೆಲ್ಲಗೆ ಅದರ ಮೇಲೆ ಕುಳಿತೆ. ರಪ್ ಎಂದು ಕಣ್ನಿಗೆರಾಚುವ ರವಿಯ ಝಳ, ಒಂದು ಕ್ಷಣ ಕಣ್ ಮುಚ್ಚಿ ತೆರೆದೆ. ನಮ್ಮೂರಿನ ರವಿಯ ಮುಂದೆ ಈ ರವಿ ಕೊಂಚ ಮಂದ ಅನ್ನಿಸ್ದ. ಕಣ್ ತೆರೆದು ಅಲೆಗಳತ್ತ ನೋಟವಿತ್ತೆ. ಸೂರ್ಯನ ಬಿಂಬ ನೀರ ಮೇಲೆ ಚೂರು ಚೂರಾಗಿ ಚಿನ್ನದ ಬಣ್ಣದ ಅಲೆಗಳು ದಡದತ್ತ ನುಗ್ಗುತ್ತಿದ್ದವು.. ಒಂದಾದ ಮೇಲೊಂದು ಎಡಬಿಡದೆ ಒಂದು ಕ್ಷಣ ಅನ್ನಿಸ್ತು. ದಿಗಂತದಿಂದ ಯಾರೊ ಏನೋ ಸಂದೇಶವೊಂದನ್ನು ತಳ್ಳುತ್ತಿರುವರು. ಆದರೆ ದಡ ಸೇರಿದ ಕೂಡಲೆ ಅಲೆಗಳು ಸುಳ್ಳೆಂಬ ಸತ್ಯ ಪ್ರಕಟ. ಸಂದೇಶವು ಎಲ್ಲೋ ಮಧ್ಯದಲ್ಲಿ ಕಳೆದು ಹೋದಂತೆ ಭಾಸ.. ಯಾವ ಅಲೆ ದಡ ಮುಟ್ಟುತ್ತೋ, ಯಾವ ಅಲೆ ಮಧ್ಯದಲ್ಲೇ ಕುಸಿಯುತ್ತೊ. ಗೊತ್ತಿಲ್ಲ, ಸಣ್ಣ ಅಲೆ ದೊಡ್ಡದಾಗಿ..ದೊಡ್ಡದು ಗಿಡ್ಡದಾಗಿ. ಬದುಕಿನ unpredictability ನೆನಪಾಯ್ತು. ಅದೇ ಸಮಯಕ್ಕೆ ಹಿಂದಿನಿಂದ “ಯಾಕೋ ಒಬ್ನೆ ಕೂತೀಯ?” ಅನ್ನೋ ಪ್ರಶ್ನೆ. ಮುಖ ತಿರುಗಿಸಿ ಒಂದು ಮೂಕ ನಗು ನಕ್ಕೆ. ತಿರುಗಿ ಸಿಕ್ಕಿದ್ದು ಕೂಡ ಎಂತದೋ ಶೂನ್ಯ ಭಾವದ ಮತ್ತೊಂದು ನಗು.
ನಿಧಾನಕ್ಕೆ ಮೇಲೆದ್ದು ಶರಧಿಯತ್ತ ನಡೆದೆ. ದಡದ ಮೇಲೆ ಸಾವಿರಾರು ಹೆಜ್ಜೆ ಗುರುತುಗಳು. ಸಾವಿರಾರು ಕನಸುಗಳ ಹೊತ್ತ ಅಪರಿಚಿತ ವ್ಯಕ್ತಿಗಳ ಹೆಜ್ಜೆ ಗುರುತುಗಳು. ಹೆಗಲ ಮೇಲೆ ನೂರಾರು ಜವಾಬ್ದಾರಿಗಳ ಹೊತ್ತು, ಮನಸಲ್ಲಿ ಸಾವಿರಾರು ಕನಸುಗಳ ಹೊತ್ತು ನಡೆದಾಡುವಾಗ ಮರಳಿನ ಮೇಲೆ ಜನ ಒತ್ತಿದ ಗುರುತುಗಳು, ನಡುನಡುವೆ ಅಲೆಗಳ ರಭಸಕ್ಕೆ ಕರಗಿ ಹೋದ ಕೆಲ ಹೆಜ್ಜೆಗಳ ತುಣುಕುಗಳು. ಆ ಕರಗಿ ಹೋದ ಭಾಗಗಳು, ಕಮರಿ ಹೋದ ಕನಸುಗಳಿರಬಹುದಾ ಎಂಬ ಮೂರ್ಖ ಪ್ರಶ್ನೆಯೊಂದಿಗೆ ಅವುಗಳ ಮೇಲೆ ನಡೆಯತೊಡಗಿದೆ. ನನ್ನನ್ನು ನಾನು ಮರೆತು ಸಾವಿರ ಕನಸುಗಳ ನಡುವೆ ಕಳೆದು ಹೋದ ಒಂದು ಪಾರಭೌತಿಕ ಅನುಭವ. ಅಪೂರ್ವವಾದ ಅಮೂರ್ತ ಭಾವ. ಒಂದು ಕ್ಷಣ ನಿಂತೆ. ಅಲೆ ಬಂದು ಕಾಲಿಗೆ ಅಪ್ಪಳಿಸಿತು. ಅಪ್ಪಳಿಸಿ ಪುನಹ ಮರಳಿತು.. ಆದರೆ ಹೋಗುವಾಗ ನನ್ನ ಪಾದದ ಕೆಳಗಿರುವ ಉಸುಕನ್ನು ಕೊಂಚ ಕೊಂಚವಾಗಿ ಹಿತವಾಗಿ ಎಳೆದುಕೊಳ್ಳುತ್ತ. ನಾನು ಜರಿಯುತ್ತಿದ್ದೇನೆ ಅನ್ನೋ ಭಾವ. ಕಣ್ಬಿಟ್ರೆ ಇದ್ದಲ್ಲೇ ಇದ್ದೇನೆ. ಒಂದು ಆಲೋಚನೆ ನುಗ್ಗಿತು. ಸುಮಾರು ಜನ ಜೀವನದಲ್ಲಿ ಬಂದು ಹೋಗ್ತಾರೆ.. ಕೆಲವರು ನಮ್ಮನ್ನು ತಮ್ಮ ಜೊತೆಯಲಿ ನಡೆಸಿಕೊಂಡು ಹೋಗುವ ಭಾವನೆ ನೀಡುತ್ತ. ವಾಸ್ತವದಲ್ಲಿ ನಾವು ನಿಂತಲ್ಲೇ ನಿಂತಿರ್ತೆವೆ. ಅವರು ನಮ್ಮಿಂದ ದೂರವಾಗಿರುತ್ತಾರೆ. ನಿಧಾನಕೆ, ಹಿತವಾಗಿ, ನಮಗೆ ಗೊತ್ತಿಲ್ಲದ ಹಾಗೆ….
ನಡೆದೆ ನಡೆದೆ….ನನ್ನನ್ನು ನಾನು ಮರೆತು, ಕಡಲ ರೌದ್ರ ರಮಣೀಯ ನೋಟದಲ್ಲಿ ಲೀನನಾಗುತ್ತ. ಅಷ್ಟರಲ್ಲಿ ಯಾರೋ ಕರೆದರು.. ”ಬಾರೋ.. ಟೈಮಾಯ್ತು. ಮಳೆ ಬರೋ ಹಾಗಿದೆ” ಅಂತ.
ನನಗೆ ಇನ್ನು ಸ್ವಲ್ಪ ಹೊತ್ತು ಅಲ್ಲೇ ಇರೋ ಮನಸ್ಸು. ದಿನಕರನನ್ನು ದಿಗಂತ ನುಂಗಿ, ಕೊನೆಯ ಕಿರಣದ ಸಮುದ್ರದ ಸವಾರಿಯನ್ನು ನೋಡೋ ಇಂಗಿತ. ಮತ್ತೊಮ್ಮೆ ಇಲ್ಲಿಗೆ ಬಂದು ಸೂರ್ಯೋದಯ ನೋಡಲೇಬೇಕು ಎಂದು ಆಲೋಚಿಸುತ್ತ ಸ್ವಲ್ಪ ಹಿಂತಿರುಗಿ ಕಾರಿನತ್ತ ನಡೆದೆ. ನಾಳೆಯಿಂದ ಮತ್ತದೆ ಆಸ್ಪತ್ರೆ, ಮತ್ತದೆ ಕೆಲಸ, ಬೇರೆಯವರ ರೋಗ ರುಜಿನಗಳನ್ನು ಕಡಿಮೆ ಮಾಡುವ ಪ್ರಯತ್ನ ಅಂತ ಅನ್ಕೊಳ್ತಿರುವಾಗ ಕಾಲಿಗೆ ಏನೋ ನಾಟಿದಂತಾಯಿತು. ಕೆಳಗೆ ನೋಡಿದೆ. ಕಣ್ಣಿಗೆರಡು ಕಪ್ಪೆ ಚಿಪ್ಪು ಒಂದು ಸಣ್ಣ ಶಂಖ ಕಂಡವು. ಬಾಗಿ ಅವನ್ನ ತಗೊಂಡು ಕಾರಿನತ್ತ ಹೆಜ್ಜೆ ಹಾಕಿದೆ. ಅದೇ ಗುಂಗಿನಲ್ಲಿ….
Harish kulkarni
skharish28@gmail.com
Facebook ಕಾಮೆಂಟ್ಸ್