X

ಆತ್ಮ ಸಂವೇದನಾ ಅಧ್ಯಾಯ 17

ಆತ್ಮ ಸಂವೇದನಾ ಅಧ್ಯಾಯ 16

ಭೂಮಿಯಿಂದ ನೂರು ಜ್ಯೋತಿರ್ವರ್ಷ ದೂರದಲ್ಲಿ ನಕ್ಷತ್ರವೊಂದು ಸತ್ತು ಕಪ್ಪು ವಲಯವನ್ನು ಸೇರಿದ ಜಾಗವದು. ಎಷ್ಟೋ ಸಹಸ್ರ ಕೋಟಿ ವರ್ಷಗಳಿಂದ ಬೆಳಕನ್ನೇ ಕಂಡಿಲ್ಲ. ಕತ್ತಲು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ಆಳುತ್ತಿದೆ. ಅಲ್ಲಿನ ಜೀವಿಗಳಿಗೆ ಬೆಳಕೆಂದರೇನು ಎಂಬುದೇ ತಿಳಿದಿಲ್ಲ.

ಅಂಥ ಜಾಗದಲ್ಲಿ ಇಂದು ಆಕಸ್ಮಿಕವೆಂಬಂತೆ ಬೆಳಕು ಧಾಳಿಯಿಟ್ಟಿದೆ. ಅಲ್ಲಿನ ಜೀವಿಗಳ ಮೈ ಮೇಲೆ ಬೆಳಕು ಬಿದ್ದರೆ ಅವು ಸತ್ತಂತೆ, ಜೀವಿಗಳು ಒಂದು ಎರಡಾಗಿ ಒಡೆದು ಸಂತಾನ ನಡೆಸಲಾರವು. ಆದರೂ ಅವು ಮನುಷ್ಯನಿಗಿಂತ ನೂರು ಪಾಲು ಮುಂದಿವೆ. ವಿಜ್ಞಾನ ಅವುಗಳ ಅಡಿಯಾಳು. ಅಲ್ಲಿನ ಜೀವಿಗಳಿಗೆ ಭೂಮಿಯ ಮೇಲೆ ನಡೆದಿರುವುದೆಲ್ಲ ತಿಳಿದುಹೋಯಿತು.

ಅಷ್ಟರಲ್ಲಿಯೇ ಬೆಳಕು ಅಲ್ಲಿ ಸೇರಿದ್ದರಿಂದ ಸಾವಿರಾರು ಜೀವಿಗಳು ಮಣ್ಣಾದವು. ಉಳಿದವು ಹೇಗಾದರೂ ಸರಿ ಎರಡನೇ ಸೂರ್ಯನನ್ನು ನಾಶಮಾಡಬೇಕೆಂದು ಹಟಹೊತ್ತು ಹೊರಟವು. ಹೇಗಿದ್ದರೂ ನಮಗಿನ್ನು ಉಳಿಗಾಲವಿಲ್ಲ ಮುಂದಿನ ಪೀಳಿಗೆ ಸಮಸ್ಯೆಯನ್ನು ಎದುರಿಸುವುದು ಬೇಡ ಎಂದು ಪಣತೊಟ್ಟು ನಿಂತವು. ಮತ್ತೆ ಕತ್ತಲೆಯೇ ಆ ಜಾಗವನ್ನು ಆಕ್ರಮಿಸಬೇಕೆಂದೂ, ಆಳಬೇಕೆಂದೂ ನಿರ್ಧರಿಸಿ ತಮ್ಮ ಗಗನನೌಕೆಯನ್ನು ಅತ್ತಕಡೆ ತಿರುಗಿಸಿದವು.

ಎಷ್ಟೇ ಉಷ್ಣತೆಯನ್ನು ಬೇಕಾದರೂ ತಡೆದು ಹಿಡಿಯುವ ಸಾಮರ್ಥ್ಯ ಆ ನೌಕೆಗಿತ್ತು. ಭೂಮಿಯ ಮೇಲಿನ ಮನುಷ್ಯ ಇಂಥಹ ಒಂದು ಸಾಹಸ ಮಾಡಿ ಅವುಗಳ ಜೀವನಯಾನಕ್ಕೆ ಬಿರುಗಾಳಿ ಎಬ್ಬಿಸಿದ್ದರೂ ಅವು ಯುದ್ಧ ಸಾರದೆ ಶಾಂತ ರೀತಿಯಲ್ಲಿ ಎಲ್ಲರ ಒಳಿತನ್ನು ಬಯಸುತ್ತಿದ್ದವು. ಅವುಗಳಿಗೆ ಬದುಕುವ ನೀತಿ ತಿಳಿದಿತ್ತು. ಬದುಕಿದ ರೀತಿ ನಿಯತ್ತಾಗಿತ್ತು.

ವಿಶ್ವವು ಯುದ್ಧವನ್ನು ಬಯಸುವುದಿಲ್ಲ;
ಮನುಷ್ಯ ಹಂಬಲಿಸಿದ್ದೇ ಯುದ್ಧಕ್ಕಾಗಿ.
ಪ್ರಪಂಚದ ಪ್ರತಿ ಜೀವಿಯೂ ಬದುಕುವ ಹಕ್ಕನ್ನು ಪಡೆದಿವೆ.ಪ್ರತಿ ಆತ್ಮವೂ ಶಾಂತಿಯನ್ನೇ ಬಯಸುತ್ತವೆ. ಆ ಜೀವಿಗಳೂ ಅದನ್ನು ತಿಳಿದಿವೆ. ಆದ್ದರಿಂದಲೇ ಅವುಗಳು ಅದನ್ನು ಶಾಂತ ರೀತಿಯಿಂದಲೇ ಬಗೆಹರಿಸಬೇಕೆಂದು ಬಯಸಿದವು.

ಅವುಗಳಿಗೆ ಗೊತ್ತು ಅವು ಮತ್ತೆ ಹುಟ್ಟುತ್ತವೆ.
ಯಾರ ಬದುಕೂ ಶಾಶ್ವತವಲ್ಲ;
ಶಾಶ್ವತವೆಂಬುದು ಯಾವುದೂ ಇಲ್ಲ.

ತಮ್ಮ ಮುಂದಿನ ಪೀಳಿಗೆ ಚೆನ್ನಾಗಿರಬೇಕೆಂಬುದು ಅವುಗಳ ಇಚ್ಛೆ. ಮನುಷ್ಯ ಎಂದಿಗೂ ಹಾಗೆ ಯೋಚಿಸಿರಲೂ ಇಲ್ಲ, ಬದುಕುವುದು ದೂರದ ಮಾತು. ಅವನಿಗೆ ಮುಂದಿನ ಪೀಳಿಗೆಯ ಬಗ್ಗೆ ಚಿಂತೆಯಿಲ್ಲ. ತಾವು ಬದುಕಬೇಕು, ಹೆಚ್ಚೆಂದರೆ ತನ್ನ ಜೊತೆಯವರು. ಮುಂದಿನ ಯೋಚನೆಗಳಿಗೆ ಸಮಯವೇ ಇಲ್ಲ.

ಈ ಸ್ವಾರ್ಥವೇ ಭೂಮಿಯ ಸ್ವಾಸ್ಥ್ಯವನ್ನು ಸ್ವೈರವಾಗಿಸಿದ್ದು. ಮನ ಬಂದಂತೆ ಮರಗಳಿಗೆ ಕೊಡಲಿ ಹಾಕಿದ ಮನುಷ್ಯ. ಭೂಮಿಯ ಉಷ್ಣತೆ ಹೆಚ್ಚುತ್ತಲೇ ಹೋಯಿತು. ಎಲ್ಲವನ್ನೂ ಶುದ್ಧವಾಗಿಸುವ ನೀರು ಪ್ರಪಂಚದ ಕೊಳೆಯೆಲ್ಲ ಸೇರಿ ಅಶುದ್ಧವಾಯಿತು. ಭವಿಷ್ಯ ಎಷ್ಟು ಕೆಟ್ಟದಾಗಿರಬಹುದೆಂದು ಯೋಚಿಸದೆ ವರ್ತಿಸಿದ ಮನುಷ್ಯ.

ತನ್ನಲ್ಲಿ ಇನ್ನು ಮನುಷ್ಯನ ಕಿರಾತಕತೆಯನ್ನು, ಹುಚ್ಚು ಪ್ರವೃತ್ತಿಯನ್ನು ಸಹಿಸುವ ಸಾಮರ್ಥ್ಯವಿಲ್ಲ ಎಂದಾದಾಗ ಭೂಮಿಯ ಆತ್ಮ ವಿಶ್ವಾತ್ಮನ ಮೊರೆ ಹೋಯಿತು. ಅಲ್ಲಿಂದ ಮನುಷ್ಯನ ಅಂತ್ಯ ಪ್ರಾರಂಭ.

“ಅಂತಿಮ ಸಂಸ್ಕಾರಕ್ಕೊಂದು ಪೂರ್ವ ಸಂಸ್ಕಾರ”

ತಮ್ಮ ಮಧ್ಯದಲ್ಲೇ ಯುದ್ಧ ಮಾಡಿಕೊಳ್ಳುತ್ತಿದ್ದ ಮನುಷ್ಯ ವಿಶ್ವಾತ್ಮನ ಸೂಚನೆಯನ್ನು ಗ್ರಹಿಸದೇ ಹೋದ, ಗಮನಿಸಲು ಇಲ್ಲ. ಸುನಾಮಿಗಳು, ಭೂಕಂಪಗಳು, ಎಲ್ಲ ಕಡೆ ಉಷ್ಣತೆಯ ಹೆಚ್ಚಳ, ಕ್ರಮೇಣವಾಗಿ ಭೂಮಿಯಂಥ ಭೂಮಿಯೇ ಜೀವಿಗಳ ಬದುಕಿಗೆ ಅನರ್ಹವಾದ ಭಾಗವಾಗಿ ಮಾರ್ಪಡತೊಡಗಿತು.

ಎಲ್ಲದಕ್ಕೂ ಒಂದು ಅಂತ್ಯ ಮತ್ತೊಂದರ ಆರಂಭ.

ತನ್ನಲ್ಲೇ ಉಸಿರು ಪಡೆದ ಜೀವಿಗಳು, ತಾನು ಪ್ರೀತಿಸುವ ಜೀವಿಗಳೇ ತನ್ನನ್ನು ಇಂಚಿಂಚಾಗಿ ಕೊಲ್ಲುತ್ತಿದ್ದರೂ ಸಹಿಸಿಕೊಂಡಿತ್ತು ತಾಯಿ ಜೀವ. ಎಲ್ಲದಕ್ಕೂ ಕೇಂದ್ರ, ಸುತ್ತಲೊಂದು ಪರಿಧಿ… ಅದನ್ನು ಮೀರಿದಾಗ??

ಹಾರುವ ನೌಕೆ ವೇಗವಾಗಿ ಎರಡನೇ ಸೂರ್ಯನ ಕಡೆ ಸಾಗುತ್ತಿತ್ತು. ಅದರೊಳಗೆ ಕುಳಿತ ಎಲ್ಲ ಜೀವಿಗಳೂ ತಮ್ಮ ಜೀವನ ಮುಗಿದಿದೆ ಎಂದೇ ತಿಳಿದುಕೊಂಡಿವೆ. ಬೆಳಕು ಅವುಗಳ ಶರೀರಕ್ಕೆ ಸೋಕಿದರೆ ಸಾವೇ ಶಾಶ್ವತ. ಈಗ ಅವುಗಳ ಲಕ್ಷ್ಯವೆಲ್ಲ ತಮ್ಮ ಮುಂದಿನ ಪೀಳಿಗೆಯನ್ನು ಉಳಿಸುವುದೊಂದೆ. ಅವುಗಳ ಮುಖದಲ್ಲಿ ಕೂಡ ಆತಂಕ ಕಳೆಗಟ್ಟಿತ್ತು. ಹಾರುವ ನೌಕೆ ರದನೇ ಸೂರ್ಯನನ್ನು ಸಮೀಪಿಸಿತು. ಮನುಷ್ಯ ಸೃಷ್ಟಿಸಿದ ವೈರಸ್ ಗೆ Anti-vairus ಪ್ರೋಗ್ರಾಮ್ ಬರೆದು ಎಲಿಮೆಂಟ್ ಗಳ ಸರ್ವನಾಶ ಮಾಡಬೇಕೆಂದು ಆ ಜೀವಿಗಳು ಯೋಚಿಸಿದವು.

ಅಲ್ಲಿನ ಚಿತ್ರಣವೇ ವಿಚಿತ್ರವಾಗಿತ್ತು. ಹಾರುವ ನೌಕೆ ಎರಡನೇ ಸೂರ್ಯನನ್ನು ಸಮೀಪಿಸಿದಾಗ ಅಲ್ಲಿ ಏನೆಂದರೆ ಏನೂ ಇರಲಿಲ್ಲ. ಕೇವಲ ಪ್ರತಿಬಿಂಬ ಮಾತ್ರ ಇತ್ತು.

ಸುಳ್ಳು ರೋಗಕ್ಕೆ ಮದ್ದು ತಾಗುವುದಾದರೂ ಹೇಗೆ?
ಇಲ್ಲದ ಎಲಿಮೆಂಟ್ ಗೆ Anti- Vairus ಸೃಷ್ಟಿಸುವುದು ಹೇಗೆ?

ಮೊದಲ ಬಾರಿಗೆ ಆಶ್ಚರ್ಯಗೊಳ್ಳುವ ಸರದಿ ಆ ಜೀವಿಗಳದ್ದು. ಸೂರ್ಯನನ್ನು ಪ್ರತಿಫಲಿಸಲು ಇಲ್ಲಿ ಏನೂ ಇಲ್ಲ. ಕೇವಲ ದಟ್ಟ ಖಾಲಿ ಜಾಗ ಮಾತ್ರ ಹೇಗೆ ಪ್ರತಿಬಿಂಬಿತವಾಗಿದೆ? ಇದರ ಮೂಲ ಯಾವುದು?

ಹೇಗೆ ಸಾಧ್ಯ?
ಅಸಾಧ್ಯವಾದದ್ದು ಏನೂ ಇಲ್ಲ.

ಮುಂದೇನು ಮಾಡುವುದೆಂದು ಯಾರಿಗೂ ಅರ್ಥವಾಗಲಿಲ್ಲ. ಗುಂಪಿನ ಮಧ್ಯದಿಂದ ಜೀವಿಯೊಂದು ಎದ್ದು ಬಂದಿತು. ಅವುಗಳಿಗೆ ಹೆಸರೇ ಇಲ್ಲ. ಹೆಸರುಗಳೇ ಬಂಧನ ಎಂದುಕೊಳ್ಳುತ್ತವೆ. ನೀನು ಇಂಥವನು ಎಂದರೆ ಮುಗಿದಂತೆ. ನೀನು ಅವನೇ. ನೀನು ನೀನಾಗಲಾರೆ. ಅವನಾಗಿಯೇ ಉಳಿದುಬಿಡುವೆ, ಬದುಕು ಕಳೆದು ಬಿಡುವೆ. ಇದಕ್ಕೆ ಈ ಜೀವಿಗಳಲ್ಲಿ ಹೆಸರೆಂಬ ಬಂಧನಗಳಿಲ್ಲ.

ಮುಂದೆ ಬಂದ ಜೀವಿ ಅವರದೇ ಭಾಷೆಯಲ್ಲಿ ಉಳಿದ ಜೀವಿಗಳೆದುರು ಮಾತನಾಡತೊಡಗಿತು. ಇದು ವರ್ಚುವಾಲಿಟಿಯ ಪ್ರಯೋಗದಿಂದ ಮಾತ್ರ ಸಾಧ್ಯ. ಇದರ ಮೂಲ ಭೂಮಿಯಲ್ಲಿದೆ. ಅಲ್ಲಿ ಹೋಗಿ ಸೃಷ್ಟಿಸಿದವನಿಂದಲೇ ಲಯಗೊಳಿಸಬೇಕು ಎಂದು ಸಿಡಿಯಿತು. ಎಲ್ಲರೂ ಸರಿಯೆಂಬಂತೆ ತಲೆದೂಗಿದರು. ಹಾರುವ ನೌಕೆ ಮತ್ತೆ ಕಪ್ಪು ವಲಯದ ಕಡೆ ಮುಖ ಮಾಡಿತು.

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post