ಪರಿಸರದ ನಾಡಿ ಬಾನಾಡಿ

ಮಿಕ್ಸೆಡ್ ಹಂಟಿಂಗ್ ಪಾರ್ಟಿ– ಮಿಶ್ರ ಕೂಟ ಬೇಟೆ

ಬರ್ತ್‍ಡೇ ಪಾರ್ಟಿ, ಆನಿವರ್ಸರಿ ಪಾರ್ಟಿ, ಮದುವೆ ರಿಸೆಪ್ಶನ್  ಪಾರ್ಟಿ, ಬ್ಯಾಚುಲರ್ ಪಾರ್ಟಿ, ಫೇರ್‍ವೆಲ್ ಪಾರ್ಟಿ, ಹೀಗೆ ಅನೇಕ ಪಾರ್ಟಿಗಳು ನಿಮಗೆ ಗೊತ್ತಿರಬಹದು. ಇದೀಗ ನಿಮಗೆ ಪ್ರಕೃತಿಯಲ್ಲಿ ನಡೆಯುವ ಹೊಸದೊಂದು ಪಾರ್ಟಿಯನ್ನು ಪರಿಚಯಿಸುವೆ. ಅದು ನಮ್ಮ ಬಾನಾಡಿಗಳ ಪಾರ್ಟಿ. ಬಗೆ ಬಗೆಯ ಬಾನಾಡಿಗಳು ಆಡಿ, ಹಾಡಿ, ಹಬ್ಬ ಮಾಡುವ  ಪಾರ್ಟಿ, ಇಂಗ್ಲೀಷ್‍ನಲ್ಲಿ mixed hunting party / mixed – species feeding folck / mixed- species foraging folck  ಅಥವಾ BIRD WAVE.

ಹೌದು, ಇದೊಂದು ಹಕ್ಕಿಗಳ ಅಲೆ. ತುಂಬಿದ ನೀರ ಅಲೆ ಮುಂದೆ ಮುಂದೆ ಚಲಿಸಿದ ಹಾಗೆ. ಅಲೆಯಾಗಿ ಹಕ್ಕಿಗಳೇ ಈ ಸಂದರ್ಭದಲ್ಲಿ ಮುಂದೆ ಮುಂದೆ ಚಲಿಸಿ ಬಿಡುತ್ತವೆ. ನಾವಾದರೂ ಇತ್ತಿಂದತ್ತ ಅಲೆಯುವುದು ಆಹಾರಕ್ಕಾಗಿ, ಆನಂದಕ್ಕಾಗಿ. ಅಂತೆಯೇ ಈ ಹಕ್ಕಿಗಳ ಅಲೆಯನ್ನು, ಹಕ್ಕಿಗಳ ಈ ಕಲೆಯನ್ನು  ಕಲೆಯುವಿಕೆಯನ್ನು  ಕಂಪಿನ ಕನ್ನಡದಲ್ಲಿ ಮಿಶ್ರಕೂಟ ಬೇಟೆ ಎಂದು ಕರೆಯೋಣ.
ಈ ಕೂಟ ಎಲ್ಲಿ?

ಇಂಥಾ ಕೂಟ ಬೇಟೆಯನ್ನು ನೋಡಬೇಕಾದರೆ ನಾವು  ಕಾಡಿಗೆ ಹೋಗಬೇಕು ಅಥವಾ ಕಾಡಿನ ವಾತಾವರಣವಿರುವ ತೋಟಕ್ಕೆ ಹೋಗಬೇಕು. ಮಿಶ್ರಕೂಟಬೇಟೆಯನ್ನು ಅನುಭವಿಸಲ್ಲಿಕ್ಕಿರುವ ಯುಕ್ತ ಜಾಗ ಮಲೆನಾಡಿನ ಕಾಡುಗಳು. ಪಕ್ಷಿವೀಕ್ಷಕರಲ್ಲದವರಿಗೂ ಈ ಕೂಟದ ಅನುಭವ ಒಮ್ಮೆಯಾದರೂ ಖಂಡಿತಾ ಆಗಿರಬಹುದು. ನಿಮ್ಮ ಮನೆ ಮುಂದಿನ ತೋಟದ  ಶಾಂತ ವಾತಾವರಣದಲ್ಲಿ ಇದ್ದಕ್ಕಿದ್ದಂತೆ ಒಂದು ಬದಲಾವಣೆಯಾಗುವುದು. ಇನ್ನಿಲ್ಲದಂತೆ ಹಕ್ಕಿಗಳ ಚಿಲಪಿಲ ಗದ್ದಲ ಕೇಳುವುದು. ಆ ಚಿಲಪಿಲ ಗದ್ದಲ ಹಾಗೆ ಮುಂದುಮುಂದಕ್ಕೆ ಚಲಿಸುವ ಅನುಭವ. ಅಂದರೆ ಚಿಲಪಿಲ ಶಬ್ದದ ಅಲೆ. ಎಲ್ಲೋ ಇದ್ದ ಹಲವಾರು ಪ್ರಭೇದದ ಹಕ್ಕಿಗಳು ಒಂದೆಡೆ ಕೂಡಿ ಸದ್ದು ಗದ್ದಲ ಮಾಡಿ, ಅಲ್ಲಿರುವ ಹುಳು-ಹುಪ್ಪಟೆಗಳನ್ನು ತಿಂದು ಪಾರ್ಟಿ ಮಾಡುವ ಪರಿಯೇ ಮಿಕ್ಸೆಡ್ ಹಂಟಿಂಗ್ ಪಾರ್ಟಿ. ಈ ಪಾರ್ಟಿ ಕೀಟಾಹಾರಿ ಹಕ್ಕಿಗಳ ಕೂಟ. ಹಾಗಂತ ಶಾಖಾಹಾರಿ ಹಕ್ಕಿಗಳು ಭಾಗವಹಿಸುವುದಿಲ್ಲವೆಂದೇನೂ ಇಲ್ಲ. ಎಂಥಾ ಅಪ್ಪಟ ಶಾಖಾಹಾರಿ ಪಕ್ಷಿಯಾದರೂ ತನ್ನ ಮರಿಗಳಿಗೆ ಕೀಟಗಳನ್ನೇ ಉಣ್ಣಿಸುವುದು. ಹಾಗಾಗಿ ಕೀಟಾಹಾರಿ ಹಕ್ಕಿಗಳ ಜೊತೆಗೆ ಬೆರೆತು ಸುಲಭವಾಗಿ ಸಿಗುವ ಆಹಾರಕ್ಕೆ ಇವು ಕೂಡಾ ಕಾಯುತ್ತಿರುತ್ತವೆ .

ಈ ಕೂಟದಲ್ಲಿ ಭಾಗಿಗಳು ಯಾರ್ಯಾರು?

ಮಿಶ್ರಕೂಟಬೇಟೆಯಲ್ಲಿ 10 – 20 ಪ್ರಭೇದಗಳ ಹಕ್ಕಿಗಳು ಒಟ್ಟಾಗುತ್ತವೆ. ಇದರಲ್ಲಿ
ನೆಲದ ಹಕ್ಕಿಗಳು ಉದಾ: ಸಿಳ್ಳಾರ (Thrushes), ಹರಟೆಮಲ್ಲಗಳು(Babblers) ;
ಮರದ ಹಕ್ಕಿಗಳು ಉದಾ: ಮರ ಗುಬ್ಬಿಗಳು (Nutatch);
ಸಣ್ಣಗಿಡದ ಹಕ್ಕಿಗಳು  ಉದಾ: ಪಿಕಳಾರಗಳು (Bulbuls), ನೊಣಹಿಡುಕಗಳು (Fly-catchers) , ಸೂರಕ್ಕಿಗಳು (Sunbirds); ದೊಡ್ಡಮರದ ಹಕ್ಕಿಗಳು/ ಕಾಡಿನ ಮೇಲ್ಪದರದ ಹಕ್ಕಿಗಳು ಉದಾ : ಎಲೆ ಹಕ್ಕಿಗಳು (Leafbirds), ಚಿತ್ರಪಕ್ಷಿಗಳು (Minivets),   ಕಾಮಳ್ಳಿ (Hill myna), ಕಬ್ಬಕ್ಕಿಗಳು (Starlings) , ನೀಲಿ ಸಿಳ್ಳಾರ (Fairy bluebird).
ಅಂದರೆ ಕಾಡಿನ ಎಲ್ಲಾ ಪದರದ (canopy ) ಹಕ್ಕಿಗಳನ್ನು ಒಟ್ಟಿಗೆ ನಾವಿಲ್ಲಿ ಕಾಣಬಹುದು

Bulbul – Minivet

Leafbird – Sunbird

ಹರಟೆಮಲ್ಲ ಸಿಳ್ಳಾರಗಳಿಂದ ಕಾಡಿನ ಕೆಳಪದರದಲ್ಲಿ ಕೆದಕಲ್ಪಟ್ಟ ಕೀಟಗಳು ಮೇಲಕ್ಕೆ ಹಾರುವುದು. ಹಾರಿದಾಕ್ಷಣ ಕೆಲ ಕೀಟಗಳು ಕೆಳಪದರದ ಹಕ್ಕಿಗಳಿಗೆ ಆ ಹೊತ್ತಿನ ತುತ್ತಾಗುವುದು. ಬಚಾವಾದ ಕೀಟಗಳು ಮರಕ್ಕೆ ಅಂಟಿಕೊಂಡು ಕುಳಿತಿರುವ ಮರಗುಬ್ಬಿಗೆ ಅಶನ. ಮರಗುಬ್ಬಿಯಿಂದ ತಪ್ಪಿಸಿಕೊಂಡ ಕೀಟಗಳು ಮತ್ತೂ ಮೇಲಿರುವ ನೊಣಹಿಡುಕ ಮತ್ತು ಕಾಜಾಣಗಳ ಆಹಾರ . ಈ ಮೂರೂ ಪದರ ದಾಟಿದ ಕೀಟಗಳು ಅಬ್ಬಬ್ಬಾ ಬದುಕಿದೆವು ಎಂದು ನಿಟ್ಟುಸಿರು ಬಿಡುವಾಗ ಚಿತ್ರಪಕ್ಷಿಗಳಿಂದ, ಮೈನಾ, ನೀಲಿ ಸಿಳ್ಳಾರ, ಮರಕುಟುಕಗಳಿಂದ ಧಾಳಿ!

ಅಂದರೆ ಒಂದು ಬೇಟೆಗೆ ಹಲವು ಕಣ್ಣುಗಳು. ಕೀಟ ಯಾವುದಾದರೂ ಒಂದು ಹಕ್ಕಿಗೆ ಬಲಿ. ನೋಡಿ ಪ್ರಕೃತಿಯು ಹೇಗೆ ತನ್ನ ಸಮತೋಲವನ್ನು ತಂತಾನೆ ನೋಡಿಕೊಳ್ಳುವುದೆಂದು. ಇಷ್ಟರ ಅನಂತರವೂ ಬದುಕುಳಿದ ಕೀಟಗಳು ಅಲ್ಲಿಯ ಸಸ್ಯಕಾಶಿಯನ್ನುಂಡು ತನ್ನ ಜೀವನಚಕ್ರ ಮುಗಿಸಿ ಮುಂದೊಂದು ದಿನ ಪುನಃ ಹಕ್ಕಿಗಳಿಗೆ ಆಹಾರವಾಗುವುದು .

Leafbird – Bulbul

Bulbul-Minivet - Sunbird

ಪಕ್ಷಿಗಳ ಮಿಶ್ರಕೂಟವು ಆಫ್ರಿಕಾ ಕಾಡುಗಳಲ್ಲಿ ಗಂಟೆಗೆ 300 ಮೀಟರ್ ವೇಗದಲ್ಲಿ ಚಲಿಸುವುದಂತೆ  ನಮ್ಮ ಕಾಡುಗಳಲ್ಲಿ ಎಷ್ಟು ಪ್ರಯಾಣ ಮಾಡುವುದೆಂದು ತಿಳಿದಿಲ್ಲ. ಹೀಗೆ ಮುಂದೆ ಸಾಗುವಾಗ ಈ ಕೂಟ ಪಕ್ಷಿಗಳು ಕೆಲವು Territorial bird / ಸ್ಥಳೀಯ ಭೂ ಸ್ವಾಮ್ಯದ ಹಕ್ಕಿಗಳನ್ನು ಭೇಟಿ  ಮಾಡುವುವು . ಸ್ಥಳೀಯ ಹಕ್ಕಿಗಳು ಕೆಲ ನಿರ್ದಿಷ್ಟ ಜಾಗವನ್ನು ತನ್ನ ಸೀಮೆಯೆಂದು ಗೊತ್ತು ಮಾಡಿಕೊಂಡಿರುತ್ತವೆ. ಅಲ್ಲಿಗೆ ಇತರೆ ಯಾವ ಪಕ್ಷಿಗಳನ್ನು ಅವು ಬಿಡುವುದಿಲ್ಲ. ವಿಶೇಷವಾಗಿ ಅದೇ ಪ್ರಭೇದದ ಹಕ್ಕಿಗೆ ನಿಷೇಧ.
ಉದಾ : ಕಾಜಾಣ (Drongo),  ಕಾಕರಣೆ (Trogon ), ಕಳಿಂಗ (Shrike) .

Malabar trogon

ಆದರೆ ಈ ಏಕಸ್ವಾಮ್ಯಪ್ರತಿಪಾದಕ ಕೂಡ ಮಿಶ್ರಕೂಟವನ್ನು ಅತಿಥಿಗಳಂತೆ ಕಾಣುತ್ತವೆ. ಅವು ಬಂದೊಡನೆ ಈ ಹಕ್ಕಿಗಳ ಆತಿಥ್ಯ ಜೋರು. ಅವುಗಳೊಂದಿಗೆ ಇವೂ ಬೆರೆತು ಬಿಡುತ್ತವೆ. ಅಷ್ಟೇ ಅಲ್ಲ, ಎಲ್ಲಿ ಯಾವ ಕೀಟಗಳಿವೆ ಎಂದು ತೋರುವುದೂ ಉಂಟು. ಆ ಹೊತ್ತಿಗೆ ಸ್ಥಳೀಯ ಹಕ್ಕಿಗಳು ನಾಯಕರಾಗಿರುತ್ತಾರೆ. ಕೊತ್ವಾಲ/ ಭೀಮರಾಜ { Greater Racket Tailed Drongo ( dicrurus paradiseus) } ಎಂಬ ಹಕ್ಕಿಯ ಬಗೆಗೆ ವಿಶೇಷ ಅಧ್ಯಯನ ಮಾಡಿ ಈ ನಡವಳಿಕೆಯನ್ನು ಧೃಢೀಕರಿಸಿದ್ದಾರೆ . ಅಮೇರಿಕಾದ ಕಾಡುಗಳಲ್ಲಿ  Golden – crowned warbler ಎಂಬ ಉಲಿಹಕ್ಕಿಯ ಮೇಲಿನ ಅಧ್ಯಯನವೂ ಇಂಥಾ ನಡವಳಿಕೆಯನ್ನು ಧೃಢೀಕರಿಸುತ್ತದೆ.

Greater racket tailed drongo

ಪುತ್ತೂರು ಸಮೀಪದ ಕಾಡೊಂದರಲ್ಲಿ ನನ್ನ ಮಾವ ಸದಾಶಿವ ರಾವ್‍ರೊಂದಿಗೆ ಪಕ್ಷಿವೀಕ್ಷಣೆಯಲ್ಲಿ ತೊಡಗಿದ್ದಾಗ ಅತಿದೊಡ್ಡ ಮಿಶ್ರಕೂಟವನ್ನು ಕಂಡಿದ್ದೆವು. ಪಕ್ಷಿಗಳನ್ನು ಕೆಳಪದರದಿಂದ ಮೇಲ್ಪದರದವರೆಗೆ ಹೆಸರಿಸುವುದಾದರೆ

1 . ಅರಶಿನ ತಲೆಯ ನೆಲಸಿಳ್ಳಾರ  – orange – headed Thrush/ zoothera sibirica

Orange headed grownd thrush

2. ಕಂದು ಕತ್ತಿನ ಹರಟೆಮಲ್ಲ – puff-Throated Babbler/ pellorneum ruficeps
3. ಕಪ್ಪು ತಲೆಯ ಹರಟೆಮಲ್ಲ – Dark-Fronted Babbler/ rhopocichla atriceps

dark fronted babbler

4. ಮಕ್ಮಲ್ ಟೋಪಿಯ ಮರಗುಬ್ಬಿ – Velvet-Fronted Nuthatch/ sitta frontalis

Velvet fronted nutatch

Velvet fronted nutatch

5. ಕಾಜಾಣ ಕೋಗಿಲೆ – Fork-Tailed drongo cuckoo /surniculus lugubris
6. ಚುಕ್ಕೆ ಮರಕುಟುಕ – Heart-Spotted Woodpecker /hemicircus canente

Heart spotted wood pecker

7. ಕಂದು ಮರಕುಟುಕ – Rufous Woodpecker / celeus brachyurus
8. ಹಳದಿ ತಲೆಯ ಮರಕುಟುಕ – Lesser Yellownape / picus chlorolophus
9. ಹಳದಿ ಹುಬ್ಬಿನ ಪಿಕಳಾರ –  yellow-Browed bulbul / lole indica
10. ಕೆಂಪು ಕೊರಳಿನ ಪಿಕಳಾರ – Ruby-Throated bulbul /pycnonotus melanicterus
11. ಕೆಮ್ಮೀಸೆ ಪಿಕಳಾರ – Red-whiskered Bulbul / pycnonotus jocosus
12. ಖಗರತ್ನ – Purple-Rumped Sunbird /nectarinia asiatica
13. ಕೆಂಪುಬೆನ್ನಿನ ಸೂರಕ್ಕಿ – Crimson-Backed  Sunbird / nectarinia minima
14. ಕಪ್ಪು ಸೂರಕ್ಕಿ – Loten’s subbird / nectarinia lotenia
15. ಪೇಲವ ಬದನಿಕೆ – Nilagiri flowerpecker /dicaeum concolor
16. ಹೊನ್ನಹಣೆಯ ಎಲೆಹಕ್ಕಿ – Golden-Fronted Leafbird /choloropsis aurifrons
17. ಮಧುರ ಕಂಠ – common –iora /aegithina tiphia

Iora Minivet Sunbird

18. ಭೀಮರಾಜ – Greater Racket Tailed Drongo /  dicrurus paradiseus
19. ಕಂಚು ಕಾಜಾಣ  – Bronzed –drongo /dicrurus aeneus
20. ಸಣ್ಣ ಚಿತ್ರ ಪಕ್ಷಿ – Small Minivet/pericrocotus cinnamomeus
21. ಚಿತ್ರಪಕ್ಷಿ – Orange Minivet / pericrocotus flammeus

Orange minivet

22. ನೀಲಿ ಸಿಳ್ಳಾರ – Asian fairy bluebird /irena puella

Fairy blue bird

23. ಕಾಮಳ್ಳಿ – southern Hill Myna /gracula indica

Hill myna

ಇಷ್ಟೂ ಪಕ್ಷಿಗಳನ್ನು ಒಂದೇ ನೋಟದಲ್ಲಿ ನೋಡುವ ಸುಯೋಗ ನಮ್ಮದಾಗಿತ್ತು. ಯಾವ ಹಕ್ಕಿಯ ಚಿತ್ರ ತೆಗೆಯುವುದು ಬಿಡುವುದು ಎಂಬ ತಳಮಳ ಮತ್ತು ಸಂತೋಷ ನಮಗೆ ಎದುರಾಯಿತು. 10-15 ನಿಮಿಷ ಇವುಗಳ ಕಾರುಬಾರು ಜೋರು.  ಆಮೇಲೆ ಮೌನ !

ಅಲ್ಲೇ ಇದ್ದ ಹಕ್ಕಿಗಳು ಹಾಗೆ ಮುಂದೆ ಹೋಗಿದ್ದವು.  ಅನಂತರ ಒಂದು ಗಂಟೆ ಪಕ್ಷಿವೀಕ್ಷಣೆ ಮಾಡಿದ ನಮಗೆ ಒಂದೇ ಒಂದು ಪಕ್ಷಿ ಸಿಗಲಿಲ್ಲ. ಇಂಥಾ ಅನುಭವ ಮಲೆನಾಡಿನಲ್ಲಿ ಪಕ್ಷಿವೀಕ್ಷಣೆ ಮಾಡುವವರಿಗೆ ಸಾಮಾನ್ಯ . ಮಿಶ್ರ ಕೂಟ ನಮಗೆ ಎದುರಾಗದಿದ್ದಲ್ಲಿ ಅಂದಿನ ಪಕ್ಷಿವೀಕ್ಷಣೆ ಬರ್ದಾಗುತ್ತಿತ್ತು !

ಮೇಲೆ ಹೆಸರಿಸಿರುವ ಪಕ್ಷಿಗಳಲ್ಲಿ ಕೆಲ ಶಾಖಾಹಾರಿ ಹಕ್ಕಿಗಳೂ ಇವೆ ಎಂಬುದನ್ನು ಮತ್ತೊಮ್ಮೆ ಗಮನಿಸಿ. ಈ ಪಕ್ಷಿಗಳಲ್ಲಿ ಕೆಲವು ತನ್ನ ಮರಿಗಳಿಗಾಗಿ ಹಿಡಿದಿರಬಹುದಾದರೂ, ಅನೇಕ ಹಕ್ಕಿಗಳು ಮರದಲ್ಲಿನ ಹಣ್ಣುಗಳನ್ನು ತಿನ್ನುತ್ತಿದ್ದುವು, ಹೂವಿನ ಮಕರಂದವನ್ನು ಹೀರುತ್ತಿದ್ದುವು. ಪರಿಣಾಮವಾಗಿ ಹಣ್ಣು ಹೂವುಗಳಲ್ಲಿ ಅವಿತಿದ್ದ ಕೀಟಗಳು ಹಾರುತ್ತಿದ್ದ್ದುವು. ಹಾರಿದ ಕೀಟಗಳು ಮೇಲಿನ ಹಕ್ಕಿಗಳಿಗೆ ಸುಲಭದ ತುತ್ತಾಗುತ್ತಿದ್ದುವು.
ಮತ್ತೆ ನೋಡಿ ಹಕ್ಕಿಗಳಲ್ಲಿನ ಪರಸ್ಪರ ಅವಲಂಬನೆ, ಒಗ್ಗಟ್ಟು  ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹಕ್ಕಿಗಳಿಗೂ ಗೊತ್ತು. ಆದರೆ ಮನುಷ್ಯರಿಗೆ?

ಚಿತ್ರಗಳು : ಡಾ ಅಭಿಜಿತ್ ಎ.ಪಿ.ಸಿ

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!