ಪರಿಸರದ ನಾಡಿ ಬಾನಾಡಿ

ಮೊದಲ ವಲಸಿಗ ಪೀಪಿ – 2

ಕಳೆದ ವಾರ : ಗದ್ದೆ ಗೊರವ

 

ಚುಕ್ಕೆ ಗೊರವ  wood sandpiper /  spotted sandpiper (Tringa glareola)

01 Wood Sandpiper ಚುಕ್ಕೆ ಗೊರವ

ಗದ್ದೆ ಗೊರವಕ್ಕಿಂತ ತುಸು ಎತ್ತರವಿರುವ ಇದು ಅದಕ್ಕಿಂತ ಸಪೂರ ಹೊರಮೈ ಹೊಂದಿದೆ. ಇವು ಗದ್ದೆ ಗೊರವಗಳಂತೆ ಒಂಟಿಯಾಗಿರುವುದಿಲ್ಲ. ಹೆಚ್ಚಾಗಿ ಎರಡರಿಂದ ಐದು ಪೀಪಿಗಳು ಒಟ್ಟಾಗಿರುತ್ತವೆ. ಒತ್ತಾದ ಬಿಳಿ ಗೀರುಗಳಿರುವ ಬೂದುಗಂದು ಮೇಲ್ಮೈ ; ತಿಳಿಗಂದು ಎದೆ ; ಬಿಳಿ ಕೆಳ ಮೈ ; ಹಾರುವಾಗ ಎದ್ದು ಕಾಣುವ ಬಿಳಿ ಪೃಷ್ಠ ಮತ್ತು ಬಾಲ ಇದರ ವಿಶೇಷತೆ. ಹಾರುವಾಗ ಕಾಲುಗಳು ಬಾಲದಿಂದ ಹೊರಕ್ಕೆ ಚಾಚಿಕೊಂಡಿರುತ್ತದೆ.   ತೀಕ್ಷ್ಣ ಚಿಪ್ . . . ಚಿಪ್ . . ಕೂಗು .

02-Wood-Sandpiper

Wood Sandpiper

ಇವೂ ಕೂಡಾ ಹಿಮಾಲಯ ಪ್ರಾಂತ್ಯದಲ್ಲಿ ಸಂತಾನೋತ್ಪತ್ತಿ ಮುಗಿಸಿ ಹಿಂಡುಹಿಂಡಾಗಿ ನಮ್ಮಲ್ಲಿಗೆ ಆಹಾರ ಅರಸುತ್ತಾ ವಲಸೆ ಬರುತ್ತವೆ.

2013ರ ನವೆಂಬರ್ ತಿಂಗಳ ಒಂದು ಮುಂಜಾನೆ, ಪಕ್ಷಿವೀಕ್ಷಣೆಗೆಂದು ಮನೆಗೆ ಬಂದಿದ್ದ ಗೆಳೆಯ ಅರವಿಂದನೊಡನೆ ಮನೆಯ ಹತ್ತಿರದ ಕೆರೆಗೆ ಹೋಗಿದ್ದೆವು. ಅಲ್ಲಿ ಈ ಚುಕ್ಕೆ ಪೀಪಿಗಳು, ಇತರೆ ಮರಳುಪೀಪಿಗಳೊಂದಿಗೆ ಕೆರೆ ದಡದಲ್ಲಿ ಮೇಯುತ್ತಿದ್ದುವು. ಈ ಪೀಪಿಗಳ ಕುಂಡೆ ಕುಸುಕಾಟ ನೋಡುವುದೇ ಒಂದು ಚಂದ. ನಾವು ಇವುಗಳ ವಯ್ಯಾರವನ್ನು ನೋಡುತ್ತಿರುವಾಗ ವಿಷ್ಣುವಾಹನ ಗರುಡ (ಬಿಳಿ ಗರುಡ / Brahminy kite) ಮೇಲಿಂದ ಹಾಗೆ ಕೆಳಬಂದು ಗಬಕ್ಕನೆ ಚುಕ್ಕೆ ಗೊರವನನ್ನು ತನ್ನ ಬಲಿಷ್ಠ ಕಾಲಿನಲ್ಲಿ ಹಿಡಿದು ಬಿಟ್ಟಿತು.

ಬಿಳಿ ಗರುಡ ಚುಕ್ಕೆ ಗೊರವ ಹಕ್ಕಿಯನ್ನು ಹಿಡಿದು ಹಾರಿದ ಕ್ಷಣ

ಬಿಳಿ ಗರುಡ ಚುಕ್ಕೆ ಗೊರವ ಹಕ್ಕಿಯನ್ನು ಹಿಡಿದು ಹಾರಿದ ಕ್ಷಣ

ಪಕ್ಷಿ ವೀಕ್ಷಕರಾದವರಿಗೆ ಇಂಥಾ ಘಟನೆಗಳನ್ನು ದಾಖಲಿಸುವುದು ಬಲು ಖುಷಿಯ ಸಂಗತಿ. ಬಿಳಿ ಗರುಡ ಹೆಚ್ಚಾಗಿ ಸತ್ತ ಪಕ್ಷಿಗಳನ್ನು ತಿನ್ನುವುದು, ಅಪರೂಪಕ್ಕೊಮ್ಮೆ ಜೀವಂತ ಹಕ್ಕಿಗಳ ಮೇಲೆ ಎರಗುವುದು.  ಆದರೆ ಹಿಮಾಲಯದಿಂದ ಬಂದ ಆ ಅತಿಥಿಗೆ ತವರಿಗೆ ಮರಳುವ ಸುಯೋಗವಿರಲಿಲ್ಲ. ಹಾಗಾದರೆ ಪ್ರಕೃತಿ ಕ್ರೂರಿಯೇ? ಅಥವಾ ಗರುಡನಿಗೆ ಆಹಾರ ಕೊಟ್ಟ ಅದೇ ಪ್ರಕೃತಿ ಉದಾರಿಯೇ? ನಾವೀ ಸಂದರ್ಭವನ್ನು ನೋಡಿ ನಿಜವಾಗಿ ಆನಂದಪಡಬೇಕೇ? ಅಥವಾ ಮರುಕವೇ? ಪ್ರಶ್ನೆಗಳಿಗೆ  ಉತ್ತರಗಳಿಲ್ಲ……… ಎಲ್ಲ ಅವರವರ ಮೂಗಿನ ನೇರ.

 

ಹಸಿರು ಗೊರವ Green sandpiper (Tringa ochropus)

ಈ ಮೊದಲು ವಿವರಿಸಿದ ಎರಡೂ ಗೊರವಗಳು ಶುದ್ಧ ನೀರು ಮತ್ತು ಕೊಳಚೆ ನೀರು ಎರಡರಲ್ಲೂ ಕಾಣಸಿಗುವುದು. ಆದರೆ ಈ ಹಸಿರು ಗೊರವಕ್ಕೆ ಕೊಳಚೆ ನೀರು ಅಸಹ್ಯ . ಏನಿದ್ದರೂ ಶುದ್ಧ ನೀರು. ಅದರಲ್ಲೂ ಶುದ್ಧದಲ್ಲಿ ಶುದ್ಧ  ಮಳೆ ನೀರು ಇದಕ್ಕೆ ಬಲು ಇಷ್ಟ. ಜೋರು  ಮಳೆ ಬಂದ ನಂತರ ಮಣ್ಣು ರಸ್ತೆಯಲ್ಲಿ ನಿಂತ ನೀರಿನಲ್ಲಿ ಈ ಪೀಪಿಯ ದರ್ಶನ ನನಗೆ ಅನೇಕ ಬಾರಿ ಆಗಿದೆ.

 

ಹೆಚ್ಚಾಗಿ ಒಂಟಿ ಅಥವಾ ಜೋಡಿಯಾಗಿ ಲಭಿಸುವ ಈ ಪೀಪಿಗೆ ಹಸಿರುಗಂದು ಮೇಲ್ಮೈ; ಕಂದು ಬೆನ್ನು; ಬಿಳಿ ಪೃಷ್ಠ. ಹಾರುವಾಗ ರೆಕ್ಕೆಯಡಿ ಕಪ್ಪು.

ಹಸಿರು ಗೊರವ Green sandpiper

ಹಸಿರು ಗೊರವ Green sandpiper

ಈ ಪೀಪಿಗಳು ಪುನರ್ವಲಸೆ ಹೋಗಲಿಕ್ಕೆ ಕೆಲವೇ ದಿನ ಮೊದಲು ಜೋಡಿಯಾಗಿರುವುದನ್ನು ನಾನು ಎರಡು ಭಾರಿ ದಾಖಲಿಸಿರುವೆ . ಅಂದರೆ ತವರಿಗೆ ಹೋದ ನಂತರ ಈ ಪೀಪಿಗಳು ತರಾತುರಿಯಲ್ಲಿ ಗೂಡು ಮಾಡಿ ಮೊಟ್ಟೆ ಇಡುವುದಾ? ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಬಲ್ಲವರು ಹೇಳಿ …..
ಜೌಗು ಗೊರವ  marsh sandpiper (Tringa stagnatilis)

04 Marsh sandpiper ಜೌಗು ಗೊರವ

ಮೈಸೂರು  ಸುತ್ತಮುತ್ತ ಕಾಣಸಿಗುವ ಅತಿ ಎತ್ತರದ ಗೊರವ ಇದು. 25 ಸೆ.ಮಿ ಎತ್ತರದ ಈ ಪೀಪಿ ಮಧ್ಯ ಏಶಿಯಾ ಮತ್ತು ಪಶ್ಚಿಮ ಯೂರೋಪ್‍ನಿಂದ ಬರುವ ಚಳಿಗಾಲದ ಅತಿಥಿ. ಈ ಗೊರವಕ್ಕೆ ನೀಳ ಕಾಲುಗಳು ಮತ್ತು ನುಣುಪಾದ ಕೊಕ್ಕು. ಬೂದು ಮೇಲ್ಮೈ; ಕೆಳಮೈ ಮತ್ತು ಕುತ್ತಿಗೆ ಬಿಳಿ .
05 Marsh and Wood Sandpiper
ಈ ಪೀಪಿ ಕೂಡಾ ಸ್ವಚ್ಛ ನೀರನ್ನೇ ಹೆಚ್ಚು ಪ್ರೀತಿಸುತ್ತದೆಯಾದರೂ, ಸ್ಥಳಾವಕಾಶದ ಕೊರತೆಯಿಂದ ಗಲೀಜು ನೀರಿನಲ್ಲಿ ಅಶನ ಅರಸುವುದನ್ನು ನಾನು ಅನೇಕ ಬಾರಿ ಕಂಡದ್ದುಂಟು. ಗದ್ದೆ ಗೊರವ, ಚುಕ್ಕೆ ಗೊರವದೊಡನೆ ಈ ಗೊರವಕ್ಕೆ ಒಳ್ಳೆಯ ಗೆಳೆತನವಿದೆ.

ಉಳಿದ ಪೀಪಿಗಳಷ್ಟು ಸಾಮಾನ್ಯವಲ್ಲ ಈ ಪೀಪಿ. ಇದನ್ನು ನೀವು ಭೇಟಿ ಮಾಡಲು ತುಸು ಶ್ರಮ ಪಡಬೇಕು.

 

ಕಡಲ ತೀರದ ಗೊರವಗಳು

ಕಡಲ ತೀರದ ನಿವಾಸಿ ನಾನಲ್ಲದುದರಿಂದ ನನಗೆ ಈ ಗೊರವಗಳೊಡನೆ ಹೆಚ್ಚಿನ ಒಡನಾಟವಿಲ್ಲ. ಆದರೂ ಅಪರೂಪಕ್ಕೊಮ್ಮೆ ಸಮುದ್ರ ಕಿನಾರೆಗೆ ಭೇಟಿ ಕೊಟ್ಟಾಗ Hi, Bye ಹೇಳಿದ ಮತ್ತು ಬಾಯಿ ಬಿಟ್ಟು ನೋಡಿದ ಪರಿಚಯ ಮಾತ್ರ. ಮೇಲಿನ ಪೀಪಿಗಳೊಡನೆ ಹತ್ತಿರದ ಒಡನಾಟವಿದ್ದದ್ದರಿಂದ ವಿಸ್ತಾರವಾಗಿ ನನಗೆ ತಿಳಿದಿರುವಷ್ಟು ಬರೆದಿರುವೆ. ಕಡಲ ಪೀಪಿಗಳ ಬಗೆಗೆ ಉಲ್ಲೇಖಿಸದಿದ್ದರೆ ಲೇಖನ ಅಪೂರ್ಣವಾಗುವುದು. ಅವು ಬೇಜಾರು ಮಾಡಿಕೊಂಡರೆ!!!

 

ಟೆರಿಕ್ ಮರಳು ಪೀಪಿ  Terek sandpiper (Xenus cinereus)

ಫಿನ್‍ಲ್ಯಾಂಡ್ ಮತ್ತು ಸೈಬೀರಿಯಾದಿಂದ ಬರುವ ಚಳಿಗಾಲದ ವಲಸಿಗ. ಹೆಚ್ಚಾಗಿ ಹಿಂಡು ಹಿಂಡಾಗಿ  ಕಾಣುವ ಈ ಕಡಲ ನೀರಂಕಿಗೆ ಉದ್ದವಾದ ಮತ್ತು ಮೇಲ್ಮುಖವಾಗಿ ಬಗ್ಗಿರುವ ಕೊಕ್ಕು. ಈ ರೀತಿಯ ವಿಚಿತ್ರ ವಿನ್ಯಾಸದ ಕೊಕ್ಕು ಸಮುದ್ರದ ಹೊಯಿಗೆಯನ್ನು ಕುಕ್ಕಿ ಚಿಪ್ಪು ಆಯಲು ಸಹಕಾರಿ. ಸಮುದ್ರದ ಅಲೆಯೊಂದಿಗೆ ಇವುಗಳ ಸರಸ . ಅಲೆ ಕೆಳಹೋದಂತೆ ಇವು ಕೂಡಾ ಕೆಳ ಹೋಗಿ ಅಲೆಯೊಂದಿಗೆ ಬಂದ ಜಲಚರಿಗಳನ್ನು ತಿನ್ನುತ್ತವೆ . ಇನ್ನೊಂದು ಅಲೆ ಅಪ್ಪಳಿಸುವಾಗ ಒಮ್ಮೆಲೆ ಮೇಲ್ದಂಡೆಗೆ ಬರುತ್ತವೆ. ಕಡಲ ತೀರದಲ್ಲಿ  ಕುಳಿತು ಇವುಗಳ ಆಟ ನೋಡುವುದೇ ಒಂದು ಚಂದ.

 

Terak Sandpiper ಟೆರಿಕ್ ಮರಳು ಪೀಪಿ

Terak Sandpiper ಟೆರಿಕ್ ಮರಳು ಪೀಪಿ

ದಪ್ಪ ಕೊಕ್ಕಿನ ಮರಳು ಪೀಪಿ  Broadbilled sandpiper (Limicola falcinellus)

ಯುರೋಪ್‍ನಿಂದ ನಮ್ಮ ಕಡಲ ತೀರಕ್ಕೆ ಬರುವ ಚಳಿಗಾಲದ ಅತಿಥಿ. ಹೆಸರೇ ಸೂಚಿಸುವಂತೆ ಇದರ ಕೊಕ್ಕು ಬಲು ಅಗಲ. ಪಕ್ಕನೆ ಡನ್‍ಲಿನ್ ಎಂಬ ಕಡಲ ಹಕ್ಕಿಯನ್ನು ಹೋಲುವ ಇದು ಅದಕ್ಕಿಂತ ತುಸು ದಪ್ಪ ಮತ್ತು ಕುಬ್ಜ . ಡನ್‍ಲಿನ್‍ಗಿಂತ ದೊಡ್ಡ ಬಿಳಿ ಹುಬ್ಬು  ಮತ್ತು ಕಣ್ಣ ಸುತ್ತ ಕಡುಗಪ್ಪು ಪಟ್ಟಿ ಇದನ್ನು ಪ್ರತ್ಯೇಕಿಸಲು ಸಹಕಾರಿಯಾದ ಅಂಶ. ನಾನು ಈವರೆಗೂ ಇದನ್ನು ನೋಡಿಲ್ಲ . ಮಣಿಪಾಲದ ಗೆಳೆಯ ಷಣ್ಮುಖರಾಜ ಈ ಸುಂದರ, ವಿರಳ ಪೀಪಿಯನ್ನು ಚಿತ್ರೀಕರಿಸಿ ಕಳುಹಿಸಿರುವರು. ನಿಮ್ಮ ಮುಂದಿದೆ ಆ ಚಿತ್ರ

broad billed sandpiper ದಪ್ಪ ಕೊಕ್ಕಿನ ಮರಳು ಪೀಪಿ

broad billed sandpiper ದಪ್ಪ ಕೊಕ್ಕಿನ ಮರಳು ಪೀಪಿ

ಹೆಗ್ಗೊರವ  Curlew sandpiper (Calidris ferruginea)

ಸೈಬೀರಿಯಾದಿಂದ ಬರುವ ಚಳಿಗಾಲದ ಅತಿಥಿ. ಈ ಪೀಪಿಗೆ ಉದ್ದವಾದ  ಮತ್ತು ಕೆಳಮುಖವಾಗಿ ಬಗ್ಗಿರುವ ಕೊಕ್ಕು. ಹಾರಾಟದಲ್ಲಿ ಬಿಳಿಬಣ್ಣದ ಬಾಲದ ಗರಿಗಳಿಂದ ಗುರುತಿಸಬಹುದು.  ಗುಂಪು ಗುಂಪಾಗಿ ಇರುವ ಈ ಪೀಪಿ ಕಡಲ ತೀರದಲ್ಲಿ, ಉಪ್ಪಿನ ಗದ್ದೆಗಳಲ್ಲಿ ಕಾಣಬಹುದು.

 

ಹೆಗ್ಗೊರವ  Curlew sandpiper (Calidris ferruginea)

ಹೆಗ್ಗೊರವ Curlew sandpiper (Calidris ferruginea)

ಚಿತ್ರಗಳು : ವಿಜಯಲಕ್ಷ್ಮಿ ರಾವ್ , ಷಣ್ಮುಖರಾಜ ಮೂರೂರು , ಡಾ . ಅಭಿಜಿತ್

 

ಮುಂದಿನ ವಾರ –  ಹಕ್ಕಿಗಳ ಪಾರ್ಟಿ ಅರೇ, ಇದೇನು ಹಕ್ಕಿಗಳದ್ದು ಪಾರ್ಟಿ ಅಂತೀರಾ?? ಮುಂದಿನ ವಾರದ ತನಕ ಕಾಯ್ತಾ ಇರಿ! 🙂

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!