ಪರಿಸರದ ನಾಡಿ ಬಾನಾಡಿ

ಮೊದಲ ವಲಸಿಗ – ಪೀಪಿ (SANDPIPER)

ಜುಲೈ ತಿಂಗಳಲ್ಲಿ ಬಿತ್ತಿದ ಭತ್ತದ ನೇಜಿ ಆಗಸ್ಟ್ ಹೊತ್ತಿಗೆ ನೆಡಲು ತಯಾರಾಗಿರುತ್ತದೆ. ಇದನ್ನು ಏಣೇಲು ಬೆಳೆ/ ಐನು ಫಸಲು ಎನ್ನುವರು. ನೆಟ್ಟ ಪೈರು ಶುರುವಿನಲ್ಲಿ ತುಸು ಬಾಡಿ ಒಂದು ವಾರದಲ್ಲಿ ಹಸಿರಾಗುತ್ತದೆ. ಇಂಥಾ ಗದ್ದೆ, ಕೆಸರು ಗದ್ದೆ , ಹಸಿರು ಗದ್ದೆ ಅನೇಕ ಜೀವ ಜಂತುಗಳಿಗೆ ಸೂರು. ವಿವಿಧ ಮೃದ್ವಂಗಿಗಳು (ನರ್ತೆ), ಕೀಟಗಳು, ಏಡಿಗಳು, ವಲ್ಕಳಗಳು, ಮಿಡತೆಗಳು ಹೀಗೆ ಅನೇಕ. ಗದ್ದೆಗೆ ಹಾಕಿದ ಗೊಬ್ಬರ ಆ ಜೀವಜಂತುಗಳಿಗೆಲ್ಲ ಉತ್ತಮ ಆಹಾರ. ಹಾಗೆಂದು ಮನುಷ್ಯರ ಹಾಗೆ ಪರಿಸರವನ್ನು ತಿಂದು ಖಾಲಿ ಮಾಡುವ ದುರಾಸೆ ಯಾವ ಜೀವಿಗಳಿಗೂ ಇಲ್ಲ. ತಾನು ತಿಂದುದನ್ನೆಲ್ಲಾ ಮತ್ತೆ ಹಿಕ್ಕೆ ಹಾಕುತ್ತಿರಲು ಭತ್ತಕ್ಕಾಗುವುದಿಲ್ಲ ಯಾವುದೇ ತತ್ತ್ವಾರ. ಆದರೂ ಯಾವುದೇ ಜೀವಿ ಅತಿಯಾದರೆ ಭೂಮಿಗೆ ಭಾರ.  ಹಾಗಾಗಿ, ಒಂದನ್ನು ಕೊಂದು ಇನ್ನೊಂದು ಬದುಕುವ ಒಂದಕ್ಕೊಂದು ಆಹಾರವಾಗುವ ಜೀವ ನಿಯಮವನ್ನು ಪ್ರಕೃತಿ ರೂಪಿಸಿದೆ.

01 ಟೆರಿಕ್ ಮರಳು ಪೀಪಿ Terek sandpiper

ನೀರುಗದ್ದೆಯ ನಿಯಂತ್ರಣಕ್ಕೆಂದೇ ಇದೆ  ಪೀಪಿಗಳು/ಗೊರವಗಳು (SANDPIPER)

ಈ ಗೊರವಗಳು ಹಯನಾದ ಮಣ್ಣಿಗೆ ತನ್ನ ಕೊಕ್ಕನ್ನು ಅದ್ದಿ ಮೇಲೆ ತಿಳಿಸಿದಂಥ ಕೀಟಗಳನ್ನು  ಹೆಕ್ಕಿ ಹೆಕ್ಕಿ ತಿನ್ನುತ್ತವೆ. ಭತ್ತದ ಕೊಯ್ಲಿಲಿನ ದಿನದವರೆಗೂ ಅವು ಗದ್ದೆಯನ್ನು ಬಿಡುವುದಿಲ್ಲ. ಅಲ್ಲೇ ಅವುಗಳ ವಾಸ.  ಗೊರವಗಳು ಸಂತಾನೋತ್ಪತ್ತಿಯನ್ನು ಬಹುತೇಕ ಹಿಮಾಲಯದ ತಪ್ಪಲಿನಲ್ಲಿ, ಲಡಾಖ್ ಪ್ರಾಂತ್ಯದಲ್ಲಿ ಮಾಡುತ್ತವೆ. ಕೆಲವು ಗೊರವಗಳು ಯುರೋಪ್ ಖಂಡದಲ್ಲೂ ಸಂತಾನೋತ್ಪತ್ತಿ ಮಾಡುತ್ತವೆ . ಆಗಸ್ಟ್ ಕೊನೆಯಲ್ಲಿ ನಮ್ಮಲ್ಲಿಗೆ ಬರುತ್ತವೆ. ಪುನಃ ತವರು ಸೇರುವುದು ಮೇ ತಿಂಗಳಲ್ಲೇ. ಅಂದರೆ ಅವು ಹೆಚ್ಚಿನ ಸಮಯವನ್ನು ತಿರುಗಾಟದಲ್ಲೇ ಕಳೆಯುತ್ತವೆ! ವಲಸೆ ಹಕ್ಕಿಗಳ ಆಗಮನ ಪಟ್ಟಿಯಲ್ಲಿ ಪೀಪಿಗಳೇ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿವೆ ಎಂಬುದನ್ನು ಗಮನಿಸಿ.

ಗದ್ದೆ ಗೊರವ Common sandpiepr

ಗದ್ದೆ ಗೊರವ Common sandpiepr

ಗೊರವಗಳು ಗದ್ದೆಯಲ್ಲಿ ಮಾತ್ರ ಇರುತ್ತವೆ ಎಂದುಕೊಳ್ಳಬೇಡಿ. ನಮ್ಮ ನಿಮ್ಮ ತೋಟದಲ್ಲಿನ ಕೆರೆ ಬದಿಯಲ್ಲೂ ಇರಬಹುದು, ಅಡಿಕೆ ತೋಟದ ಉಜಿರು ಕಣಿಯಲ್ಲಿ ಕಾಣಿಸಬಹುದು, ಜೋರು ಮಳೆ ಬಂದ ಅನಂತರ ಮನೆಯಂಗಳದಲ್ಲೂ ಅದರ ಅನ್ನ ಅರಸಬಹುದು. ಹರಿಯುವ ತೋಡು, ಹೊಳೆ, ಸರೋವರವಾದರೂ ಆಗಬಹುದು. ಅಂದರೆ ಇವು ಮುಖ್ಯವಾಗಿ  ನೀರು ಇರುವಲ್ಲಿ ಕಾಣಿಸುತ್ತವೆ. ಹಾಗಾಗಿ ಇದನ್ನು ಸಂಸ್ಕೃತದಲ್ಲಿ ನೀರಂಕಿ / ಜಲರಂಕಿ ಎಂದು ಕರೆದರು. ರಂಕಿ ಎಂದರೆ ಗುಬ್ಬಿ. ನೀರ ಮೇಲಿನ ಗುಬ್ಬಿಯೇ ಈ ಗೊರವಗಳು.

ಗೊರವಗಳಲ್ಲಿ ಪ್ರಪಂಚದಾದ್ಯಂತ 90 ಪ್ರಭೇದಗಳಿವೆ. ಈ ಎಲ್ಲವೂ ನಾವಿರುವಲ್ಲಿ, ನಮ್ಮ ನೀರ ಬದಿಯಲ್ಲಿ ಸಿಗುವುದಿಲ್ಲ. ನಮ್ಮ ಸುತ್ತಮುತ್ತ ಹೆಚ್ಚಾಗಿ ಕಾಣಿಸುವುದೆಂದರೆ

1 . ಗದ್ದೆ ಗೊರವ  common sandpiper (Actitis hypoleucos)

2 . ಚುಕ್ಕೆ ಗೊರವ  wood sandpiper /  spotted sandpiper (Tringa glareola)

3 . ಹಸಿರು ಗೊರವ  green sandpiper (Tringa ochropus)

4 . ಜೌಗು ಗೊರವ  marsh sandpiper (Tringa stagnatilis)

03 ಗದ್ದೆ ಗೊರವ common sandpiper

ಇನ್ನುಳಿದ ಹೆಚ್ಚಿನ ಗೊರವಗಳನ್ನು ನಾವು ಕಡಲ ತೀರದಲ್ಲಿ ನೋಡಬಹುದು. ಅವುಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಾಣುವ ಪ್ರಭೇದಗಳೆಂದರೆ

1 . ಟೆರಿಕ್ ಮರಳು ಪೀಪಿ  Terek sandpiper (Xenus cinereus)

2 . ದಪ್ಪ ಕೊಕ್ಕಿನ ಮರಳು ಪೀಪಿ broadbilled sandpiper (Limicola falcinellus)

3 . ಹೆಗ್ಗೊರವ  curlew sandpiper (Calidris ferruginea)

ಟೆರಿಕ್ ಮರಳು ಪೀಪಿ Terek sandpiper

ಟೆರಿಕ್ ಮರಳು ಪೀಪಿ Terek sandpiper

ನಾವೀಗ ಒಂದೊಂದೇ ಗೊರವಗಳ ಗುಣವಿಶೇಷಗಳನ್ನು ನೋಡೋಣ.

1 . ಗದ್ದೆ ಗೊರವ/ಮರಳು ಪೀಪಿ   common sandpiper

21 ಸೆ.ಮೀ ಗಾತ್ರ . ಬೂದು ಮಿಶ್ರಿತ ಕಂದು ಬಣ್ಣ, ಹೊಟ್ಟೆಯ ಭಾಗ, ತಲೆ, ಹುಬ್ಬು ಮತ್ತು ಕತ್ತು ಬಿಳಿ. ತಿಳಿಗಂದು ಕಾಲುಗಳು. ಭುಜದ ಮೇಲಿರುವ ಬಿಳಿ ಗುರುತು ಗದ್ದೆಗೊರವ ಎಂದು ನಿಸ್ಸಂದೇಹವಾಗಿ ಹೇಳಲಿಕ್ಕಿರುವ ಸುಲಭ ಚಿಹ್ನೆ . ಆ ಬಿಳಿ ಗುರುತು ಹಾರುವಾಗಲೂ ಎದ್ದು ಕಾಣುವುದು. ಮೊಂಡು ಬಾಲವನ್ನು ಆಡಿಸುತ್ತಾ ಅತ್ತಿಂದಿತ್ತ ಓಡಾಡುತ್ತಿರುತ್ತದೆ. ಮೊದಲೇ ತಿಳಿಸಿದಂತೆ ಜೌಗು ಪ್ರದೇಶದಲ್ಲಿ ಇದರ ವಾಸ. ಭಾರತದಾದ್ಯಂತ ಚಳಿಗಾಲದಲ್ಲಿ ಕಾಣಸಿಗುವ ಈ ಮರಳುಪೀಪಿ ಮಧ್ಯಯುರೋಪ್, ಕಾಶ್ಮೀರ , ಲಡಾಖ್ ಪ್ರಾಂತ್ಯದಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ.

ಈ ಪೀಪಿಗಳು ಹೆಚ್ಚಾಗಿ ಒಂಟಿಯಾಗಿರುತ್ತವೆ. ತನ್ನ ಹತ್ತಿರ ಮೊತ್ತೊಂದು ಪೀಪಿ ಆಹಾರ ಅರಸುತ್ತಾ ಬಂದರೆ ಎರಡೂ ಜಗಳ ಆಡುವ ದೃಶ್ಯ ಬಲು ಸಾಮಾನ್ಯ. ಪ್ರತಿಯೊಂದು ಮರಳು ಪೀಪಿ0ಯೂ ತನ್ನ ಭೂಪ್ರದೇಶ (territory) ವನ್ನು ಗುರುತು ಮಾಡಿಕೊಳ್ಳುತ್ತದೆ. ಅಲ್ಲಿಗೆ ಇನ್ನೊಂದು ಮರಳು ಪೀಪಿ ಬಂದರೆ ಜಗಳ ಖಂಡಿತ. ಹರಿಯುವ ನೀರಿದ್ದರೆ ಈ ಪೀಪಿಗಳು ಅಲ್ಲಿರುವ ಕಲ್ಲಿನ ಆಶ್ರಯ ಪಡೆಯುತ್ತವೆ. ಕೆಸರಿನಲ್ಲಿರುವ ವಿಧ ವಿಧದ ಕೀಟ ಕೋಟಿಯಲ್ಲದೆ, ಅಲ್ಲಿರುವ ಪಾಚಿಯೂ ಇದಕ್ಕೆ ಆಹಾರವೆ.

05 ಗದ್ದೆ ಗೊರವ common sandpiper

ಈ ಪೀಪಿಯ ಬಗೆಗೆ ಇರುವ ಎರಡು ಕೌತುಕಗಳು.

1) ಈ ಗೊರವಗಳಿಗೆ ಅಕಸ್ಮಾತ್ ಬೇಟೆಗಾರರಿಂದ ಪೆಟ್ಟಾದರೆ 50-60 ಸೆ.ಮೀ ನೀರಿನೊಳಕ್ಕೆ ಹೋಗಿ ಇನ್ನೊಂದು ದಡ ಸೇರುವ ಸಾಮರ್ಥ್ಯವಿದೆಯಂತೆ!

2) ನೀರಿನ ಮೇಲೆ ಕೆಳಮಟ್ಟದಲ್ಲಿ ಹಾರುವಾಗ ಟ್ಟೀ…ಟ್ಸ್… ಟ್ಸ್… ಕೂಗು. ಈ ಕೂಗು ವಲಸೆಯ ಶುರುವಿನಲ್ಲಿ ಮತ್ತು ವಲಸೆಯ ಕೊನೆಯಲ್ಲಿ ಹಲವು ಬಾರಿ ಪುನರಾವರ್ತಿತವಾಗುವುದಂತೆ.

ಸಂತಾನೋತ್ಪತ್ತಿ :

ನದಿ ತೀರದಲ್ಲಿ ಅಥವಾ ದ್ವೀಪಗಳಲ್ಲಿ ಸಣ್ಣ ಕಲ್ಲುಗಳನ್ನು ಗುಡ್ಡೆ ಮಾಡಿ ಅದರ ಸುತ್ತಲೂ ಎಲೆಗಳನ್ನು ಹಾಕುವುದು. ಅದರ ಮಧ್ಯೆ 3-4 ಮೊಟ್ಟೆ ಇಡುವುದು. ಬೂದು ಬಣ್ಣದ ಮೊಟ್ಟೆಗೆ ಸಣ್ಣ ಗೆರೆಗಳಿರುತ್ತವೆಯಂತೆ. ಎಲ್ಲಾ ಗೊರವಗಳ ಸಂತಾನಾಭಿವೃದ್ಧಿ ಕಾಲಾವಧಿ 18 ರಿಂದ 30 ದಿವಸ. ಮೊಟ್ಟೆ ಒಡೆದ ತಕ್ಷಣ ಮರಿಗಳು ಸ್ವತಂತ್ರವಾಗುವುದಂತೆ!

ಮೈಸೂರಿನಲ್ಲಿ ಚಳಿಗಾಲದಲ್ಲಿ ಗೊರವಗಳು :

ಈ ಗೊರವಗಳು ನಮ್ಮೂರು ಮೈಸೂರಿನಲ್ಲಿ ಎಲ್ಲಾ ಕಡೆ ಲಭ್ಯ. ಇಲ್ಲಿನ ಎಲ್ಲಾ ಜಲ ಮೂಲಗಳೂ ಕಲುಷಿತವಾಗಿದ್ದರೂ ಹೆಚ್ಚಿನ ಸಂಖ್ಯೆ0ುಲ್ಲಿ ವಲಸೆ ಬರುತ್ತಿರುವುದು ನೆಮ್ಮದಿಯ ಸುದ್ದಿ . ಆದರಿದು ಜಲಮಾಲಿನ್ಯಕ್ಕಿರುವ ಪ್ರಕೃತಿಯ ಒಪ್ಪಿಗೆಯೆಂದು ತಿಳಿದಂತಿದೆ ನಮ್ಮ ಬುದ್ಧಿ .

ಅಂದ ಹಾಗೆ,  ಛೇದಕ ಸುದ್ದಿ (BREAKING NEWS) : ಹೆಬ್ಬಾತು  ( barheaded goose (Anser indicus) ) ಇದೀಗ ಕರ್ನಾಟಕಕ್ಕೆ ಲಗ್ಗೆ ಇಟ್ಟಿವೆ. ತಡವ್ಯಾಕೆ ನಿಮ್ಮ ಪರಿಸರಕ್ಕೂ ಬಂದಿರಬಹುದು, ನೋಡಿ!

“ಮುಂದಿನ ವಾರಕ್ಕೆ:  ಗೊರವಗಳ ಬಗ್ಗೆ ಇನ್ನಷ್ಟು”

ಚಿತ್ರ ಕೃಪೆ: ವಿಜಯಲಕ್ಷ್ಮಿ ರಾವ್ ಮತ್ತು ಅಭಿಜಿತ್ ಎ ಪಿ ಸಿ

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!