ನನ್ನೆಲ್ಲಾ ಆಸೆ
ಬರಿದಾಗಲೂ ಸಿದ್ಧ.
ನಕ್ಕಾಗ ಬುದ್ಧ.
ವೇಷ ಕಳಚಿ
ನಿಂತೆ. ಬಯಲಸತ್ಯ
ಗೋಚರಿಸಿತ್ತು
ಶೀತಲತೆಗೆ
ಬೆಚ್ಚಿ ಹಿಮಗಿರಿಗೂ
ಕ್ಷಣ ನಡುಕ.
ಮಳೆ ‘ದನಿ’ಗೆ
ಕಾತುರದೀ ‘ನವಿಲು’
ಉತ್ಸಾಹದ ಬುಗ್ಗೆ.
ಚಂದ್ರಕಾಣದೆ
ಸಮುದ್ರ ಅಲೆಗಳಿಗೆ
ಸಮೂಹ ಸನ್ನಿ.
ಜೀವ ನೀಡದ
ಬೇಡನ ‘ಸತ್ತ’ ಜಿಂಕೆ
ಅಣಕಿಸಿತ್ತು.
ಗುಟುಕು ನೀಡೋ
ಹಕ್ಕಿಗೆ ‘ನಾಳೆ’ ಮತ್ತೇ
ಹೇಗೆಂಬ ಚಿಂತೆ.
ಆಕಾಶ, ಭೂಮಿ,
ಮಳೆ, ಗಾಳಿ, ‘ಮನಸ್ಸೂ’
ಸಮಕಾಲೀನ.
ಶ್ರಾವಣದೇಹ.
ವರುಣಆತ್ಮ. ಭೂಮಿ
ಅಸ್ತಿತ್ವ ‘ಛಾಯೆ’.
ಕ್ಷಣತಲ್ಲಣ;
ಮತ್ತೇ ತಲ್ಲೀನ. ಮಳೆ
‘ಸಂಗೀತ’ ‘ಧಾರೆ’.
ಭೂಮಿಆತಂಕ.
‘ಬಂಜೆ’ ಆಕಾಶ; ಮಳೆ
ಇನ್ನೂ ಕನಸು.
ಕುಬ್ಜ ಮನಸು
ಬಾಹುಬಲಿಯ ಮುಂದೆ
ಬೆತ್ತಲಾಯಿತು.
ಭೋದಿವೃಕ್ಷದ
ಕೆಳಗಿನ ಬೆಳಕು
‘ಕತ್ತಲ’ಲ್ಲಿದೆ.
ವೈಶಾಂಪಾಯನ
ನದಿತಟ; ‘ಕೌರವ’.
ಮುರಿದತೊಡೆ.
ಬಯಕೆಚಿಟ್ಟೆ.
ಬುದ್ಧನತೊಡೆ ಮೇಲೆ
ಕೂತು ನಿಶ್ಚಿಂತ.
ಕಡುಬಿಸಿಲ
ಸಿಂಹಾಸನದೀ ಸೂರ್ಯ;
ವಿ’ರಾಜ’ಮಾನ.
ವೀಣೆ ಮೀಟಿದೆ.
‘ಚಿಗುರು’ ಮಾವಿನೆಲೆ
ತಿಂದ ಕೋಗಿಲೆ.
ಕರಗೋಕಲ್ಲು;
ಇಚ್ಛಾಶಕ್ತಿ ಕೊರತೆ;
ಬಲಿಷ್ಠ ಒರತೆ.
ಮಳೆ, ಬಿಸಿಲು;
ಸ್ಥಿತಪ್ರಜ್ಞ ಆಕಾಶ.
ಚಿರಕಾಲಕೂ.
ಹೊರ ಶುಚಿಗೆ
ಗಂಗಾಸ್ನಾನ. ಒಳಗೆ
ಲಿಂಗ ಮಜ್ಜನ.
ಮುಗಿಲ ಚುಕ್ಕಿ
ರಾತ್ರಿಕಡಲು ಉಕ್ಕಿ
‘ನಿತ್ಯ’ಸಂವಾದ.
-ಮಕರಂದ ಮನೋಜ್ ಎಂ.
Facebook ಕಾಮೆಂಟ್ಸ್