ಅವಳು ಇರಾ ಸಿಂಘಾಲ್. ಇತರರಂತೆ ಸಾಮಾನ್ಯಳಾಗಿದ್ದರೆ ಆಕೆಯ ಬಗ್ಗೆ ಬರೆಯುವ ಮನಸ್ಸು ಮಾಡುತ್ತಿರಲಿಲ್ಲವೇನೋ. ಆಕೆಗೆ ಬೆನ್ನುಹುರಿಗೆ ಸಂಬಂಧಿಸಿದ ಸ್ಕೋಲಿಯೋಸಿಸ್ ಎಂಬ ರೋಗವಿದೆ. ಎಷ್ಟೆಂದರೆ ಆಕೆಗೆ ತನ್ನ ತೋಳುಗಳನ್ನು ಚಲಿಸಲೂ ಸಾಧ್ಯವಾಗುತ್ತಿಲ್ಲ, ಅಷ್ಟು. ಅದೊಂಥರ ‘ಬಗಲ್ ಮೆ ದುಶ್ಮನ್’ ಇದ್ದ ಹಾಗೆ. ಸದಾ ಆ ನೋವನ್ನು ಹೊತ್ತುಕೊಂಡೇ ತಿರುಗಬೇಕು. ನಡೆಯುವಾಗಲೂ ಅಷ್ಟೆ, ಮಲಗಿರುವಾಗಲೂ ಅಷ್ಟೆ. ಆಕೆಗೆ ಈ ತೊಂದರೆ ಖಾಯಂ. ಆದರೆ ಐಎಸ್ ಅಧಿಕಾರಿಯಾಗಬೇಕೆಂಬ ಇರಾ ಆಸೆಗೆ ತನ್ನ ದೈಹಿಕ ಸಮಸ್ಯೆಗಳ್ಯಾವುದೂ ಅಡ್ಡ ಬರಲಿಲ್ಲ. ಐಎಸ್ ಅಧಿಕಾರಿಯಾಗಿ ಜನಸೇವೆ ಮಾಡಬೇಕೆಂಬ ಆಕೆಯ ಹಂಬಲದ ಮುಂದೆ ಸ್ಕೋಲಿಯೋಸಿಸ್ ಎಂಬುದು ಒಂದು ಲೆಕ್ಕವೇ ಆಗಿರಲಿಲ್ಲ. ಇರಾ ಇವತ್ತು ವಿಕಲಚೇತನೆಯಾಗಿದ್ದರೂ ಸಹ ಈ ವರ್ಷದ ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಪಡೆಯುವ ಮೂಲಕ ಅಧ್ಭುತ ಎನ್ನಬಹುದಾದ ಸಾಧನೆಯನ್ನು ಮಾಡಿದ್ದಾಳೆ.
ಯುಪಿಎಸ್ಸಿ ಪರೀಕ್ಷೆ… ಅದು ನಮ್ಮ ದೇಶದಲ್ಲಿಯೇ ಅತ್ಯಂತ ಕ್ಲಿಷ್ಟಕರವಾದಂತಹ ಪರೀಕ್ಷೆ. ಅದನ್ನು ಮೊದಲ ಪ್ರಯತ್ನದಲ್ಲೇ ಪಾಸು ಮಾಡುತ್ತೇವೆಂದು ಹೇಳಲು ಸಾಧ್ಯವಿಲ್ಲ. ಪ್ರಿಲಿಮ್ಸ್ ಪಾಸಾದರೆ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತೇವೆಂದು ಗ್ಯಾರಂಟಿಯಿಲ್ಲ. ಅದನ್ನು ಪಾಸಾದರೂ ಸಂದರ್ಶನದಲ್ಲಿ ಆಯ್ಕೆಯಾಗುವುದು ಖಚಿತವಲ್ಲ. ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಯಲ್ಲಿ ಪಾಸಾಗಿಯೂ ಸಂದರ್ಶನದಲ್ಲಿ ನಪಾಸಾಗುವವರೂ ಇದ್ದಾರೆ. ಹಾಗೆ ನಪಾಸಾಗುವವರು ಮತ್ತೆ ಐಎಸ್ ಅಧಿಕಾರಿಯಾಗಬೇಕೆಂದರೆ ಮತ್ತೆ ಮುದದಿಂದ ಪರೀಕ್ಷೆ ಬರೆಯಬೇಕಾಗುತ್ತದೆ. ಮತ್ತೆ ಕೆಲವರು ಸಂದರ್ಶನದಲ್ಲಿಯೂ ಪಾಸಾಗಿ ನಿರೀಕ್ಷಿತ ರ್‍ಯಾಂಕ್ ಬರದೇ ಇದ್ದರೆ ಮತ್ತೆ ಪುನಃ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಯುಪಿಎಸ್ಸಿ ಪರೀಕ್ಷೆ ಸಾಮಾನ್ಯರಿಗೆ ಕೈಗೆಟುಕದ ಹುಳಿದ್ರಾಕ್ಷಿ, ಅಸಾಮಾನ್ಯರಿಗೆ ಕಬ್ಬಿಣದ ಕಡಲೆ. ಎಲ್ಲವೂ ಸರಿಯಾಗಿದ್ದುಕೊಂಡು ಹಗಲಿರುಳು ಓದಿ ಕಷ್ಟಪಟ್ಟು ಪಾಸಾಗುವವರನ್ನು ನೋಡಿದರೆ ಸಾಕು ಅಯ್ಯಯ್ಯೋ ಎನಿಸುತ್ತದೆ. ಅಂತಾದ್ದರಲ್ಲಿ ಅಂಗವೈಕಲ್ಯವಿದ್ದುಕೊಂಡು ಪ್ರಥಮ ರ್‍ಯಾಂಕಿನೊಂದಿಗೆ ಪಾಸಾಗುವುದಿದೆಯಲ್ಲ, ಖಂಡಿತವಾಗಿಯೂ ಅದು ಸಣ್ಣ ಮಾತಲ್ಲ. ಇರಾ ಅಂತಹಾ ಸಾಧನೆಯನ್ನು ಮಾಡಿದ್ದಾರೆ.
ಈಗಲೇ ಹೇಳಿದಂತೆ ಯುಪಿಎಸ್ಸಿ ಪರೀಕ್ಷೆ ಕಬ್ಬಿಣದ ಕಡಲೆಯಿದ್ದಂತೆ. ಅದನ್ನು ಪಾಸಾಗಬೇಕೆಂದರೆ ಅಕ್ಷರಶಃ ತಪಸ್ಸನ್ನೇ ಆಚರಿಸಬೇಕು. ಬೆಳಗ್ಗಿನ ಪೇಪರಿನಿಂದ ಹಿಡಿದು ಸಂವಿಧಾನ, ರಾಜಕೀಯ, ಕಾನೂನು, ಐಪಿಸಿ ಸೆಕ್ಷನ್ ಇತ್ಯಾದಿ ಹಲವಾರು ವಿಷಯಗಳ ಮೂಲೆ ಮೂಲೆಯನ್ನೂ ಬಿಡದೆ ಅಧ್ಯಯನ ಮಾಡಬೇಕು. ದಿನಕ್ಕೆ ಕಮ್ಮಿಯೆಂದರೂ ಹನ್ನೆರಡು ಘಂಟೆ ಓದಬೇಕು. ಪ್ರತಿಷ್ಠಿತ ತರಬೇತಿ ಸಂಸ್ಥೆಗೆ ಸೇರಿ ಕೋಚಿಂಗ್ ಪಡೆಯಬೇಕು. ಊಟ, ನಿದ್ದೆ, ಮನೆ ,ಮಠ ಎಲ್ಲವನ್ನು ಬಿಟ್ಟು ಪರಮಯೋಗಿಯಂತೆ ಓದಬೇಕು. ವರ್ಷಕ್ಕೊಮ್ಮೆ ನಡೆಯುವ ಈ ಪರೀಕ್ಷೆಗಾಗಿ ವರ್ಷಾನುಗಟ್ಟಲೆ ಸಿಧ್ಧತೆ ಮಾಡಿಕೊಳ್ಳಬೇಕು. ಇದಕ್ಕಾಗಿ ಕೆಲವರು ಮನೆ ಬಿಟ್ಟು, ಕೈತುಂಬ ಸಂಬಳವಿದ್ದ ಕೆಲಸವನ್ನೂ ಬಿಟ್ಟೂ, ಸಾಲ ಮಾಡಿ ತರಬೇತಿ ಸಂಸ್ಥೆಗಳಿಗೆ ಸೇರುತ್ತಾರೆ. ಐಎಸ್ ಅಧಿಕಾರಿಯಾಗಬೇಕೆಂಬ ಕನಸಿನ ಸಾಕಾರಕ್ಕಾಗಿ ಸರ್ವಸಂಗ ಪರಿತ್ಯಾಗಿಯಾಗುತ್ತಾರೆ. ಅಷ್ಟಾಗಿಯೂ ಪರೀಕ್ಷೆ ಪಾಸು ಮಾಡಲಾಗಲಿಲ್ಲ ಎಂದರೆ ಮೇಲೆ ಮಾಡಿದ್ದೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಇದನ್ನು ಗಮನಿಸುವಾಗ ಇರಾ ಮಾಡಿದ ಸಾಧನೆ ಎಂತಾದ್ದು ಎಂಬುದು ನಮ್ಮ ಅರಿವಿಗೆ ಬರುತ್ತದೆ.
ಹ್ಹ.. ಇವತ್ತು ಪ್ರಥಮ ರ್‍ಯಾಂಕ್ ಪಡೆದುಕೊಂಡಿರುವ ಇರಾ ಕೂಡಾ ಮೊದಲ ಪ್ರಯತ್ನದಲ್ಲೇ ತನ್ನ ಐಎಸ್ ಗುರಿಯನ್ನು ತಲುಪಿದವಳಲ್ಲ. ಯುಪಿಎಸ್ಸಿ ಪರೀಕ್ಷೆ ಬರೆಯುವ ಎಲ್ಲರಿಗೂ ತಾನು ಈ ಭಾರಿ ಟಾಪರ್ ಆಗಬೇಕು, ಐಎಸ್ ಅಧಿಕಾರಿಯಾಗಿ ಜನಸೇವೆ ಮಾಡಬೇಕು, ಹೆತ್ತವರು ಹೆಮ್ಮೆ ಪಡುವಂತೆ ಮಾಡಬೇಕು ಎನ್ನುವ ಆಸೆಯಿರುತ್ತದೆ. ಇರಾಗೂ ಅಂತದೇ ಅಸೆಯೇನೋ ಇತ್ತು ನಿಜ. ಆದರೆ 2010ರಲ್ಲಿ ಮೊದಲ ಭಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಇರಾ ಅಲ್ಲಿ ಪಾಸಾದರೂ ಸಹ ನಿರೀಕ್ಷಿತ ರ್‍ಯಾಂಕ್ ಬರದ ಕಾರಣ ಐಎಸ್ ಹಂತಕ್ಕೆ ಬರಲು ವಿಫಲಳಾಗುತ್ತಾಳೆ. ಆದರೂ ಆಕೆಗೆ Indian Revenue Service ನಲ್ಲಿ ಕೆಲಸಕ್ಕೆ ಅರ್ಹತೆಯಿದ್ದರೂ ಅಂಗವೈಕಲ್ಯವಿದೆಯೆಂಬ ಕಾರಣಕ್ಕೆ ಆಗಿನ ಕೇಂದ್ರ ಸರ್ಕಾರ ಆಕೆಗೆ ಪೋಸ್ಟಿಂಗ್ ನೀಡಲು ನಿರಾಕರಿಸುತ್ತದೆ. ತೋಳುಗಳ ಚಲನೆ ಸಾಧ್ಯವಿಲ್ಲದಿದ್ದ ಕಾರಣ ಕಸಗುಡಿಸಲೂ ನಾಲಾಯಕ್ಕು ನೀನು ಎಂಬ ನಿಲುವು ತಾಳಿತ್ತು ಆವತ್ತಿನ ಸಿಬ್ಬಂಧಿ ಮತ್ತು ತರಭೇತಿ ಇಲಾಖೆ. ಇದು ಇರಾಗೆ ಶಾಕ್ ಎನಿಸಿತಾದರೂ ಆಕೆ ಇದರಿಂದ ಕುಗ್ಗಿ ಹೋಗಲಿಲ್ಲ. ಧೃತಿಗೆಡಲಿಲ್ಲ. ಸ್ಕೋಲಿಯೋಸಿಸ್ ಎನ್ನುವುದು State of mind, ಅದರಿಂದ ನನ್ನ ಕನಸುಗಳ ಸಾಕಾರಕ್ಕೇನೂ ಅಡ್ಡಿ ಬರಲ್ಲ ಎನ್ನುತ್ತಿದ್ದ ಇರಾ ಕೇಂದ್ರ ಸರ್ಕಾರದೊಂದಿಗೆ ಕಾನೂನು ಹೋರಾಟಕ್ಕಿಳಿಯುತ್ತಾಳೆ. ಆಕೆಯ ಛಲ ನೋಡಿ! ಕಡೆಗೂ ಮೂರು ವರ್ಷಗಳ ಹೋರಾಟದ ಫಲವಾಗಿ 2014ರಲ್ಲಿ ಇರಾ ಪೋಸ್ಟಿಂಗ್ ಪಡೆಯುತ್ತಾಳೆ.
ಪೋಸ್ಟಿಂಗ್ ಪಡೆದ ಬಳಿಕ Customs and Excise ಇಲಾಖೆಯಲ್ಲಿ ಸಹಾಯಕ ಕಮೀಷನರ್ ಹುದ್ದೆಯನ್ನು ಪಡೆದರೂ ಸಹ ಇರಾಗೆ ಬಯಕೆಯಿದ್ದಿದ್ದು ಜನಸೇವೆ ಮಾಡಬೇಕೆಂದು. ಆಕೆಯ ದೃಷ್ಟಿಯಿದ್ದಿದ್ದು ಐಎಸ್ ಮೇಲೆ. ಅದು ಆಕೆಯ ಏಕೈಕ ಗುರಿಯಾಗಿತ್ತು. ನೇರವಾಗಿ ಜನಸೇವೆ ಮಾಡಬೇಕೆಂದರೆ ಅದು ಐಎಸ್ ಅಧಿಕಾರಿಯಾದರೆ ಮಾತ್ರ ಸಾಧ್ಯ ಎಂಬ ಅರಿವಿದ್ದ ಆಕೆ ಮತ್ತೆ ಪ್ರಯತ್ನ ಮುಂದುವರಿಸಿದಳು.ಎಷ್ಟು ಪರಿಶ್ರಮ ತೆಗೆದುಕೊಂಡಾದರೂ ಸೈ, ಈ ಭಾರಿ ಐಎಸ್ ಹಂತಕ್ಕೇರಲೇಬೇಕು ಎಂದು ಓದತೊಡಗಿದಳು. ಮತ್ತೀಗ ಕಸ ಗುಡಿಸಲೂ ನಾಲಾಯಕ್ಕು ಎನಿಸಿಕೊಂಡಿದ್ದವಳು ದೇಶದಲ್ಲಿಯೇ ಮೊದಲ ರ್ಯಾಂಕ್ ಪಡೆದುಕೊಂಡು ಮನಸ್ಸಿದ್ದರೆ ಮಾರ್ಗವಿದೆ ಎನ್ನುವುದನ್ನು ಸಾಧಿಸಿ ತೋರಿಸಿದ್ದಾಳೆ. ವಿಕಲ ಚೇತನರಾಗಿದ್ದುಕೊಂಡು ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆದ ದೇಶದ ಮೊದಲ ಅಭ್ಯರ್ಥಿಯೂ ಇರಾ ಆಗಿದ್ದಾಳೆ. ಮಹಿಳೆಯರನ್ನು ಅದರಲ್ಲೂ ಅಂಗವಿಕಲರನ್ನು ಇತರರು ನೋಡುವ ದೃಷ್ಟಿಕೋನವನ್ನು ಬದಲಾಯಿಸಬೇಕು, ಅಂಗವಿಕಲರಿಗೆ ಏನಾದರೂ ಸಹಾಯ ಮಾಡಬೇಕೆಂಬ ಮಹದಾಸೆ ಹೊಂದಿದ್ದ ಇರಾ ಸಿಂಘಾಲ್ ಕೇಂದ್ರ ವಿಕಲ ಚೇತನರ ಕಲ್ಯಾಣ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾಳೆ.
ಜೀವನದಲ್ಲಿ ಕಷ್ಟ ಎನ್ನುವುದು ಇದ್ದಿದ್ದೇ. ಕಷ್ಟವಿಲ್ಲದಿದ್ದರೆ ಅದನ್ನು ಜೀವನ ಎನ್ನಲಾಗುತ್ತದೆಯೇ? ನನ್ನಲ್ಲಿ ಹಣವಿಲ್ಲ, ಕಾರಿಲ್ಲ, ಮನೆಯಿಲ್ಲ, ಕಣ್ಣಿಲ್ಲ, ಕೈಯಿಲ್ಲ, ಕಾಲಿಲ್ಲ ಎಂದು ಕೊರಗಿಯೇ ಅರ್ಧ ಜೀವನ ಸವೆಸುವ ಹಲವರಿಗೆ, ಪರೀಕ್ಷೆಯಲ್ಲಿ ಫೇಲಾದೆನೆಂಬ ಕಾರಣಕ್ಕೆ ಸಾಯುವ ಆಲೋಚನೆ ಮಾಡುವವರಿಗೆ ಇರಾ ಸಿಂಘಾಲ್ ಸಾಧನೆಯೇ ಸ್ಪೂರ್ತಿ. ಮನಸ್ಸು, ಛಲ ಮತ್ತು ಅದಕ್ಕೆ ತಕ್ಕ ಪರಿಶ್ರಮವಿದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎನ್ನುವುದಕ್ಕೆ ಇರಾ ಸಾಧನೆಯೇ ಸಾಕ್ಷಿ. ತನ್ನ ದೈಹಿಕ ನ್ಯೂನತೆಗಳನ್ನೆಲ್ಲಾ ಮೀರಿ ನಿಂತು ಪ್ರಥಮ ರ್‍ಯಾಂಕ್ ಪಡೆದ ಇರಾಗೆ ಈ ಭಾರಿಯಾದರೂ ಒಳ್ಳೆಯ ಕಡೆ ಪೋಸ್ಟಿಂಗ್ ಸಿಗಲಿ. ಜನಸೇವೆ ಮಾಡುವ ಆಕೆಯ ಕನಸು ನನಸಾಗಲಿ ಎನ್ನುವುದು ನನ್ನ ಆಶಯ.
ಇರಾ ಸಿಂಘಾಲ್ ಗೆ ಅಭಿನಂದನೆಗಳು.
ಅನಷ್ಕು
Facebook ಕಾಮೆಂಟ್ಸ್