“ದಣಿ ದರ್ಮ ಕೊಡ್ರಿ ದಣಿ ಮುಂದೆ ಇನ್ನ ಐತೆ ಆಟ ದರ್ಮ ಕೊಡ್ರಿ ದಣಿ. ಕಾಟ್ರಾಜ್ ತಾಗ ಯಾ ಆವು ಬಾಲ ಬಿಚ್ಚಾಕಿಲ್ಲಾ ದಣಿ. ದರ್ಮ ಕೊಡ್ರಿ ದಣಿ ಹಾಲ್ಕುಡುಸ್ಬೇಕು. ದರ್ಮ ಹಾಕಿ ದಣಿ” ಎಂದು ತುಟಿ ಅಂಚಿನಲ್ಲಿ ಅಮಾಯಕ ನಗುವನ್ನು ಸಿಂಗರಿಸಿ ಧರ್ಮ ಕೇಳುತ್ತಿದ್ದ. ತನ್ನ ಕೈ ತುಂಬಿದ ಚಿಲ್ಲರೆಯನ್ನು ಹೆಂಡತಿಯ ಮುಂದೆ ಸುರಿದ. ತನ್ನ ಸೆರಗಿನಿಂದ ಕೂಸನ್ನು ಮುಚ್ಚಿ ಹಾಲುಣಿಸುತ್ತಿದ್ದ ರೂಪಾಳಿ ಚಿಲ್ಲರೆಯನ್ನು ಚೀಲಕ್ಕೆ ತುಂಬಲು ಮುಂದಾದಳು.
ಬಂಗಾಳಿ ಒ೦ದೇ ಗಾಲಿಯ ಸೈಕಲ್ ತುಳಿಯುತ್ತಾ, ಸುತ್ತು ಸುತ್ತುತ್ತಾ ಪುಟ್ಟಿ ಹಿಡಿದು ಧರ್ಮ ಕೇಳಿ, ತನ್ನ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಮಧ್ಯದಲ್ಲಿ ಕುಳಿತ.
ಏ ಬಂಗಾಳಿ.
ಓಯ್.
ಈ ಧಣೇರ್ ಕೈನಾಗ ಏನೈತೆ?
ಕಲ್ಲಂಗ್ರಣೈತೆ. (ಜನರು ಚಪ್ಪಾಳೆ ತಟ್ಟುವಂತೆ ಆದೇಶಿಸಿದ)
ಈ ದಣೇರ್ ಕೈನಾಗೇನೈತೆ?
ಏನಿಲ್ಲಾ.
ಏ ಬಂಗಾಳಿ
ಓಯ್.
ಇದೇನು?
ಅಸುರು ಟುವಾಲ್.
ಇದೇನು?
ಕೈ.
ಇದೇನು?
ಲುಂಗಿ.
ಅದ್ರಾಗೇನೈತೆ?
ಕಾಣುವಲ್ತು.
ದಣಿ ಕಾಣವಲ್ತಂತೆ ಸ್ವಲ್ಪ ತೋರ್ಸು ದಣಿ.
ಜನರ ನಗು ಕಡಿಮೆಯಾಗುತ್ತಿದ್ದಂತೆ
ಕಾರ್ಡಿನ ಜಾದೂ, ಹಗ್ಗದ ಜಾದೂ, ಚೆಂಡಿನ ಜಾದೂ, ತೆಂಗಿನಕಾಯಿಯ ಜಾದು ಒಂದರ ಮೇಲೊಂದು ಪ್ರದರ್ಶನವಾದವು.
“ದಣಿ ಈ ವಾರ ಆಟ ನೋಡೀರಿ. ಏನು ಮಿಸ್ಟೇಕಿಲ್ದಂಗೆ ಆಟ ತೋರ್ಸೀನಿ. ಮುಂದಿನ ವಾರ ಇನ್ನಾ ಹೊಸ ಆಟ ತೋರ್ಸತೀನ್ರೀ”ಅನ್ನುತ್ತಾ, ಇದ್ಯಾವುದರ ಪರಿವಿಲ್ಲದೇ ಹಾಲುಗೆನ್ನೆಗೆ ಹಚ್ಚಿದ ಕಾಡಿಗೆಯ ಕಪ್ಪುಚುಕ್ಕೆಯ ಹಿಂದೆ ನಗುವಿನ ಬಿಳುಪನ್ನು ಮರೆಮಾಚಿಕೊಂಡು ಮಣ್ಣಿನಲ್ಲಿ ಮಗ್ನವಾಗಿ ಆಡುತ್ತಿದ್ದ ಕೂಸನ್ನು ಎತ್ತಿ “ದಣೀ ಈ ಕೂಸೈತಲಾ ದಣೀ, ಒಂದು ವರುಸದ್ ಕೂಸು ದಣಿ. ಯಾರೋ ಚಟಕ್ಕ ಅಡುದು ನನ್ ಗುಡಿಸಿಲಿ ತಾಗ ಬಿಸಾಕೋಗಿದ್ರು ದಣಿ.ರಾತ್ರಿ ಇದು ಅಳಾದು ಕೇಳಿ ಹುಡಿಕಿ ನಾನೆ ಸಾಕೀನ್ ದಣಿ. ಈ ಕೂಸಿಗೆ ಹಾಲು ಕುಡ್ಸು, ಬಟ್ಟೆ ಕೊಡ್ಸು ಅಂತ ಯಾರಾನ ಮನಸಿದ್ ದಣ್ಯೋರು ದರ್ಮ ಮಾಡಿ ದಣಿ. ದಣ್ಯೋರಿಗೆ ಸಲಾಮ್ ಮಾಡಮ್ಮಾ ಸಲಾಮ್ ಮಾಡು” ಎಂದು ತಾನು ಎರಡೂ ಕೈ ಮುಗಿದು ತೋರಿಸಿದ. ಮಗು ತನ್ನ ಬೊಚ್ಚು ನಗುವಿನೊಂದಿಗೆ ಕಾಟ್ರಾಜನ ಸಲಾಮನ್ನು ಅನುಕರಿಸಿತು. ಮಗುವನ್ನು ಎತ್ತಿಕೊಂಡು ಬುಟ್ಟಿಯನ್ನು ಹಿಡಿದು ಮಗುವಿಗೆ ಸಲಾಮ್ ಮಾಡು ಸಲಾಮ್ ಮಾಡು ಎಂದು ಮಗುವಿನ ಕೈಯಿಂದ ಸಲಾಮ್ ಮಾಡಿಸುತ್ತಾ,ಪ್ರತಿಯೊಬ್ಬರಿಂದಲೂ ಧರ್ಮ ಕೇಳುತ್ತಾ ಸುತ್ತು ಹಾಕಿದ. ಜನರು ಕರಗಿದಂತೆ ಧರ್ಮ ಕೇಳುವುದು ನಿಲ್ಲಿಸಿ ವೃತ್ತದ ಮೂಲೆಯಲ್ಲಿ ಎಲ್ಲವನ್ನೂ ಕಟ್ಟುತ್ತಿದ್ದ ಹೆಂಡತಿಗೆ ಸಹಾಯ ಮಾಡಿದ.
ಆ ತೆ೦ಗಿನ ಕಾಯಿ, ಹಗ್ಗದ ಜಾದೂವಿನ ರಹಸ್ಯವೇನು? ಆ ಹುಡುಗ ಕಣ್ಣು ಕಟ್ಟಿಕೊಂಡು ಕಾಟ್ರಾಜ್ ಏನುತೋರಿಸಿದರೂ ಅದನ್ನು ಸರಿಯಾಗಿ ಹೇಗೆ ಹೇಳುತ್ತಿದ್ದ? ಆ ಕಾರ್ಡಿನ ಜಾದೂ ಹೇಗೆ ಮಾಡಿದ? ಆ ಚೆಂಡಿನ ಜಾದೂ, ಹಗ್ಗದ ಜಾದೂ ಹಿಂದಿನ ರಹಸ್ಯವೇನು? ಅವನ್ನು ತಿಳಿಯುವ ನನ್ನ ಕುತೂಹಲ ಮುಂದಿನ ವಾರದ ಆಟ ನೋಡಲು ಮುಂಗಡ ಕೊಟ್ಟಿತ್ತು.
ಹುಣ್ಣಿಮೆಯ ಹಿಂದಿನ ದಿನ ಹಳ್ಳಿಹೊರಗಿನ ಸಣ್ಣ ತಪ್ಪಲಲ್ಲಿ ಕಾಟ್ರಾಜ್’ನ ಶೋಧನೆ ನಡೆಯುತ್ತಿತ್ತು. ಕಂಡ ಕಂಡ ಗಿಡ ಮೂಸಿ, ಎಲೆ ಚೂಟಿ, ಬೇರು ಅಗೆದು ಅದೇನೋ ಹುಡುಕುತ್ತಾ ಮಗ್ನನಾಗಿರುತ್ತಿದ್ದ. ಒಂದುವೇಳೆ ಹಾವೇನದರೂ ಕಂಡರೆ ನುಸುಳಲೂ ಬಿಡದೇ ಚೀಲಕ್ಕೆ ತುರುಕಿಕೊಳ್ಳುತ್ತಿದ್ದ. ಅವನು ಏನು ಹುಡುಕುತ್ತಿದ್ದಾನೋ ಅದು ಅವನ ಮತ್ತು ಅವನ ಚೀಲದೊಳಕ್ಕೆ ಬೀಳುತ್ತಿದ್ದವುಗಳ ನಡುವಿನ ರಹಸ್ಯವೇ ಸರಿ. ಒಂದು ವಿಶೇಷ ಬೇರನ್ನು ಕೆಂಪುಡಬ್ಬಿಯೊಳಗೆ ಹಾಕಿ ಮುಚ್ಚಿದರೆ ಅದು ಅಂದಿನ ಹುಡುಕಾಟದ ವಂದನಾರ್ಪಣೆ. ಇವನು ಹಳ್ಳಿಯ ನಾಟಿ ವೈದ್ಯನೂ ಹೌದು. ಚೇಳು ಕುಟುಕಿದರೂ, ಹಾವು ಕಚ್ಚಿದರೂ ಊರಹೊರಗಿನ ಇವನ ಡೇರೆಯೇ ಕ್ಲಿನಿಕ್. ಹೆಂಗಸರ ಕಾಯಿಲೆ, ಗಂಡಸರ ಕಾಯಿಲೆ ಎಲ್ಲವೂ ಮಾಯವಾಗುವುದು ಇವನ ಡೇರೆಯೊಳಗೆ. ಹುಣ್ಣಿಮೆಯ ಹಿಂದಿನ ಸಂಜೆ ಗೌಡರ ಹಿತ್ತಲಲ್ಲಿ ಮುಳುಗಿ ಗುಡಿಯ ಮುಂದೆ ತಲೆತಗ್ಗಿಸಿ ಮುದಿಹಾವಿನಂತೆ ಜೋಲಾಡುತ್ತಾ ತೇಲುತ್ತಿದ್ದ. ಏನಪಾ ಗೌಡ್ರು ದಾವತ್ ಜೋರೈತೆ ಅನ್ನೋ ಗೇಲಿಮಾತಿಗೆ ಲೇ ಬೇರು ಕೊಡಾವರ್ಗೇ ಗೌಡ ಆಮೇಲೆ ನಾನೇ ರಾಜ, ಈ ಊರಿಗೇ ರಾಜ ಎಂದು ತೊದಲಿನುಡಿದು ಗುಡಿಮುಂದೆ ಮುಗ್ಗರಿಸುತ್ತಿದ್ದ. ಗೌಡನ ಪುರುಷತ್ವ ವರ್ಧನೆಗೆ ಕೊಡುತ್ತಿದ್ದ ಬೇರು ಗೌಡನ ಹೊಲದ ಕೆಲಸಕ್ಕೆ ಬರುವ ಹೆಂಗಸರ ಪಾತಿರ್ವತ್ಯದ ಮತ್ತು ಮುಗ್ದ ಹೆಣ್ಣುಮಕ್ಕಳ ಕನ್ಯಾಪೊರೆ ಗೌಡನ ಮಂಚದಲ್ಲಿ ಕಳಚುವಂತೆ ಮಾಡುತ್ತಿತ್ತು.
ಚಾಯ್ ಮಾರುವವನ ಕೂಗು, ರೈಲಿನ ಕಿಟಕಿಗೆ ಆನಿಸಿ ಮಲಗಿದ್ದ ಕಿವಿಗೆ ಸಿಡಿಲಿನಂತೆ ಬಡಿದು ಎಚ್ಚರಗೊಳ್ಳುವಂತೆ ಮಾಡಿತು. ಪ್ಲಾಟ್’ಫಾರ೦ ಲೈಟಿನ ಬೆಳಕು ಮನಸ್ಸನ್ನು ಕಾಟ್ರಾಜನ ಅಮಲಿನಿಂದ ವಾಸ್ತವಕ್ಕೆ ಜಗ್ಗಿತು. ಎಲ್ಲ ಜನರಿಗೆ ಮೋಡಿ ಮಾಡಿ ಚಿಲ್ಲರೆ ಕಸಿಯುತ್ತಿದ್ದ ಕಿಲಾಡಿ ಇಂದು ಇಲ್ಲಿ ಹೀಗೇಕಿದ್ದಾನೆ? ಎಂಬುದು ಪ್ರಶ್ನೆಯಾಗಿಯೇ ಉಳಿಯುವುದು ಇಷ್ಟವಿರಲಿಲ್ಲ.ಅವನ ಆಟ ಸುತ್ತ ಹತ್ತಳ್ಳಿಯ ಸಂತೆಯ ವಿಶೇಷವಾಗಿರುತ್ತಿತ್ತು. ಎಲ್ಲರನ್ನೂ ಮನರಂಜಿಸುವ ಇವನು ಇಂದು ಮನನೊಂದವನಂತೆ ಕೂತಿದ್ದಾನೆ ಇದರ ಹಿಂದಿನ ಕಥೆ ಏನು? ಇದನ್ನು ತಿಳಿಯುವುದೊಂದೇ ಆಶಯವಾಗಿತ್ತು. ಹಸಿದಹೊಟ್ಟೆ ಕಾಟ್ರಾಜನ್ನು ಮಾತನಾಡಿಸಲು ಮತ್ತೊಂದು ಅವಕಾಶ ಮಾಡಿಕೊಟ್ಟಿತು. ಅವನಿಗೆ ಊಟ ಕೊಡಿಸಿದೆ. ತನ್ನ ಸಣ್ಣ ಗಂಟಲಲ್ಲಿ ಹಿಡಿಯದ ದೊಡ್ಡ ದೊಡ್ಡ ತುತ್ತುಗಳನ್ನು ಪ್ರಯಾಸದಿಂದ ನುಂಗುತ್ತಾ ಊಟ ಮುಗಿಸಿದ. ಅವನ ಮುಖವೂ ಹಸಿದಿತ್ತು ಎಂಬುದಕ್ಕೆ ಆಕಾಶದ ಚಿಕ್ಕಿಗಳಂತೆ ಗಡ್ಡ-ಮೀಸೆಗೆ ಹತ್ತಿದ ಅಗಳುಗಳು ಸಾಕ್ಷಿಯಾಗಿದ್ದವು. ಕೈ ಮುಖ ತೊಳೆದುಕೊಂಡ, ನೀರು ನಂತರ ಒಂದು ಟೀ ಕೂಡ ಆಯ್ತು ಎಲ್ಲ ಮುಗಿದಮೇಲೆ ಮತ್ತದೇಮೂಲೆಯನ್ನು ದಿಟ್ಟಿಸುತ್ತಾ ಕುಳಿತ. ಇವನಿಗೆ ಹುಚ್ಚು ಹಿಡಿದಿದೆ ಎಂದು ದೃಢವಾಯಿತು. ಕಣ್ಣು ಮುಚ್ಚಿ ದೀರ್ಘಶ್ವಾಸ ತೆಗೆದುಕೊಂಡು ಕಣ್ಣು ಬಿಡುವಷ್ಟರಲ್ಲಿ, ಕಾಟ್ರಾಜ ನೀರುತುಂಬಿದ ಕಣ್ಣಿನಿಂದ ನನ್ನ ಕಾಲು ಮುಟ್ಟಿ
“ಸಾಮೀ ಎಲ್ಲಾ ಓತು ಸಾಮೀ, ಎಲ್ಲಾ ಓತು, ಎಲ್ಲಾ ನಾಸನೆದ್ದೋತು ಸಾಮೀ, ಎಲ್ಲಾ ಓತು”
ಎಂದು ಕಣ್ಣೀರು ತೆಗೆದ.
ಸಮಾಧಾನ ಮಾಡಲು ಮುಂದಾದೆ, ಆದರೆ ಮಾರ್ಗ ತಿಳಿಯದೇ “ಇರ್ಲಿ ಬಿಡು ಸುಮ್ನಾಗು, ಹೌದು ನನ್ನ ಗುರ್ತು ಸಿಕ್ತಾ?” ಎಂದು ಅವನ ಅಳಲು ನಿಲ್ಲಿಸಲು ಆಶ್ಚರ್ಯದ ಪ್ರಶ್ನೆ ಎಸೆದೆ.
“ಸಾಮೀ ನೀವು ನನಗೆ ಅವತ್ತು ನಾನು ಬೇಸಿದ್ದಾಗ ಊಟ ಕೊಟ್ರಿ, ಇವತ್ತು ಹಿಂಗಿದ್ದಾಗೂ ಊಟ ಕೊಟ್ರಿ ನಿಮ್ಮನ್ನ ಮರೇಕಾಗ್ತದಾ ಸಾಮಿ.” ಅಂದ
“ಅದು ಸರಿ ಏನಿಲ್ಲೀ? ಏನಿದು ಹೊಸ ಅವತಾರ, ಈ ರೈಲಿನಲ್ಲಿ ಯಾವ್ ಹಾವ್ ಹುಡುಕ್ಕೊಂಡು ಬಂದೆ”.ಎನ್ನುತ್ತಿದ್ದಂತೆ
ಮೂಲೆ ನೋಡುತ್ತಾ ವಿಪರೀತ ಭಯಭೀತನಾದವನಂತೆ ಕೈಗಳನ್ನು ಅಲುಗಾಡಿಸುತ್ತಾ,
“ಸಾಮೀ ಹಾವು ಅಂತ ಅನ್ಬೇಡ್ರಿಸಾಮೀ, ಹಾವಿನ್ಸುದ್ದೀನೇ ತೆಗೀಬ್ಯಾಡ್ರಿ ಸಾಮಿ, ಭಯ ಆಗ್ತೈತೆ.” ಎಂದ
ಊಟ ಹೊಟ್ಟೆಯಲ್ಲಿ ಇಳಿಯುತ್ತಿದ್ದಂತೆ ಅಲ್ಲಿದ್ದ ದುಃಖದ ಕಥೆಗಳೆಲ್ಲಾ ಎಳೆಎಳೆಯಾಗಿ ಹೊರಬಿದ್ದವು. “ಯಾಕೆ ಅವತ್ತೂ ನಮ್ಮನೇಲಿ ಬಂದಿದ್ ದೊಡ್ಡ ಹಾವನ್ನ ಹಂಗೆ ಪುಂಗಿ ಊದಿ, ಹೊರಗೆಳ್ದು, ಚೀಲಕ್ಕಾಕ್ಕೊಂಡು ಹೋದೆ.” “ಇಲ್ಲಾ ಸಾಮೀ ಅನ್ನಕೊಟ್ಟು ದಣಿ ನೀವು ಸುಳ್ಯಾಕೆ ಬೊಗುಳ್ಲಿ.ಹಾಳು ವಟ್ಟೇಪಾಡಿನಾಸಿಗೆ ನಾನೇ ಅವಾಗವಾಗ ಬಂಗಾಳಿ ರಾತ್ರಿ ಭಿಕ್ಷೆಗೋದಾಗ ಕೊಟ್ಟು ಬುಡುಸ್ತದ್ದೇ ಸಾಮಿ.” ಅಂದ
ಅವನ ಪಕ್ಕದಲ್ಲೇ ಕೂತು ಸರಿ ಬಿಡು, ಏನಾಯ್ತು ಎಲ್ಲಾ ಚನಾಗಿತ್ತಲ್ವಾ? ಯಾಕೆ ಹಿಂಗಾಯ್ತು ಎಂದು ಎಲ್ಲಾ ಕೇಳಲು ಮುಂದಾದೆ.
“ಎಲ್ಲಾ ಬೇಸಿತ್ತು ಸಾಮಿ, ವಾದ್ ನಾಗರಮಾಸ್ಯಾಗೆ ಸಂತ್ಯಾಗ ತೋರ್ಸಾಕಾ ಹೊಸ ಹಾವು ಹಿಡಿಕಂಡು ಮನಿಗೋದೆ ಸಾಮಿ. ಯೆಂಡ್ರು ಎದೆನೋವು ಅಂತ ಅಳ್ತಿದ್ಲು ಸಾಮಿ, ಆಮ್ಯಾಗ ಬಂದು ಹಲ್ಲುಕಿತ್ತಿದ್ರೆ ಆಯ್ತಂಕಂಡು ಚೀಲದಾಗ ಮುಚ್ಚಿಕ್ಕಿ ಆಸ್ಪತ್ರೆಗೆ ವೋದೆ ಸಾಮಿ. ಡಾಕ್ರು ನಂ ರೂಪಾಳಿ ಎದೆ ಸರಿಗಿಲ್ಲ ಅಂದ್ರು ಸಾಮಿ. ಅದೇನಾ ಎಕ್ಸರಾ ಅಂತಾ ಏನೇನೋ ಅಂದ್ರು ಸಾಮಿ, ರೊಕ್ಕಗುಡಾ ಜಗ್ಗಿ ಕರ್ಚಾಗ್ತತೆ ಅಂದ್ರು ಸಾಮಿ. ಬಂಡೆ ಒಡಿತಿದ್ದೆ ಸಾಮಿ ಆ ಎದೆ ಮ್ಯಾಲೆ. ಬಂಡೆಗಿಂತ ಗಟ್ಟಿ ಎದೆನ ಡಾಕ್ರು ಸರಿ ಇಲ್ಲಾ ಅಂದ್ರು ಸಾಮಿ. ಗುಳಿಗೆ ಬರಿಸ್ಕೆಂಡು ರೊಕ್ಕಕ್ಕ ಆ ಸುಡುಗಾಡು ಗೌಡ್ರ ಮನಿಗೋದೆ ಸಾಮಿ. ಆ ಬೋಸುಡಿ ಮಗ ಮುದಿ ಗೌಡಗ ಆಕಡೆ ಹುಣ್ಣಿಮಿಗೆ ಕೊಟ್ಟು ಬೇರು ನನ್ ಯಂಡ್ರಕಡೆ ಕೆಟ್ಟಕಣ್ಣಾಗ ನೋಡಂಗ ಮಾಡ್ತು ಸಾಮಿ. ಗೌಡನ್ ಮಂಚ್ದಾಗ ಮಕ್ಕಂಡ್ ಯಾವ್ ಹೆಂಗ್ಸಿನ್ ಶಾಪ ಅನ್ಕಂಡು ಸೀದಾ ಮನೆಗೆ ಬಂದು ನೋಡಿದೆ, ಆ ಹೆಣ್ಣು ಕೂಸಿಗೆ ಮನ್ಯಾಗ ಆಡಾಕ ಹಾವೇ ಸಾಮಾನು ಸಾಮಿ. ಆ ಯಾವು ಯಾವತ್ಲಿಂದ ಸೇಡಿಟ್ಕಂಡಿತ್ತೋ ಏನೋ ನನ್ ಬಂಗಾಳಿನಾ ಲಚ್ಚಿನಾ ಕಡ್ದು ಯಾದೋ ಗುಡ್ಡುದ್ ಕೊಲ್ಲಿಂದೆ ಬಚ್ಚಿಂಕಂಡಿತ್ತು ಸಾಮಿ. ರೂಪಾಳಿಗೆ ಹೆಣ್ಣು ಬೇಕು ಅಂತಾ ಬಾಳಾ ಆಸೆ ಇತ್ತು ಸಾಮಿ. ಸಿಕ್ಕಿದ್ ಕೂಸು ಅಂದಂಗೆ ಹತ್ ವರ್ಷ ಸ್ವಂತ ಕೂಸ್ನಂಗೆ ಬೆಳ್ಸಿದ್ವಿ ಸಾಮಿ. ಬಾಯಾಕ ಬುರುಗು ತುಂಬಿಕೆಂಡು ಸಾಯ್ತತೆ ಅಂತ ಹಣೆನಾಗ ಬರ್ದಿತ್ತೋ ಏನೋ ಎಲ್ಲಾ ನಾಸನೆದ್ದೋತು ಸಾಮಿ. ಅಲ್ಲೇ ಮನ್ಯಾಗ ಸತ್ಬಿದ್ ಮಕ್ಕಳ್ನೋಡಿ ಕೆಳಗ್ ಬಿದ್ ರೂಪಾಳಿ ಏನೇಳಿದ್ರು ಎದ್ದೇಳಿಲ್ಲಾ ಸಾಮಿ. ಗುಂಡಿಗೆ ನಿಂತೋಗಿತ್ತು ಸಾಮಿ. ನಂತಾಕ ಒಂದಿಸಾಗುಡ ಒಂದು ರುಪಾಯಿ ಕೇಳಿದ್ದಿಲ್ಲಾ ಸಾಮಿ. ರೊಕ್ಕಾ ಬೇಕಿತ್ತಂದ್ರೆ ಅವೃಪ್ಪ ಕೊಟ್ಟಿದ್ ಹೆಬ್ಬಾವಿಟ್ಕಂಡು ಓಣಿ ಸುತ್ತಿ ಎಲ್ಲಾ ತರ್ತಿದ್ಲು ಸಾಮಿ. ಎಲ್ಲಾ ಆಳಾಗೋಯ್ತು ಸಾಮಿ ಎಲ್ಲಾ ನಾಸನೆದ್ದೋಯ್ತು. ರೂಪಾಳಿನ, ಮಕ್ಳುನ ಮಣ್ಣುಮಾಡಿ ಮನಿಗ್ಬಂದು ಎಲ್ಲಾ ಆವುಗುಳ್ನ ನಾನೇ ಸುತ್ತಿಗೆ ತಗಾಂಡು ಬಡುದು ಸಾಯ್ಸಿಬುಟ್ಟೆ ಸಾಮಿ. ಎಲ್ಲಾರು ನನ್ನ ಉಚ್ಚ ಉಚ್ಚ ಅಂದ್ರ. ಮರುದಿನ ಸೆಂತ್ಯಾಗ ಕಾಯಿಗಡ್ಡೆ ಮಾರಾನ ಅಂತ ಗೋಣಿಚೀಲ್ದಾಗ ಕಾಯಿಗಡ್ಡೆ ಅಕ್ಕೆಂಡು ಹಾವಾಟ ಆಡ್ತಿತ್ ಜಾಗಕ್ಕೋದ್ರೆ, ಅಲ್ಲಿ ಗೌಡುನ್ ವಸಾ ಮಂಡಾಳಂಗ್ಡಿ ಎದ್ದಿತ್ತು ಸಾಮಿ. ಎಲ್ಲಾ ಬುಟ್ಟು ಈ ರೈಲ್ನಾಗ ಸಯಾದು ಕಾಯ್ತದಿನಿ ಸಾಮಿ.” ಎಂದ
ಅವನ ಅಳು ಎಂತಹ ಕಣ್ಣೀರಿನ ವೃರಿಗೂಕರಳನ್ನು ಕಲುಕಿ ವೃತ ಮುರಿಸುವಂತ್ತಿತ್ತು. ಆ ನಡಗುವ ಧ್ವನಿ, ಅವನ ರೋದನೆ ಕಂಡವರಿಗೇ ಹುಚ್ಚು ಹಿಡಿಯುವಂತಿತ್ತ್ತು. ಹುಚ್ಚನಾಗುವುದು ಸುಲಭ ಆದರೆ ಈ ಎಲ್ಲಾನೋವನ್ನು ನುಂಗಿಕೊಂಡು ಹುಚ್ಚನಂತೆ ನಟಿಸುವುದು ನರಕ ಸದೃಶವಾದ ಯಾತನೆ. ಇವನು ಕಂಡೊಡನೆ ಇವನ ಜಾದೂ ಗುಟ್ಟನ್ನು ತಿಳಿಯಲು ಮುಂದಾಗಿದ್ದೆ. ಆದರೆ ಆ ಜಾದೂವಿನ ಹಿಂದಿದ್ದ ಗರಡಿಯನ್ನು ನನ್ನ ಕಣ್ಣಮುಂದೆ ಬಿಚ್ಚಿಟ್ಟಮೇಲೆ ಮೂಕನಾದೆ. ಅವನು ಎಲ್ಲೆಲ್ಲೋ ಹುಚ್ಚನಂತೆ ಅಡ್ಡಾಡಿ, ದಿಕ್ಕಿಲ್ಲದ ಪರದೇಸಿಯಂತಾಗಿದ್ದಾನೆ. ಸುಮಾರು ತಿಂಗಳುಗಳಿಂದ ಇದೇ ರೈಲಿನಲ್ಲಿ ವಾಸವಾಗಿದ್ದಾನೆ. ಭಿಕ್ಷೆ ಬೇಡಿ ಹಸಿವನ್ನು ಕೊಂದು ಜೀವನ ನಡೆಸುತ್ತಿದ್ದಾನೆ. ನಿದ್ದೆಯನ್ನು ಛಳಿಗೆ ಮಾರಿ ದಿನಗಳನ್ನು ಕಳೆಯುತ್ತಿದ್ದಾನೆ.
ಪ್ರಯಾಣ ಮುಗಿಸಿ ಊರಿಗೆ ಬಂದ ಕೆಲಸವೂ ಮುಗಿಸಿ ಮರು ಪ್ರಯಾಣಕ್ಕೆ ಸಿದ್ದನಾದರೂ ನನ್ನ ಕಿವಿಯಲ್ಲಿ ಅವನಾಡಿದ ಪ್ರತಿ ಮಾತು ಪ್ರತಿಧ್ವನಿಸುತ್ತಿದೆ. ಆ ಕರಾಳ ಬದುಕಿನ ವಿಷದಲ್ಲಿ ಈಜುತ್ತಿದ್ದ ಕಾಟ್ರಾಜ್ ಮುಳುಗುವ ಮುನ್ನ ಅವನಿಗೊಂದು ದಿಕ್ಕು ತೋರಿಸಬೇಕೆಂಬ ಹಂಬಲ ಚಿಗುರಿತು. ಎಲ್ಲಿಯಾದರೂ ಅವನಿಗೆ ಪುನರ್ವಸತಿ ಕಲ್ಪಿಸೋಣವೆಂದು ರೈಲಿನಲ್ಲೆಲ್ಲಾ ಹುಡುಕಿದೆ. ಎಲ್ಲಿಯೂ ಅವನು ಕಾಣಲಿಲ್ಲ. ನಾನು ಹಾವಾಗಬಾರದೇ ವಾಸನೆಯಿಂದಲೇ ಅವನ್ನು ಪತ್ತೆಹಚ್ಚುತ್ತಿದ್ದೆ. ಕಾಟ್ರಾಜನ ಹುಡುಕಾಟದಲ್ಲಿ ಅಷ್ಟುದ್ದ ರೈಲು ಒಂದು ದೊಡ್ಡ ಹಾವಿನಂತೆ ಊರ ಕಡೆಗೆ ತೆವಳಲು ಸಿದ್ಧವಾಗಿತ್ತು. ನಿರಾಶೆ ಮನಸ್ಸನ್ನು ಹೊಕ್ಕುತ್ತಿದ್ದಂತೆ ಒಬ್ಬ ಭಿಕ್ಷುಕ ಭಿಕ್ಷೆ ಕೇಳಿದ, ಕೊಟ್ಟು ಅವನ್ನನು ಹಿಂಬಾಲಿಸಿದೆ ಅವನೂ ಹುಚ್ಚನಂತೆ ನಟಿಸಿದ, ಹಿಂಬಾಲಿಸುವುದು ಕಂಡು ನಟನೆ ಜೋರುಮಾಡಿ ಒಂದು ಕಡೆ ನಿಂತಮೇಲೆ ಅವನ ಹುಚ್ಚಿಗೆ ಊಟದ ಓಷಧಿ ಕೊಟ್ಟು ಕಾಟ್ರಾಜನ ಬಗ್ಗೆ ವಿಚಾರಿಸಿದೆ.
ನಾನು ಕನಸಿನಲ್ಲಿಯೂ ಬಯಸದ ಉತ್ತರವನ್ನು ಕೊಟ್ಟ. “ಸಾರ್ ನಿನ್ನೆ ಬೆಳಿಗ್ಗೆ ಪಕ್ಕದ ಪ್ಲಾಟ್ಫಾರಂ ಮೇಲೆ ಮಲ್ಕಂಡೋನ್ ಮಲ್ಕಂಡಂಗೇ ಹೋಗಿದ್ದ. ಮುನಿಸಿಪಾಲ್ಟಿಯೋರು ಹೆಣ ಹಾಕ್ಕೊಂಡು ಹೋದ್ರು” ಅಂದು ಮತ್ತೆ ಹುಚ್ಚನ ನಾಟಕ ಮುಂದಿವರಿಸುತ್ತಾ ಮಾಯವಾದ. ಎಂದೋ ತಣ್ಣಗಾಗಿದ್ದ ಕುತೂಹಲ ಕಾಟ್ರಾಜನ ಕಂಡು ಚಿಲುಮೆಯಂತೆ ಜಿಗಿಯಿತು, ಕೇಳುವಷ್ಟರಲ್ಲಿ ಕಾಟ್ರಾಜ್ ತನ್ನ ಬದುಕಿನದೊಡ್ಡ ಜಾದೂ ತೋರಿಸಿದ. ಅವನು ಮಾಡುತ್ತಿದ್ದ ಜಾದೂಗಳ ಬಗ್ಗೆ ಎಷ್ಟು ಕೇಳಿದರೂ, ಎಲ್ಲಿಯೂ ಸುಳಿವು ಸಿಗದಂತೆ “ನಮ್ಮಪ್ಪ ಯಾದೋ ಜಾದೂಲೋಕುಕ್ಕೋಗಿ ಅಲ್ಲಿಂದ ಕಲ್ತಕಂಡು ಬಂದು ನನಿಗೆ ಸೊಲುಪು ಏಳ್ಕೊಟ್ಟರ ನನಿಗೆ ಮಾಡಾಕ ಬರ್ತೈತೆ ಅಷ್ಟೆ” ಎಂದು ಎಷ್ಟೋ ಬಾರಿ ಸಮಾಧಾನ ಮಾಡಿದ್ದ. ನನ್ನ ಕುತೂಲಹ ಸಮಾಧಿಯಾದರೂ ನೀನು ಚಿರಾಯು ಕಾಟ್ರಾಜ್. ನೀನು ಜಗತ್ತಿನ ಅದ್ಭುತ ಜಾದೂಗಾರ. ಜಗತ್ತಿನಿಂದಲೇ ಮರೆಯಾದ ಮಾಂತ್ರಿಕ.
-
Goutham Rati, ಬಳ್ಳಾರಿ
gouthamrati@gmail.com
Facebook ಕಾಮೆಂಟ್ಸ್