X

ಪ್ರಕೃತಿ ಸ್ಪಂದನ

ಹೇರಿ ಹನಿಯ ಮಣಿಯ ಮಾಲೆ
ಸೀರೆ ಹಸುರ ಸೆರಗು ಭಾರ
ಸೂರೆಗೈವ ತೆನೆಯ ತೊನೆತ ನದಿಯ ಹಾಡಿಗೆ
ನೇರ ನಕ್ಕ ಸೂರ್ಯಕಾಂತಿ
ಬೀರಿ ನೋಟ ಸೃಷ್ಟಿಯರಳೆ
ಸಾರೆ ಶುಭವ ಬಾನಿನುದಯವಾಯ್ತು ಮೆಲ್ಲಗೆ ||

ಖಾರವಾಗಿ ನೋಟವೆಸಗೆ
ನೀರು ಹೆದರಿ ಮೇಲಕೇರಿ
ಸೇರಿ ಮುಗಿಲ ನಾಡಿನಲ್ಲಿ ಸಂಘ ಕಟ್ಟಿರೆ
ತಾರೆ ವರ್ಷಋತುವಿನಲ್ಲಿ
ಹೇರಿ ಬಂದ ಮುತ್ತ ಮಾಲೆ
ಧಾರೆಯುದುರೆ ಸುಪ್ರಭಾತ ಮರಳಿ ಧರಣಿಗೆ ||

ಕದ್ದು ಬಳಸಿ ತರುವನಪ್ಪಿ
ಹೊದ್ದ ಛಳಿಗೆ ಲತೆಯು ನಾಚಿ
ಸದ್ದು ಹೊರಟ ಮೌನರಾಗ ಸುತ್ತ ಮಾರ್ದನಿ
ಮುದ್ದು ಮರಿಯನಪ್ಪಿ ಮಲಗಿ
ಯೆದ್ದ ಕಾವ ಬಿಟ್ಟು ಗುಟುಕ
ಮೆದ್ದು ತರುವ ಹಕ್ಕಿ ಹಿಂಡ ಬಾನ ಕಲರವ ||

ಬಿಡದೆ ಬಿರಿದು ಬಾಡಿ ಕುಸುಮ
ಹಿಡಿದ ಫಲಗಳೆಲ್ಲವಿಲ್ಲಿ
ತುಡಿತದಾಸೆ ಹದದಿ ನೀಗಿ ನಿತ್ಯ ನೂತನ
ಮಿಡಿದ ಹೃದಯ ತಾಳ ಗತಿಗೆ
ಬಿಡದೆ ಹರಿಸಿ ರಸದ ಕಡಲು
ದಡಕೆ ಬಡಿದ ಮೊರೆತ ಭಾವ ಸಾಮರಸ್ಯವು ||

ದುಡಿವ ನೀತಿ ಕ್ಲಿಷ್ಟವೆನಿಪ
ಕುಡಿದ ಮತ್ತು ನೆತ್ತಿ ಹತ್ತಿ
ನಡಿಗೆ ಮರೆತು ಸುತ್ತಮುತ್ತ ಕೊಂಡಿ ಕಳಚಿರೆ
ಕೆಡಿಸಿ ಹಸಿರ ಹೀರಿಯೊಸರ
ಗಡುವ ದಾಟಿ ಮಹಡಿಯೇಳೆ
ಸಿಡಿದ ಧಾತ್ರಿ ಬರವೊ ನೆರೆಯೊ ಕಾಲ ಲೀಲೆಯೊಳ್ ||

 

ಭೋಗ ಷಟ್ಪದಿ

ಭೋಗ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಭೋಗ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,,,೫ನೆಯ ಸಾಲುಗಳು ಸಮನಾಗಿದ್ದು, ೩ ಮಾತ್ರೆಯ ೪ ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೩ ಮಾತ್ರೆಯ ೬ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು). ಗುರುಬಸವನ ವೃಷಭಗೀತೆಕಾವ್ಯಭೋಗ ಷಟ್ಪದಿಯಲ್ಲಿದೆ.

By Shyala Bhat

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post