ನಿನ್ನ ಉದರದ ವಿಶದ ಸರಸಿಯಲಿ
ಕುಮುದ ಕುಡ್ಮಲವಾಗಿ ನಲಿದಿರುವೆ;
ಅಲರಾಗಿ ಸುಗಂಧ ಬೀರಿ
ಅಲಂಪು ನೀಡುವ ಕನಸ ಹೊತ್ತಿರುವೆ…
ನಿನ್ನ ಬೆಚ್ಚನೆ ಪವಿತ್ರ ಗರ್ಭದೊಳು
ಮುಗ್ಧ ಸ್ವಪ್ನಗಳ ಕಾಣೋ ಎಳೆಗೂಸು ನಾ;
ಮುಂದೆ ಹೆಣ್ಣಾಗಿ, ಬಾಳಿನ ಕಣ್ಣಾಗಿ
ಬಾಳಲಿರುವುದೇ ಧನ್ಯ ಜೀವನ…
ಅಮಲ ಚಿತ್ತದ ರುಚಿರ ಪ್ರೇಂಖದಲಿ
ಅಂಚಿತ ಸುಮಗಳ ಅರಳಿಸುವಾಸೆ;
ವಿಕೃತ ಜಗದ ತೆರೆಯನು ಸರಿಸಿ
ಕಾಂಚನ ದೀಧಿತಿ ಬೀರುವ ಕನಸೇ…
ಅಧ್ವಾನ ಪಥದಲಿ ಸೋತು ಸಾಗುವ
ರಿಕ್ತ ಮನಗಳಿಗೆ ಸಖಿಯು ಆಗುವೆ;
ಅರಿವಿನ ಆಸರೆ ಸತತ ನೀಡುತಾ
ಸ್ಫೂರ್ತಿಯಾಗಿ ರೂಪ ಪಡೆವೆ…
ಸಾವಿರ ಕನಸು ಹೊತ್ತ ಮೊಗ್ಗು ನಾನು
ಅರಳುವ ಮುನ್ನ ಹೊಸಕಿ ಹಾಕದಿರು;
ಹೆಣ್ಣು ಎಂಬ ಏಕ ಹೇತುವಿಂದ
ಕಣ್ದೆರೆವ ಮುನ್ನ ಕತ್ತಲ ದರ್ಶಿಸದಿರು…
ಲೋಕಕೆ ಹೆಣ್ಣು ಅತುಲ ಬಲ್ಮೆ
ನನ್ನನ್ನು ಹೆತ್ತು ಧನ್ಯಳಾಗು;
ಕ್ರೂರ ಜಗದ ಕೋಟಿ ಮೂಢರಿಗೆ
ಒಲುಮೆಯ ಸಾಕಾರ ಸ್ಫೂರ್ತಿಯಾಗು…
Facebook ಕಾಮೆಂಟ್ಸ್