X

ರಷ್ಯಕ್ಕೆ ಅಮೆರಿಕೆಯ ಬೆದರಿಕೆ

ಅಮೇರಿಕಾ ಅಂದ ಕೂಡ್ಲೇ ನೆನಪಾಗೋದು ವೈಭವೋಪೇತ ಜೀವನ, ಸಕಲ ಸಂಪತ್ತುಗಳ, ಶ್ರೀಮಂತ ಮಾಯಾನಗರಿಗಳ ದೇಶ ಅದು ಅನ್ನೋ ವಿಷ್ಯ. ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿ. ಜಗತ್ತಿನ ದೊಡ್ಡಣ್ಣ. ಮತ್ತು ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರ. ಅದರೊಟ್ಟಿಗೆ ಜಗತ್ತಿನ ಸಕಲ ರಾಜಕೀಯ ಬೆಳವಣಿಗೆಗಳ,ಬದಲಾವಣೆಗಳ ಮೂಲ ಸ್ಥಾನ. ಇಡೀ ವಿಶ್ವವೇ ಆಮೇರಿಕೆಯ ಸುತ್ತ ಸುತ್ತುತಿದೆಯೇನೋ ಅನ್ನುವಷ್ಟರ ಮಟ್ಟಿಗೆ ಆ ದೇಶದ ಪ್ರಭಾವ ನಮ್ಮನ್ನೆಲ್ಲಾ ಆವರಿಸಿಬಿಟ್ಟಿದೆ. ದುಡ್ಡು ಮತ್ತು ಅಧಿಕಾರ ಯಾವ ರೀತಿಯಲ್ಲಿ ಅತೀ ಮುಖ್ಯವಾದ ವಿಚಾರವಾಗುತ್ತೆ ಅನ್ನೋದಕ್ಕೆ ಅಮೇರಿಕಾ ಉದಾಹರಣೆ ಅಂದರೆ ತಪ್ಪಲ್ಲ.ಆದರೆ ಇಂತಹ ಅಧಿಕಾರದ ಮದ ತಲೆಗೇರಿದಾಗ, ಮತ್ತು ಆ ಸ್ಥಾನವನ್ನ ತನ್ನಲ್ಲೇ ಇಟ್ಟುಕೊಳ್ಳಲು ಒಂದು ದೇಶ ಹಪಹಪಿಗೆ ಬಿದ್ದಾಗ ಎಷ್ಟು ಹಾನಿಯಾಗುತ್ತೆ ಅನ್ನೋದಕ್ಕೂ  ಅಮೇರಿಕಾ ಉದಾಹರಣೆಯಾಗಿರುವುದು ಮಾತ್ರ ವಿಪರ್ಯಾಸ. ನಾನೇನು ಹೇಳ ಹೊರಟಿದ್ದೇನೆ ಅನ್ನೋದರ  ಅರಿವು ನಿಮಗಾಗಿರಬಹುದು.ಅಮೇರಿಕೆಯ ಆರಾಧಕರು ನೀವಾಗಿದ್ದರೆ ಈ ಲೇಖನ ನಿಮಗೆ ರುಚಿಸದು. ಆದರೆ ಇದೊಂದು ನಗ್ನ ಸತ್ಯ ಅನ್ನೋದು ಮಾತ್ರ ಅಷ್ಟೇ ನಿಜ

ಇವತ್ತು ಈ ವಿಚಾರ ಬರೆಯೋಕ್ಕೆ ಕಾರಣ ಏನಪ್ಪಾ ಅಂತಾ ಯೋಚಿಸ್ತಾ ಇದೀರಾ? ಸಿರಿಯಾ ಅಂತಾ ಒಂದು ದೇಶ ಇದೆ ಅನ್ನೋದು ನಿಮಗೆಲ್ಲರಿಗೂ ಗೊತ್ತಿರುತ್ತೆ. ಆ ದೇಶದ ಅಧ್ಯಕ್ಷ ಬಷರ್-ಅಲ್-ಅಸಾದ್. ಅದೇ ಕಣ್ರೀ ಐಸಿಸ್ ಅನ್ನೋ ಮತಾಂಧ ಜಿಹಾದಿಗಳ ತವರು ಮನೆ! ಕಳೆದ ವಾರದಿಂದ ಈ ದೇಶ ಇಡೀ ವಿಶ್ವದ ರಾಜಕೀಯ ಪಂಡಿತರ, ಮಾದ್ಯಮಗಳ ಚರ್ಚೆಯ ಕೇಂದ್ರಬಿಂದು. ನಮ್ಮ ದೇಶದ ಮಾದ್ಯಮಗಳನ್ನಾ ಬಿಟ್ಟು! ಇದಕ್ಕೆ ಕಾರಣ ಇಷ್ಟು ದಿನ ಸುಮ್ಮನಿದ್ದ ರಶ್ಯಾ ಐಸಿಸ್ ಮೇಲೆ ಯುದ್ದ ಸಾರಿರೋದು. ೩೪ ಯುದ್ದ ವಿಮಾನಗಳು ಅದಾಗಲೇ ೨೦ ಕ್ಕೂ ಹೆಚ್ಚು ವಾಯುದಾಳಿಗಳನ್ನ ಮಾಡಿ ಐಸಿಸ್’ಗೆ ಒಂದಷ್ಟು ಹೊಡೆತ ಕೊಟ್ಟಿವೆ. ಅದಾಗಲೇ ಯುದ್ದ ಪಂಡಿತರ ಲೆಕ್ಕಾಚಾರ ಏನಪ್ಪಾ ಅಂದ್ರೆ ಇದೇ ರೀತಿಯಲ್ಲಿ ದಾಳಿ ಮುಂದುವರೆದ್ರೆ ಐಸಿಸ್ ಕೆಲವೇ ದಿನಗಳಲ್ಲಿ ಹೇಳಹೆಸರಿಲ್ಲದಂತಾಗುತ್ತೆ ಅನ್ನೋದು. ನೀವು ಅದೇನೇ ಹೇಳಿ ಆದ್ರೆ ವ್ಲಾದಿಮಿರ್ ಪುಟಿನ್ ನಂಗೆ ಇದಕ್ಕೇ ಇಷ್ಟ ಆಗೋದು. ಅವ್ನ ಬಗ್ಗೆ ನಂಗೊಂತರಾ ಅಭಿಮಾನ, ಆ ಮನುಷ್ಯ ಏನಾದ್ರೂ ಮಾಡ್ಬೇಕು ಅಂತಾ ನಿರ್ಧಾರ ಮಾಡಿದ್ರೆ ಮುಗೀತು. ಅದು ಆಗೋ ತನ್ಕ ಹಿಂತಿರುಗೀ ನೋಡೋದೂ ಇಲ್ಲಾ. ಈಗ ಐಸಿಸ್ ವಿಷ್ಯದಲ್ಲಾಗಿರೋದು ಅದೇ. ಅಸಾದ್ ರಶ್ಯಾದ ಸಹಾಯ ಕೇಳಿದ್ದೇ ತಡ ಐಸಿಸ್ ಮೇಲೆ ರಶ್ಯಾ ಯುದ್ದ ಸಾರಿದೆ. ಮೂಲಗಳ ಪ್ರಕಾರ ಪುಟಿನ್ ೧,೫೦,೦೦೦ ಜನರ ಸೈನ್ಯವನ್ನ ಕೂಡ ಸಿರಿಯಾಗೆ ಕಳಿಸೋ ಆಲೋಚನೆಯಲ್ಲಿದಾನಂತೆ. ಎಷ್ಟಾದ್ರೂ ಈ ಮನುಷ್ಯ ಸೈನ್ಯದಲ್ಲೇ ಇದ್ದವನು ಅಲ್ವಾ. ಅವ್ನಿಗೂ ಗೊತ್ತಿದೆ.ಶಾಂತಿಯುತ ಮಾತುಕತೆಯೆಲ್ಲಾ ಐಸಿಸ್’ನೊಟ್ಟಿಗೆ ನಡಿಯಲ್ಲಾ ಅಂತಾ. ಅದನ್ನ ಅಮೇರಿಕಾ ಇಂಗ್ಲೆಂಡ್ ದೇಶಗಳು ಸೂಕ್ಷ್ಮವಾಗಿ ಅವಲೋಕಿಸಿ ಸಣ್ಣದಾಗಿ ವಿರೋಧಿಸಿದ್ದೂ ಆಗಿದೆ. ಅಮೇರಿಕಾ ಮಾದ್ಯಮಗಳಂತೂ ಎಂದಿನಂತೆ ಪುಟಿನ್ ಮತ್ತವನ ರಷ್ಯಾವನ್ನ ಖಳನಟರಂತೆ ಬಿಂಬಿಸಿದ್ದೂ ಆಗಿದೆ. ಅಮೇರಿಕಾ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಈ ದಾಳಿಗಳಿಂದ ಐಸಿಸ್’ಗೇ ಲಾಭ, ಇರೋ ಅರಾಜಕತೆಯನ್ನ ರಶ್ಯಾ ಇನ್ನಷ್ಟು ಹೆಚ್ಚು ಮಾಡ್ತಾ ಇದೆ ಅಂತಾ ಬೇರೆ ಹೇಳಿದೆ.

ಆದರೆ ವಿಷ್ಯ ಇರೋದು ಇಲ್ಲೇ. ಅಮೇರಿಕಾ ಒಂದು ವರ್ಷದಿಂದ ಸಿರಿಯಾದಲ್ಲಿ ವಾಯುದಾಳಿಗಳನ್ನ ಮಾಡುತ್ತಾ ಬಂದಿದೆ(ಹಾಗೆಂದು ಹೇಳಿಕೊಂಡಿದೆ ಅನ್ನೋಣ). ಇಲ್ಲಿ ರಷ್ಯಾ ನಡೆಗೆ ವಿರೋಧ ತೋರಿರೋದಕ್ಕೆ ಅಮೆರಿಕಾ ನೀಡಿರೋ ಕಾರಣ, ರಷ್ಯಾ ಅಸಾದ್’ನ ಬೆನ್ನ ಹಿಂದೆ ನಿಂತಿರೋದು. ಅಮೇರಿಕಾಗೆ ಅಸಾದ್ ಮೊದಲು ಅಧಿಕಾರದಿಂದ ಕೆಳಗಿಳೀಬೇಕಂತೆ.  ಮತ್ತೆ ತನ್ನ ಹಳೇ ಬುದ್ದಿಯನ್ನ ಇಲ್ಲೂ ತೋರಿಸುವ ಇರಾದೆ ಅಮೇರಿಕಾದ್ದು. ಲಿಬಿಯಾದಲ್ಲಿ ಶಾಂತಿ ಸ್ಥಾಪನೆ ಮಾಡ್ತೀವಿ ಅಂತಾ ಗಡಾಫಿಯನ್ನ ಅಧಿಕಾರದಿಂದ ಇಳಿಸಿದ್ದು, ಮತ್ತೆ ಅವನ ದೇಶದ ಜನರೇ ಅವನನ್ನು ಕೊಲ್ಲುವಂತೆ ಮಾಡಿದ್ದು, ಇರಾಖ್’ನಲ್ಲಿ ಜೈವಿಕ ಸಾಮೂಹಿಕ ನಾಶದ ಆಯುಧಗಳಿವೆ ಅಂತಾ ಯುದ್ದ ಸಾರಿ ಸದ್ದಮ್’ನನ್ನ ಮುಗಿಸಿದ್ದು, ಅದಕ್ಕಿಂತಾ ಮುಂಚೆ ಅಫ್ಗಾನಿಸ್ಥಾನ.. ಒಂದೇ ಎರಡೇ.ವಿಯೆಟ್ನಾಮ್’ನಿಂದ ಹಿಡಿದು ಇರಾಕ್’ನವರೆಗೆ ಬೇರೆಯವ್ರತ್ರ ಕಾಲು ಕೆರೆದು ಜಗಳಕ್ಕೆ ಹೋಗೋದು ಅಂದ್ರೆ ಅದಕ್ಕೇನೋ ಒಂದು ವಿಕೃತ ಖುಶಿ ಅನ್ಸುತ್ತೆ.ಇರಾಕ್’ನಲ್ಲಿ ಅಂತಾ ಯಾವುದೇ ಆಯುಧಗಳೂ ಇರ್ಲಿಲ್ಲಾ ಅಂತಾ ಮತ್ತೆ ಗೊತ್ತಯ್ತು, ಅಲ್ಲೀಗ ಒಂದು ಬಲಿಷ್ಟ ಸರ್ಕಾರ ಇಲ್ಲ. ಪ್ರತೀದಿನ ಕಾರ್ ಬಾಂಬ್ ದಾಳಿಗಳೂ ಹಿಂಸೆ , ಲಿಬ್ಯಾದ ಕಥೇನು ಹೆಚ್ಚು ಕಮ್ಮಿ ಅದೇನೇ.ಉಕ್ರೇನ್, ಸಿರಿಯಾ, ಇರಾಕ್, ಮತ್ತು ಲಿಬ್ಯಾದಲ್ಲಿನ ರಾಜಕೀಯ ಅಸ್ಥಿರತೆಯೇ ಐಸಿಸ್’ನ ಹುಟ್ಟಿಗೆ ಕಾರಣ ಅನ್ನೋ ಸತ್ಯ ಎಲ್ಲರಿಗೂ ಗೊತ್ತಿದೆ. ಆದರೆ ಐಸಿಸ್ ಅನ್ನು ವಿರೋಧಿಸೋಕೆ ಅಮೇರಿಕ ಕೆಲವೊಂದಿಷ್ಟು ಅಸಾದನ್ನಾ ವಿರೋಧಿಸೋ ರೆಬೆಲ್’ಗಳಿಗೆ ತಾನೇ ಸಹಾಯ ಮಾಡ್ತಾ ಇದೆ. ೧೯೭೦-೮೦ರ ಸಮಯದಲ್ಲಿ, ಅಫ್ಗಾನಿಸ್ಥಾನದಲ್ಲಿ ರಷ್ಯಾ ಪ್ರಾಭಲ್ಯವಿದ್ದಾಗ ಮುಜಾಹಿದಿನ್’ಗಳು ಅನ್ನೋ ಹೆಸರಲ್ಲಿ ಜಿಹಾದಿಗಳನ್ನ ಬೆಳೆಸಿತ್ತಲ್ಲಾ, ಡಿಟ್ಟೋ ಅದೇ ರೀತಿಯಲ್ಲಿ. ಅವ್ರು ಬೆಳೆದು ನಿಂತು ಅಮೇರಿಕಾಗೇ ಸವಾಲು ಹಾಕಿದಾಗ ಅವ್ರನ್ನ ಮಟ್ಟ ಹಾಕೋಕೆ ಅಫ್ಗಾನ್’ಗೆ ಹೋಗಿದ್ದು ಅಲ್ಲಿ ಅಳಿದುಳಿದಿದ್ದ ಶಾಂತಿಯನ್ನ ಹಾಳು ಮಾಡಿದ್ದು ಯಾರೂ ಮರೆತಿಲ್ಲಾ. ಅದನ್ನೇ ರಷ್ಯಾ ಈ ಬಾರಿ ವಿರೋಧಿಸಿರೋದು. ಅಸಾದ್ ಅಧಿಕಾರದಲ್ಲಿರ್ಲಿ ಅನ್ನೋದು ರಷ್ಯಾ ವಾದ. ಪಾಶ್ಚಾತ್ಯರದ್ದು ಮತ್ತದೇ ಮಾನವ ಹಕ್ಕುಗಳ ಉಲ್ಲಂಘನೆ, ಶಿಯಾ -ಸುನ್ನಿ ಜಗಳ ಮಣ್ಣು ಮಸಿ ಅನ್ನೋ ಹಳೇ ರಾಗ. ಆದರೆ ಈ ಸರ್ತಿ ಯಾಕೋ ರಷ್ಯಾ  ಸುಮ್ನಿರಲ್ಲಾ ಅನ್ಸುತ್ತೆ. ಹೇಗೂ ಕ್ರಿಮಿಯಾ ವಿಷ್ಯದಲ್ಲಿ ರಷ್ಯಾದ ಮೇಲೆ ಅಮೇರಿಕಾ ಹೇರಿದ ನಿರ್ಬಂಧಗಳ ಸೇಡು ಪುಟಿನ್’ಗಿದೆ. ಎಲ್ಲದ್ದಕ್ಕಿಂತಾ ಹೆಚ್ಚಾಗಿ ಒಡೆದು ಹೋಗಿದ್ದ ಸೋವಿಯತ್ ರಶ್ಯಾವನ್ನ ಮತ್ತೆ ಒಂದಾಗಿಸೋ ಆಸೇನು ಇದೆ. ಇರಾಕ್, ಇರಾನ್, ಇಸ್ರೇಲ್, ಚೈನಾ, ಉತ್ತರ ಕೊರಿಯಾ ಮತ್ತು ಮದ್ಯಪ್ರಾಚ್ಯದ ಸಣ್ಣ ದೇಶಗಳ ಬೆಂಬಲ ಆ ಆಸೆಯನ್ನ ಮತ್ತಷ್ಟು ಗಟ್ಟಿಯಾಗಿಸಿದೆ. ಹೀಗಾಗಿ ಅವ್ನು ಈ ಸರ್ತಿಯಂತೂ ಹಿಂದೆ ಸರಿಯೋ ಸಾದ್ಯತೆ ತುಂಬಾ ಕಮ್ಮಿ.ವಿಶ್ವ ಸಂಸ್ಥೆಯ ಬಾಗಿಲು ತಟ್ಟೋದೊಂದೇ ಅಮೇರಿಕಾಗಿರೋ ದಾರಿ. ಆದ್ರೆ ಸಿರಿಯಾ ಮೇಲೆ ಅದು ಮಾಡ್ತಿರೋ ದಾಳಿಗೂ ವಿಶ್ವ ಸಂಸ್ಥೆಯ ಸಮ್ಮತಿ ತೊಕೊಂಡಿಲ್ಲಾ. ಹಾಗಾಗಿ ಅಲ್ಲೂ ಅದಕ್ಕೆ ಸಪೋರ್ಟ್ ಸಿಗೋದು ಕಷ್ಟ.

ಅಮೇರಿಕಾ ಅಸಾದನ್ನ ಕೆಳಗಿಳಿಸ್ಬೇಕು, ಅವ್ನು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾನೆ ಅಂತಾ ಹೇಳೋಕೂ ಕಾರಣಗಳು ತುಂಬಾ ಇದೆ.ಮೊದಲನೆಯದ್ದು ಸಿರಿಯಾ ಅಮೇರಿಕಾದಿಂದ ಯಾವುದೇ ಯುದ್ದ ಉಪಕರಣಗಳನ್ನಾ ತೊಗೋಳ್ತಾ ಇಲ್ಲ. ಚೈನಾ ಮತ್ತೆ ರಷ್ಯಾದ ಯುದ್ದ ಪರಿಕರಗಳನ್ನ ಸಿರಿಯಾ ಉಪಯೋಗಿಸ್ತಾ ಇದೆ. ವೆನಿಜ಼ುವೆಲಾ, ಕ್ಯೂಬಾ ಮತ್ತು ಅರ್ಜೆಂಟೀನಾ ಜೊತೆ ವ್ಯಾಪಾರ ಒಪ್ಪಂದ ಮಾಡ್ಕೊಂಡಿರೋ ಅಸಾದ್ ಅಲ್ಲೂ ಅಮೇರಿಕಾಗೆ ಸೊಪ್ಪು ಹಾಕಿಲ್ಲಾ. ೨೦೦೬ರ ವರೆಗೆ ತನ್ನೆಲ್ಲಾ ವಿದೇಶಿ ವಿನಿಮಯಕ್ಕೆ ಸಿರಿಯಾ ಡಾಲರ್’ಅನ್ನಾ ಬಳಸ್ತಾ ಇತ್ತು, ಆದ್ರೆ ಅಲ್ಲಿಂದ ಮತ್ತೆ ಅಸಾದ್ ಅದನ್ನೂ ಕೂಡ ಯುರೋ ಮಾಡ್ಬಿಟ್ಟ.ಇದೆಲ್ಲಕ್ಕಿಂತಾ ಮುಖ್ಯವಾದ ಇನ್ನೊಂದು ಸಂಗತಿಯಿದೆ. ವಿಕಿಪೀಡಿಯಾದಲ್ಲಿ ಮೆಹೆರ್ ಅರಾರ್ ಅಂತಾ ಟೈಪಿಸಿ, ಅವ್ನನ್ನ ಅಲ್-ಖಾಯಿದಾ ಶಂಕಿತ ಭಯೋತ್ಪಾದಕ ಅಂತಾ ನಿವ್ಯಾರ್ಕ್’ನ ಜಾನ್.ಎಫ್.ಕೆನಡೀ ವಿಮಾನ ನಿಲ್ಧಾಣದಲ್ಲಿ ಬಂಧಿಸ್ತಾರೆ.೨ ವಾರ ವಿಚಾರಣೆ ಮಾಡಿ ಸಿರಿಯಾಗೆ ಕರೆದೊಯ್ದು ಅಲ್ಲಿ ೧ ವರ್ಷ ವಿಚಾರಣೆ ಅಂತಾ ಹಿಂಸಿಸ್ತಾರೆ. ಇದನ್ನ “ಎಕ್ಸ್ಟ್ರಾರ್ಡಿನರೀ ರೆಂಡಿಶನ್” ಅಂತಾರೆ. ಆದ್ರೆ ಅವ್ನು ಭಯೋತ್ಪಾದಕ ಅಲ್ಲಾ ಅನ್ನೋದು ಗೊತ್ತಾಗಿ ಸಿರಿಯಾ,ತಾನು ಅವ್ನನ್ನ ಇಟ್ಟ್ಕೊಂಡ್ಡಿದ್ದು ಹೌದು, ಅವ್ನಿಗೆ ಕಿರುಕುಳ ಕೊಟ್ಟಿದ್ದೂ ಹೌದು ಅಂತಾ ಒಪ್ಪಿಕೊಂಡು, ಅವ್ನನ್ನ ಅವ್ನ ದೇಶವಾದ ಕೆನಡಾಕ್ಕೆ ಹಸ್ತಾಂತರಿಸುತ್ತೆ. ಇದು ಅಂತರ್’ರಾಷ್ಟ್ರೀಯ ಮಟ್ಟದಲ್ಲಿ ಅಮೇರಿಕಾದ ಮಾನ ಹರಾಜು ಹಾಕಿತ್ತು. ಇದೆಲ್ಲಕ್ಕೂ ಸೇಡು ತೀರ್ಸಿಕೊಳ್ಳೋ ಯೋಚನೆ ಅದಕ್ಕಿತ್ತು . ಅಮೇರಿಕಾಗೆ  ಈಗ ಅವಕಾಶವೊಂದು ಸಿಕ್ಕಿತ್ತು ಅಂತಾ ಕಾಣ್ಸುತ್ತೆ. ಇದೆಲ್ಲಾ ಹಾಗಿರ್ಲಿ. ಅಮೇರಿಕಾದ ಮತ್ತೊಂದು ಕನಸು, ಮದ್ಯಪ್ರಾಚ್ಯದ ತೈಲ ಭಾವಿಗಳು. ಅವುಗಳೊಂತರಾ ಚಿನ್ನದ ಮೊಟ್ಟೆಯಿಡುವ ಕೋಳಿಗಳ ಹಾಗೆ, ಅವುಗಳ ಹಿಡಿತ ತನ್ನ ಕೈಲಿದ್ರೆ ಎಲ್ಲರನ್ನೂ ಮತ್ತು ಎಲ್ಲವನ್ನೂ ಆಡಿಸ್ಬಹುದು ಅನ್ನೋ ಆಲೋಚನೆ ಅದ್ರದ್ದು. ಇರಾಕ್ ನಲ್ಲಿ ಇದನ್ನೇ ಮಾಡಿದ್ದು ಅದು.

ಆದ್ರೆ ಈ ಸರ್ತಿ ಯಾಕೋ ಅದು ಯೋಚಿಸಿದ್ದು ನಡೀತಾ ಇಲ್ಲಾ. ಒಂದು ಕಾನ್ಸ್ಪಿರೆಸಿ ಥಿಯರಿಯ ಪ್ರಕಾರ, ಐಸಿಸ್’ ಕೂಡ ಅಮೇರಿಕಾದ್ದೇ ಕೂಸು.ಮದ್ಯಪ್ರಾಚ್ಯದಲ್ಲಿ ಅಶಾಂತಿ ತರೋದು ಅದ್ರ ಯೋಚನೆ. ಅಮೇರಿಕಾದ ಇತಿಹಾಸ ನೋಡಿದ್ರೆ ಅದೇನು ವಿಶೇಷ ಅನ್ಸಲ್ಲಾ ಬಿಡಿ. ಆದರೆ ಅದು ಸತ್ಯ ಅಂತಾದ್ರೆ ಆಲ್ಯಾನ್ ಕುರ್ದಿ’ಯಂತಹ ಮಕ್ಕಳ ಸಾವಿನ ಶಾಪವೂ ಅಮೇರಿಕಾಕ್ಕೆ ತಟ್ಟದೇ ಇರಲ್ಲಾ ಅಲ್ವಾ. ಅದೇನೇ ಆಗ್ಲಿ, ಐಸಿಸ್’ನಂತಹ ಮತಾಂಧ ಗುಂಪುಗಳ ನಿರ್ನಾಮವಾಗ್ಲಿ ,ಮತ್ತು ವಿಶ್ವ ಶಾಂತಿ ಮತ್ತೆ ನೆಲೆಸ್ಲಿ ಅಂತಾ ಯೋಚಿಸೋಣ. ಹಾಗಂದ ಮಾತ್ರಕ್ಕೆ ರಷ್ಯಾನೂ ಒಳ್ಳೇ ದೇಶ ಅಂತಿಲ್ಲ. ಶೀತಲ ಸಮರದ ಬಳಿಕ ಅದ್ರ ಶಕ್ತಿ ಕುಗ್ಗಿತ್ತು. ಅದನ್ನು ಸರಿಮಾಡೋಕೇ ತನ್ನ ಅಸ್ಥಿತ್ವನ್ನ ಮತ್ತೆ ವಿಶ್ವಕ್ಕೇ ಗೊತ್ತು ಮಾಡಕ್ಕೆ ಅದು ಪ್ರಯತ್ನ ಮಾಡ್ತಾ ಇದೆ. ಕ್ರಿಮಿಯಾದಲ್ಲಿ ೬೦% ಜನ ರಶಿಯನ್ ಭಾಷಿಗರು.ಹಾಗಾಗಿ ಅಲ್ಲಿ ಮತದಾನ ಆದ್ಸಿ ಉಕ್ರೇನ್ ಮತ್ತು ಕ್ರಿಮಿಯಾವನ್ನ ರಷ್ಯಾದ ಭೂಬಾಗ ಮಾಡೋದು ಅದರ ಆಶಯ. ಒಟ್ಟಾರೆ , ಅದ್ಯಾಕೋ ಜಗತ್ತು ಮತ್ತೆ ಎಲೀಟ್ ಮತ್ತು ಆಕ್ಸಿಸ್ ಶಕ್ತಿಗಳ ಕಾದಾಟ ಮತ್ತೆ ನೋಡೋ ಹಾಗಾಗುತ್ತೋ ಅನ್ನೋ ಭಯ ಕಾಡ್ತಾ ಇದೆ! ಹಾಗಾಗದಿರ್ಲಿ ಅನ್ನೋ ಆಶಯದೊಂದಿಗೆ ಈ ಲೇಖನವನ್ನ ಮುಗಿಸ್ತೀನಿ.

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post