X

ಮಂಜು ಮುಸುಕಿದ ದಾರಿ

ಪದಕಿ ಪಟಾಕಿ

ಬಹಳಷ್ಟು ವಿಚಾರಗಳ ಬಗ್ಗೆ ನಾನು ಘಂಟೆಗಟ್ಟಲೆ ಚರ್ಚೆ ಮಾಡೋದನ್ನ ಸಾಕಷ್ಟು ಜನ ನೋಡಿದ್ದಾರೆ .ನಮ್ಮ ದೇಶದ ಮೈನ್ ಡಿಶ್ಗಳಾದ ಕ್ರಿಕೆಟ್,ಸಿನೆಮಾ,ರಾಜಕೀಯ ಎಲ್ಲಾ ತಪ್ಪಿದರೆ ಇತಿಹಾಸದ ಬಗ್ಗೆ ಚರ್ಚೆ. ಆದರೆ ಅದು ಗಂಟಲು ಕೆರತವನ್ನ ಕಡಿಮೆ ಮಾಡಿಕೊಳ್ಳೋದಕ್ಕೆ ಮಾಡೋ ತಲೆಹರಟೆ. ಎಷ್ಟೋ ಬಾರಿ ಕೆಲ ವಿಚಾರಗಳನ್ನ ಡಾಕ್ಯುಮೆಂಟ್ ಮಾಡಿಕೊಳ್ಳಬೇಕು ಅನ್ನೋ ಅರಿವು ಮೂಡತ್ತೆ. ಈ ಡಾಕ್ಯುಮೆಂಟೇಶನ್ನಿನ ಮೊದಲ ಬರಹ ಇದು.

ಆಟಗಾರ ಚಿತ್ರದ ಪ್ರಮೋಶನಲ್ ಕಾರ್ಯಗಳನ್ನ ನಮ್ಮ ನಿರ್ಮಾಪಕರಾದ ಯೋಗೀಶ್ ದ್ವಾರಕೀಶ್ ಅವರು ನನಗೆ ವಹಿಸಿದ್ರು. ಆಗ ಸಾಕಷ್ಟು ಕಲಿಕೆಗಳು ನನ್ನ ಪಾಲಾಯ್ತು. ಟಿವಿ ಮಾಧ್ಯಮದವರ ಆಚಾರ ವಿಚಾರ,ನ್ಯೂಸ್ ಚಾನಲ್ಗಳ ಜೊತೆ ಒಡನಾಟ,ಫ಼ೇಸ್ ಬುಕ್ಕಲ್ಲಿ ಕೂತು ಕುಟ್ಟುವ ಬುದ್ಧಿಜೀವಿಗಳ ಬೆಂಬಲ ಮತ್ತು ಸ್ಟಾರ್‍ಗಿರಿ ಎಲ್ಲವನ್ನು ಸಹಿಸಿಕೊಂಡೇ ಚಿತ್ರ ಬಿಡುಗಡೆಯಾಯ್ತು.

ಕೆಲವೊಮ್ಮೆ ನಂಗೇ ಬೇಜಾರಗತ್ತೆ.. ಕನ್ನಡದವರಿಗೆ ಕರ್ತವ್ಯ ನಿಷ್ಠೆ ಓಕೆ,ಆದ್ರೆ ಸ್ವಾಭಿಮಾನಾನ ಅಡ ಇಟ್ಟು ಕೆಲಸ ಮಾಡೋ ಅಷ್ಟು ಕೆಳ ಮಟ್ಟಕ್ಕೆ ಯಾಕೆ ಹೋಗಿದ್ದೀವಿ ಅಂತ. ತೆಲುಗು,ತಿಮಿಳಿನ ಸಿನೆಮಾಗಳು ಹೆಚ್ಚು ಹಣ ಕೊಟ್ಟರು ಅಂತ ಅವರ ಚಿತ್ರಗಳನ್ನ ಯಗ್ಗಾ ಮಗ್ಗ ಪ್ರಮೋಟ್ ಮಾಡ್ತಾರೆ.ಅದಕ್ಕೆ ಕಾರಣ ಏನು ಅಂತ ಹುಡುಕಿದ್ರೆ,ಕನ್ನಡಕ್ಕೆ ಸ್ವಂತ ಚಾನಲ್ಗಳಿಲ್ಲ. ಎಲ್ಲವೂ ಹೊರ ರಾಜ್ಯದವರ ಅಂಗೈಯಲ್ಲಿರೋ ಚಾನಲ್ಗಳೇ.ಹಾಗಾಗಿ ಕನ್ನಡ ಚಿತ್ರಗಳಿಗೆ ಉಪ್ಪಿಟ್ಟಲ್ಲಿ ಸಾಸ್ವ ಕಾಳ್ಗೆ ಇದ್ದಷ್ಟು ಬೆಲೆ. ಈಗಾಗ್ಲೆ ನಮ್ಮ ಮಾರುಕಟ್ಟೆ.. ನಮ್ಮ ಚಿತ್ರಗಳನ್ನ ಬೆತ್ತಲೆ ಮಾಡಿ ರಿವ್ಯೂ ಬರೆಯೋದು ಎಲ್ಲವೂ ಕಾಮನ್ ಆಗಿ ಮನೆಯಲ್ಲಿ ಚಡ್ಡಿ ಹಾಕ್ಕೋಳ್ಳೋಕೆ ಬರದೆ ಇರೋ ಮಕ್ಕಳು ಕೂಡ ಕನ್ನಡ ಸಿನೆಮಾ ಬಗ್ಗೆ ಕಮೆಂಟ್ ಮಾಡ್ತಾ ಇದ್ದಾರೆ. ಸೋ ಆ ಟಾಪಿಕ್ ನಾನ್ ಮುಟ್ಟಲ್ಲ. ರಂಗೀತರಂಗ ಬಂದಾಗ ಬಾಹುಬಲಿ ಅನ್ನೋ ದೊಡ್ಡ ಚಿತ್ರ ಬಂದು ಸಿನೆಮಾ ಕೊಚ್ಕೊಂಡ್ ಹೋಗೋ ಸಾಧ್ಯತೆ ಇತ್ತು. ಆಗ ಇಡೀ ಫ಼ೇಸ್ ಬುಕ್ ಗೆಳೆಯರೆಲ್ಲಾ ಎದ್ದು ಬಿದ್ದು ಸಪೋರ್ಟ್ ಮಾಡಿದ್ರು. ರಂಗೀತರಂಗ ಕನ್ನಡಕ್ಕೆ ಇನ್ನು ಮೂರು ವರ್ಷವಾಗುವಷ್ಟು ಹೆಸರು ತಂದುಕೊಟ್ಟದ್ದು ಇತಿಹಾಸವಾಯ್ತು. ಅದಾದಮೇಲೆ ಆಟಗಾರ ಬಂತು. ಆಟಗಾರ ಚಿತ್ರವನ್ನ ಚೆನ್ನಾಗ್ ಮಾಡಿದಾರೆ ಅಂತ ಹೇಳ್ತಿರೋ ಕಡೇನೆ ರೀಮೇಕು ಅನ್ನೋ ವ್ಯವಿಧಾನವಿಲ್ಲದ ಪುಕಾರನ್ನ ಕೆಲವರು ಹಬ್ಬಿಸಿದ್ರು.ಇದು ಬಹುಶಃ ಕನ್ನಡ ಜನತೆಗಿರೋ ಜ್ಞಾನ ಹೀನತೆ. ನನ್ನ ಪ್ರಕಾರ ಒಂದು ಭಾಷೆಯ ಬೆಳವಣಿಗೆಗೆ ಆ ಭಾಷೆಯಲ್ಲಿ ಬೆಳೆದಿರೋ ಆ ಜೆನರೇಶನ್ನಿನ ಸಾಹಿತ್ಯ ಮತ್ತು ದೃಶ್ಯ ಮಾಧ್ಯಮ ಬಹಳಷ್ಟು ದೊಡ್ಡ ಮಟ್ಟದ ಪರಿಣಾಮ ಬೀರತ್ತೆ. ನಮ್ಮಲ್ಲಿ ಪುಸ್ತಕ ಓದೋ ಹವ್ಯಾಸ ಬಹಳ ಕಮ್ಮಿ ಇರೋದ್ರಿಂದ ಮತ್ತು ಒಂದು ಚಿತ್ರದ ಹಿಂದಿರೋ ಸೈಂಟಿಫ಼ಿಕ್ ಥಿಯರಿಯ ವಿಚಾರವಂತಿಕೆ ಕಡಿಮೆ ಇರೋದ್ರಿಂದ ಕೆಲ ಮಂದಿಗೆ ಬುದ್ಧಿಯ ಲೂಸ್ ಮೋಶನ್ ಹೆಚ್ಚಾಯ್ತು. “ಅಂಡ್ ದೇರ್ ವರ್ ನನ್” ಅನ್ನೋ ಪುಸ್ತಕದಿಂದ ಬಂದ ಸಿನೆಮಾ ಅನ್ನೋದನ್ನ ಬಿಟ್ಟು ತಮಿಳು,ಹಿಂದಿ,ಇಂಗ್ಲಿಶ್ ಸಿನೆಮಾಗಳನ್ನ ತೋರಿಸ್ ತೀಟೆ ತೀರಿಸಿಕೊಂಡು ಕನ್ನಡದ ಒಂದು ಒಳ್ಳೆ ಕೂಸನ್ನ ಕತ್ತು ಹಿಸುಕೋ ಕೆಲಸ ನಡೀತು.ನೆಗೆಟಿವ್ ಪಬ್ಲಿಸಿಟಿ ಅನ್ನೋದು ಒಂದು ಒಳ್ಳೆಯ ಚಿತ್ರಕ್ಕೆ ಹಾನಿಯುಂಟು ಮಾಡ್ತಿತ್ತು. ನಂತರ ಕೆಂಡಸಂಪಿಗೆ ಅನ್ನೋ ಅಧ್ಬುತ ಸಿನೆಮಾ ಬಂತು.ಇಲ್ಲಿ ಸ್ಟಾರ್‍ಗಳ ಅಬ್ಬರ ಇಲ್ಲ. ಸಿ ವರ್ಗದವರನ್ನ ಥಿಯೇಟರ್ರಿಗೆಳೆಯೋ ಗಿಮ್ಮಿಕ್ ಇಲ್ಲ. ಜೊತೆಗೆ ಹೊಸ ಬ್ಯಾನರ್‍ ಇಂದ ಬಂದ ಚಿತ್ರವಾದ್ದರಿಂದ ಪ್ರಮೋಶನ್ ಕಮ್ಮಿ. ಜನಗಳಿಗೆ ಸಿನೆಮಾ ನೋಡೋ ಆಸೆ.. ಆದ್ರೆ ಥಿಯೇಟ್ರುಗಳು ಕಮ್ಮಿ. ಆಟಗರ ಮತ್ತು ಕೆಂಡಸಂಪಿಗೆ ಹೌಸ್ ಫ಼ುಲ್ ಓಡ್ತಿದ್ದ ಕಾಲದಲ್ಲಿ ಥಿಯೇಟರ್‍ಗಳು ಕೈ ತಪ್ಪಿ ಹೋಗ್ತಿದ್ವು.

ನನ್ನ ಯೋಚನೆಗೆ ಬೆಂಕಿ ಹತ್ತಿದ್ದು ಆಟಗಾರಕ್ಕೆ ಆದ ದುಸ್ಥಿತಿ,ಕೆಂಡಸಂಪಿಗೆಗಾದಾಗ. ಈಗೆಲ್ಲಿ ಹೋದ್ರು ಮೀಡಿಯಾದವ್ರು? ಈಗೆಲ್ಲಿ ಹೋಯ್ತು ಪಬ್ಲಿಸಿಟಿ ಪ್ರಮೋಶನ್ನು? ಯಾಕೆ ನಮ್ಮವರೇ ಆದ ಚಾನಲ್ನವ್ರು ಬಂದು ಸಿನೆಮಾ ಬಗ್ಗೆ ಹೇಳಿ ಜನಗಳನ್ನ ಥಿಯೇಟರ್ರಿಗೆ ತಳ್ತಾ ಇಲ್ಲ ಅನ್ನೋ ಹಲವಾರು ಪ್ರಶ್ನೆಗಳು ಕಾಡಿದ್ವು. ಇದಕ್ಕೆ ನನ್ನಿಂದೇನಾಗಬಹುದು? ಫ಼ೇಸ್ ಬುಕ್ಕಲ್ಲಿ ನನ್ನ ಗೆಳೆಯರು ಕೆಲವರು ನನ್ನ ವಿಚಾರಗಳಿಗೆ ಸೈ ಅನ್ನೋರಿದ್ದಾರೆ,ಇನ್ನು ಕೆಲವರು ನನ್ನನ್ನು ವಾಚ್ ಮಾಡಲು ಫ಼್ರೆಂಡ್ ಆಗಿದ್ದಾರೆ. ಇವರ ಬೆಂಬಲ ನನ್ನ ಒಂದು ಸ್ಟೇಟಸ್ಸಿಗೆ ಸಿಗತ್ತಾ ಅನ್ನೋ ಪ್ರಶ್ನೆ ಬಂತು.

ಆರೇಳು ವರ್ಷಗಳ ಹಿಂದೆ ಕಾಮಸೂತ್ರ ಅನ್ನೋ ಚಿತ್ರ ನೋಡಬೇಕಾದ್ರೆ ಬಂದ ಐಡಿಯಾ ಸಿನೆಮಾಸೂತ್ರ. ನನಗೆ ಸಿನೆಮಾ ಮಾಡೋ ತೆವಲಿದೆ. ಆ ತೆವಲನ್ನ ಡಿಜಿಟಲ್ ಮಾಧ್ಯಮದಲ್ಲಿ ಉಪಯೋಗಿಸೋ ಪ್ಲಾನ್ ಇತ್ತು. ಆದರೆ ಆಗ ರಿಸೋರ್ಸ್ಗಳಿರಲಿಲ್ಲ. ಈಗ ನನ್ನ ಬಳಿ ಶೂಟಿಂಗಿಗೆ ಬೇಕಾದ ಎಲ್ಲಾ ಸಲಕರಣೆಗಳೂ ಇವೆ. ಕೆಲಸಗಾರರ ಕೊರತೆ ಇತ್ತು. ಈ ಸಿನೆಮಾಸೂತ್ರ ಚಾನಲ್ಲಿಗೆ ಒಂದು ಟಿವಿ ಫ಼ಾರ್ಮ್ಯಾಟ್ ಅಲ್ಲಿ ಶೋ ಮಾಡ್ಬೇಕು ಅನ್ನೋ ಹುಳ ತಲೆ ಹೊಕ್ತು. ಇದ್ರಿಂದ ನಂಗೇನ್ ಉಪಯೋಗ ಇದೆ ಅನ್ನೋ ಯೋಚನೆ ಆಗ ಬರಲಿಲ್ಲ. ಒಟ್ನಲ್ಲಿ ಹಿಂದಿಗೆ ಟಿವಿಎಫ಼್,ಎ ಐ ಬಿ ಮಾದರಿಯಲ್ಲಿ ಕನ್ನಡಕ್ಕೆ ಒಂದು ಡಿಜಿಟಲ್ ಪ್ಲಾಟ್ ಫ಼ಾರ್ಮ್ ಬೇಕು ಅಂತ ನಿರ್ಧಾರ ಮಾಡಿದೆ. ಕನ್ನಡ ಚಿತ್ರರಂಗದ ಪ್ರೋಗ್ರೆಶನ್ಗಾಗಿ ದುಡಿಯುವ ಹಂಬಲ ನಮ್ಮಲ್ಲಿ ಕೆಲವರಿಗೆ ಇದೆ,ಅಂಥವರನ್ನ ಗುಡ್ಡೆ ಹಾಕಿ ಬಿಟ್ಟಿ ಕೆಲಸ ಮಾಡೋಕೆ ತಯಾರಿದ್ದೀರ ಅಂತ ಕೇಳ್ದೆ. ಕೆಲವರು ಇದರ ರೆವಿನ್ಯೂ ಮಾಡೆಲ್ ಏನು ಅಂತ ಕೇಳಿ ನಕ್ಕರು. ಜೇಬ್ ಖಾಲಿ, ಆದ್ರೆ ಉದ್ದೇಶ ತುಂಬಿ ತುಳುಕ್ತಾ ಇದೆ ಅಂತ ಉತ್ತರ ಕೊಟ್ಟು,ನನ್ನ ಟಿವಿ ಕಾರ್ಯಕ್ರಮಕ್ಕೆ ದುಡಿದಿದ್ದ ಎಲ್ಲರನ್ನೂ ಕರೆದು ಶೋಗೆ ಚಾಲನೆ ಕೊಟ್ಟೆ. ಹೌಸ್ಫ಼ುಲ್ ಅನ್ನೋ ಹೆಸರು ಇಟ್ಟಿದ್ದಾಯ್ತು. ಸಿನೆಮಾಸೂತ್ರ ಹೌಸ್ಫ಼ುಲ್ಗೆ ಆರ್ ಜೆ ಪ್ರದೀಪನಿಗಿಂತ ಸೂತ್ರಧಾರ ಬೇಕ? ಒಳ್ಳೆ ಕೆಲಸ ಮಾಡೋಕೆ ಇಡೀ ಪ್ರಪಂಚ ಕೈ ಜೋಡಿಸತ್ತಂತೆ.. ಹಾಗೆ ಇದಕ್ಕು ಆಯ್ತೇನೋ,ಆ ದೇವರ ದಯದಿಂದ. ನನ್ನ ಗೆಳೆಯ ಸುಹಾಸ್ ಸುಯಮೀಂದ್ರನ ನೇತೃತ್ವದಲ್ಲಿ ತಂಡ ಹುಮ್ಮಸ್ಸಿನಲ್ಲಿ ಶೂಟಿಂಗಿಗೆ ಬರ್ತಾರೆ. ಬೆಂಕಿ ಹಾಕ್ಕೊಂಡ್ ಕೆಲಸ ಮಾಡ್ತಾರೆ. Anything for progression and objective promotion ಅನ್ನೋ ಮಾತನ್ನ ಆಡ್ತ ದುಡೀತಾರೆ. ಹೌಸ್ ಫ಼ುಲ್ಲಿನ ಎರಡು ಎಪಿಸೋಡ್ ಆಗ್ಲೆ ಸಿನೆಮಾಸೂತ್ರ ಆನ್ಲೈನ್ ಚಾನಲಲ್ಲಿ ಇದೆ. ಜನ ಮೆಚ್ಚಿದ್ದಾರೆ. ಮೈ ಚಳಿ,ಗಾಂಚಲಿ ಎರಡೂ ಬಿಟ್ಟು ಕನ್ನಡ ಚಿತ್ರಗಳನ್ನ ಪ್ರಮೋಟ್ ಮಾಡ್ಬೇಕು ಅನ್ನೋದೆ ನಮ್ಮ ಉದ್ದೇಶ. ನಾಳೆ ನಾವು ಸಿನೆಮಾ ಮಾಡೋರು.. ದೊಡ್ಡವರು ಪಟ್ಟ ಕಷ್ಟ ಮುಂಬರೋರಿಗೆ ಇರಬಾರದು. ಇದೇ ನಮ್ಮ ಉದ್ದೇಶ. ಹೌಸ್ಫ಼ುಲ್ ಶೋ ಅಲ್ಲಿ ಮಾಧ್ಯಮ ಮಿತ್ರರು ಕೇಳೋ “ಹೇಗನ್ಸತ್ತೆ? ಹೇಗಿತ್ತು ಎಕ್ಸ್ಪೀರಿಯನ್ಸು” ಅನ್ನೋ ಪ್ರಶ್ನೆಗಳನ್ನ ಮೀರಿದ ವಿಷಯಗಳಿವೆ. ಸಿನೆಮಾ ಹಿಂದಿನ ಪರಿಶ್ರಮ,ಯೋಚನೆ-ಆಲೋಚನೆಗಳಿವೆ. ನೀವು ನೋಡಿ ನಿಮಗೆ ಅನ್ನಿಸಿದ್ದನ್ನ ಹೇಳಿ. ಶೇರ್ ಮಾಡಿ.

ಸಿನೆಮಾಸೂತ್ರ ಆನ್ಲೈನ್ ಚಾನಲ್ಲನ್ನ ಬರೀ ಇದೊಂದೇ ಶೋಗೆ ಸೀಮಿತ ಮಾಡೋದಿಲ್ಲ.ಸಧ್ಯದಲ್ಲೇ ಒಂದು ವೆಬ್ ಸೀರೀಸ್ [ಟಿವಿ ಸೀರಿಯಲ್ಗಿಂತ ಉತ್ತಮವಾದ ಗುಣಮಟ್ಟದಲ್ಲಿ] ಶುರು ಮಾಡ್ತೀವಿ. ಅಡುಗೆ ಕಾರ್ಯಕ್ರಮ ಚಾಲು ಆಗತ್ತೆ. ಆನ್ಲೈನ್ ಕನ್ನಡ ಶಾಲೆ ಮಾಡೋ ಆಸೆ ಇದೆ. ಎಲ್ಲವೂ ಉತ್ತಮ,ಸ್ವಮೇಕ್ ಶೋಗಳಾಗಿರತ್ತವೆ. ದೊಡ್ಡ ಕಂಪನಿಗಳಿಗೆ ಸ್ಪಾನ್ಸರ್ಶಿಪ್ ಕ್ಕಾಳು ಹಾಕೋ ಯೋಚನೆ ಇದೆ. ಆ ಯೋಜನೆಗೆ ನಿಮ್ಮಿಂದ ಏನಾದರು ಸಹಾಯ ಆದ್ರೆ ಅದಕ್ಕು ವೆಲ್ಕಮ್.ಈಗ ನಾವು ಹೊತ್ತಿಸಿಕೊಂಡಿರೋ ಬೆಂಕಿಗೆ ತುಪ್ಪ ಸುರೀಬೇಕು. ಆ ತುಪ್ಪದ ಬಾಟ್ಲು ನಿಮ್ ಕೈಲಿದೆ. ಜೈ ಕರ್ನಾಟಕ ಮಾತೆ. ಮತ್ತೆ ಮಾತಾಡೋಣ.. ಮುಂದಿನವಾರ. ಅಲ್ಲಿವರೆಗು ಸರ ಪಟಾಕಿ ಹೊತ್ತಿರಲಿ.. ಸದ್ದು ಜೋರಾಗಿರಲಿ.

 

 

Facebook ಕಾಮೆಂಟ್ಸ್

Rohit Padaki: ಕನ್ನಡದ ಯುವ ಲೇಖಕರಲ್ಲಿ ಒಬ್ಬರು. ದೃಶ್ಯ ಮಾಧ್ಯಮದಲ್ಲಿ ಸಾಕಷ್ಟು ಕಾರ್ಯ ನಿರ್ವಹಿಸಿ ಬಿಗ್ ಬಾಸ್, ವೀಕೆಂಡ್ ವಿತ್ ರಮೇಶ್ ಎಂಬ ಶೋಗಳಿಗೆ ಇವರ ಬರವಣಿಗೆಯಿದೆ. ಇತ್ತೀಚೆಗೆ ಬಿಡುಗಡೆಯಾದ ಆಟಗಾರ ಚಿತ್ರಕ್ಕೆ ಸಂಭಾಷಣೆ ಸಾಹಿತ್ಯ ಇವರದೇ ಆಗಿತ್ತು. ಮೊನಚಾದ ಪದಗಳಿಗೆ ಹೆಸರುವಾಸಿಯಾಗಿರುವ ಇವರ ಬರಹ ಪ್ರಭಾವಶಾಲಿ, ಹಾಗು ಹೊಸತನ ತುಂಬಿರುತ್ತದೆ.
Related Post