ಚಿತ್ರ : ಚಂಡಿ ಕೋರಿ (ತುಳು)
ತಾರಾಗಣ : ಅರ್ಜುನ್ ಕಾಪಿಕಾಡ್, ಕರಿಷ್ಮಾ ಅಮೀನ್, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್ ಮತ್ತಿತರರು.
ನಿರ್ದೇಶನ : ದೇವದಾಸ್ ಕಾಪಿಕಾಡ್
ನಿರ್ಮಾಣ : ಶ್ರೀಮತಿ ಶರ್ಮಿಳಾ ಕಾಪಿಕಾಡ್, ಸಚಿನ್ ಎಸ್.
ಛಾಯಾಗ್ರಹಣ : ಪಿ.ಎಲ್. ರವಿ
ಸಂಕಲನ : ಸುಜೀತ್ ನಾಯಕ್
***
ಇತ್ತೀಚೆಗಿನ ಚಾಲಿಪೋಲಿಲು, ಎಕ್ಕಸಕದ ನಂತರ ಮತ್ತೊಂದು ಪರಿಪೂರ್ಣ ಮನರಂಜನಾತ್ಮಕ ಚಿತ್ರ ಎದುರು ನೋಡುತ್ತಿದ್ದ ತುಳು ಸಿನಿ ಪ್ರೇಮಿಗಳಿಗೆ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ತುಳು ಚಿತ್ರ ‘ಚಂಡಿ ಕೋರಿ’ ಭರಪೂರ ಔತಣವನ್ನೇ ಉಣಿಸಿದೆ. ತೆಲಿಕೆದ ಬೊಳ್ಳಿ, ರಂಗ್ ಸಿನೆಮಾ ನಂತರ ಅರ್ಜುನ್ ಕಾಪಿಕಾಡ್ ನಟಿಸಿದ ಎರಡು ಚಿತ್ರಗಳು ಹೀನಾಯವಾಗಿ ಸೋತ ಬಳಿಕ ಇನ್ನೇನು ತುಳುವಿನಲ್ಲಿ ಅರ್ಜುನ್ ಕಾಪಿಕಾಡ್ ಭವಿಷ್ಯ ಮುಗಿದೇ ಹೋಯಿತು ಅಂದವರಿಗೆ ಉತ್ತರದಂತಿದೆ ‘ಚಂಡಿ ಕೋರಿ’. ಇಂತಹ ಅಮೋಘ ಪ್ರತಿಭೆಯನ್ನ ಸರಿಯಾಗಿ ಬಳಸಿಕೊಳ್ಳಲಿಲ್ಲವಲ್ಲ ಅಂತ ಈ ಹಿಂದಿನ ನಿರ್ದೇಶಕರುಗಳು ಕೈ ಕೈ ಹಿಸುಕಿಕೊಂಡರೂ ಆಶ್ಚರ್ಯವಿಲ್ಲ.
ಚಂಡಿ ಕೋರಿ..
ಹೆಸರೇ ಸೂಚಿಸುವಂತೆ ಯಾವುದೇ ಉಸಾಬರಿಗೆ ಹೋಗದ ತಾನಾಯಿತು ತನ್ನ ಕೆಲಸವಾಯಿತು ಎಂದು ಇರುವಾತನ ಬದುಕಿನ ಕುರಿತ ಚಿತ್ರ. ಹಾಗಂತ ಆತ ಹುಟ್ಟಾ ಚಂಡಿ ಕೋರಿಯಲ್ಲ. ಶಾಲಾ ದಿನಗಳಲ್ಲಿ ಆತ ತುಸು ಹೆಚ್ಚೇ ಅನ್ನುವಷ್ಟು ಪೋಕ್ರಿ ಹುಡುಗ. ಆ ಊರಲ್ಲಿ ಆತನ ಬಗ್ಗೆ ದೂರು ನೀಡದವರಿಲ್ಲ. ನನ್ನ ಮನೆಯ ಕನ್ನಡಿ ಹೊಡೆದ, ಮನೆಯ ಒಳಗೆ ಮಾಲೆ ಪಟಾಕಿ ಹಚ್ಚಿದ, ಶಾಲೆಗೆ ಹೋಗುವ ನನ್ನ ಮಗನ ಚಡ್ಡಿ ಜಾರಿಸಿದ, ಅವನಿಗೆ ಹೊಡೆದ, ಇವನಿಗೆ ಹೊಡೆದ ಅಂತ ದಿನಾ ಒಂದೆರಡು ದೂರುಗಳು ಮಾಮೂಲು. ಮುಂದೆ ತನ್ನಿಂದಾಗಿ ತನ್ನ ಹೆತ್ತವರು ಸಂಕಟಪಡುವುದನ್ನು ನೋಡಲಾಗದೆ ಚಂಡಿಕೋರಿಯಾಗಿ ಬದಲಾದಾತ. ಇಂತವನ ಬಾಳಲ್ಲಿ ಒಂದು ಹುಡುಗಿ ಪ್ರವೇಶ ಮಾಡಿದರೆ ಏನಾಗುತ್ತದೆ ಅನ್ನುವುದೇ ಚಿತ್ರದ ತಿರುಳು.
ನಾಯಕನಾಗಿ ಎರಡು ಭಿನ್ನ ರೀತಿಯ ಮ್ಯಾನರಿಸಂ ಇರುವ ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿರುವ ಅರ್ಜುನ್ ಕಾಪಿಕಾಡ್ (ರಾಘು) ಪ್ರತಿ ದೃಶ್ಯದಲ್ಲೂ ವಾವ್ ಎನಿಸುತ್ತಾರೆ. ಈ ಹಿಂದಿನ ಚಿತ್ರಗಳಲ್ಲಿ ಅರ್ಜುನ್ ಅವರನ್ನು ಕೇವಲ ಆಕ್ಷನ್ ಹೀರೋ ಆಗಿ ನೋಡಿದ್ದ ಜನತೆ ಇಲ್ಲಿ ಲವರ್ ಬಾಯ್ ಆಗಿಯೂ ನೋಡಬಹುದು. ನಾಯಕಿಯನ್ನು ಮೊದಲ ಬಾರಿ ನೋಡಿ ಮೈ ಮರೆತು ಆಕೆಯನ್ನು ಹಿಂಬಾಲಿಸುವ ದೃಶ್ಯವಂತೂ ಅದ್ಭುತ. ಹೆತ್ತವರ ಮಾತು ಚಾಚೂ ತಪ್ಪದೆ ಪಾಲಿಸುವ ಮಗನಾಗಿ, ಪ್ರೇಮಿಯಾಗಿ, ಪರಿಸ್ಥಿತಿಗೆ ಸಿಲುಕಿದ ಅಸಹಾಯಕ ಯುವಕನಾಗಿ, ಪ್ರೀತಿಸಿದ ಹೆಣ್ಣನ್ನು ಪಡೆದೇ ತೀರುವ ಛಲವಾದಿಯಾಗಿ ಹೀಗೆ ಪ್ರತಿ ದೃಶ್ಯ, ಹಾಡು, ಫೈಟ್ ಎಲ್ಲ ಕಡೆ ಅರ್ಜುನ್ ಮಿಂಚುತ್ತಾರೆ.
ಕಣ್ಣಲ್ಲೇ ಮಾತನಾಡುವ ನಾಯಕಿ ಕರಿಷ್ಮಾ ಅಮೀನ್ ಇದು ಆಕೆಯ ಮೊದಲ ಚಿತ್ರವೇ ಎಂದು ಮೂಗಿಗೆ ಬೆರಳಿಟ್ಟು ಕೇಳುವಷ್ಟು ಸೊಗಸಾಗಿ ನಟಿಸಿದ್ದಾರೆ. ನಾಯಕ ರಾಘುವಿನ ನಲ್ಲೆಯಾಗಿ, ಅಸಹಾಯಕನಾಗಿ ಕುಳಿತ ನಾಯಕನನ್ನು ತನ್ನ ದಿಟ್ಟತನದ ಮಾತುಗಳಿಂದ ಬಡಿದೆಬ್ಬಿಸುವ ಪ್ರೇಮಿಯಾಗಿ ಸುಂದರ ಕಂಗಳ ಚೆಲುವೆ ಕರಿಷ್ಮಾ ಭೇಷ್ ಎನಿಸಿಕೊಳ್ಳುತ್ತಾರೆ. ಚಿತ್ರದ ಮತ್ತೊಬ್ಬ ನಾಯಕಿ ರಾಘುವಿನ (ಅರ್ಜುನ್) ತಂಗಿ ಪಾತ್ರದ ಮನಿಷಾ ಕೋಟ್ಯಾನ್ ನಮ್ಮನೆ ಹುಡುಗಿಯಂತೆ ಮುದ್ದಾಗಿ ನಟಿಸಿದ್ದಾರೆ.
ಚಿತ್ರದ ಮೊದಲಾರ್ಧ ಪ್ರೇಕ್ಷಕರಿಗೆ ಕಚಗುಳಿ ಇಟ್ಟರೆ, ದ್ವಿತೀಯಾರ್ಧ ನವರಸ ತುಂಬಿ ವೇಗ ಹೆಚ್ಚಿಸುತ್ತದೆ. ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ‘ಹಾಸ್ಯ’. ನಾಯಕನ ಸಹೋದ್ಯೋಗಿಯಾಗಿ ಸದಾ ಜತೆಯಲ್ಲಿರುವ ದಾಸ್ ಪಾತ್ರದಲ್ಲಿ ದೇವದಾಸ್ ಕಾಪಿಕಾಡ್, ಉತ್ತರ ಭಾರತದ ಹುಡುಗಿಯನ್ನು ಮದುವೆಯಾದ ಜ್ಯೋತಿಷಿ ಪಾತ್ರದಲ್ಲಿ ನವೀನ್ ಡಿ ಪಡೀಲ್, ನಾಯಕಿಯ ಬಾಡಿಗಾರ್ಡ್ ಆಗಿ ಅರವಿಂದ ಬೋಳಾರ್, ನಾಯಕನ ಮಾವ ಹಾಗು ಬೀದಿ ರೌಡಿಯಾಗಿ ಭೋಜರಾಜ್ ವಾಮಂಜೂರು, ಕ್ಯಾಂಟೀನ್ ಮಾಲಕನಾಗಿ ಸತೀಶ್ ಬಂದಲೆ ಹಾಸ್ಯ ಜುಗಲ್ಬಂದಿ ಬಿದ್ದು ಬಿದ್ದು ನಗುವಂತೆ ಮಾಡುತ್ತವೆ. ಚಿತ್ರದ ಖಳನಾಯಕ ಗೋಪಿನಾಥ್ ಭಟ್ ಖದರ್, ಮತ್ತೊಬ್ಬ ಖಳನಟ ಚೇತನ್ ರೈ ಮಾಣಿ ಮ್ಯಾನರಿಸಂ ಸೂಪರ್.
ಚಿತ್ರದ ಪ್ರಮುಖ ಹೈಲೈಟ್ ತಾಂತ್ರಿಕ ವಿಭಾಗ. ಪಿ.ಎಲ್. ರವಿ ಛಾಯಾಗ್ರಹಣದಲ್ಲಿ ಚಿತ್ರದ ಪ್ರತಿ ದೃಶ್ಯಗಳು ಅಮೋಘವಾಗಿ ಮೂಡಿ ಬಂದಿದೆ. ಅಷ್ಟೇ ಅಮೋಘವಾಗಿ ಸಂಕಲನ ಮಾಡಿದ್ದಾರೆ ಸಂಕಲನಕಾರ ಸುಜೀತ್ ನಾಯಕ್. ಸಂಗೀತದ ಜವಬ್ದಾರಿಯೂ ಹೊತ್ತಿರುವ ನಿರ್ದೇಶಕ ದೇವದಾಸ್ ಕಾಪಿಕಾಡ್ ಸಂಗೀತದಲ್ಲಿ ಚಿತ್ರದ ಎಲ್ಲಾ ಹಾಡುಗಳು ಕೇಳಲು ಇಂಪೆನಿಸುತ್ತವೆ. ಮಣಿಕಾಂತ್ ಕದ್ರಿ ಹಿನ್ನಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಶಕ್ತಿ ನೀಡಿದೆ. ಪ್ರತಿ ಹಾಡಿನಲ್ಲೂ ಕಲಾ ವಿಭಾಗದ ಶ್ರೀಮಂತಿಕೆ ಎದ್ದು ಕಾಣುತ್ತದೆ. ಮಾಸ್ ಮಾದ ವಿಭಿನ್ನ ಎನಿಸುವಂತಹ ಸಾಹಸ ಸಂಯೋಜನೆ ಮಾಡಿದ್ದಾರೆ. ಈ ಮೂಲಕ ಉತ್ತಮ ತಂತ್ರಜ್ನರ ಆಯ್ಕೆಯಲ್ಲಿ ಕೂಡ ನಿರ್ದೇಶಕರು ಗೆದ್ದಿದ್ದಾರೆ ಎನ್ನಬಹುದು.
ಚಿತ್ರದಲ್ಲಿ ನೆಗೆಟಿವ್ ಅಂಶಗಳು ಇಲ್ಲವಾ ಅಂತ ನೀವು ಕೇಳಬಹುದು. ಖಂಡಿತಾ ಚಿಕ್ಕ ಪುಟ್ಟ ನೆಗೆಟಿವ್ ಅಂಶಗಳು ಇವೆ, ಆದರೆ ಚಿತ್ರದ ಪಾಸಿಟಿವ್ ಗಳ ಮಧ್ಯೆ ಅವು ಗೌಣವಾಗಿಬಿಡುತ್ತವೆ. ಕೆಲ ಕಡೆ ಹಾಸ್ಯ ದೃಶ್ಯಗಳು ನಾಟಕೀಯ ಎನಿಸುತ್ತವೆ. ದ್ವೀತೀಯಾರ್ಧದ ನಂತರ ಚಿತ್ರಕತೆಯಲ್ಲಿ ಸ್ವಲ್ಪ ಎಡವಿರುವ ಕಾರಣ ಪ್ರೇಕ್ಷಕ ಚಿತ್ರದ ಕ್ಲೈಮ್ಯಾಕ್ಸ್ ಹೀಗೆಯೇ ಇರುತ್ತದೆ ಎಂದು ಮೊದಲೇ ಊಹಿಸಿಬಿಡುತ್ತಾನೆ. ಇಂತಹ ಕೆಲ ಸಣ್ಣ ನ್ಯೂನತೆಗಳನ್ನು ಬಿಟ್ಟರೆ ‘ಚಂಡಿಕೋರಿ’ ಚಿತ್ರ ಖಡಕ್ ಇದೆ. ಕುಟುಂಬ ಸಮೇತ ನೋಡಿ ಆನಂದಿಸಬಹುದು.
ಚಿತ್ರದಲ್ಲಿ ಒಂದು ಡೈಲಾಗ್ ಇದೆ, ‘ಕೆಲವೊರ ಚಂಡಿಕೋರಿಲ ಕಾದುಂಡು’… ಈಗ ಅದು ನಿಜವಾಗಿದೆ.. ಬಹುದಿನಗಳಿಂದ ಒಂದು ಉತ್ತಮ ತುಳು ಚಿತ್ರಕ್ಕೆ ಕಾದಿದ್ದ ಪ್ರೇಕ್ಷಕನ ಕಾತರಕ್ಕೆ ಚಂಡಿಕೋರಿ ವಿರಾಮ ನೀಡಿದೆ. ಚಂಡಿಕೋರಿಯ ಕಾದಾಟಕ್ಕೆ ಪ್ರೇಕ್ಷಕ ದಿಲ್-ಖುಷ್ ಆಗಿದ್ದಾನೆ.
-
Ashwin Amin Bantwal
ashwins999@gmail.com
Facebook ಕಾಮೆಂಟ್ಸ್