Episode 1
ವರುಷ 2006. ಆಗ ತಾನೆ ಇಂಜಿನಿಯರಿಂಗ್ ಮುಗಿಸಿದ್ದೆ. ಜೀವನದಲ್ಲಿ ಏನು ಮಾಡಬೇಕು, ಏನಾಗಬೇಕು ಎಂಬ ಸುಳಿವೂ ಇರಲಿಲ್ಲ. ಒಂದು ವಿಷಯದ ಬಗ್ಗೆ ಮಾತ್ರ ತೀವ್ರವಾದ ಒಂದು ಆಕರ್ಷಣೆ ಇತ್ತು – ಸಿನಿಮಾ. ಏನಾದರೂ ಮಾಡಿ ಚಿತ್ರರಂಗಕ್ಕೆ ಬಂದು ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಆದರೆ ಎಲ್ಲಿ ಪ್ರಾರಂಭಿಸುವುದು? ಹೇಗೆ ಮುಂದುವರಿಯುವುದು ಎಂದು ಗೊತ್ತಿರಲಿಲ್ಲ. ಚಿತ್ರರಂಗದಲ್ಲಿ ಪರಿಚಯಸ್ಥರು ಎಂದು ಯಾರೂ ಇರಲಿಲ್ಲ.
ಆಗ ನನಗೆ ಒಂದು ಚಿತ್ರವು ಹೇಗೆ ತಯಾರಾಗುತ್ತದೆ, ನಿರ್ದೇಶಕನ ಜವಾಬ್ದಾರಿಗಳೇನು ಎಂಬುದರ ಬಗ್ಗೆ ಕಿಂಚಿತ್ತೂ ಗೊತ್ತಿರಲಿಲ್ಲ. ನಟ ನಟಿಯರೇ ತಮ್ಮ ಸಂಭಾಷಣೆಗಳನ್ನು ಬರೆದು ಹೇಳುತ್ತಾರೆ ಎಂದು ತಿಳಿದಿದ್ದೆ! ನನ್ನ ಗೆಳೆಯನೊಬ್ಬನಿಗೂ ಸಿನಿಮಾ ರಂಗಕ್ಕೆ ಬರಬೇಕು ಎಂಬ ಮನಸ್ಸಿತ್ತು. ನಾವಿಬ್ಬರೂ ಸೇರಿ, ಅವಕಾಶಗಳನ್ನು ಹುಡುಕುವುದರಲ್ಲಿ ಒಟ್ಟಿಗೆ ಓಡಾಡಿದೆವು. ಆಗ ಇಂದು ಬೆಳೆದಿರುವಷ್ಟು ತಂತ್ರಜ್ಞಾನ ಬೆಳೆದಿರಲಿಲ್ಲ. ಜನರನ್ನು ಭೇಟಿಯಾಗುವುದು ಅಷ್ಟು ಸುಲಭವೂ ಇರಲಿಲ್ಲ. ಆರ್ಕೂಟ್ ಇತ್ತು. ಆದರೆ ಚಿತ್ರರಂಗದವರು ಆರ್ಕೂಟ್ ನಲ್ಲಿದ್ದದ್ದು ಬೆರಳೆಣಿಕೆಯಷ್ಟು ಜನ ಮಾತ್ರ.
ನಾನು ನನ್ನ ಗೆಳೆಯ ಇಬ್ಬರೂ ನಿರ್ದೇಶಕರನ್ನು, ನಟರನ್ನು ಭೇಟಿಯಾಗಲು ಗಾಂಧಿನಗರದಲ್ಲಿ ಗಂಟೆ ಗಟ್ಟಲೆ ಕಾದದ್ದೂ ಇದೆ. ಆದರೆ ನಮ್ಮ ಅದೃಷ್ಟಕ್ಕೆ ಅವಕಾಶಗಳು ಸಿಗಲಿಲ್ಲ. ಎಲ್ಲರೂ ಹೇಳಿದಂತೆಯೇ ಆಯಿತು – ಸಿನಿಮಾ ಮಾಡುವುದೂ ಸುಲಭವಲ್ಲ, ಸಿನಿಮಾ ಜನರನ್ನು ಭೇಟಿ ಮಾಡುವುದೂ ಸುಲಭವಲ್ಲ. ನನ್ನ ಸಿನಿಮಾ ಯಾನದ ಬಗ್ಗೆ ಮತ್ತೊಮ್ಮೆ ಹೇಳುತ್ತೇನೆ. ಕೆಲವು ತಿಂಗಳುಗಳ ನಂತರ ಏನಾಯಿತು ಎಂಬ ವಿಷಯಕ್ಕೆ ಹೋಗೋಣ.
ಆಗ ನಾವು, ಹೇಗಾದರೂ ಮಾಡಿ ಸಿನಿಮಾ ಜನರನ್ನು ಭೇಟಿಯಾಗಲೇ ಬೇಕು ಎಂಬ ಉದ್ದೇಶದಿಂದ ಬೇಕಾದಷ್ಟು ಸಮಾರಂಭಗಳಿಗೂ ಹೋಗುತ್ತಿದ್ದೆವು. ಟೈಮ್ಸ್ ಆಫ಼್ ಇಂಡಿಯಾ ಏರ್ಪಡಿಸಿದ್ದ ಒಂದು ಸಮಾರಂಭಕ್ಕೆ ಕವಿತಾ ಲಂಕೇಶ್ ರವರು ಮುಖ್ಯ ಅತಿಥಿಯಾಗಿ ಬಂದಿದ್ದರು. ಕಾರ್ಯಕ್ರಮ ಮುಗಿದ ಮೇಲೆ, ಅವರೊಡನೆ ಮಾತನಾಡಲು ಹೋದೆ, ತರಗತಿ ಮುಗಿದ ನಂತರ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಹಿಂದೆ ಧಾವಿಸುವಂತೆ. ಮನಸ್ಸಿನಲ್ಲಿ ಸಂದೇಹಗಳು, ಗೊಂದಲಗಳು ಎಷ್ಟಿತ್ತೆಂದರೆ, ಅದೆಷ್ಟೋ ಪ್ರಶ್ನೆಗಳನ್ನು ಕೇಳಿದೆ. ಆಕೆ ಎಲ್ಲವನ್ನೂ ಬಹಳ ತಾಳ್ಮೆಯಿಂದ ಕೇಳಿ, ಕಡೆಗೆ ನನಗೊಂದು ಸಲಹೆ ಕೊಟ್ಟರು – ನೀನು ನಿರ್ದೇಶಕನಾಗಬೇಕು ಎಂದಿದ್ದರೆ, ಮೊದಲು ಒಂದು ಕಿರುಚಿತ್ರವನ್ನು ಮಾಡು ಎಂದು.
ಒಂದು ಕಿರುಚಿತ್ರ ಮಾಡಬೇಕು ಎಂಬುದು ಸ್ಪಷ್ಟವಾಯಿತು. ಆದರೆ ಎಲ್ಲಿ ಹೇಗೆ ಶುರು ಮಾಡುವುದು? ಕವಿತಾ ಅವರು ಇದನ್ನೂ ವಿವರಿಸಿದ್ದರೆ ಚೆನ್ನಾಗಿತ್ತು ಎನಿಸಿತು. ಆದರೆ ಇದಕ್ಕೆ ಉತ್ತರ ನಾನೇ ಕಂಡುಕೊಳ್ಳಲಿ ಎಂಬುದು ಅವರ ಉದ್ದೇಶವಾಗಿತ್ತು ಎಂದು ಕಾಣಿಸುತ್ತದೆ.
ಕಟ್ ಟು ದ ಕ್ಲೈಮಾಕ್ಸ್: ಕವಿತಾ ಲಂಕೇಶ್ ಅವರೇ, ನಿಮಗೆ ಅನಂತಾನಂತ ಧನ್ಯವಾದಗಳು. ನಾನು ಒಂದು ಕಿರುಚಿತ್ರ ಮಾಡಿದೆ. ಅದಾದ ನಂತರ ಮತ್ತಷ್ಟು ಕಿರುಚಿತ್ರಗಳನ್ನು ಮಾಡಿದೆ. ಅದರಿಂದ ನನಗೆ ರಮೇಶ್ ಅರವಿಂದ್ ಅವರ ಜೊತೆ ಕೆಲಸ ಮಾಡುವ ಅವಕಾಶ ದೊರಕಿತು. ನನ್ನ ಮತ್ತೊಂದು ಕಿರುಚಿತ್ರ ’ಸುಳ್ಳೇ ಸತ್ಯ’, ಕಾನ್ಸ್ ಅಂತರ್ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಕಿರುಚಿತ್ರವಾಯಿತು.
Facebook ಕಾಮೆಂಟ್ಸ್