X

ನೋಡಲೇಬೇಕಾದ 10 ಕನ್ನಡ ಮೂವೀ ಟ್ರೈಲರ್ ಗಳು!

ಕನ್ನಡ ಚಿತ್ರರಂಗಕ್ಕೆ ಹೊಸಬರ ದಂಡೇ ಬರುತ್ತಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ. ಪ್ರಭುಧ್ಧ ನಟರು, ನಿರ್ದೇಶಕರು ಮತ್ತು ಬೆಂಬಲ ನೀಡುವ ನಿರ್ಮಾಪಕರು “ಗಾಂಧಿನಗರ”ದಲ್ಲಿ ಕಾಣಸಿಗುತ್ತಾರೆ. ಇನ್ನು ಕನ್ನಡ ಪ್ರೇಕ್ಷಕನಂತೂ ನಿಜವಾದ ಪ್ರತಿಭೆಗಳ ಬೆನ್ನು ತಟ್ಟುವುದರಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ ಎಂಬುದಕ್ಕೆ ಇತ್ತೀಚಿನ “ರಂಗಿತರಂಗ”, “ಉಳಿದವರು ಕಂಡಂತೆ”, “ಲೂಸಿಯಾ”, “6-5=2” ಮತ್ತಿತರ ಚಿತ್ರಗಳೇ ಸಾಕ್ಷಿ. ಹಾಗೇನೇ ಕನ್ನಡ ಚಿತ್ರಗಳ ಪ್ರೇಕ್ಷಕ ವರ್ಗ ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ್ದೂ ಹೌದು. ಮುಂಬರುವ ದಿನಗಳಲ್ಲಿ ಇಂತಹ ಚಿತ್ರಗಳ ಸಾಲಿನಲ್ಲಿ ನಿಲ್ಲಲು ಕಾದು ನಿಂತಿರುವ ಹಲವು ಚಿತ್ರಗಳ ಡಿಟೈಲ್ಸ್ ಇಲ್ಲಿದೆ:

ಬದ್ಮಾಶ್:

ಪಾತ್ರವರ್ಗ: ಧನಂಜಯ್, ಸಂಚಿತಾ ಶೆಟ್ಟಿ, ಅಚ್ಚುತ ಕುಮಾರ್ ಮತ್ತು ಇತರರು

ಡೈರೆಕ್ಟರ್: ಆಕಾಶ್ ಶ್ರೀವತ್ಸ

“ಡೈರೆಕ್ಟರ್ಸ್ ಸ್ಪೆಷಲ್”, “ರಾಟೆ”, “ಜಯನಗರ 4th ಬ್ಲಾಕ್-ಕಿರುಚಿತ್ರ” ಮೂಲಕ ಪರಿಚಯವಾದ ಪ್ರತಿಭೆ ಧನಂಜಯ್. “ಸುಳ್ಳೇ ಸತ್ಯ” ಎಂಬ ಕಿರುಚಿತ್ರದ ಮೂಲಕ ಬೆಳಕಿಗೆ ಬಂದವರು ಆಕಾಶ್ ಶ್ರೀವತ್ಸ. ಈ ಕಿರುಚಿತ್ರಕ್ಕೆ ಬೆಂಬಲವಾಗಿದ್ದ ರವಿ ಕಶ್ಯಪ್ ಅವರು ಇಲ್ಲಿ ಕೂಡಾ ಬೆನ್ನಿಗೆ ನಿಂತಿದ್ದಾರೆ. ಮಾಸ್ ಕಮ್ ಕ್ಲಾಸ್ ಪ್ರೇಕ್ಷಕನಿಗೆ ತಲುಪುವ ನಿರೀಕ್ಷೆಯಲ್ಲಿ ಈ ಫಸ್ಟ್ ಲುಕ್ ಟ್ರೈಲರ್ ಬಿಡುಗಡೆಯಾಗಿದೆ:

 

ಅರ್ಜುನ:

ಪಾತ್ರವರ್ಗ: ಪ್ರಜ್ವಲ್ ದೇವರಾಜ್, ಭಾಮಾ ಮತ್ತು ಇತರರು

ಡೈರೆಕ್ಟರ್: ಪಿ. ಸಿ. ಶೇಖರ್

“ನಾಯಕ”, “ರೋಮಿಯೋ”, “ಚಡ್ಡಿದೋಸ್ತ್” ಚಿತ್ರಗಳ ಮೂಲಕ ಗುರುತಿಸಿಕೊಂಡವರು ಪಿ. ಸಿ. ಶೇಖರ್. ಹಾಗೇನೇ ನಿರ್ಮಾಪಕರ ಫೇವರೆಟ್ ನಟ ಪ್ರಜ್ವಲ್. ಇವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಥ್ರಿಲ್ಲರ್ ಚಿತ್ರ “ಅರ್ಜುನ” ಟ್ರೈಲರ್ ನಲ್ಲೇ ಕುತೂಹಲ ಮೂಡಿಸಿದೆ.

 

 

ಮಿ. ಐರಾವತ:

ಪಾತ್ರವರ್ಗ: ಛಾಲೆಂಜಿಂಗ್ ಸ್ಟಾರ್ ದರ್ಶನ್, ಊರ್ವಶಿ ರೌಟೆಲಾ, ಪ್ರಕಾಶ್ ರೈ ಮತ್ತು ಇತರರು

ಡೈರೆಕ್ಟರ್: ಎ. ಪಿ. ಅರ್ಜುನ್

2015ರ ಬಹುನಿರೀಕ್ಷೆಯ ಚಿತ್ರ “ಮಿ. ಐರಾವತ”. ಸ್ಟಾರ್ ಡೈರೆಕ್ಟರ್ ಎ. ಪಿ. ಅರ್ಜುನ್ ನಿರ್ದೇಶನದಲ್ಲಿ ಅದ್ಧೂರಿಯಾಗಿ ಮೂಡಿಬಂದಿದೆ. ದರ್ಶನ್ ಅಭಿಮಾನಿಗಳಿಗಂತೂ ಹಬ್ಬ. ಈ ಚಿತ್ರ ಯಾವುದೇ ಹಿಂದಿ, ತಮಿಳು, ತೆಲುಗು ಚಿತ್ರಕ್ಕೆ ಸೆಡ್ಡು ಹೊಡೆಯಬಲ್ಲುದು ಎಂದು ಟ್ರೈಲರ್ ನೋಡಿದಾಗ ಅನಿಸುತ್ತದೆ.


ಗೋಧಿ ಬಣ್ಣ ಸಾಧಾರಣ ಮೈಕಟ್ಟು:

ಪಾತ್ರವರ್ಗ: ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್, ಅನಂತ್ ನಾಗ್ ಮತ್ತು ಇತರರು

ಡೈರೆಕ್ಟರ್: ಹೇಮಂತ್ ರಾವ್

ಫಸ್ಟ್ ಲುಕ್ ಪ್ರೊಮೊದಲ್ಲೇ ಸಂಚಲನ ಮೂಡಿಸಿದ ಚಿತ್ರ “ಗೋಧಿ ಬಣ್ಣ ಸಾಧಾರಣ ಮೈಕಟ್ಟು”. ಪೋಸ್ಟ್ ಪ್ರೊಡಕ್ಷನ್ ಮಾಡುತ್ತಿರುವ ಚಿತ್ರತಂಡ ಚಿತ್ರದ ಪಬ್ಲಿಸಿಟಿ ಕೂಡಾ ಶುರು ಹಚ್ಚಿಕೊಂಡಿದೆ. ರಕ್ಷಿತ್ ಶೆಟ್ಟಿ ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಪ್ರೊಮೊ  ಇಲ್ಲಿ ವೀಕ್ಷಿಸಿ.

 


ಪ್ಲಸ್:

ಪಾತ್ರವರ್ಗ: ಅನಂತ್ ನಾಗ್, ರವಿಶಂಕರ್, ಚೇತನ್ ಚಂದ್ರ ಮತ್ತು ಇತರರು

ಡೈರೆಕ್ಟರ್: ಗಡ್ಡ ವಿಜಿ

ಯೋಗರಾಜ್ ಭಟ್ ಕ್ಯಾಂಪ್ ನಿಂದ ಬಂದವರಲ್ಲಿ ಡೈರೆಕ್ಟರ್ ಗಡ್ಡ ವಿಜಿ ಕೂಡಾ ಒಬ್ಬರು. ಮೊದಲ ಚಿತ್ರ “ದ್ಯಾವ್ರೇ” ಹೇಳಿಕೊಳ್ಳುವಷ್ಟೇನೂ ಓಡದಿದ್ದರೂ ಗಡ್ಡ ವಿಜಿ ಪ್ರಶಂಸೆಗೆ ಪಾತ್ರರಾಗಿದ್ದರು. ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಅನಂತ್ ನಾಗ್ ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ಟ್ರೈಲರ್ ನಲ್ಲಿ ಮಿಂಚುತ್ತಿದ್ದಾರೆ.  ಹಾಡುಗಳು ಜನಮೆಚ್ಚುಗೆಗೆ ಪಾತ್ರವಾಗಿವೆ.


ರಿಂಗ್ ಮಾಸ್ಟರ್:

ಪಾತ್ರವರ್ಗ: ಅರುಣ್ ಸಾಗರ್, ಅನುಶ್ರೀ, ಶೃಂಗಾ, ಶ್ವೇತಾ ದೇಸಾಯಿ

ಡೈರೆಕ್ಟರ್: ವಿಶೃತ್ ನಾಯಕ್

“ಭಂಗಿರಂಗ” ಅನ್ನೋ ವಿಭಿನ್ನ ಹೆಸರಿಟ್ಟುಕೊಂಡು ಶುರುವಾದ ಚಿತ್ರವನ್ನ ಈಗ “ರಿಂಗ್ ಮಾಸ್ಟರ್” ಎಂದು ಹೆಸರು ಬದಲಿಸಿ ಟ್ರೈಲರ್ ಬಿಡುಗಡೆ ಮಾಡಿದೆ ಚಿತ್ರತಂಡ. ಅರುಣ್ ಸಾಗರ್ ವಿಭಿನ್ನ ಪಾತ್ರಗಳಿಗೆ ಹೆಸರಾದವರು. ಟ್ರೈಲರ್ ನೋಡಿದಾಗ ಕೇವಲ ಅರುಣ್ ಸಾಗರ್ ಅಭಿನಯ ನೋಡಲೆಂದೇ ಚಿತ್ರ ನೋಡಬೇಕು ಎನ್ನುವ ಕುತೂಹಲ ಮೂಡೀತು!

 

ದೇವರ ನಾಡಲ್ಲಿ:

ಪಾತ್ರವರ್ಗ: ಪ್ರಕಾಶ್ ರೈ, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ಅಚ್ಚುತ ಕುಮಾರ್ ಮತ್ತು ಇತರರು

ಡೈರೆಕ್ಟರ್: ಬಿ. ಸುರೇಶ

ಕರಾವಳಿ ಕರ್ನಾಟಕದಲ್ಲಿ ನಡೆದ ಘಟನೆಯನ್ನು ಆಧರಿಸಿದ “ಪೊಲಿಟಿಕಲ್ ಥ್ರಿಲ್ಲರ್” ಚಿತ್ರ ಇದಾಗಿದೆ. ಪ್ರಕಾಶ್ ರೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಸಾಮಾನ್ಯವಾಗಿ ಬಿ. ಸುರೇಶರ ಚಿತ್ರಗಳಲ್ಲಿ ಸಾಮಾಜಿಕ ಕಳಕಳಿ ಇರುತ್ತದೆ. ಟ್ರೈಲರ್ ನೋಡಿದಾಗ ಇದು ಸ್ಪಷ್ಟವಾಗಿ ಕಾಣುತ್ತದೆ. ಈಗಾಗಲೇ ಎರಡು ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಬಿಡುಗಡೆ ಏಕೋ ಮುಂದಕ್ಕೆ ಹೋಗುತ್ತಿದೆ. ಟ್ರೈಲರ್ ನ್ನ ಇಲ್ಲಿ ವೀಕ್ಷಿಸಿ.

 

 

ಕೆಂಡಸಂಪಿಗೆ:

ಪಾತ್ರವರ್ಗ: ವಿಕ್ಕಿ, ಮನ್ವಿತಾ ಮತ್ತಿತರರು

ಡೈರೆಕ್ಟರ್: “ದುನಿಯಾ” ಸೂರಿ

ಸಿನಿಮಾದಲ್ಲಿ ವಾಸ್ತವತೆಗೆ ಹತ್ತಿರವಾದಂತಹ ಕಥೆ ಹೇಳುವುದರಲ್ಲಿ ನಿರ್ದೇಶಕ ಸೂರಿ ಎತ್ತಿದ ಕೈ. “ರಾ ಕಾನ್ಸೆಪ್ಟ್” ಇವರ ಫೇವರೆಟ್. ಅಂತೆಯೇ “ಕೆಂಡಸಂಪಿಗೆ” ಕೂಡಾ ಒಂದು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ. ಹಾಡುಗಳು ಯುವಜನತೆಯ ಬಾಯಿಗಳಲ್ಲಿ ನಲಿದಾಡುತ್ತಿವೆ. ಚಿತ್ರದ ಫಸ್ಟ್ ಲುಕ್ ನಿಂದ ಇವತ್ತಿನವರೆಗೂ ಸುದ್ದಿಯಲ್ಲಿರುವ “ಕೆಂಡಸಂಪಿಗೆ” ಇದೇ 11-09-2015ರಂದು ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಮೈ ನವಿರೇಳಿಸುವ ಟ್ರೈಲರ್ ಇಲ್ಲಿದೆ.

 

ಲಿಪ್ ಸ್ಟಿಕ್:

ಡೈರೆಕ್ಟರ್: ಉಮೇಶ್ ಅಂಶಿ

ಹೊಸಬರ ಚಿತ್ರಗಳಲ್ಲಿ ಕೆಲವೊಮ್ಮೆ ಊಹಿಸಲೂ ಸಾಧ್ಯವಾಗದಷ್ಟು ಸೃಜನಶೀಲ ಅಂಶಗಳಿರುತ್ತವೆ. ಅದಕ್ಕೆ ಉದಾಹರಣೆ “ಲಿಪ್ ಸ್ಟಿಕ್”. ಚಿತ್ರದ ಪಾತ್ರವರ್ಗದ ಬಗ್ಗೆ ಅಷ್ಟೇನೂ ಮಾಹಿತಿ ಕೊಡದ ಉಮೇಶ್, ಟ್ರೈಲರ್ ಮಾತ್ರ ರಿಲೀಸ್ ಮಡಿಕೊಂಡಿದ್ದಾರೆ. ಅವರೇ ಹೇಳುವ ಪ್ರಕಾರ ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಬೆಂಗಳೂರಿನ ಜೀವನಶೈಲಿಯ ಮೇಲೆ ಕಥೆ ಹೆಣೆಯಲಾಗಿದೆ. ಟ್ರೈಲರ್, ಇಂಗ್ಲಿಷ್ ಚಿತ್ರ “Sin City”ಯನ್ನು ನೆನಪಿಸುತ್ತದೆ. ಎಡಿಟಿಂಗ್ ಅಮೋಘವಾಗಿದೆ. ಆದಷ್ಟು ಬೇಗ ಚಿತ್ರ ತೆರೆಗೆ ಬರಲಿ ಎಂದು ಕಾಯೋಣ.

 

ಕಹಿ:

ಪಾತ್ರವರ್ಗ: ಸೂರಜ್ ಗೌಡ, ಕೃಷಿ ತಾಪಂಡ ಮತ್ತಿತರರು

ಡೈರೆಕ್ಟರ್: ಅರವಿಂದ್ ಶಾಸ್ತ್ರಿ

ಇಂಡಿಪೆಂಡೆಂಟ್ ಪ್ರಕಾರದ (Indie Genre) ಸಿನಿಮಾಗಳ ಸಾಲಿಗೆ ಮತ್ತೊಂದು ಸೇರ್ಪಡೆ “ಕಹಿ”. “ಲೂಸಿಯಾ” ಪವನ್ ಕುಮಾರ್ ಮನಃಪೂರ್ವಕವಾಗಿ ಹೊಗಳಿರುವ ಚಿತ್ರ ಇದು. ಚಿತ್ರದ ಪ್ರತಿಯೊಂದು ಫ್ರೇಮ್ ಕೂಡಾ ಹೊಸತನದಿಂದ ಕೂಡಿದೆ. ಹಿನ್ನೆಲೆ ಸಂಗೀತ ಯಾವುದೋ ಹೊಸ ಲೋಕಕ್ಕೆ ಕರೆದೊಯ್ಯುತ್ತದೆ. ಈಗಾಗಲೇ ಯೂಟ್ಯೂಬ್ ನಲ್ಲಿ ಅಲೆ ಸೃಷ್ಟಿಸಿರುವ ಟ್ರೈಲರ್, ಚಿತ್ರದ ಬಗ್ಗೆ ನಿರ್ದೇಶಕರ ಶ್ರಮವನ್ನು ಬಿಂಬಿಸುತ್ತದೆ. ಈ ಕೂಡಲೇ ಟ್ರೈಲರ್ ವೀಕ್ಷಿಸಿ.

 

ಈ ಎಲ್ಲಾ ಚಿತ್ರಗಳು ಸ್ವಮೇಕ್ ಅಗಿದ್ದು, ಬೇರೆ ಚಿತ್ರರಂಗಗಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತವೆ ಎಂಬ ನಂಬಿಕೆ ನನ್ನದು. ನಾನಂತೂ ಈ ಚಿತ್ರಗಳನ್ನ ಬುಕ್ ಮಾರ್ಕ್ ಮಾಡಿ ಇಟ್ಟುಕೊಂಡಿದ್ದೇನೆ… ನೀವು?

Facebook ಕಾಮೆಂಟ್ಸ್

Raveesh Kemmai: ವೃತ್ತಿಯಿಂದ ಸಿವಿಲ್ ಇಂಜಿನಿಯರ್. ಪ್ರವೃತ್ತಿಯಿಂದ ಸಿನಿಮಾ ಪ್ರೇಮಿ. ಸಿನಿಮಾ ವಿಮರ್ಶೆ, ವ್ಯಂಗ್ಯಚಿತ್ರ ರಚನೆ ಬಿಡುವಿನ ಸಮಯದ ಹವ್ಯಾಸ. ಉತ್ತಮ ಚಿತ್ರಗಳಿಗೆ ಪ್ರೋತ್ಸಾಹ ಸಿಗಬೇಕು ಎನ್ನುವುದೇ ಬರಹದ ಉದ್ದೇಶ.
Related Post