X
    Categories: ಕಥೆ

ಇದೊಂದು ಹೆಸರಿನ ಹಂಗಿಲ್ಲದ ಕಥೆ..

ಇದೊಂದು ಹೆಸರಿನ ಹಂಗಿಲ್ಲದ ಕಥೆ..

ಮೊದಲೇ ನೀಡುವ ಎಚ್ಚರಿಕೆ ಏನೆಂದರೆ, ಕಥೆ ತುಂಬಾ ದೊಡ್ಡದಾಗಿದೆ. ಇದರಲ್ಲಿನ ಯಾವ ಭಾಗವನ್ನು ತುಂಡರಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ಮೇಲೆ, ಹಾಗೆಯೇ ಬಿಟ್ಟುಬಿಟ್ಟಿದ್ದೇನೆ..

ಟೇಬಲ್ ಮೇಲಿದ್ದ ಫೋನ್ ಹೊಡೆದುಕೊಳ್ಳುತ್ತಿತ್ತು. ಎದುರುಗಡೆಯ ಗೋಡೆ ಮೇಲೆ ಐದು ಟೀವಿಗಳಲ್ಲಿ ಬೇರೆ ಬೇರೆ ಸುದ್ದಿಗಳ ವೀಡಿಯೊ ಫೂಟೆಜ್ ಪ್ರಸಾರವಾಗುತ್ತಿತ್ತು. ಯಾಕೋ ಬೆಳಗ್ಗೆಯಿಂದ ಅವಳ ನೆನಪಾಗುತ್ತಿತ್ತು. ಕಳೆದು ಹೋದ ಪ್ರೀತಿ ನೆನಪಾಗಲು ಸಮಯ ಸ್ಥಳಗಳ ಹಂಗಿರುವುದಿಲ್ಲ. ಎದೆಯೊಳಗೆ ಅಡಿಯಲ್ಲೆಲ್ಲೋ ಕುಳಿತ ನೆನಪುಗಳು ಜ್ವಾಲಾಮುಖಿಯಂತೆ ಸಿಡಿದು ಬರಬಹುದು, ಯಾವುದೇ ಸಮಯದಲ್ಲಿ.

ಫೋನು ನೋಡಲೇ ಬೇಕಿತ್ತು. ದೆಹಲಿಯ ವರದಿಗಾರನ ಕರೆ. ಉತ್ತರಿಸಿ “ಹೇಳು..” ಅಂದೆ.

“ಸರ್ ತುಂಬಾ ಸೆನ್ಸೇಷನಲ್ ನ್ಯೂಸ್ ಇದೆ. ಮೆಸೇಜ್ ನೋಡಿ..” ಎಂದ.

“ಸರಿ..” ಎಂದಷ್ಟೇ ಹೇಳಿ ಕಾಲ್ ಮುಗಿಸಿದೆ. ಹೆಚ್ಚಾಗಿ ನಾವು ಕರೆಗಳಲ್ಲಿ ಜಾಸ್ತಿ ಮಾತಾಡುವದಿಲ್ಲ. ಸುದ್ದಿ ವ್ಯಾಪರವಲ್ಲವೇ? ನಮ್ಮ ಅಂಗಡಿಯಲ್ಲಿ ಗೋಡೆ ಬಾಗಿಲುಗಳೆಲ್ಲ ಕಿವಿಗಳೇ. ಚಾನೆಲ್ ಮುಖ್ಯಸ್ಥನಾದ ನನ್ನ ಬಳಿ ಸುದ್ದಿ ಬಂದಿದೆಯೆಂದರೆ, ನಿಜಕ್ಕೂ ಅದು ವಿಶೇಷವಾಗಿದ್ದೆ  ಇರುತ್ತದೆ.

ಮೆಸೇಜ್ ನೋಡಿದೆ. ಅದು ಕೂಡ ಕೋಡೆಡ್ ಭಾಷೆಯಲ್ಲಿ ಇರುತ್ತದೆ. “ಹೊಸದು ಮತ್ತು ಹಳೆಯದು. ರಾಜಾಜಿ ಚಿಗುರು. ಸಾಗರದಾಚೆ ಒಲವ ಲತೆ. ಆಗಸದಿ ಚಿತ್ತಾರ.”
ಮೊದಲ ಓದಿಗೆ ನನಗೆ ತಿಳಿದಿದ್ದಿಷ್ಟು. ಯಾವುದೋ ಮಂತ್ರಿಯ ಪುತ್ರ ಅಥವಾ ಪುತ್ರಿಯ ಪ್ರೇಮ ಕಥೆ. ವಿದೇಶದಲ್ಲಿ ಓಡಾಡಿದ ಸುಳುಹು  ಮತ್ತು ಫೋಟೋಗಳು ಈ ಮೇಲ್ ನಲ್ಲಿ ಬಂದು ಸೇರಲಿದೆ. ಮುಂದುವರೆಯಲು ನನ್ನ ಅನುಮತಿ ಬೇಕಿತ್ತಷ್ಟೇ.

ನಾನು ಕೂಡಾ ಹಸಿರು ನಿಶಾನೆ ತೋರಿಸಿ ಸುಮ್ಮನಾದೆ. ಸುದ್ದಿ ಅಪ್ಪಳಿಸಿದ ಮೇಲೆ ಆಗಬಹುದಾದ ಗೊಂದಲ ಗಲಾಟೆಗಳಿಗೆ  ರೆಡಿಯಾಗುವಂತೆ ಸಂಬಂಧಪಟ್ಟ ಟೀಮಿನವರಿಗೆ ತಿಳಿಸಿದೆ. ಹದವಾದ ಬಿಸಿ ಬಿಸಿ ಕಾಫಿ ಬೇಕೆನಿಸಿತು. ಹೋಗಿ ಒಂದು ಕಾಫಿ ತಂದು  ಕುಳಿತೆ. ಏನೋ ಒಂಥರಾ ಕಸಿವಿಸಿ. ಯಾಕೋ ಅವಳು ಎಂದಿಗಿಂತಹೆಚ್ಚಾಗಿಯೇ ನೆನಪಾಗುತ್ತಿದ್ದಳು. ತಲೆ ಕೊಡವಿ ಎದುರಿನಲ್ಲಿದ್ದ  ಟೀವಿಗಳ ಕಡೆಗೆ ನೋಡಿದೆ. ನಾಲ್ಕಾರು ಸ್ಕ್ರೀನುಗಳಲ್ಲಿ ಬೇರೆ ಬೇರೆ ಸುದ್ದಿಗಳ ತುಣುಕುಗಳು ಬರುತ್ತಿತ್ತು. ಮುಂದೆ ಪ್ರಸಾರವಾಗಲಿರುವ  ಮುಖ್ಯವಾದ ಸುದ್ದಿಗಳ ಮೇಲೆ ಒಂದು ಕಣ್ಣಿಡಲೆಂದು ಮಾಡಿಕೊಂಡ ವ್ಯವಸ್ಥೆ ಅದು. ಒಂದು ಪರದೆಯಲ್ಲಿ ಯಾವುದೋ ದೊಡ್ಡಚಿತ್ರ ನಟನ ಆರತಕ್ಷತೆ ವೀಡಿಯೊ ಬರುತ್ತಿದೆ. ಓಹೋ ಅಲ್ಲಿಯೂ ಅವಳೇ ಕಾಣಿಸುತ್ತಿದ್ದಾಳೆ. ಅವಳಿಂದ ನಾನು ದೂರವಾದಷ್ಟು ಕಾಲ ನಮ್ಮನ್ನು ಹತ್ತಿರ ತರುತ್ತಿತ್ತು. ಅವಳು ಹಾಲಿ ಗೃಹ ಮಂತ್ರಿಯ ಪತ್ನಿ. ಯೌವ್ವನದಲ್ಲಿ ನನ್ನ ಜೀವನವಾಗಿದ್ದವಳು. ಜೀವನದ ತೀರ ಕೊನೆ ಅಲ್ಲದಿದ್ದರೂ ಹೆಚ್ಚು  ಕಡಿಮೆ ಅದೇ ಕಂಡಿಶನ್ನಿನಲ್ಲಿರುವ ನನ್ನಲ್ಲಿ ಇವತ್ತಿಗೂ ಅವಳ ನೆನಪುಗಳು ಶಾಶ್ವತ.

ಚಿತ್ರನಟನ ಆರತಕ್ಷತೆಗೆ ಗೃಹ ಮಂತ್ರಿ ಕುಟುಂಬ ಸಮೇತ ಬಂದಿದ್ದರು. ಗೃಹ ಮಂತ್ರಿ, ಅವನ ಪತ್ನಿ ಮತ್ತು ಅವಳ ಮಗಳು! ಹೀಗಿದ್ದ ನಮ್ಮ ಬದುಕಿನಲ್ಲಿ ಕೆಲವು ವರ್ಷಗಳ ಹಿಂದೆ ಸಾಯುವಷ್ಟು ಪ್ರೀತಿ ಇತ್ತು. ಸುಮ್ಮನೆ ಮನಸ್ಸು ಹಿಂದಕ್ಕೋಡಿತು. ಹಿಡಿದು ತಡೆಯುವ ಮನಸಾಗಲಿಲ್ಲ. ವರ್ತಮಾನದಲ್ಲಿ ಏನೂ ಇಲ್ಲದವನಿಗೆ, ಭವಿಷ್ಯದ ಬಗ್ಗೆ ಆಸೆ ಮತ್ತು ಭಯವಿಲ್ಲದವನಿಗೆ, ಇತಿಹಾಸವೇ ಇಷ್ಟವಾಗುತ್ತದೆ.

ಆಗಿನ್ನೂ ನಾನು ಕಾಲೇಜು ಓದುತ್ತಿದ್ದೆ. ಹುಟ್ಟಿದಾಗಿಂದ ಆಶ್ರಮಗಳಲ್ಲೇ ಬೆಳೆದ ನನಗೆ ಕುಟುಂಬ, ನೆಂಟರು, ಬಾಂಧವ್ಯ ಹೀಗೆಲ್ಲ ಏನು  ಅರ್ಥವೇ ಇರುತ್ತಿರಲಿಲ್ಲ. ಮನುಷ್ಯ ಮನುಷ್ಯರ ನಡುವೆ ಲೆಕ್ಕಾಚಾರವೇ ಇಲ್ಲದೆ, ಲಾಭದ ಆಸೆ ಇಲ್ಲದೆ ಯಾವ ಸಂಬಂಧವು ಇರಲು  ಸಾಧ್ಯವೇ ಇಲ್ಲ ಎಂದು ನನ್ನಷ್ಟಕ್ಕೆ ನಾನೇ ಜೀವನ ಸತ್ಯಕಂಡುಕೊಂಡಂತೆ ಆಡುತ್ತಿದ್ದೆ. ಚಿಕ್ಕಂದಿನಿಂದ ಅವರಿವರ ಮನೆಗಳಲ್ಲಿ, ಕೆಲ ಆಶ್ರಮಗಳಲ್ಲಿ ಬೆಳೆದು ಇಂಜಿನಿಯರಿಂಗ್ ಸೇರಿದ್ದೆ. ಸಂಜೆ ಹೊತ್ತು ಲೈಬ್ರರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದೆ. ಊಟ ತಿಂಡಿ ಖರ್ಚುಗಳು ಹೀಗೆ ಕಳೆಯುತ್ತಿತ್ತು.

ಶ್ರಾವಣದ ವರೆಗೆ ಬಾರದೆ ಆಟ ಆಡಿಸಿ ಶ್ರಾವಣದೊಂದಿಗೆ ಬಂದ ಜೋರು ಮಳೆಗಾಲದ ಸಂಜೆ ಅದು. ಲೈಬ್ರರಿಯಲ್ಲಿ ಒಬ್ಬನೇ ಕುಳಿತಿದ್ದೆ.  ಯಾವುದೋ ಪುಸ್ತಕ ಕೈಯ್ಯಲ್ಲಿತ್ತು. ಇನ್ನೇನು ಮಳೆ ಬಂದೆಬಿಡುತ್ತದೆ ಅಥವಾ ಬಂದೇಬಿಟ್ಟಿತು ಎಂಬ ಸನ್ನಿವೇಶದಲ್ಲಿ ಬಾಗಿಲ ಬಳಿ  ಸದ್ದಾಯಿತು. ಕಣ್ಣೆತ್ತಿ ನೋಡಿದರೆ ಶುಭ್ರ ಬಿಳಿ ಬಟ್ಟೆಯ ಸಲ್ವಾರ್ ಧರಿಸಿ ಕಡು ನೀಲಿ ಬಣ್ಣದ ದುಪ್ಪಟ್ಟಾದಲ್ಲಿ ಅವಳಿದ್ದಳು. ಎದೆಯ ಬಾಗಿಲ ಬಳಿ ಬಂದು ಯಾರೋ ನಿಂತ ಹಾಗೆ. ಪಟಪಟನೆ ಮಳೆ ಬಂದ ಸದ್ದು ಹೊರಗೆ. ಆಗಷ್ಟೇ ಮಿಂದು ಬಂದಂತಿದ್ದ ಆಕೆಯ ಗುಂಗುರು ಕೂದಲು ಹರಡಿ ನಿಂತಿತ್ತು. ಜಲಪಾತದ ಜಲಧಾರೆಯಂತಿದೆ ಅವಳ ಕೂದಲ ಸೊಬಗು ಎನಿಸಿತು. ಇಲ್ಲ ಅವಳ ಬಟ್ಟೆ ಮತ್ತು ಬಣ್ಣಕ್ಕೆ ಗರಿ ಬಿಚ್ಚಿದ ನವಿಲು ಅವಳೇನೋ ಎನಿಸಿತು. ಪುಸ್ತಕಗಳ ನಡುವೆ ನಾನು ಕವಿಯಾದೆನ? ಅವಳು ಕಾವ್ಯ ಕನ್ನಿಕೆಯಾ?

ಸುಮ್ಮನೆ ಒಳ ಬಂದು ಕುಳಿತಳು. ಲೈಬ್ರರಿಯ ಒಳಗೆ. ಈ ಹೆಣ್ಣು ಮಕ್ಕಳು ಯಾವಾಗಲು ಹೀಗೆ. ಸುಮ್ಮನೆ ಬಂದು ಕುಳಿತುಬಿಡುತ್ತಾರೆ  ಎದೆಯ ಒಳಗೆ ಕೂಡ. ಯಾವುದೋ ಪತ್ರಿಕೆ ತಿರುವಿ ಹಾಕುತ್ತಾ ಮಳೆ ನಿಲ್ಲುವದನ್ನೇ ಕಾಯ ಹತ್ತಿದಳಾಕೆ. ನಾನು ಮಳೆ ನಿಲ್ಲದೆ  ಇರುವುದನ್ನು ಕಾಯುತ್ತಿದ್ದೆ. ಒಂದೇ ಸಂಜೆಯಲ್ಲಿ ನಾನುಕವಿಯಾಗಿದ್ದೆ. ಒಮ್ಮೆ ಪುಸ್ತಕವನ್ನು, ನಡುವೆ ಅವಳನ್ನು ಕದ್ದು ನೋಡುತ್ತಿದ್ದೆ. “ಹೇ,ಒಮ್ಮೆ ನೋಡಿಬಿಡು ಕಡೆಯಗಣ್ಣಲ್ಲಿ ಮತ್ತೆ ಬರದಿರಬಹು ಎಂದಿಗೂ ನೀನಿಲ್ಲಿ”,  ಎಂಬ ಎರಡು ಸಾಲು ಗೀಚುವಲ್ಲಿಗೆ ಮಳೆ ರಾಯನ ಅಬ್ಬರ ಇಳಿದಿತ್ತು. ಹುಡುಗಿ ಹೊರಟಿದ್ದಳು. ಆದರೆ ಹೋಗುವ ಮೊದಲು ಆಕೆ ಮಾಡಿದ ಒಂದು ತಪ್ಪು ನನ್ನನ್ನು ನಾನು ಕಳೆದುಕೊಳ್ಳುವಂತೆ ಮಾಡಿತು. ತಿರುಗಿ ಒಂದು ತುಂಟ ನಗೆಯನ್ನು ಬಿಸಾಕಿ ಹೋದಳು. ಅವಳು ತುಟಿಯಲ್ಲಿನಕ್ಕರು ನನಗೆ ಆಕೆ ಕಣ್ಣಲ್ಲೇ ನಕ್ಕಂತೆ ಭಾಸವಾಯಿತು. ಕೆನ್ನೆಯ ಗುಳಿ ನನ್ನನ್ನು ಕೊಂದು  ಹಾಕಿತ್ತು.

ಅವಳಪ್ಪ ದೊಡ್ಡ ಸಿರಿವಂತ. ದುಡ್ಡಿನಲ್ಲು, ಜ್ಞಾನದಲ್ಲೂ. ಮನೆಯಲ್ಲಿ ಸಾಲು ಸಾಲು ಹೊತ್ತಿಗೆಗಳಿವೆ. ಆದರು ಆಕೆ ಲೈಬ್ರರಿಯ ಸದಸ್ಯತ್ವ  ಬೇಡಿ ಬಂದಳು. ಹಾಗೇಕೆ ಬಂದಳು? ನಿಶ್ಚಿತವಾಗಿಯೂ ಆಕೆ ನನ್ನ ನೋಡ ಬಯಸಿ ವಾಪಸು ಬಂದಳು ಎಂದು ನಾನು ನಂಬಿದೆ. ಇಂತಹ ಹುಚ್ಚು ತುಂಟ ನಂಬಿಕೆಗಳು ನನ್ನಲ್ಲಿ ಹೊಸದಾಗಿಆರಂಭವಾಗಿದ್ದವು. ಮೊದಲ ಪ್ರೇಮದ ಪರಿ ಅದು. ಲೈಬ್ರರಿಯ ಸದಸ್ಯತ್ವ ಪಡೆದುಕೊಂಡ ಅವಳು ವಾರಕ್ಕೆ ಒಮ್ಮೆ ಬರುತ್ತಿದ್ದಳು. ಬರುವಾಗಲೆಲ್ಲ ದೊಡ್ಡ ಸಂಭ್ರಮವೊಂದನ್ನು ಹೊತ್ತು  ತಂದಂತೆ ಭಾಸವಾಗುತ್ತಿತ್ತು. ಹಳೆಯ ಕಷ್ಟಗಳೆಲ್ಲ ಕಳೆದು ಹೊಸ ಸುಖಕ್ಕೊಂದಕ್ಕೆ ತೆರೆದುಕೊಳ್ಳಲು ಬದುಕು ಹಾತೊರೆಯುತ್ತಿತ್ತು. ನಗು
ಮತ್ತು ಒಂದೆರಡು ಮಾತಿನ ಹೊರತಾಗಿ ನಮ್ಮ ಮಧ್ಯೆಸ್ನೇಹವೇನು ಆರಂಭವಾಗಿರಲಿಲ್ಲ.

“ಹೊಸತನದ ಹಾಡಿಗೆ ಕಾದಿದೆ ಹೃದಯ ತುಳಿಯೋಣವೇ ನಾವು ಸ್ನೇಹದಾ ಹಾದಿಯ?”

ಹೀಗೆಂದು ಎರಡು ಸಾಲು ಬರೆದು ಪುಸ್ತಕವೊಂದನ್ನು ಕೊಡುವ ಮೊದಲು ಬಚ್ಚಿಟ್ಟು ಕೊಟ್ಟೆ. ಮುಂದಿನ ಒಂದು ವಾರದ ನಂತರ ಆಕೆ  ವಾಪಸು ಕೊಟ್ಟಾಗ ಇಡೀ ಪುಸ್ತಕದ ಪ್ರತೀ ಪೇಜನ್ನು ಹುಚ್ಚನಂತೆ ಹುಡುಕಿಬಿಟ್ಟೆ. ಎಲ್ಲಾದರು ಒಂದು ಚೀಟಿ ಸಿಕ್ಕಿತಾ ಎಂದು. ಉಹುಂ. ಮತ್ತೊಂದು ಮಳೆಯ ಸಂಜೆ ನಾನು ಲೈಬ್ರರಿಯಿಂದ ಹೊರಡುವಾಗ ಬಂದಿದ್ದಳು. ನಾನು ಮನೆಗೆ ಹೊರಡಲು ಮಳೆ ಅಡ್ಡಿಯಾಗಿತ್ತು. ಆದರೆಅವಳ ಬಳಿ ಕೊಡೆ ಇತ್ತಲ್ಲ. ಅವಳೇ ಕರೆದಳು. ಒಂದೇ ಕೊಡೆಯಲ್ಲಿ ನಾವು ನಡೆದೆವು, ನಾನಿದ್ದ ಆಶ್ರಮದ ವರೆಗೆ. ಧೋ ಎಂದು ಬರುತ್ತಿದ್ದ ಮಳೆಯಲ್ಲಿ ಇಷ್ಟ ಪಟ್ಟ ಹುಡುಗಿಯ ಜೊತೆಒಂದೇ ಕೊಡೆಯಲ್ಲಿ ಜೊತೆಯಾಗಿ ನಡೆಯುತ್ತಿದ್ದರೆ, ನನಗೆ ಇದೇನಾ ಸ್ವರ್ಗ ಎನಿಸಿತು.  ಆವತ್ತಿನಿಂದ ಶುರುವಾದ ನಮ್ಮ ಸ್ನೇಹ ದಿನಾ ಬೆಳಿಗ್ಗೆ ಯೂನಿವರ್ಸಿಟಿ ಕ್ಯಾಂಟೀನಿನಲ್ಲಿ ಹರಟುವ ಮಟ್ಟಕ್ಕೆ ಬೆಳೆಯಿತು. ನಮ್ಮ ಇಂಜಿನಿಯರಿಂಗ್ ಕಾಲೇಜಿನ ಪಕ್ಕ ಅವಳ ಯುನಿವರ್ಸಿಟಿ. ಅವಳು ಸಾಹಿತ್ಯ ಓದುತ್ತಿದ್ದಳು. ಬದುಕು ಅದೇಕೋ ಬಹಳ ಸುಂದರವಾಗಿತ್ತು. ಮುಂದೆ ನಮ್ಮ ಸ್ನೇಹ ಪ್ರೀತಿಯ ಹಂತ ತಲುಪಲು ಕೆಲವೇ ತಿಂಗಳು ಸಾಕಾಯಿತು. ಯುನಿವರ್ಸಿಟಿಯ ಹಿಂದಿನ ಕಾಡಿನಂತ  ಜಾಗದಲ್ಲಿ ನಾವು ಪ್ರೇಮ ಪಕ್ಷಿಗಳಂತೆ ಇರುತ್ತಿದ್ದೆವು.ನನ್ನ ಕಣ್ಣುಗಳು ತುಂಬಾ ವಿಭಿನ್ನವಾಗಿದ್ದವು. ಆಕೆ ಯಾವಾಗಲು ಹೇಳುತ್ತಿದ್ದಳು,  ಮೊದಲ ದಿನ ನಿನ್ನ ಈ ಕಂದು ಕಣ್ಣುಗಳನ್ನು ನೋಡಿದಾಗ ನನಗೆ ಕಳೆದು ಹೋದಷ್ಟು ಖುಷಿಯಾಗಿತ್ತು ಎಂದು. ನನ್ನ ಕವನದ ಸಾಲುಗಳು  ಬೆಳೆಯಲಾರಂಭಿಸಿದವು. ಇಂಜಿನಿಯರಿಂಗ್ ಪಕ್ಕಕ್ಕೆ ಹೋಗಿ ಸಾಹತ್ಯ ಸೆಳೆಯಿತು. ಆಕೆಯೇ ಕೆಲ ಬಾರಿಬದುಕಿನ ಬಗ್ಗೆ ಮಾತನಾಡುತ್ತಿದ್ದಳು. ನಾನು ಬಹುತೇಕ ಸಮಯ ಕನಸುಗಳಲ್ಲೇ ಕಳೆಯುತ್ತಿದ್ದೆ. ಕನಸುಗಳನ್ನು ಪಕ್ಕಕ್ಕೆ ಸರಿಸಿ ಬದುಕಿನ ಬಣ್ಣ ನೋಡುವುದು ಕಷ್ಟಕರವಾಗಿತ್ತು. ಅವಳಪ್ಪ ಊರಿಗೆ ದೊಡ್ಡ ಶ್ರೀಮಂತ. ನಾನು ಊಟಕ್ಕಿಲ್ಲದ ಅನಾಥ, ಆಶ್ರಮದ ಕೂಸು. ಆಗಸ ಮತ್ತು ಭೂಮಿಗಳು ಕೂಡುವ ಪ್ರೀತಿಯ ಸಾಗರದ ದಡದಲ್ಲಿ ನಾವಿದ್ದೆವು. ಭೂಮಿ ಆಗಸಗಳು ಒಂದಾದಂತೆ ಕಂಡರೂ, ಸಮುದ್ರ ನಡುವೆ ದೊಡ್ಡದಿತ್ತು.

“ನೀವು ಇಟ್ಟಿದ್ದ ಚೀಟಿ ಓದಲು ನಾನು ಪುಸ್ತಕವನ್ನು ತೆರೆದಿದ್ದರೆ ತಾನೇ..? ನಾನು ಬರುತ್ತಿದ್ದುದು ನಿಮ್ಮ ನೋಡುವ ಆಸೆಯಿಂದ..” ಎಂದು ತೆರೆಯದಿದ್ದ ಪುಸ್ತಕದ ಸತ್ಯವನ್ನು ನನ್ನೆದುರು ತೆರೆದಿದ್ದಳು ಮುಂದೊಂದು ದಿನ, ಯೂನಿವರ್ಸಿಟಿಯ ಮರದಕೆಳಗೆ ಆಕೆಯನ್ನು ತಬ್ಬಿ  ಕುಳಿತಿದ್ದಾಗ. ಆಕೆ ಕಿವಿಯಲ್ಲಿ ಈ ಸತ್ಯ ಉದುರಿಸುತ್ತಿದ್ದರೆಆಕೆಯ ಬಿಸಿಯುಸಿರಿಗೆ ನಾನು ಉನ್ಮಾದ ಬಂದವನಂತೆ ಆಕೆಯನ್ನು ಮತ್ತಷ್ಟು  ಬಿಗಿಯಾಗಿ ತಬ್ಬಿದೆ. ಪ್ರೀತಿ ಕೊಡುವ ಖುಷಿಯೇ ಇಂತವು.

ಅದೊಂದು ದಿನ ಆಕೆಯ ಅಪ್ಪ ಏನೋ ತುರ್ತಿಗೆ ಮಗಳನ್ನು ಕರೆದೊಯ್ಯಲು ಬಂದಾಗ ಅರ್ಥವಾಗಿತ್ತು. ಮಗಳು ಕ್ಲಾಸಿನಲ್ಲಿ ಇಲ್ಲ ಎಂಬ ವಿಷಯ. ಸಂಜೆಯೇ ಅವಳ ಮನೆಯಲ್ಲಿ ಯುದ್ಧ ಘೋಷಣೆ ಆಗಿತ್ತು. ಆಕೆಯ ಕಾಲೇಜು ಅವತ್ತಿಗೆ ಮುಗಿದಿತ್ತು. ಆವತ್ತು ಸಂಜೆಯವರೆಗೂ ನನ್ನ ತೋಳುಗಳಲ್ಲಿ ಕುಳಿತು ಕಲೆತು ಕಳೆದು ಹೋಗಿದ್ದ ಅವಳಿಗೆ ಆ ಸಂಜೆಯೇ ನನ್ನನ್ನು ಮರೆಯಲು ಆಜ್ಞೆ ಆಗಿತ್ತು. ಮುಂದಿನ ಕೆಲ ವಾರದ ಒಳಗೆ ವಿವಾಹಕ್ಕೆ ಹುಡುಕಾಟ ಆರಂಭವಾಗಿತ್ತು. ಆಕೆ ಕಾಲೇಜು ಕಡೆ ಬರದೆ ಇರುವದನ್ನು ಕಂಡು ಹುಚ್ಚೆದ್ದು ಹೋದೆ ನಾನು. ಅಕ್ಷರಶಃ ಬದುಕು ಮೂರಾಬಟ್ಟೆಯಾಯಿತೇನೋ ಎಂಬಂತೆ ಭಾಸವಾಯಿತು. ಯೂನಿವರ್ಸಿಟಿಯ ಕಾಡಿನಲ್ಲಿಕಳೆದುಕೊಂಡ ಪ್ರೀತಿಯ ನೆನಪಲ್ಲಿ ಕುಳಿತಿರುತ್ತಿದ್ದೆ. ಆಕೆಯ ನೆನಪುಗಳು ಮಾತ್ರ ನನ್ನ ಆಸ್ತಿ ಆಗಿದ್ದವು. ಸುಮ್ಮನೆ ವಿಷಾದ ರಾಗದ ಪದ್ಯಗಳನ್ನು ಬರೆಯುತ್ತಿದ್ದೆ. ಆಗಲೇ ಅವಳ ಗೆಳತಿ ಹೇಳಿದಳು, ಇನ್ನೊಂದು ತಿಂಗಳಲ್ಲಿ ಅವಳು ಮದುವೆಯಾಗಿ ದೂರದ ಊರಿಗೆ ಹೋಗಲಿದ್ದಾಳೆ ಎಂದು. ಯಾವುದೋ ರಾಜಕಾರಣಿಯ ಮಗನ ಜೊತೆಗಂತೆ ಎಂದು.

ಮದುವೆಯ ಹಿಂದಿನ ರಾತ್ರಿ ನಾನು ಅವಳ ಮನೆಗೆ ಹೋಗುವ ಉಪಾಯ ಮಾಡಿದೆ. ಕೊನೆಯಲ್ಲಿ ಒಂದು ಬಾರಿ ಆಕೆಯನ್ನು ನೋಡಿ ಬಿಡಬೇಕೆಂದು. ಅದು ಯಾವ ದೇವರು ಕೊಟ್ಟ ಧೈರ್ಯವೋ, ಹೋಗಿಯೇ ಬಿಟ್ಟೆ. ಹಾಗು ಹೀಗೂ ಅವಳಿದ್ದ ಕೋಣೆಗೆ ಪ್ರವೇಶಿಸಿದವನಿಗೆ  ಅವಳು ಅಳುತ್ತ ಕುಳಿತಿದ್ದು ಕಾಣಿಸಿತ್ತು. ನೆಗೆದು ಬಂದು ನನ್ನ ತೆಕ್ಕೆಗೆ ಬಿದ್ದಳು. ಆವತ್ತು ನಾವು ಮಾತೆ ಆಡಲಿಲ್ಲ. ಸುಮ್ಮನೆ ತಬ್ಬಿ  ಕುಳಿತುಬಿಟ್ಟೆವು. ಓಡಿಸಿಕೊಂಡು ಹೋಗುವ ಸ್ಥಿತಿಯಲ್ಲಿ ನಾನಿರಲಿಲ್ಲ. ತಬ್ಬಿ ಬೀಳ್ಕೊಡುವುದಷ್ಟೇ ನಮಗಿದ್ದ ಆಯ್ಕೆ. ಇಬ್ಬರು ಕಣ್ಣೀರಿಡುತ್ತಾ ಕುಳಿತೆವು. ಆವತ್ತು ಅಲ್ಲಿ ಕೆಲ ಸಮಯದಲ್ಲಿ ನಾವು ಪ್ರೀತಿಯ ಉತ್ತುಂಗ ತಲುಪಿಬಿಟ್ಟೆವು. ಒಂದಾದೆವು. ನಮ್ಮ ಪ್ರೀತಿ ಯಾವತ್ತಿಗೂ ಕಲ್ಮಶವಾಗಿರದಿದ್ದ ಕಾರಣ ಅಲ್ಲಿ ನಾವು ತಪ್ಪಾಗಿ ವರ್ತಿಸಿದೆವು ಎಂಬುದು ನನಗೆ ಇವತ್ತಿಗೂ ಅನಿಸುತ್ತಿಲ್ಲ. ಭಾವಗಳ ಬಂಧಕ್ಕೆ, ಪಾಪ ಪುಣ್ಯಗಳ ಹಂಗಿಲ್ಲ. ಅದೊಂದು ಕಾಡಿನ ಹೂವಿನ ಹಾಗೆ. ಮಧ್ಯ ರಾತ್ರಿ ಕಳೆದ ಮೇಲೆ ನಾನು ಹೊರ ನಡೆದು ಬಂದುಬಿಟ್ಟೆ. ಆವತ್ತೇ ಕೊನೆ, ಕಣ್ಣಲ್ಲಿನೀರು ಇಳಿದಿದ್ದು.

ಆಕೆಗೆ ಮದುವೆ ಆಗಿ ಬೇರೆ ಊರಿಗೆ ನಡೆದಳು. ನಾನು ಇಂಜಿನಿಯರಿಂಗ್ ಮುಗಿಸಬೇಕೆಂದು ಮುಗಿಸಿದೆ. ನನಗೆ ಅದರಲ್ಲಿ ಇನ್ಯಾವ  ಆಸಕ್ತಿಯು ಉಳಿದಿರಲಿಲ್ಲ. ಆಕೆ ನನ್ನಲ್ಲಿ ಸಾಹಿತ್ಯದ ಗಿಡ ಬೆಳೆಸಿದ್ದಳು. ಅದರ ನೆರಳಲ್ಲೇ ಬದುಕಬೇಕೆಂದು ನಿಶ್ಚಯಿಸಿಬಿಟ್ಟೆ. ಜೀವನ ಪೂರ್ತಿ ಅವಳ ನೆನಪೇ ಸಾಕು ಎಂಬ ಹುಚ್ಚು ಚಟಕ್ಕೆ ಬಿದ್ದೆ. ಮುಂದೆ ಊರು ಬದಲಾಯಿತು. ಅಕ್ಷರಗಳ ಜೊತೆ ಬದುಕುವುದು ಸುಲಭವಲ್ಲ. ಆದರೆ  ಛಲ ಬಿಡಲಿಲ್ಲ. ಕೆಲವರು ಕಾಫಿ ತಿಂಡಿ ಕೊಟ್ಟು ಬರೆಸಿಕೊಂಡರು. ಕೆಲವರು ಕಾಸು ಕೊಟ್ಟರು. ಕೆಲವರು ಕೊಡುತ್ತೇನೆ ಅಂದರು. ಸುದ್ದಿ  ಬರೆಯಲು ಶುರು ಮಾಡಿದೆ. ಸುದ್ದಿಮನೆಗಳಲ್ಲಿ ದುಡಿಯಲು ಶುರು ಮಾಡಿದೆ. ಸುದ್ದಿವ್ಯಾಪಾರದ ರಾಗಬದಲಾಗಿ ನ್ಯೂಸು ಚಾನೆಲ್ಲುಗಳು ಅಬ್ಬರಿಸಲು ಆರಂಭಿಸಿದವು. ಬದುಕು ಮತ್ತೆ ಬದಲಾಯಿತು. ಆದರೆ ಮತ್ತೆ ಮತ್ತೆ ಮರೆತೇ ಎಂದರು ನೆನಪು ನೆನಪಾಗುತ್ತಿತ್ತು.
ಮದುವೆಯಿಂದ ಮತ್ತು ಇನ್ಯಾವುದೇ ಸ್ತ್ರೀಯಿಂದ ನಾನು ದೂರ ಉಳಿದೆ.

ಅವಳ ಬದುಕು ಕೂಡ ಬದಲಾಗುತ್ತಿತ್ತು. ಅವಳಿಗೆ ಒಂದು ಮಗಳು ಹುಟ್ಟಿದ್ದಳು. ಅವಳ ಗಂಡ ಮಂತ್ರಿಯಾದಾಗ ಅವನನ್ನು ಮೊದಲ  ಬಾರಿಗೆ ಸಂದರ್ಶಿಸಲು ಹೋಗಿದ್ದೆ. ಅಲ್ಲಿ ನೋಡಿದ್ದೇ ಅವಳನ್ನು ಮತ್ತು ಅವಳ ಮಗಳನ್ನು. ಅವಳ ಮಗಳ ಕಂದು ಬಣ್ಣದ ಕಣ್ಣುಗಳನ್ನು.  ಮಂತ್ರಿಯ ಬದುಕಿನ ಆಗ್ಗೆ ಬರೆಯುವಾಗ ಅವನಿಗೆ ಮದುವೆಯಾಗಿ ಒಂಬತ್ತೇ ತಿಂಗಳಿಗೆ ಮಗಳು ಹುಟ್ಟಿದ್ದಳು ಎಂದು ತಿಳಿದಿತ್ತು, ಮತ್ತು  ಸುದ್ದಿ ಮನೆಯಲ್ಲಿ ಮಾನ್ಯ ಮಂತ್ರಿ ಪುರುಷೋತ್ತಮನಲ್ಲ ಎಂಬ ಜೋಕುಗಳು ಇದ್ದವು. ಇವೆಲ್ಲದರ ಮೇಲಾಗಿ, ಅವಳ ಕಂದು ಕಂಗಳು ಏನೋ ಸತ್ಯ ಹೇಳುತ್ತಿದ್ದವು. ಅವಳನ್ನು ನೋಡಿದ ದಿನ ಮೊದಲ ಬಾರಿಗೆ ನಾನು ಮತ್ತೆ ನನ್ನ ಕಣ್ಣಲ್ಲಿ ನೀರುಕಂಡೆ. ಮುಂದೆ ಅವಳ ಗಂಡ ರಾಜಕೀಯದಲ್ಲಿ ಮೇಲೆ ಬಂದಂತೆ ನಾನು ಸುದ್ದಿ ಮನೆಯ ಮೆಟ್ಟಿಲುಗಳನ್ನು ಏರಿ ಮೇಲೆ ಬಂದೆ. ಮತ್ತೆ ಮತ್ತೆ ಅವಳ ಹತ್ತಿರ  ಓಡಾಡಿಕೊಂಡರು, ಅವಳನ್ನು ಮಾತನಾಡಿಸುವ ಧೈರ್ಯ ಬರಲೇ ಇಲ್ಲ.

ಮತ್ತೆ ಫೋನ್ ಸದ್ದು ಮಾಡಿತು. ಒಹ್ ಛೆ ಕಳೆದು ಹೋಗಿದ್ದೆ ಎಂದು ತಲೆ ಕೊಡವಿಕೊಂಡು ಈ ಲೋಕಕ್ಕೆ ಬಂದೆ. ಕರೆ ಮುಗಿದ ತಕ್ಷಣ ಟೀವಿಗಳ ಕಡೆ ನೋಡಿದೆ. ಮತ್ತದೇ ಆರತಕ್ಷತೆಯ ದೃಶ್ಯಗಳು ಬರುತ್ತಿದ್ದವು. ಗೃಹ ಮಂತ್ರಿಯ ಕುಟುಂಬ ಚಿತ್ರನಟನಿಗೆ ಶುಭಾಷಯ ಕೋರುತ್ತಿತ್ತು. ಅವಳು ಕ್ಯಾಮೆರ ಕಡೆ ನಗುತ್ತಿದ್ದಳು. ಆ ನಗೆಯ ಹಿಂದಿಂದ ಸಾವಿರ ನೆನಪಿನ ನೋವು ನನಗೆ ಕಾಣಿಸಿದಂತೆ ಭಾಸವಾಯಿತು. ಪಕ್ಕದಲ್ಲೇ  ಇದ್ದ ಆಕೆಯ ಕಂದು ಕಣ್ಣುಗಳ ಮಗಳು. ಯಾಕೋ ಒಂದು ಆಪ್ತ ಭಾವ ನನ್ನನ್ನು ಆವರಿಸಿಕೊಂಡಿತು.

ಅದೇ ಕ್ಷಣದಲ್ಲಿ ಮತ್ತೊಂದು ಪರದೆಯ ಮೇಲೆ ಮುಂದೆ ಪ್ರಸಾರವಾಗಲಿರುವ ಬೆಂಕಿಯಂತಹ ಸುದ್ದಿ ಕಾಣಿಸಿತು. “ಹಾಲಿ ಮತ್ತು ಮಾಜಿ ಗೃಹ ಮಂತ್ರಿಗಳ ಮಕ್ಕಳ ಪ್ರೀತಿ ಪ್ರೇಮ ಪ್ರಣಯ” ಎಂಬುದಾಗಿ. ಮತ್ತೊಂದು ನಿಮಿಷಕ್ಕೆ ಅದು ಪರದೆಯ ಮೇಲೆ ರಾಜ್ಯಾದ್ಯಂತ  ಪ್ರಸಾರವು ಆಗಿಹೋಯಿತು. ಇದೇ ಕಂದು ಕಣ್ಣುಗಳ ಹುಡುಗಿ ಮತ್ತು ರಾಜ್ಯದ ಮಾಜಿ ಗೃಹ ಮಂತ್ರಿಯ ಮಗನ ಫೋಟೋಗಳು.  ಅವರು ವಿದೇಶದ ಹೋಟೆಲು, ಬೀಚು ಮತ್ತಿತರ ಜಾಗಗಳಲ್ಲಿ ಓಡಾಡಿ, ತಬ್ಬಿ ಮುದ್ದಾಡಿಕೊಂಡ ಚಿತ್ರಗಳು. ಅವರ ತಂದೆಯರು ರಾಜಕೀಯವೈರಿಗಳು. ಮೇಲಾಗಿ ವಿರುದ್ಧ ಪಕ್ಷಗಳವರು.

ನಮ್ಮ ಚಾನೆಲ್ಲಿನಲ್ಲಿ ಮೊದಲ ಬಾರಿಗೆ ಪ್ರಸಾರವಾದ ಸುದ್ದಿ ರಾಜ್ಯಾದ್ಯಂತ ಕೆಲವೇ ಘಂಟೆಗಳಲ್ಲಿ ಬಿರುಗಾಳಿಯಂತೆ ಹರಿದಾಡಿತು.  ಇಂಟರ್ನೆಟ್ಟು ಒಂದು ಮಹಾ ಪ್ರವಾಹವನ್ನೇ ಸೃಷ್ಟಿಸಿತು. ಎಲ್ಲಾ ಚಾನೆಲ್ಲುಗಳು ಇದೆ ಸುದ್ದಿಯ ಹಿಂದೆ ಬಿದ್ದವು. ರೆಕ್ಕೆ ಪುಕ್ಕ ಕಟ್ಟಿದವು. ಈ  ಸುದ್ದಿ ಅದೇ ಕಂದು ಕಣ್ಣಿನವಳದೇ ಎಂದು ಗೊತ್ತಿದ್ದರೆ ನಾನು ಅನುಮತಿ ಕೊಡುತ್ತಿರಲಿಲ್ಲವಾ? ನನಗೆ ನಾನೇ ಕೇಳಿಕೊಂಡೆ.

ನಮ್ಮ ಚಾನೆಲ್ಲಿನ ಫೋನುಗಳು ಹೊಡೆದುಕೊಳ್ಳ ತೊಡಗಿದವು. ನಾನು ಯಾರ ಕೈಗೂ ಸಿಗದಂತೆ ಕುಳಿತೆ. ಗೃಹ ಮಂತ್ರಿ ಕೂಗಾಡಿದರಂತೆ. ನಾನು ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದೆ. ಗೃಹ ಮಂತ್ರಿಗೆ ಮೇಲಿಂದ ಆಜ್ಞೆ ಬಂತು.”ಬೇಗ ಮುಗಿಸಿಕೊಳ್ಳಿ” ಎಂದು. ಆಗಷ್ಟೇ ಗೃಹ ಮಂತ್ರಿಯಾಗಿದ್ದ ಅವರು ತಮ್ಮ ಮುಂದಿದ್ದ ರಾಜಕೀಯ ಜೀವನವನ್ನು ನೋಡುತ್ತಿದ್ದರಷ್ಟೇ. ಗೃಹ ಮಂತ್ರಿಗಳಿಗೆ ಒತ್ತಡ ಹೆಚ್ಚಾಯಿತು. “ನಿಮ್ಮ ಗೃಹ ಮಂತ್ರಿ ಮಾಡಲು ನಾವೆಷ್ಟು ನೀಡಿದ್ದೇವೆ ನೆನಪಿದೆಯ. ನೀವು ಈಗಲೇ ಹೋಗಿ ಆ ವಿರೋಧ ಪಕ್ಷದವರೊಂದಿಗೆ ಸಂಬಂಧ ಮಾತಾಡುತ್ತ ಕುಳಿತರೆ ನಮ್ಮ ಗತಿ ಏನು. ಮುಂದೆ ಸಂಬಂಧಿಕರಾದ ಮೇಲೆ ನಿಮ್ಮ ವಿರೋಧಿಗಳು ನಿಮ್ಮ ಪಕ್ಕ ಸೇರಿ ನಮ್ಮನು  ನೀವು ಮೂಲೆಗೆ ಒತ್ತಿಬಿಟ್ಟರೆ ನಾವೇನು ಮಾಡಲಿ. ನೀವು ನ್ಯೂಸು ಚಾನೆಲ್ಲುಗಳೊಂದಿಗೆ ಕಾಂಪ್ರೋ ಆಗಿಬಿಡಿ.” ಎಂದು ಅವರ ರಾಜಕೀಯ ಸಂಬಂಧಿಗಳು ಹೇಳಿ ಬಿಟ್ಟರು. ಅಷ್ಟೊತ್ತಿಗೆ ದಿನವೆರಡು ಕಳೆದು ಹೋಗಿತ್ತು. ನಮ್ಮ ಚಾನೆಲ್ಲಿನ ಕಡೆಯಿಂದ ಯಾರೋ ಹೋಗಿ ಮಾತನಾಡಿ  ಬಂದರು. ಕೇಳಿದ ಕಪ್ಪ ಬರುತ್ತಿದ್ದಂತೆ, ಸುದ್ದಿ ಪ್ರಸಾರವಾಗುವದು ನಿಂತು ಹೋಯಿತು. ಅಲ್ಲೆಲ್ಲೋ ನಾಯಿ ಮರಿ ಹಾಕಿದೆ ಎಂದು ಕ್ಯಾಮೆರ ಹಿಡಿದು ಓಡಿದರು ನಮ್ಮ ಹುಡುಗರು.ಇದೆಲ್ಲ ಆದ ಮೇಲೆ ನಾನು ಒಮ್ಮೆ ಆ ಜೋಡಿ ಹಕ್ಕಿಗಳ ಫೋಟೋ ನೋಡುತ್ತಾ ಕುಳಿತೆ. ಅದೇಕೋ ಆ ಕಂದು ಕಣ್ಣುಗಳಲ್ಲಿ ಆಳವಾದ ಪ್ರೀತಿ ಕಂಡಂತೆ ಅನಿಸಿತು. ಆ ಹುಡುಗನ ತಬ್ಬಿ ನಿಂತಲ್ಲಿ, ಅವನ ಕೈ ಒಳಗೆ ಕೈ ಹಿಡಿದು ನಡೆಯುತ್ತಿದ್ದಲ್ಲಿ ಅವಳ ಕಣ್ಣುಗಳು ಅದೇನೋ ಸಂತಸದ ಚಿಲುಮೆಯನ್ನು ಚೆಲ್ಲಿದಂತೆ ಕಂಡಿತು. ಜನರನ್ನು ಮಾತನಾಡಿಸುವುದೇ ಕೆಲಸವಾಗಿದ್ದ ನನಗೆ,  ಮನುಷ್ಯನ ಕಣ್ಣುಗಳನ್ನು ಓದುವುದು ಅಭ್ಯಾಸವಾಗಿ ಹೋಗಿತ್ತು. ಕದ್ದು ತೆಗೆದ ಫೋಟೋ ಆಗಿದ್ದ ಕಾರಣ ಅವಳ ಕಣ್ಣುಗಳ ಭಾವ  ಕಪಟವಂತು ಅಲ್ಲ ಎಂಬ ಸತ್ಯ ಅರಿವಾಯಿತು. ನನ್ನೆದುರಿಗೆ ನನ್ನ(!) ಮಗಳ ಪ್ರೀತಿ ಮುರಿದು ಬಿತ್ತಾ? ಆಕೆ ಕೂಡ ನಮ್ಮಂತೆ ಸಿಗದ  ಪ್ರೀತಿಯ ನೋವಿನಲ್ಲಿ ನರಳಬೇಕ? ನನ್ನ ಮನಸಿನ ನೆಮ್ಮದಿ ಅಕ್ಷರಶಃ ಕಳೆದುಹೋಯಿತು. ಹೇಗಾದರೂ ಅವಳನ್ನು ಸಂಪರ್ಕಿಸಲಾ? ಏನು ಮಾಡಲಿ. ಸಮಯ ಹೆಚ್ಚಿಲ್ಲ. ಕೆಲವೇ ದಿನಗಳಲ್ಲಿ ಅವಳಪ್ಪ ಅವಳ ಮದುವೆ ಬೇರೆ ಹುಡುಗನೊಂದಿಗೆ ಮಾಡಿ ಬಿಡಬಹುದು. ನನ್ನೆದುರು ನನ್ನ ಮಗಳ ಎದೆ ಒಡೆದುಹೋಗಲಿದೆ. ಒಂದು ಕಾಲದಲ್ಲಿ ಏನು ಇಲ್ಲದೆ ಅನಾಥನಾಗಿದ್ದೆ, ಬಡವನಾಗಿದ್ದೆ. ನನ್ನೆದುರಿಗೆ ನನ್ನ  ಪ್ರೀತಿಯ ಕನಸು ಚೂರಾಗಿತ್ತು. ಇಂದು ಮನೆ, ಕಾರು, ಗುರುತು, ಹೆಸರು ಎಲ್ಲವು ಇದೆ. ಆದರು ಏನು ಮಾಡಲಾಗುತ್ತಿಲ್ಲ. ಆವತ್ತು ಸಂಜೆ ಮನೆಗೆ ಹೋದ ಮೇಲೆ ಯೋಚಿಸುತ್ತ ಕುಳಿತೆ. ರಾತ್ರಿ ಕಳೆದು ಬೆಳಗಾಯಿತು. ನನ್ನ ನಿರ್ಧಾರ ಗಟ್ಟಿಯಾಯಿತು. ಆಫೀಸಿಗೆ ಹೋದವನೇ, ಆವತ್ತಿನ ಸಂಜೆಗೆ ಆಗುವಂತೆ ಎರಡು ವಿಮಾನದ ಟಿಕೆಟ್ಟು ಹೈದರಾಬಾದ್ ಗೆ, ಒಂದು ದೆಹಲಿಗೆ ಕಾಯ್ದಿರಿಸಿದೆ.  ಗೃಹ ಮಂತ್ರಿಯವರೊಡನೆ ಮಾತನಾಡಬೇಕು. ಫೋನಿಗೆ ಸಮಯ ಹೊಂದಿಸಿ ಎಂದು ಹೇಳಿದೆ. ಮಧ್ಯಾಹ್ನ ಸಿಗುತ್ತಾರಂತೆ ಎಂದು  ಹೇಳಿದರು. ತುಂಬಾ ಚಿಕ್ಕದಾಗಿ ಹೇಳಿ ಮುಗಿಸಿದೆ. “ಸಾರ್ ಇಷ್ಟೆಲ್ಲಾ ಆದ ಮೇಲೆ ನಿಮ್ಮ(!) ಮಗಳ ಕಡೆಯಿಂದ ಒಂದು ಹೇಳಿಕೆ ಕೊಡಿಸದೇ ಇದ್ದರೆ ಹೇಗೆ. ಒಂದು ಅರ್ಧ ಘಂಟೆಯ  ಕಾರ್ಯಕ್ರಮ ಮಾಡೋಣ. ಎಲ್ಲಾ ನಮ್ಮವರೇ ಬರೆದುಕೊಡುತ್ತಾರೆ. ಒಂದು ಘಂಟೆ ರೆಕಾರ್ಡಿಂಗ್ ಶೂಟಿಂಗ್ ಅಷ್ಟೇ. ನಮ್ಮದೇ ಸ್ಟುಡಿಯೋದಲ್ಲಿ. ಏನೋ ಒಂದು ಮಾತನಾಡುವ ಕಾರ್ಯಕ್ರಮ ಮಾಡಿ, ನಾನು ಮತ್ತು ಆ ಹುಡುಗ ಸ್ನೇಹಿತರಷ್ಟೆ ಎಂದು ನಿಮ್ಮ ಹುಡುಗಿ ಹೇಳಿ ಬಿಟ್ಟರೆ ಎಲ್ಲಕ್ಕೂ ಮಂಗಳ ಹಾಡಿದಂತೆ.” ಮಂತ್ರಿಗಳು ಒಪ್ಪಿಬಿಟ್ಟರು. ಮಗಳನ್ನು ಕಳಿಸಿಕೊಡುತ್ತೇನೆ ಎಂದು ಭರವಸೆಯಿತ್ತರು. ಸಂಜೆ  ಐದೂವರೆಗೆಲ್ಲಾ ಬಂದು ಬಿಡುವಂತೆ ಹೇಳಿ ಎಂದು ಕೇಳಿಕೊಂಡೆ. ಆಮೇಲೆ ಮತ್ತೊಂದೆರಡು ಕರೆ ಮಾಡಿ ಕಾಲವನ್ನು ನೋಡುತ್ತಾ  ಕುಳಿತು ಬಿಟ್ಟೆ.

ಸಂಜೆ ಐದುವರೆಗೆ ನನಗೆ ಒಂದು ಖಾಸಗೀ ಸಭೆ ಇದೆ ಎಂದೂ, ಸ್ಟುಡಿಯೋದ ನನ್ನ ಸಂದರ್ಶನ ಕಚೇರಿಗೆ ಯಾರನ್ನು ಬಿಡಬಾರದು ಎಂದುಆಫೀಸಿನಲ್ಲಿ ಹೇಳಿಟ್ಟೆ. ಹುಡುಗಿ ಬರುತ್ತಿದ್ದಂತೆ ನೇರವಾಗಿ ನನ್ನ ಬಳಿ ಕರೆ ತನ್ನಿ ಎಂದು ನಂಬಿಕೆಯ ಆಫೀಸಿನ ಹುಡುಗಿಯೊಬ್ಬಳಿಗೆ ಹೇಳಿಟ್ಟೆ.  ನಮ್ಮದೇ ಆಫೀಸು ಆದರು ಇಲ್ಲಿ ಇರುವವರು ಸುದ್ದಿ ವೀರರು. ನಾಲ್ಕೂವರೆ ಹೊತ್ತಿಗೆ ಮೋಡ ಕಟ್ಟಿತು. ನಾನು ಕಾಯುತ್ತ ಕುಳಿತಿದ್ದೆ. ಐದು ಘಂಟೆಗೆ ನಾನು ಹೋಗಿ ಕಿಡಕಿಯ ಬಳಿ ನಿಂತೆ. ಅಲ್ಲಿಂದ ನೇರವಾಗಿ ನಮ್ಮ ಕಟ್ಟಡದ ಮುಖ್ಯ ದ್ವಾರ ಕಾಣುತ್ತದೆ. ಹತ್ತು ನಿಮಿಷ ಮೊದಲೇ ಹುಡುಗಿ ಬಂದಿಳಿದಳು. ನನ್ನ ಎದೆ ಅದೇಕೋ ಭಾರವಾಗುತ್ತಿತ್ತು. ನೇರ ನನ್ನ ಕ್ಯಾಬಿನ್ನಿಗೆ ಬಂದವಳೇ ನನ್ನೆದುರು ನಿಂತಳು. ನನ್ನ ನೋಡಿದವಳೇ, “ಹಾಯ್ ಅಂಕಲ್.. ನಿಮ್ಮ ಕಣ್ಣು ನನ್ನ ಕಣ್ಣುಗಳ ಹಾಗೆ ಇವೆ. ನನ್ನ ಅಮ್ಮ ಯಾವಾಗಲು ಹೇಳುತ್ತಿರುತ್ತಾಳೆ. ‘ಇಂತಹ ಕಣ್ಣು ಎಲ್ಲರಿಗೂ ಇರುವುದಿಲ್ಲ. ನೀನು ಅದೃಷ್ಟವಂತೆ. ನಿನ್ನ ಕಣ್ಣುಗಳಲ್ಲಿ ನಾನು ದಿನಾಲು ಒಮ್ಮೆ ಕಣ್ಣಿಟ್ಟು ನೋಡುತ್ತೇನೆ’ ಹಾಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗೆಲ್ಲ ಅಮ್ಮನ ಕಣ್ಣುಗಳಲ್ಲಿ ನೀರು ಬರುತ್ತದೆ. ಹಾಗೆ ಒಂದೇ ದೃಷ್ಟಿಯಿಂದ ಇನ್ನೊಬ್ಬರ ಕಣ್ಣುಗಳನ್ನು  ನೋಡಿದರೆ ನೀರು ಬರದೆ ಇರುತ್ತದಾ? ನೀವೇ ಹೇಳಿ ಅಂಕಲ್. ಹಾಗೆ ನಾನು ಇನ್ನು ಒಂದು ಜೊತೆ ಡ್ರೆಸ್ ತಂದಿದ್ದೇನೆ. ಅದನ್ನು  ಹಾಕೊಬಹುದ. ಅಥವಾ ಇದೆ ಡ್ರೆಸ್ಸಲ್ಲಿ ಚೆನ್ನಾಗಿ ಕಾಣಿಸ್ತೀನ ಅಂಕಲ್ ?” ವರುಷಗಳ ಪರಿಚಯವೇನೋ ಎಂಬಂತೆ ಆಕೆ ಪಟಪಟನೆ ಮಾತಾಡಿದಳು. ನಾನು ಎರಡು ಹೆಜ್ಜೆ ಮುಂದೆ ಹೋಗಿ, ಆಕೆಯ ತಲೆ ನೇವರಿಸಿ ಹಣೆಯ ಮೇಲೊಂದು ಮುತ್ತಿಕ್ಕಿ “ನೀನು ತುಂಬಾ ಚೆನ್ನಾಗಿ
ಕಾಣುತ್ತಿದ್ದೀಯಮ್ಮ ..” ಎಂದೆ. ನನ್ನ ಧ್ವನಿ ಅದೇಕೋ ನಡುಗುತ್ತಿತ್ತು. ನಾನು ಹಾಗೆ ಮಾಡಿದ್ದಕ್ಕೆ ಆಕೆಗೆ ಏನನಿಸಿತೋ. ಆ ಕ್ಷಣಕ್ಕೆ ನನ್ನ ಎದೆಯಲ್ಲಾದ ಭಾವ ಸ್ಪೋಟಕ್ಕೆ ನನಗೆ ತೋಚಿದ್ದು ಅಷ್ಟೇ. ಮುಂದೆ ನನ್ನ ಬಳಿ ಸಮಯವಿರಲಿಲ್ಲ.  ಆಕೆಯನ್ನು ಸ್ಟುಡಿಯೋದಲ್ಲಿ ಕಾಯ್ದಿರಿಸಿದ್ದ ಕೋಣೆಗೆ ಕರೆದೊಯ್ದೆ. ಹೋದವನೇ, ಪಕ್ಕದ ಕೋಣೆಗೆ ಒಂದು ಕರೆ ಮಾಡಿ ಕಟ್ ಮಾಡಿದೆ.  ಮಧ್ಯದ ಬಾಗಿಲು ತೆರೆದು ಒಳಗೆ ಅಡಿಯಿಟ್ಟವನು ಅವಳ ಹುಡುಗ. ಚಂಗನೆ ನೆಗೆದು ಅವನ ಕೈ ಹಿಡಿದುಕೊಂಡಳಾಕೆ. ಆಕೆ ಆಗಲೇ
ಕಣ್ಣೀರಿನ ಕೋಡಿ ಆರಂಭಿಸಿದ್ದಳು. ಗೃಹ ಮಂತ್ರಿಗೆ ಕರೆ ಮಾಡಿದ ನಂತರ ಮಾಜಿ ಮಂತ್ರಿಗೆ ಕರೆ ಮಾಡಿದ್ದೆ. ಅಲ್ಲಿಯೂ ಇದೇ ಮಾತು  ಹೇಳಿ ಅವರ ಮಗನನ್ನು ಕರೆಸಿ ಕೂರಿಸಿದ್ದೆ. ಅವರಿಬ್ಬರನ್ನು ಬಳಿಗೆ ಕರೆದು ಹೇಳಿದೆ,

“ನಿಮ್ಮಿಬ್ಬರಲ್ಲೂ ನಿಜವಾದ ಪ್ರೀತಿ ಇದೆ ಎಂದೇ ನಾನು ಭಾವಿಸಿದ್ದೇನೆ. ನೀವು ಸುಳ್ಳು ಹೇಳಿದರೂ ನಿಮ್ಮ ಕಣ್ಣುಗಳು ಸುಳ್ಳು ಹೇಳಲು  ಸಾಧ್ಯವಿಲ್ಲ. ಒಬ್ಬರನ್ನೊಬರು ಅರ್ಥ ಮಾಡಿಕೊಳ್ಳದೆ ನಿಮ್ಮ ಕಣ್ಣುಗಳಲ್ಲಿ ಆ ಖುಷಿಯ ನಗು ಹುಟ್ಟುವುದಿಲ್ಲ. ನಿಮ್ಮಿಬ್ಬರಿಗೂ ಇದು ಕಡೆಯ ಅವಕಾಶ. ಪ್ರೀತಿ ಸಿಗದ ಜೀವನ ಭಾರವಾಗುತ್ತದೆ,ಬೇಸರವಾಗುತ್ತದೆ, ಬೇಡವಾಗುತ್ತದೆ. ಪ್ರೀತಿಯ ನೆನಪುಗಳೊಂದಿಗೆ ಬದುಕುವುದು  ಭಯಂಕರ ಕಷ್ಟಸಾಧ್ಯ. ಎದೆಯೊಳಗೆ ಒಮ್ಮೆ ಮಿಡಿದ ರಾಗ ಯಾವತ್ತಿಗೂ ಶಾಶ್ವತ. ಇಲ್ಲಿಂದ ನೀವು ನಿಮ್ಮ ಮನೆಗಳಿಗೆ ಹೋದರೆ ಬಹುಶಃ ನಿಮ್ಮ ಜೀವನದಲ್ಲಿ ನೀವು ಯಾವತ್ತಿಗೂ ಒಂದಾಗಲು ಸಾಧ್ಯವಿಲ್ಲ. ಈ ಟೇಬಲ್ಲಿನ ಕೊನೆಯ ಬಾಕ್ಸಿನೊಳಗೆ ಒಂದು ಗಣೇಶನ ಪುಟ್ಟ  ಮೂರ್ತಿ,ಒಂದು ಮಾಂಗಲ್ಯ, ಮತ್ತು ಹೈದರಾಬಾದಿನ ಎರಡು ವಿಮಾನದ ಟಿಕೆಟುಗಳಿವೆ. ನೀವು ಒಪ್ಪಿ ಒಂದಾದರೆ ಈಗಲೇ ಮದುವೆ ಆಗಿಬಿಡಿ. ನೀವು ಹೈದರಾಬಾದಿಗೆ ಹೋದ ಮೇಲೆ ಎರಡು ದಿನ ಅಲ್ಲಿದ್ದು ಮುಂದೆ ಆಸ್ಟ್ರೇಲಿಯಾ ಗೆ ಹೋಗುವ ವ್ಯವಸ್ಥೆ ನಾನು ದೆಹಲಿಯಿಂದಮಾಡುತ್ತೇನೆ. ಹತ್ತು ನಿಮಿಷ ಸಮಯ ಕೊಡುತ್ತೇನೆ. ನಾನು ಪಕ್ಕದ ಕೋಣೆಯಲ್ಲಿ ಕುಳಿತಿರುತ್ತೇನೆ. ನಿಮ್ಮ ಪ್ರೀತಿ ಉಳಿಯಲಿ ಎಂಬುದು  ನನ್ನ ಹಾರೈಕೆ. ಹನ್ನೊಂದನೇ ನಿಮಿಷ ನಾನು ಮತ್ತೆ ಬರುವಷ್ಟರಲ್ಲಿ ನೀವು ನಿರ್ಧರಿಸಿ. ನಿಮಗೆ ಇಷ್ಟವಿಲ್ಲದಿದ್ದರೆ ನಾನು ಬರುವ ಒಳಗೆ  ಇಲ್ಲಿಂದ ಹೊರಟು ಬಿಡಿ. ಹಾಗೆ ಮಾಡಿದರೆ ನಿಮಗೆ ನೀವೇ ಸುಳ್ಳು ಹೇಳಿಕೊಂಡು ಬದುಕ ಬೇಕಾಗುತ್ತದೆ, ಸಾಯುವವರೆಗೂ..” ನನ್ನಿಂದ ಅಲ್ಲಿ ನಿಲ್ಲಲಾಗಲಿಲ್ಲ. ಪಕ್ಕದ ಕೋಣೆಗೆ ನಡೆದೆ. ಕಾಲ ಯಾಕೋ ನಿಂತು ಹೋದಂತೆ ಅನಿಸಿತು. ಮನಸ್ಸು ಗೊಂದಲಗಳ  ಗೂಡಾಗಿತ್ತು. ಅವರಿಬ್ಬರೂ ಮದುವೆ ಆದರೆ ಮುಂದಿನ ಪರಿಣಾಮ ನೆನೆಸಿಕೊಂಡು ನಗು ಬಂತು. ಪ್ರೀತಿಯನ್ನು ಉಳಿಸಲು ಕಷ್ಟ  ಪಡಲೇಬೇಕು ಎಂದು ಜ್ಞಾನೋದಯವಾಯಿತು. ಮುಂದಿನ ಮೂರು ನಿಮಿಷ ಇಪ್ಪತ್ತಾರು ಸೆಕೆಂಡು ಕಳೆಯುತ್ತಿದಂತೆ ನಮ್ಮೆರಡು ಕೋಣೆಗಳ ನಡುವಿನ ಬಾಗಿಲು ತೆರೆಯಿತು. ಅವರಿಬ್ಬರು  ಒಳಗೆ ಬಂದರು. ಆಕೆಯ ಕತ್ತಿನಲ್ಲಿ ಮಾಂಗಲ್ಯವಿತ್ತು.

“ಅಪ್ಪಾ.. ನನಗೇಕೋ ನಿಮ್ಮನು ಹಾಗೆ ಕರೆಯಬೇಕೆನಿಸಿತು. ನೀವು ಅದೇಕೆ ನಮ್ಮನ್ನು ಒಂದು ಮಾಡಿದಿರಿ, ನಾವು ಹೇಗೆ ನಿಮ್ಮನ್ನು ನಂಬಿ ಈ ಕ್ಷಣವೇ ಮದುವೆ ಆದೆವು ? ಈ ಪ್ರಶ್ನೆಗಳಿಗೆಲ್ಲ ನನಗೀಗ ಉತ್ತರ ಬೇಕಿಲ್ಲ. ನಾವಿಬ್ಬರು ಓದಿದ್ದೇವೆ. ಬದುಕುವ ಛಲವಿದೆ. ಹೇಗೋ  ಏನೋ ಒಂದು ಕಡೆ ನೆಲೆ ನಿಲ್ಲುತ್ತೇವೆ ಎಂಬ ಧೈರ್ಯವಿದೆ. ಆದರೆ ಆ ಧೈರ್ಯ ನಮ್ಮಲ್ಲಿ ಇದೆ ಎಂದು ಅರಿವಾಗಲು ನೀವು ಕಾರಣವಾದಿರಿ.  ನಮ್ಮನು ಒಂದು ಮಾಡಿದ ನೀವೇ ನಮಗೆ ಆಶೀರ್ವದಿಸಿ. ಹುಟ್ಟುವ ಮಗುವಿಗೆ ನಿಮ್ಮದೇ ಹೆಸರಿಡುತ್ತೇವೆ..” ಆಕೆ ಮತ್ತು ಅವನು ನನ್ನ  ಕಾಲಿಗೆ ಎರಗಿದರು.  ಮುಂದಿನ ಕೆಲ ಘಂಟೆಗಳಲ್ಲಿ ಅವರು ಹೈದರಾಬಾದಿನ ವಿಮಾನದಲ್ಲಿ ಇದ್ದರು. ನಾನು ದೆಹಲಿಯ ವಿಮಾನದಲ್ಲಿದ್ದೆ.

ಪ್ರೀತಿ ಉಳಿಸಿಕೊಳ್ಳಲು ಕಷ್ಟ ಪಡಬೇಕ? ಬದುಕು ಕಷ್ಟವಾ? ಪ್ರೀತಿಗಾಗಿ ಬದುಕಬೇಕ? ಬದುಕಿಗಾಗಿ ಪ್ರೀತಿ ಬೇಕಾ? ಬದುಕಿಗೂ ಪ್ರೀತಿಗೂಏಕೆ ಅಷ್ಟೊಂದು ವ್ಯತ್ಯಾಸವಿದೆ? ಕನಸುಗಳು ಪ್ರೀತಿಯಲ್ಲವಾ? ನೆನಪುಗಳು ಕಾಡುವುದೇಕೆ? ಸಂಬಂಧಗಳು ಹೀಗೇಕೆ?  ಕಟ್ಟ ಕಡೆಯವರೆಗೂ ಮರೆತುಹೋಗದ ನೆನಪುಗಳನ್ನು ಮರೆಸುವ ಶಕ್ತಿಯಿಲ್ಲದ ಕಾಲ ಅಷ್ಟೊಂದು ದುರ್ಬಲವಾ ? ಅಥವಾ ಪ್ರೀತಿಯ ಶಕ್ತಿ  ಅಂಥದ್ದಾ?  ಪ್ರಶ್ನೆಗಳು ಹಾಗೆಯೇ ಉಳಿದಿದ್ದವು. ವಿಮಾನದ ಕಿಟಕಿಯಿಂದ ಕೈಗೆ ಸಿಗದ ಮೋಡಗಳನ್ನು ನೋಡುತ್ತಾ ಕುಳಿತೆ……….

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post