೧.ನಗೆಯುಳ್ಳ ಮೊಗ ಚೆಂದ | ಚಿಗುರುಳ್ಳ ಮರ ಚೆಂದ
ಅಗರು ಗಂಧವೆ ಚೆಂದ ಪೂಜೆಯಲಿ ಸಜ್ಜನರ
ಬಗೆಯು ಬಲು ಚೆಂದ ಸುಬ್ಬಂಣ ||
೨.ಕ್ರಿಸ್ತನೆಂದರು ಕೆಲರು | ಅಲ್ಲನೆಂದರು ಹಲರು
ಕೃಷ್ಣನೇ ಪರಮಾತ್ಮನೆಂದು ಹಲಜನರೆನುವ
ತತ್ವ ತಾನೊಂದೆ ಸುಬ್ಬಂಣ ||
೩.ನೋಟುಗಳ ಬಲದಿಂದ | ಓಟುಗಳ ಸಂಗ್ರಹಿಸಿ
ಪೀಠವೇರುವ ಮಂದಿಯಿಂದ ದೇಶಕ್ಕೆ ಶನಿ-
ಕಾಟವೆಂದೊರೆದ ಸುಬ್ಬಂಣ ||
೪.ಮಣಿಯು ಮಕುಟಕೆ ಮುಖ್ಯ | ಗಣವು ವೃತ್ತಕೆ ಮುಖ್ಯ
ಗಣಿತವೇ ಮುಖ್ಯ ಜ್ಯೋತಿಷ್ಯದಲಿ ಮನುಜಂಗೆ
ಗುಣವೆ ಬಲು ಮುಖ್ಯ ಸುಬ್ಬಂಣ ||
೫.ಹೆಂಡವನು ಹೀರಿ ಪರ | ಹೆಂಡಿರನುರಮಿಸಿ ಜನ
ಮಂಡೆಯೊಡೆದಂಡೆಲೆವ ಗಂಡುಗಳು ದೇಶಕ್ಕೆ
ದಂಡ ನೋಡೆಂದ ಸುಬ್ಬಂಣ ||
೬.ನಯವಿರದ ಮಾತುಗಳು | ಲಯವಿರದ ವಾಕ್ಯಗಳು
ಭಯವಿರದ ಭಕ್ತಿ ಇವುಗಳಿಂ ಸಮಯವದು
ವ್ಯಯವು ಕೇಳೆಂದ ಸುಬ್ಬಂಣ ||
-
ಬಲ್ನಾಡು ಸುಬ್ಬಣ್ಣ ಭಟ್
Facebook ಕಾಮೆಂಟ್ಸ್