ಬಿಡಿಸಲಾಗದ ಬಂಧ ನಮ್ಮದೀ ಸ್ನೇಹ
ಒಮ್ಮೆ ಒಳನಡೆಯೆ,ಹೊರಬರಲಾಗದ ವ್ಯೂಹ
ಇಂಥ ಬಂಧನದಿ ನಮ್ಮ ಸಿಲುಕಿಸಿ ಓ ಗೆಳತಿ,
ಮರಳಿ ಬಾರದ ಕಡೆಗೆ ಯಾಕೆ ನೀ ನಡೆದಿ?
ಎರಡು ದಶಕದ ಹಿಂದೆ ನಮ್ಮ ಬದುಕಿನಲಿ
ಗೆಳೆತನದ ಹೊಸ ಭಾಷ್ಯ ಬರೆದೆ ಒಲವಿನಲಿ
ಬರೆದ ಪ್ರತಿ ಪುಟಗಳಲೂ ನೆನಪುಗಳ ಸುಗ್ಗಿ
ಒಮ್ಮೆ ಕಹಿ ಬೇವಾದರೆ,ಮತ್ತೊಮ್ಮೆ ಹುಗ್ಗಿ
ಎಷ್ಟೋ ಕಾಲದ ಬಳಿಕ ಆಗಿಹುದು ಭೇಟಿ
ಹೇಳಲುಳಿದಿಹ ವಿಷಯವಿಹುದು ಶತಕೋಟಿ
ಅಲ್ಪ ಸಮಯದಲಿ ಪೂರ್ಣ ವಿರಾಮವನು ನೀಡಿ
ನೀ,ಮನ ಮಾತಾಗುವ ಮುನ್ನ ಆದೆ ಬಾನಾಡಿ
ನಿನ್ನೊಡನೆ ಒಡನಾಟ ಇಂದೆಮಗೆ ನೆನಪು
ನಮ್ಮ ಗೆಳೆತನದ ಆಭರಣಕ್ಕೆ ಹೊಳಪು
ನಿನ್ನ ಉತ್ಸಾಹವು ಯುವಜನಕೆ ಸ್ಫೂರ್ತಿ
ಹೋಗಿ ಬಾ,ನಿನಗೆಮ್ಮ ವಂದನೆಗಳು, ಕೀರ್ತಿ!
Facebook ಕಾಮೆಂಟ್ಸ್