X

ಸುಜಲಾಂ ಸುಫಲಾಂ..

ನೀರು…!! ಸಕಲ ಜೀವಿಗಳಿಗೂ ನೀರೆಂದರೆ ಕೇವಲ ಜಲವಲ್ಲ ಅದು ಪಾವನ ತೀರ್ಥ. ಜೀವ ಸಂಕುಲದ ಅಳಿವು-ಉಳಿವಿನ ಪ್ರಶ್ನೆ ಬಂದಾಗ ನೀರಿನ ಪಾತ್ರ ಮಹತ್ತರವಾಗಿ ಗೋಚರಿಸುತ್ತದೆ. ಜೀವಜಲದ ಸಂರಕ್ಷಣೆಗೆ ವಿಶ್ವದಾದ್ಯಂತ ಮಳೆಕೊಯ್ಲು, ನೀರಿನ ಮೂಲಗಳ ಸಂರಕ್ಷಣೆ, ಜಲಾನಯನ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ನಮ್ಮಲ್ಲಿಯೂ ನೀರಿನ ಸಂರಕ್ಷಣೆಗಾಗಿ ಸ್ವಸಹಾಯ ಸಂಘಗಳು, ಯುವಶಕ್ತಿ, ಸ್ತ್ರೀಶಕ್ತಿ ಸಂಘಗಳು ಟೊಂಕಕಟ್ಟಿ ನಿಂತಿವೆ. ಇಂತಹ ಅಮೂಲ್ಯ ಸಂಪತ್ತು ನಮಗೆ ಅಂದರೆ ಹುಲು ಮಾನವರಿಗೆ ಯಾವ್ಯಾವ ರೀತಿಯಲ್ಲಿ ಶ್ರೀರಕ್ಷೆಯಾಗಿದೆ ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಬೆಳಕು ಚೆಲ್ಲುವ ಪ್ರಯತ್ನ ಈ ಬರಹದ ಮೂಲಕ.

ಬಾಲ್ಯ ಯಾರಿಗೆ ತಾನೆ ನೆನಪಿರಲ್ಲ ಹೇಳಿ??? ಬೇಸಿಗೆ ರಜೆ ಬಂತೆಂದರೆ ಅಜ್ಜಿಮನೆಯ ಕಡೆಗೆ ಮುಖಮಾಡುತ್ತಿದವರು ನಾವು.  ಕೆರೆ, ತೊರೆಗಳೇ ನಮ್ಮ ಆಟದ ಮುಖ್ಯ ಆಯ್ಕೆ. ಇನ್ನು ಬೇಸಿಗೆ ರಜೆ ಕಳೆದು ಶಾಲೆ ಪುನರಾರಂಭವಾಗುತ್ತಿದ್ದಂತೆ ಮಳೆರಾಯನ ಆರ್ಭಟ. ಧಾರಾಕಾರವಾಗಿ ಹುಯ್ಯುವ ಮಳೆ, ತುಂಬಿ ತುಳುಕುವ ಕೆರೆ ಕಟ್ಟೆಗಳು, ವಟಗುಟ್ಟುತ್ತಾ ಸಂಭ್ರಮಿಸುವ ಕಪ್ಪೆಗಳ ಸಂಗೀತ, ಕೈ ಬೀಸಿ ಕರೆಯುವ ಹಸಿರು, ಬೀಸುವ ತಂಗಾಳಿಗೆ ತೊನೆದಾಡುವ ಗಿಡಮರಗಳು, ಸ್ವಚ್ಛಂದವಾಗಿ ಹಾರಾಡುವ ಪಕ್ಷಿಗಳು… ಒಂದೇ ಎರಡೇ ಮಳೆಯ ಸಂಭ್ರಮವನ್ನು ವರ್ಣಿಸಲು ಅಸಾಧ್ಯ.!! ಛತ್ರಿ ಇದ್ದರೂ ಅದನ್ನು ಬಿಡಿಸದೇ ಮಳೆಯಲ್ಲಿ ನೆನೆಯುತ್ತಾ, ಸಂಕವಿಲ್ಲದ ತೋಡುಗಳನ್ನು ದಾಟುತ್ತಾ ಶಾಲೆ ಸೇರುವುದೇ ಮಜಾ!! ಇನ್ನು ವೀಕೆಂಡ್ಸ್ ಬಂತು ಅಂದರೆ ಮೀನು ಹಿಡಿಯೋ ಕಾರ್ಯಕ್ರಮ!! ಋತುವಿನ ಮೊದಲ ಮಳೆನೀರು ಇಳೆಗೆ ಬಿದ್ದಾಗ ಏಳುವ ಮಣ್ಣಿನ ಸುವಾಸನೆಯನ್ನು ಆಸ್ವಾದಿಸದ ಜನ ಬಹಳ ವಿರಳ. ಘಮ ಘಮಿಸುವ ಮಣ್ಣಿನ ವಾಸನೆ ಕವಿ ಹೃದಯಗಳಲ್ಲಿ ಕವಿತೆ, ಹಾಡುಗಳ ಆಲಾಪನೆಯಾದರೆ, ರೈತಾಪಿ ವರ್ಗದಲ್ಲಿ ಉತ್ತಿ ಫಸಲು ತೆಗೆಯುವ ಆನಂದ. ಜೀವನೋತ್ಸವದ ಆರಂಭದ ಸಂಕೇತ ಕಣ್ರೀ ಮಳೆಯೆಂದರೆ. ಬಾಲ್ಯ ಕಳೆದು ಜೀವನಕ್ಕಾಗಿ ವಿವಿಧ ಉದ್ಯೋಗಗಳಲ್ಲಿ ನಮ್ಮನ್ನ ನಾವು ತೊಡಗಿಸಿಕೊಂಡಿರುತ್ತೇವೆ. ಜೀವನ ಹಾಗೂ ಉದ್ಯೋಗ ಇದೆರಡರ ನಡುವೆ ಸಿಲುಕಿ ಒದ್ದಾಡುತ್ತಿರುವಾಗ ,ಸಣ್ಣ ಬ್ರೇಕ್ ಬೇಕೆಂದಾಗ ಮೊದಲಿಗೆ ನೆನಪಾಗುವುದು ಜಲಪಾತಗಳು ಮತ್ತು ವಾಟರ್ ಸ್ಪೋರ್ಟ್ಸ್ ಗಳು. ನೆನಪಿರಲಿ ಈ ಎಲ್ಲಾ ಚಟುವಟಿಕೆಗಳಲ್ಲಿ ನಾವು ಅವಲಂಬಿಸಿರುವುದು ನೀರನ್ನೇ!!

ಪುರಾಣದಲ್ಲೂ ನೀರಿನ ಬಗ್ಗೆ ಸಾಕಷ್ಟು ಕಥೆಗಳಿವೆ. ಅದರಲ್ಲಿ ಮುಖ್ಯವಾದದ್ದು ಭಗೀರಥನ ಕಥೆ. ಗಂಗಾ ಮಾತೆಯನ್ನು ಒಲಿಸಿಕೊಳ್ಳಲು ತಪಸ್ಸುಕೂತು ಅದರಲ್ಲಿ ಯಶಸ್ವಿಯಾದವ ಭಗೀರಥ. ಇನ್ನು ಕವಿಗಳಿಗಂತೂ ಕಾವ್ಯದ ಪ್ರಧಾನ ವಿಷಯವೇ ನೀರು ಅಥವಾ ಮಳೆ. ವರಕವಿ ಬೇಂದ್ರೆಯವರ ಇಳಿದು ಬಾ ತಾಯೇ ಇಳಿದು ಬಾ ಕವನವಂತೂ ನೀರಿನ ವರ್ಣನೆಗೇ ಮುಡಿಪಾಗಿದೆ. “ಹರನ ಜಡೆಯಿಂದ, ಹರಿಯ ಅಡಿಯಿಂದ, ಋಷಿಯ ತೊಡೆಯಿಂದ ನುಸುಳಿ ಬಾ… “

ವಾಹ್ ಅದೆಂತಹ ಅದ್ಭುತ ಕಲ್ಪನೆ, ಅದೆಂತಹ ವರ್ಣನೆ!! ಇನ್ನೂ ಹಲವಾರು ಕವಿಗಳು ಮಳೆಯನ್ನೇ ಪ್ರಧಾನ ವಿಷಯವನ್ನಾಗಿ ಕಾವ್ಯಧಾರೆಯನ್ನೇ ಹರಿಸಿದ್ದಾರೆ. ಕನ್ನಡಿಗರ ಮನದಲ್ಲಿ ತಮ್ಮ ನೀರಿನ ಕುರಿತಾದ ಭಾವಗೀತೆಗಳ ಮೂಲಕ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಇದು ಕವಿಗಳ ವಿಚಾರವಾದರೆ ಚಲನಚಿತ್ರಗಳಲ್ಲೂ ನೀರನ್ನು ಮುಖ್ಯ ಭೂಮಿಕೆಯಲ್ಲಿ ತೋರಿಸಿದ್ದಾರೆ. ಇದರಲ್ಲಿ ಕೆಲವು ಅಂದ್ರೆ ಅಮೃತ ವರ್ಷಿಣಿ ಚಿತ್ರದ ‘ತುಂತುರು ಅಲ್ಲಿ ನೀರ ಹಾಡು…’, ಜೀವನದಿ ಚಿತ್ರದ ‘ಕನ್ನಡ ನಾಡಿನ ಜೀವನದಿ..’, ಆಕ್ಸಿಡೆಂಟ್ ಚಿತ್ರದ ‘ಬಾ ಮಳೆಯೆ ಬಾ…’ ಇನ್ನು ಮಳೆಯಲ್ಲೇ ಚಿತ್ರೀಕರಿಸಲಾಗಿದ್ದ ಮುಂಗಾರುಮಳೆ ಚಿತ್ರವಂತೂ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿತ್ತು.

ಹೀಗೆ ನೀರಿನಿಂದ ಇಷ್ಟೆಲ್ಲಾ ಪ್ರಯೋಜನ ಪಡೆದುಕೊಳ್ಳುತ್ತಿರುವ ನಾವು ನೀರಿನ ಮಹತ್ವವನ್ನೇ ಸರಿಯಾಗಿ ಅರಿತುಕೊಂಡಿಲ್ಲ. ನೀರಿಲ್ಲದ ಒಂದು ಕ್ಷಣ ಊಹಿಸುವುದೂ ಬಲು ಕಷ್ಟ. ಹುಟ್ಟುವಲ್ಲಿಂದ ಸಾಯುವಲ್ಲಿವರೆಗೂ ನೀರು ನಿತ್ಯ ನಿರಂತರ.  ಆಧುನೀಕತೆಯ ಸೋಗಿನಲ್ಲಿ ನಾವು ಜಲಮೂಲಗಳನ್ನೇ ವಿನಾಶದಂಚಿಗೆ ತಳ್ಳಿದ್ದೇವೆ. ಜಲಮೂಲಗಳಾದ ಕೆರೆ ಕಟ್ಟೆ,ಬಾವಿ,ನದಿ, ಸರೋವರ, ಅಂತರ್ಜಲಗಳ ಬುಡ ಆಲಗಾಡುತ್ತಿದೆ. ಶುದ್ಧ ಕುಡಿಯುವ ನೀರು ಸಿಗದೆ ಶ್ರೀಸಾಮಾನ್ಯ ಪರದಾಡುತ್ತಿದ್ದಾನೆ. ಅಂತರ್ಜಲ ಬರಿದಾಗುತ್ತಿರುವುದರಿಂದ ಫ್ಲೋರೈಡ್ ಸಮಸೈ, ಪಾತಾಳಕ್ಕಿಳಿದರೂ ಕೊಳವೆಬಾವಿಗಳಲ್ಲಿ ನೀರು ದೊರೆಯದಿರುವುದು ಮುಂದೇನು ಎಂಬ ಯೋಚನೆಯನ್ನು ತೇಲಿಬಿಟ್ಟಿದೆ. ಕೆರೆ, ಬಾವಿಗಳು ಮಾಯವಾಗಿ ಆ ಸ್ಥಳದಲ್ಲಿ ಕಟ್ಟಡಗಳು ತಲೆಯೆತ್ತುತ್ತಿವೆ. ಇರುವ ಸ್ವಲ್ಪ ಪ್ರಮಾಣದ ನೀರೂ ಕೈಗಾರಿಕೆಗಳಿಂದಾಗಿ ಮಲಿನಗೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ ಎಂದು ಇಎ ವಾಟರ್ ಎಂಬ ಜಲ ಕ್ಷೇತ್ರದ ಕನ್ಸಲ್ಟಿಂಗ್ ಸಂಸ್ಥೆ ನಡೆಸಿರುವ ಅಧ್ಯಯನ ತಿಳಿಸಿದೆ.

ಕೇಂದ್ರ ಸರಕಾದ ಮಹತ್ವಾಕಾಂಕ್ಷಿ ಸ್ವಚ್ಚ ಭಾರತ ಯೋಜನೆ, ಸ್ಮಾರ್ಟ್ ಸಿಟಿ ಮತ್ತು ಗಂಗಾ ನದಿ ಶುದ್ಧೀಕರಣ ಯೋಜನೆ ನೀರಿನ ಸಂರಕ್ಷಣೆಯಲ್ಲಿ ಹೊಸ ಆಶಾಕಿರಣವಾಗಿ ಗೋಚರಿಸುತ್ತಿದೆ. ೨೦೧೯ ರ ಹೊತ್ತಿಗೆ ಎಲ್ಲ ಮನೆಗಳಿಗೆ ಶುದ್ಧ ಹುಡಿಯುವ ನೀರು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶಗಳಲ್ಲೊಂದು. ಸ್ವಚ್ಚ ಭಾರತ ಯೋಜನೆ ಮುಖೇನ ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಹಾಕದೇ ಇರುವುದರಿಂದ ನೀರು ಕಲುಷಿತಗೊಳ್ಳುವುದನ್ನು ಕಡಿಮೆ ಮಾಡುವುದೂ ಈ ಯೋಜನೆಯ ಹೈಲೈಟ್. ಮುಂದಿನ ದಿನಗಳಲ್ಲಿ ಭಾರತದಲ್ಲಿ ನೀರಿಗಾಗಿ ತೀವ್ರ ಬೇಡಿಕೆ ಬರುವುದರಿಂದ ಜಲ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಲು ವಿದೇಶಿ ಕಂಪನಿಗಳಿಗೆ ಅವಕಾಶ ನೀಡಲು ಪ್ರಧಾನಿ ಮೋದಿಯವರ ವಿದೇಶ ಪ್ರವಾಸ ಮಹತ್ತರವಾದ ಪಾತ್ರ ವಹಿಸುತ್ತಿದೆ. ಕೆನಡಾ, ಇಸ್ರೇಲ್, ಜರ್ಮನಿ, ಇಟಲಿ, ಅಮೆರಿಕಾ, ಚೀನಾ ಹಾಗೂ ಬೆಲ್ಜಿಯಂನಂತಹ ದೇಶಗಳಿಂದ ಜಲ ಕ್ಷೇತ್ರದಲ್ಲಿ ೮೨ ಸಾವಿರ ಕೋಟಿ ರೂ ಹೂಡಿಕೆಯಾಗುವ ನಿರೀಕ್ಷೆಯಿದೆ. ಆದರೆ ಎಲ್ಲಾ ಜವಾಬ್ದಾರಿ ಸರಕಾರದ ಮೇಲೆ ಹಾಕುವಂತಿಲ್ಲ. ಬರೀ ಸರಕಾರದಿಂದ ಮಾತ್ರ ಇದು ಸಾಧ್ಯವಾಗುವ ಮಾತಲ್ಲ. . ನೀರಿನ ಬಗ್ಗೆ ಬರೆಯುವುದು, ಮಾತಾಡುವುದು ನೀರು ಕುಡಿದಷ್ಟೇ ಸುಲಭ. ಆದರೆ  ಸಾರ್ವಜನಿಕ ಸಹಭಾಗಿತ್ವವವಿಲ್ಲದಿದ್ದರೆ ಮುಂದೊಂದು ದಿನ ಪೄಕೃತಿಯೆ ನಮಗೆ ನೀರು ಕುಡಿಸುವುದರಲ್ಲಿ ಅನುಮಾನವಿಲ್ಲ.

ಸುಜಲಾಂ ಸುಫಲಾಂ ಎಂದು ಭಕ್ತಿಯಿಂದ ಹಾಡುವವರು ನಾವು. ಜಲವಿದ್ದರೆ ಫಲವೂ ಇದೆ. ಅದಿಲ್ಲದಿದ್ದರೆ ಏನೇನೂ ಇಲ್ಲ ಎಂಬುದು ನಮಗೆಲ್ಲರಿಗೂ ಇನ್ನಾದರೂ ಅರ್ಥವಾಗಲಿ. .  Better late than never ಎಂಬಂತೆ ನೀರಿನ ಬಗ್ಗೆ ಬರೆಯೋಣ ಅನ್ನಿಸಿತು.  ಭಗೀರಥನಂತೆ ತಪಸ್ಸು ಮಾಡಿ ಗಂಗೆಯನ್ನು ಉಕ್ಕಿಸಲೂ ಹೇಗೂ ನಮ್ಮಿಂದ ಸಾಧ್ಯವಿಲ್ಲ. ಆದರೆ ಇರುವ ಗಂಗೆ(ನೀರು)ಯನ್ನು ಉಳಿಸಿಕೊಳ್ಳಲಂತೂ ಖಂಡಿತಾ ಸಾಧ್ಯವಿದೆ ಅಲ್ಲವೇ?

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post