ಬ್ರಿಟಿಷರ ಅಟ್ಟಹಾಸ-ಗುಂಡಿನ ಬೋರ್ಗರೆವ ಮಳೆ-ಸಾವಿರಾರು ಅಮಾಯಕರ ಆಕ್ರಂದನ-ಚೆಲ್ಲಾ ಪಿಲ್ಲಿಯಾಗಿ ಹರಡಿರುವ ರಕ್ತ ಸಿಕ್ತ ದೇಹಗಳು-ದಿಕ್ಕೇ ತೋಚದೆ ಬಾವಿಯಲ್ಲಿ ಜಿಗಿದು ಪ್ರಾಣ ಬಿಡುತ್ತಿರುವ ಜನ..
ಇವನೆಲ್ಲಾ ನೆನಸಿಕೊಂಡರೆ ಮೈ ಜುಂ ಎನ್ನುವುದರಲ್ಲಿ ಸಂಶಯವಿಲ್ಲ..
ಭಾರತದ ಇತಿಹಾಸದಲ್ಲೇ ಇದೊಂದು ಎಂದೂ ಕಂಡರಿಯದ ಕರಾಳವಾದ ದಿನ. ಭರತ ಖಂಡದಲ್ಲಿ ಸ್ವಾತಂತ್ರಪೂರ್ವ ಬ್ರಿಟಿಷರ ದಬ್ಬಾಳಿಕೆ ಹೇಗಿತ್ತು ಎಂಬುದಕ್ಕೆ ಇದೊಂದು ಪ್ರತ್ಯಕ್ಷ ನಿದರ್ಶನ. ಸಾವಿರಾರು ಅಮಾಯಕರನ್ನು ನಾಲ್ಕು ಗೋಡೆಗಳ ಮದ್ಯೆ ಭೀಕರವಾಗಿ ನರಸಂಹಾರಗೈದು, ಅಟ್ಟಹಾಸದಿ ಹೇಡಿತನ ಮೆರೆದ ಬ್ರಿಟಿಷರ ಈ ಕಾಂಡವೇ ‘ಜಲಿಯನ್-ವಾಲಾ-ಬಾಗ್ ಹತ್ಯಾಕಾಂಡ.
ಹೌದು!
ಪಂಜಾಬಿನಲ್ಲಿ ಸುಮಾರು ೯೬ ವರ್ಷಗಳ ಹಿಂದೆ ನಡೆದ ಘಟನೆ. ಅಂದು ಭಾನುವಾರ, ಏಪ್ರಿಲ್ 13, 1919. ಸಮಯ 4 ಘಂಟೆ-30 ನಿಮಿಷ. ವೈಶಾಖಿ ಪೂರ್ಣಿಮಾ ದಿನವಾದ ಅಂದು, ಸಿಖ್ ಸಮುದಾಯದವರು ಜಲಿಯನ್-ವಾಲಾ-ಬಾಗ್ ಎಂಬ ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಹಬ್ಬವನ್ನು ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸುತ್ತಿದ್ದ ಅವರುಗಳ ಮೇಲೆ ಬ್ರಿಟಿಷರ ಕೆಂಗಣ್ಣು ಬಿದ್ದಿತ್ತು. ಇದು ಅವರ ವಿರುದ್ಧ ಪಿತೂರಿಯತ್ನ ರಚಿಸಲು ಸೇರಿರುವ ಸಭೆ ಇರಬಹುದೆಂದು ಲೆಕ್ಕಿಸಿ, ವಿಚಾರಿಸದೆ ತನ್ನ ಸೈನ್ಯದೊಂದಿಗೆ ಒಳ ನುಗ್ಗಿದ ಜನರಲ್ ಡಯಾರ್ ಎಂಬಾತ ಏಕಾ-ಏಕಿ ಗುಂಡಿನ ಮಳೆಗಯ್ಯಲು ಆದೇಶಿಸಿದ. ಅಲ್ಲಿರುವ ಒಂದೇ ಒಂದು ಬಾಗಿಲಿನಿಂದ ನುಗ್ಗಿದ ಈ 150 ಜನರ ಸೇನೆ, ನಾಲ್ಕು ದಿಕ್ಕುಗಳಲ್ಲಿಯೂ ತನ್ನ ಸರ್ಪಗಾವಲನ್ನು ಪಸರಿಸಿ ಬರೋಬ್ಬರಿ 1650 ಗುಂಡುಗಳನ್ನು ಹಾರಿಸಲ್ಪಟ್ಟಿತು. ಗುಂಡಿನಿಂದ ತಪ್ಪಿಸಿಕೊಳ್ಳಲು ಕೆಲವರು ಗೋಡೆ ಏರಿ ವಿಫಲ ಪ್ರಯತ್ನ ಪಟ್ಟರೆ, ತಾಯಂದಿರು ಮಕ್ಕಳೊಂದಿಗೆ ಬಾವಿಯೊಳಗೆ ಜಿಗಿದು ಪ್ರಾಣ ತ್ಯಜಿಸಿದರು. ಮಹಿಳೆಯರು, ಮಕ್ಕಳು, ಅಮಾಯಕರೆಂಬುದನ್ನು ಲೆಕ್ಕಿಸದೆ ನರಸಂಹಾರ ನಡೆಸಿದ ಬರ್ಬರ ಘಟನೆ ಅದಾಗಿತ್ತು. ಅಲ್ಲಿದ್ದ ಎಲ್ಲರೂ ಹತರಾಗಿದ್ದರು ಎಂಬುದು ವಿಷಾದನೀಯ.
ಸೂತಕದ ಛಾಯೆಯ ಮದ್ಯೆ ಹಠ ಹಿಡಿದು ಅಲ್ಲಿಗೆ ತನ್ನ ತಂದೆಯೊಂದಿಗೆ ಧಾವಿಸಿದ ಒಬ್ಬ ಪುಟಾಣಿ ಪೋರ ಛಿದ್ರ-ಛಿದ್ರಗೊಂಡ ದೇಹಗಳನ್ನು ದುರುಗುಡುತ್ತ ನಿಂತ. ಸ್ವತ: ಕುಟುಂಬವೆಂದು ನಂಬಿದ್ದ ಭಾರತೀಯರನ್ನು ಆತ ಕಳೆದುಕೊಂಡಿದ್ದ.ಅವನ ಭಾವನೆ ಹೇಳತೀರದು. ಮನಸ್ಸಿನ ಭಾವನೆಯನ್ನು ತಡೆ ಹಿಡಿದ ಆತ ಒಂದು ಹನಿ ಕಣ್ಣೀರು ಇಡಲಿಲ್ಲ, ಬದಲಾಗಿ ಆ ರಕ್ತದಲ್ಲಿ ಒಂದಾದ ಮಣ್ಣನ್ನು ಕೈಯಲ್ಲಿ ಹಿಡಿದು ಈ ಭಾರತದಿಂದ ಬ್ರಿಟಿಷರನ್ನು ಓಡಿಸುವ ಪಣತೊಟ್ಟ. ಈ ಛಲವಾದಿ ಬೇರಾರು ಅಲ್ಲ, ಮುಂದೊಂದು ದಿನ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಸಾಕ್ಷಾತ್ ಕೆಚ್ಚೆದೆಯ ’ಭಗತ್ ಸಿಂಗ್’. ಅವನಲ್ಲಿ ದೇಶಭಕ್ತಿಯ ಕಿಚ್ಚು ಎಷ್ಟು ಹೊತ್ತಿ ಉರಿಯುತ್ತಿತ್ತು ಎನ್ನುವುದಕ್ಕೆ ಇದೆ ಸಾಕ್ಷಿ. ಅಂದು ಈ ಜಲಿಯನ್-ವಾಲಾ-ಬಾಗ್ ಘಟನೆ ಭಗತ್ ನಂತಹ ಸಾವಿರಾರು ಯುವಕರ ಮನಸಲ್ಲಿ ಕ್ರಾಂತಿಯ ರೂಪು ಹೊತ್ತಿಸ್ಸಿದ್ದು ಎಂದರೆ ಸುಳ್ಳಾಗಲಾರದು.
ಈ ಹತ್ಯಾಕಾಂಡಕ್ಕೆ ಇಂದು ವರ್ಷಗಳೇ ಸಂದಿವೆ. ಅಂದು ಬ್ರಿಟಿಷರ ದಬ್ಬಾಳಿಕೆಗೆ ಹುತಾತ್ಮರಾದ ಎಲ್ಲಾ ಭಾರತೀಯರನ್ನು ನೆನೆಸುತ್ತಾ, ನಾವು ಈ ಪೀಳಿಗೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರ, ಅತ್ಯಾಚಾರದಂತಹ ಕೆಟ್ಟ ವಿಚಾರಧಾರೆಗಳನ್ನು ಮೂಲ ಸಮೇತ ಕಿತ್ತೊಗೆಯುವ ಪ್ರಯತ್ನ ಮಾಡುವ ಪಣ ತೊಡುವಾ.
ದೇಶವನ್ನು ಉನ್ನತ ಹಾದಿಯತ್ತ ಕೊಂಡೊಯುತ್ತ..
ಸರ್ಫ್ ರೋಷಿ ಕೀ ತಮನ್ನಾ
ಅಬ್ ಹಮಾರೆ ದಿಲ್ ಮೇ ಹೇ,
ದೇಖ್ ನಾಯೇ ಝೋರ್ ಕಿತನಾ
ಬಾಜು-ಎ-ಖಾತಿಲ್ ಮೇ ಹೇ..
‘ಇನ್ಕಿಲಾಬ್ ಜಿಂದಾಬಾದ್’
Facebook ಕಾಮೆಂಟ್ಸ್