Critic Ratings 3.5 [yasr_overall_rating size=”large”]
ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಕನ್ನಡ ಚಿತ್ರಗಳೇ ಸಾಲು ಸಾಲಾಗಿ ತೋಪಾಗುತ್ತಿರುವಾಗ, ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕೊಟ್ಟು ಮಕ್ಕಳಿಂದ ಮುದುಕರವರೆಗೂ ಎಲ್ಲರ ಮನಗೆದ್ದ ನಟ “ಶರಣ್” ಎಂದರೆ ತಪ್ಪಾಗಲಾರದು. ಹಲವು ವರ್ಷಗಳ ಕಾಲ ಹಾಸ್ಯನಟನಾಗಿ, ಪೋಷಕ ನಟನಾಗಿ ತೆರೆಯ ಮೇಲೆ ಮಿಂಚುತ್ತಿದ್ದ ಶರಣ್, “ರಾಂಬೋ” ಚಿತ್ರದಿಂದ ನಾಯಕ ನಟನಾಗಿ “ವಿಕ್ಟರಿ”, “ಅಧ್ಯಕ್ಷ”ದಂತಹ ಹಿಟ್ ಚಿತ್ರಗಳನ್ನು ನೀಡಿ ಇದೀಗ “ರಾಜರಾಜೇಂದ್ರ” ಚಿತ್ರದ ಮೂಲಕ ತೆರೆಯ ಮೇಲೆ ಬಂದಿದ್ದಾರೆ.
ಒಂದು ಕಡೆ ನಗರದಲ್ಲಿ ಕುಖ್ಯಾತ ಕಿಲ್ಲರ್ “ಬಾಟಲ್ ಮಣಿ” (ರವಿಶಂಕರ್). ಆತನ ಹೆಸರಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವವನು “ಡ್ಯೂಪ್ಲಿಕೇಟ್ ಮಣಿ” (ಶರಣ್). ಇನ್ನೊಂದು ಕಡೆ ರಾಜಮನೆತನದ ಮುಖ್ಯಸ್ಥ ನೀಲಕಂಠ (ರಾಮಕೃಷ್ಣ), ಆತನ ಮೂವರು ಮಕ್ಕಳು, ಮೊಮ್ಮಕ್ಕಳು. ಅರಮನೆಯ ಶಾಸ್ತ್ರಿಗಳ (ಸುಚೇಂದ್ರ ಪ್ರಸಾದ್) ಮಗಳು ಸ್ವಾತಿಯನ್ನೂ (ಇಶಿತಾ ದತ್ತಾ) ತನ್ನ ಮೊಮ್ಮಗಳಂತೆ ಕಾಣುವವನು ನೀಲಕಂಠ. ಇಂತಹ ನೀಲಕಂಠನ ಆಸ್ತಿ ಕಬಳಿಸುವ ಸಲುವಾಗಿ ಆತನ “ತಿಥಿ” ಮಾಡಲು ಹೊಂಚು ಹಾಕಿರುವವರು ಐನಾತಿ ಅಳಿಯಂದಿರು. ಆದರೆ ಕಳೆದು ಹೋಗಿರುವ ಮಗ, ಮೊಮ್ಮಗನ ನಿರೀಕ್ಷೆಯಲ್ಲಿರುವ ನೀಲಕಂಠ ಅಷ್ಟು ಬೇಗ ಸಾಯುವನೇ? ಈ ಸಂದರ್ಭದಲ್ಲಿ ಕೊಲೆಯ ಸುಪಾರಿ ಹೊತ್ತ “ಡ್ಯೂಪ್ಲಿಕೇಟ್ ಮಣಿ”, ಮೊಮ್ಮಗನಾಗಿ ಅರಮನೆಗೆ ಎಂಟ್ರಿ. ಇನ್ನು ನೀಲಕಂಠನನ್ನು ಆತ ಸಾಯಿಸುತ್ತಾನೋ ಇಲ್ಲವೋ, ನಿಜವಾದ ಮೊಮ್ಮಗನ ಆಗಮನ ಆಗುತ್ತದೋ ಇಲ್ಲವೋ ಎಂಬುದನ್ನು ಎರಡೂವರೆ ಘಂಟೆಗಳ ಮಜವಾದ ಚಿತ್ರದಲ್ಲಿಯೇ ನೋಡಬೇಕು.
ನಿರ್ದೇಶಕ ಪಿ. ಕುಮಾರ್ “ವಿಷ್ಣುವರ್ಧನ” ಚಿತ್ರದ ಬಳಿಕ ಮತ್ತೊಂದು ಹಾಸ್ಯಭರಿತ ಚಿತ್ರವನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾರೆ. ಶರಣ್ ಅಭಿನಯದಲ್ಲಿ ಹುಳುಕಿಲ್ಲ. ಹೊಸ ಮುಖ ಇಶಿತಾ ದತ್ತಾ ಪರವಾಗಿಲ್ಲ. ರವಿಶಂಕರ್ ಇನ್ನೂ ಸ್ವಲ್ಪ ಹೊತ್ತು ತೆರೆಯ ಮೇಲೆ ಇರಬೇಕಿತ್ತು ಎಂದು ಅನಿಸಬಹುದು. ಸುಚೇಂದ್ರ ಪ್ರಸಾದ್ ಇಂತಹ ಪಾತ್ರಗಳನ್ನೂ ಮಾಡುತ್ತಾರೋ ಎಂದು ಅಚ್ಚರಿ ಮೂಡಬಹುದು. ಸಾಧುಕೋಕಿಲ ಆಕ್ಟಿಂಗ್ ನೋಡುತ್ತಲೇ ನಗು ಮೂಡುತ್ತದೆ. ಆತ್ಮಗಳನ್ನು “ಬಾಟಲ್”ಗಳಲ್ಲಿ ಬಂಧಿಸಿಡುವ ಮಂತ್ರವಾದಿಯಾಗಿ ಕುರಿ ಪ್ರತಾಪ್ ಪಾತ್ರ ಕೂಡಾ ಚೆನ್ನಾಗಿದೆ. “ಮುತ್ತಿನ ನರ್ಸ್” ಜಯಲಕ್ಷ್ಮಿ ಕೂಡ ಒಂದು ಸಣ್ಣ ಪಾತ್ರದಲ್ಲಿ ಮಿಂಚಿದ್ದಾರೆ. ಶ್ರೀನಿವಾಸಮೂರ್ತಿಯವರ ಪಾತ್ರ ಮತ್ತು ಸನ್ನಿವೇಶ ಅನಗತ್ಯ. ಲಾಜಿಕ್ ಇಲ್ಲದ ಸೀನ್ ಗಳು ಒಮ್ಮೆಗೆ ಆಶ್ಚರ್ಯ ಹುಟ್ಟಿಸಿದರೂ ಮರುಕ್ಷಣ ನಗು ಮೂಡಿಸುತ್ತವೆ. ದೃಶ್ಯಗಳಲ್ಲಿ ಅಲ್ಲಲ್ಲಿ ನಿರ್ದೇಶಕರ ಸೋಂಭೇರಿತನ ಎದ್ದು ಕಾಣುತ್ತದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಹೊಳಪಿಲ್ಲ. ಚಿತ್ರದ ಪ್ರಮುಖ ಆಕರ್ಷಣೆ ಕ್ಲೈಮ್ಯಾಕ್ಸ್ ನಲ್ಲಿ ನಡೆಯುವ ದೊಂಬರಾಟ! ಎರಡೂವರೆ ಘಂಟೆಗಳ ಕಾಮಿಡಿ ಭೋಜನದಲ್ಲಿ ಕೊನೆಗೆ ಪಾಯಸ ಉಂಡಂತೆ!
ಹಾಸ್ಯ, ಆಕ್ಷನ್, ದೆವ್ವ-ಭೂತ, ಆಸ್ತಿ, ಪಿತೂರಿ ಇಂತಹ ವಿಷಯಗಳನ್ನು ಇಟ್ಟುಕೊಂಡು ಹೊಗಳುವಂತಹ ಅಲ್ಲದಿದ್ದರೂ ಮನರಂಜನೆಯಿಂದ ಕೂಡಿರುವ ಚಿತ್ರವನ್ನು ನೋಡುಗರಿಗೆ ನೀಡುವುದು ಕೂಡಾ ಒಂದು ಸಾಧನೆಯೇ. ಈ ವಿಷಯದಲ್ಲಿ ನಿರ್ದೇಶಕ ಪಿ. ಕುಮಾರ್ ಗೆದ್ದಿದ್ದಾರೆ ಎಂದೇ ಹೇಳಬಹುದು. ಚಿತ್ರವನ್ನು ನೋಡುವ ಸಮಯದಲ್ಲಿ ಲಾಜಿಕ್ ಮರೆತರೆ ಬಹಳ ಎಂಜಾಯ್ ಮಾಡಬಹುದು! ಕುಟುಂಬ ಸಮೇತರಾಗಿ ಟೈಮ್ ಪಾಸ್ ಮಾಡಲು ಒಂದು ಒಳ್ಳೆಯ ಸಿನಿಮಾ. ಮುಂದಿನ ದಿನಗಳಲ್ಲಿಯೂ ಇಂತಹ ಮನರಂಜನಾತ್ಮಕ ಕನ್ನಡ ಚಿತ್ರಗಳು ನಮ್ಮ ಮುಂದೆ ಬರಲಿ ಮತ್ತು ಈ ಮೂಲಕ ಕನ್ನಡ ಚಿತ್ರರಂಗ ಒಳ್ಳೆಯ ಚಿತ್ರಗಳಿಗೆ ಹೆಸರಾಗಲಿ ಎಂಬುದೇ ನಮ್ಮ ಆಶಯ.
[yasr_visitor_votes size=”large”]
Facebook ಕಾಮೆಂಟ್ಸ್