X
    Categories: ಅಂಕಣ

ತುಳುನಾಡ ಕೆಡ್ಡಸ. – ಭೂಮಿ ಋತುಮತಿಯಾಗುವುದು

ತುಳುನಾಡು ಅಂದ ಕೂಡಲೇ ಅಲ್ಲಿನ ಆಚರಣೆ, ಕ್ರಮ, ನಿಲುವುಗಳಲ್ಲಿ ಒಂದಷ್ಟು ಬಿನ್ನ ವಿಶೇಷತೆಯಿಂದಲೇ ಕೂಡಿರುತ್ತದೆ. ಇಲ್ಲಿ ಪಂಚಭೂತಗಳನ್ನು ವಿವಿಧ ರೀತಿಯಿಂದ ವಿಶೇಷವಾಗಿ ಆಚರಿಸುವುದು ವಾಡಿಕೆ. ಹೌದು ಇಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ ಹಿಂದಿನಿಂದಲೂ ಅಕ್ಕನೇ ಮನೆಯೊಡತಿ, ಆಳಿಯಕಟ್ಟು ಪದ್ಧತಿಯೇ ಇದಕ್ಕೆ ಮೊಹರು… ಹೌದು ಅದುದರಿಂದಲೇ ಇಲ್ಲಿ ಭೂಮಿಯನ್ನು ಹೆಣ್ಣು ಎಂದು ಸಂಕಲ್ಪಿಸಿ ಮಾನುಷಿಕವಾಗಿ ಸಾಮಾನ್ಯ ಸ್ತ್ರಿಯಲ್ಲಾಗುವ ಪ್ರಕೃತಿ ಸಹಜ ಬದಲಾವಣೆಯನ್ನು ಭೂತಾಯಿಯಲ್ಲಿ ಸಂಭೂತ ಮಿಲಿತವಾಗಿಸಿ ಅವಳನ್ನು ದೇವಿಯೆಂದು ಅರಾಧಿಸುವುದು, ಅವಳ ಮೊದಲ ಋತುಸ್ರಾವವನ್ನು ಸಂಭ್ರಮಿಸುವುದು, ಹೇಗೆ ಮನೆ ಹುಡುಗಿ ದೊಡ್ಡವಳಾದಲೆಂದು ಮನೆಯವರೆಲ್ಲಾ ಸಂಭ್ರಮಿಸುತ್ತಾರೋ, ಮದಿಮಾಲ್ ಮದಿಮೆ ಮಾಡಿ ಊರವರನ್ನೆಲ್ಲಾ ಕರೆದು ಪುಟ್ಟ ಮಗಳಿಗೆ ಸೀರೆ ಉಡಿಸಿ ಮದುವೆ ಮಾಡುತ್ತರೋ…  ತಿನ್ನಲು ಬೊಂಡ, ಬಣ್ಣಂಗಾಯಿ, ಕೊಟ್ಟು ತಂಪು ಮಾಡಿ, ಪ್ರೀತಿಪಾತ್ರರಿಂದ ಸಿಹಿತಿಂಡಿ ನೀಡಿ ಬಾಯಿ ಸಿಹಿಮಾಡಿ, ಮತ್ತೆ ಅರಶಿನ, ಕುಂಕುಮ , ತಲೆಗೆ ತೆಂಗಿನ ಎಣ್ಣೆ , ಸ್ನಾನದ ನೀರಿಗೆ ಹಲಸಿನ ಎಲೆ, ಮಾವಿನ ಎಲೆ ಹಾಕಿ ಸ್ನಾನ ಮಾಡಿಸಿ, ಹೊಸ ಕಾಜಿ, ಹೊಸ ಬಟ್ಟೆ ಹಾಕಿಸಿ ಮದಿಮಾಲ್ ಮಾಡುವುದೆಂದರೆ ಮನೆಮಂದಿಗೆಲ್ಲ ಅದೇನೋ ಖುಷಿಯೋ ಖುಷಿ. ಮನೆ ಹುಡುಗಿ ಮದ್ಮಲಾಯಲ್ ಅದಳು ಅಂದರೆ ಸೃಷ್ಟಿಸುವ ಕಾರ್ಯಕ್ಕೆ ಅನುವಾದಳು ಎಂಬರ್ಥ  ಅದೇ ಖುಷಿಯನ್ನು ಭೂಮಾತೆಯಲ್ಲೂ ನೋಡುವಂತಹ ತುಳುವರ ವಿಶೇಷ ಆಚರಣೆಯೇ ಕೆಡ್ಡಸ, ವರ್ಷದಲ್ಲೊಮ್ಮೆ ಭೂಮಿಯು ಮುಟ್ಟಾಗುತ್ತಾಳೆ ಎಂಬ ಪ್ರತೀತಿ. ಅಂದರೆ  ಜಗದಲ್ಲಾಗುವ ಹಗಲು – ರಾತ್ರಿ, ಋತು ಬಿಸಿಲು, ಮಳೆ, ಚಳಿ, ಹಾಗೆಯೇ ಹುಣ್ಣಿಮೆ – ಅಮಾವಾಸ್ಯೆಗಳು ನಮ್ಮ ಬಾಹ್ಯ ಅನುಭವಕ್ಕೆ ಬರುವಂತಹುದು ಅದರೆ ಸಂಕ್ರಮಣ, ಉತ್ತರಾಯಣಗಳು ನಮ್ಮ ಯೋಚನೆಗೆ ನಿಲುಕದ್ದು ಅದೇ ಪ್ರಕೃತಿಯ ಋತುಚಕ್ರ ಈ ವ್ಯತ್ಯಯಗಳ ಕಾಲವನ್ನೇ ತುಳುವರು ಒಂದೊಂದು ಆಚರಣೆಯ ರೂಪದಲ್ಲಿ ಆರಾಧಿಸುತ್ತಿರುವುದು.

ಇಂತಹ ಒಂದು ಆಚರಣೆಯಲ್ಲಿ ಒಂದು ಈ ಕೆಡ್ಡಸ, ಇಲ್ಲಿನ ಜನ ಮಣ್ಣಪ್ಪೆ ಭೂಮಿಯನ್ನು ಹೆಣ್ಣಿನ ಸ್ಥಾನ ನೀಡಿ ಪ್ರೀತಿಸುವವರು, ಇದು ತುಳು ತಿಂಗಳ ಪೊನ್ನಿ(ಮಕರ) 27 ಕ್ಕೆ ಭೂರಮೆ ದೊಡ್ಡವಾದಳೆಂಬ ನಂಬಿಕೆ, ಸಾಮಾನ್ಯವಾಗಿ ಫೆಬ್ರುವರಿ ತಿಂಗಳಲ್ಲಿ ಬರುತ್ತದೆ  ಮೂರು ದಿನದ ಈ ಆಚರಣೆಯಲ್ಲಿ ಮೊದಲ ದಿನ ಮೊದಲ ಕೆಡ್ಡಸ, ಮರುದಿನ ನಡು ಕೆಡ್ಡಸ, ಮೂರನೆ ದಿನ ಕಡೆ ಕೆಡ್ಡಸ.. ಈ ಸಮಯಕ್ಕೆ ಮಳೆ ಸರಿದು ಫಲ ಗಾಳಿ ಬೀಸುತ್ತಿರುತ್ತದೆ ಮಾವು, ಗೊಂಕು, ಹಲಸುಗಳೆಲ್ಲ ನಿನೆ ಬಿಟ್ಟು ತೆನೆಗೆ ಸಜ್ಜಾಗಿರುತ್ತದೆ.

ಕೆಡ್ಡಸದ ಮೊದಲ ದಿನ ಅಷ್ಟೊಂದು ವಿಶೇಷತೆಯಿಲ್ಲದಿದ್ದರೂ ಪುರುಷರು ಕತ್ತಿ, ನೊಗ, ಹಾರೆಗಳಿಗೆ ಪ್ರಾರ್ಥಿಸುವ ಕ್ರಮವಿದೆ ಮುಂದಿನ ಮೂರು ದಿನ ಕತ್ತಿ , ನೊಗ ,  ಹಾರೆಗಳು ಒಟ್ಟಾರೆ ಹತ್ಯಾರುಗಳಿಗೆ ರಜೆ, ತೋಟದ ಕೆಲಸ, ಮರಕಡಿಯುವುದು, ನೆಲ ಅಗೆಯುವುದು, ಹಸಿ ಕೀಳುವುದು, ತರಕಾರಿ ಕೀಳುವುದು,  ನೀರೆರೆಯುವುದು, ಗದ್ದೆ ಕೆಲಸಗಳನ್ನು ಮಾಡಬಾರದು ಭೂ ಕುಮಾರಿಗೆ ರಜಸ್ವಲೆಯಾಗಿರುವಾಗ ಕೃಷಿಕೆಲಸ ಮಾಡಿ ನೋವುಂಟು ಮಾಡಿದರೆ ಭೂಮಿಗೆ ನೋವಾಗುತ್ತದೆ ಆಕೆ ಬಂಜೆಯಾಗುತ್ತಾಳೆ ಎಂಬುವುದು ಅದರ ಹಿನ್ನೆಲೆ. ಮೂರನೇ ದಿನ ಮಹತ್ವದ ದಿನ ಆಕೆಯ ಮೈಲಿಗೆಯ ಶುದ್ಧಚರಣೆಗೆ ಮನೆಯ ಹೆಣ್ಣು ಮಕ್ಕಳು ಸ್ನಾನ ಮಾಡಿ ತುಳಸಿ ಕಟ್ಟೆಯ ಎದುರು ಗೋಮಯದಿಂದ ಶುದ್ಧಿಗೊಳಿಸಿ ಕ್ರಮವಾಗಿ ಹಲ್ಲುಜ್ಜಲು ಇದ್ದಿಲು ಮಾವಿನ ಎಲೆ, ತಲೆಗೆ ಎಣ್ಣೆ ಬಿಟ್ಟು, ಹಲಸಿನ ಎಲೆ, ಅರಶಿನ ಸ್ನಾನದ ನೀರಿಗೆ ಹಾಕಲು, ಸೀಗೆ, ನರ್ವೋಲ್ ಮೈ ಉಜ್ಜಿಕೊಳ್ಳಲು ಇಟ್ಟರೆ ಕುಂಕುಮ ಹಣೆಗೆ ತಿಲಕವನ್ನಿಡಲು, ದರ್ಪಣ, ಬಾಚಣಿಕೆ ಸೌಂದರ್ಯ ದೋತ್ಯಕವಾದರೆ ಚೀತ್(ಸೀಳಿದ) ಬಾಳೆಎಲೆಯಲ್ಲಿ ನನ್ಯರಿಗಳನ್ನು ಸಾಲಾಗಿ ಇಟ್ಟು ಆಕೆಗೆ ಸಮ್ಮಾನ ಮಾಡಿ ಪ್ರಾರ್ಥಿಸುವುದು ಹೆಂಗಸರ ಕಾರ್ಯ ಜೊತೆಗೆ ತೆಂಗಿನ ಗರಿ ಕಡ್ಡಿ, ಕಿರು ಕತ್ತಿಯನ್ನು ಇಡುವುದು ಕ್ರಮ. ಕೆಡ್ಡಸದ ವಿಶೇಷ ತಿನಿಸು ಅಂದ್ರೆ ಅದು ನನ್ಯರಿ, ಕೆಡ್ಡಸದ ಹಿಂದಿನ ರಾತ್ರಿ ಸೇರು ಕುಚ್ಚಲಕ್ಕಿ ಜಾಲಿಸಿ, ಸ್ವಲ್ಪ ಉಪ್ಪಿನ ನೀರು ಕೊಟ್ಟು ಒಡು ಪಾಲೆ ಅಡ್ಯೆ ಮಾಡುವ ಒಡಿನ ತುಂಡು ಅಥವಾ ಕಾವಲಿಯಲ್ಲಿ ಕುಚ್ಚಲಕ್ಕಿ, ಹುರುಳಿ, ಹೆಸರು, ನೆಲಗಡಲೆ, ಗೇರುಬೀಜ, ಎಳ್ಳು, ಮೆಂತೆ ಸೇರಿಸಿ ಹುರಿದು ಮತ್ತೆ ಕಡೆಪಕಲ್ಲಿಗೆ(ಬೀಸು ಕಲ್ಲು) ಹಾಕಿ ಅರೆದು ಹುಡಿಮಾಡಿದರೆ ಕೆಡ್ಡಸದ ಪ್ರಾಥಮಿಕ ಸಿದ್ಧತೆ ಪೂರ್ಣವಾಯಿತು. ಮರುದಿನ ಬೆಳಗ್ಗೆ ಬೇಗ ಎದ್ದು ದೊಡ್ಡ ಅಡ್ಯೆತಾ ಕರದಲ್ಲಿ ಬೇಕಾದಷ್ಟು ಪೆರೆಸಿದ ಬೆಲ್ಲ, ತೆಂಗಿನ ಕಾಯಿ ತುರಿದು ಸ್ವಲ್ಪ ತುಪ್ಪ ಸೇರಿಸಿರೆ ನನ್ಯರಿ ಸಿದ್ಧ . ಮತ್ತೆ ಹೊದ್ಲು, ಹುರಿಯಕ್ಕಿ ಹಾಕಿ ಬಾಳೆಹಣ್ಣಿನೊಂದಿಗೆ ನೆಂಚಿ ತಿನ್ನಲು ಅದೆನೋ ಸೊಗಸು. ಬೆರೆಸದ ನನ್ಯರಿಯನ್ನು ಹಳೆಯ ಡಬ್ಬಗಳಲ್ಲಿ ತುಂಬಿಸಿಟ್ಟು ಬಂದ ಬಂಧುಗಳಿಗೋ, ಬಯ್ಯಾತ ಚಾಯಕ್ಕೋ ಪ್ರತಿ ಮನೆಯಲ್ಲಿಯೂ ವಾರಗಟ್ಟಲೇ ಕಾಯುತ್ತಿರುತ್ತದೆ. ಈ ನನ್ಯರಿ ಆರೋಗ್ಯಕ್ಕೂ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಮತ್ತೆ ಮಧ್ಯಾಹ್ನದ ಊಟಕ್ಕೆ ನುಗ್ಗೆ – ಬದನೆ ವಿಶೇಷ ಪದಾರ್ಥ ಅಗಲೇ ಬೇಕು.

ಕೆಡ್ಡಸ ಹಬ್ಬದ ಒಂದು ವಾರದ ಮೊದಲು ಆ ಗ್ರಾಮದ ಭೂತ ನಲಿಕೆ ಜನ, ಪಾಣರ ಜನ, ಮನೆ ಮನೆಗೆ ಬೇಟಿ ನೀಡಿ ಕೆಡ್ಡಸದ ಲೆಪ್ಪೋಗೆ ಕೊಡಲು ಬರುವುದು ಸಾಮಾನ್ಯ ಮನೆಯ ಹಿರಿಯರು ಕೊಟ್ಟ ಬಚ್ಚಿರೆ – ಬಜ್ಜೆಯಿಯನ್ನು ಮೆಲ್ಲುತ್ತಾ ಒಂದಷ್ಟು ಕ್ಷೇಮ ಸಮಾಚಾರ ಮಾತನಾಡಿಸಿ ಅವರ ಕಟ್ಟಿನ ಪಾಡ್ದನದ ಹಾಡು ಹೇಳಿ ಕೆಡ್ಡಸ ಕರೆ ತರುತ್ತಾರೆ. ಅವರಿಗೆ ಸೇರು ಕುಚ್ಚಲಕ್ಕಿ, ಒಂದು ಚೆಪ್ಪು ಇರುವ ದೊಡ್ಡ ತೆಂಗಿನಕಾಯಿ, ಉಪ್ಪು, ಮೆಣಸು, ಹುಳಿ, ಅರಶಿನ ತುಂಡು, ಬಚ್ಚಿರೆ, ಬಜ್ಜೆಯಿ ನೀಡಿ ಕಳುಹಿಸಿ ಕೊಡಬೇಕು. ಕೆಡ್ಡಸದ ದಿನ ಸಂಕ್ರಾಂತಿಯಾದುದರಿಂದ ದೈವಸ್ಥಾನ ಬಾಗಿಲು ತೆರೆದು ದೀಪ ಇಡುವ ಕ್ರಮವೂ ಇದೆ.

ನಲಿಕೆಯವರ ಪಾಡ್ದನ ಹೀಗಿದೆ .

“ಸೋಮವಾರ ಕೆಡ್ಡಸ,

ಮುಟ್ಟುನೆ ಅಂಗಾರ ನಡು ಕೆಡ್ಡಸ

ಬುಧವಾರ ಬಿರಿಪುನೆ

ಪಜಿ ಕಡ್ಪರೆ ಬಲ್ಲಿ

ಉನುಂಗೆಲ್ ಪೊಲಿಪ್ಯರೆ ಬಲ್ಲಿ,

ಅರಸುಲೆ ಬೋಟೆಂಗ್

ಸರ್ವೆರ್ ಉಲ್ಲಾಯನಕುಲು ಪೋವೋಡುಗೆ.

ವಲಸಾರಿ ಮಜಲ್ಡ್ ಕೂಡ್ದು

ವಲಸರಿ ದೇರ್ದ್ದ್  ಪಾಲೆಜ್ಜಾರ್ ಜಪ್ಪುನಗ

ಉಳ್ಳಾಲ್ದಿನಕುಲು  ಕಡಿಪಿ ಕಂಜಿನ್ ನೀರ್ಡ್  ಪಾಡೋದು.

ಓಡುಡ್  ಕಡೆವೊಡು, ಕಲ್ಲ್ ಡ್ ರೊಟ್ಟಿ ಪತ್ತವೊಡು.

ಮಲ್ಲ ಮಲ್ಲ ಮೃರ್ಗೊಲು ಜತ್ತ್ದ್ ಬರ್ಪ.

ಕಟ್ಟ ಇಜ್ಜಾಂದಿ ಬೆಡಿ, ಕದಿ ಕಟ್ಟಂದಿನ ಪಗರಿ,

ಕೈಲ ಕಡೆಲ ಪತ್ತ್ದ್

ಉಜ್ಜೆರ್ಗೊಂಜಿ ಎರ್ಪು ಏರ್ಪಾದ್

ಇಲ್ಲ ಬೇತ್ತಡಿತ್  ಉಂತೊಂದು

ಮುರ್ಗೊಲೆಗ್ ತಾಂಟಾವೊಡು.

ಮಲ್ಲ ಮಲ್ಲ ಮುರ್ಗೊಲೆನ್ ಜಯಿಪೊಡು.

ಎಂಕ್ ಅಯಿತ ಕೆಬಿ, ಕಾರ್, ಕೈ, ಉಪ್ಪು, ಮುಂಚಿ, ಪುಳಿ ಕೊರೊಡು.”

 (ಸೋಮವಾರ ಕೆಡ್ಡಸ ಪ್ರಾರಂಭವಾಗುವುದು. ಮಂಗಳವಾರ ನಡು ಕೆಡ್ಡಸ. ಬುಧವಾರ ಮುಕ್ತಾಯ. ಹಸಿ ಕಡಿಯಬಾರದು. ಒಣಗಲು ಮುರಿಯಬಾರದು. ಅರಸುಗಳ ಬೇಟೆಗೆ ಎಲ್ಲಾ  ಯಜಮಾನರು ಹೋಗಬೇಕಂತೆ. ವಲಸರಿ ಮಜಲಿನಲ್ಲಿ ಕೂಡಿ ಓಡಾಡಿ ಬೆನ್ನಟ್ಟಿ ಪಾಲೆಚಾರಿನಲ್ಲಿ ಇಳಿಯುವಾಗ ಒಡತಿಯರು ಕಡೆಯುವ ಕಲ್ಲಿನ ಗುಂಡುಕಲ್ಲನ್ನು ನೀರಲ್ಲಿ ಹಾಕಬೇಕು. ಮಡಿಕೆ ತುಂಡಿನಲ್ಲಿ ಅರೆಯಬೇಕು. ಕಲ್ಲಿನಲ್ಲಿ ರೊಟ್ಟಿ ಹಚ್ಚಬೇಕು. ದೊಡ್ಡ ದೊಡ್ಡ ಮೃಗಗಳು ಇಳಿದುಕೊಂಡು ಬರುತ್ತವೆ. ಬಣ್ಣ ಬಣ್ಣದ ಕಾಡಕೋಳಿ, ಬಿರುರೋಮದ ಹಂದಿ, ನಾಲ್ಕು ಕಾಲಿನ ಕಡವೆ, ಚುಕ್ಕೆಯ ಜಿಂಕೆಗಳು ಇಳಿದುಕೊಂಡು ಬರುತ್ತವೆ. ಕೆಟ್ಟು ಇಲ್ಲದ ಕೋವಿ, ಗರಿ ಇಲ್ಲದ ಬಾಣ, ಸೌಟಿನ ಹಿಡಿ, ಒನಕೆಯನ್ನು ಮೇಲಕ್ಕೆತ್ತಿ ಮನೆಯ ಹಿಂಬದಿ ನಿಲ್ಲಬೇಕು. ಮೃಗಗಳಿಗೆ ತಾಗಿಸಬೇಕು. ದೊಡ್ಡ ದೊಡ್ಡ ಮೃಗಗಳನ್ನು ಗೆಲ್ಲಬೇಕು. ಅದರ ಕೈ, ಕಾಲು, ಕಿವಿ ಮತ್ತು ಉಪ್ಪು, ಮೆಣಸು, ಹುಳಿ ನನಗೆ ಕೊಡಬೇಕು)

ಮೇಲಿನ ಡಂಗುರಪದ ಕೆಡ್ಡಸದ ಸಮಯದಲ್ಲಿ ಕೆಡ್ಡಸ ಬೋಂಟೆಯ ಮಹತ್ವ ತಿಳಿಸುತ್ತದೆ. ಊರಿನ ಗಂಡಸರೆಲ್ಲಾ ಕಾಡಿಗೆ ನುಗ್ಗಿ ಬೋಂಟೆ ದೆರುನಾ ಅಂದರೆ ಕೃಷಿ ಕೆಲಸಕ್ಕೆ ಉಪದ್ರವ ಮಾಡುವ ಕಾಡುಪ್ರಾಣಿಗಳನ್ನು ಓಡಿಸುವುದು, ಮುಖ್ಯವಾಗಿ ಪಂಜಿ ಬೋಂಟೆ ಮತ್ತೆ ಕುಂಡಕೋರಿ(ಕಾಡು ಕೋಳಿ ಜಾತಿ)ಯ ಪಕ್ಷಿ ಹಿಡಿಯುವುದು, ಕೆಡ್ಡಸದ ಸಮಯದಲಿಒಂದು ಪುಂಡಿ ಮಾಂಸವಾಗುವ ಕುಂಡಕೋಳಿಯ ಮಾಂಸ ತಿಂದರೆ ಮಾನವನ ಎಲುಬು ಗಟ್ಟಿಯಾಗುತ್ತದೆಯಂತೆ. ಈ ಬೋಂಟೆ ದೆರುನಾ ಪುರುಷತ್ವದ ಪ್ರದರ್ಶನವೂ ಅಗಿರಬಹುದು, ಕೃಷಿ ರಕ್ಷಣೆಯು ಅಗಿರಬಹುದು, ಮನರಂಜನೆಯು ಅಗಿರಬಹುದು.

Facebook ಕಾಮೆಂಟ್ಸ್

Bharatesha Alasandemajalu: ನಾನೊಬ್ಬ ಹೆಮ್ಮೆಯ ಹ್ಯಾಮ್ - VU3NNV ಕರೆ ಸಂಕೇತ , ರೇಡಿಯೋ ಕೇಳೋದು , ಊರೂರು ಸುತ್ತೋದು , ಬೆಟ್ಟ ಹತ್ತುವುದು , ಚಿತ್ರ ಸೆರೆಹಿಡಿಯುವುದು, ಪುಟಾಣಿ ಮಕ್ಕಳೊಂದಿಗೆ ಆಡೋದು, ಪ್ರಾಯದವರೊಂದಿಗೆ ಹರಟೋದು, ಮತ್ತೆ ತಲೆ ತಿನ್ನೋದು ಇವೆಲ್ಲ ಅಂದ್ರೆ ತುಂಬಾ ಇಷ್ಟ... ಕುಡ್ಲದ ಪುತ್ತೂರಿನವ , ನನ್ನ ತುಳುನಾಡು, ನನ್ನ ಕನ್ನಡ , ನನ್ನ ಭಾರತವನ್ನು ಒಂದಿಚು ಬಿಟ್ಟು ಕೊಡುವವನಲ್ಲ, ನಾಡು , ನುಡಿ , ದೇಶದ ಬಗೆಗೆ ಗರ್ವ , ಅಹಂಕಾರ , ಸ್ವಾರ್ಥಿ ನಾನು . ಯಾಕೋ ಓದಿದ ತಪ್ಪಿಗೆ ದೂರದ ಮಸ್ಕಟ್ ನಲ್ಲಿ ಯಾಂತ್ರಿಕ ತಂತ್ರಜ್ಞನಾಗಿ ನೌಕರಿ.... ಒಟ್ಟಾರೆ ಪಿರಿಪಿರಿ ಜನ !!
Related Post