Critics Ratings 2.8
[yasr_overall_rating size=”large”]
ಪ್ರತಿಯೊಬ್ಬ ನಿರ್ದೇಶಕನಿಗೂ ತಾನು ಕಲಾತ್ಮಕ ಚಿತ್ರ, ಸಮಾಜಕ್ಕೆ ಸಂದೇಶ ನೀಡುವಂತಹ ಚಿತ್ರಗಳನ್ನು ಮಾಡಬೇಕೆಂಬ ಬಯಕೆ ಸಹಜವಾಗಿಯೇ ಇರುವಂತಾದ್ದು. ಆದರೆ ಆ ನಿರ್ದೇಶಕರು “ಕಮರ್ಶಿಯಲ್” ಸಿನಿಮಾಗಳನ್ನು ಮಾಡಿ ಯಶಸ್ವಿಯಾದದ್ದು ತುಂಬಾನೇ ಕಡಿಮೆ. ಸಂದೇಶ ನೀಡುವಂತಹ ಕಥೆಯನ್ನು “ಕಮರ್ಶಿಯಲ್” ರೀತಿಯಲ್ಲಿ ನೋಡುಗರ ಮುಂದೆ ತಂದಿರುವ ಪ್ರಯತ್ನವೂ ಇದಕ್ಕೂ ಮೊದಲು ನಡೆದಿರುವಂತಾದ್ದೇ. ಆದರೆ ಇಂತಹ ಒಂದು ಪ್ರಯತ್ನದಲ್ಲಿ ಬಿ. ಎಂ. ಗಿರಿರಾಜ್ (“ಜಟ್ಟ”) ಚೂರು ಎಡವಿದ್ದಾರೆ ಎಂದು “ಮೈತ್ರಿ” ಚಿತ್ರ ನೋಡಿದಾಗ ಅನ್ನಿಸದೇ ಇರದು.
ಮಕ್ಕಳ ಮೇಲಿನ ಶೋಷಣೆಯನ್ನೇ ಎಳೆಯಾಗಿಟ್ಟುಕೊಂಡು ಇಡೀ ಕಥೆಯನ್ನು ಹೆಣೆದಿದ್ದಾರೆ ಗಿರಿರಾಜ್. ಸ್ಲಂನಲ್ಲಿ ಬೆಳೆದ ಪ್ರತಿಭಾವಂತ ಸಿದ್ರಾಮ. ಮಾಡದ ತಪ್ಪಿಗೆ ರಿಮ್ಯಾಂಡ್ ಹೋಮ್ ಸೇರಿ, ಅಲ್ಲಿ ಜೊತೆಯಾಗುವ ಇತರ ಬಾಲಕರ “ಮೈತ್ರಿ”ಯಿಂದಾಗಿ ಅಲ್ಲಿಂದ ಹೊರಬರುತ್ತಾನೋ ಇಲ್ಲವೋ ಎಂಬುದೇ ಕಥೆಯ ಸಾರಾಂಶ. ಇದರ ಮಧ್ಯೆ ಸಮಾಜದ ದುಷ್ಟ ಶಕ್ತಿಗಳ ಅಟ್ಟಹಾಸ, ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವ ಮಕ್ಕಳು, ರಿಮ್ಯಾಂಡ್ ಹೋಮ್ ನಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಇವುಗಳೆಲ್ಲವೂ ಕಥೆಯಲ್ಲಿ ಅಲ್ಲಲ್ಲಿ ಬಂದು ಹೋಗುವ ಅಂಶಗಳು. ಆದರೆ ಇವುಗಳೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಜೋಡಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಚಿತ್ರ ಮಧ್ಯಂತರದ ನಂತರ “ಸ್ಲಂ ಡಾಗ್ ಮಿಲಿಯನೇರ್” ಚಿತ್ರದ ಎಳೆಯ ಮೇಲೆ ಸಾಗಿದೆ ಎಂದೂ ಅನಿಸಬಹುದು.
ಪಾತ್ರಗಳ ವಿಷಯಕ್ಕೆ ಬಂದಾಗ ಸಿದ್ರಾಮ ಪಾತ್ರ ಮಾಡಿರುವ ಆದಿತ್ಯ, ಪಿಕ್ ಪೊಕೆಟರ್ ಜೋನ್ಸನ್ ಪಾತ್ರ ಮಾಡಿರುವ ಜಗದೀಶ್ ನೋಡುಗರ ಮನಸ್ಸಿನಲ್ಲಿ ಅಚ್ಚೊತ್ತುತ್ತಾರೆ. ರವಿ ಕಾಳೆ ಸುಪಾರಿ ಕಿಲ್ಲರ್ ಕಮ್ ರಾಜಕಾರಣಿಯಾಗಿ ಓವರ್ ಆಕ್ಟಿಂಗ್ ಮಾಡಿದ್ದರೆ, ರಿಮ್ಯಾಂಡ್ ಹೋಮ್ ವಾರ್ಡನ್ ಆಗಿ ಅತುಲ್ ಕುಲಕರ್ಣಿಯ ಪಾತ್ರ ಪಕ್ವವಾಗಿಲ್ಲ. ಪುನೀತ್ ರಾಜ್ ಕುಮಾರ್ ಇಲ್ಲಿ ಒಬ್ಬ ಅತಿಥಿ ಪಾತ್ರ ಮಾಡಿದ್ದಾರೆ ಎನ್ನುವುದಕ್ಕಿಂತ, ಅವರಿಗಾಗಿಯೇ ಈ ಚಿತ್ರ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಚಿತ್ರದಲ್ಲೂ ಪುನೀತ್ ಆಗಿಯೇ ನಟಿಸಿರುವ ಅವರು “ಕೋಟ್ಯಾಧಿಪತಿ” ರಿಯಾಲಿಟಿ ಶೋ ನಡೆಸಿ ಕೊಡುವ ಪಾತ್ರ ತನಗೆ ಹೊಸದು ಎಂಬಂತೆ ತಡವರಿಸಿದ್ದಾರೆ. “ಕಹಾನಿ ಮೆ ಟ್ವಿಸ್ಟ್” ಎಂಬಂತೆ ಬರುವ ಮೋಹನ್ ಲಾಲ್ ಕುಂಟುತ್ತಿರುವ ಕಥೆಗೆ ವೇಗ ಮತ್ತು ಮುಕ್ತಾಯ ಕೊಡುತ್ತಾರೆ. ಉಳಿದಂತೆ ಸಾಧುಕೋಕಿಲ, ಭಾವನಾ (“ಜಾಕಿ”) ಅನಗತ್ಯವಾಗಿ ತುರುಕಿರುವ ಸನ್ನಿವೇಶದಲ್ಲಿ ಬಂದು ಹೋಗುತ್ತಾರೆ.
ಚಿತ್ರದ ಕೆಲವು ದೃಶ್ಯಗಳನ್ನು ನೋಡಿದಾಗ ನಿರ್ದೇಶಕರು ಸನ್ನಿವೇಶಗಳನ್ನು ತುರಾತುರಿಯಲ್ಲಿ ಹುಟ್ಟುಹಾಕಿದಂತೆ ಭಾಸವಾಗುತ್ತದೆ. ದೊಡ್ಡ ಸ್ಟಾರ್ ನಟರ ಜೊತೆ ಲಾಜಿಕ್ ಇಲ್ಲದೇ ಮ್ಯಾಜಿಕ್ ಮಾಡಬಹುದೆಂದು ನಂಬಿದ್ದಾರೇನೋ ನಿರ್ದೇಶಕರು! ರಿಮ್ಯಾಂಡ್ ಹೋಮ್ ನ ಗೇಟ್ ತೆರೆದುಕೊಂಡೇ ಇರುವಂತೆ ಒಳ ಬರುವ ಜೀಪು, “ಡಾರ್ಕ್ ರೂಮ್” ಅಲ್ಲದ “ಡಾರ್ಕ್ ರೂಮ್”, ವಯಸ್ಸಿಗೆ ಮೀರಿದ ಮಾತುಗಳನ್ನಾಡುವ ಸಿದ್ರಾಮ, ವಯಸ್ಸಿಗೆ-ಅನುಭವಕ್ಕೆ ಕಡಿಮೆ ಎನ್ನುವಂತೆ ನಡೆದುಕೊಳ್ಳುವ ವಾರ್ಡನ್ ಇವೆಲ್ಲವೂ ಸಣ್ಣ ಉದಾಹರಣೆಗಳು. ದಿಗ್ಭ್ರಮೆ ಮೂಡಿಸುವುದು ಎಂದರೆ, “ಕೋಟ್ಯಾಧಿಪತಿ” ಕಾರ್ಯಕ್ರಮದಲ್ಲಿ ಕಾಣಿಸುವ “ಸ್ಪೆಲ್ಲಿಂಗ್ ಮಿಸ್ಟೇಕ್”ಗಳು!! ಕನ್ನಡ ಭಾಷೆಯ ಬಗ್ಗೆ, ಸಾಹಿತ್ಯದ-ಸಾಹಿತಿಗಳ ಬಗ್ಗೆ ಹೆಮ್ಮೆಯಿಂದ ಚಿತ್ರದುದ್ದಕ್ಕೂ”ಡಯಲಾಗ್” ಹೊಡೆಸುವ ನಿರ್ದೇಶಕರು ಚಿತ್ರದ “ಎಡಿಟಿಂಗ್” ಸಮಯದಲ್ಲಿ ನಿದ್ದೆ ಮಾಡುತ್ತಿದ್ದರೇ? ಎನ್ನುವ ಪ್ರಶ್ನೆ ಮೂಡದಿರಲು ಸಾಧ್ಯವೇ ಇಲ್ಲ! ಒಂದೆರಡು ಹಾಡುಗಳು ಅನಗತ್ಯ ಎನಿಸಬಹುದು. ಚಿತ್ರದ ಪ್ರಾರಂಭದಲ್ಲಿ ಇರುವ ಚಿತ್ರೀಕರಣದ ಸನ್ನಿವೇಶವನ್ನು ಕತ್ತರಿಸಿದ್ದರೆ ಚೊಕ್ಕವಾಗಿರುತ್ತಿತ್ತು.
ಒಟ್ಟಾರೆಯಾಗಿ, ಒಂದು ಉತ್ತಮ ಕಥೆ, ಉತ್ತಮ ಸಂದೇಶ ಹೊಂದಿರುವ ಈ ಚಿತ್ರವನ್ನು ಸಮಯ ಇದ್ದಲ್ಲಿ ಕುಟುಂಬ ಸಮೇತರಾಗಿ ನೋಡಲು ಅಡ್ಡಿಯೇನಿಲ್ಲ. ಪಾತ್ರ ಮಾಡಿರುವ ವ್ಯಕ್ತಿಯ ಬದಲು ಪಾತ್ರ ಪೋಷಣೆಯ ಮೇಲೆ ಗಮನ ನೀಡಿದ್ದರೆ “ಮೈತ್ರಿ” ಕನ್ನಡ ಚಿತ್ರರಂಗದ ಮೇರುಚಿತ್ರವಾಗಿ ಗುರುತಿಸಿಕೊಳ್ಳುತ್ತಿತ್ತು.
[yasr_visitor_votes size=”large”]
Facebook ಕಾಮೆಂಟ್ಸ್