ಲಗ್ನ ಆದ ಮೊದಲಲ್ಲಿ ನಾನು ನನ್ನ ಹೆಂಡತಿ ಮನೆಯೊಂದನ್ನು ಬಾಡಿಗೆ ಹಿಡಿದು ನವ–ಸಂಸಾರ ಆರಂಭಿಸಿದ್ದೆವು. ನಾವಿದ್ದ ಮನೆ ಕೂಡ ಹೊಸದು. ಎಲ್ಲವೂ ಹೊಸತನದ ಅನುಭವ ಕೊಡುತ್ತಿತ್ತು. ನವ–ವಿವಾಹಿತರೆಂದು ಯಾರು ಅಷ್ಟಾಗಿ ಹೋಗಿ ಬಂದು ಮಾಡಿರಲಿಲ್ಲ. ನಮ್ಮಿಬ್ಬರಿಗೆ ಸಾಕಷ್ಟು ಏಕಾಂತ ಸಿಗುತ್ತಿತ್ತು. ಗಂಡ-ಹೆಂಡತಿ ಸೇರಿಕೊಂಡು ಜೋಡೆತ್ತಿನಂತೆ ಸುಂದರವಾದ ಜೀವನ ಕಟ್ಟಿಕೊಳ್ಳುತ್ತಿದ್ದೇವೆ ಅಂತ ಅಂದುಕೊಂಡಿದ್ದೆ ತಡ, ಯಾರ ದೃಷ್ಟಿ ಬಿದ್ದಿತ್ತೋ ಏನೋ,ಶಿವ ಪೂಜೆಯಲ್ಲಿ ಕರಡಿ ಬಿಟ್ಟಂತೆ, ಆಹ್ವಾನವಿಲ್ಲದೇ, ಯಾವ ಮುನ್ಸೂಚನೆ ನೀಡದೇ ಗೆಸ್ಟ್`ಗಳು ದಿಢೀರನೆ ಮನೆಗೆ ನುಗ್ಗಿದ್ದರು. ಅವರು ಮನೆಗೆ ಬಂದ ರೀತಿ ಕೂಡ ವಿಭಿನ್ನವಾಗಿತ್ತು. ಸಾಮಾನ್ಯವಾಗಿ ಅತಿಥಿಗಳು ಫೋನ್ ಮಾಡಿ, ಬಾಗಿಲು ತಟ್ಟಿ, ಕಾಲಿಂಗ್ ಬೆಲ್ ಒತ್ತಿ ಬರುವ ಈ ಕಾಲದಲ್ಲಿ , ಇವರುಗಳು ನವದಂಪತಿಗಳಿಗೆ disturb ಆಗಬಾರದೆಂದು ಮನೆಯ ಅಂಗಳದಲ್ಲೇ ಕಾಯ್ದಿದ್ದು, ನಾವು ಅಚಾನಕ್ಕಾಗಿ ಬಾಗಿಲು ತೆಗೆದಾಗ “Surprise” ಎನ್ನುತ್ತಲೇ ಒಳಹೊಕ್ಕರು.
ನಮ್ಮ ಮನೆ ವಿಶಾಲವಾಗಿದ್ದೂ ಬಳಗವೆಲ್ಲ ಆರಾಮಾಗಿ ಇರುವಂತಿದೆ. ಅದೇ ಕಾರಣಕ್ಕೋ ಏನೋ ಬಂದ ಅತಿಥಿಗಳು ಚೇರು-ಮಂಚವಿಲ್ಲದ attached ಬಾತ್`ರೂಮ್ ಇರುವ ಬೆಡರೂಮ್`ನ್ನು, ಒಂದು ಮಾತು ಕೇಳದೇ, ಅವರೇ ನಿರ್ಧಾರ ಮಾಡಿ “ಈ ರೂಮ್ ನಮಗಿರಲಿ” ಅಂತ ಬಿಡಾರ ಹೂಡಿದರು. ಈ ರೂಮ್ ಅಡುಗೆಮನೆಗೆ ಅಂಟಿಕೊಂಡಿದ್ದರಿಂದ ಇವರುಗಳು ಮೇಲಿಂದ ಮೇಲೆ ಅಡುಗೆ ಮನೆಗೆ ಬರುತ್ತಿದ್ದು ನನ್ನಾಕೆಗೆ ತುಸು ಅನಾನುಕೂಲ ಎನಿಸಿತ್ತು.
ದೇವರಾಣೆ, ಅತಿಥಿಗಳು ಹೇಳದೇ ಕೇಳದೇ ಮನೆಗೆ ನುಗ್ಗಿದ್ದಾರಲ್ಲಾ ಅಂತ ಯಾವ ಬೇಜಾರಿರಲಿಲ್ಲ. ಯಾಕೆಂದರೆ, ಮಿಕ್ಕೆಲ್ಲರಂತೆ, ಇವರುಗಳು “ನೋಡಮ್ಮ , ಈ ತಿಂಡಿ ಮಾಡು, ಮಧ್ಯಾಹ್ನಕ್ಕೆ ಆ ಅಡುಗೆ ಮಾಡು, ಸಂಜೆಗೆ ಬಜ್ಜಿ ಮಾಡು” ಅಂತೆಲ್ಲ ನನ್ನ ಹೆಂಡತಿಗೆ ಬೇಡಿಕೆಯಿಟ್ಟವರಲ್ಲ. ಈ ಲಾಕ್`ಡೌನ್ ದಿನಗಳಲ್ಲಿ ಖುಷಿ–ಖುಷಿಯಿಂದ ನನ್ನ ಮಡದಿ ಮಾಡುವ ದಿನದ ಅಡುಗೆ, ಜಿಲೇಬಿ, ಜಾಮೂನು, ಅಲೂ–ಬೋಂಡಾ ಎಲ್ಲವನ್ನೂ ಎರಡು ಮಾತಿಲ್ಲದೆ ಸವಿಯುತ್ತಿದ್ದರು. ನನ್ನಾಕೆಯ ಕೈರುಚಿಗೆ ಮೆಚ್ಚುಗೆ ಸೂಚಿಸಿಯೋ ಏನೋ, ಈ ಅತಿಥಿಗಳು ಅವರ ಬಂಧುಗಳನ್ನೆಲ್ಲ “ಅಬ್ಬಾ! ಇವರ ಮನೆ ತುಂಬಾ ಚೆನ್ನಾಗಿದೆ. ಅಡುಗೆ ಕೂಡ ಚೆನ್ನಾಗಿ ಮಾಡ್ತಾಳೆ. ಏನು ಕೊರತೆ ಇಲ್ಲ. ಮನೆ ಮುಂದೇನೇ ಪಾರ್ಕ್ ಇದ್ದು ಸುರಕ್ಷಿತವಾಗಿದೆ. ನೀವು ಮಕ್ಕಳನ್ನೆಲ್ಲಾ ಕರೆದುಕೊಂಡು ಬನ್ನಿ, ಎಲ್ಲರೂ ಇಲ್ಲೇ ಇನ್ನಷ್ಟು ದಿನ ಜೊತೆಗಿರೋಣ” ಅಂತ ಕರೆಸಿಕೊಳ್ಳೋಕೆ ಪ್ರಾರಂಭಿಸಿದರು. ಅವಾಗಲೇ ಸ್ಟಾರ್ಟ್ ಆಯ್ತು ಎಲ್ಲಿಲ್ಲದ ರಗಳೆ.
ಅಂದಿನಿಂದ ನನ್ನ ಹೆಂಡತಿ ಮುಖ ದಪ್ಪ ಮಾಡಿಕೊಂಡು ಓಡಾಡತೊಡಗಿದಳು. ಅವಾಗ್ಗ್ ಆವಾಗ್ಗೆ ಸಿಟ್ಟಿನಿಂದ ಅಡುಗೆ ಮನೆಯಲ್ಲಿ ಪಾತ್ರೆಯೆಲ್ಲ ಕುಕ್ಕಲು ಆರಂಭಿಸಿದಳು. “ಗಂಡನ ಕಾಟ ಸಾಕಿರಲಿಲ್ಲವೇ ನನಗೆ ಈಗ ಇವರುಗಳು ಮನೆಗೆ ಒಕ್ಕರಿಸಿಕೊಂಡು ನಂಗೆ ಕೊಡಬಾರದ ಹಿಂಸೆ ಕೊಡುತ್ತಿದ್ದಾರೆ” ಎಂದು ಒಳಗೊಳಗೆ ಕಣ್ಣೀರಿಟ್ಟಳು. “ಅಪ್ಪಾ, ನಂಗೆ ಇಲ್ಲಿ ಬದುಕು ಸಾಕಾಗಿದೆ. ಈ ಲಾಕ್`ಡೌನ್ ಇದ್ದರೂ, ಏನಾದರೂ ಮಾಡಿ ಬಂದು ನನ್ನ ಕರೆದುಕೊಂಡು ಹೋಗಿ” ಅಂತ ದೂರದ ಊರಲ್ಲಿನ ತಂದೆಗೆ ನೂರಾರು ಫೋನ್`ಕಾಲ್ ಮಾಡಿ ಗೋಳಿಟ್ಟುಕೊಂಡಳು. ಈ ಗೆಸ್ಟ್`ಗಳು ಬಂದಾಗಿನಿಂದ ಮನೆಯಲ್ಲಿ ಈರುಳ್ಳಿ, ಆಲೂಗಡ್ಡೆ, ತರಕಾರಿಗಳೆಲ್ಲ ಬೇಗ ಬೇಗನೆ ಖಾಲಿ ಆಗುತ್ತಿತ್ತು. ನಾನಂತೂ ಎರಡು ದಿನಕ್ಕೆ ಒಮ್ಮೆಯಂತೆ ತರಕಾರಿ ಅಂಗಡಿಗೆ ಹೋಗಿಬರುತ್ತಿದ್ದೆ. ಹಂಗಂತ ನನ್ನ ಹೆಂಡತಿ ಬಂದಿರೋ ಗೆಸ್ಟ್‘ಗಳಿಗೆಲ್ಲ ಹೆಚ್ಚುವರಿ ಅಡುಗೆ ಮಾಡ್ತಿದ್ಳು ಅಂತ ತಪ್ಪು ಭಾವಿಸಬೇಡಿ. ಆದರೂ ಈ ಗೆಸ್ಟ್‘ಗಳ ಕಾಟಕ್ಕೆ ನನ್ನಾಕೆ ಸೋತು ಹೈರಾಣಾಗಿದ್ದಳು.
ಅದೊಂದು ಮಧ್ಯರಾತ್ರಿ ನನ್ನಾಕೆ ನೀರು ಕುಡಿಯಲೆಂದು ಅಡುಗೆ ಕೋಣೆಗೆ ಹೋದಳು. ಅಲ್ಲಿ ಅವಳಿಗೆ ಆಶ್ಚರ್ಯವೇ ಕಾದಿತ್ತು. ಮನೆಗೆ ಬಂದಿದ್ದ ಪುಟ್ಟ ಮಕ್ಕಳೆಲ್ಲ ಆ ನಡುರಾತ್ರಿಯಲ್ಲಿ ಅಡುಗೆಮನೆಯ ಕಟ್ಟೆ ಹತ್ತಿ ಸಜ್ಜೆ ಮೇಲಿನ ಡಬ್ಬ ತಡಕಾಡುತ್ತಿದ್ದರು. ಅವರ ಈ ನಡೆಗೆ ರೋಸಿ ಹೋದ ನನ್ನಾಕೆ ಮೂಲೆಯಲ್ಲಿದ್ದ ಪೊರಕೆಯನ್ನು ಕೈಗೆತ್ತಿಕೊಂಡು ಮಕ್ಕಳನ್ನೆಲ್ಲ ಗದರಿಸಿದಳು. ಗೊಣಗುತ್ತಲೇ ವಾಪಸ್ಸು ರೂಮಿಗೆ ಬಂದು ನನ್ನ ಬಳಿ “ಅಯ್ಯೋ ರಾಮ! ಸಾಕಾಯ್ತು ಇವರುಗಳ ಕಾಟ. ರೀ! ನೀವೇ ಇವ್ರಿಗೆ ಒಂದು ಗತಿ ಕಾಣಿಸಿ. ಇಲ್ಲಾಂದ್ರೆ ನಾನೇ ಇವ್ರಿಗೆ ವಿಷ ಇಟ್ಟು ಬಿಡ್ತೀನಿ” ಅಂತ ಖಾರವಾಗಿ ಮಾತನಾಡಿದಳು.
ನಾನೇನು ಕುರುಡನಾಗಿ ನಡೆದದ್ದನ್ನೆಲ್ಲ ನೋಡಿ ಸುಮ್ಮನಿರಲಿಲ್ಲ. ಹಲವು ಬಾರಿ “ನೀವು ಮಾಡುತ್ತಿರುವುದು ಸರಿಯಲ್ಲ“ ಎಂದು ಬಂದ ಅತಿಥಿಗಳಿಗೆ ತಿಳಿಸುವ ಪ್ರಯತ್ನ ಮಾಡಿದ್ದೆ. ಅವಾಗೆಲ್ಲ ಅವರುಗಳು ಕೋಣೆಗೆ ಹೋಗಿ ಸೇರಿಕೊಳ್ಳುತ್ತಿದ್ದರು. ಎಲ್ಲವನ್ನೂ ಸಹಿಸಿಕೊಂಡಿದ್ದ ನಾನು, ಇವತ್ತು ರಾತ್ರಿ ಅಡುಗೆ ಮನೆಯಲ್ಲಿ ನನ್ನ ಮುದ್ದಿನ ಮಡದಿಯನ್ನ ಅವರುಗಳು ಸತಾಯಿಸಿದ್ದು ನನಗೆ ಸರಿಬರಲಿಲ್ಲ. ಈ ಅತಿಥಿಗಳು ಇಲ್ಲಿಂದ ಹೋಗುವ ಹಾಗೆ ಏನಾದರೂ ಮಾಡಲೇಬೇಕೆಂದು ಯೋಚಿಸುತ್ತ ನಿದ್ದೆ ಮಾಡದೇ ರಾತ್ರಿಯೆಲ್ಲ ಒದ್ದಾಡಿದೆ.
ಮರುದಿನ ಬೆಳಿಗ್ಗೆ ನಾನು ಯೋಜನೆಯೊಂದನ್ನು ರೂಪಿಸಿಕೊಂಡಿದ್ದೆ. ಹಿಂದಿನ ರಾತ್ರಿ ನನ್ನ ಹೆಂಡತಿ ಗದರಿಸಿದ್ದಕ್ಕೋ ಏನೋ, ಬೆಳಿಗ್ಗೆಯಿಂದ ಸಂಜೆವರೆಗೂ ರೂಮಿನಿಂದ ಯಾರೂ ಹೊರಗೆ ಬಂದಿರಲಿಲ್ಲ. ರಾತ್ರಿ ಆದರೂ ಅವರು ಹೊರ ಬರುವ ಸುಳಿವೇ ಇರಲಿಲ್ಲ. ಇನ್ನೇನು ತಡವಾಯಿತು ಅಂತ ನಾನು ಮತ್ತು ನನ್ನಾಕೆ ಊಟ ಮುಗಿಸಿ ಮಲಗುವ ಹೊತ್ತಿಗೆ ಪುಟಾಣಿಗಳು ಹೊರಬಂದರು. ಅದನ್ನು ಗಮನಿಸಿದ ನನ್ನಾಕೆ “ರೀ, ನೋಡ್ರಿ ಅಲ್ಲಿ ಅನಿಷ್ಟಗಳು” ಅಂತ ಬೊಟ್ಟು ಮಾಡಿ ತೋರಿಸಿದಳು. ಈ ಬಾರಿ ಹೇಳೋದು ಕೇಳೋದು ಏನಿರಲಿಲ್ಲ. ಮುಂಚಿತವಾಗಿಯೇ ತಂದಿದ್ದ ‘ HIT – Cockroach Repellent Spray’ (ಜಿರಳೆ ನಿವಾರಕ ಸಿಂಪಡಣೆ)ನ ಉಣಬಡಿಸುತ್ತಿದ್ದಂತೆ, ಕರೆಯಿಲ್ಲದೆ ಮನೆಗೆ ಧಾಳಿಯಿಟ್ಟಿದ್ದ ಅತಿಥಿರೂಪದ ಜಿರಳೆಗಳು ಚೆಲ್ಲಾಪಿಲ್ಲಿಯಾಗಿ ಹೋದವು. ಅರ್ಧದಷ್ಟು ಅತಿಥಿಗಳು ಇನ್ನಿಲ್ಲವಾದರೆ ಇನ್ನರ್ಧ ಮಹನೀಯರು ಅರೆನಿದ್ರಾವಸ್ಥೆಯಲ್ಲಿದ್ದರು. ಕೊನೆಯಲ್ಲಿ ಎಲ್ಲರನ್ನೂ ಪೊರಕೆಯಿಂದ ಒಟ್ಟುಗೂಡಿಸಿ ಮನೆಯಿಂದ ಹೊರಗಡೆ ಹಾಕುವ ಮೂಲಕ ಅವುಗಳ ಹಾವಳಿಯಿಂದ ವಿಮುಕ್ತರಾದೆವು.
ಕಳೆದ ತಿಂಗಳ ಆರಂಭದಲ್ಲಿ ಅತಿಥಿ ರೂಪದಲ್ಲಿ ನಾಲ್ಕೈದು ಹಲ್ಲಿಮರಿಗಳು ಕಾಣಿಸಿಕೊಂಡಿದ್ದವು. ನವಜಾತ ಜೀವಿಗಳು ಆಗಿದ್ದರಿಂದ ಅವುಗಳಿಗೆ ಯಾವುದೇ ಧಕ್ಕೆ ಮಾಡದೇ ಹಾಗೆಯೇ ಮನೆಯಿಂದ ಆಚೆಗೆ ಎತ್ತಿ ಹಾಕಿದ್ದಾಯ್ತು.
ಆಶ್ಚರ್ಯಕರ ಬೆಳವಣಿಗೆ ಎಂದರೆ ಮೊನ್ನೆ ರಾತ್ರಿ ಅಡುಗೆ ಮನೆಗೆ ನೀರು ಕುಡಿಯಲು ಹೋದ ನನ್ನಾಕೆ ಹತ್ತು ನಿಮಿಷವಾದರೂ ಬರಲೇ ಇಲ್ಲ. ಅವಳ ಮಾತಿನ ಧ್ವನಿ ಮಾತ್ರ ಕೇಳಿಸುತ್ತಿತ್ತು – ಹಾಗಾಗಿ ಫೋನಿನಲ್ಲಿ ಮಾತನಾಡುತ್ತಿರಬೇಕೆಂದು ಸುಮ್ಮನಾದೆ. ಕೂಡಲೇ ಗೊತ್ತಾಯ್ತು ಅವಳ ಫೋನು ನನ್ನ ಕೈಯಲ್ಲೇ ಇದೆ ಎಂದು. ಹೋಗಿ ನೋಡಿದರೆ, ನನ್ನ ಹೆಂಡತಿ ಅವಳಷ್ಟಕ್ಕೆ ಅವಳೇ ಮಾತನಾಡಿಕೊಳ್ಳುತ್ತಿದ್ದಳು. “ಏನಾಯ್ತೆ ನಿಂಗೆ?” ಅಂತ ನಾನು ಪ್ರಶ್ನಿಸಿದ್ದಕ್ಕೆ, “Meet my new friends” ಅಂತ ಗೋಡೆ ಕಡೆ ಬೊಟ್ಟು ಮಾಡಿ ಹಲ್ಲಿಯನ್ನೂ ಮತ್ತು ಫ್ರಿಡ್ಜ್ ಪಕ್ಕಕ್ಕೆ ಕೈ ಮಾಡಿ ಜಿರಳೆಯನ್ನೂ ತೋರಿಸಿದಳು. “ಯಾಕೆ ಹಿಂಗಾಡ್ತಿದ್ಯಾ?” ಅಂತ ಕೇಳಿದ್ದಕ್ಕೆ “ಮೂರೊತ್ತು ನಿನ್ನ ಮುಖ ನೋಡಿ ನೋಡಿ ಬೇಜಾರಾಗಿದೆ. ಮಾತು-ಮುನಿಸು-ಸೈಲೆನ್ಸು ಎಲ್ಲ ನಿನ್ನ ಜೊತೇನೆ!. I need some break… ” ಅನ್ನೋದಾ. ಲಾಕ್`ಡೌನ್ ಘೋಷಿಸಿ ಒಂದು ತಿಂಗಳು ಕಳೆದಿದೆ. ನಾಲ್ಕು ಗೋಡೆ ಮಧ್ಯ ಇದ್ದು ಇದ್ದು ನನ್ನ ಹೆಂಡತಿಗೆ ಎಷ್ಟರ ಮಟ್ಟಿಗೆ ಬೋರ್ ಆಗಿದೆ ಅಂತ ಆವಾಗ್ಲೇ ನಂಗೆ ಅರ್ಥ ಆಗಿದ್ದು. ಆದರೆ ಏನ್ ಮಾಡೋದು? ಇತ್ತೀಚೆಗಂತೂ ಹಲ್ಲಿ ಮತ್ತು ನನ್ನಾಕೆ ಎಷ್ಟರ ಮಟ್ಟಿಗೆ ಅನ್ಯೋನ್ಯವಾಗಿದ್ದಾರೆಂದರೆ ಅವಳು ನನ್ನನ್ನು ಯಾವುದೋ ವಿಷಯಕ್ಕೆ ಬೈಯಲು ಶುರು ಮಾಡಿದರೆ ಹಲ್ಲಿ ಲೊಚ ಲೊಚ ಎನ್ನುತ್ತಾ ಅವಳಿಗೆ ಸಾಥ್ ಕೊಡುತ್ತ ನನ್ನನ್ನು ಕಿಚಾಯಿಸುತ್ತದೆ.
ನನ್ನ ಹೊಸ ತಲೆನೋವು ಏನಪ್ಪಾ ಅಂದ್ರೆ ಒಂದು ವಾರದಿಂದ ಇಲಿ ಕಾಟ ಜಾಸ್ತಿ ಆಗಿದೆ. ದಿನಾಲೂ ಮನೆ ಬಾಗಿಲಿಗೆ ಬಂದು ‘ಇಶಿ‘ ಮಾಡಿ ಹೋಗುತ್ತಿದೆ. ನನ್ನ ಮುಂದಿರುವ ಪ್ರಶ್ನೆ ಏನಪ್ಪಾ ಅಂತಂದ್ರೆ “ಈಗ ಬಂದಿರೋ ಇಲಿ ಹೊಸ uninvited ಗೆಸ್ಟ್`ಆ ಅಥವಾ ನನ್ನಾಕೆಯ ನ್ಯೂ ಫ್ರೆಂಡ್`ಆ?…”
–
ಪ್ರತೀಕ ಸೊಲ್ಲಾಪುರ
prateek.sit@gmail.com
Facebook ಕಾಮೆಂಟ್ಸ್