ಬಜೆಟ್ ತಯಾರಿ ಹಾಗೂ ಅಂಕಿತಗೊಳ್ಳುವ ಪ್ರಕ್ರಿಯೆ:
ಸಂವಿಧಾನದ 112ನೇ ವಿಧಿಯು, ಕೇಂದ್ರ ಸರಕಾರ ವಾರ್ಷಿಕ ಆಯವ್ಯಯ ಪತ್ರವನ್ನು ಲೋಕಸಭೆಯಲ್ಲಿ ಮಂಡಿಸಬೇಕೆಂದು ತಿಳಿಸುತ್ತದೆ. ಬಜೆಟ್ ಎಂಬುದು ಹಿಂದಿನ ವರ್ಷಗಳ ಆದಾಯ ಮತ್ತು ಖರ್ಚು ವೆಚ್ಚಗಳ ಲೆಕ್ಕಾಚಾರ ಮತ್ತು ಮುಂಬರುವ ಆರ್ಥಿಕ ವರ್ಷದಲ್ಲಿ ಆದಾಯದ ಅಂದಾಜು, ಮಾರ್ಗಗಳು ಮತ್ತು ವಿವಿಧ ಯೋಜನೆಗಳಿರೆ ನೀಡಲಾಗುವ ಹಣಕಾಸಿನ ವಿವರಗಳಿರುತ್ತವೆ. ಇಷ್ಟೇ ಆಗಿದ್ದರೆ ಸರಕಾರದ ಬಜೆಟ್‍ಗಳಿಗೆ ಅಂತಹ ಪ್ರಾಮುಖ್ಯತೆ ಇರುತ್ತಿರಲಿಲ್ಲ. ವಾರ್ಷಿಕ ಆಯವ್ಯಯ ಭಾರತದ ಪ್ರತಿಯೋರ್ವ ಪ್ರಜೆ, ಆರ್ಥಿಕತೆಯ ಎಲ್ಲ ರಂಗಗಳು, ದೇಶಿ ಹಾಗೂ ವಿದೇಶಿ ವ್ಯವಹಾರ, ಉತ್ಪಾದನೆ ಹೀಗೆ ಪ್ರತಿಯೊಂದು ಸಂಗತಿಗಳ ಮೇಲೂ ಪರಿಣಾಮ ಬೀರುತ್ತದೆ. ಇದು ಬಹುತೇಕ ಸರಕಾರದ ನಡೆಗಳನ್ನು ನಿರ್ಧರಿಸುವ ಮತ್ತು ಸರಕಾರದ ಆಶಯಗಳನ್ನು ವ್ಯಕ್ತಪಡಿಸುವ, ಪೂರ್ಣಗೊಳಿಸುವ ಮಹತ್ವದ ಅಂಶ. ಬಜೆಟ್ ಎಂಬುದು ಆಯಾ ಸರಕಾರ, ನಾಯಕರ ನೀತಿ ನಿಯಮಗಳನ್ನು ವಾಸ್ತವಿಕವಾಗಿ ಜಾರಿಗೆ ತರಲು ಸಂವಿಧಾನದತ್ತವಾಗಿ ದೊರೆತ ಅಧಿಕಾರ. ದೇಶದ ಆರ್ಥಿಕತೆಯನ್ನು ಹಳಿತಪ್ಪಿಸುವ ಅಥವಾ ಸರಿದಾರಿಯಲ್ಲಿ ಕೊಂಡೊಯ್ದು ಮೇಲೆತ್ತುವ ಸಮಾನ ಅವಕಾಶಗಳು ಬಜೆಟ್ ಮೂಲಕ ದೊರೆಯುತ್ತದೆ.
ರಾಷ್ಟ್ರಪತಿಯವರ ಒಪ್ಪಿಗೆ ಪಡೆದು ವಿತ್ತ ಸಚಿವರು ಸಂಸತ್ತಿನಲ್ಲಿ ಬಜೆಟ್ ಮಂಡಿಸುತ್ತಾರೆ. ಜನರಿಂದ ನೇರವಾಗಿ ಆರಿಸಿ ಬಂದ ಲೋಕಸಭೆ ಇದನ್ನು ಅನುಮೋದಿಸಿದರೆ ಬಜೆಟ್‍ಗೆ ಅನುಮೋದನೆ ದೊರೆತಂತೆಯೇ. ಇದು ಲೋಕಸಭೆಗೆ ಇರುವ ವಿಶೇಷ ಅಧಿಕಾರ. ರಾಜ್ಯಸಭೆ ಬಜೆಟ್ ಕುರಿತು ಚರ್ಚಿಸಬಹುದು ಆದರೆ ಅದರ ಅನುಮೋದನೆಯಲ್ಲಿ ಮತ ನೀಡುವ ಹಕ್ಕು ಹೊಂದಿಲ್ಲ. ವಿತ್ತ ಸಚಿವರು ಮತ್ತು ಆರ್ಥಿಕ ವ್ಯವಹಾರಗಳ ಸಚಿವಾಲಯ ಅತ್ಯಂತ ಗೌಪ್ಯವಾಗಿ ಬಜೆಟ್ ಕರುದಿನ ತಯಾರಿಯಲ್ಲಿ ತೊಡಗಿಕೊಳ್ಳುತ್ತಾರೆ. ವಿತ್ತ ಸಚಿವರ ಆದೇಶದಂತೆಯೇ ಬಜೆಟ್‍ನ ಪ್ರತಿಯೊಂದು ಸಾಲು ಮುದ್ರಣವಾಗುತ್ತದೆ. ಲೋಕಸಭೆಯಲ್ಲಿ ಮಂಡನೆಯಾಗಿ ಒಂದು ಹಂತದ ಮೇಲ್ಮೈ ವಿಚಾರಗಳ ಚರ್ಚೆ ನಡೆದ ಮೇಲೆ ಸುಮಾರು ಒಂದು ತಿಂಗಳ ಅವಧಿಯಲ್ಲಿ 24 ಇಲಾಖಾವಾರು ಕಾರ್ಯನಿರತ ಸಮಿತಿಗಳು ಬಜೆಟ್ ಘೋಷಣೆ ಹಾಗೂ ಅದಕ್ಕೊದಗಿಸಿದ ಹಣಕಾಸಿನ ಲಭ್ಯತೆ ಮೊದಲಾದ ಸಂಗತಿಗಳ ಕುರಿತು ಮತ್ತಷ್ಟು ಆಳವಾಗಿ ಅಧ್ಯಯನ ನಡೆಸುತ್ತವೆ. ಅದು ಮುಂದಿನ ಹಂತದ ಚರ್ಚೆ, ಬೇಡಿಕೆ, ಪೂರೈಕೆಗಳಿಗೆ ವೇದಿಕೆಯಾಗುತ್ತದೆ. ಇದು ಒಟ್ಟಾರೆ ಸಂಕೀರ್ಣವಾದ ಬಜೆಟ್ ತಯಾರಿ ಪ್ರಕ್ರಿಯೆ ಹಾಗೂ ಅಂಕಿತಗೊಳ್ಳುವವರೆಗಿನ ಒಂದು ಸ್ಥೂಲ ಚಿತ್ರಣ. ಇಷ್ಟೆಲ್ಲ ಪ್ರಕ್ರಿಯೆ ನಡೆಸಿ ಅಧಿಕೃತವಾಗಿ ಬಜೆಟ್ ಜಾರಿಯಾಗುತ್ತದೆ.
ನಮೋ 2.0 ಮೊದಲ ಪರೀಕ್ಷೆ:
ಎರಡನೇ ಬಾರಿಗೆ ಅಭೂತಪೂರ್ವವಾಗಿ ಆರಿಸಿ ಬಂದಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೊದಲ ಬಜೆಟ್ ಇಂದು ಮಂಡನೆಯಾಗಲಿದೆ. ಮುಂದಿನ ಎಂಟು ತಿಂಗಳುಗಳಿಗೆ ಸೀಮಿತವಾದ, ಪೂರ್ಣಾವಧಿ ಬಜೆಟ್ ಅಲ್ಲದಿದ್ದರೂ, ಪೂರ್ಣಕಾಲಿಕ ಆಶಯಗಳನ್ನು ವ್ಯಕ್ತಪಡಿಸುವ ವೇದಿಕೆ ಮತ್ತು ದೂರದೃಷ್ಟಿಯ ಕಡತ. ಇದು ಚುನಾವಣಾಪೂರ್ವದಲ್ಲಿ ಪಿಯೂಶ್ ಗೋಯಲ್ ಮಂಡಿಸಿದ್ದ ಮಧ್ಯಂತರ ಬಜೆಟ್‍ನ ಮುಂದುವರೆದ ಭಾಗವಾಗಿರಲಿದೆ. ನರೇಂದ್ರ ಮೋದಿ ಸರಕಾರದ ಮೊದಲ ಪೂರ್ಣಕಾಲಿಕ ಮಹಿಳಾ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಮ್ಮ ಸಾಮಥ್ರ್ಯವನ್ನು ಸಮರ್ಥವಾಗಿ ಪ್ರಚುರಪಡಿಸಬೇಕಾದ ಅನಿವಾರ್ಯತೆಯೂ ಇದೆ. ಮಹಿಳಾ ಸಚಿವೆ ಅಂದ ಮೇಲೆ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಮತನೀಡಿರುವ ಯುವಕ ಹಾಗೂ ಮಹಿಳಾ ವರ್ಗವೂ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.
ಮೋದಿ 2.0, ಮೊದಲ ಅವಧಿಯಷ್ಟು ಸುಲಭವಾಗಿಲ್ಲ. ಕಳೆದ ಐದು ವರ್ಷಗಳಲ್ಲಿ ಎಷ್ಟೇ ತೊಡಕಿದ್ದರೂ ಭಾರತದ ಪಾಲಿಗೆ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಉತ್ತಮ ಅವಕಾಶವಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಅಮೆರಿಕ-ಚೀನ ವ್ಯಾವಹಾರಿಕ ಯುದ್ಧ, ಇರಾನ್ ಮೇಲೆ ವಿಧಿಸಿರುವ ನಿರ್ಬಂಧ, ಏರುತ್ತಿರುವ ತೈಲ ಬೆಲೆ ಮತ್ತು ಅಮೆರಿಕ ಜಿಎಸ್‍ಪಿ ಪಟ್ಟಿಯಿಂದ ಭಾರತದಿಂದ ಆಮದಾಗುವ ಬಹುತೇಕ ವ್ಯಾಪಾರದ ವಸ್ತುಗಳ ಮೇಲೆ ಏರಿಸಿರುವ ಸುಂಕ, ಹಾಗೂ ಒಟ್ಟಾರೆಯಾಗಿ ಇನ್ನೂ ಚೇತರಿಕೆ ಕಾಣದ ವಿಶ್ವ ಮಾರುಕಟ್ಟೆ ಹೀಗೆ ಪಟ್ಟಿ ಬೆಳೆಯುತ್ತದೆ. ಇವು ನಮೋ 2.0 ಸರಕಾರದ ಮುಂದಿರುವ ಜಾಗತಿಕ ಸವಾಲುಗಳು. ಹೆಚ್ಚು ಕಡಿಮೆ ಯುಪಿಎ2 ರ ಅವಧಿಯಲ್ಲೂ ಎದುರಾಗಿತ್ತು. ಕೊನೆಯ ವರ್ಷಗಳಲ್ಲಿ ಮಾಡಿಕೊಂಡ ತಪ್ಪುಗಳಿಂದ ಸರಕಾರ ಆರ್ಥಿಕ ಬೆಳವಣಿಗೆ ಹಾಗೂ ಚುನಾವಣೆ ಎರಡರಲ್ಲೂ ಮುಖಭಂಗ ಎದುರಿಸುವಂತಾಗಿತ್ತು. ಅಂತಹ ಪರಿಸ್ಥಿತಿ ಬರದಂತೆ ತಡೆಯುವ ಅವಕಾಶ ನಿರ್ಮಲಾ ಸೀತಾರಾಮನ್ ಅವರ ಹೆಗಲ ಮೇಲಿದೆ. ಯಾಕೆಂದರೆ ನಾಯಕತ್ವ ಹಾಗೂ ಸರಕಾರ ಎರಡೂ ಸುಭದ್ರವಾಗಿದೆ.
2019ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಕಳೆದ ವರ್ಷ ಅಂದರೆ 2018-19ರಲ್ಲಿ 6.8%ರಷ್ಟಿದ್ದ ಭಾರತದ ಜಿಡಿಪಿ ಬೆಳವಣಿಗೆಯ ದರ, 2019-20ರ ಹಣಕಾಸು ವರ್ಷದಲ್ಲಿ ಭಾರತದ ದೇಶಿ ಉತ್ಪಾದನಾ ಬೆಳವಣಿಗೆಯ ದರ (ಜಿಡಿಪಿ) 7% ಎಂದು ಅಂದಾಜಿಸಲಾಗಿದೆ. 18-19ರ ಜಿಡಿಪಿ ಬೆಳವಣಿಗೆ ದರ ಕಳೆದ ಐದು ವರ್ಷಗಳಲ್ಲಿಯೇ ಅತ್ಯಂತ ಕನಿಷ್ಟ ಮತ್ತು ಕೊನೆಯ ನಾಲ್ಕು ತಿಂಗಳಲ್ಲಿ ಅದು 5.8%ಕ್ಕೆ ಕುಸಿದಿತ್ತು. ಇದು ಅನಿವಾರ್ಯವಾಗಿ ಚಿಂತೆಗೀಡುಮಾಡುವ ಸಂಗತಿ. ಈ ಕಳಪೆ ಬೆಳವಣಿಗೆಯ ಹಾದಿಯನ್ನು ಬದಲಾಯಿಸಬೇಕಾದ ಹೊಣೆ ಹೊಸ ಸರಕಾರದ ಮೊದಲ ಬಜೆಟ್ ಮೇಲಿದೆ. ಹೆಚ್ಚಿನ ಖಾಸಗಿ ಹೂಡಿಕೆ, ಉತ್ತಮ ಬೇಡಿಕೆ, ಸಾಲದ ಪ್ರಮಾಣದಲ್ಲಿ ಏರಿಕೆ, ರಾಜಕೀಯ ಸ್ಥಿರತೆಯ ಪರಿಣಾಮದಿಂದ ಉತ್ಪಾದನೆಯಲ್ಲಿ ಹೆಚ್ಚಳ, ವಿದೇಶಿ ನೇರ ಹೂಡಿಕೆಯಲ್ಲಿ ಮತಷ್ಟು ಸರಳೀಕರಣ, ಉತ್ತಮ ತೆರಿಗೆ ಸಂಗ್ರಹಣೆ, ಇಳಿಯಬಹುದಾದ ಜಾಗತಿಕ ತೈಲ ಬೆಲೆ, ಕೆಟ್ಟ ಹಾಗೂ ಸುಸ್ಥಿ ಸಾಲಗಳ ನಿವಾರಣೆ ಮತ್ತು ಸಾರ್ವಜನಿಕ ಹೂಡಿಕೆ, ಇಳಿಮುಖವಾಗಿರುವ ರಫ್ತು ವ್ಯವಹಾರಕ್ಕೆ ನೀಡಬೇಕಾದ ಪ್ರೋತ್ಸಾಹ.. ಇವೇ ಮೊದಲಾದ ಪ್ರಮುಖ ಸಂಗತಿಗಳು ಹಳಿತಪ್ಪಬಹುದಾದ ಆರ್ಥಿಕತೆಯ ಪಥವನ್ನು ಸರಿಯಾದ ದಿಕ್ಕಿನಲ್ಲಿ ಸಹಕರಿಸಲಿವೆ. ಆದರೆ ಇವು ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲಿ ಭಾರತದ ಅನುಕೂಲತೆಗೆ ತಕ್ಕಂತೆ ವರ್ತಿಸಬೇಕಷ್ಟೆ. ಈ ಅಂಶಗಳ ಹಿಡಿತದಿಂದ ಮತ್ತು ಸರಕಾರದ ಸರಿಯಾದ ಕಾರ್ಯನಿರ್ವಹಣೆ, ಸುಧಾರಣಾ ಕ್ರಮಗಳಿಂದ 7% ಜಿಡಿಪಿ ಬೆಳವಣಿಗೆ ದರವನ್ನು ಸಾಧಿಸುವುದು ಸಾಧ್ಯವಿದೆ. ಅನಿವಾರ್ಯವಾಗಿ ಬಜೆಟ್ ಈ ಮೂಲಭೂತ ಆಸ್ಥೆಗಳಿಗೆ ಉತ್ತರ ಹುಡುಕುವ ಮತ್ತು ಇವುಗಳ ಪಡಿಯಚ್ಚಿನಲ್ಲಿ ಭಾರತದ ಬೆಳವಣಿಗೆಯನ್ನು ಸುಧಾರಿಸುವ ಪ್ರಯತ್ನವಾಗಿರಲಿದೆ.
ಬೆಳವಣಿಗೆಯ ಜೊತೆಯಲ್ಲಿ, ಜಾಗತಿಕ, ದೇಶಿಯ ಆರ್ಥಿಕತೆಯ ಕುಂಠಿತತೆಯ ಹೊರತಾಗಿಯೂ 2018-19ರಲ್ಲಿ 6.4%ರಷ್ಟಿದ್ದ ವಿತ್ತೀಯ ಕೊರತೆ 2019-20ರಲ್ಲಿ 5.8%ಕ್ಕೆ ಇಳಿಕೆ ಕಾಣಲಿರುವುದು ವಿತ್ತೀಯ ಶಿಸ್ತು ಹಾಗೂ ಇಳಿಕೆಯಾಗಬಹುದಾದ ಸರಕಾರದ ಒಟ್ಟಾರೆ ಬಾಧ್ಯತೆಯ ದೃಷ್ಟಿಯಿಂದ ಚೇತೋಹಾರಿ ಸಂಗತಿ. ಸುಮಾರು 2.9% ಕೃಷಿ ಹಾಗೂ ಸಹಭಾಗಿ ವಲಯಗಳ ಬೆಳವಣಿಗೆ, ಇಳಿಮುಖ ಕಾಣಲಿರುವ ಕರೆಂಟ್ ಅಕೌಂಟ್ ಕೊರತೆ ಮತ್ತು283.4 ಮಿಲಿಯನ್ ಟನ್‍ಗಳ ಆಹಾರ ಉತ್ಪಾದನೆ, 2018-19ರಲ್ಲಿ ಶೇಕರಣೆಯಾದ 412.9 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಉಳಿಕೆ ಇವೆಲ್ಲ ಕೇವಲ 3.3% ಉತ್ಪಾದನಾ ದರದಲ್ಲಿ ಸಾಗುತ್ತಿರುವ ಜಾಗತಿಕ ಮಾರುಕಟ್ಟೆಗೆ ಹೋಲಿಸಿದರೆ ಭಾರತದ ಸಾಧನೆ ಉತ್ತಮ ಎಂದೇ ಹೇಳಬೇಕು.
ಜಿಡಿಪಿ ಬೆಳವಣಿಗೆಯ ದೃಷ್ಟಿಯಿಂದ ಭಾರತ ಈಗಾಗಲೇ 2.61 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ವಿಶ್ವದ ಆರನೇ ಅತೀ ದೊಡ್ಡ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಅಂದರೆ 2025ರ ಹೊತ್ತಿಗೆ ಈಗಿನ ಪ್ರಮಾಣದ ದುಪ್ಪಟ್ಟು ಅಂದರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯಬೇಕು ಎಂಬುದು ಭಾರತ ಸರಕಾರದ ಆಶಯ. ಅದು ಸಾಧ್ಯವಾಗಲು, ಮುಂದಿನ ಐದು ವರ್ಷಗಳಲ್ಲಿ ಭಾರತ ಸರಿಸುಮಾರು 8% ಜಿಡಿಪಿ ದರದಲ್ಲಿ ಬೆಳವಣಿಗೆ ಸಾಧಿಸಬೇಕು. ಅದು ಸಾಧ್ಯವಾಗಲು ಎಲ್ಲಾ ಕ್ಷೇತ್ರಗಳ ಸಮಾನ ಬೆಳವಣಿಗೆ, ಹವಾಮಾನದ ಸಹಕಾರ, ಜಾಗತಿಕ ಸ್ಥಿರತೆ ಮತ್ತು ಭಾರತದಲ್ಲಿ ಖಾಸಗಿ ಹಾಗೂ ಸಾರ್ವಜನಿಕ ವಲಯ ಸಮಪ್ರಮಾಣದಲ್ಲಿ ಹೂಡಿಕೆ ಮಾಡಬೇಕಾದ ಅನಿವಾರ್ಯತೆಯಿದೆ. ಅನ್ವೇಷಣೆ, ಉದ್ಯೋಗ ಸೃಷ್ಟಿ, ಬೆಳವಣಿಗೆಗೆ ಪೂರಕವಾದ ಎಂಎಸ್‍ಎಂಇ ವಲಯದ ಹೆಚ್ಚಿನ ಸುಧಾರಣೆ ಇದಕ್ಕೊಂದು ಮಹತ್ವದ ವೇದಿಕೆಯಾಗಲಿದೆ. ಈ ಬಾರಿಯ ಬಜೆಟ್ 5 ಟ್ರಿಲಿಯನ್ ಆರ್ಥಿಕತೆಯಾಗಿ ಭಾರತವನ್ನು ರೂಪುಗೊಳಿಸುವ ದೂರದೃಷ್ಟಿ ಹಾಗೂ ತತ್ಕಾಲೀನ ಸಂಕೀರ್ಣ ಸಮಯದಲ್ಲಿ 125 ಕೋಟಿ ಭಾರತೀಯರ ಹಿತಾಸಕ್ತಿಯನ್ನು ಜಾಗೃತೆಯಿಂದ ಕಾಪಾಡುವ ಸೂಕ್ಷ್ಮವಾದ ಕತ್ತಿಯಂಚಿನ ನಡಿಗೆಯನ್ನು ನಡೆಯಬೇಕಿದೆ. ಉತ್ತಮ ವಿತ್ತ ತಜ್ಞರಿಗೆ ಇದೊಂದು ಎದುರಿಸಲೇಬೇಕಾದ ಸವಾಲೂ ಹೌದು.
ಆಂತರಿಕ-ಬಾಹ್ಯ ಸವಾಲುಗಳು:
ಆಂತರಿಕವಾಗಿ ಈ ಬಾರಿ ಮಾನ್ಸೂನ್ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಚೇತರಿಕೆ ಕಾಣದಿರುವುದು ಆತಂಕಕಾರಿ. ಇದರಿಂದ ಬರದ ಛಾಯೆ ಒಂದೆಡೆ ಮತ್ತು ಇಳಿಕೆಯಾಗಬಹುದಾದ ಕೃಷಿ ಹಾಗೂ ಸಮೂಹ ರಂಗಗಳ ಉತ್ಪಾದನೆ. ಅಂದರೆ ಹಣದುಬ್ಬರ ಏರಬಹುದಾದ ಸಾಧ್ಯತೆಯಿದೆ. ಆಟೋಮೊಬೈಲ್ ವಲಯದಲ್ಲಿ ಈಗಾಗಲೇ ಖರೀದಿಯ ಪ್ರಮಾಣ ಇಳಿಕೆಯಾಗಿದೆ. ಕಳೆದ ಅಕ್ಟೋಬರ್ ತಿಂಗಳಿನಿಂದಲೇ ದ್ವಿಚಕ್ರ, ನಾಲ್ಕು ಚಕ್ರ ವಾಹನಗಳ ಮಾರಾಟ ಸುಮಾರು 18% ನಷ್ಟು ಕುಂಠಿತಗೊಂಡಿದೆ. ದೇಶದ ಉತ್ಪಾದನಾ ದರ (ಜಿಡಿಪಿ) ದರ 2018-19ರ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಉತ್ಪಾದನಾ ದರ (ಜಿಡಿಪಿ) 5.8% ಕ್ಕೆ ಇಳಿಕೆಯಾಗಿದೆ. ಇನ್ನು ಸರಕಾರದ ಬೊಕ್ಕಸದ ಮಹತ್ವದ ಮೂಲ, ನೇರ ತೆರಿಗೆ ಸಂಗ್ರಹಣೆ, 2018-19ರ ಸಾಲಿನಲ್ಲಿ 12 ಲಕ್ಷ ಕೋಟಿ ರೂಪಾಯಿಗಳನ್ನು ನೇರ ತೆರಿಗೆಯ ಸಂಗ್ರಹಣೆಯಿಂದ ಭರಿಸುವ ಲೆಕ್ಕಾಚಾರವಿತ್ತು, ಆದರೆ ಈಗಾಗಲೇ ಬಂದ ವರದಿಗಳ ಪ್ರಕಾರ ಅದು ಸುಮಾರು 82 ಸಾವಿರ ಕೋಟಿ ರೂಪಾಯಿಗಳ ಕೊರತೆಯನ್ನು ಎದುರಿಸುತ್ತಿದೆ. ನೇರ ತೆರಿಗೆ ಸಂಗ್ರಹ ಈ ಬಾರಿ ಏರಿಕೆಯಾಗುವುದು ಕಷ್ಟ. ತತ್ಕಾಲದಲ್ಲಿ ಇದರ ನಷ್ಟವನ್ನು ತೆರಿಗೆದಾರರಿಗೆ ಮತ್ತಷ್ಟು ವಿನಾಯಿತಿ ನೀಡಿ, ಹೆಚ್ಚು ಖರ್ಚು ಮಾಡಲು ಪ್ರೋತ್ಸಾಹ ನೀಡಿ, ಅಲ್ಲಿಂದ ಬರುವ ಪರೋಕ್ಷ ತೆರಿಗೆಯಿಂದ ನಷ್ಟವನ್ನು ಪೂರೈಸುವ ಪ್ರಯತ್ನ ಬಜೆಟ್‍ನಲ್ಲಿ ಮಾಡುವ ಸಾಧ್ಯತೆಯಿದೆ. ತೆರಿಗೆದಾರರಿಗೆ 5 ಲಕ್ಷದ ವರೆಗೆ ನೀಡಿದ ವಿನಾಯಿತಿಯನ್ನು ಈ ನೆಲೆಯಲ್ಲಿಯೇ ಗಮನಿಸಬೇಕು. ಮೇಲಾಗಿ ತೆರಿಗೆದಾರರಿಗೆ ಮತ್ತಷ್ಟು ಸರಳಿಕರಣ ಹಾಗೂ ಪ್ರೋತ್ಸಾಹ ನೀಡುವ ಸಾಧ್ಯತೆ ದಟ್ಟವಾಗಿದೆ.
ಸರಕಾರದ ಬೊಕ್ಕಸಕ್ಕೆ ಸರಕು ಮತ್ತು ಸೇವಾ (ಪರೋಕ್ಷ) ತೆರಿಗೆ ದೊಡ್ಡ ಮಟ್ಟದ ಆದಾಯ ಒದಗಿಸುತ್ತಿದೆ. ಆದರೆ ಅದರಿಂದ ಲಾಭ ಪಡೆಯಲು ತಿಂಗಳಿಗೆ ಕನಿಷ್ಟ 1-1.20 ಲಕ್ಷ ಕೋಟಿಗಳಷ್ಟು ಜಿಎಸ್‍ಟಿ ಸಂಗ್ರಹವಾಗಬೇಕು. ಅಷ್ಟು ಪ್ರಮಾಣದ ತೆರಿಗೆ ಸಂಗ್ರಹ ಆಗುತ್ತಿಲ್ಲ ಎಂಬುದು ದೊಡ್ಡ ಸಮಸ್ಯೆ. ಆರ್ಥಿಕ ತಜ್ಞರು ಊಹಿಸುತ್ತಿರುವಂತೆ ಸಧ್ಯದಲ್ಲೇ ಜಿಎಸ್‍ಟಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಅನಿವಾರ್ಯತೆಯಿದೆ. ಮತ್ತಷ್ಟು ಸರಳೀಕೃತ ವ್ಯವಸ್ಥೆ, ತರಿಗೆ ವಂಚನೆಯ ಮೇಲೆ ಸೂಕ್ತ ನಿಯಂತ್ರಣ, ಕೃಷಿ ಇನ್ನಿತರ ದಿನನಿತ್ಯದ ಅನಿವಾರ್ಯ ವಸ್ತುಗಳ ಮೇಲಿನ ತೆರಿಗೆ ಇಳಿಸಿ ಅಥವಾ ಕಡಿತಗೊಳಿಸಿ, ಪೆಟ್ರೋಲಿಯಂ ಹಾಗೂ ಇನ್ನಿತರ ಕೆಲವು ವಸ್ತುಗಳನ್ನು ಜಿಎಸ್‍ಟಿ ಅಡಿಯಲ್ಲಿ ತರುವ ಮಾರ್ಗೋಪಾಯಗಳೂ ಇದರಲ್ಲಿ ಸೇರಲಿವೆ.
ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ:
ಗ್ರಾಮೀಣ ವಲಯದಲ್ಲಿ ಕೈಗಾರಿಕಾ ವಲಯದ ವ್ಯಾಪಾರ ಮಂದಗತಿಯಲ್ಲಿಯೇ ಸಾಗುತ್ತಿದೆ. ಇದು ಕೈಗಾರಿಕಾ ವಲಯನ್ನು ಚಿಂತೆಯಲ್ಲಿ ಇಟ್ಟಿದೆ. ಹಿಂದಿನ ಎರಡು-ಮೂರು ಬಜೆಟ್‍ಗಳಂತೆ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ವಲಯಕ್ಕೆ ಹೆಚ್ಚಿನ ಅವಧಾರಣೆ ನೀಡದಿದ್ದರೆ ಕಳೆದ ಐದು ವರ್ಷಗಳ “ನಮೋನಾಮಿಕ್ಸ್” ಹಾಗೂ ವೋಟ್ ವಿನ್ನಿಂಗ್ “ನಮೋಪೊಲಿಟಿಕ್ಸ್” ದಾರಿತಪ್ಪುವ ಸಾಧ್ಯತೆಯಿದೆ. ಮೇಲಾಗಿ ರೈತರ ಆದಾಯ ಪ್ರೋತ್ಸಾಹಕ “ಕೃಷಿ ಸಮ್ಮಾನ್ ಯೋಜನೆ”ಯನ್ನು ಹೊಸ ಸರಕಾರ ರಚನೆಯಾದ ಕೂಡಲೇ ಎಲ್ಲಾ ರೈತರಿಗೂ ವಿಸ್ತರಿಸಿರುವುದರಿಂದ ಹೆಚ್ಚಿನ ಆರ್ಥಿಕ ಹೊರೆ ತಪ್ಪಿದ್ದಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದಕ್ಕೆಂದೇ 87,500 ಕೋಟಿ ರೂಪಾಯಿಗಳನ್ನು ಮೀಸಲಿರಿಸಬೇಕಿದೆ. ಗರಾಮೀಣ ವಲಯದ ಆರ್ಥಿಕ ಒತ್ತಡಕ್ಕೆ 2022ರ ಹೊತ್ತಿಗೆ ಕೃಷಿಕರ ಆದಾಯ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷಿ, ಆದರ್ಶವಾದಿ ಹಾಗೂ ಗ್ರಾಮ ಭಾರತದ ಆರ್ಥಿಕ ಮೂಲಗಳ ಆನ್ವಯಿಕತೆಗೆ ಪೂರಕವಾದ ಸ್ಥಳೀಯ ಮಟ್ಟದ ಯೋಜನೆ ಹಾಗೂ ವಿಜ್ಞಾನ-ಗ್ರಾಮೀಣಾಭಿವೃದ್ಧಿಯನ್ನು ಬೆಸೆಯುವ ಆರ್ಥಿಕ ಕಾಯಕಲ್ಪಗಳು ಈ ಬಜೆಟ್ ಮೂಲಕ ಮತ್ತಷ್ಟು ವೇಗಪಡೆಯುವ ಸಾಧ್ಯತೆಯಿದೆ ಅಥವಾ ಅದನ್ನು ಬಜೆಟ್ ಮೂಲಕ ಜಾರಿಗೆ ತರಬೇಕಿದೆ.
ಇವುಗಳ ಜೊತೆಗೆ ಫಸಲ್ ಬಿಮಾ, ಆಯಷ್ಮಾನ್ ಭಾರತ್, ಉಜ್ವಲಾ, ಸ್ವಚ್ಛ ಭಾರತ, ಫಸಲ್ ಭಿಮಾ, ಕೃಷಿ ಸಿಂಚಯಿ ಯೋಜನಾ, ಸರ್ವಶಿಕ್ಷಾ ಅಭಿಯಾನ, ಮನ್‍ರೆಗಾ ಮೊದಲಾದ ಜನಪ್ರಿಯ ಯೋಜನೆಗಳನ್ನು ಹೆಚ್ಚು ಸಮರ್ಪಕವಾಗಿ ಮುಂದುವರೆಸಲು ತಗಲುವ ವೆಚ್ಚವೂ ಹೆಚ್ಚಲಿದೆ. ಬರದ ಛಾಯೆಯ ಹೊತ್ತಿನಲ್ಲಿ, ನೀರಿನ ಅಭಾವವಿರುವ 255 ಜಿಲ್ಲೆಗಳಲ್ಲಿ, ಜುಲೈ 1ರಿಂದ ಜಾರಿಗೆ ಬಂದ, ಲಭ್ಯವಿರುವ ಜಲ ಮೂಲಗಳನ್ನು ಸಮರ್ಪಕವಾಗಿ ಉಳಿಸಿ-ಬಳಸಲು ಹೊರಟಿರುವ “ಜಲಶಕ್ತಿ ಅಭಿಯಾನ”ಕ್ಕೂ ಹೆಚ್ಚಿನ ಅನುದಾನ ನೀಡಬೇಕಿದೆ. ಇನ್ನೂ ಮರಳಿಬಾರದ “ನಾನ್ ಫರ್ಫಾಂಮಿಂಗ್ ಅಸೆಟ್”ಗಳ ಏರಿಕೆ ಅಥವಾ ತಟಸ್ಥತೆ ಬ್ಯಾಂಕಿಂಗ್ ವಲಯದ ಬಿಕ್ಕಟ್ಟಿಗೆ ಕಾರಣವಾಗಿದೆ. ಇದಕ್ಕಾಗಿ ಬ್ಯಾಂಕ್‍ಗಳ ವಿಲೀನ, ಉತ್ತಮ ಆಡಳಿತ ಹಾಗೂ ಜಾರಿಯಲ್ಲಿರುವ ಇಂದ್ರಧನುಷ್ ನಂತಹ ಸಮರ್ಪಕ ಯೋಜನೆಗಳು ಮತ್ತಷ್ಟು ವೇಗ ಪಡೆಯಬೇಕಿವೆ. ಜೊತೆಗೆ ಚುನಾವಣಾ ಘೋಷಣೆಗಳು, ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಸಮರ್ಪಕ ಬದಲಾವಣೆ, ಎಂಎಸ್‍ಎಂಇ ವಲಯದಲ್ಲಿನ ಹಳೆಯ-ಹೊಸ ಕ್ರಮಗಳ ಮುಂದುವರಿಕೆ ಹಾಗೂ ಪ್ರೋತ್ಸಾಹ, ಮಧ್ಯಮ ವರ್ಗ ಹಾಗೂ ಮತದಾರರ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನಗಳೂ ನಡೆಯಲಿವೆ.
ರೈಲು:
ರೈಲ್ವೆ ವಲಯದಲ್ಲಿ ಸುಧಾರಣೆ ಎಂಬುದು ಮಾಡಿದಷ್ಟು ಮುಗಿಯದ ಕೆಲಸ, ಯಾವುದೇ ಖಾಸಗಿ ವ್ಯವಸ್ಥೆಗಳಿಗೆ ಕಡಿಮೆಯಿಲ್ಲದೆ ಮತ್ತು ಖಾಸಗೀಕರಣಗೊಳಿಸದೇ ಬರುವ ಆದಾಯದಿಂದಲೇ ರೈಲ್ವೆಯಲ್ಲಿ ಕ್ರಾಂತಿ ಮಾಡಬೇಕಿದೆ. ರೈಲಿನ ವೇಗ ಹಾಗೂ ಪ್ರಗತಿ ಭಾರತದ ಆರ್ಥಿಕ ಪ್ರಗತಿಯ ಮಾನದಂಡವೆಂಬುದೂ ಸತ್ಯ. ಟ್ರೈನ್ 18 ನಂತಹ ಮತ್ತಷ್ಟು ಮೇಕ್ ಇನ್ ಇಂಡಿಯಾ ಮಾದರಿಯ ವೇಗದ ರೈಲುಗಳು ಮತ್ತಷ್ಟು ಉತ್ಪಾದಿಸಿ ಬಳಸಿ, ಅವುಗಳನ್ನು ರಫ್ತು ಮಾಡುವ ಅವಕಾಶ ಭಾರತಕ್ಕೆ ಒದಗಿದೆ. ಹೆಚ್ಚಿನ ಅನುದಾನ ಹಾಗೂ ಸಂಶೋಧನೆ-ಅಭಿವೃದ್ಧಿ ನಡೆಯಬೇಕಿದೆ. ಮಾನವರಹಿತ ಲೆವೆಲ್ ಕ್ರಾಸಿಂಗ್‍ಗಳನ್ನು ತೆಗೆದುಹಾಕುವ ಹಾಗು ರೈಲ್ವೆ ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ತಂತ್ರಜ್ಞಾನ, ಹಳಿ ವಿಸ್ತರಣೆ ಮತ್ತು ಹೆಚ್ಚು ಶಕ್ತಿಯುತ ಆಡಳಿತ ವ್ಯವಸ್ಥೆಯ ಜಾರಿ ಅನಿವಾರ್ಯತೆ ಇದೆ. ಪ್ರವಾಸೋದ್ಯಮದ ವಿಸ್ತರಣೆ ಜೊತೆಗೆ ಪ್ರಯಾಣಿಕರ ಸುಂಕವನ್ನು ಕಡಿಮೆಗೊಳಿಸಲು ಹೆಚ್ಚುವರಿಯಾಗಿ ವಿಧಿಸುವ ಗುಡ್ಸ್(ಸರಕು) ರೈಲುಗಳ ಮೇಲಿನ ಸುಂಕ ಕಡಿತಗೊಳಿಸಬೇಕಿದೆ. ಮೂಲಭೂತವಾಗಿ ರೈಲ್ವೆ ಸೇವೆಗಳ ಗುಣಮಟ್ಟದ ಉನ್ನತೀಕರಣ ಹಾಗೂ ಲಾಭದಾಯಕಗೊಳಿಸುವ ಹೊಣೆ ಈ ಬಜೆಟ್‍ನಲ್ಲೂ ಮುಂದುವರೆಯಲಿದೆ.
ರಕ್ಷಣೆ:
ರಫೆಲ್, ಅಪಾಚೆ, ಎಸ್-400 ಮೊದಲಾದ ಮಹತ್ವದ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಖರೀದಿ; ಬುಲೆಟ್‍ನಿಂದ ರಕ್ಷಿಸುವ ಜಾಕೆಟ್, ಹೆಚ್ಚಿನ ಸ್ವದೇಶಿ ಉತ್ಪಾದನೆ, ಸಬ್‍ಮರಿನ್, ರುಸ್ತುಂ ಮಾದರಿಯ ಕೃತಕ ಬುದ್ಧಿಮತ್ತೆಯ ಚಾಲಕರಹಿತ ಡ್ರೋಣ್‍ಗಳ ನಿರ್ಮಾಣ, ಸ್ವದೇಶಿ ಮಿಸೈಲ್‍ಗಳ ನಿರ್ಮಾಣ, ಒಮದು ರ್ಯಾಂಕ್ ಒಂದು ಪೆನ್ಶನ್.. ಇವೇ ಮೊದಲಾದ ಖರ್ಚುಗಳು ರಕ್ಷಣಾ ಇಲಾಖೆಯಲ್ಲಿ ಇನ್ನಷ್ಟು ಹೆಚ್ಚಿನ ಅನುದಾನಕ್ಕೆ ಅನುವು ಮಾಡಿಕೊಡುವುದಕ್ಕೆ ಕಷ್ಟವಾಗಬಹುದು. ಆದರೂ ಅನಿವಾರ್ಯವಾಗಿ ಬಜೆಟ್ ಸ್ವದೇಶಿ ರಕ್ಷಣಾ ಉತ್ಫಾದನೆ ಹಾಗೂ ಖಾಸಗಿ ಉತ್ಪಾದನೆಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕಿದೆ. ಮೂಲಭೂತವಾಗಿ ಯೋಧರ ಸುರಕ್ಷತೆ, ಸೇವಾ ಸುಧಾರಣೆ ಹಾಗೂ ಬಳಕೆಗೆ ಲಭ್ಯವಿರುವ ಇನ್ಫ್ರಾರೆಡ್ ತಂತ್ರಜ್ಞಾನದಿಂದ ನಮ್ಮ ಗಡಿಗಳ ಸಂರಕ್ಷಣೆಗೆ ಬೇಕಾದ ಕ್ರಮಗಳು ಹೆಚ್ಚು ಶಕ್ತವಾಗಿ ಜಾರಿಗೆ ಬರಬೇಕಿದೆ.
ಉದ್ಯೋಗ:
ಉದ್ಯೋಗ ಹಾಗೂ ಆರ್ಥಿಕ ಬೆಳವಣಿಗೆಯ ದರದ ಕುರಿತಾದ ಅನೇಕ ಗೊಂದಲಗಳ ನಡುವೆ ಭಾರತ ಮತ್ತು ಯುವ ಭಾರತೀಯರಿಗೆ ಅನಿವಾರ್ಯವಾದ ಎರಡನ್ನೂ ಹೇಗೆ ಮೇಲಕ್ಕೆ ಕೊಂಡೊಯ್ಯಬೇಕು ಎಂಬುದೂ ಈ ಬಾರಿ ಬಜೆಟ್‍ನ ನಿಜವಾದ ಸವಾಲಾಗಿರಲಿದೆ. ಕಳೆದ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳು ಬೆಳವಣಿಗೆ ದರವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಿದ್ದರೂ ಉದ್ಯೋಗ, ಆದಾಯ ಹಾಗೂ ಗ್ರಾಮೀಣ ಆರ್ಥಿಕತೆಯ ಪುನಚ್ಛೇತನ ಮಾಡುವಲ್ಲಿ ನಿರೀಕ್ಷಿತ ಪ್ರಮಾಣದ ಫಲಿತಾಂಶ ನೀಡಿಲ್ಲ. ಹಾಗಾಗಿ ಬದಲಾಗುತ್ತಿರುವ ಆರ್ಥಿಕತೆ, ವೈಜ್ಞಾನಿಕ ತಾಂತ್ರಿಕ ಬೆಳವಣಿಗೆಗಳ ಸಂಕೀರ್ಣತೆಗಳನ್ನು ಅರಿತು ತತ್ಕಾಲಿನ ಹಾಗೂ ದೂರದೃಷ್ಟಿಯಲ್ಲಿ ಕಾರ್ಯಗತಗೊಳಿಸುವ ಯೋಜನೆ ಅನಿವಾರ್ಯವಾಗಿ ಬೇಕಿದೆ. ಇಲ್ಲವಾದಲ್ಲಿ ಕೆಲವು ದೇಶಗಳಲ್ಲಿ ಈಗಾಗಲೇ ನೀಡುವಂತೆ ಯುವಕರಿಗೆ ಕೃಷಿ ಸಮ್ಮಾನ್ ಮಾದರಿಯಲ್ಲಿ, “ನಿರುದ್ಯೋಗ ಭತ್ಯೆ” ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಪಡಬೇಕಿಲ್ಲ. ಬೃಹತ್ ಪ್ರಮಾಣದ ಸಾರ್ವಜನಿಕ ಹೂಡಿಕೆ, ಆರ್ಥಿಕ ಚಟುವಟಿಕೆ, ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆಯಾದರೂ ನಿಖರವಾಗಿ ಹೊಸ ಉದ್ಯೋಗಗಳ ಸೃಷ್ಟಿ ಹಾಗೂ ಅದರ ಕುರಿತ ದಾಖಲೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ.
ವಿತ್ತೀಯ ಶಿಸ್ತು ಹಾಗೂ ಹೆಚ್ಚಿನ ಸಾಲ:
ಉತ್ತಮವಾಗಿ ಸಂಗ್ರಹವಾಗಬೇಕಿರುವ ಕೇಂದ್ರಿಯ ಜಿಎಸ್‍ಟಿ ಜೊತೆಗೆ ರಿಸರ್ವ್ ಬ್ಯಾಂಕಿನ ಹೆಚ್ಚವರಿ ಡಿವಿಡೆಂಡ್, ಏರ್ ಇಂಡಿಯಾ, ಬಿಎಸ್‍ಎನ್‍ಎಲ್, ಮೊದಲಾದ ನಷ್ಟದಲ್ಲಿರುವ ಸಾರ್ವಜನಿಕ ಸರಕಾರಿ ಕಂಪೆನಿಗಳ ದ್ರವೀಕರಣ (ಮಧ್ಯಂತರ ಬಜೆಟ್‍ನಲ್ಲಿ ಉಲ್ಲೇಖಿಸಿರುವಂತೆ 90 ಸಾವಿರ ಕೋಟಿ ರೂಪಾಯಿಗಳ ಗುರಿ), ನೇರ ತೆರಿಗೆ ಸಂಗ್ರಹ ಮತ್ತು ಇನ್ನಷ್ಟೇ ತೆರೆದುಕೊಳ್ಳಲಿರುವ 5ಜಿ ನೆಟ್‍ವರ್ಕ್‍ನ ಸ್ಪೆಕ್ಟ್ರಂ ತರಂಗಾಂತರಗಳ ಹಂಚಿಕೆಯಿಂದ ಒದಗಿಬರುವ ಹಣಕಾಸು, ಕಲ್ಲಿದ್ದಲು ಬ್ಲಾಕ್ ಹಂಚಿಕೆ ಇವೇ ಮೊದಲಾದ ಮೂಲಗಳಿಂದ ಸರಕಾರಕ್ಕೆ ಆದಾಯ ಬಂದರೂ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಜಾರಿ ಹಾಗೂ ಯಶಸ್ಸಿಗೆ ಸರಕಾರ ತುಸು ಹೆಚ್ಚಿನ ಪ್ರಮಾಣದ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಅಂತಹ ಪರಿಸ್ಥಿತಿ ಬಂದರೆ ಅದು ಎಫ್.ಆರ್.ಬಿ.ಎಂ ಕಾಯ್ದೆಯಲ್ಲಿ ಮಾಡಿಕೊಂಡ ಬದಲಾವಣೆಯಂತೆ ಜಿಡಿಪಿಯ 3.4% ರಷ್ಟು ವಿತ್ತೀಯ ಕೊರತೆಯ ಚೌಕಟ್ಟಿನಲ್ಲಿಯೇ ಸಾಗುವುದೇ ಎಂಬುದು ದೊಡ್ಡ ಪ್ರಶ್ನೆ. ಖಾಸಗಿ ಉತ್ಪಾದನೆ ಹಾಗೂ ಹೂಡಿಕೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿದ್ದಾಗ ಸರಕಾರವೇ ಹೆಚ್ಚಿನ ಸಾಲ ಮಾಡಿ ಸಾರ್ವಜನಿಕ ಹೂಡಿಕೆ ಮಾಡುವುದರಲ್ಲಿ ನಷ್ಟವಿಲ್ಲ. ಆದರೆ ಆ ಸಾಲವನ್ನು ಜನಪ್ರಿಯ ಯೋಜನೆಗಳಿಗೋ, ಸೇವನೆಗೆ ಪೂರಕವಾದ ಸಬ್ಸಿಡಿಗಳಿಗೋ ಹಂಚಿದರೆ ಅದು ಹೆಚ್ಚು ನಷ್ಟಕಾರಕ ಎಂಬುದು ಆರ್ಥಿಕ ತಜÐರ ವಾದ. ಹಾಗಾಗಿ ಉತ್ಪಾದನೆಗೆ ಬಳಸಬೇಕಾದ ಹೆಚ್ಚುವರಿ ಸಾಲ ಆರ್ಥಿಕತೆಯ ಮೇಲೆ ಹೆಚ್ಚಿನ ಹೊರೆಹಾಕದಿರಲಿ.
ಚುನಾವಣಾ ಪೂರ್ವದ ಮಧ್ಯಂತರ ಬಜೆಟ್‍ನಲ್ಲಿ ಮೀಸಲಿಟ್ಟ ಹಣಕಾಸು ಹಾಗೂ ಯೋಜನೆಗಳನ್ನು ಕೆಲವು ಮಾರ್ಪಾಟುಗಳೊಂದಿಗೆ ಮುಂದುವರೆಸಿ, ಮುಂದಿನ ಐದು ವರ್ಷಗಳ ಮೋದಿ ಸರಕಾರ ಹಾಗೂ ಭಾರತದ ಆರ್ಥಿಕತೆಗೆ ಭಾಷ್ಯ ಬರೆಯುವ ಪ್ರಯತ್ನವಿದು. ಕಲಸೋಮೇಲೋಗರಗೊಳ್ಳುತ್ತಿರುವ ಭಾರತದ ಆರ್ಥಿಕತೆಯನ್ನು ಸುಧಾರಿಸಿ ನಿರ್ಮಲಗೊಳಿಸಬೇಕಾದ ಹೊಣೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೇಲಿದೆ. ಜನರ ನಂಬಿಕೆ ಹಾಗೂ ಚುನಾವಣಾ ಗೆಲುವು ಸರಕಾರಕ್ಕೆ ದೃಢ ನಿರ್ಣಯ ಕೈಗೊಳ್ಳುವ ಶಕ್ತಿ ನೀಡಿದೆ. ನವಭಾರತದ ಸಂಕಲ್ಪಕ್ಕೆ ಸದೃಢ ಹೆಜ್ಜೆಗಳನ್ನು ಇಡಬೇಕಷ್ಟೆ. ಅದು ಬಜೆಟ್‍ನ ಅಂತರಾಳದ ಆಶಯ ಹಾಗೂ ಅದರ ಸಮರ್ಪಕ ಜಾರಿಯಾಗುವಿಕೆಯಿಂದ ಸಾಧ್ಯವಾಗಲಿದೆ.
ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯಲು ಅನುವು ಮಾಡಿಕೊಟ್ಟ ಕರ್ನಾಟಕದ ರಾಜ್ಯಸಭೆಯ ಸದಸ್ಯೆಯಾದ ನಿರ್ಮಲಾ ಸೀತಾರಾಮನ್, ವಿತ್ತ ಸಚಿವೆಯಾಗಿ ತಮ್ಮ ಮೊದಲ ಬಜೆಟ್‍ನಲ್ಲಿ, ಬಜೆಟ್‍ನ ಎಲ್ಲಾ ಸಾಧ್ಯತೆಗಳ ಜೊತೆಗೆ, ಕರ್ನಾಟಕಕ್ಕೆ ಏನನ್ನು ನೀಡಬಹುದು ಎಂಬುದು ಕನ್ನಡಿಗರ ದೊಡ್ಡ ಸವಾಲು ಹಾಗೂ ಕುತೂಹಲವೂ ಕೂಡ.
-ಶ್ರೇಯಾಂಕ ಎಸ್ ರಾನಡೆ
Facebook ಕಾಮೆಂಟ್ಸ್